ಶ್ರೀ ರುದ್ರಾಧ್ಯಾಯ – ನಮಕದ 2 ನೇ ಅನುವಾಕದ ಕನ್ನಡ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ರುದ್ರಾಧ್ಯಾಯದ ಎರಡನೇ ಅನುವಾಕದಲ್ಲಿ 13 ಶ್ಲೋಕಗಳಿವೆ.  (ಮೊದಲನೇ ಅನುವಾಕದ ವಿವರಣೆಯ ಸಾಹಿತ್ಯ ಇನ್ನೂ ಆಗಿಲ್ಲಾ. ಶೀಘ್ರದಲ್ಲಿ ಅದನ್ನೂ ಇಲ್ಲಿ Post ಮಾಡುತ್ತೇನೆ.)

ನಮಸ್ತೇ ಅಸ್ತು ಭಗವನ್ ವಿಶ್ವೇಶ್ವರಾಯ ಮಹದೇವಾಯ ತ್ರಯಂಬಕಾಯ ತ್ರಿಪುರಾಂತಕಾಯ ತ್ರಿಕಾಗ್ನಿಕಾಲಾಯ ಕಾಲಾಗ್ನಿ ರುದ್ರಾಯ ನೀಲಕಂಠಾಯ ಮೃತ್ಯುಂಜಯಾಯ ಸರ್ವೇಶ್ವರಾಯ ಸದಾಶಿವಾಯ ಶ್ರೀಮನ್ ಮಹಾದೇವಾಯ ನಮಃ

ಈ ಮಂತ್ರವು ವೇದ ಭಾಗದಲ್ಲಿ ಇಲ್ಲಾ. ನಂತರದ ದಿನಗಳಲ್ಲಿ ರುದ್ರಾಧ್ಯಾಯದಲ್ಲಿ ಸೇರಿಸಿ ಹೇಳುವುದು ವಾಡಿಕೆಗೆ ಬಂದು ಬಿಟ್ಟಿದೆ ಎನ್ನುವುದು ವೇದ ವಿದ್ವಾಂಸರ ಅಭಿಪ್ರಾಯ.

ಈ ಮಂತ್ರವು ರುದ್ರನಿಗೆ ಭಗವಾನ್ ಎಂದು ನಮಸ್ಕರಿಸುವುದರ ಮೂಲಕ ಆರಂಭವಾಗಿ ಅವನ ಹನ್ನೊಂದು ಗುಣವಾಚಕದೊಂದಿಗೆ ಸಂಭೋದಿಸುತ್ತದೆ.
ವಿಶ್ವದ ಒಡೆಯ, ದೇವರುಗಳಲ್ಲಿ ಸರ್ವೊಚ್ಛ, ಚಂದ್ರ, ಸೂರ್ಯ ಮತ್ತು ಅಗ್ನಿಗಳೆಂಬ ಮೂರು ಕಣ್ಣುಗಳನ್ನು ಉಳ್ಳವನು,
ರಾಕ್ಷಸರಿಂದ ಆವರಿಸಿದ್ದ ಮೂರು ಪುರಗಳನ್ನು ಅಥವಾ ಕೋಟೆಗಳನ್ನು ಭಸ್ಮಮಾಡಿದವನು, ಈ ಭಸ್ಮವನ್ನೇ ರುದ್ರನು ತನ್ನ ಹಣೆಯ ಮೇಲೆ ಮೂರು ರೇಖೆಗಳಾಗಿ ಧರಿಸಿದ್ದು ಅದೇ ವಿಭೂತಿ ಎಂದು ಶಿವಪುರಾಣ ಹೇಳುತ್ತದೆ.
ಮೂರು ಕೋಟೆಗಳು ಎಂದರೆ, ಸ್ಥೂಲ, ಸೂಕ್ಷ್ಮ, ಕಾರಣ ದೇಹಗಳು ಎಂದಾಗಬಹುದು ಅಥವಾ ಜಾಗ್ರತ್, ಸ್ವಪ್ನ ಸುಷುಪ್ತಾವಸ್ತೆ ಎಂದು ಬೇಕಾದರೂ ಆಗಬಹುದು.

ತ್ರಿಪುರಾಂತಕಾಯ ಆದಮೇಲೆ, ತ್ರಿಕಾಗ್ನಿಕಾಲಾಯ. ಹೋಮಾಗ್ನಿಗಳು ಮೂರು ವಿಧ. ಗ್ರಾಹಪತ್ಯ, ಆಹವನೀಯ ಮತ್ತು ದಕ್ಷಿಣಾಗ್ನಿ. ಈ ಮೂರೂ ಅಗ್ನಿಗಳನ್ನೂ ತನ್ನಲ್ಲಿ ಇಟ್ಟುಕೊಂಡಿರುವವನು. ಕಾಲಾಗ್ನಿ ರುದ್ರಾಯ, ಜಗತ್ತು ಪ್ರಳಯವಾಗುವ ಕಾಲದಲ್ಲಿ ಕಾಲಾಗ್ನಿ ರುದ್ರನು ತನ್ನ ತಾಂಡವ ನೃತ್ಯದಿಂದ ಬ್ರಹ್ಮಾಂಡವನ್ನು ಅಪ್ಪಿಕೊಂಡು, ಮದ್ದಳೆಯ ತಾಳಕ್ಕೆ ನಾಟ್ಯ ಮಾಡುತ್ತಾ ಜಗತ್ತಿನ ಅಣು ರೇಣು ತೃಣ ಕಾಷ್ಟಗಳನ್ನು ದೈವತ್ವದ ಏಕತೆಯಲ್ಲಿ ವಿಲೀನಗೊಳಿಸಿಬಿಡುತ್ತಾನೆ. ಜಗತ್ತನ್ನು ಸುಡುವ ಅಗ್ನಿ ನೀರಿನಲ್ಲಿ ಬೆರೆತು ಹೋದರೆ, ನೀರು ಗಾಳಿಯಲ್ಲಿ, ಗಾಳಿಯು ಆಕಾಶದಲ್ಲಿ, ಆಕಾಶವು ದೇವಾನುದೇವತೆಗಳಲ್ಲಿ, ದೇವಾನುದೇವತೆಗಳು “ಬ್ರಹ್ಮನ್” ಎಂಬ ವಸ್ತುವಿನಲ್ಲಿ ಬೆರೆತುಹೋಗುತ್ತಾರೆ. ಈ ಸ್ಥಿತಿಯಲ್ಲಿ ಪುರುಷ ಮತ್ತು ಪ್ರಕೃತಿಗಳು ಬೇರೆಯಾಗಿ ರುದ್ರನಲ್ಲಿ ವಿಲೀನವಾಗಿಬಿಡುತ್ತವೆ. ಶಿವನ ಈ ನಾಟ್ಯವೇ ಸೃಷ್ಟಿ ಮತ್ತು ಲಯದ ಸ್ಪಂದನ ಕ್ರಿಯೆ.

ನೀಲಕಂಠಾಯ, ಆಗಮ ಶಾಸ್ತ್ರದಂತೆ ರುದ್ರನನ್ನು 25 ರೂಪಗಳಲ್ಲಿ ಪೂಜಿಸಲಾಗುತ್ತದೆ. ಅದರಲ್ಲಿ ಒಂದು ರೂಪ ನೀಲಕಂಠ. ವಿಷಕುಡಿದು ಕಂಠವು ನೀಲವಾಗಿರುವ ಶಿವ ನೀಲಕಂಠ.

ಮೃತ್ಯುಂಜಯಾಯ, ಮೃತ್ಯುವನ್ನು ಗೆದ್ದವನು. ಅಂದರೆ ಕಾಲನನ್ನೇ ಗೆದ್ದ್ದವನು, ಹುಟ್ಟು ಸಾವುಗಳು ಕಾಲಕ್ಕೆ ಬದ್ಧವಾಗಿರುವುದರಿಂದ ಕಾಲಾತೀತನು, ಹುಟ್ಟೂ ಸಾವುಗಳಿಲ್ಲದವನು.

ಸರ್ವೇಶ್ವರಾಯ, ಬ್ರಹ್ಮಾಂಡಕ್ಕೇ ಒಡೆಯನು,

ಸದಾಶಿವ, ಎಂದರೆ ಯಾವಾಗಲೂ ಆನಂದವಾಗಿಯೂ ಕರುಣೆಯುಳ್ಳವನೂ ಸಂಪದ್ಭರಿತನೂ ಆಗಿರುವವನು ಎಂಬುದು ಪದಶಃ, ಹಾಗೂ ಸಾಹಿತ್ಯಕ ಅರ್ಥ. ಶಿವನ ಒಂದು ಪ್ರಕಟ ರೂಪ ಸದಾಶಿವ. ಎಂದೆಂದೂ ಮಂಗಳಕರನಾಗಿರುವವನು ಸದಾಶಿವ. ಸದಾಶಿವ ತತ್ವವು ಇಚ್ಛಾ ಶಕ್ತಿಯನ್ನು ಸೂಚಿಸುತ್ತದೆ. ಅಂದರೆ ಸೃಷ್ಟಿ ಕ್ರಿಯೆಯ ಇಚ್ಚೆ ಪ್ರಭಲ ವಾಗಿರುತ್ತದೆ. ಈ ಹಂತದಲ್ಲಿ “ನಾನು ಇದು” ಎನ್ನುವ ತತ್ವ ಗೋಚರವಾಗಲು ಆರಂಭ ಆಗುತ್ತದೆ ಯಾದರೂ ಪರಿಪೂರ್ಣ ಶುದ್ಧತೆಯ ಸಾಧನೆ ಆಗಿರುವುದಿಲ್ಲ. ಈ ಹಂತದಲ್ಲಿ ವಿಶ್ವವ್ಯಾಪ್ತತೆಯ ಅರಿವು ಪ್ರಜ್ನೆಯ ಆನ್ವೇಷಣೆ ಆಗಿರುತ್ತದೆ.

ಶ್ರೀಮನ್ ಮಹಾದೇವ ; ಶ್ರೀ ಎನ್ನುವುದು ರುದ್ರನ ಮಂಗಳಮೂರ್ತಿಯನ್ನು ಸೂಚಿಸುತ್ತದೆ. ಶ್ರೀಮನ್ ಎಂಬುದನ್ನು ಒಂದೇ ಪದವಾಗಿ ಪರಿಗಣಿಸಿದರೆ, ಈ ಪದವು ಅತ್ಯಂತ ಹೆಚ್ಚಿನ ಗೌರವ ಸೂಚಿಸುವ ಪದ ಆಗುತ್ತದೆ. ಶ್ರೀಮನ್ ಮಹಾರಾಜ ಶ್ರೀಮನ್ ಮಹಾ ಮಂಡಲಾಧೀಶ್ವರ, ಶ್ರೀಮನ್ ಯುವರಾಜ ಎಂಬ ಪದ ಪ್ರಯೋಗಗಳನ್ನು ನಾವು ನೆನಪಿಗೆ ತಂದುಕೊಳ್ಳಬಹುದು. ಶ್ರೀಮನ್ ಎನ್ನುವುದು ಅಪಭ್ರಂಶವಾಗಿ ಶ್ರೀಮಾನ್ ಎಂಬ ಪದದಿಂದ ಗಣ್ಯವ್ಯಕ್ತಿಗಳನ್ನು ಸಂಭೋದಿಸುವ ವಾಡಿಕೆ ಇತ್ತೀಚಿನ ವರ್ಷಗಳವರೆಗೂ ಇತ್ತು. ಈಗ ಅದು ಮಾಯವಾಗಿ ಶ್ರೀಯುತ ಆಗಿದೆ, ತಪ್ಪೇನಿಲ್ಲ ಶ್ರೀ ಯೊಂದಿಗೆ ಇರುವವರು ಶ್ರೀಯುತರು. ಶ್ರೀ ಎಂಬುದರ ಹಲವಾರು ಅರ್ಥಗಳನ್ನು ಶ್ರೀಸೂಕ್ತದ ಬಗ್ಗೆ ಪ್ರಸ್ತಾಪಿಸುವಾಗ ಹೇಳುತ್ತೇನೆ. ಇನ್ನು ಮಹಾದೇವ ಅಂದರೆ ಪರಮೋಚ್ಛ ದೇವರು.

ವಿಶ್ವೇಶ್ವರನೂ ಮಹದೇವನೂ ತ್ರಯಂಬಕನೂ ತ್ರಿಪುರಾಂತಕನೂ ತ್ರಿಕಾಗ್ನಿಕಾಲನೂ ಕಾಲಾಗ್ನಿ ರುದ್ರನೂ ನೀಲಕಂಠನೂ ಮೃತ್ಯುಂಜಯನೂ ಸರ್ವೇಶ್ವರನೂ ಸದಾಶಿವನೂ ಶ್ರೀಮನ್ ಮಹಾದೇವನೂ ಆದ ರುದ್ರನೇ ನಿನಗೆ ನಮಸ್ಕರಿಸುತ್ತಿದ್ದೇನೆ.

1.ನಮೋ ಹಿರಣ್ಯ ಬಾಹವೇ ಸೇನಾನ್ಯೇ ದಿಶಾಂಚ ಪತಯೇ ನಮಃ

ರುದ್ರನ ಬಾಹುಗಳು ಬಂಗಾರದಂತಿವೆ ಅಥವಾ ಬಂಗಾರವನ್ನು ತನ್ನ ಕೈಗಳಲ್ಲಿ ಬಾಹುಗಳಲ್ಲಿ ಧರಿಸಿರುವವನು ಎಂದೂ ಆಗಬಹುದು. ಬಂಗಾರವು ಮಂಗಳಕರವಾಗಿರುವುದನ್ನು ಸೂಚಿಸುತ್ತದೆ. ಹಿರಣ್ಯ ಎನ್ನುವುದಕ್ಕೆ ಹಲವು ಉಲ್ಲೇಖಗಳಿವೆ, ಸ್ವಪ್ರಕಾಶವಾಗಿರುವುದು, ಅವಿನಾಶವಾದ್ದು, ಕಾಲಾತೀತವಾದ್ದು, ಹೀಗೆ ಹಲವಾರು ಅರ್ಥಗಳು, ಉಲ್ಲೇಖಗಳು. ಮಂಗಳಕರನೂ ಕಾಲಾತೀತನೂ, ಸ್ವಪ್ರಕಾಶನೂ, ಸೇನಾಧಿಪತಿಯೂ ಆಗಿ ದಶದಿಕ್ಕುಗಳನ್ನೂ ಆವರಿಸಿಕೊಂಡಿರುವ ರುದ್ರನೇ ನಿನಗೆ ನಮಸ್ಕಾರಗಳು.

2. ನಮೋ ವೃಕ್ಷೇಭ್ಯೋ ಹರಿಕೇಶೇಭ್ಯಃ ಪಶೂನಾಂ ಪತಯೇ ನಮಃ

ಗಿಡಮರಗಳ ರೂಪದಲ್ಲಿ, ಹಸಿರೆಲೆಗಳ ರೂಪದಲ್ಲಿ ಇದ್ದು ಎಲ್ಲ ಪಶುಗಳ ಅಂದರೆ ಕರ್ಮ ಬಂಧಿತವಾದ ಎಲ್ಲಾ ಜೀವಾತ್ಮಗಳ ದೊರೆಯೂ ಆಗಿರುವ ರುದ್ರನೇ ನಿನಗೆ ನಮಸ್ಕಾರಗಳು.

ಮರಗಳು ಎಂದರೆ ಹುಟ್ಟು ಸಾವುಗಳು ಏಕೆಂದರೆ ತೈತ್ತರೇಯ ಉಪನಿಷತ್ ವಾಕ್ಯದಂತೆ ’ಪ್ರಪಂಚ ಎಂದು ಕರೆಯಲ್ಪಡುವ ಈ ಮರಕ್ಕೆ ನಾನು ಪ್ರೇರಕ, ಸ್ಫೂರ್ತಿ ಇತ್ತವನು” ಬ್ರಹ್ಮಾಂಡ ಎಂದು ಕರೆಯಲ್ಪಡುವ ಹಲವಾರು ಪ್ರಪಂಚಗಳನ್ನು ಮರಗಳು ಪ್ರತಿನಿಧಿಸುತ್ತವೆ. ಈ ಎಲ್ಲಾ ಪ್ರಪಂಚಗಳಿಗೂ ಮೂಲ ರುದ್ರ. ಮರದ ಹಸಿರು ಎಲೆಗಳು ಜೀವಾತ್ಮನನ್ನು ಪ್ರತಿನಿಧಿಸುತ್ತವೆ.
ಬೃಹದಾಕಾರವಾದ ಆಲದಮರದ ಕೆಳಗೆ ಸ್ಪುರದೃಪಿಯಾದ ಯುವಕನಾಗಿ ಕುಳಿತ ಶ್ರೀ ದಕ್ಷಿಣಾಮೂರ್ತಿಯು ಸನಕ, ಸನ, ಸನತ್ಕುಮಾರ, ಸನಂದನ ಎಂಬ ನಾಲ್ವರು ವೃದ್ಧ ಮಹರ್ಷಿಗಳಿಗೆ ದೀಕ್ಷೆ ನೀಡಿದ್ದು ನಮ್ಮೆಲ್ಲರಿಗೂ ತಿಳಿದಿರುವುದೇ. ಚಿಕ್ಕ ಬೀಜದಿಂದ ಬೃಹದಾಕರವಾದ ಮರವಾಗುವ ಆಲದ ಮರವು, ಪಿಂಡಾಡದಿಂದ ಬ್ರಹ್ಮಾಂಡ ಪ್ರಕಟವಾಗುವ ಸೂಕ್ಷವು ಸ್ಥೂಲವಾಗುವ, ಪದಪುಂಜಗಳ ವಿನಿಮಯವಿಲ್ಲದೆಯೇ ದೀಕ್ಷೆಯಾಗುವ ಸಂಕೇತ. ಇಂತಹ ರುದ್ರನಿಗೆ ನಮಸ್ಕಾರಗಳು.

3. ನಮಃ ಸಸ್ಪಿಂಜರಾಯ ತ್ವಿಶೀಮತೆ ಪತೀನಾಂ ಪತಯೇ ನಮಃ

ಹಳದಿ ಮಿಶ್ರ ಮೈಬಣ್ಣ ದಿಂದ ಕೂಡಿ ತನ್ಮೂಲಕ ಕಾಂತಿ ಬೀರುತ್ತಿದ್ದು ನಮಗೆ ನ್ಯಾಯದ ಮಾರ್ಗವನ್ನು ತೋರುತ್ತಿರುವ ರುದ್ರನೇ ನಿನಗೆ ನಮಸ್ಕಾರಗಳು.

ಸಸ್ಪಿ ಎಂದರೆ ಶತ್ರುಗಳನ್ನು ನಾಶಮಾಡುವವನು ಎಂಬ ಅರ್ಥವೂ ಇದೆ. ಹೊರಗಿನ ಶತೃಗಳು ಒಳಗಿನ ಶತೃಗಳ ಮೂಲ. ಪ್ರಾಪಂಚಿಕ ಪ್ರಲೋಭನೆಗೆ ಒಳಗಾದಾಗ ಮನಸ್ಸು ನೋವಿಗೆ ಒಳಗಾಗಿ ಅದರ ಪರಿಣಾಮ, ನಮ್ಮ ಪ್ರಜ್ನೆಯು ವ್ಯಾಕುಲತೆಗೆ ಒಳಗಾಗುತ್ತದೆ. ಮನಸಿನ ಸಹಾಯದಿಂದ ಪ್ರಜ್ನೆಯು ಶುದ್ಧವಾಗದಿದ್ದರೆ ಮೋಕ್ಷ ಅಸಾಧ್ಯ. ರುದ್ರನ ಧ್ಯಾನದಿಂದ ಹೊರಗಿನ ಮತ್ತು ಒಳಗಿನ ಶತೃಗಳಿಂದ ರಕ್ಷಣೆ ಒದಗುತ್ತದೆ ಅಷ್ಟೇ ಅಲ್ಲ ಅವನು ನಮಗೆ ಮೋಕ್ಷವನ್ನೂ ದಯಪಾಲಿಸುತ್ತಾನೆ. ಅಂತಹ ರುದ್ರನೇ ನಿನಗೆ ಮತ್ತೊಮ್ಮೆ ನಮಸ್ಕರಿಸುತ್ತಿದ್ದೇನೆ.

4. ನಮೋ ಬಬ್ಲುಶಾಯ ವಿವ್ಯಾಧಿನೇsನ್ನಾನಾಂ ಪತಯೇ ನಮಃ

ನಂದಿವಾಹನವೇರಿ ದುಷ್ಟರನ್ನು ಶಿಕ್ಷಿಸುವ, ಅನ್ನಕ್ಕೆ ಒಡೆಯನಾದ ರುದ್ರನೇ ನಿನಗೆ ನಮಸ್ಕಾರಗಳನ್ನು ಮಾಡುತ್ತಿದ್ದೇನೆ.
ಬಬ್ಲುಶ ಅಂದರೆ ಕಂದು ಬಣ್ಣ. ರುದ್ರನ ವಾಹನವಾದ ನಂದಿಯ ಬಣ್ಣ ಕಂದು ಬಣ್ಣ. ರುದ್ರನು ಶಕ್ತಿಯ ಮೂಲವೂ ಆಗಿದ್ದಾನೆ ಮತ್ತು ಕಾರಣನೂ ಅಗಿದ್ದಾನೆ. ರುದ್ರನ ಶಕ್ತಿಗಳು ತನ್ನ ವಾಹನವಾದ ನಂದಿಯ ಮೂಲಕ ಪಸರಿಸುವ ಮೂಲಕ ಎಲ್ಲ ಲೋಕಗಳ ಸೃಷ್ಟಿ ಸ್ಥಿತಿ ಮತ್ತು ಲಯ ಆಗುತ್ತಿದೆ.
ರುದ್ರನನ್ನು ಅನ್ನಾನಾಂ ಪತಯೇ ಎಂದೂ ಹೇಳಿದೆ. ಅನ್ನ ಅಂದರೆ ಆಹಾರ. ಆಹಾರ ದೇಹ ಪೋಷಣೆಗೆ ಅಷ್ಟೆ ಅಲ್ಲದೆ ಅದು ಮನಸಿನ ಯೋಚನೆಗಳಿಗೂ ಭಾವನೆಗಳಗೂ ಬೇಕಾದ ಆಹಾರ. ಇಂತಹ ಅನ್ನಕ್ಕೆ, ಆಹಾರಕ್ಕೆ ಒಡೆಯನಾದ ರುದ್ರನೇ ನಿನಗೆ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇನೆ.

5. ನಮೋ ಹರಿಕೇಶಾಯೋಪವೀತಿನೇ ಪುಷ್ಟಾನಾಂ ಪತಯೇ ನಮಃ

ದಟ್ಟವಾದ ಕಪ್ಪುಕೂದಲುಳ್ಳ, ಯಜ್ನೋಪವೀತವನ್ನು ಧರಿಸಿರುವ ಪುಷ್ಟಿಗೆ, ಪೌಷ್ಟಿಕತೆಗೆ ಒಡೆಯನಾದ ರುದ್ರನೇ ನಿನಗೆ ನಮನಗಳನ್ನು ಸಲ್ಲಿಸುತ್ತಿದ್ದೇನೆ.
ಪಕ್ಷಪಾತವಿಲ್ಲದವನು ಎನ್ನುವುದು ಹರಿಕೇಶಾ ಎನ್ನುವ ಪದ ಸೂಕ್ಷ್ಮಾರ್ಥ. ಧರ್ಮ ಪಾಲನೆ ಮಾಡುವವರಿಗೆ ತಾನು ಪುಷ್ಟಿಯನ್ನು ನೀಡುತ್ತಾನೆ. ಹರಿಕೇಶಾ ಎಂದರೆ ಶಾಶ್ವತನೂ ಎಂಬ ಅರ್ಥವೂ ಇದೆ.
ಬೃಹದಾರಣ್ಯಕ ಉಪನಿಷದ್ ವಾಕ್ಯದಂತೆ ಬ್ರಹ್ಮವು ನಿರ್ವಿಕಲ್ಪವೂ, ಅವಿನಾಶಿಯೂ ಆಗಿರುವಂತಾದ್ದು. ಪುಷ್ಟ ಎಂದರೆ ಪೌಷ್ಟಿಕವಾದವುಗಳು.
ವಾಕ್, ಜ್ನಾನ ,ಆರೋಗ್ಯ ( ಜ್ನಾನೇಂದ್ರಿಯಗಳ ಚುರುಕುತನವೂ ಸೇರಿದಂತೆ) ಐಷ್ವರ್ಯ, ಸಂತಾನ, ಗೋವುಗಳು ( ಆಧುನಿಕ ಪರಿಭಾಷೆಯಲ್ಲಿ ವಾಹನಗಳು ಎಂದಾಗಬಹುದು) ಸಮೃದ್ಧ ಭರಿತ ನಗರಗಳು, ಹಳ್ಳಿಗಳು, ಧರ್ಮಾಧಿಕಾರ ( ಧರ್ಮದಿಂದ ಅಧಿಕಾರ ನಿರ್ವಹಣೆ), ಅಷ್ಟ ಸಿದ್ಧಿಗಳು ಮತ್ತು ಗೃಹಗಳು. ಇವು ಹತ್ತು ವಿಧದ ಪುಷ್ಟಿ ಗಳು.
ಯಾರು ತನ್ನಲ್ಲಿ ಶರಣಾಗುತ್ತಾರೋ ಅವರಿಗೆ ಈ ಎಲ್ಲ ಹತ್ತ್ತು ವಿಧದ ಪುಷ್ಟಿಗಳನ್ನು ದಯಪಾಲಿಸುವುದಲ್ಲದೆ, ಈ ದಶಪುಷ್ಟಿಗಳಿಗೂ ರುದ್ರನು ಒಡೆಯನಾಗಿದ್ದಾನೆ.
ಓ ರುದ್ರನೇ ನಾವು ನಿನಗೆ ಶರಣಾಗಿದ್ದೇವೆ. ನಮಗೆ ಈ ಎಲ್ಲಾ ಹತ್ತು ಪುಷ್ಟಿಗಳನ್ನೂ ನೀಡಿ ನಮ್ಮನ್ನು ಉದ್ದರಿಸು ಎಂದು ಬೇಡಿಕೊಳ್ಳುತ್ತಾ ನಿನಗೆ ನಮಸ್ಕಾರಗಳ ಸಮರ್ಪಣೆ ಮಾಡುತ್ತಿದ್ದೇನೆ. ಸ್ವೀಕರಿಸು.

6. ನಮೋ ಭವಸ್ಯ ಹೇತ್ಯೈ ಜಗತಾಂ ಪತಯೇ ನಮಃ

ಜಗತ್ ಸೃಷ್ಟಿಕರ್ತನೂ ಬ್ರಹ್ಮಾಂಡದ ಒಡೆಯನೂ ಆದ ರುದ್ರನೇ ನಿನಗೆ ನಮಸ್ಕಾರಗಳು.
ಭವ ಎಂದರೆ ಅಸ್ಥಿತ್ವಕ್ಕೆ ಬರುವುದು, ಹುಟ್ಟು, ಜೀವ ಇವೆಲ್ಲ ಅರ್ಥಗಳು. ರುದ್ರನು ಭವ ಅಷ್ಟೇ ಅಲ್ಲಾ ಆತನು ಜಗತ್ತಿಗೇ ಪತಿ, ಜಗತ್ತಿನ ಒಡೆಯ. ರುದ್ರನ ಸರ್ವೋಚ್ಛತೆಯನ್ನು ಇಲ್ಲಿನ ಅನೇಕ ಮಂತ್ರಗಳಲ್ಲಿ ಸಾರಿ ಸಾರಿ ಹೇಳಲಾಗಿದೆ.

ಲಲಿತಾ ಸಹಸ್ರನಾಮದ ನಾಮಗಳಲ್ಲಿ ’ಭವಾನಿ” ಎನ್ನುವುದು ಒಂದು ನಾಮ. ಭವನ ಅರ್ಧಾಂಗಿ ಭವಾನಿ. ವ್ಯಾಕರಣ ರೀತಿಯಾಗಿ ಭವ ಮತ್ತು ಭವಾನಿ ಬೇರೆ ಬೇರೆ ಯಾದರೂ ಭವ ಮತ್ತು ಭವಾನಿ ಇವರ ಕ್ರಿಯೆಗಳಲ್ಲಿ ಭಿನ್ನತೆ ಇಲ್ಲಾ. ತನ್ನ ಭಕ್ತರ ಮನಸ್ಸು ದೈವೀ ಪ್ರಜ್ನೆಯಲ್ಲಿ ಸಂಪೂರ್ಣವಾಗಿ ತುಂಬಿ ಹೋಗುವಂತೆ ತನ್ನ ಭಕ್ತರನ್ನು ಹರಸುತ್ತಾಳೆ ಭವಾನಿ. ವೈಯಕ್ತಿಕ ಪ್ರಜ್ನೆಯು ದೈವೀ ಪ್ರಜ್ನೆಯಲ್ಲಿ ಮುಳುಗಿಹೋಗುವದನ್ನೇ ಲೀನವಾಗುವಿಕೆ. ಶ್ರೀ ಲಲಿತಾಂಬಿಕೆಯನ್ನು ಭವಾನಿ ಎಂದು ಸಂಭೋಧಿಸಲಾಗಿದೆ. ಭವಾನಿ ಎಂದು ಕರೆದ ಕ್ಷಣ ಅವಳು ಧಾವಿಸಿ ಬಂದು ಭಕ್ತರನ್ನು ತನ್ನಲ್ಲಿ ಲೀನವಾಗಿಸಿಕೊಂಡು ಬಿಡುತ್ತಾಳೆ. ಹಾಗಾಗಿ ಅವಳನ್ನು ಭವನ ಅರ್ಧಾಂಗಿ ಎಂದು ಭಾವಿಸಿದರೆ, ಕರೆದರೆ, ಉತ್ಸಾಹದಿಂದ ಸಂತೋಷ ಭರಿತಳಾಗಿ ಬಿಡುತ್ತಾಳೆ.
ಮಹಾವಾಕ್ಯವಾದ ತತ್ ವಂ ಅಸಿ ಎನ್ನುವುದಕ್ಕೆ ಇದು ಪರೋಕ್ಷವಾಗಿ ಅನ್ವಯ ಅಗಿಬಿಡುತ್ತದೆ. ಈ ಕಾರ್ಯವಿಧಾನವೇ ಸಾಯುಜ್ಯ ಎನಿಸುಕೊಂಡಿರುವುದು. ಇದೇ ತತ್ ಕ್ಷಣ ಮೋಕ್ಷವನ್ನು ಕೊಡುವಂತಾದ್ದು. ಈ ಬಗೆಯಲ್ಲಿ ರುದ್ರನನ್ನು ಧ್ಯಾನಿಸಿವುದು ಜಪ ಹೋಮಾದಿಗಳಿಗಿಂತಲೂ ಹೆಚ್ಚು ಪರಿಣಾಮಕಾರಿ.

ಮೋಕ್ಷಗಳು ನಾಲ್ಕು ವಿಧ.
ಒಂದು ಸಾಲೋಕ್ಯ: ಇಷ್ಟದೈವದ ಲೋಕದಲ್ಲಿ ದೇವರೊಂದಿಗೇ ಇರುವುದು. ಎರಡನೆಯದು ಸಾರೂಪ್ಯ; ದೈವೀ ರೂಪ ಆಕಾರವನ್ನೇ ತಾನೂ ಹೊಂದುವುದು, ಮೂರನೆಯದು ಸಾಮೀಪ್ಯ; ಇಷ್ಟ ದೈವ ದ ಹತ್ತಿರವೇ ಇರುವುದು, ನಾಲ್ಕನೆಯದು ಸಾಯುಜ್ಯ: ದೈವದೊಂದಿಗೇ ಲೀನವಾಗಿಬಿಡುವುದು. ಮೊದಲನೆಯದರಿಂದ ಆರಂಭ ಮಾಡಿ ಕೊನೆಯ ಹಂತದಲ್ಲಿ ಸಾಯುಜ್ಯ ಹೊಂದುವುದು ಒಂದು ಮಾರ್ಗವಾದರೆ, ತನ್ನನ್ನು ಇಷ್ಟದೈವದೊಂದಿಗೆ ತಾದಾತ್ಮ್ಯ ಗೊಳಿಸುವ ಯೋಚನಾ ಪ್ರಕ್ರಿಯೆಯು ಶೀಘ್ರವಾಗಿ ಸಾಯುಜ್ಯವನ್ನೇ ಕೊಡಬಲ್ಲುದು.

7. ನಮೋ ರುದ್ರಾಯಾ ತತಾವಿನೇ ಕ್ಷೇತ್ರಾಣಾಂ ಪತಯೇ ನಮಃ

ತನ್ನ ಬಿಲ್ಲುಗಳಿಂದ ನಮಗೆ ರಕ್ಷಣೆ ನೀಡುತ್ತಿರುವ ರುದ್ರನಿಗೆ ನಮಸ್ಕಾರಗಳು. ಎಲ್ಲಾ ಕ್ಷೇತ್ರಗಳ ಅಂದರೆ ಎಲ್ಲ ಪ್ರದೇಶಗಳಿಗೂ ಒಡೆಯನಾಗಿ ಆ ಪ್ರದೇಶಗಳನ್ನು ರಕ್ಷಿಸುತ್ತಿರುವ ರುದ್ರನಿಗೆ ನಮಸ್ಕಾರಗಳು.

ಜೀವವು ದೇಹ ಬಿಟ್ಟನಂತರ ಬೇರೊಂದು ದೇಹವನ್ನು ಪಡೆದುಕೊಂಡು ಮತ್ತೆ ಹುಟ್ಟಿಬರುತ್ತದೆ ಎಂಬುದು ಬಹಳ ಆಳವಾದ ನಂಬಿಕೆಯಾಗಿದ್ದು, ಈ ನಂಬಿಕೆ ಸಾವಿರಾರು ವರ್ಷಗಳಿಂದ ಇದ್ದು, ಇದು ಮಾನವನ ವಂಶವಾಹಿನಿಯಲ್ಲೇ ಸೇರಿ ಹೋಗಿದೆ ಎಂದರೆ ತಪ್ಪಾಗಲಾರದು. ಈ ಪುನರ್ಜನ್ಮದ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆದಿದ್ದು, ಪುನರ್ಜನ್ಮ ಇದೆ ಎಂದು ನಿರೂಪಿಸಲು ಮತ್ತು ಇಲ್ಲಾ ಎಂದು ನಿರೂಪಿಸಲೂ ದಾಖಲೆಗಳ ಲಭ್ಯ ಇದೆ. ಪುನರ್ಜನ್ಮ ಇಲ್ಲದೇ ಇರುವುದನ್ನು ಮೋಕ್ಷ ಎಂದು ಸಹಾ ನಂಬಲಾಗಿದೆ. ಇದರ ಬಗ್ಗೆ ಮತ್ತೊಮ್ಮೆ ಅಂದರೆ ಲಲಿತಾ ಸಹಸ್ರ ನಾಮದ ಬಗ್ಗೆ ಮಾತಾಡುವಾಗ ಪ್ರಸ್ತಾಪಿಸುತ್ತೇನೆ.

ದೇಹ ಬಿಟ್ಟ ಆ ಜೀವಾತ್ಮನು ಮತ್ತೊಂದು ದೇಹವನ್ನು ಹೊಂದಲು ಪಡಬೇಕಾದ ನೋವು ಮತ್ತು ಕಷ್ಟಗಳನ್ನು ರುದ್ರನು ಪರಿಹರಿಸುತ್ತಾನೆ. ಕ್ಷೇತ್ರಾಣಾಂ ಪತಯೇ ಅಂದರೆ ಬ್ರಹ್ಮಾಂಡದ ಒಡೆಯ ಎಂದೇ ಅರ್ಥೈಸಬೇಕು. ಕ್ಷೇತ್ರ ಮತ್ತು ಕ್ಷೇತ್ರಜ್ನನ ಬಗ್ಗೆ ಭಗವದ್ಗೀತೆಯ 13 ನೇ ಅಧ್ಯಾಯ ವಿವರಿಸಿದರೆ, ಕ್ಷೇತ್ರವನ್ನು ಸ್ಥೂಲ ದೇಹವೆಂತಲೂ, ಕ್ಷೇತ್ರಜ್ನನನ್ನು ಸೂಕ್ಷ್ಮದೇಹವೆಂದು ನಿರ್ಣಯಿಸಿರುವ ಉಪನಿಷದ್ ವಾಕ್ಯಗಳೂ ಇವೆ. ಬ್ರಹ್ಮ ಸೂತ್ರವು ಕ್ಷೇತ್ರವನ್ನು ಸ್ಥೂಲ ದೇಹವೆಂತಲೂ, ಕ್ಷೇತ್ರಜ್ನನನ್ನು ಅತ್ಮ ಎಂತಲೂ ನಿರ್ಣಾಯಕವಾಗಿ ಸಮರ್ಥಿಸಿಬಿಟ್ಟಿದೆ.
ಈ ಮಂತ್ರವು ರುದ್ರನಿಂದ ನಮಗೆ ಒದಗುವ ಮೂರು ವಿಧದ ರಕ್ಷಣೆಗಳನ್ನು ಹೇಳಿದೆ. ನಾವು ವಾಸಿಸುವ ಸ್ಥಳ, ನಮ್ಮ ದೇಹ ಮತ್ತು ಆತ್ಮ..

ರುದ್ರಾಧ್ಯಾಯದ ಮೊದಲನೇ ಅನುವಾಕದ ಮೊದಲನೇ ಶ್ಲೋಕ

ನಮ’ಸ್ತೇ ರುದ್ರ ಮನ್ಯವ’ ಉತೋತ ಇಷ’ವೇ ನಮಃ’ | ನಮ’ಸ್ತೇ ಅಸ್ತು ಧನ್ವ’ನೇ ಬಾಹುಭ್ಯಾ’ಮುತ ತೇನಮಃ’ |

ಇಲ್ಲಿ ಬಿಲ್ಲು ಕ್ರಿಯೆಯ ಗುರಿಯಾಗಿದ್ದರೆ , ಈ ಶ್ಲೋಕದಲ್ಲಿ ಆ ಕ್ರಿಯೆಯು ರುದ್ರನು ನಮಗೆ ನೀಡುವ ಮೂರು ವಿಧವಾದ ರಕ್ಷಣೆಗಳಾಗಿವೆ ಎನ್ನುವುದನ್ನು ಮುಖ್ಯವಾಗಿ ಗಮನಿಸಬೇಕು.

ಬ್ರಹ್ಮಾಂಡದ ಒಡೇಯನಾದ ರುದ್ರನೇ, ನೀನು ನಾವು ವಾಸಿಸುವ ಪ್ರದೇಶವನ್ನು, ನಮ್ಮ ದೇಹವನ್ನೂ, ಆತ್ಮವನ್ನೂ, ರಕ್ಷಿಸುವುದೇ ಅಲ್ಲದೆ, ಈ ದೇಹವನ್ನು ಬಿಟ್ಟನಂತರ ಮತ್ತೊಂದು ದೇಹದ ಹುಡುಕಾಟದಲ್ಲಿ ಆಗುವ ಕಷ್ಟಗಳನ್ನು ನೋವುಗಳನ್ನೂ ಪರಿಹರಿಸು ಎಂದು ಬೇಡಿಕೊಂಡು ನಿನಗೆ ನಮಸ್ಕಾರಗಳನ್ನು ಅರ್ಪಿಸುತ್ತಿದ್ದೇನೆ. ಓ ರುದ್ರನೇ ನಮ್ಮನ್ನು ರಕ್ಷಿಸು.

8. ನಮಃ ಸೂತಾಯಹಂತ್ಯಾಯ ವನಾನಾಂ ಪತಯೇ ನಮಃ

ವನಗಳಿಗೆ ಅಂದರೆ ಅರಣ್ಯಗಳಿಗೆ ಅಧಿಪತಿಯಾದ ಯಾರೂ ನಾಶಮಾಡಲಾಗದ ಸಾರಥಿಯಾದ ರುದ್ರನೇ ನಿನಗೆ ನನ್ನ ನಮಸ್ಕಾರಗಳು.
ಸೃಷ್ಟಿಯ ಸಮಸ್ತ ಜೀವಿಗಳನ್ನೂ ರಥದಲ್ಲಿ ಕೂರಿಸಿ ಅದರ ಸಾರಥ್ಯವನ್ನು ರುದ್ರನು ವಹಿಸಿಕೊಂಡಿದ್ದಾನೆ. ಇಲ್ಲಿ ಅರಣ್ಯ ಎನ್ನುವುದು ಸಂಸಾರ ಬಂಧನ. ಈ ಸಂಸಾರ ಬಂಧನದಲ್ಲಿರುವ ನಮ್ಮೆಲ್ಲರನ್ನೂ ಆ ಅರಣ್ಯದ ರಾಜನೇ ಆದ ರುದ್ರನು ತನ್ನ ರಥದಲ್ಲಿ ಕೂಡಿಸಿ ತಾನೇ ಸಾರಥ್ಯವನ್ನು ವಹಿಸಿಕೊಂಡು ಅರಣ್ಯದಿಂದ ಹೊರಗೆ ಕರೆದೊಯ್ಯುತ್ತಾನೆ. ಅಂದರೆ ಸಂಸಾರ ಬಂಧನದಿಂದ ಬಿಡುಗಡೆ ಮಾಡಿ ಮೋಕ್ಷವನ್ನು ದಯಪಾಲಿಸುತ್ತಾನೆ. ಇಲ್ಲಿ ಭವಾರಣ್ಯ ಕುಠಾರಿಕಾ, ಪಾಪಾರಣ್ಯ ದವಾನಲಾ, ರುದ್ರರೂಪಾಯೈ ಎಂಬ ಲಲಿತಾ ಸಹಸ್ರನಾಮದ ಈ ಮೂರು ನಾಮಗಳು ನೆನಪಿಗೆ ಬರುತ್ತವೆ. ತನ್ನ ಕೊಡಲಿಯಿಂದ ಅರಣ್ಯವನ್ನು ಕಡಿದು ಸಂಸಾರವೆಂಬ ಆ ಅರಣ್ಯದಲ್ಲಿ ಸಿಕ್ಕಿಹಾಕಿಕೊಂಡಿರುವ ಜೀವನನ್ನು ಬಿಡುಗಡೆ ಮಾಡುವವಳು, ತನ್ನ ಕಾಡ್ಗಿಚ್ಚಿನಿಂದ ಜೀವಿಯ ಪಾಪ ಎಂಬ ಅರಣ್ಯವನ್ನು ದಹಿಸುವವಳೂ, ರುದ್ರರೂಪಿಣಿಯೂ ಆದ ಶ್ರೀ ಲಲಿತಾ ಮಹಾತ್ರಿಪುರ ಸುಂದರಿ. ಈ ಶ್ಲೋಕವು ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಮತ್ತು ಅನುಗ್ರಹಕ್ಕೆ ಕಾರಣವಾದ ಆ ಮಹಾಚೈತನ್ಯವನ್ನು ರುದ್ರ ಎಂದು ಕರೆದರೂ, ಲಲಿತಾ ಎಂದು ಕರೆದರೂ, ಆ ಮಹಾಚೈತನ್ಯ ಒಂದೇ ಆಗಿದೆ.
ಈ ಸಂಸಾರದ ಅರಣ್ಯದಲ್ಲಿ ಸಿಲುಕಿಕೊಂಡಿರುವ ನಮ್ಮನ್ನು ಇಲ್ಲಿಂದ ಬಿಡುಗಡೆ ಮಾಡಿ ನಿನ್ನ ಸಾನ್ನಿಧ್ಯವನ್ನು ನೀಡು. ಓ ರುದ್ರನೇ ನಿನಗೆ ನನ್ನ ನಮಸ್ಕಾರಗಳು.

9. ನಮೋ ರೋಹಿತಾಯ ಸ್ಥಪತಯೇ, ವೃಕ್ಷಾಣಾಂ ಪತಯೇ ನಮಃ

ಸ್ಥಪತಿ ಎಂಬ ಪದಕ್ಕೆ ನಾನಾ ಅರ್ಥಗಳು. ರಾಜ, ಅಧಿಕಾರಿ, ವಾಸ್ತುಶಿಲ್ಪಿ. ಇಲ್ಲಿ ಯಾವ ಅರ್ಥದಲ್ಲಿ ಈ ಪದ ಪ್ರಯೋಗ ಆಗಿದೆ ಎಂದು ಹೇಳುವುದು ಕಷ್ಟ ಆಗಿದೆ. ಮತ್ತೊಮ್ಮೆ ಇಲ್ಲಿ ರುದ್ರನನ್ನು ಮರಗಳ ಅಧಿಪತಿ. ಒಡೆಯ ಎಂದು ಹೇಳಲಾಗಿದೆ.
ಕೆಂಪು ಬಣ್ಣದಿಂದ ಕೂಡಿದ ಮರಗಳಿಗೆ ಅಧಿಪತಿಯಾದ ರುದ್ರನೇ ನಿನಗೆ ನಮಸ್ಕಾರಗಳು.
ರೋಹಿತ ಎನ್ನುವ ಪದಕ್ಕೆ ವಾಕ್ ಅನ್ನು ದಯಪಾಲಿಸುವವನೂ ಎಂಬ ಅರ್ಥವೂ ಇದೆ. ರುದ್ರನ ತಾಂಡವ ನೃತ್ಯದ ಸಮಯದಲ್ಲಿ ಅವನ ಢಮರುವಿನಿಂದ ಹೊರಟ ಶಬ್ಧ ಅಕ್ಷರಗಳಾದುವು, ಆ ಅಕ್ಷರಗಳ ಸಂಯೋಜನೆ ಪದಗಳಾಗಿ, ಪದಗಳ ಉಚ್ಚಾರ ವಾಕ್ ಆಗಿದೆ. ಹಾಗಾಗಿ ರುದ್ರನು ವಾಕ್ ಅನ್ನು ದಯಪಾಲಿಸುವವನು.
ರೋಹಿತ ಎನ್ನುವ ಪದಕ್ಕೆ ಕೆಂಪು ಎಂಬ ಅರ್ಥ ಕೊಡುವುದಾದರೆ, ಕೆಂಪು ಬಣ್ಣ ಪುಷ್ಟಿ ಅಥವಾ ಪೌಷ್ಟಿಕತೆಯನ್ನು ಸೂಚಿಸುತ್ತದೆ. ರುದ್ರನನ್ನು ಕೆಂಪು ಬಣ್ಣ ಉಳ್ಳವನು ಎಂದು ಹೇಗೆ ಹೇಳಲಾಗಿದೆಯೋ ಹಾಗೆಯೇ, ಶ್ರೀ ಲಲಿತಾ ಮಹಾ ತ್ರಿಪುರ ಸುಂದರಿಯನ್ನೂ ಕೆಂಪು ಬಣ್ಣದಿಂದ ಕೂಡಿರುವವಳು ಎಂದು ಹೇಳಲಾಗಿದೆ. ಲಲಿತೆಯ ಕೆಂಪು ಬಣ್ಣ ಜೀವಿಗಳ ಬಗ್ಗೆ ಆಕೆಯ ಅನುಕಂಪದ ಸೂಚಕವಾಗಿದ್ದು, ಧರ್ಮ ಮಾರ್ಗದಲ್ಲಿ ನಡೆಯುವವರನ್ನು ಸದಾ ರಕ್ಷಿಸುವ ಮತ್ತು ಅವರ ಬಗ್ಗೆ ಅನುಕಂಪ ಹೊಂದಿರುವ ರುದ್ರನ ಬಣ್ಣವೂ ಸಹಾ ಕೆಂಪು ಎಂದೇ ವರ್ಣಿಸಲಾಗಿದೆ.

10. ನಮೋ ಮಂತ್ರಿಣೇ ವಣಿಜಾಯ ಕಕ್ಷಾಣಾಮ್ ಪತಯೇ ನಮಃ

ಎಲ್ಲಾ ಮಂತ್ರಗಳ ಪ್ರಮುಖನು. ಮಂತ್ರಗಳು ರಹಸ್ಯವಾಗಿರುವುದರಿಂದ ರಹಸ್ಯವಾದ ಜ್ನಾನಕ್ಕೆ ಪ್ರಮುಖನೂ, ಎಲ್ಲ ಉದ್ಯೋಗ, ವ್ಯಾಪಾರ, ಕಾಯಕಗಳಿಗೆ ಒಡೆಯನೂ, ರಹಸ್ಯ ಸ್ಥಾನಗಳ ಅಧಿಪತಿಯೂ ಆದ ರುದ್ರನೇ ನಿನಗೆ ನಮಸ್ಕಾರಗಳು.

ಈ ಎಲ್ಲಾ ಮಂತ್ರಗಳೂ ಪತಯೇ ನಮಃ ಎಂದೇ ಕೊನೆಗೊಳ್ಳುತ್ತವೆ. ಹಾಗಾಗಿ ಶ್ರೀ ರುದ್ರವನ್ನು ನಮಕ ಎಂದು ಕರೆಯಲಾಗಿದೆ.
ಜಗತ್ತಿನಲ್ಲಿ ಜರುಗುವ ಎಲ್ಲಾ ಕ್ರಿಯೆಗಳಿಗೂ ರುದ್ರನೇ ಒಡೆಯ ಎಂದೇ ಶ್ರೀ ರುದ್ರ ಹೇಳುತ್ತದೆ.
ಈ ಮಂತ್ರವು ರುದ್ರನು ಎಲ್ಲಾ ಮಂತ್ರಗಳ ಪ್ರಮುಖ ಎಂದು ಹೇಳುತ್ತದೆ. ಶಿವರೂಪಿಯಾದ ಶ್ರೀ ದಕ್ಷಿಣಾಮೂರ್ತಿ ಹಲವಾರು ಮಂತ್ರಗಳ, ಅದರಲ್ಲೂ ಮಹಾ ಮಂತ್ರಗಳ ಕರ್ತೃ. ಶಿವನನ್ನು ಆದಿಗುರು ಎಂದೂ ಕರೆಯಲಾಗಿದೆ. ’ಶಿವಾಯ ಗುರವೇ ನಮಃ” ಈ ಹಿಂದೆ ಹೇಳಿದಂತೆ ಕಕ್ಷಾಣಾಂ ಪತಯೇ ಎಂದರೆ ಮಂತ್ರ ರಹಸ್ಯದ ಒಡೆಯ ರುದ್ರ.
ಲಲಿತಾ ಸಹಸ್ರನಾಮದ ’ಸರ್ವ ಮಂತ್ರ ಸ್ವರೂಪಿಣ್ಯೈ ನಮಃ” ಹಾಗೂ ದಕ್ಷಿಣಾಮೂರ್ತಿ “ರೂಪಿಣ್ಯೈ ನಮಃ” ಈ ಎರಡು ನಾಮಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

11. ನಮೋ ಭುವಂತಯೇ ವಾರಿವಾಸ್ಕೃತಾಯೌಷಧೀನಾಂ ಪತಯೇ ನಮಃ

ಮಾನವಕುಲವೂ ಸೇರಿದಂತೆ ಈ ಬ್ರಹ್ಮಾಂಡಕ್ಕೇ ಆಧಾರವಾದ, ಔಷಧಗಳ ಅಂದರೆ ಔಷಧ ಗುಣವುಳ್ಳ ಗಿಡ ಮೂಲಿಕೆಗಳ ಅಧಿಪತಿಯೇ ಆದ ರುದ್ರನೇ ನಿನಗೆ ನಮಸ್ಕಾರಗಳು.
ಎಲ್ಲ ವಿಧದ ರೋಗಗಳನ್ನು ಭವರೋಗವನ್ನೂ ಸೇರಿದಂತೆ ಗುಣಪಡಿಸಿ, ನಮಗೆ ಪ್ರಾಪಂಚಿಕ ಸುಖ ಭೋಗಗಳ ಜತೆಗೆ ಅಧ್ಯಾತ್ಮಿಕ ಜ್ನಾನವನ್ನೂ ನೀಡುವ ರುದ್ರನೇ ನಿನಗೆ ನಮಸ್ಕಾರಗಳ ಅರ್ಪಣೆ.

12. ನಮಃ ಉಚ್ಚ್ಯೈಘ್ರೋಷಾಯಾssಕ್ರಂದಯತೇ ಪತ್ತೀನಾಂ ಪತಯೇ ನಮಃ

ಭಕ್ತರಿಂದ ಉಚ್ಛ ಸ್ತರದಲ್ಲಿ ಮಂತ್ರಘೋಷ ಮಾಡಿಸಿಕೊಳ್ಳುತ್ತಿರುವ ರುದ್ರನೇ, ಶತೃಪಡೆಯನ್ನು ಸದೆಬಡಿದು, ಭಕ್ತರನ್ನು ಹರಸುತ್ತಿರುವ ರುದ್ರನೇ, ಕಾಲ್ನಡಿಗೆಯ ಸೈನಿಕರ ಒಡೆಯನಾದ ರುದ್ರನೇ ನಿನಗೆ ನಮನಗಳು, ಪ್ರಣಾಮಗಳು.
ಭಕ್ತರಿಗೆ, ಸಾಧಕರಿಗೆ ಅವರ ಹಾದಿಯಲ್ಲಿ ಬಹಳಷ್ಟು ಅಡೆತಡೆಗಳು ಬರುತ್ತವೆ. ಅವೇ ಶತೃ ಪಡೆಗಳು. ಈ ಅಡೆತಡೆಗಳನ್ನು ನಿವಾರಿಸಿ, ನಾಶಮಾಡಿ ಅವರ ಹಾದಿಯನ್ನು ಸುಗಮ ಮಾಡುವವನು ರುದ್ರ. ಇಂತಹ ಅಡೆತಡೆಗಳನ್ನು ದುಷ್ಟಶಕ್ತಿಗಳನ್ನು ನಾಶಮಾಡಲೆಂದೇ ಇರುವ ಕಾಲ್ನಡಿಗೆಯ ಸೈನಿಕರಾದ ರುದ್ರಗಣಗಳಿಗೆ ರುದ್ರನು ಅಧಿಪತಿ. ಅಂತಹ ಕರುಣಾಮೂರ್ತಿಯಾದ ರುದ್ರನೇ ನಿನಗೆ ನಮಸ್ಕಾರಗಳು.

13. ನಮಃ ಕೃತ್ಸ್ನವೀತಾಯ ಧಾವತೇ ಸತ್ವಾನಾಂ ಪತಯೇ ನಮಃ

ಸರ್ವ ವ್ಯಾಪಿಯಾದ ರುದ್ರನೇ, ಭಕ್ತರನ್ನು ರಕ್ಷಿಸಲು ಧಾವಿಸಿ ಬರುವ ರುದ್ರನೇ, ಧರ್ಮಮಾರ್ಗದಲ್ಲಿ ನಡೆಯುವವರನ್ನು ಸದಾ ಹರಸುವ ರುದ್ರನೇ ನಿನಗೆ ನಮಸ್ಕಾರಗಳು.

ಇದು ಎರಡನೇ ಅನುವಾಕದ ಕೊನೆಯ ಮಂತ್ರ. ಸ್ಥಿರ ಶಕ್ತಿ ಮತ್ತು ಚರ ಶಕ್ತಿ ಎರಡೂ ರುದ್ರನೇ ಹಾಗಾಗಿಯೇ ಅವನು ಸರ್ವವ್ಯಾಪಿ. ಸ್ಥಿರ ಶಕ್ತಿಯಾಗಿ ಸೃಷ್ಟಿ ಕ್ರಿಯೆಗೆ ಕಾರಣನಾದರೆ, ಚರ ಶಕ್ತಿಯಾಗಿ ಭಕ್ತಾನುಗ್ರಹ ಕಾರಕನಾಗುತ್ತಾನೆ. ಶಿವ ಮತ್ತು ಶಕ್ತಿ ತತ್ವಗಳನ್ನು ಸೂಕ್ಷ್ಮವಾಗಿ ಹೇಳಲಾಗಿದೆ. ಈ ಹಿಂದೆ ನಮಃ ಸೂತಾಯಹಂತ್ಯಾಯ ವನಾನಾಂ ಪತಯೇ ನಮಃ ಮಂತ್ರದಲ್ಲಿ ಹೇಳಿದಂತೆ ರುದ್ರನು ಪರಮೋಚ್ಛ ಒಡೆಯನಾಗಿ ಪಂಚಕೃತ್ಯಗಳು ಅಂದರೆ ಸೃಷ್ಟಿ, ಸ್ಥಿತಿ, ಲಯ, ತಿರೋಧಾನಗಳೆಂಬ ಪಂಚಕೃತ್ಯಗಳನ್ನು ಮಾಡುತ್ತಾನೆ.
ಇಲ್ಲಿ ಲಲಿತಾ ಸಹಸ್ರ ನಾಮದ ಸೃಷ್ಟಿಕರ್ತ್ರೈ ನಮಃ ಇಂದ ಮೊದಲ್ಗೊಂಡು ತಿರೋಧಾನಕರ್ಯೈ ನಮಃ ಎನ್ನುವವರೆಗೆ 7 ನಾಮಗಳನ್ನು ನೆನಪಿಸಿ ಕೊಳ್ಳಬಹುದಾಗಿದೆ.

ಇಲ್ಲಿಗೆ ಎರಡನೇ ಅನುವಾಕ ಸಂಪೂರ್ಣ ಆಗಿದೆ.

2 Comments on “ಶ್ರೀ ರುದ್ರಾಧ್ಯಾಯ – ನಮಕದ 2 ನೇ ಅನುವಾಕದ ಕನ್ನಡ ವಿವರಣೆ

  1. ಮಹನೀಯರೇ ,ರುದ್ರಾಧ್ಯಾಯದ ನಿಮ್ಮ ವಿವರಣೆಗಳು ತುಂಬಾ ಚೆನ್ನಾಗಿ ಮೂಡಿಬಂದಿವೆ ..ಅದಕ್ಕೆ ನಮ್ಮ ಧನ್ಯವಾದಗಳು..ಶ್ರೀ ರುದ್ರಾಧ್ಯಾಯ – ನಮಕದ 1 ನೇ ಅನುವಾಕದ ಕನ್ನಡ ವಿವರಣೆ ಸಿಗಬಹುದೆ ದಯವಿಟ್ಟು ತಿಳಿಸಿ..ನಿಮ್ಮ ಉತ್ತರಕ್ಕಾಗಿ ಕಾಯುವೆ

    Like

    • ರುದ್ರಾಧ್ಯಾಯದ ಎಲ್ಲಾ 11 ಅನುವಾಕಗಳೂ ಈ ಬ್ಲಾಗ್ ನಲ್ಲಿ ಇವೆ. ಮತ್ತೊಂದು ಬಾರಿ ಅದರ ಯೂಟ್ಯೂಬ್ ಲಿಂಕ್ ಹಾಕುತ್ತೇನೆ. ಲಲಿತಾ ಸಹಸ್ರನಾಮದ ವಿವರಣೆಯು ಗೂಗಲ್ ಮೀಟ್ ನಲಿ ಪ್ರತಿದಿನ ಆಗುತ್ತಿದೆ. ತಮಗೆ ಆಸಕ್ತಿ ಇದ್ದರೆ 9845917711 ಗೆ Whatsapp ಮಾಡಿ

      Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: