ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಕಂಚಿ ಪರಮಾಚಾರ್ಯ ಶ್ರೀ ಚಂದ್ರಶೇಖರೇಂದ್ರ ಸರಸ್ವತಿ ಮಹಾಸ್ವಾಮಿಯವರು ಶಾಕ್ತ ಪದ್ಧತಿ ಮತ್ತು ವಿಜ್ಞಾನ ಎಂಬುದರ ಬಗ್ಗೆ ನೀಡಿರುವ ಉಪನ್ಯಾಸದ ಆಯ್ದ ಭಾಗಗಳನ್ನು ಕನ್ನಡದಲ್ಲಿ ಹೇಳುವ ಒಂದು ಚಿಕ್ಕ ಪ್ರಯತ್ನವನ್ನು ಗುರುವಿನ ಅನುಗ್ರಹದೊಂದಿಗೆ ಮಾಡುತ್ತಿದ್ದೇನೆ.
ಭಗವಾನ್ ಶಂಕರರು ಸೌಂದರ್ಯ ಲಹರಿಯ ಮೊದಲ ಮಂತ್ರದಲ್ಲಿ ಶಿವ ಎನ್ನುವ ತತ್ವವು ಜಡ ಮತ್ತು ಚಲನಶೀಲತೆ ಇಲ್ಲದ್ದು ಮತ್ತು ಶಕ್ತಿಯ ಸ್ಪಂದನೆಯಿಂದಲೇ ಬ್ರಹ್ಮಾಂಡದ ಸೃಷ್ಟಿಯೂ ಸೇರಿದಂತೆ ಸೃಷ್ಟಿಯ ಎಲ್ಲಾ ಕ್ರಿಯೆಗಳೂ ನಡೆಯಲು ಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ಈ ಶಿವ ಶಕ್ತಿಗಳು ಬೇರ್ಪಡಿಸಲಾಗದೇ ಒಂದೇ ಆಗಿರುವಂತಹವು ಎಂದು ಪ್ರತಿಪಾದಿಸಿದ್ದಾರೆ.
ಇದನ್ನು ವೈಜ್ಞಾನಿಕ ದೃಷ್ಟಿ ಕೋನದಿಂದ ನೋಡುವುದಾದರೆ, ಶಿವ ಎನ್ನುವುದನ್ನು ವಸ್ತು, matter ಎಂತಲೂ ಶಕ್ತಿಯನ್ನು ಶಕ್ತಿ energy ಎಂದಲೂ ಅರ್ಥೈಸಬಹುದು. ಇವೆರಡೂ ಬೇರ್ಪಡಿಸಲು ಆಗದು ಎಂಬುದನ್ನು matter ನಿಂದ Shakti ಎಂದು ಹೇಳುವ ಮೂಲಕ ಪರಮಾಣು ವಿಜ್ಞಾನ ಇದನ್ನು ಒಪ್ಪಿಕೊಂಡಿದೆ.
ಒಂದು ವ್ಯತ್ಯಾಸ ಅದೂ ಮುಖ್ಯ ವ್ಯತ್ಯಾಸ ಎಂದರೆ “ವಸ್ತು” matter “ಶಕ್ತಿ” Energy ಯಾಗಿ ಪರಿವರ್ತನೆ ಆದೊಡನೆ ವಸ್ತು ವು matter ಇಲ್ಲವಾಗುತ್ತದೆ. ಆದರೆ ಎಲ್ಲ ವಿದಧಲ್ಲಿ ಆಯಾಮಗಳಲ್ಲಿ ಶಕ್ತಿ energy ಪ್ರಕಟ ಆದಮೇಲೆಯೂ ಸಹಾ ಶಿವ ಎನ್ನುವ matter ನಾಶವಾಗುವುದಿಲ್ಲಾ. ಏಕೆಂದರೆ ವಿಜ್ಞಾನ ಗುರುತಿಸಿರುವ “ವಸ್ತು” matter ಜಡ ಮತ್ತು ಯಾವುದೇ ಪ್ರಜ್ಞೆ ಇಲ್ಲದ್ದು ಹಾಗೂ ವಿಜ್ಞಾನ ಅರಿತಂತೆ ಜೀವ ಇಲ್ಲದ್ದು. ಆದರೆ ಶಿವ ಎನ್ನುವ ವಸ್ತು ಜಡ ಆದರೂ ಪ್ರಜ್ಞೆಯೇ ತಾನು ಆಗಿರುವುದು. ಶಿವ ಎನ್ನುವ ವಸ್ತು ಶಕ್ತಿಯಿಂದ ಸ್ಪಂದಿತವಾಗಿ ಬ್ರಹ್ಮಾಂಡದ ಸೃಷ್ಟಿಗೆ ಮತ್ತು ಸೃಷ್ಟಿಯ ಎಲ್ಲಾ ವಿದ್ಯಮಾನಗಳಿಗೆ ಕಾರಣವಾದರೂ ಶಿವ ಎನ್ನುವುದು ಇಲ್ಲವಾಗುವುದಿಲ್ಲಾ.
ವಿಜ್ಞಾನ ದ ಸಂಶೋಧನೆಗಳಿಗೂ, ಆಧ್ಯಾತ್ಮಿಕ ಸಿದ್ಧಾಂತಗಳಿಗೂ ವ್ಯತ್ಯಾಸಗಳಿದ್ದರೂ ಇವೆರಡರ ಸಿದ್ಧಾಂತಗಳ ನಡುವೆ ಸಾಮರಸ್ಯವೂ ಇದೆ. ಐನ್ ಸ್ಟೀನ್ ನ ಸಾಪೇಕ್ಷ ಸಿದ್ಧಾಂತ , Theory of Relativity ಯ ಆಧಾರದ ಮೇಲೆಯೇ ಪರಮಾಣು ವಿಜ್ಞಾನದ ಸಂಶೋಧನೆ ಆಗಿರುವುದು. ಈ ಸಾಪೇಕ್ಷ ಸಿದ್ಧಾಂತ ಕ್ಕೂ ಶಾಕ್ತ ಅದ್ವೈತ ಕ್ಕೂ ಸಾಮ್ಯತೆ ಇರುವುದು ಕಂಡುಬರುತ್ತದೆ.
ಯಾವುದೂ ಈ ವಿಶ್ವದಲ್ಲಿ ತಂತಾನೇ ’ಸತ್ಯ” ಅಲ್ಲಾ. ಅಥವಾ ಪರಿಪೂರ್ಣ ಘಟಕವೂ ಅಲ್ಲಾ. ಇದು ಕಾಲ ಮತ್ತು ದೇಶ ಅಂದರೆ Time & space ಗೂ ಸಹಾ ಅನ್ವಯಿಸುತ್ತದೆ. ಎಲ್ಲವೂ ಎಲ್ಲ ಕಾಲದಲ್ಲೂ ಮತ್ತೊಂದರ ಮೇಲೆ ಅವಲಂಬಿತವಾಗಿದ್ದರೂ ಆ ಒಂದೊಂದೂ ಸತ್ಯ ಎನ್ನುವಂತೆ ಈ ಪ್ರಾಯೋಗಿಕ ಪ್ರಪಂಚದಲ್ಲಿ ಗೋಚರಿಸುತ್ತದೆ. ಬ್ರಹ್ಮನ್ ಎಂಬುದು ಮಾತ್ರವೇ, ಅದನ್ನು ಯಾವ ಹೆಸರಿನಿಂದ ಕರೆದರೂ ಅದು ಮೂಲಭೂತವಾದ ಸತ್ಯ ಆಗಿದೆ. ಎಲ್ಲಾ ಪ್ರಪಂಚಗಳೂ ಈ ಬ್ರಹ್ಮನ್ ನ ಪ್ರತಿಬಿಂಬ ವೇ ಆಗಿದ್ದು ಮಾಯೆಯಿಂದ ಪ್ರಕಟವಾಗುತ್ತಿವೆ. ಈ ಮಾಯೆಯನ್ನು ಶಾಕ್ತ ಸಿದ್ಧಾಂತ ಅಥವಾ ಶಾಕ್ತ ಅದ್ವೈತವು ಪರಾಶಕ್ತಿ, ಅಂಬಾ, ತಾಯಿ, ಮಾತೆ ಎಂದು ಕರೆಯುತ್ತಿದೆ. ಈ ಮಾಯೆ ಎಂದು ಶಾಕ್ತ ಅದ್ವೈತವು ಕರೆಯುತ್ತಿರುವುದು ವಿಜ್ಞಾನದ ಸಾಪೇಕ್ಷ ಸಿದ್ಧಾಂತವೇ ಅಲ್ಲವೇ? ವಿಜ್ಞಾನವು ಪರಿಪೂರ್ಣ “ಸತ್ಯ” ಯಾವುದು ಎಂಬುದನ್ನು ಇನ್ನೂ ಸಂಶೋಧಿಸಿಲ್ಲಾ ಆದರೆ ಆಧ್ಯಾತ್ಮಿಕ, ವೇದಾಂತ ಗ್ರಂಥಗಳು ಬ್ರಹ್ಮನ್ ಅನ್ನು ಪರಿಪೂರ್ಣ ಸತ್ಯ ಎಂದು ಸಾರಿ ಹೇಳಿವೆ. ಈ ಬ್ರಹ್ಮನ್ ಎಂಬ ಪರಿಪೂರ್ಣ ಸತ್ಯವನ್ನು ಯಾವ ಹೆಸರಿಂದ ಕರೆದರೂ ಪರಿಪೂರ್ಣ ಸತ್ಯ ಮಾತ್ರ “ಅದೇ” ಆಗಿದೆ. ಈ ಪರಿಪೂರ್ಣ ಎನ್ನುವುದು ಪುಸ್ತಕದಲ್ಲಿ ಸಿಗುವಂತಹದು ಅಲ್ಲಾ. ಅದು ಅತ್ಯಂತ ಶ್ರೇಷ್ಟ ಮಾನವರು ತಾವು ತಮ್ಮ ನಿರಂತರ ಸಾಧನೆಯಿಂದ ಕಂಡು ಕೊಂಡ ಆತ್ಮ, ಅದು ಬ್ರಹ್ಮನ್. ಅದು ಎಲ್ಲಾ ಜೀವಗಳ ಜೀವ ಅದೇ ನಿಜವಾದ ಜೀವ.
ವಿಜ್ಞಾನವು ಪರಾಶಕ್ತಿಯ ಲೀಲೆಗಳು, ಸ್ಪಂದನಗಳನ್ನು, ಚಲನೆಗಳನ್ನು ಸಂಶೋಧಿಸುವುದರ ಮೂಲಕ ಹಲವು ನಿಯಮಗಳನ್ನು ರೂಪಿಸಲು ಸಾಧ್ಯ ಆಗಿರಬಹುದು. ಆದರೆ ಈ ಎಲ್ಲಾ ಸಮಷ್ಟಿ ಸ್ಪಂದನಗಳ, ಅದರಲ್ಲೂ ವ್ಯಕ್ತಿಯ ಮನಸ್ಸನ್ನು ಸ್ವಯಂ ಸ್ಪಂದಿಸುತ್ತಿರುವ ಸ್ಪಂದನವನ್ನು ಮತ್ತು ಆ ಸ್ಪಂದನ ಮನಸ್ಸನ್ನು ಸ್ಥಿರವಾಗಿ, ಪ್ರಶಾಂತವಾಗಿ ಇರಿಸಿ ತನ್ಮೂಲಕ ಪರಿಪೂರ್ಣವಾದ ಬ್ರಹ್ಮನ್ ಅಥವಾ ಆತ್ಮನನ್ನು ಕಂಡುಕೊಳ್ಳುವುದು ಹೇಗೆ ಎಂದು ಹೇಳಲು ಸಾಧ್ಯವಾಗಿಲ್ಲಾ. ಇದು ವಿಜ್ಜಾನದ ಮೂಲ ಉದ್ದೇಶವೂ ಅಲ್ಲ ಎಂದು ಒಪ್ಪಿಕೊಳ್ಳಬೇಕು, ಹಾಗೆಯೇ ವಿಜ್ಞಾನಕ್ಕೆ ಒಂದು ಮಿತಿ ಇದೆ ಎನ್ನುವದನ್ನೂ ಒಪ್ಪಿಕೊಳ್ಳಬೇಕು.
ವಿಜ್ಞಾನವು ಅಣುವಿನಲ್ಲಿನ ನ್ಯುಕ್ಲಿಯಸ್ ನ ಧನಾತ್ನಕ positive ಪ್ರೋಟಾನ್ ಎಂದು ಕರೆಯುವುದನ್ನು ನಾವು ಶಿವ ಎಂತಲೂ ಋಣಾತ್ಮಕ negative ಪ್ರೋಟಾನ್ ಎಂದು ಕರೆಯುವುದನ್ನು ಶಕ್ತಿ ಎಂತಲೂ ಕರೆಯಬಹುದೇನೋ(??!!) ಪ್ರಶಾಂತತೆ ಎನ್ನುವುದನ್ನು ಗುರುತ್ವಾಕರ್ಷಣೆಯ ಕೇಂದ್ರ ಬಿಂದು ಎಂದು ಕರೆಯಬಹುದೇನೋ. ಒಂದು ಭಯಾನಕ ಬಿರುಗಾಳಿ ಅಥವಾ ಚಂಡಮಾರುತಕ್ಕೆ ಒಂದು ಕೇಂದ್ರ ಬಿಂದು ಇರುತ್ತದೆ,- Storm centre. ಈ ಕೇಂದ್ರವು ಶಾಂತತೆಯಿಂದ ಕೂಡಿದ್ದರೂ ಅಲ್ಲಿಂದ ಹೊಮ್ಮುವ ಶಕ್ತಿ ಅಗಾಧವಾಗಿದ್ದು ಆ ಶಕ್ತಿ ಪ್ರಕಟವಾಗಿ ಎಲ್ಲೆಡೆ ವ್ಯಾಪಿಸುತ್ತದೆ. ಶಕ್ತಿ ತಾನೇ ಪ್ರಕಟಗೊಳ್ಳುತ್ತದೆ ಅಷ್ಟೇ ಅಲ್ಲದೆ ಸ್ಪೋಟ ಗೊಳ್ಳುತ್ತದೆ.
ಇಲ್ಲಿ ಈ ಚಂಡಮಾರುತದ ಕೇಂದ್ರ ಬಿಂದುವೇ ಶಿವ ಮತ್ತು ಎಲ್ಲ ಕಡೆ ವ್ಯಾಪಿಸಿ ಸ್ಪೋಟಗೊಳ್ಳುವ ಚಂಡಮಾರುತವೇ ಪರಾಶಕ್ತಿ, ಅಂಬಾ, ಶ್ರೀ ಮಾತೆ.
ಯಾವುದು ಕೇಂದ್ರದಲ್ಲಿದೆಯೋ ಅದು ಧನಾತ್ಮಕವಾದ್ದು , ಅದು ಶಿವ. ಯಾವುದು ಈ ಕೇಂದ್ರದ ಸುತ್ತಲೂ ಸುತ್ತುತ್ತದೆಯೋ ಅದು ಋಣಾತ್ಮಕವಾದ್ದು, ಅದು ಶಕ್ತಿ. ಶಿವ ಶಕ್ತಿ ಎರಡೂ ಸಮ ಎಂದಾಗಲೀ ಅಥವಾ ಒಟ್ಟಿಗೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿಲ್ಲಾ ಹಾಗಾಗಿ ಶಿವ ಕೇಂದ್ರ ಆದರೆ, ಶಕ್ತಿ ಅದರ ಸುತ್ತಲೂ ಸುತ್ತುವಂತಾದ್ದು ಎಂದು ಹೇಳುವ ಬದಲು ಇವೆರಡೂ ಒಂದೇ ಅಗಿರುವ ಎರಡು ಭಾಗಗಳು ಎಂದಾಗ ಅದು ಅರ್ಧನಾರೀಶ್ವರ ತತ್ವ ಆಗಿ, ಬಲಗಡೆ ಧನಾತ್ಮಕವಾದ ಶಿವ, ಎಡಗಡೆ ಋಣಾತ್ಮಕವಾದ ಶಕ್ತಿ ಆಗುತ್ತದೆ. ನಮ್ಮ ಹೃದಯ ಇರುವುದು ಎಡಭಾಗದಲ್ಲಿ. ಆದರೆ ಇದು ದೇಹದ ಎಲ್ಲಾ ಭಾಗಕ್ಕೂ ರಕ್ತವನ್ನು ಹಂಚಿ ಶಕ್ತಿಯನ್ನು ತುಂಬುತ್ತದೆ. ಆದರೂ ಶರೀರದ ಬಲಭಾಗವು ಸಾಮಾನ್ಯವಾಗಿ ಎಡಭಾಗಕ್ಕಿಂತ ಹೆಚ್ಚು ಬಲಯುತವಾಗಿರುತ್ತದೆ. ನಟರಾಜ ತನ್ನ ಬಲಯುತವಾದ ಬಲಗಾಲಿನ ಮೇಲೆ ತನ್ನೆಲ್ಲಾ ಭಾರವನ್ನು ಬಿಟ್ಟು ನಾಟ್ಯ ಮಾಡುತ್ತಿರುವುದು ನಮ್ಮ ಕಣ್ಮುಂದಿದೆ.
ಎಡಭಾಗದ ಶರೀರವನ್ನು ಬಲಭಾಗದ ಮೆದುಳು ಮತ್ತು ಬಲಭಾಗದ ಶರೀರವನ್ನು ಎಡಭಾಗದ ಮೆದುಳು ನಿಯಂತ್ರಿಸುತ್ತದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಅಂದರೆ ಶಿವನ ಭಾಗವಾದ ನಮ್ಮ ಬಲಭಾಗ ಹೆಚ್ಚು ಶಕ್ತಿಯುಕ್ತವಾಗಿರುವುದು ಎಡಭಾಗದ ಶಕ್ತಿಯಿಂದ. ಬಲಭಾಗವನ್ನು ಸಂಸ್ಕೃತ ದಲ್ಲಿ ದಕ್ಷಿಣ ಭಾಗ ಎನ್ನುತ್ತಾರೆ. ದಕ್ಷಿಣ ಎಂದರೆ ಸಮರ್ಥವಾದ್ದು, ಪರಿಣಿತವಾದ್ದು ಎಂಬ ಅರ್ಥವೂ ಇದೆ. ಅಂದರೆ ಬಲಭಾಗ ಹೆಚ್ಚು ಸಮರ್ಥವಾದ್ದು. ಇನ್ನು ವಾಮ ಅಂದರೆ ಎಡಗಡೆ ಎಂಬ ಅರ್ಥ ಮಾತ್ರವಲ್ಲದೆ, ಸುಂದರವಾದ್ದು, ಮನೋಹರವಾದ್ದು ಎಂಬ ಅರ್ಥವೂ ಇದ್ದು ಶ್ರೀ ಮಾತೆಯ ಸೌಂದರ್ಯವನ್ನು ಹೇಳುತ್ತದೆ.
ಕಂಚಿ ಪರಮಾಚಾರ್ಯರು ಈ ಎಡ ಬಲಗಳನ್ನು ರಾಜಕೀಯವಾಗಿಯೂ ಬಣ್ಣಿಸಿದ್ದಾರೆ. ಎಡಪಂಥದ ರಾಜಕೀಯ ಪಕ್ಷಗಳು ಎಂದರೆ, ಬದಲಾವಣೆಯನ್ನು ಬಯಸುವ, ಕ್ರಾಂತಿಕಾರೀ ಮನೋಭಾವದ ಪಕ್ಷಗಳು. ಬಲಪಂಥದ ಪಕ್ಷಗಳು ಎಂದರೆ ಸಂಪ್ರದಾಯವಾದದ, ಶಾಂತಿಪ್ರಿಯತೆಗೆ ಒತ್ತುಕೊಡುವ ಪಕ್ಷಗಳು. ಇಲ್ಲಿಯೂ ಅವರು ಶಿವ ಮತ್ತು ಶಕ್ತಿಯರ ಗುಣ ಮತ್ತು ಕ್ರಿಯೆಯನ್ನು ಕಂಡುಕೊಂಡಿದ್ದಾರೆ.
ಇನ್ನೊಂದು ಮುಖ್ಯವಾದುದನ್ನು ಪರಮಾಚಾರ್ಯರು ಹೇಳುತ್ತಾರೆ. ಕನ್ನಡಿಯಲ್ಲಿ ನಾವು ನೋಡಿಕೊಂಡಾಗ ಎಡಗಡೆಯ ಪ್ರತಿಬಿಂಬ ಬಲಗಡೆಯೂ ಬಲಗಡೆಯ ಪ್ರತಿಬಿಂಬ ಎದಗಡೆಯೂ ಕಾಣಿಸುತ್ತದೆ. ಅದ್ವೈತ ವೇದಾಂತ ಹೇಳುವಂತೆ, ನಿರ್ಗುಣ ನಾದ ಬ್ರಹ್ಮನ್ ಮಾಯಾ ಎಂಬುವ ಕನ್ನಡಿಯಲ್ಲಿ ಪ್ರತಿಬಿಂಬಿಸಿದಾಗ ಸಗುಣ ಬ್ರಹ್ಮನ್ ಆಗಿ ತೋರುತ್ತದೆ. ಅಂದರೆ ಶಿವನೇ ಮಾಯೆಯಲ್ಲಿ ಪ್ರತಿಬಿಂಬಿಸಿದಾಗ ಶಕ್ತಿಯಾಗಿ ಗೋಚರಿಸುತ್ತಾನೆ. ಪರಮಾಚಾರ್ಯರು ಹೇಳುತ್ತಾರೆ. ಇದೆಲ್ಲಾ ಸರಿ ಆದರೆ ಮಾಯೆ ಅಂದರೆ ಏನು ಎಂದು ಕೇಳಬೇಡಿ ಏಕೆಂದರೆ ಅದು ವಿವರಿಸಲಿಕ್ಕೆ ಆಗದಂತಹದ್ದು. ಮಾಯೆ, ಜಾದೂ ಮಾಡಬಲ್ಲದು, ಭ್ರಮೆ ಸೃಷ್ಟಿಸಬಲ್ಲದು. ಮಾಯೆಯೇ ಶ್ರೀಮಾತಾ.
ಈ ಹಿಂದೆ ಧನಾತ್ಮಕ ಮತ್ತು ಋಣಾತ್ಮಕವನ್ನು ವಿದ್ಯುಚ್ಚಕ್ತಿಯ ಕುರಿತಂತೆ ಹೇಳಿದ್ದು ಈಗ ಫೋಟೋಗ್ರಪಿಯ ಬಗ್ಗೆ ಹೇಳಬಯಸುತ್ತೇನೆ. ಈಗ ಡಿಜಿಟಲ್ ಪೋಟೊ ಬಂದಮೇಲೆ ಪಾಸಿಟಿವ್ ನೆಗೆಟಿವ್ ಪೋಟೊಗಳನ್ನು ನಾವು ಮರೆತು ಹೋಗಿದ್ದೇವೆ. ಪಾಸಿಟಿವ್ ಫೋಟೋದಲ್ಲಿ ಬೆಳಕು ಬೆಳಕಾಗಿ, ನೆರಳೂ ನೆರಳಾಗಿ ಕಂಡರೆ,ನೆಗಟಿವೆ ಫೋಟೋದಲ್ಲಿ ಬೆಳಕು ನೆರಳಾಗಿಯೂ, ನೆರಳು ಬೆಳಕಾಗಿಯೂ ಕಾಣುತ್ತದೆ. ಇದು ಮಾಯೆಯ ಕೆಲಸ. ಯಾವುದು ಮಿಥ್ಯವೋ ಅದು ಸತ್ಯವಾಗಿ ಕಾಣುವುದು, ಯಾವುದು ಸತ್ಯವೋ ಅದು ಮಿಥ್ಯವಾಗಿ ಕಾಣುವುದು. ಇಷ್ಟೆಲ್ಲಾ ಇದ್ದರೂ ಶ್ರೀ ಮಾತೆಗೆ ನಮ್ಮ ಮೇಲೆ ಅನುಕಂಪ ಮೂಡಿದರೆ ಯಾವುದು ಮಿಥ್ಯವೋ ಅದನ್ನು ಮಿಥ್ಯವೇ ಆಗಿ ಕಾಣುವಂತೆ ಮಾಡಿ ನಮ್ಮನ್ನು ಉದ್ಧರಿಸುತ್ತಾಳೆ. ನಮ್ಮನ್ನು ಜೀವನ್ಮುಕ್ತ ಗೊಳಿಸುತ್ತಾಳೆ.
ನಾವು ಶ್ರೀಮಾತೆ ಯ ಪಾದಪದ್ಮಗಳಲ್ಲಿ ಸಂಪೂರ್ಣ ಶರಣಾಗತಿಯನ್ನು ಬಯಸೋಣ. ಅವಳ ಅನುಗ್ರಹ, ಅನುಕಂಪಗಳಿಗೆ ಪಾತ್ರರಾಗಿ, ಎಲ್ಲಾ ಪ್ರಾಪಂಚಿಕ ಸುಖಭೋಗಗಳನ್ನೂ ಪಡೆಯುವುದರ ಜತೆಗೆ ಜೀವನ್ಮುಕ್ತ ರಾಗೋಣ.
7-12-2019 ಆತ್ಮಾನಂದನಾಥ
( ಜೆ ಎಸ್ ಡಿ ಪಾಣಿ)