ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಅಷ್ಟಾವಕ್ರ ಗೀತೆಯ 8 ನೆಯ ಅಧ್ಯಾಯದ 2 ಮತ್ತು 3 ನೇ ಶ್ಲೋಕ:
ತದಾ ಮುಕ್ತಿರ್ಯದಾ ಚಿತ್ತಂ ನ ವಾಂಛತಿ ನ ಶೋಚತಿ ।
ನ ಮುಂಚತಿ ನ ಗೃಣ್ಹಾತಿ ನ ಹೃಷ್ಯತಿ ನ ಕುಪ್ಯತಿ ॥ 8-2॥
ಮೊದಲನೇ ಶ್ಲೋಕದಲ್ಲಿ ಚಿತ್ತದಲ್ಲಿ ಅಚ್ಚಾಗಿರುವ ಏನೆಲ್ಲಾ ಬಂಧನಕ್ಕೆ ಕಾರಣ ವಾಗುತ್ತದೆ ಎಂದು ತಿಳಿಸಿ, ಅವೆಲ್ಲವೂ ಚಿತ್ತದಲ್ಲಿ ಇಲ್ಲದೇ ಹೋದರೆ ಅದೇ ಮುಕ್ತಿ ಎಂದಿದ್ದಾರೆ ಹಾಗಾಗಿ ಈ ಶ್ಲೋಕಕ್ಕೆ ವಿವರಣೆ ಬೇಕಿಲ್ಲಾ.
ಇನ್ನು 3 ನೆಯ ಶ್ಲೋಕ;
ತದಾ ಬನ್ಧೋ ಯದಾ ಚಿತ್ತಂ ಸಕ್ತಂ ಕಾಶ್ವಪಿ ದೃಷ್ಟಿಷು ।
ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು ॥ 8-3॥
ಚಿತ್ತವು ಯಾವುದಾದರೂ ಇಂದ್ರಿಯಗಳಿಗೆ ಅಂಟಿಕೊಂಡಾಗ, ಸಿಕ್ಕಿಕೊಂಡಾಗ ಅದು ಬಂಧನ, ಹಾಗೆಯೇ ಚಿತ್ತವು ಯಾವುದೇ ಇಂದ್ರಿಯಗಳಿಗೆ ಅಂಟಿಕೊಳ್ಳದಿದ್ದರೆ, ಸಿಕ್ಕಿಕೊಳ್ಳದಿದ್ದರೆ ಅದು ಮುಕ್ತಿ.
ಮನಸ್ಸು ಜ್ಞಾನೇಂದ್ರಿಯಗಳ ಅನುಭವವನ್ನು ಅರ್ಥೈಸುವುದೇ ಚಿತ್ತದಲ್ಲಿ ಸಂಗ್ರಹವಾಗಿರುವ ದಾಖಲೆಗಳ ಮೂಲಕ. ಉದಾ: ಒಬ್ಬ ವ್ಯಕ್ತಿಯನ್ನು ಕಣ್ಣು ನೋಡಿ, ಆತನ ಆಕಾರವನ್ನು ಮನಸ್ಸಿನಲ್ಲಿ ಮೂಡಿಸಿದರೆ,ಆ ವ್ಯಕ್ತಿಯ ಬಗ್ಗೆ ಈ ಮೊದಲೇ ತಿಳಿದಿರುವ ಎಲ್ಲಾ ವಿಷಯಗಳೂ ಚಿತ್ತದಲ್ಲಿ ಸಂಗ್ರಹವಾಗಿದ್ದರೆ ಆ ಎಲ್ಲಾ ವಿವರಗಳನ್ನೂ ಚಿತ್ತವು ಮನಸ್ಸಿಗೆ ರವಾನಿಸುತ್ತದೆ, ಅಥವಾ ಆ ವ್ಯಕ್ತಿಯನ್ನು ಕಣ್ಣು ಮೊಟ್ಟಮೊದಲ ಬಾರಿಗೆ ನೋಡುತ್ತಿದ್ದರೆ, ಆ ವ್ಯಕ್ತಿಯ ಬಗ್ಗೆ ಇದುವರೆಗೂ ಕಿವಿಯು ಏನನ್ನೋ ಕೇಳದೇ ಇದ್ದರೆ, ಅಪರಿಚಿತ ಎನ್ನುವ ಪದ ಇಲ್ಲಿಗೆ ಸರಿಹೊಂದಬಹುದು. ಆಗ ಕಣ್ಣು ನೋಡಿದ ಆ ವ್ಯಕ್ತಿಯ ಆಕಾರವನ್ನು ಮತ್ತು ಆ ವ್ಯಕ್ತಿಯ ಬಗ್ಗೆ ಕಿವಿಯಿಂದ ಕೇಳಿದ ಅಥವಾ ಬೇರೆ ಬೇರೆ ಜ್ಞಾನೇಂದ್ರಿಯಗಳು ಸಂಗ್ರಹಿಸಿದ ಮಾಹಿತಿಯನ್ನು ಮನಸ್ಸು ಚಿತ್ತ ಎನ್ನುವ ಉಗ್ರಾಣಕ್ಕೆ ರವಾನಿಸುತ್ತದೆ.
ಅಂದರೆ ಮನಸ್ಸು ಚಿತ್ತವನ್ನು ಸದಾ ಅಂಟಿಕೊಂಡಿದ್ದು ಚಿತ್ತದಿಂದ ಮಾಹಿತಿಯನ್ನು ಪಡೆಯುತ್ತಲೂ, ಚಿತ್ತಕ್ಕೆ ಮಾಹಿತಿಯನ್ನು ಕೊಡುತ್ತಲೂ ಇರುತ್ತದೆ ಎಂಬುದು ನಮಗೆ ಅರ್ಥವಾಯಿತು. ಅಂದರೆ ಜ್ಞಾನೇಂದ್ರಿಯಗಳ ಮತ್ತು ಚಿತ್ತದ ನಡುವಿನ ಸಂಪರ್ಕ ಸೇತುವೆಯೇ ಮನಸ್ಸು ಎಂದಾಯಿತು. ಈ ಶ್ಲೋಕದಲ್ಲಿ ಹೇಳಿರುವಂತೆ ಚಿತ್ತವು ಯಾವುದಾದರೂ ಇಂದ್ರಿಯಕ್ಕೆ ಅಂಟಿಕೊಂಡರೆ ಅದು ಬಂಧನ, ಅಂಟಿಕೊಳ್ಳದಿದ್ದರೆ ಮುಕ್ತಿ ಎನ್ನುವುದನ್ನು ಅರ್ಥೈಸಿದರೆ, ಚಿತ್ತವು ನೇರವಾಗಿ ಯಾವುದೇ ಇಂದ್ರಿಯಗಳಿಗೆ ಅಂಟಿಕೊಳ್ಳದಿದ್ದರೂ, ಸದಾ ಜ್ಞಾನೇಂದ್ರಿಯಗಳಿಗೆ ಅಂಟಿ ಕೊಂಡಿರುವ ಮನಸ್ಸಿನೊಂದಿಗೆ ಚಿತ್ತವೂ, ಚಿತ್ತದೊಂದಿಗೆ ಮನಸ್ಸೂ ಸದಾ ಅಂಟಿಕೊಡಿರುವುದರಿಂದ, ಚಿತ್ತವು ಸದಾ ಇಂದ್ರಿಯಗಳೊಂದಿಗೆ ಅಂಟಿಕೊಂಡಂತೆಯೇ ಆಯಿತು, ಹಾಗಾಗಿ ಅದು ಬಂಧನವೇ ಆಗಿದೆ.
ಗಾಢನಿದ್ರೆಯಲ್ಲಿ ಅಂದರೆ ಸುಷುಪ್ತಾವಸ್ಥೆಯಲ್ಲಿ ಇಂದ್ರಿಯಗಳಿಗೆ ಮನಸ್ಸು ಅಂಟಿಕೊಂಡಿರುವುದಿಲ್ಲಾ ಹಾಗೆಯೇ ಮನಸ್ಸು ಚಿತ್ತಕ್ಕೂ ಸಹಾ ಅಂಟಿಕೊಂಡಿರುವುದಿಲ್ಲಾ. ಅರಬಿಂದೋ ಅವರ ಪದಕೋಶ ಸಂಗ್ರಹವು ಇದನ್ನು ಸುಷುಪ್ತ ಸಮಾಧಿ ಎಂದಿದೆ.
ಇದು ಕ್ಷಣಿಕ ವಾದ ಮುಕ್ತಿಯ ಅನುಭವ ಅಂದರೆ ತಪ್ಪಲ್ಲಾ.
ಈ ಶ್ಲೋಕದಲ್ಲಿ ಹೇಳಿರುವ ಮುಕ್ತಿ ಸಾಧ್ಯವಾಗಬೇಕಾದರೆ ಜಾಗೃತಾ ಸಮಾಧಿ ಆಗಬೇಕು. ಅದು ಏನು ? ಸುಷುಪ್ತಾ ಸಮಾಧಿಯಲ್ಲಿ ಏನಾಗುತ್ತದೆ? ಚಿತ್ತ ಮತ್ತು ಜ್ಞಾನೇಂದ್ರಿಯಗಳ ಸಂಪರ್ಕ ಸೇತುವಾದ ಮನಸ್ಸು ಆ ಸೇತು ವನ್ನು ಕಡಿದು ಹಾಕಿಬಿಟ್ಟಿರುತ್ತದೆ. ಅಂದರೆ ಜ್ಞಾನೇಂದ್ರಿಯಗಳ ಅನುಭವವನ್ನು ಚಿತ್ತಕ್ಕೂ, ಚಿತ್ತ ನೀಡುವ ಸೂಚನೆಗಳನ್ನು ಜ್ಞಾನೇಂದ್ರಿಯಗಳಿಗೂ ತಲುಪಿಸುವ ಕಾರ್ಯವನ್ನು ಸ್ಥಗಿತಗೊಳಿಸಿಬಿಟ್ಟಿರುತ್ತದೆ ಅಂದರೆ ನಿಷ್ಕ್ರಿಯ ವಾಗಿ ಬಿಟ್ಟಿರುತ್ತದೆ ಎನ್ನಬಹುದೇ? ನಿಷ್ಕ್ರಿಯೆಯನ್ನು ಇನ್ನೊಂದು ಪದದ ಮೂಲಕ ಹೇಳುವುದಾದರೆ ಮನಸ್ಸು ಮೌನವಾಗಿತ್ತು ಎಂದು ಹೇಳಬಹುದು.
ಒಬ್ಬ ಮಹಾಜ್ಞಾನಿಗಳು, ಅವರ ಹೆಸರು ನೆನಪಿಗೆ ತಕ್ಷಣ ಬರುತ್ತಿಲ್ಲಾ. ಬಹುಶಃ ಶ್ರೀ ನಿಜಗುಣ ಶಿವಯೋಗಿಗಳು ಇರಬಹುದು. ಅವರು ” ಮನಸು ನಿಲ್ಲಿಸುವುದೇ ಯೋಗ ಅದು ರಾಜಯೋಗ’ ಎಂದರೆ, ಶ್ರೀ ಪುರಂದರದಾಸರು,” ಮನವ ನಿಲ್ಲಿಸುವದು ಬಲು ಕಷ್ಟ” ಎಂದಿದ್ದಾರೆ. ಕರ್ನಾಟಕ ಸಂಗೀತ ಪಿತಾಮಹ ಶ್ರೀ ತ್ಯಾಗರಾಜರು, “ಮನಸು ನಿಲ್ಪ ಶಕ್ತಿ ಲೇಕ ಪೋತೆ” ಎಂದು ಹಾಡಿದ್ದಾರೆ. ಇವರೆಲ್ಲರೂ ಹೇಳುತ್ತಿರುವುದು ಮನಸ್ಸನ್ನು ಮೌನವಾಗಿ ಸುವುದೇ ಆಗಿದೆ. ಮನಸು ಮೌನವಾಗದೆ, ಚಿತ್ತವನ್ನು ಇಂದ್ರಿಯಗಳಿಗೆ ಅಂಟಿಕೊಳ್ಳದಂತೆ ಮಾಡುವುದು ಅಸಾಧ್ಯ.
ಮನಸ್ಸನ್ನು ಮೌನವಾಗುವುದು ಹೇಗೆ? ನಮ್ಮ ಕಣ್ಣುಗಳು ಪ್ರಪಂಚವನ್ನು ನೋಡುತ್ತವೆ. ಕಿವಿಗಳು ನಮ್ಮ ಸುತ್ತಲೂ ಆಗುವುದನ್ನು ಕೇಳುತ್ತವೆ. ಮೂಗು ವಾಸನೆಯನ್ನು ಗ್ರಹಿಸುತ್ತದೆ, ನಾಲಗೆ ರುಚಿಯನ್ನು ಹೇಳುತ್ತದೆ, ಚರ್ಮ ಚಳಿ ಬಿಸಿ ಗಳನ್ನು ಗ್ರಹಿಸುತ್ತದೆ.ಇವೆಲ್ಲವನ್ನು ಮನಸು ಗ್ರಹಿಸುತ್ತದೆ ಮತ್ತು ಅದನ್ನು ಚಿತ್ತಕ್ಕೆ ರವಾನಿಸುತ್ತದೆ.
ಮನಸು ಮೌನವಾಗುವುದು ಅಂದರೆ, ಇಂದ್ರಿಯಗಳ ಮೂಲಕ ತನ್ನ ಅನುಭವಕ್ಕೆ ಬಂದದ್ದನ್ನು ಚಿತ್ತಕ್ಕೆ ರವಾನಿದಿರುವುದು. ಇದು ಹೇಗೆ ಸಾಧ್ಯ? ಮನಸು ಮೌನವಾದ ಅನುಭವ ನಮ್ಮೆಲ್ಲರಿಗೂ ಆಗಿದೆ ಎಂದರೆ ಅಚ್ಚರಿ ಪಡಬೇಕಿಲ್ಲಾ. ನಮ್ಮ ಮುಂದೆ ಒಬ್ಬ ವ್ಯಕ್ತಿ ಬರುತ್ತಾರೆ. ಅವರು ನಮಗೆ ಪರಿಚಿತರಿದ್ದರೂ ಅವರನ್ನು ಗುರುತಿಸಲು ಸಮಯ ತೆಗೆದುಕೊಳ್ಳುತ್ತೇವೆ. ಅಂದರೆ ಆ ವ್ಯಕ್ತಿಯ ಚಿತ್ರವನ್ನು ಚಿತ್ತ್ತಕ್ಕೆ ಕಳಿಸಿ ವಿವರ ಪಡೆದು ಕೊಳ್ಳಲು ತಡ ಮಾಡಿದ್ದೇವೆ ಎಂದಾಯಿತು. ಆ ತಡಮಾಡಿದ ಕ್ಷಣಗಳು ಮನಸು ಮೌನವಾಗಿರಲಿಲ್ಲವೇ? ನಮಗೆ ಯಾರೋ ಏನನ್ನೋ ಹೇಳುತ್ತಿರುತ್ತಾರೆ, ಕಿವಿಗಳು ಶಬ್ಧವನ್ನು ಮಾತ್ರ ಕೇಳುತ್ತವೆ ಪದಗಳು ಮತ್ತು ವಾಕ್ಯಗಳನ್ನಲ್ಲ,ಹಾಗಾಗಿ ಕೇಳಿದ್ದನ್ನು ಚಿತ್ತಕ್ಕೆ ತಲುಪಿಸಿಲ್ಲಾ. ಆಗ ಮನಸು ಮೌನವಲ್ಲವೇ?
ನಮಗೆ ಇಷ್ಟವಾದ ದೃಶ್ಯಗಳನ್ನು ಟಿ ವಿ ಪರದೆಯ ಮೇಲೆ ನೋಡುತ್ತಿದ್ದೇವೆ, ಹಾಗೆಯೇ ಊಟವನ್ನೂ ಮಾಡುತ್ತಿದ್ದೇವೆ. ಊಟ ರುಚಿ ಇದೆಯೇ, ಉಪ್ಪು ಕಾರ ಸರಿ ಇದೆಯೇ ಇವಾವುದೂ ಮನಸಿಗೆ ತಿಳಿಯುವುದೇ ಇಲ್ಲಾ. ಆಗ ಮನಸು ಮೌನವಾಗಿಲ್ಲವೇ? ಇತ್ತೀಚಿಗೆ ಒಬ್ಬ ಸಾಧು ಹಿಮಾಲಯದಲ್ಲಿ ಬರಿಮೈಯಲ್ಲಿ ತಿರುಗಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚರ್ಮ ಎನ್ನುವ ಇಂದ್ರಿಯ ಆ ಕೊರೆಯುವ ಚಳಿಯನ್ನು ಚಿತ್ತಕ್ಕೆ ರವಾನಿಸುತ್ತಿಲ್ಲಾ. ಆಗ ಮನಸು ಮೌನವಾಗಿಲ್ಲವೇ?
ಮನಸು ಮೌನವಾದಾಗ ಚಿತ್ತವು ಇಂದ್ರಿಯಗಳಿಗೆ ಆಗುವ ಅನುಭವಗಳನ್ನು ಪಡೆಯುವುದೇ ಇಲ್ಲಾ. ಹಾಗಾದಾಗ ಚಿತ್ತವು ಇಂದ್ರಿಯಗಳಿಗೆ ಅಂಟಿಕೊಳ್ಳುವುದಾದರೂ ಹೇಗೆ?
ಮನಸನ್ನು ಮೌನವಾಗಸಲು ನಾವೆಲ್ಲರೂ ಇಂದಿನಿಂದಲೇ ಪ್ರಯತ್ನಿಸೋಣ. ಅದಕ್ಕಾಗಿ ನಾವು ಪ್ರಪಂಚದಿಂದ, ಸಮಾಜದಿಂದ ಅಥ್ವಾ ಲೌಕಿಕ ಸುಖ ಭೋಗಗಳಿಂದ ವಂಚಿತರಾಗಬೇಕಲ್ಲಾ. ಅದೇ ರಾಜಯೋಗ.
ಜಾಗೃತಾವಸ್ಥೆಯಲ್ಲಿಯೂ ಮನಸ್ಸನ್ನು ಮೌನವಾಗಿಸಲು ನಾವು ಸಫಲರಾದರೆ ಅದೇ ಮುಕ್ತಿ.
ಅಷ್ಟಾವಕ್ರ ಗೀತೆ ಅಧ್ಯಾಯ 6 ಮತ್ತು 8ನೆ – 8 ಶ್ಲೋಕಗಳ ಕೊಂಡಿಗಳು:
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.
Pingback: ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೫ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ (ಭಾಗ ೪ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ (ಭಾಗ ೩ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ (ಭಾಗ ೨ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೧ of ೭) – Atmanandanatha