ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಅಷ್ಟಾವಕ್ರ ಗೀತೆಯ 8 ನೆಯ ಅಧ್ಯಾಯದ 4 ನೇ ಶ್ಲೋಕ:
ಯದಾ ನಾಹಂ ತದಾ ಮೋಕ್ಷೋ ಯದಾಹಂ ಬಂಧನಂ ತದಾ
ಮತ್ವೇತಿ ಹೇಲಯಾ ಕಿಂಚಿತ್ (ನ್) ಮಾ ಗೃಹಾಣ ವಿಮುಂಚ ಮಾ
ನಾನು ಎನ್ನುವುದು ಇಲ್ಲದಿದ್ದರೆ ಅದು ಮುಕ್ತಿ, ನಾನು ಎನ್ನುವುದು ಇದ್ದರೆ ಅದು ಬಂಧನ. ಇದನ್ನು ಅರಿತು ಯಾವುದಕ್ಕೂ ಅಂಟಿಕೊಳ್ಳದೆ, ಅಥವಾ ಯಾವುದನ್ನೂ ತಿರಸ್ಕರಿಸದೇ ಇರಬೇಕು.
ದೇಹ, ಮನಸು, ಬುದ್ಧಿ, ಚಿತ್ತ, ಅಹಂಕಾರ, ಕರ್ಮೇಂದ್ರಿಯಗಳು.ಜ್ಞಾನೇಂದ್ರಿಯಗಳು, ಇವನ್ನು ನಾನು ಎಂದು ಭಾವಿಸಿದಾಗ ಮಾತ್ರವೇ ಯಾವುದಕ್ಕಾದರೂ ಅಂಟಿಕೊಳ್ಳಲು ಅಥವಾ ತಿರಸ್ಕರಿಸಲು ಸಾಧ್ಯ .ಇವು ಯಾವೂ ನಾನು ಅಲ್ಲ ಅಂದಾಗ ಅಂಟಿ ಕೊಳ್ಳುವುದು, ತಿರಸ್ಕರಿಸುವುದು ಇಲ್ಲದಾಗುತ್ತದೆ ಅದೇ ಮುಕ್ತಿ, ಬಿಡುಗಡೆ. ಇದೇ ವಾಕ್ಯವನ್ನು ಹೀಗೂ ಹೇಳಬಹುದು ಮತ್ತು ಅರ್ಥ ಮಾಡಿಕೊಳ್ಳಬಹುದು.
ಯಾವುದೇ ಪ್ರಾಪಂಚಿಕ ಸುಖ ಭೋಗಗಳನ್ನು, ತ್ಯಜಿಸದೆ, ಆದರೆ ಅವಕ್ಕೆ ಅಂಟಿಕೊಳ್ಳದೇ ಇರುವದು ಮುಕ್ತಿ.
ಇನ್ನು ನಮ್ಮ ಮುಂದೆ ಎದುರಾಗವ ಪ್ರಶ್ನೆ, ಪ್ರಾಪಂಚಿಕ ಸುಖಭೋಗಗಳು, ಅಥವಾ ಕಷ್ಟ ಕಾರ್ಪಣ್ಯಗಳು ಯಾವುವು?
ಸುಂದರವಾದುದನ್ನು / ಕುರೂಪವನ್ನೂ ನೋಡುವ ಕಣ್ಣು, ಹಿತವಾದುದನ್ನ ಅಹಿತವಾದದನ್ನು, ಕರ್ಕಶವಾದದನ್ನೂ ಕೇಳುವ ಕಿವಿ, ಸುವಾಸನೆಯನ್ನೂ, ದುರ್ವಾಸನೆಯನ್ನೂ ಆಘ್ರಾಣಿಸುವ ಮೂಗು, ಸಿಹಿಯನ್ನು, ಖಾರವನ್ನೂ ಅಷ್ಟೇ ಏಕೆ ಷಡ್ರಸಗಳ ರುಚಿ ನೋಡುವುದು ನಾಲಗೆ. ಸ್ಪರ್ಶ ಸುಖ ಅಥವಾ ದುಃಖಕ್ಕೆ ಸ್ಪಂದಿಸುವ ಚರ್ಮ, ಇವೆಲ್ಲವೂ ಪ್ರಾಪಂಚಿಕ ಸುಖಭೋಗಗಳು ಮತ್ತು ಕಷ್ಟ ಕಾರ್ಪಣ್ಯಗಳು.
ಮುಂದಿನ ಪ್ರಶ್ನೆ ಇವೆಲ್ಲವುಗಳ ಅನುಭವ ಆಗುವುದು ಯಾವುದರ ಮೂಲಕ? ಉತ್ತರ ಸುಲಭ, ಇವೆಲ್ಲವುಗಳ ಅನುಭವ ಆಗುವುದು ಮನಸ್ಸಿನ ಮೂಲಕ.
ಸರಿ ಇವೆಲ್ಲವನ್ನೂ ತಿರಸ್ಕರಿಸದೆ ಅನುಭವಿಸಿ ಆಯಿತು. ನಿಜ ಎಂದರೆ ಇವೆಲ್ಲವನ್ನು ತಿರಸ್ಕರಿಸಲು ಸಾಧ್ಯವೂ ಇಲ್ಲಾ. ಮುಂದೆ ಏನು? ಇವಕ್ಕೆ ಅಂಟಿಕೊಳ್ಳಬಾರದು. ಅದು ಹೇಗೆ?
ಈಗ ನಾವು ಇದೇ ಅಧ್ಯಾಯದ 3 ನೇ ಶ್ಲೋಕವನ್ನು ಮತ್ತೊಮ್ಮೆ ನೋಡಬೇಕು.
ತದಾ ಬನ್ಧೋ ಯದಾ ಚಿತ್ತಂ ಸಕ್ತಂ ಕಾಶ್ವಪಿ ದೃಷ್ಟಿಷು ।
ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು ॥ 8-3॥
ಚಿತ್ತವು ಇಂದ್ರಿಯಗಳಿಗೆ ಅಂಟಿಕೊಂಡರೆ ಬಂಧನ , ಅಂಟಿಕೊಳ್ಳದಿದ್ದರೆ ಮುಕ್ತಿ.
ಈ ಹಿಂದೆ ಹೇಳಿದಂತೆ ಜ್ಞಾನೇಂದ್ರಿಯಗಳ ಅನುಭವಗಳನ್ನು ಗ್ರಹಿಸಿದ್ದು ಮನಸ್ಸು, ಸುಖ ಸಂತೋಷಗಳನ್ನೂ ಕಷ್ಟ ಕಾರ್ಪಣ್ಯಗಳ ಅನುಭವವನ್ನು ಪಡದಿದ್ದೂ ಮನಸ್ಸೇ. ಮನಸ್ಸು ಈ ಅನುಭವವನ್ನು ಚಿತ್ತಕ್ಕೆ ರವಾನಿಸಿದರೆ ಮಾತ್ರವೇ ಚಿತ್ತವು ಈ ಅನುಭವಗಳನ್ನು ತನ್ನ ಅಗಾಧವಾದ ಉಗ್ರಾಣದಲ್ಲಿ ಶೇಖರಿಸಿಬಿಡುತ್ತದೆ, ಹಾಗಾಗಿ ಆ ಎಲ್ಲ ಅನುಭವಗಳಿಗೆ ಚಿತ್ತವು ಅಂಟಿಕೊಂಡುಬಿಡುತ್ತದೆ. ಮನಸ್ಸು ಮೌನವಾಗಿ ಈ ಎಲ್ಲ ಅನುಭವಗಳನ್ನು ಚಿತ್ತಕ್ಕೆ ರವಾನಿಸದಿದ್ದರೆ, ಅಂಟಿಕೊಳ್ಳುವ ಪ್ರಶ್ನೆಯೇ ಇಲ್ಲಾ. ಬಹುಷಃ ಇದನ್ನೇ ಆಧುನಿಕ ಆಧ್ಯಾತ್ಮಿಕ ಗುರುಗಳು ಲಿವ್ ಇನ್ ಪ್ರೇಸೇಂಟ್ ಎಂದು ಹೇಳುತ್ತಿರಬಹುದು.
ಪರೀಕ್ಷಾ ಕೊಠಡಿಯಿಂದ ಹೊರಬಂದ ವಿದ್ಯಾರ್ಥಿಯ ಪ್ರಶ್ನ ಪತ್ರಿಕೆಯನ್ನು ತೆಗೆದುಕೊಂಡು ಅದಕ್ಕೆ ತಾನು ನೀಡಿರುವ ಉತ್ತರಗಳನ್ನು ಕೇಳುತ್ತಾ ಹೋದಾಗ ತಪ್ಪು ಉತ್ತರಗಳನ್ನು ಗುರುತಿಸಿದರೆ, ಬರುವ ಪ್ರತಿಕ್ರಿಯೆ, ಓಹ್ ಮರತೇ, ಈಗ ನೆನಪಿಗೆ ಬಂತು ಅಥವಾ ಗೊತ್ತಾಗಲೇ ಇಲ್ಲಾ. ಈಗ ನೆನಪಿಗೆ ಬಂತು ಅಂದರೆ ಚಿತ್ತದಲ್ಲಿ ದಾಖಲಾಗಿತ್ತು ಸಮಯಕ್ಕೆ ಸರಿಯಾಗಿ ಅದು ಮನಸ್ಸನ್ನು ತಲುಪಿಲ್ಲಾ. ಗೊತ್ತಾಗಲೇ ಇಲ್ಲಾ ಅಂದರೆ ವಿಷಯ ಚಿತ್ತದಲ್ಲಿ ದಾಖಲೆ ಆಗಿಲ್ಲಾ. ಹಾಗೆಯೇ ಹಲವು ಪ್ರಶ್ನೆಗಳಿಗೆ ಉತ್ತರವನ್ನೇ ಬರೆದಿರುವುದಿಲ್ಲ. ಆಗ ಬರುವ ಉತ್ತರ, ಸಮಯ ಸಿಗಲಿಲ್ಲಾ ಅಥವಾ ಉತ್ತರ ಗೊತ್ತಿಲ್ಲಾ, ಉತ್ತರ ಈಗಲೂ ಗೊತ್ತಿಲ್ಲಾ. ಉತ್ತರ ಈಗಲೂ ಗೊತ್ತಿಲ್ಲಾ ಅಂದರೆ ವಿಷಯ ಚಿತ್ತ ದಲ್ಲಿ ದಾಖಲಾಗಿಲ್ಲಾ. ಹೀಗೆ ನಮಗೆ ತಿಳಿಯದೆಯೇ ಬೇಕಾದಷ್ಟು ವಿಷಯಗಳನ್ನು ನಾವು ಚಿತ್ತದಲ್ಲಿ ದಾಖಲಿಸುವುದಿಲ್ಲಾ. ಇದು ಸುಖ ಸಂತೋಷಗಳಿಗೆ, ಕಷ್ಟ ಕಾರ್ಪಣ್ಯಗಳಿಗೂ ಅನ್ವಯಿಸಬೇಕು. ಆಗ ಅವೆಲ್ಲವನ್ನು ಅನುಭವಿಸಿದರೂ ಅವಕ್ಕೆ ಅಂಟಿಕೊಳ್ಳುವುದಿಲ್ಲಾ
ಯಾವುದನ್ನೂ ತಿರಸ್ಕರಿಸದೇ ಇರವುದು ಹಾಗೆಯೇ ಯಾವುದಕ್ಕೂ ಅಂಟಿಕೊಳ್ಳದೇ ಇರುವುದು ಎಂಬುದನ್ನು ವಿವರಿಸಲು ಪ್ರಯತ್ನ ಪಟ್ಟಷ್ಟೂ ಅದು ಮತ್ತಷ್ಟು ಕಠಿಣವಾಗುತ್ತಾ ಹೋಗತ್ತದೆ, ಏಕೆಂದರೆ ಇದನ್ನು ಪದಗಳಿಂದ ವಿವರಿಸಲು ಅಸಾಧ್ಯ ಅದನ್ನು ಅನುಭವಿಸಿಯೇ ಅರಿಯಬೇಕು.
ಈ ಚಿತ್ತ ಎನ್ನವುದು ಆಧುನಿಕ ಮನಶಾಸ್ತ್ರ ಗುರುತಿಸಿರುವ ಸುಪ್ತ ಮನಸ್ಸೇ? (Sub conscious mind) ಖಂಡಿತಾ ಅಲ್ಲಾ. ಚಿತ್ತ ಎಂಬುದನ್ನು ಆಧುನಿಕ ಮನಶಾಸ್ತ್ರ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಟ್ಟಿಲ್ಲಾ ಎಂದರೆ ತಪ್ಪಾಗಲಾರದು.
ನಾನು ಎನ್ನುವುದು ದೇಹ, ಮನಸು, ಬುದ್ಧಿ, ಚಿತ್ತ, ಅಹಂಕಾರ, ಕರ್ಮೇಂದ್ರಿಯಗಳು. ಜ್ಞಾನೇಂದ್ರಿಯಗಳು, ಇವ್ಯಾವೂ ಅಲ್ಲ ಅನ್ನುವ ಅರಿವು ಉಂಟಾಗಬೇಕು. ನಂತರ ನಾವು ಅನುಭವಿಸುವ ಲೌಕಿಕ ಸುಖ ಸಂತೋಷಗಳಿಗೆ, ಕಷ್ಟ ಕಾರ್ಪಣ್ಯಗಳಿಗೆ ಅಂಟಿಕೊಳ್ಳಬಾರದು ಅದುವೇ ಜೀವನ್ಮುಕ್ತಿ.
ಹಾಗೆ ಅಂಟಿಕೊಳ್ಳದೇ ಇರಲು ಜ್ಞಾನ ಬರಬೇಕು. ಯಾವುದನ್ನು ಅರಿಯುವುದು ಜ್ಞಾನ ಎಂಬುದನ್ನು ಅಷ್ಟಾವಕ್ರ ಗೀತೆಯ ೬ ನೇ ಅಧ್ಯಾಯದ ನಾಲ್ಕು ಶ್ಲೋಕಗಳು ಬಹಳ ಸ್ಪಷ್ಟ ವಾಗಿ ಹೇಳಿವೆ. ಹಾಗೆಯೇ ಎಂಟನೇ ಅಧ್ಯಾಯದ ನಾಲ್ಕು ಶ್ಲೋಕಗಳು ಯಾವುದು ಬಂಧನ ಯಾವುದು ಮುಕ್ತಿ ಎಂಬುದನ್ನು ಬಹಳ ಸ್ಪಷ್ಟವಾಗ ಹೇಳಿವೆ. ಈ ಎಂಟು ಶ್ಲೋಕಗಳು ಅಷ್ಟಾವಕ್ರ ಗೀತೆಯ ಸಾರ ಎಂದು ಹೇಳಿದರೆ ತಪ್ಪಾಗಲಾರದು. ಜೀವನ್ಮುಕ್ತಿಯ ಬಗ್ಗೆ ಮಹಾ ಮಹಿಮರು ಅಪಾರವಾದ ಸಾಹಿತ್ಯ ಸಂಪತ್ತನ್ನು ನಮಗೆ ಬಿಟ್ಟುಹೋಗಿದ್ದಾರೆ. ಇವೆಲ್ಲವುಗಳ ಸಾರವು ಕೂಡಾ ಈ ಎಂಟು ಶ್ಲೋಕಗಳೇ ಆಗಿವೆ.
ಶ್ರೀ ಸ್ವಾಮಿ ವಿದ್ಯಾರಣ್ಯರು ತಮ್ಮ ಜೀವನ್ಮುಕ್ತಿ ವಿವೇಕ ಎಂಬ ಗ್ರಂಥ ದಲ್ಲಿ, ಜೀವನ್ಮುಕ್ತರು ಯಾರು ಎಂದು ವಿವರವಾಗಿ ಹೇಳಿದ್ದ್ದಾರೆ. ಈ ಬ್ಲಾಗ್ ನಲ್ಲಿ ಜೀವನ್ಮುಕ್ತಿ ವಿವೇಕ ಭಾಗ ೪ ರಲ್ಲಿ ಅದನ್ನು ವಿವರಿಸಿದೆ. ಈ ನಾಲ್ಕನೇ ಭಾಗ ಕನ್ನಡದಲ್ಲಿ ಇಲ್ಲದಿದ್ದರೆ ಅದನ್ನು ಕನ್ನಡದಲ್ಲಿ ಬರೆಯುವ ಪ್ರಯತ್ನವನ್ನು ಸಹಾ ಮಾಡುತ್ತೇನೆ.
ಯಾವುದು ಅಸಾಧ್ಯ ಎಂದು ತೋರುತ್ತದೋ ಅದು ಅಭ್ಯಾಸದಿಂದ ಅತೀ ಸುಲಭವಾಗುತ್ತದೆ. ಹತ್ತಾರು ವರ್ಷಗಳ ಹಿಂದೆ ಹಳ್ಳಿಗಳಲ್ಲಿ, ಪಟ್ಟಣದ ಬೀದಿಗಳಲ್ಲಿ ದೊಂಬರು ಎಂಬ ಒಂದು ವರ್ಗಕ್ಕೆ ಸೇರಿದ ಜನ ಚಿಕ್ಕ ಮಕ್ಕಳಿಂದ ಸಣ್ಣ ತಂತಿಯ ಮೇಲೆ ನಡೆಯುವ ಸಾಹಸವನ್ನು ಪ್ರದರ್ಶಿಸುತ್ತಿದ್ದರು. ನಮಗೆ ಇದು ಅಸಾಧ್ಯವಾದ ಸಾಹಸವೇ. ಆದರೆ ಆ ಚಿಕ್ಕ ಮಕ್ಕಳಿಗೆ ಅದು ಕೇವಲ ಆಟ ಎಂಬಂತೆ ಆಗಲು ಕಾರಣ, ಒಂದು, ಆ ಮಕ್ಕಳು ತಂತಿಯ ಮೇಲೆ ನಡೆಯುವ ಅಭ್ಯಾಸ ಆರಂಭಿಸಿದಾಗ ಅದು ಅಪಾಯ ಎಂಬ ಸಂಕೇತ ಚಿತ್ತದಿಂದ ಮನಸ್ಸಿಗೆ ಬರದೇ ಇರುವುದು ಏಕೆಂದರೆ ಅದು ಅಪಾಯ ಎಂಬುದು ಚಿತ್ತದಲ್ಲಿ ದಾಖಲಾಗಿಲ್ಲದೇ ಇರುವುದು, ಎರಡು ಸತತ ಪ್ರಯತ್ನ.
ಜೀವನ್ಮುಕ್ತರಾಗಲು ಆರನೆಯ ಅಧ್ಯಾಯದಲ್ಲಿ ಹೇಳಿರುವಂತಹ ಜ್ಞಾನ ಬರಬೇಕು. ಅಂದರೆ ಈಗ ಚಿತ್ತದಲ್ಲಿ ದಾಖಲಾಗಿರುವ ಜ್ಞಾನ ಅಳಿಸಿ ಹೋಗಬೇಕು. ಇದನ್ನೇ ಚಿತ್ತ ಶುದ್ಧಿ ಎನ್ನುವುದು. ಶುದ್ಧಿ ಎಂದರೆ ಅಲ್ಲಿ ಏನೂ ಇಲ್ಲದಿರುವುದು. ಮೊದಲು ಅಲ್ಲಿ ಏನೂ ಇಲ್ಲದಂತೆ ಮಾಡಬೇಕು ನಂತರವೇ ಆರನೆಯ ಅಧ್ಯಾಯದಲ್ಲಿ ಹೇಳಿರುವಂತಹ ಜ್ಞಾನ ಬರಲು ಸಾಧ್ಯ. One must unlearn to learn the new. ಮೋಟಾರ್ ಬೈಕ್ ಓಡಿಸುವವರು ಹೊಸದಾಗಿ ಮೋಟಾರ್ ಕಾರನ್ನು ಓಡಿಸುವಾಗ ಬ್ರೇಕ್ ಹಾಕುವ ಬದಲು ಆಕ್ಸಿಲರೇಟರ್ ಅನ್ನು ಒತ್ತಿ ಅಪಘಾತ ಮಾಡಿಕೊಂಡಿರುವುದನ್ನು ನಾವು ನೀವೆಲ್ಲರೂ ನೋಡಿದ್ದೇವೆ.
ಮಂತ್ರಯೋಗ ಚಿತ್ತ ಶುದ್ಧಿಗೆ ಬಹಳ ಸುಲಭ ಸಾಧನ. ಚಿತ್ತ ಶುದ್ಧಿ ಆದನಂತರ ನಿಜವಾದ ” ನಾನು” ಯಾವುದು ಎಂಬುದರ ಅರಿವು ಆಗುತ್ತದೆ. ಎಲ್ಲ ಪ್ರಾಪಂಚಿಕ ಸುಖಭೋಗ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಾ ಅವಕ್ಕೆ ಅಂಟಿಕೊಳ್ಳದೇ ಇರಲಿಕ್ಕೂ ಸಾಧ್ಯವಾಗುತ್ತದೆ. ಅದೇ ಜೀವನ್ಮುಕ್ತಿ .
ಜೀವನ್ಮುಕ್ತಿಯ ಬಗ್ಗೆ ನಾವು ಎಷ್ಟೇ ಸಾಹಿತ್ಯವನ್ನು ಓದಿದರೂ, ಅವೆಲ್ಲವೂ ಬೇರೆ ಬೇರೆ ರೀತಿಯಲ್ಲಿ ಹೇಳುವುದು ಈ ಎಂಟು ಶ್ಲೋಕಗಳಲ್ಲಿ ಇರುವಂತಹ ಹಾಗೂ ಶ್ರೀ ಶಂಕರ ಭಗವತ್ಪಾದರ ನಿರ್ವಾಣ ಷಟಕ ಮತ್ತು ಮನಿಷಾ ಪಂಚಕದಲ್ಲಿ ಹೇಳಿರುವ ವಿಷಯವನ್ನೇ ಹೊರತು ಬೇರೇನೂ ಅಲ್ಲಾ. ಹಾಗಾಗಿ ನಾವು ಕೂಡಲೇ ಮಾಡಬೇಕಾದ್ದು ಇವೆಲ್ಲವುಗಳಲ್ಲಿ ಹೇಳಿರುವುದನ್ನು ಅಭ್ಯಾಸ ಮಾಡಲು ಆರಂಭಿಸುವುದು.
ಆಧುನಿಕ ಕಾರ್ಪೊರೇಟ್ ಗುರುಗಳು ಸಹಾ ಸಮಸ್ಯೆಗಳ ಪರಿಹಾರಕ್ಕೆ ಹೊಸ ಹೊಸ ಹಾದಿಗಳನ್ನು ಹುಡುಕಲು, ನಮ್ಮ ಮನಸ್ಸಿನಲ್ಲಿಯ ಪೂರ್ವಾಗ್ರಹ ಚಿಂತನೆಗಳಿಂದ ಹೊರಬರುವ ಬಗ್ಗೆಯೇ ಘಂಟೆ ಗಟ್ಟಲೆ ಉಪನ್ಯಾಸವನ್ನು ನೀಡುತ್ತಾರೆ. ಅದು ತಪ್ಪಲ್ಲಾ.
ಚಿತ್ತದಲ್ಲಿರುವ ಎಲ್ಲಾ ಕಸವನ್ನು , ಕೊಳೆಯನ್ನು ತೊಳೆದು ಅದನ್ನು ಶುಭ್ರವಾಗಿರಿಸುವ ಪ್ರಯತ್ನ ಗುರುಮಂಡಲದ ಸಂಪೂರ್ಣ ಅನುಗ್ರಹದಿಂದ ಇಂದೇ, ಈ ಕ್ಷಣವೇ ಆರಂಭವಾಗಲಿ. ಅದೇ ಭುಕ್ತಿ ಮತ್ತು ಮುಕ್ತಿಗೆ ಸಾಧನ.
ಮತ್ತೊಮ್ಮೆ ಈ ಎಲ್ಲಾ ಎಂಟು ಶ್ಲೋಕಗಳನ್ನು ಹೇಳಿ ಈ ಲೇಖನವನ್ನು ಸಂಪನ್ನಗೊಳಿಸೋಣ.
ಆಕಾಶವದನನ್ತೋಽಹಂ ಘಟವತ್ ಪ್ರಾಕೃತಂ ಜಗತ್ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-1॥
ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸಽನ್ನಿಭಃ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-2॥
ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-3॥
ಅಹಂ ವಾ ಸರ್ವಭೂತೇಷು ಸರ್ವಭೂತಾನ್ಯಥೋ ಮಯಿ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-4॥
ತದಾ ಬನ್ಧೋ ಯದಾ ಚಿತ್ತಂ ಕಿಂಚಿದ್ ವಾಂಛತಿ ಶೋಚತಿ ।
ಕಿಂಚಿನ್ ಮುಂಚತಿ ಕಿಂ ಗೃಹ್ಣಾತಿ ಚಿದ್ ದೃಷ್ಯತಿ ಕುಪ್ಯತಿ ॥ 8-1॥
ತದಾ ಮುಕ್ತಿರ್ಯದಾ ಚಿತ್ತಂ ನ ವಾಂಛತಿ ನ ಶೋಚತಿ ।
ನ ಮುಂಚತಿ ನ ಗೃಹ್ಣಾತಿ ನ ಹೃಷ್ಯತಿ ನ ಕುಪ್ಯತಿ ॥ 8-2॥
ತದಾ ಬನ್ಧೋ ಯದಾ ಚಿತ್ತಂ ಸಕ್ತಂ ಕಾಶ್ವಪಿ ದೃಷ್ಟಿಷು ।
ತದಾ ಮೋಕ್ಷೋ ಯದಾ ಚಿತ್ತಮಸಕ್ತಂ ಸರ್ವದೃಷ್ಟಿಷು ॥ 8-3॥
ಯದಾ ನಾಹಂ ತದಾ ಮೋಕ್ಷೋ ಯದಾಹಂ ಬನ್ಧನಂ ತದಾ ।
ಮತ್ವೇತಿ ಹೇಲಯಾ ಕಿಂಚಿನ್ಮಾ ಗೃಹಾಣ ವಿಮುಂಚ ಮಾ ॥ 8-4॥
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ಪೂರ್ಣಮುದಚ್ಯತೇ ।
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ॥
ಅಷ್ಟಾವಕ್ರ ಗೀತೆ ಅಧ್ಯಾಯ 6 ಮತ್ತು 8ನೆ – 8 ಶ್ಲೋಕಗಳ ಕೊಂಡಿಗಳು:
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ
ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ರ ಕನ್ನಡ ವಿವರಣೆ
ಓಂ ಶಾನ್ತಿಃ ಶಾನ್ತಿಃ ಶಾನ್ತಿಃ ॥
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ರ ಕನ್ನಡ ವಿವರಣೆ – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೫ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ (ಭಾಗ ೪ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ (ಭಾಗ ೩ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ (ಭಾಗ ೨ of ೭) – Atmanandanatha
Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೧ of ೭) – Atmanandanatha