ಶ್ರೀ ರುದ್ರ ನಮಕ 4 ನೇ ಅನುವಾಕ: ಕನ್ನಡ ವಿವರಣೆ Sri Rudra Namaka 4th Anuvaka explained in Kannada


ಶ್ರೀ ಗುರುಭ್ಯೋ ನಮಃ

ಶ್ರೀ ರುದ್ರದ ನಾಲ್ಕನೇ ಅನುವಾಕದಲ್ಲಿ ಹದಿನೇಳು ಮಂತ್ರಗಳಿವೆ. ಈ ಅನುವಾಕವನ್ನು ಪೂರ್ತಿಯಾಗಿ ಹೇಳಿ ನಂತರ ಒಂದೊಂದು ಮಂತ್ರಕ್ಕೆ ವಿವರಣೆ ಕೊಡುವ ಪ್ರಯತ್ನ ಮಾಡುತ್ತೇನೆ.

ನಮ’ ಆವ್ಯಾಧಿನೀ”ಭ್ಯೋ ವಿವಿಧ್ಯ’ಂತೀಭ್ಯಶ್ಚ ವೋ ನಮೋ ನಮ ಉಗ’ಣಾಭ್ಯಸ್ತೃಗಂ-ಹತೀಭ್ಯಶ್ಚ’ ವೋ ನಮೋ ನಮೋ’ ಗೃತ್ಸೇಭ್ಯೋ’ ಗೃತ್ಸಪ’ತಿಭ್ಯಶ್ಚ ವೋ ನಮೋ ನಮೋ ವ್ರಾತೇ”ಭ್ಯೋ ವ್ರಾತ’ಪತಿಭ್ಯಶ್ಚ ವೋ ನಮೋ ನಮೋ’ ಗಣೇಭ್ಯೋ’ ಗಣಪ’ತಿಭ್ಯಶ್ಚ ವೋ ನಮೋ ನಮೋ ವಿರೂ’ಪೇಭ್ಯೋ ವಿಶ್ವರೂ’ಪೇಭ್ಯಶ್ಚ ವೋ ನಮೋ ನಮೋ’ ಮಹದ್ಭ್ಯಃ’, ಕ್ಷುಲ್ಲಕೇಭ್ಯ’ಶ್ಚ ವೋ ನಮೋ ನಮೋ’ ರಥಿಭ್ಯೋ‌உರಥೇಭ್ಯ’ಶ್ಚ ವೋ ನಮೋ ನಮೋ ರಥೇ”ಭ್ಯೋ ರಥ’ಪತಿಭ್ಯಶ್ಚ ವೋ ನಮೋ ನಮಃ’ ಸೇನಾ”ಭ್ಯಃ ಸೇನಾನಿಭ್ಯ’ಶ್ಚ ವೋ ನಮೋ ನಮಃ’, ಕ್ಷತ್ತೃಭ್ಯಃ’ ಸಂಗ್ರಹೀತೃಭ್ಯ’ಶ್ಚ ವೋ ನಮೋ ನಮಸ್ತಕ್ಷ’ಭ್ಯೋ ರಥಕಾರೇಭ್ಯ’ಶ್ಚ ವೋ ನಮೋ’ ನಮಃ ಕುಲಾ’ಲೇಭ್ಯಃ ಕರ್ಮಾರೇ”ಭ್ಯಶ್ಚ ವೋ ನಮೋ ನಮಃ’ ಪುಂಜಿಷ್ಟೇ”ಭ್ಯೋ ನಿಷಾದೇಭ್ಯ’ಶ್ಚ ವೋ ನಮೋ ನಮಃ’ ಇಷುಕೃದ್ಭ್ಯೋ’ ಧನ್ವಕೃದ್-ಭ್ಯ’ಶ್ಚ ವೋ ನಮೋ ನಮೋ’ ಮೃಗಯುಭ್ಯಃ’ ಶ್ವನಿಭ್ಯ’ಶ್ಚ ವೋ ನಮೋ ನಮಃ ಶ್ವಭ್ಯಃ ಶ್ವಪ’ತಿಭ್ಯಶ್ಚ ವೋ ನಮಃ’ || 4 

ಈ ಅನುವಾಕವನ್ನು ಪಠಿಸುವುದರಿಂದ, ಕೇಳುವುದರಿಂದ ಗಂಭೀರವಾದ ಖಾಯಿಲೆಗಳೂ ಗುಣ ಆಗುತ್ತದೆ ಎಂದು ನಂಬಲಾಗಿದೆ. ಈ ಅನುವಾಕ ವು ರುದ್ರನ ಸರ್ವೋಚ್ಛ ತೆ ಯನ್ನೇ ಹೇಳಿದೆ.

ನಮ’ ಆವ್ಯಾಧಿನೀ”ಭ್ಯೋ ವಿವಿಧ್ಯ’ಂತೀಭ್ಯಶ್ಚ ವೋ ನಮಃ
ವಿವಿಧ ರೂಪಗಳಿಂದ ಕಂಗೊಳಿಸುವ ರುದ್ರನೇ ನಿನಗೆ ನಮಸ್ಕಾರಗಳು. ಎಲ್ಲೆಡೆಯಿಂದಲೂ ಪ್ರಭಲವಾಗಿ ದಾಳಿ ಮಾಡುವ ಓ ರುದ್ರನೇ ನಿನಗೆ ನಮಸ್ಕಾರಗಳು

ಈ ಮಂತ್ರವೂ ಸಹಾ ರುದ್ರನ ಸರ್ವೋಚ್ಛತೆಯನ್ನೇ ಸಾರುತ್ತಿದೆ. ವಿವಿಧ ರೂಪಗಳು ಎಂದರೆ ರುದ್ರಗಣಗಳು ಎಂದೇ ಅರ್ಥ. ದುಷ್ಟರ, ಪಾಪಿಗಳ ಕೃತ್ಯಗಳನ್ನು ಒಂದು ಹಂತದವರೆಗೂ ತಾಳ್ಮೆಯಿಂದ ಸಹಿಸಿ ಕೊಳ್ಳುವ ಈ ರುದ್ರಗಣಗಳು, ಈ ಪಾಪಿಗಳ, ದುಷ್ಟರ ನಡತೆಯಿಂದ ಧರ್ಮ ಅಧರ್ಮ ಗಳ ನಡುವಿನ ಪ್ರಾಕೃತಿಕ ಸಮತೋಲನ ಕಳೆದುಕೊಳ್ಳುವ ಹಂತ ತಲುಪಿದ ಕೂಡಲೇ ಇವರ ವಿರುದ್ಧ ಎಲ್ಲ ಕಡೆಯಿಂದ ದಾಳಿ ಮಾಡಿ ಅಧರ್ಮದಿಂದ ನಡೆದುಕೊಳ್ಳುತ್ತಿರುವ ಈ ದುಷ್ಟರನ್ನು ಪಾಪಿಗಳನ್ನು .ನಾಶ ಮಾಡಿಬಿಡುತ್ತಾರೆ.

ನಮ ಉಗ’ಣಾಭ್ಯಸ್ತೃಗಂ-ಹತೀಭ್ಯಶ್ಚ’ ವೋ ನಮಃ
ಉಗಣ ಎಂದರೆ, ಬ್ರಾಹ್ಮೀ, ಕೌಮಾರೀ, ಮಾಹೇಶ್ವರೀ, ವೈಷ್ಣವೀ, ವಾರಾಹೀ, ಇಂದ್ರಾಣೀ ಮತ್ತು ಚಾಮುಂಡಾ ಎಂಬ ಸಪ್ತಮಾತೃಕೆಯರು. ಈ ಶಕ್ತಿಗಳು ಒಂದೊಂದು ಗುಣಲಕ್ಷಣಗಳ ಆಧಿಪತ್ಯ ಹೊಂದಿದವರಾಗಿದ್ದಾರೆ, ಲೈಂಗಿಕ ಕಾಮನೆಯನ್ನು ಬ್ರಾಹ್ಮಿಯೂ, ಕೌಮಾರಿಯು ದಿಗ್ಭ್ರಮೆ ಯನ್ನೂ ಮಾಹೇಶ್ವರಿಯು ಕೋಪವನ್ನೂ, ವೈಷ್ಣವಿಯು ದುರಾಸೆಯನ್ನೂ , ವಾರಾಹಿಯು ನಿರ್ಲಕ್ಷ್ಯವನ್ನೂ, ಇಂದ್ರಾಣಿಯು ವೈರತ್ವ ಮತ್ತು ಅಸೂಯೆವನ್ನೂ, ಚಾಮುಂಡಿಯು ಕೄರತ್ವದ ಗುಣವನ್ನು ಪ್ರತಿನಿಧಿಸುತ್ತಾರೆ. ಇವೆಲ್ಲ ಗುಣಗಳೂ ನಮ್ಮಲ್ಲೇ ಇರುವಂತಹವು.
ಈ ಗುಣಲಕ್ಷಣಗಳ ಸಮತೋಲನವು ಪ್ರಾಕೃತಿಕ ಸಮತೋಲನ ವನ್ನು ಕಾಯ್ದುಕೊಳ್ಳುತ್ತದೆ. ದುಷ್ಟರ, ಪಾಪಿಗಳ ನಡೆತೆಯಿಂದ ಪ್ರಕೃತಿಯಲ್ಲಿ ಯಾವುದೋ ಗುಣಲಕ್ಷಣ ವಿಪರೀತವಾದರೆ, ಈ ಸಪ್ತಮಾತೃಕೆಯರು ಅದನ್ನು ತಡೆಹಿಡಿಯುತ್ತಾರೆ. ರುದ್ರನು ಸಪ್ತಮಾತೃಕೆಯರ ರೂಪದಲ್ಲಿ ಪ್ರಕಟವಾಗಿ ಈ ಅಸಮತೋಲನವನ್ನು ಸರಿಪಡಿಸುತ್ತಾನೆ. ಶಿವನು ಶಕ್ತಿಯೊಡಗೂಡದಿದ್ದರೆ ಚಲಿಸಲೂ ಆತನಿಂದ ಆಗದು ಎಂಬ ಸೌಂದರ್ಯ ಲಹರಿಯ ’ ಶಿವ ಶಕ್ತ್ಯಾಯುಕ್ತೋ ಇತಿ ಭವತಿ ಶಕ್ತಃ ಪ್ರಭವಿತುಂ” ಎಂಬ ಮೊದಲ ಮಂತ್ರ ಈ ಸಂದರ್ಭದಲ್ಲಿ ನೆನಪಿಗೆ ಬಂದೇ ಬರುತ್ತದೆ.
ನಮೋ’ ಗೃತ್ಸೇಭ್ಯೋ’ ಗೃತ್ಸಪ’ತಿಭ್ಯಶ್ಚ ವೋ ನಮಃ
ಈ ಮಂತ್ರವನ್ನು ಎರಡು ರೀತಿಯಲ್ಲಿ ಅರ್ಥೈಸ ಲಾಗಿದೆ:
ಒಂದು: ಯಾರು ದುರಾಸೆಯಿಂದ ಕೂಡಿದ ಜನರಿದ್ದಾರೋ ಅವರಿಗೆ ನನ್ನ ನಮಸ್ಕಾರಗಳು. ಈ ದುರಾಸೆಯ ಜನರ ಮುಖ್ಯಸ್ಥನಾದ ರುದ್ರನೇ ನಿನಗೆ ನಮಸ್ಕಾರಗಳು.
ಇನ್ನೊಂದು ಅರ್ಥ; ಯಾರು ತಮ್ಮ ಜೀವಿತವನ್ನೇ ರುದ್ರನನ್ನು ಧ್ಯಾನಿಸಲು ಆರಾಧಿಸಲು ಪೂಜಿಸಲು ಮುಡಿಪಾಗಿಟ್ಟಿದ್ದಾರೋ ಅವರಿಗೆ ನಮಸ್ಕಾರಗಳು. ಇಂತಹ ಅಧ್ಯಾತ್ಮಿಕ ಪ್ರಜ್ನೆಯುಳ್ಳ ಭಕ್ತರ ಮುಖ್ಯಸ್ಥನೂ ಆದ ರುದ್ರನೇ ನಿನಗೆ ನಮಸ್ಕಾರಗಳು.

ಈ ಎರಡೂ ಅರ್ಥಗಳು ಏನೆಂದರೆ, ರುದ್ರನು ಇಂದ್ರಿಯ ಪ್ರಜ್ನೆಯ ಅಧಿಪತಿಯಾಗಿ, ಜನರನ್ನು ದುರಾಸೆಗೆ ಒಳಗಾಗುವಂತೆ ಮಾಡುತ್ತಾನೆ ಮತ್ತು ಜತೆಜತೆ ಯಲ್ಲೇ ಅಂತಹವರನ್ನು ಪಳಗಿಸಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ಜ್ನಾನವನ್ನೂ ಸಹಾ ಕೊಡುತ್ತಾನೆ. ರುದ್ರನು ಕಾರಣವೂ ಅಹುದು ಪರಿಣಾಮವೂ ಅಹುದು. ( cause & effect)
ನಮೋ ವ್ರಾತೇ”ಭ್ಯೋ ವ್ರಾತ’ಪತಿಭ್ಯಶ್ಚ ವೋ ನಮಃ
ಎಲ್ಲಾ ತರದ, ಎಲ್ಲ ರೀತಿಯ ಮನುಷ್ಯರ ರೂಪದಲ್ಲಿ ಇರುವ ನಿನಗೆ ನಮಸ್ಕಾರಗಳು. ಈ ಎಲ್ಲ ತರದ, ಎಲ್ಲ ರೀತಿಯ ಮನುಷ್ಯರ ಅಧಿಪತಿಯೂ ಆಗಿರುವ ರುದ್ರನೇ ನಿನಗೆನಮಸ್ಕಾರಗಳು.
ವಿವಿಧ ರೀತಿಯ ಜನಗಳು ಅಂದರೆ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಜನರು, ಬೇರೆ ಬೇರೆ ಹವಾಮಾನ ಪರಿಸ್ಥಿತಿಯಲ್ಲಿ ವಾಸಿಸುವ ಜನರು, ಬೇರೆ ಬೇರೆವೃತ್ತಿಯನ್ನು ಅವಲಂಬಿಸಿರುವ ಜನರು.
ಜನರನ್ನು ಅವರವರ ಕಾಯಕದಲ್ಲಿ ಪ್ರಾವೀಣ್ಯತೆ ಯನ್ನು ಆಧರಿಸಿ ವಿಭಾಗಿಸಿ, ಈ ಎಲ್ಲರ ಅಧಿಪತಿ ರುದ್ರನೇ ಎಂದು ಹೇಳಿದೆ.
;
ಇಲ್ಲಿ ನಾವು ಭಗವದ್ಗೀತೆಯ ಹದಿನೆಂಟನೇ ಅಧ್ಯಾಯದ ನಲವತ್ತೊಂದನೇ ಶ್ಲೋಕ ಗಮನಿಸಲೇಬೇಕು “ಬ್ರಾಹ್ಮಣ ಕ್ಷತ್ರಿಯ ವಿಶಾಂ ಶೂದ್ರಾಣಾಂ ಪರಂತಪ- ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈ “
ಶತೃಗಳನ್ನು ಗೆಲ್ಲುವ ಅರ್ಜುನನೇ ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಐಹಿಕ ಗುಣಗಳಿಗೆ ಅನುಗುಣವಾಗಿ ತಮ್ಮ ಸ್ವಂತ ಸ್ವಭಾವದಿಂದ ಹುಟ್ಟುವ ಗುಣ ಗಳಿಂದ ಬೇರೆ ಬೇರೆ ಯಾಗಿರುತ್ತಾರೆ.
ಈ ಶ್ಲೋಕ ಯಾವುದೇ ಅನುಮಾನಕ್ಕೆಡೆ ಗೊಡದಂತೆ ವರ್ಣ ಧರ್ಮ ವನ್ನು ಅತ್ಯಂತ ನಿಖರವಾಗಿ ಹೇಳಿದೆ. ತಮ್ಮ ಸ್ವಭಾವದಿಂದ ಹುಟ್ಟುವ ಗುಣಗಳಿಂದ ಇವರು ಬೇರೆ ಬೇರೆ ಯಾಗಿರುತ್ತಾರೆ ಮತ್ತು ಬೇರೆ ಬೇರೆರೀತಿಯ ಕರ್ಮಗಳನ್ನು ಅಂದರೆ ಕಾಯಕವನ್ನು ಮಾಡುತ್ತಾರೆ.
ಗುಣ ಹುಟುವುದು ಸ್ವಭಾವದಿಂದ ಎಂದು ತಿಳಿಯಿತು. ಮತ್ತೆ ಸ್ವಭಾವ ಬರುವುದು ಹೇಗೆ. ಅದು ಒಬ್ಬ ವ್ಯಕ್ತಿ ತಾನು ಪಡೆದು ಕೊಳ್ಳುವ ಜ್ನಾನದಿಂದಲೇ ಹೊರತು ಹುಟ್ಟಿನಿಂದ ಅಲ್ಲಾ. ಸ್ವಭಾವ ಅಂದರೆ ವ್ಯಕ್ತಿಯು ತಾನು ಯಾವುದಾದರೂ ವಿಷಯದಲ್ಲಿ ಗಳಿಸುವ ನಿಪುಣತೆ, ಪ್ರಾವೀಣ್ಯತೆ ಎಂದೇ ಇಲ್ಲಿ ಅರ್ಥ.
ತಮ್ಮ ಪ್ರಾವೀಣ್ಯತೆಗೆ ಅನುಗುಣವಾಗಿ ಬೇರೆ ಬೇರೆ ಕರ್ಮಗಳನ್ನು , ಕಾಯಕಗಳನ್ನು ಮಾಡುವ ಎಲ್ಲರಲ್ಲೂ ಇರುವುದು ರುದ್ರನೇ ಹಾಗಾಗಿ ಇವರೆಲ್ಲರೂ ಒಂದೇ ಆಗಿದ್ದಾರೆ. ಎಲ್ಲರೂ ಸಮಾನರು ಎಂದರೆ ಅದು ನೀಡುವ ಅರ್ಥ ಬೇರೆ, ಎಲ್ಲರೂ ಒಂದೇ ಎಂದರೆ ಅದು ನೀಡುವ ಅರ್ಥ ಬೇರೆ. ಇದನ್ನು ನಾನು ಇಲ್ಲಿ ಒತ್ತಿ ಒತ್ತಿ ಹೇಳುತ್ತಿದ್ದೇನೆ. ರುದ್ರನೂ ಹೇಗೆ ಕಾಲಾತೀತನೂ ಹಾಗೆಯೇ ವರ್ಣ ಧರ್ಮ ವೂ ಕಾಲಾತೀತವೇ ಏಕೆಂದರೆ ವಿವಿಧ ಕಾಯಕಗಳಲ್ಲಿ ಪರಿಣತಿ ಪಡೆದ ಜನರನ್ನು ಹೊಂದಿರದ ಒಂದು ಸಮಾಜ ಉಳಿಯಲು ಸಾಧ್ಯವೇ ಇಲ್ಲಾ. ಇಂತಹ ಅತ್ಯುತ್ತಮ ವರ್ಣ ಧರ್ಮವನ್ನು ತಪ್ಪಾಗಿ ಅರ್ಥೈಸಿ, ತಪ್ಪಾಗಿ ಅರ್ಥೈಸಿದ್ದನ್ನೇ ಜಾರಿಯಲ್ಲೂ ತಂದು, ಅದರ ಪರಿಣಾಮವಾಗಿ, ಸಮಾಜವು ವರ್ಣಗಳಿಂದ, ನಂತರ ಜಾತಿಗಳಿಂದ, ನಂತರ ಉಪಜಾತಿಗಳಿಂದ ಒಡೆದು ಹೋಗಿ, ಎಲ್ಲರೂ ಒಂದೇ ಎಂದು ಸ್ಪಷ್ಟವಾಗಿ ಕಟ್ಟಿಯಾಗಿ ಸಾರಿದ ವೇದಗಳನ್ನೇ ವಿರೋಧಿಸಿ ಎಲ್ಲರೂ ಸಮಾನರು ಎಂದು ಕೂಗೆಬ್ಬಿಸಿದ ಹೊಸ ಹೊಸ ಹೆಸರಿನ ಧರ್ಮಗಳಿಗೆ ಕ್ರಾಂತಿಗಳಿಗೆ ನಾಂದಿ ಹಾಡಿ, ಅದು ಇತಿಹಾಸದ ಪುಟಗಳಲ್ಲಿ ಸೇರಿಹೋಗಿರುವುದು ನಮ್ಮ ಸೌಭಾಗ್ಯವೋ, ದೌರ್ಭಾಗ್ಯವೋ ಎನ್ನುವುದನ್ನು ಕಾಲವು ನಿರ್ಣಯಿಸಬೇಕು. ಕಾಲಾತೀತನಾದ ರುದ್ರನು ನಿರ್ಣಯಿಸಬೇಕು.
ಎಲ್ಲ ವರ್ಣಕ್ಕೆ ಸೇರಿದ, ಎಲ್ಲ ಜಾತಿಗಳಿಗೆ, ಉಪಜಾತಿಗಳಿಗೆ ಸೇರಿದ, ವಿವಿಧ ಕಾಯಕಗಳನ್ನು ಮಾಡುತ್ತಿರುವ ಇವರೆಲ್ಲರ ರೂಪದಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು. ಇವರೆಲ್ಲರ ಅಧಿಪತಿಯೂ ಆಗಿರುವ ರುದ್ರನೇ ನಿನಗೆ ನಮಸ್ಕಾರಗಳು.
ನಮೋ ಗಣೇಭ್ಯೋ ಗಣಪತಿಭ್ಯಶ್ಚ ವೋ ನಮಃ
ರುದ್ರಗಣಗಳಿಗೆ ನಮಸ್ಕಾರಗಳು, ರುದ್ರಗಣಗಳ ಅಧಿಪತಿಯಾದ ರುದ್ರನೇ ನಿನಗೆ ನಮಸ್ಕಾರಗಳು.

ಗಣಪತಿ ಅಥವಾ ಗಣೇಶನೂ ಸಹಾ ಗಣಗಳ ಅಧಿಪತಿಯೇ ಆಗಿದ್ದರೂ ಆ ಗಣಗಳು ರುದ್ರಗಳಲ್ಲಾ ಹಾಗಾಗಿ ಈ ಮಂತ್ರದಲ್ಲಿ ಹೇಳಿರುವ ಗಣಪತಿ ರುದ್ರನೇ ಹೊರತು, ನಾವು ವಿನಾಯಕ, ಗಣೇಶ ಎಂದು ಪೂಜಿಸುವ ಗಣಪತಿ ಅಲ್ಲಾ.
ನಮೋ ವಿರೂಪೇಭ್ಯೋ ವಿಶ್ವರೂಪೇಭ್ಯಶ್ಚ ವೋ ನಮಃ
ಎಲ್ಲ ವಿರೂಪಗಳಲ್ಲಿ ಇರುವ ರುದ್ರನೇ ನಿನಗೆ ನಮಸ್ಕಾರಗಳು. ಹಾಗೆಯೇ ವಿಶ್ವವೇ ನೀನೇ ಆಗಿ ತೋರುವ ರೂಪದ ರುದ್ರನೇ ನಿನಗೆ ನಮಸ್ಕಾರಗಳು.
ಈ ಮಂತ್ರಕ್ಕೆ ಹೆಚ್ಚಿನ ವಿವರಣೆ ಬೇಕಿಲ್ಲಾ
ನಮೋ’ ಮಹದ್ಭ್ಯಃ’, ಕ್ಷುಲ್ಲಕೇಭ್ಯ’ಶ್ಚ ವೋ ನಮಃ
ಯಾರು ವಿವೇಕಿಗಳೋ, ಯಾರು ಯೋಗ ಸಿದ್ಧರೋ ಅವರಿಗೆ ನನ್ನ ನಮಸ್ಕಾರಗಳು. ಯಾರು ಅವಿವೇಕಿಗಳೋ, ಯಾರು ಸದಾ ಗೊಂದಲದಲ್ಲಿರುತ್ತಾರೋ, ಯಾರು ಜಗಳಗಂಟರೋ ಅವರಿ ನನ್ನ ನಮಸ್ಕಾರಗಳು ಎಕೆಂದರೆ ರುದ್ರನೇ, ಇವರೆಲ್ಲರಲ್ಲಿಯೂ ಇರುವವನು ನೀನೇ ಆಗಿದ್ದೀಯೆ.
ಈ ಹಿಂದಿನ ಅನುವಾಕಗಳಲ್ಲಿಯೂ ಇದೇ ಅರ್ಥಕೊಡುವ ಅಂದರೆ ಒಳ್ಳೆಯವರಲ್ಲಿಯೂ,ಕೆಟ್ಟವರಲ್ಲಿಯೂ ಇರುವವನು ರುದ್ರನೇ ಎಂದು ಹೇಳುವ ಮಂತ್ರಗಳನ್ನು ನಾವು ಕೇಳಿದ್ದೇವೆ.
ನಮೋ ರಥಿಭ್ಯೋ ರಥಪತಿಭ್ಯಶ್ಚ ವೋ ನಮಃ
ರಥಗಳಲ್ಲಿ ಪ್ರಯಾಣ ಮಾಡುವವರಿಗೆ ನಮಸ್ಕಾರಗಳು, ರಥವಿಲ್ಲದೆ ಪ್ರಯಾಣ ಮಾಡುತ್ತಿರುವವರಿಗೂ ನಮಸ್ಕಾರಗಳು.
ಅಂದರೆ ಧನಿಕರಿಗೂ ಬಡವರಿಗೂ ನಮಸ್ಕಾರಗಳು ಏಕೆಂದರೆ ರುದ್ರನೇ ಎಲ್ಲರಲ್ಲಿಯೂ ಇರುವವನು ನೀನೇ
ನಮೋ ರಥೇಭ್ಯೋ ರಥಪತಿಭ್ಯಶ್ಚ ವೋ ನಮಃ
ರಥಗಳಿಗೆ ಅಂದರೆ ವಾಹನಗಳಿಗೆ ನಮಸ್ಕಾರಗಳು. ರಥದ ಯಜಮಾನನಿಗೂ ನಮಸ್ಕಾರಗಳು. ಜೀವವಿಲ್ಲದ ಜಡವಸ್ತು ವಾದ ವಾಹನಕ್ಕೂ ಜೀವ ಚೈತನ್ಯ ಹೊಂದಿರುವ ವಾಹನದ ಯಜಮಾನನಿಗೂ ನಮಸ್ಕಾರಗಳು. ಜೀವಿಗಳಲ್ಲಿಯೂ ಜಡವಸ್ತುಗಳಲ್ಲಿಯೂ ಬೆಳಗುತ್ತಿರುವ ರುದ್ರನೇ ನಿನಗೆ ನಮಸ್ಕಾರಗಳು.
ಇದೇ ಅರ್ಥವನ್ನು ಕೊಡುವ ಚರಾಚರ ಜಗನ್ನಾಥ ಎಂಬ ಲಲಿತಾ ಸಹಸ್ರನಾಮದ 244 ನೇ ನಾಮ ಇಲ್ಲಿ ನೆನಪಿಗೆ ಬರುತ್ತದೆ.
ನಮೋ ಸೇನಾಭ್ಯಃ ಸೇನಾನಿಭ್ಯಶ್ಚ ವೋ ನಮಃ
ಸೇನೆಯ ರೂಪ ದಲ್ಲಿರುವ ರುದ್ರನೇ ನಿನಗೆ ನಮಸ್ಕಾರಗಳು. ಸೇನಾಧಿಪತಿಯ ರೂಪದಲ್ಲಿರುವ ರುದ್ರನೇ ನಿನಗೆ ನಮಸ್ಕಾರಗಳು.
ಇಲ್ಲಿ ಸೇನೆ ಅಂದರೆ ಇಂದ್ರಿಯಗಳು, ಸೇನಾಧಿಪತಿ ಅಂದರೆ ಇವುಗಳಿಗೆ ಆದೇಶ ನೀಡುವ ಮನಸ್ಸು.
ರುದ್ರನು ಇಂದ್ರಿಯಗಳಲ್ಲಿಯೂ ಮತ್ತು ಮನಸ್ಸಿನಲ್ಲಿಯೂ ನೆಲಸಿದ್ದಾನೆ.
ಧರ್ಮ ಅಧರ್ಮ ಗಳ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ರುದ್ರನು ಸೇನಾ ರೂಪ ದಲ್ಲಿಯೂ ಸೇನಾಧಿ ಪತಿಯ ರೂಪ ದಲ್ಲಿಯೂ ಇದ್ದಾನೆ

ನಮಃ ಕ್ಷತೃಭ್ಯಃ ಸಂಗ್ರಹೀತಭ್ಯಶ್ಚ ವೋ ನಮಃ
ರಥಗಳನ್ನು ವಿತರಣೆ ಮಾಡುವವರಲ್ಲಿ ಇರುವ ರುದ್ರನಿಗೆ ನಮಸ್ಕಾರಗಳು. ರಥದ ಸಾರಥಿಗಳಲ್ಲಿ ಇರುವ ರುದ್ರನಿಗೆ ನಮಸ್ಕಾರಗಳು.
ರಥಗಳ ವಿತರಣೆ ಅಂದರೆ ರಥದ ಚಾಲನೆಯನ್ನು ಹೇಳಿಕೊಡುವ ಗುರುಗಳು ಎಂದು ಅರ್ಥೈಸ ಬೇಕಾಗಿದೆ. ಅಂದರೆ ರುದ್ರನು ಗುರುಗಳ ರೂಪದಲ್ಲಿಯೂ ಶಿಷ್ಯರ ರೂಪದಲ್ಲಿಯೂ ಇರುವವನು ಎಂಬುದನ್ನು ಮತ್ತೊಮ್ಮೆ ಹೇಳಲಾಗಿದೆ

ನಮಸ್ತಕ್ಷ’ಭ್ಯೋ ರಥಕಾರೇಭ್ಯ’ಶ್ಚ ವೋ ನ
ಬಡಗಿಗಳ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು ರಥಗಳನ್ನು ತಯಾರುಮಾಡುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು.
ರಥಗಳ ತಯಾರಿಕೆಯಲ್ಲಿ ಮರಗೆಲಸ ಮಾಡುವವರನ್ನು ಬಡಗಿಗಳು ಎಂತಲೂ ಅದರಲ್ಲಿ ಕಲಾಕೃತಿಗಳನ್ನು ಕೆತ್ತುವವರನ್ನು ರಥಗಳ ತಯಾರಕರೆಂತಲೂ ಅರ್ಥೈಸ ಬಹುದಾಗಿದೆ
ನಮಃ ಕುಲಾಲೇಭ್ಯಃ ಕರ್ಮಾರೇಭ್ಯಶ್ಚ ವೋ ನಮಃ
ಈ ಮಂತ್ರವು ರಹಸ್ಯಾರ್ಥದಿಂದ ಕೂಡಿದ್ದು, ಯೋಗಿಗಳು ತಮ್ಮ ಯೋಗ ಶಕ್ತಿಯಿಂದ ಯಾವ ರೂಪವನ್ನು ಬೇಕಾದರೂ ಪಡೆಯಬಲ್ಲರು. ಯಾವ ಯೋಗಿಗಳು ತಮ್ಮ ಇಂದ್ರಿಯಗಳ ಮೇಲೆ ಹತೋಟಿಯನ್ನು ಸಾಧಿಸಿರುತ್ತಾರೋ ಅಂತಹವರು ವಿಷಯ ಮತ್ತು ವಸ್ತುಗಳ (subject & object) ನಡುವೆ ಕೊಂಡಿಯ ಸ್ಥಾಪನೆಯ ಅನುಭವ ಹೊಂದಬಲ್ಲವರಾಗಿರುತ್ತಾರೆ.ಹಾಗಾಗಿ ಅವರು ವಿಷಯ ಮತ್ತು ವಸ್ತುಗಳ ಅನುಭವವನ್ನು ಏಕಕಾಲದಲ್ಲಿ ಅನುಭವಿಸಲು ಶಕ್ತರಾಗಿರುತ್ತಾರೆ. ಈ ದಿಸೆಯಲ್ಲಿ ತಮ್ಮ ಸಾಧನೆಯನ್ನು ಮುಂದುವರೆಸಿ, ವಿಸ್ತರಿಸಲಾದ ರುದ್ರನ ಬ್ರಹ್ಮಾಂಡದ ಆನಂದವನ್ನು ಪಡೆಯುತ್ತಾರೆ.
ಈ ಹಂತದಲ್ಲಿ ಯೋಗಿಯು ಪ್ರಾಪಂಚಿಕ ಸುಖಭೋಗಗಳಿಗಾಗಿ ಇಂತಹ ಯೋಗಶಕ್ತಿಗಳನ್ನು ಉಪಯೋಗಿಸುವ ಸಾಧ್ಯತೆಗಳಿದ್ದು, ಅದು ಯೋಗಿಯ ಅಧಃ ಪತನ ದ ಸೂಚನೆ ಆಗುತ್ತದೆ. ಹಾಗೂ ಇಂತಹ ಯೋಗಿಗಳು ಮತ್ತೆ ಅಜ್ನಾನದ ಅಂಧಕಾರದ ಮುಷ್ಟಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ತಮ್ಮ ಸಿದ್ಧಿಗಳ ಮೂಲಕ ಪವಾಡಗಳನ್ನು ಮಾಡಿ ಜನರನ್ನು ಆಕರ್ಷಣೆ ಮಾಡುವ ಯೋಗಿಗಳು ಈ ವರ್ಗಕ್ಕೆ ಸೇರುತ್ತಾರೆ. ಇಂತಹವರು ಮತ್ತೆ ಮತ್ತೆ ಕಾಲಚಕ್ರದ ಸುಳಿಯಲ್ಲಿ ಸಿಕ್ಕಿ ಮೋಕ್ಷ ದಿಂದ ವಂಚಿತರಾಗುತ್ತಾರೆ.
ಈ ಎರಡೂ ಬಗೆಯ ಯೋಗಿಗಳ ರೂಪದಲ್ಲಿ ಇರುವ ರುದ್ರನೇ ನಿನಗೆ ನಮಸ್ಕಾರಗಳು
ನಮಃ’ ಪುಂಜಿಷ್ಟೇ”ಭ್ಯೋ ನಿಷಾದೇಭ್ಯ’ಶ್ಚ ವೋ ನಮಃ
ಪಕ್ಷಿಗಳ ಬೇಟೆಯಾಡುವವರ ರೂಪದಲ್ಲಿ ಇರುವ ರುದ್ರನೇ ನಿನಗೆ ನಮಸ್ಕಾರಗಳು. ಮೀನುಗಾರರ ರೂಪದಲ್ಲಿರುವ ರುದ್ರನೇ ನಿನಗೆ ನಮಸ್ಕಾರಗಳು.
ನಾವು ಬಯಸಿದ್ದು ಸಿಗದಿರುವುದು ಅದಕ್ಕಾಗಿ ನಾವು ನಮ್ಮ ಅದೃಷ್ಟವನ್ನು , ಹಣೆಬರಹವನ್ನು ಹಳಿಯುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವಂತಾದ್ದೇ. ನಾವು ಬಯಸಿದ್ದಕ್ಕೆ ನಾವು ಅರ್ಹರಾಗಿದ್ದರೆ, ನಾವು ಅದನ್ನು ಸರಿಯಾದ ಸಮಯದಲ್ಲಿ ಸರಿಯಾದ ಸ್ಠಳದಲ್ಲಿ ಖಂಡಿತವಾಗಿಯೂ ಪಡೆಯುತ್ತೇವೆ. ಯಾವಾಗ ನಮ್ಮ ಕ್ರಿಯೆಗಳಿಗೂ ಅದರಿಂದ ಉಂಟಾಗುವ ಕೆಟ್ಟ ಮತ್ತು ಒಳ್ಳೆಯ ಪರಿಣಾಮಗಳಿಗೂ ನಮಗೂ ಸಂಬಂಧ ವಿಲ್ಲಾ ಎಂಬ ಅರಿವು ನಮಗೆ ಬಂದರೆ ನಾವು ಸರಿಯಾದ ಹಾದಿಯಲ್ಲಿ ಮುಂದೆ ಸಾಗುತ್ತ ಇದ್ದೇವೆ ಎಂದೇ ಅರ್ಥ. ಭಗವಂತನು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ವ್ಯತ್ಯಾಸವನ್ನು ಪರಿಗಣಿಸುವುದಿಲ್ಲಾ ಏಕೆಂದರೆ ಅವು ಅವುಗಳ ಕರ್ಮಾನುಸಾರವೇ ಪ್ರಕಟವಾಗಿರುವಂತಹವು. ರುದ್ರನು ಒಳ್ಳೆಯದರಲ್ಲೂ ಕೆಟ್ಟದ್ದರಲ್ಲೂ ಎಲ್ಲೆಲ್ಲೂ ಸರ್ವವ್ಯಾಪಿಯಾಗಿದ್ದಾನೆ ಎಂದು ಸಾರಿ ಸಾರಿ ಶ್ರೀ ರುದ್ರದಲ್ಲಿ ಹೇಳಲಾಗಿದೆ. ಅಂತಹ ರುದ್ರನೇ ನಿನಗೆ ನಮಸ್ಕಾರಗಳು.
ನಮ್ಮ ಕ್ರಿಯೆಗಳಿಗೂ ಅದರಿಂದಾಗುವ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳಿಗೂ ನಾವು ಕಾರಣ ಅಲ್ಲಾ ಎಂಬುದನ್ನು ತಪ್ಪಾಗಿ ಅರ್ಥೈಸಿ ನಮ್ಮ ಕ್ರಿಯೆಯಿಂದ ನಮಗೆ ಮತ್ತು ಸಮಾಜಕ್ಕೆ ಕೆಟ್ಟದ್ದೇ ಆಗುತ್ತದೆ ಎಂಬ ಅರಿವಿದ್ದೂ ಅಂತಹ ಕ್ರಿಯೆಗಳನ್ನು ಮಾಡುವುದು ಮಹಾಪರಾಧ ಎಂಬುದನ್ನೂ ಇಲ್ಲಿ ಒತ್ತಿ ಹೇಳಬೇಕಾಗಿದೆ. ಮತ್ತೊಂದು ಮಾತನ್ನು ಇಲ್ಲಿ ಹೇಳಲೇಬೇಕಿದೆ. ಭಗವಂತ ಕರುಣಾಮಯಿ. ನಾವೆಲ್ಲರೂ ಅವನ ಪ್ರೀತಿ ಪಾತ್ರರಾದ ಮಕ್ಕಳು ಹಾಗಾಗಿ ಅವನು ಯಾವ ನಮ್ಮ ಆಸೆಯನ್ನು ಪೂರೈಸಿದರೆ ಅದರಿಂದ ನಮಗೆ ಅನುಕೂಲಕ್ಕಿಂತ ತೊಂದರೆಯೇ ಆಗುತ್ತದೋ ಅಂತಹ ನಮ್ಮ ಆಸೆಯ ಬೇಡಿಕೆಯನ್ನು ತಿರಸ್ಕರಿಸುತ್ತಾನೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ, ಚಳಿಗಾಲದಲ್ಲಿ ಚಿಕ್ಕ ಮಕ್ಕಳಿಗೆ ಐಸ್ ಕ್ರೀಂ ಕೊಡಲು ನಿರಾಕರಿಸುವ ತಾಯಿ. ಇದನ್ನು ನಾವು ಅರ್ಥ ಮಾಡಿಕೊಂಡರೆ ಆಸೆಯು ಎಂದಿಗೂ ನಮಗೆ ದುಃಖವನ್ನು ನೀಡುವುದಿಲ್ಲಾ.
ನಮಃ’ ಇಷುಕೃದ್ಭ್ಯೋ’ ಧನ್ವಕೃದ್-ಭ್ಯ’ಶ್ಚ ವೋ ನಮಃ
ಬಾಣಗಳನ್ನು ತಯಾರಿಸುವವರ ರೂಪದಲ್ಲಿರುವ ರುದ್ರನೇ ನಿನಗೆ ನಮಸ್ಕಾರಗಳು. ಬಿಲ್ಲುಗಳನ್ನು ತಯಾರಿಸುವವರ ರೂಪದಲ್ಲಿರುವ ರುದ್ರನೇ ನಿನಗೆ ನಮಸ್ಕಾರಗಳು
ಬ್ರಹ್ಮವನ್ನು ಅರಿಯುವ ಜ್ನಾನ ಬಿಲ್ಲು. ತನ್ನನ್ನು ತಾನು ಅರಿಯುವ ಜ್ನಾನ ಬಾಣ. ಈ ಬಾಣವನ್ನು ಧ್ಯಾನದ ಮೂಲಕ ಅದನ್ನು ಹರಿತಾಗಿ ಮಾಡಬೇಕು. ಬಾಣ ಹರಿತ ಆಗಿಲ್ಲದಿದ್ದರೆ ಅದು ಗುರಿಯನ್ನು ಮುಟ್ಟಿದರೂ ಗುರಿಗೆ ಅಂಟಿ ಕೊಂಡು ಅಲ್ಲಿಯೇ ಉಳಿಯುವುದಿಲ್ಲಾ . ಈಗ ಬಿಲ್ಲಿಗೆ ಬಾಣವನ್ನು ಹೂಡಿ ಬ್ರಹ್ಮ ದೆಡೆಗೆ ಗುರಿ ಇಡಬೇಕು ಅಂದರೆ, ಮನಸ್ಸನ್ನು ಪ್ರಾಪಂಚಿಕ ಯೋಚನೆಗಳಿಂದ ಹೊರತಂದು ಬ್ರಹ್ಮ ಎಂಬುವ ಗುರಿಯಲ್ಲಿ ನಿಲ್ಲಿಸಬೇಕು. ಬಾಣವನ್ನು ಈಗ ಗುರಿಯೆಡೆಗೆ ಬಿಟ್ಟರೆ ಅದು ಗುರಿಯನ್ನು ತಲುಪಿ ಬ್ರಹ್ಮವೇ ಆಗಿಬಿಡುತ್ತದೆ. ಅಂದರೆ ಜೀವಾತ್ಮ ವು ಪರಮಾತ್ಮನಲ್ಲಿ ಬೆರೆದು ಪರಮಾತ್ಮವೇ ಆಗಿಬಿಡುತ್ತದೆ
ನಮೋ’ ಮೃಗಯುಭ್ಯಃ’ ಶ್ವನಿಭ್ಯ’ಶ್ಚ ವೋ ನಮೋ
ಪ್ರಾಣಿಗಳ ಬೇಟೆಗೆ ಬೇಟೆ ನಾಯಿಗಳೊಂದಿಗೆ ಹೋಗುವ ಬೇಟೆಗಾರರ ರೂಪದಲ್ಲಿರುವ ರುದ್ರನೇ ನಿನಗೆ ನಮಸ್ಕಾರಗಳು. ಬೇಟೆ ನಾಯಿಗಳಿಲ್ಲದೆ ಬೇಟೆಗೆ ಹೋಗುವ ಬೇಟೆ ಗಾರರ ರೂಪದಲ್ಲೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ಮೃಗ ಎಂದರೆ ಜಿಂಕೆ ಎಂಬ ಅರ್ಥವಿದ್ದರೂ ಇಲ್ಲಿ ಎಲ್ಲ ಪ್ರಾಣಿಗಳೂ ಎಂದೇ ಭಾವಿಸಬೇಕಿದೆ. ಬೇಟೆಗಾರರೂ ಸಹಾ ತಾವು ಬೇಟೆಗೆ ಹೊರಡುವ ಮುನ್ನ ರುದ್ರನನ್ನು ಪ್ರಾರ್ಥಿಸುತ್ತಾರೆ. ಬೇಟೆ ಮತ್ತು ಬೇಟೆ ಗಾರ ಈ ಪದಗಳನ್ನು ಯಾವ ರಹಸ್ಯಾರ್ಥದಲ್ಲಿ ಉಪಯೊಗಿಸಲಾಗಿದೆ ಎಂದು ತಿಳಿದುಕೊಳ್ಳಲು ಬಹಳ ಪ್ರಯತ್ನ ಪಟ್ಟರೂ ಎಲ್ಲಿಯೂ ಈ ಬಗ್ಗೆ ವಿವರಣೆ ನನಗೆ ಸಿಕ್ಕಿಲ್ಲಾ. ಯಾರಾದರೂ ವೇದ ವಿದ್ವಾಂಸರು ಈ ಬಗ್ಗೆ ಮಾಹಿತಿ ನೀಡಿದರೆ ನಾನು ಅವರಿಗೆ ಆಭಾರಿಯಾಗಿರುತ್ತೇನೆ.
ನಮಃ ಶ್ವಭ್ಯಃ ಶ್ವಪ’ತಿಭ್ಯಶ್ಚ ವೋ ನಮಃ
ಶ್ವಾನಗಳ ರೂಪದಲ್ಲಿರುವ ರುದ್ರನೇ ನಿನಗೆ ನಮಸ್ಕಾರಗಳು. ಶ್ವಾನಗಳನ್ನು ರಕ್ಶಿಸುವವರ ರೂಪದಲ್ಲಿಯೂ ಇರುವ ರುದ್ರನಿಗೆ ನಮಸ್ಕಾರಗಳು.

ವಿದ್ಯಾವಿನಯ ಸಂಪನ್ನೇ ಬ್ರಾಹ್ಮಣೇ ಗವಿ ಹಸ್ತಿನಿ ಶುನಿ ಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ಎನ್ನುತ್ತದೆ ಭಗವದ್ಗೀತೆಯ ಐದನೆಯ ಅಧ್ಯಾಯದ ಹದಿನೆಂಟನೇ ಶ್ಲೋಕ.

ಜ್ನಾನಿಗಳು ಪಂಡಿತರು, ವಿದ್ಯಾವಿನಯ ಸಂಪನ್ನರೂ ಆದವರು, ಬ್ರಾಹ್ಮಣರನ್ನೂ, ಗೋವು, ಆನೆ, ನಾಯಿ ಮತ್ತು ಎಲ್ಲಾ ಜೀವಿಗಳನ್ನೂ ಒಂದೇ ಸಮನಾಗಿ ಭಾವಿಸುತ್ತಾರೆ ಎನ್ನುವುದು ಈ ಶ್ಲೋಕದ ವಾಕ್ಯಾರ್ಥ.

ಶ್ರೀ ರುದ್ರ ದ ನಾಲ್ಕನೇ ಅನುವಾಕದ ನಾಲ್ಕನೇ ಮಂತ್ರ- ನಮೋ ವ್ರಾತೇ”ಭ್ಯೋ ವ್ರಾತ’ಪತಿಭ್ಯಶ್ಚ ವೋ ನಮಃ ಇಂದ ಆರಂಭವಾಗಿ ಹದಿನೇಳನೇ ಶ್ಲೋಕವಾದ ನಮಃ ಶ್ವಭ್ಯಃ ಶ್ವಪ’ತಿಭ್ಯಶ್ಚ ವೋ ನಮಃ ಅಲ್ಲಿಯವರೆಗೆ ಜಗತ್ತಿನಲ್ಲಿ, ವಿವಿಧ ಕಾಯಕಗಳನ್ನು ಮಾಡುವ ಎಲ್ಲಾ ಮನುಷ್ಯರೂ ಒಂದೇ ಅಷ್ಟೇ ಅಲ್ಲ ಎಲ್ಲಾ ಜೀವಿಗಳು, ಪ್ರಾಣಿಗಳು, ಪಶು ಪಕ್ಷಿಗಳು, ಗಿಡಮರಗಳು ಮತ್ತು ಜಡವಸ್ತುಗಳೂ ಸಹಾ ಒಂದೇ. ಎಲ್ಲರಲ್ಲೂ, ಎಲ್ಲದರಲ್ಲೂ ಬೆಳಗುತ್ತಿರುವ ಚೈತನ್ಯ ಅದನ್ನು ಯಾವ ಹೆಸರಿನಿಂದ ಕರೆದರೂ ಅದು ಒಂದೇ ಎಂಬ ತತ್ವವನ್ನು ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಸ್ಪಷ್ಟ ವಾಕ್ಯಗಳಲ್ಲಿ ನಿರೂಪಿಸಲಾಗಿದೆ.
ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ಎಂದು ಸಾರಿದ ವೇದಕಾಲದ ಸಮಾಜ ಎಲ್ಲಿ? ಈ ವೇದಕಾಲದ ಸಮಾಜ, ಯಾವ ಹಂತದಲ್ಲಿ ಜನರಲ್ಲಿ ಮೇಲು ಕೀಳು ಎಂಬ ಭೇದ ಭಾವನೆ ಮೂಡಿಸಿದ ಸಮಾಜವಾಗಿ ಪರಿವರ್ತಿತವಾಯಿತು?
ಎಲ್ಲ ವರ್ಗದ ಜನರಲ್ಲಿ ಸಮಾನತೆಗಾಗಿ ಕ್ರಾಂತಿಯನ್ನೇ ಮಾಡಿದ ಸಮಾಜ ಈ ಅಸಮಾನತೆ ಮೂಡಿಸಲು ಕಾರಣರಾದವರ ವಿರುದ್ಧ ದನಿ ಎತ್ತುವ ಬದಲು ಎಲ್ಲರೂ ಒಂದೇ ಎಂದು ಕೂಗಿ ಕೂಗಿ ಹೇಳಿರುವ ವೇದಗಳ ವಿರುದ್ಧ ದನಿ ಎತ್ತುವ ಮತ್ತು ಆ ದನಿಯನ್ನು ಈಗಲೂ ಜೀವಂತವಾಗಿರಿಸಿರುವುದು ಸರಿಯೇ ನ್ಯಾಯವೇ ಇದರಿಂದ ಎಲ್ಲರೂ ಒಂದೇ ಎಂಬ ವೇದ ಘೋಷ ಮತ್ತೆ ಎಂದಾದರೂ ಒಂದು ದಿನ ಸಾಕಾರವಾಗಬಲ್ಲುದೇ? ಈ ಎಲ್ಲ ಪ್ರಶ್ನೆಗಳೊಂದಿಗೆ ನಾಲ್ಕನೆಯ ಅನುವಾಕದ ವಿವರಣೆಯನ್ನು ಸಂಪನ್ನ ಗೊಳಿಸುತ್ತಿದ್ದೇನೆ.

ಲೋಕಾ ಸಮಸ್ತಾ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು.
ಓಂ ಶಾಂತಿಃ ಶಾಂತಿಃ ಶಾಂತಿಃ

One Comment on “ಶ್ರೀ ರುದ್ರ ನಮಕ 4 ನೇ ಅನುವಾಕ: ಕನ್ನಡ ವಿವರಣೆ Sri Rudra Namaka 4th Anuvaka explained in Kannada

  1. I want full Rudradhyaya kannada language meaning in pdf or book kindly send me to my number 9844569694

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: