ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಐದನೇ ಅರ್ಥ- “ಕೌಲಿಕಾರ್ಥ”


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ವಾರಿವಾಸ್ಯ ರಹಸ್ಯದ ಎರಡನೇ ಅಧ್ಯಾಯದ 83 ರಿಂದ 102 ರ ವರೆಗನ ಶ್ಲೋಕಗಳು ಹಾಗೂ ಯೋಗಿನೀ ಹೃದಯದ ಎರಡನೇ ಭಾಗವಾದ ಮಂತ್ರಸಂಕೇತದ 51 ರಿಂದ 68 ನೇ ಶ್ಲೋಕಗಳು ಶ್ರೀ ವಿದ್ಯಾ ಪಂಚದಶೀ ಮಂತ್ರದ ಕೌಳಿಕಾರ್ಥ ಅಥವಾ ಕೌಲಿಕಾರ್ಥವನ್ನು ನೀಡುತ್ತವೆ.
ಶ್ರೀ ಚಕ್ರ, ಶ್ರೀ ಚಕ್ರ ದೇವತೆ, ಶ್ರೀ ವಿದ್ಯಾ ಮಂತ್ರ, ಶ್ರೀ ವಿದ್ಯಾಗುರು ಮತ್ತು ಶಿಷ್ಯ ಇವರುಗಳಲ್ಲಿ ಯಾವುದೇ ಬೇಧ ಇಲ್ಲಾ ಎಂದು ಹೇಳುವುದೇ ಕೌಲಿಕಾರ್ಥ.
ಮೊದಲಿಗೆ ಶ್ರೀ ಚಕ್ರ ಮತ್ತು ಶ್ರೀ ವಿದ್ಯಾ ಮಂತ್ರವು ಒಂದೇ ಎಂಬುದನ್ನು ನಿರೂಪಿಸಲಾಗಿದೆ.
ಮಂತ್ರದ ಮೂರು ಲ ಕಾರಗಳು ಶ್ರೀ ಚಕ್ರದ ಭೂಪುರದ ಮೂರು ರೇಖೆಗಳು. ವೃತ್ತ ತ್ರಯಗಳನ್ನು ಒಂದು ಕಡೆ ಹೇಳದೆ ಬೇರೆ ಬೇರೆಯಾಗಿ ಹೇಳಲಾಗಿದೆ. ಒಂದು ವೃತ್ತದಲ್ಲಿ ಷೋಡಶ ದಳ, ಇದು ಸೋಮಾತ್ಮಕವಾದ ಅಂದರೆ ಚಂದ್ರಾತ್ಮಕವಾದ ಪದ್ಮ.ಅದರೊಳಗಿನ ವೃತ್ತ ಅದರೊಳಗೆ ಅಷ್ಟದಳ.ಇದು ಅಗ್ನಿ ಆತ್ಮಕವಾದ್ದು. ಇದರೊಳಗೆ ಮತ್ತೊಂದು ವೃತ್ತ. ಷೋಡಶ ದಳ ಮತ್ತು ಅಷ್ಟ ದಳ ಸೇರಿ ಉಭಯಾತ್ಮಕವಾದ್ದು. ಈ ರೀತಿಯಾಗಿ ವೃತ್ತತ್ರಯ, ಷೋಡಶ ದಳ ಮತ್ತು ಅಷ್ಟದಳ ಪದ್ಮಗಳನ್ನು ಹೇಳಲಾಗಿದೆ. ಅಗ್ನಿ ಮತ್ತು ಸೋಮ ಪದ್ಮಗಳಿಂದ ಅಲಂಕೃತ ವಾಗಿರುವ ವೃತ್ತತ್ರಯವು ಜಲತತ್ವ ವಾಚಕವಾಗಿದ್ದು ಸ ಕಾರ ದಿಂದ ಉದ್ಭವವಾಗಿದೆ. ಸಕಾರವು ಶಕ್ತಿ. ಹಾಗಾಗಿ ವೃತ್ತತ್ರಯದಿಂದ ಕೂಡಿರುವ ಷೋಡಶ ದಳ ಮತ್ತು ಅಷ್ಟದಳ ಪದ್ಮಗಳು ಸಕಾರ ದ್ವಯಗಳಿಂದ ಹೇಳಲ್ಪಟ್ಟಿದೆ.
ನಾದದೊಂದಿಗೆ ಕೂಡಿರುವ ಮತ್ತು ನಾದದೊಂದಿಗೆ ಬೆರೆತು ಹೋಗಿ ರುವುದೇ ಬಿಂದುತ್ರಯಗಳು. ಹ್ರೀಂಕಾರದಲ್ಲಿ ಹ ಕಾರ ರ ಕಾರ ಈ ಕಾರಗಳು ಇದ್ದು ಮೂರು ಹ್ರೀಂ ಗಳು ಸೇರಿ ಒಂಬತ್ತು ಅಕ್ಷರಗಳಿದ್ದು ಈ ಅಕ್ಷರಗಳಿಂದ ವಸುಕೋಣಾತ್ಮಕವಾದ ತ್ರಿಕೋಣ ಅಂದರೆ ನವಯೋನಿ ಚಕ್ರವು ಉದ್ಭವಿಸಿದೆ. ಇಚ್ಛಾ, ಜ್ಞಾನ,ಕ್ರಿಯಾ ರೂಪವು ಮೂರು ಕ ಕಾರಗಳಿಂದ ಮತ್ತು ಬಿಂದು ವಿನಿಂದ ಉದ್ಭವ ಆಗಿದೆ. ಶ್ರೀ ಭಾಸ್ಕರಮಖಿನ್ ಅವರು ಬಿಂದುವು ಮೂರು ಕ ಕಾರ ಮತ್ತು ಏ ಕಾರ ದಿಂದ ಉದ್ಭವವಾಗಿದೆ ಎಂದು ಹೇಳಿದ್ದಾರೆ.
ಈ ರೀತಿಯಾಗಿ ಶ್ರೀ ವಿದ್ಯಾ ಮಂತ್ರ ಮತ್ತು ಶ್ರೀ ಚಕ್ರ ಇವೆರಡರಲ್ಲಿ ಬೇಧವಿಲ್ಲಾ. ಇವೆರಡೂ ದೇವತೆಯ ರೂಪಗಳೇ ಆಗಿವೆ. . ದೇವತೆ ಯನ್ನು ಸ್ಥೂಲ ರೂಪವಾಗಿ ಭಾವಿಸಿದರೆ , ಮಂತ್ರವು ಸೂಕ್ಷ್ಮ ರೂಪ ಮತ್ತು ಯಂತ್ರವು ಕಾರಣ ರೊಪ ವಾಗಿದೆ. ಹೀಗಾಗಿ ದೇವತೆ, ಮಂತ್ರ ಮತ್ತು ಯಂತ್ರಗಳಲ್ಲಿ ಬೇಧವಿಲ್ಲಾ ಇವು ಮೂರೂ ಒಂದೇ ಆಗಿವೆ.
ಶ್ರೀಮಾತೆಯನ್ನು ಸುತ್ತುವರೆದಿರುವ ಆವರಣ ದೇವತೆಗಳು ಎಂದರೆ ಶ್ರೀಮಾತೆಯು ಹೊರಸೂಸುತ್ತಿರುವ ವರ್ಣಿಸಲಾಗದಂತಹ ಹೊಳೆಯವ ಕಿರಣಗಳೇ ಆಗಿದ್ದು ದೇವಿಯನ್ನು ಸುತ್ತುವರೆದಿರುವ ಆವರಣ ದೇವತೆ ಗಳು ಅಥವಾ ಗಣಗಳು 111 ಎನ್ನುತ್ತದೆ ಯೋಗಿನೀ ಹೃದಯ.
ಲಲಿತಾ ಸಹಸ್ರನಾಮವು “ ಮಹಾಚತುಃಷಷ್ಟಿಕೋಟಿ ಯೋಗಿನೀ ಗಣ ಸೇವಿತಾ ಎಂದು ಹೇಳಿದ್ದು ಈ ಬಗ್ಗೆ ವಿವರಣೆಯನ್ನು ಪ್ರತ್ಯೇಕವಾಗಿ ಕೊಡಲು ಪ್ರಯತ್ನಿಸುತ್ತೇನೆ.

“ಏಕಾದಶಾಧಿಕಶತದೇವತಾತ್ಮತಯಾ ಪುನಃ ।
ಗಣೇಶತ್ವಂ ಮಹಾದೇವ್ಯಾಃ ಸಸೋಮರವಿಪಾವಕೈಃ”

ಈ ಆವರಣ ದೇವತೆಗಳ ಎಂದರೆ ಗಣಗಳ ಆಧಿಪತ್ಯವನ್ನು ದೇವಿ ಹೊಂದಿರುವ ಶ್ರೀ ಮಾತೆಯು ’ ಗಣೇಶೀ”.
ಶ್ರೀಮಾತೆಯ ಮೂರು ಕಣ್ಣುಗಳು ರವಿ, ಚಂದ್ರ ಮತ್ತು ಅಗ್ನಿಯಾಗಿದ್ದು ಆಕೆ ಇಚ್ಚಾ, ಕ್ರಿಯಾ, ಜ್ನಾನ ಶಕ್ತಿ ಸ್ವರೂಪಿಣಿಯಾಗಿ ಸತ್ವ ರಜಸ್ ತಮೋಗುಣಗಳ ಒಡೆಯಳಾಗಿದ್ದು,ಇವೆಲ್ಲವೂ ಸೇರಿ ಒಂಬತ್ತು ಆಗಿದ್ದು ದೇವಿಯನ್ನು ಗ್ರಹ ರೂಪಿಣಿ ಎನ್ನಲಾಗಿದೆ.

ಐದು ಕರ್ಮೇಂದ್ರಿಯಗಳು, ಐದು ಜ್ಞಾನೇಂದ್ರಿಯಗಳು, ನಾಲ್ಕು ಅಂತಃಕರಣಗಳು, ಹತ್ತು ವಿಷಯ ವಾಸನೆಗಳು, ಪ್ರಕೃತಿ, ಪುರುಷ ಮತ್ತು ಗುಣತತ್ವ ಈ 27 ರಿಂದ ದೇವಿಯು ನಕ್ಷತ್ರ ರೂಪಿಣಿ ಆಗಿದ್ದಾಳೆ ಎಂದು ಶ್ರೀ ಭಾಸ್ಕರಮಖಿನ್ ಅವರು ವ್ಯಾಖ್ಯಾನಿಸಿದರೆ, ಯೋಗಿನಿ ಹೃದಯವು ಬೇರೆ ರೀತಿಯಲ್ಲಿ ಈ 27 ಸಂಖ್ಯೆಗಳನ್ನು ವ್ಯಾಖ್ಯಾನಿಸಿ ದೇವಿಯು ನಕ್ಷತ್ರರೂಪಿಣಿ ಎಂದು ಹೇಳಿದೆ. ಈ ವಿಭಿನ್ನ ವ್ಯಾಖ್ಯಾನಗಳ ಬಗ್ಗೆ ನಾವು ವಿಶ್ಲೇಷಣೆ ಮಾಡದೆ ದೇವಿಯು ನಕ್ಷತ್ರ ರೂಪಿಣಿ ಎಂದು ನಮಗೆ ತಿಳಿದರೆ ಸಾಕು.
ಮಾನವನ ದೇಹದಲ್ಲಿ ಸಹಸ್ರಾರವನ್ನು ಹೊರತು ಪಡಿಸಿ ಆರು ಚಕ್ರಗಳಿದ್ದು, ಒಂದೊಂದು ಚಕ್ರದಲ್ಲೂ ಡಾಕಿನೀ ಮೊದಲಾದ ಆರು ಯೋಗಿನಿಗಳೂ, ವಜ್ರೇಶ್ವರೀ ಮೊದಲಾದ ಆರು ದೇವತೆಗಳೂ ಇದ್ದು ಚರ್ಮಾದಿ ಸಪ್ತ ಧಾತುಗಳ ಪೈಕಿ ವೀರ್ಯವನ್ನು ಹೊರತು ಪಡಿಸಿ ಆರು ಧಾತುಗಳ ಪ್ರತೀಕವಾಗಿದ್ದಾರೆ. ಈ ಎಲ್ಲ ಯೋಗಿನಿಗಳ ಅಧಿಪತಿಯಾಗಿ ದೇವಿಯು ಸಹಸ್ರಾರದಲ್ಲಿ ನೆಲೆಸಿದ್ದು ದೇವಿಯನ್ನು ಯೋಗಿನೀ ರೂಪಿಣಿ ಎನ್ನಲಾಗಿದೆ.
ದೇವಿಯು ರಾಶಿ ರೂಪಿಣಿಯೂ ಆಗಿದ್ದಾಳೆ. ಪ್ರಾಣ, ಅಪಾನಾದಿ ಐದು ಪ್ರಾಣಗಳು, ಕೂರ್ಮ, ಕ್ರಕೂರಾದಿ ಐದು ಉಪ ಪ್ರಾಣಗಳು, ಜೀವಾತ್ಮ ಮತ್ತು ಪರಮಾತ್ಮ, ಈ ಹನ್ನೆರಡು ದೇವಿಯ ರಾಶಿ ರೂಪವಾಗಿವೆ.
ನಾವು ದೇವಿಯ ಗಣೇಶರೂಪ, ಗ್ರಹರೂಪ, ನಕ್ಷತ್ರರೂಪ, ಯೋಗಿನೀ ರೂಪ ಮತ್ತು ರಾಶಿ ರೂಪಗಳನ್ನು ತಿಳಿದುಕೊಂಡಾಯಿತು.
ಈಗ ಶ್ರೀ ವಿದ್ಯೆಯ ಗಣೇಶರೂಪ, ಗ್ರಹರೂಪ, ನಕ್ಷತ್ರರೂಪ, ಯೋಗಿನೀ ರೂಪ ಮತ್ತು ರಾಶಿ ರೂಪಗಳನ್ನು ತಿಳಿದುಕೊಳ್ಳೋಣ.
ಶ್ರೀ ವಿದ್ಯಾ ಮಂತ್ರವು ವಾಗ್ಭವ ಕೂಟ, ಕಾಮರಾಜ ಕೂಟ ಮತ್ತು ಶಕ್ತಿ ಕೂಟಗಳೆಂಬ ಮೂರು ಕೂಟಗಳನ್ನು ಹೊಂದಿದೆ.
ಹಾಗೆಯೇ ಅ ಕಾರದಿಂದ ಆಃ ವರೆಗೆ ಹದಿನಾರು ಅಕ್ಷರಗಳು, ಕ ಇಂದ ತ ವರೆಗೆ ಹದಿನಾರು ಅಕ್ಷರಗಳು, ಥ ಇಂದ ಸ ವರೆಗೆ ಹದಿನಾರು ಅಕ್ಷರಗಳು. ಈ ಅಕ್ಷರಗಳು ತ್ರಿಕೋಣ ದ ಮೂರು ಬಾಹುಗಳಲ್ಲಿ ( ರೇಖೆಗಳಲ್ಲಿ) ಇದ್ದು ಮೂರು ಕೋಣಗಳಲ್ಲಿ ಹ ಳ ಕ್ಷ ಅಕ್ಷರಗಳಿವೆ. ಹಾಗೆಯೇ ಪರಾ ಪಶ್ಯಂತಿ ಮಧ್ಯಮಾ ಮತ್ತು ವೈಖರೀ ಎಂಬ ವಾಕ್ ಗಣಗಳು ವ್ಯಷ್ಟಿ ಸಮಷ್ಟಿ ಬೇಧಗಳಿಂದ ವಿದ್ಯಾ ಸ್ವರೂಪವಾಗಿವೆ. ಹಾಗಾಗಿ ಎಲ್ಲ ಗಣಗಳ ಸ್ವರೂಪವಾದ ವಿದ್ಯೆಯು ಗಣೇಶ ರೂಪವಾಗಿದೆ.
ಶ್ರೀ ವಿದ್ಯೆಯು ಮೂರು ಬಿಂದು, ಮೂರು ನಾದ ಮತ್ತು ಮೂರು ಕೂಟಗಳಿಂದ ಕೂಡಿ ನವಗ್ರಹ ರೂಪವಾಗಿದೆ.
ಈ ಹಿಂದೆ ನಾವು ಸಂಪ್ರದಾಯಾರ್ಥವನ್ನು ತಿಳಿದುಕೊಳ್ಳುವಾಗ ಮಂತ್ರದ ಅ ಕಾರಗಳು ಸೇರಿ 37 ಅಕ್ಷರಗಳು ಎಂದು ತಿಳಿದಿದ್ದೇವೆ. ಇದರಲ್ಲಿ ಅ ಕಾರ ಗಳನ್ನು ವ್ಯಂಜನಗಳ ಒಟ್ಟಿಗೆ ಸೇರಿಸಿದರೆ 27 ಅಕ್ಷರಗಳಾಗಿ ಅವು ಶ್ರೀ ವಿದ್ಯೆಯ ನಕ್ಷತ್ರ ರೂಪವಾಗಿದೆ.
ಶ್ರೀ ವಿದ್ಯೆಯಲ್ಲಿ ಹ್ರೀಂ ಕಾರಗಳು ಮೂರು, ಕೂಟಗಳು ಮೂರು ಇವು ಡಾಕಿನ್ಯಾದಿ ಆರು ಯೋಗಿನಿ ಗಳಾಗಿದ್ದು ಶ್ರೀ ವಿದ್ಯೆಯು ಯೋಗಿನಿ ರೂಪ ವಾಗಿದೆ.

ಶ್ರೀ ವಿದ್ಯೆಯ ಹ್ರೀಂ ಕಾರದ ಮೊದಲು ಲ ಕಾರವಿದ್ದು ಈ ಲ ಕಾರವು ಹ್ರೀಂ ಕಾರದ ಹ ರ ಈಮ್ ಒಟ್ಟಿಗೆ ಸೇರಿ ೧೨ ಆಗುವುದರಿಂದ ಶ್ರೀ ವಿದ್ಯೆಯು ರಾಶಿ ರೂಪ ವಾಗಿದೆ.
ದೇವಿಯ ಪೀಠಗಳು 55-ಮಾತೃಕಾ ಪೀಠಗಳು 51 ಜತೆಗೆ ಓಡ್ಯಾಣ, ಜಾಲಂಧರ, ಪೂರ್ಣಗಿರಿ ಮತ್ತು ಕಾಮಗಿರಿ ಪೀಠಗಳು 4 – ಹಾಗೆಯೇ ಶ್ರೀ ವಿದ್ಯೆಯು ಗಣೇಶ 1, ಗ್ರಹಗಳು 9, ನಕ್ಷತ್ರಗಳು 27, ಯೋಗಿನಿಯರು 6, ರಾಶಿಗಳು 12, ಒಟ್ಟು 55

ಶ್ರೀ ವಿದ್ಯೆ ಮತ್ತು ದೇವಿಯು ಗಣೇಶ, ಗ್ರಹ, ನಕ್ಷತ್ರ,, ಯೋಗಿನಿ, ರಾಶಿ ಮತ್ತು ಪೀಠಗಳ ರೂಪದಲ್ಲಿ ಒಂದೇ ಆಗಿದ್ದಾರೆ.

ಈಗ ಶ್ರೀ ಚಕ್ರವನ್ನು ನೋಡೋಣ: ಶ್ರೀ ಯಂತ್ರವು, ರೇಖಾ, ದಳ,ಕೋನ, ಎಂಬ ಗಣಗಳಿಂದ ನಿರ್ಮಿತವಾಗಿ ಗಣೇಶತ್ವವನ್ನು ಹೊಂದಿದೆ.

ಮೂರು ವೃತ್ತ, ಭೂಪುರ ರೇಖೆಗಳು ಮೂರು, ಚತುರ್ದಶಾರ ಕೋಣದ ಹದಿನಾಲ್ಕು ಕೋಣಗಳು, ಬಿಂದು, ತ್ರಿಕೋಣ, ಅಷ್ಟಕೋಣ, ಅಂತರ್ದಶಾರ, ಬಹಿರ್ದಶಾರ, ಅಷ್ಟ ದಳ ಮತ್ತು ಷೋಡಶ ದಳ ಸೇರಿ ಇಪ್ಪತ್ತೇಳು ನಕ್ಷತ್ರರೂಪ ಎಂದು ಹೇಳಲಾಗಿದೆ

ಸ್ಥಿತಿ ಚಕ್ರ, ಸಂಹಾರ ಚಕ್ರ, 2, ಅಷ್ಟದಳ,ಷೋಡಶ ದಳ 2, ವೃತ್ತ ಮತ್ತು ಭೂಪುರ 2 ಈ ಆರು ಡಾಕಿನ್ಯಾದಿ 6 ಯೋಗಿನಿಗಳೆಂದು ಹೇಳಲಾಗಿದೆ.
ಶ್ರೀ ಚಕ್ರದ 9 ಆವರಣಗಳು ನವಗ್ರಹಗಳು ಎಂದು ಹೇಳಿದೆ.
ಶ್ರೀ ಚಕ್ರದ 5 ಕೆಳಮುಖ ಕೋನಗಳು, 4 ಮೇಲ್ಮುಖ ಕೋನಗಳು, ವೃತ್ತತ್ರಯ 1, ಭೂಪುರ 1, ಬಿಂದು 1 – ಒಟ್ಟೂ 12 ರಾಶಿ ರೂಪಗಳು.
ಶ್ರೀ ಚಕ್ರದ ಬಿಂದುವು ಮೂರು ಕ ಕಾರಗಳಿಂದ ಮತ್ತು ಈ ಕಾರದಿಂದಲೂ, ಸರ್ವಸಿದ್ಧಿಪ್ರದ ಮತ್ತ್ತು ಸರ್ವರೋಗಹರ ಚಕ್ರಗಳು ಮೂರು ಹ್ರೀಂ ಕಾರಗಳಿಂದಲೂ, ಸರ್ವರಕ್ಷಾಕರ ಸರ್ವಾರ್ಥಸಾಧಕ ಮತ್ತು ಸರ್ವಸೌಭಾಗ್ಯ ದಾಯಕ ಚಕ್ರಗಳು ಎರಡು ಹ ಕಾರ ಮತ್ತ್ತು ಏ ಕಾರದಿಂದಲೂ, ಸರ್ವಸಂಕ್ಷೋಭಣ, ಸರ್ವಾಶಾಪೂರಕ ಚಕ್ರಗಳು ಎರಡು ಸಕಾರಗಳಿಂದಲೂ, ತ್ರೈಲೋಕ್ಯ ಮೋಹನ ಚಕ್ರವು ಮೂರು ಲ ಕಾರಗಳಿಂದಲೂ ರಚಿತವಾಗಿದ್ದು ಶ್ರೀ ವಿದ್ಯಾ ಮತ್ತು ಶ್ರೀ ಚಕ್ರ ದ ಏಕತ್ವವನ್ನು ಪ್ರತಿಪಾದಿಸಲಾಗಿದೆ.
ಗುರು, ಶಿಷ್ಯ, ಶ್ರೀ ಚಕ್ರ, ವಿದ್ಯೆ ಮತ್ತು ದೇವಿಯಆಭೇದ ಭಾವನೆಯ ಬಗ್ಗೆ ಶ್ರೀ ಭಾಸ್ಕರ ಮಖಿನ್ ಅವರು ವಾರಿವಾಸ್ಯ ರಹಸ್ಯ ದಲ್ಲಿ

“ಏತತ್ರಿತಯಾಭಿನ್ನಃ ಸ್ವಗುರುಸ್ತದಭೇದಭಾವ ನಾದಾಢ್ರ್ಯಾತ್
ತೇನ ಗಣೇಶಾದಿಮಯಸ್ತದೄಪಯಾ ಚ ಸ್ವಯಂ ತಥಾ ರೂಪಃ “
ಎಂದು ಹೇಳಿದರೆ,

ಯೋಗಿನೀ ಹೃದಯವು,
“ ದೇವ್ಯಾ ದೇಹೋ ಯಥಾ ಪ್ರೋಕ್ತೋ ಗುರುದೇಹಸ್ತ ದೈವ ಚ
ತತ್ಪ್ರಸಾದಾ ಶ್ಚ ಶಿಷ್ಯೋ s ಪಿ ತದ್ರೂಪಸ್ಸನ್ ಪ್ರಕಾಶತೇ”

ಎಂದು ಹೇಳುವ ಮೂಲಕ ಪರದೇವತಾ, ಮತ್ತು ಮಂತ್ರದಂತೆ ಗುರುಶಿಷ್ಯರಿಗೂ ಗಣೇಶಾದಿ ರೂಪಗಳಿವೆ ಎಂದು ಹೇಳಲಾಗಿದೆ.

ಒಮ್ಮೆ ಗುರುವು ದೇವತಾ, ವಿದ್ಯಾ ಮತ್ತು ಚಕ್ರದೊಂದಿಗೆ ಅಭೇದ ಭಾವವನ್ನು ಹೊಂದಿದರೆ, ಗುರುವಿನ ಅನುಗ್ರಹದಿಂದ ಶಿಷ್ಯನೂ ಸಹಾ ಗುರು, ದೇವತಾ, ವಿದ್ಯಾ ಮತ್ತು ಚಕ್ರದೊಂದಿಗೆ ಅಭೇದ ಭಾವವನ್ನು ಹೊಂದುತ್ತಾನೆ.

ಯೋಗಿನೀ ಹೃದಯದ ಕೌಳಿಕಾರ್ಥದ ಉಪಸಂಹಾರ ಶ್ಲೋಕ ಹೀಗಿದೆ:
“ಇತ್ಯೇವಂ ಕೌಳಿಕಾರ್ಥಸ್ತು ಕಥಿತೋ ವೀರವಂದಿತೇ”
ವೀರಾ ಎಂದು ಕರೆಯಲ್ಪಡುವ ನಿನ್ನ ಉಪಾಸಕರಿಂದ ನಮಸ್ಕರಿಸಲ್ಪಡುತ್ತಿರುವ ಓ ಭೈರವೀ, ಈ ಪ್ರಕಾರವಾಗಿ ಕೌಲಿಕಾರ್ಥವನ್ನು ಹೇಳಲಾಗಿದೆ.

ಈ ಬಗ್ಗೆ ಹೆಚ್ಚು ವಿವರಣೆಯನ್ನು ಆಯಾಯ ಪರಂಪರೆಯ ಶ್ರೀ ವಿದ್ಯಾ ಗುರುಗಳಿಂದಲೇ ಪಡೆದು ಕೊಳ್ಳಬೇಕು.

ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ:

ಮೊದಲನೇ ಅರ್ಥ – “ಗಾಯತ್ರಿ

ಎರಡನೇ ಅರ್ಥ- “ಭಾವಾರ್ಥ

ಮೂರನೇ ಅರ್ಥ- “ಸಂಪ್ರದಾಯಾರ್ಥ

ನಾಲ್ಕನೇ ಅರ್ಥ- “ನಿಗರ್ಭ ಅರ್ಥ

ಐದನೇ ಅರ್ಥ- “ಕೌಲಿಕಾರ್ಥ

ಆರನೇ ಅರ್ಥ – “ಸರ್ವರಹಸ್ಯಾರ್ಥ

ಏಳನೆಯ ಅರ್ಥ – ” ಮಹಾತತ್ವಾರ್ಥ”

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.
ಓಂ ಶಾಂತಿಃ ಶಾಂತಿಃ ಶಾಂತಿಃ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: