“ಶ್ರೀ ದುರ್ಗಾ ಉಪಾಸನಾ ಚಂದ್ರಿಕಾ” ಕೃತಿಗೆ ನನ್ನ ಗುರುಪತ್ನಿ ಶ್ರೀ ಪರಾಂಬ ಅವರ ಉಪೋದ್ಘಾತ (ಮುನ್ನುಡಿಯ) ಕನ್ನಡ ಅನುವಾದ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗಿರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

1917 ರಲ್ಲಿ ಮುದ್ರಣವಾಗಿರುವ ” ದುರ್ಗಾ ಮಹೋದಧಿ” ಗ್ರಂಥವು ಸಾಮಂತ ವಾಟಿಕಾ ಪುರ ನಿವಾಸಿ ಶ್ರೀ ಕೃಷ್ಣಶರ್ಮರಿಂದ ಸಂಕಲಿತ ವಾಗಿದ್ದು, ಇದು, ಸಪ್ತಶತೀ ಯಂತ್ರ ಸ್ಥಾಪನೆ, ಏಕಾದಶ ನ್ಯಾಸ, ಚಂಡೀ ಆವರಣ ಪೂಜಾ, ಪಲ್ಲವ, ಯೋಜನ ಮತ್ತು ಸಂಪುಟೀಕರಣ ಪ್ರಯೋಗಗಳ ವಿವರಣೆಯೊಂದಿಗೆ ಮಾರ್ಕಂಡೇಯ ಪುರಾಣದ ಶ್ರೀ ದುರ್ಗಾ ಸಪ್ತಶತಿಯ ಶುದ್ಧ ಪಾಠವನ್ನು ಒಳಗೊಂಡಿದೆ.

ಈ ಕೃತಿಯ ಯಥಾವತ್ ಕನ್ನಡ ಲಿಪ್ಯಂತರ ” ಶ್ರೀ ದುರ್ಗಾ ಉಪಾಸನಾ ಚಂದ್ರಿಕಾ ” ಕೃತಿಯು ಅತಿ ಶೀಘ್ರದಲ್ಲಿ ದೇವೀ ಉಪಾಸಕರ ಕೈ ಸೇರಲಿದೆ .

ಈ ಕೃತಿಗೆ ನನ್ನ ಶ್ರೀ ವಿದ್ಯಾಗುರುಗಳ ಧರ್ಮಪತ್ನಿ ಶ್ರೀ ಪರಾಂಬ ಅವರು ‘ಉಪೋದ್ಘಾತ” ( ಮುನ್ನುಡಿ) ಬರೆದು ನನ್ನನ್ನು ಅನುಗ್ರಹಿಸಿದ್ದಾರೆ, ಉಪೋದ್ಘಾತವು ಆಂಗ್ಲ ಭಾಷೆಯಲ್ಲಿದ್ದು ಅದರ ಕನ್ನಡ ಅನುವಾದವನ್ನು ಇಲ್ಲಿ ನೀಡಲಾಗಿದೆ

ಈ ಕೃತಿಯು ದೇವೀ ಉಪಾಸಕರಿಗೆ ಸಹಕಾರಿಯಾದರೆ ನಾನು ಧನ್ಯ

ಉಪೋದ್ಘಾತ

ಶ್ರೀ ಗುರುಭ್ಯೋನಮಃ

ಲಲಿತೇವೇದಂ ಸರ್ವಂ

       ಕುಂಡಲಿ ಕುಮಾರಿ ಕುಟಿಲೇ ಚಂಡಿ ಚರಾಚರ ಸವಿತ್ರೀ ಚಾಮುಂಡೇ|

      ಗುಣಿನಿ ಗುಹಾರಿಣಿ ವಿದ್ಯೇ ಗುರುಮೂರ್ತೇ ತ್ವಾಂ ನಮಾಮಿ ಕಾಮಾಕ್ಷೀ||

            ಯಾ ಮಾತಾ ಮಧುಕೈಟಭಪ್ರಮಥಿನೀ ಯಾ ಮಾಹಿಷೋನ್ಮೂಲಿನೀ|

           ಯಾ ಧೂಮ್ರೇಕ್ಷಣಚಂಡಮುಂಡಮಥಿನೀ ಯಾ ರಕ್ತ ಬೀಜಾಶಿನೀ||

           ಶಕ್ತಿಃ ಶುಂಭನಿಶುಂಭದೈತ್ಯದಮನಿ ಯಾ ಸಿದ್ಧಲಕ್ಷ್ಮೀ ಪರಾ|

           ಸಾ ಚಂಡೀ ನವಕೋಟೀಶಕ್ತಿಸಹಿತಾ ಮಾಂ ಪಾತು ವಿಶ್ವೇಶ್ವರೀ||

 ಜಗಜ್ಜನನಿ, ಪರಬ್ರಹ್ಮಸ್ವರೂಪಿಣಿಯಾದ ಜಗನ್ಮಾತೆಯು ಧರ್ಮಸಂಸ್ಥಾಪನೆಗಾಗಿ ವಿವಿಧ ರೂಪಗಳಲ್ಲಿ ಪ್ರಕಟ ಆಗುತ್ತಲೇ ಇರುತ್ತಾಳೆ.

ಮಹಾಕಾಳಿ,ಮಹಾಲಕ್ಶ್ಮಿ,ಮಹಾಸರಸ್ವತಿಯರ ಸ್ಂಘಟಿತ ರೂಪವೇ ಐಕ್ಯರೂಪಿಣಿಯಾದ ಚಂಡಿ. ಪ್ರಾಚೀನದಿಂದಲೂಅವಳ ಸಂಪೂರ್ಣ ಅನುಗ್ರಹ ಪಡೆಯುವ ಅತ್ಯಂತ ಸುಲಭವಾದ ಮಾರ್ಗ ಸಪ್ತಶತೀ ಪಾರಾಯಣವೇ ಆಗಿದೆ.

              ಯಥಾ ವೇದೋ ಅನಾದಿರ್ಹಿ ತಥಾವತ್ ಸಪ್ತಶತೀ ಸ್ಮೃತಃ |                            ಭುವನೇಶ್ವರಿ ಸಂಹಿತೆ

 ದುರ್ಗೋಪಾಸನೆಯು ವೇದದಷ್ಟೇ ಪ್ರಾಚೀನ ಎಂಬುದು ಇದರಿಂದ ವೇದ್ಯವಾಗುತ್ತದೆ.

ದುರ್ಗಾಸಪ್ತಶತಿಯೂ ಕೂಡ ಶ್ರೀಮದ್ಭಗವದ್ಗೀತೆಯಂತೆ 700 ಶ್ಲೋಕಗಳನ್ನು ಹೊಂದಿದೆ. ದೇವೀ ಮಹಾತ್ಮೆ ಎಂತಲೂ ಕರೆಯಲ್ಪಡುವ ಈ ದುರ್ಗಾ ಸಪ್ತಶತಿಯಲ್ಲಿ ಮಾರ್ಕಂಡೇಯ ಪುರಾಣದ 13 ಅಧ್ಯಾಯಗಳಿವೆ, ಅಧ್ಯಾಯ 74 ರಿಂದ 86. ಋಷಿ ಮತ್ತು ದೇವತಾದಿಗಳಿಗೂ ಸಹ ಸಂಪೂರ್ಣವಾಗಿ ಗೋಚರವಾಗದ ಶಕ್ತಿ ಮತ್ತು ರಹಸ್ಯ ಒಳಗೊಂಡಿರುವ ಕಾರಣಕ್ಕಾಗಿ ಈ ಶ್ಲೋಕಗಳನ್ನು ಮಹಾಮಂತ್ರವೆಂದು ಪರಿಗಣಿಸಲಾಗಿದೆ.

ಚಂಡಿಪಾಠವು ’ಮಾರ್ಕಂಡೇಯಉವಾಚ’ಎನ್ನುವುದರಿಂದ  ಪ್ರಾರಂಭವಾಗಿ’ಸಾವರ್ಣಿರ್ಭವಿತಾಮನು’ಎನ್ನುವುದರೊಂದಿಗೆ ಮುಕ್ತಾಯವಾಗುತ್ತದೆ. ಹೀಗೆ ಮೊದಲ ಮತ್ತು ಕೊನೆಯ ಅಕ್ಷರ ಸೇರಿಸಿದರೆ ’ಮನು’, ಅರ್ಥಾತ್ ಮಂತ್ರ ಅಥವಾ ರಹಸ್ಯ ಎಂದಾಗುತ್ತದೆ. ಈ ಗ್ರಂಥವು ಪುರಾಣದ ಕತೆಯ ರೂಪದಲ್ಲಿದ್ದರೂ ಸಹ ಅಕ್ಷರ ಅಕ್ಷರಗಳಲ್ಲಿ ಶಕ್ತಿಯುತವಾದ ಮಂತ್ರ ಅಡಗಿದೆ. ಮೊದಲ ಶ್ಲೋಕದ ಮಂತ್ರವಿಭಾಗ ಮಾಡಿದಾಗ ಶಕ್ತಿಪ್ರಣವವಾದ ’ಹ್ರೀಂ’ಕಾರ ಆಗುತ್ತದೆ.

ತದಾ ತಾಂ ತಾರಮಿತ್ಯಾಹುರೋಮಾತ್ಮೇತಿ ಬಹುಶ್ರುತಾಃ

ತಾಮೇವ ಶಕ್ತಿಂ ಬ್ರುವತೇ ಹರೇಮಾತ್ಮೇತಿ ಚಾಪರೇ ||

                                  ಪ್ರಪಂಚಸಾರ-    ಶ್ರೀ ಶಂಕರ ಭಗವತ್ಪಾದರು.

ಓಂ’ಕಾರವು ಹೇಗೆ ಉಪಾಯಾತ್ಮಕವೋ’ಹ್ರೀಂ’ಕಾರ ಕೂಡ ಅಷ್ಟೇ ಉಪಾಯಾತ್ಮಕವೆಂದು ಸಾಧಕನಾದವನು ತಿಳಿದುಕೊಳ್ಳಬೇಕು. ದೇವಿ ಮಹಾತ್ಮೆಯ ಪಾರಾಯಣದಿಂದ ಬ್ರಹ್ಮವಿದ್ಯೆ ಪ್ರಾಪ್ತಿಆಗುತ್ತದೆ.

ಮಹಾಮಂತ್ರವೆಂದು ಪರಿಗಣಿಸಲ್ಪಟ್ಟ ಒಂಬತ್ತು ಅಕ್ಷರಗಳನ್ನೊಳಗೊಂಡ ನವಾಕ್ಷರಿ ಮಂತ್ರವೂ ಈ ಗ್ರಂಥಕ್ಕೆ ಸಂಬಂದಪಟ್ಟಿದ್ದು,ಎರಡೂ ಒಂದಕ್ಕೊಂದು ಪೂರಕವಾಗಿ ದೇವಿ ಚಂಡಿಯನ್ನು ಪರಬ್ರಹ್ಮಮಹಿಷಿ ಎಂದು ಸ್ತುತಿಸಿವೆ.ಅವಳು ಸಚ್ಚಿದಾನಂದ ಸ್ವರೂಪಿಣಿ. ಸರ್ವಶಕ್ತಳಾದ ಅವಳ ಅಧೀನದಲ್ಲಿರುವ ಎಲ್ಲಾ ದೇವದೇವತಾದಿಗಳೂ ಅವಳ ಅನುಜ್ಞೆಯನ್ನು ಪಾಲಿಸುತ್ತಾರೆ. (ಪೂಜ್ಯಶ್ರೀ್ ಪೂರ್ಣಾನಂದಾನಂಥರ ತಮಿಳಿನಲ್ಲಿ ರಚಿಸಿರುವ “ಚಂಡಿನವಾಕ್ಷರಿ ಮಂತ್ರಾರ್ಥಂ”)

700 ಶ್ಲೋಕಗಳನ್ನೊಳಗೊಂಡ ದೇವಿಮಹಾತ್ಮೆಯು ಮಧುಕೈಟಭ ವಧೆ, ಮಹಿಷಾಸುರ ವಧೆ, ಮತ್ತು ಶುಂಭ ನಿಶುಂಭರ ವಧೆಯ ಕಥೆಗಳನ್ನೊಳಗೊಂಡಿದೆ. ಈ ಗ್ರಂಥದಲ್ಲಿ ಚಂಡೀದೇವಿಯು ತಮಸ್ ,ರಜಸ್ ಮತ್ತು ಸತ್ವಗುಣಗಳಿಂದ ಕೂಡಿದ ಅವಳ ತ್ರಿಗುಣಾತ್ಮಕರೂಪವಾದ ದಶಭುಜಮಹಾಕಾಳೀ, ಅಷ್ಟಾದಶಭುಜ ಮಹಾಲಕ್ಶ್ಮಿ ಮತ್ತು ಅಷ್ಟಭುಜ ಮಹಾಸರಸ್ವತಿ ರೂಪದಲ್ಲಿ ಪ್ರಕಟವಾಗುತ್ತಾಳೆ. ಆದಾಗ್ಯೂ ಸಹ ಅವಳು ಪರಬ್ರಹ್ಮಸ್ವರೂಪಿಣಿಯೇ. ಆಗಿದ್ದಾಳೆ. ಏಳು ಸಂಸ್ಕ್ರತ ಭಾಷ್ಯಗಳು ಈ ಗ್ರಂಥದ ವ್ಯಾಕರಣ ,ಕಾವ್ಯ,ಗುಣಗೌರವ,ಮಂತ್ರಮಹತ್ವ, ಪ್ರಯೋಗವಿಧಿಗಳನ್ನು ವಿವರಿಸಿವೆ.

ಚಂಡೀ್ಪಾರಾಯಣದ ಮೊದಲು ಮತ್ತು ಕೊನೆಗೆ ಅನುಸರಿಸುವ ವಿಧಿ ವಿ್ಧಾನಗಳು ಗುರುಪರಂಪರೆಯಿಂದ ಗುರುಪರಂಪರೆಗೆ ಭಿನ್ನವಾಗಿರುವಂತೆ ಕಂಡರೂ ಎಲ್ಲ ಸಂಪ್ರದಾಯಗಳೂ ವಾಟಿಕಾಪುರ ನಿವಾಸಿ ಶ್ರೀ ಕೃಷ್ಣಶರ್ಮರ ‘ದುರ್ಗಾ ಮಹೋದಧಿ” ಗ್ರಂಥವನ್ನೇ ಅನುಸರಿಸಿವೆ ಎಂದರೆ ತಪ್ಪಲ್ಲಾ.  .ನಮ್ಮ ಗುರುಪರಂಪರೆಯ ಸಂಪ್ರದಾಯದ ಪ್ರಕಾರವೂ ಸಹಾ,  ಪಾರಾಯಣಕ್ಕೆ “ದುರ್ಗಾಮಹೋದಧಿ” ಗ್ರಂಥದ   ನಿರ್ಣಯಸಾಗರ ಮುದ್ರಣಾಲಯದಲ್ಲಿ 1917 ರಲ್ಲಿ ಮುದ್ರಣವಾಗಿರುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತೇವೆ.

ಈ ಗ್ರಂಥವು ಕವಚ, ಅರ್ಗಲಾ, ಕೀಲಕ, ಎಕಾದಶ ನ್ಯಾಸಗಳು,ರಾತ್ರಿಸೂಕ್ತ, ಮೂಲಮಂತ್ರ ಜಪ, ಅಧ್ಯಾಯಪಾರಾಯಣ, ದೇವಿಸೂಕ್ತ,ರಹಸ್ಯತ್ರಯಂ ಇವೆಲ್ಲವನ್ನೂ ಒಳಗೊಂಡಿದೆ. ಈ ಗ್ರಂಥದಲ್ಲಿ ನಮ್ಮ ಗುರುಪರಂಪರೆಯಲ್ಲಿ ಪಾಲಿಸುವ ಸಪ್ತಶತೀ ಮಹಾಯಂತ್ರ ಮತ್ತು ಚಂಡೀ ಆವರಣಗಳೂ ಇವೆ.

ದುರ್ಗಾತ್ ಸಂತ್ರಾಯತೇ ಯಸ್ಮಾದ್ ದೇವಿ ದುರ್ಗೇತಿ ಕಥ್ಯತೇ|

ಪ್ರಪದ್ಯೇ ಶರಣಂ ದೇವಿ ದುಂ ದುರ್ಗೇ ದುರಿತಂ ಹರ||

ಈ ಕಲಿಯುಗದಲ್ಲಿ ಜನರು ಸಾಮಾಜಿಕ ,ಆರ್ಥಿಕ,ಶಾರೀರಿಕ,ಮತ್ತು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೂ ಚಂಡೀಪಾರಾಯಣವೇ ರಾಮಬಾಣ,ಮತ್ತು ದಿವ್ಯೌಷಧವಾಗಿದೆ .”ಕಲೌ ಚಂಡೀ ವಿನಾಯಕೌ”

ಚಂಡೀಹೋಮ ಪದ್ಧತಿಯನ್ನು ಕ್ರೋಢೀಕರಿಸುವ ಕಾರ್ಯವನ್ನು ನನ್ನ ಪತಿದೇವರಾದ ಶ್ರೀವಿದ್ಯಾ ಮಾರ್ತಾಂಡ ಶ್ರೀ ಪರಾನಂದಾನಥರು ಮತ್ತು ಶ್ರೀ  ಚಿದಾನಂದರ ಶಿಷ್ಯರಾದ ಶ್ರೀ ಅನಂತಾನಂದನಾಥರು ಬಹಳ ಹಿಂದೆಯೇ ಗುಹಾನಂದಮಂಡಲಿಗೆ ಒಪ್ಪಿಸಿದ್ದರು. ಈ ಹವನ ಪದ್ಧತಿಯನ್ನು ದಕ್ಷಿಣಭಾರತದಲ್ಲಿ ವ್ಯಾಪಕವಾಗಿ ಅನುಸರಿಸಲಾಗುತ್ತದೆ. ಶ್ರೀ ಪರಾನಂದನಾಥರು ಈ ಗ್ರಂಥದ ಸಹಾಯದಿಂದ ಬಹಳಷ್ಟು ಜನರಿಗೆ ಅಸಾಧ್ಯವಾದುದನ್ನೂ ಸಾಧಿಸಲು ಸಹಾಯ ಮಾಡಿದ್ದಾರೆ. ’ಚಂಡಿ’ ಅವರ ಇಷ್ಟದೇವತೆ. ಅದನ್ನೇ ನಾವೂ ಅನುಸರಿಸುತ್ತಿದ್ದೇವೆ.

ಶ್ರೀ ಜೆ.ಎಸ್.ಡಿ ಪಾಣಿ(ಆತ್ಮಾನಂದನಾಥ) ಅವರು ಪವಿತ್ರವಾದ ಈ ಗ್ರಂಥವನ್ನು ಮೂಲಕೃತಿಗೆ ಯಾವುದೇ ವ್ಯತ್ಯಯ ಇಲ್ಲದೇ ಸಂಪ್ರದಾಯಕ್ಕೆ ಅನುಗುಣವಾಗಿ ಕನ್ನಡಕ್ಕೆ ಲಿಪ್ಯಂತರಿಸಿ ಆಸ್ತಿಕ ಜನರಿಗೆ ಬಹಳ ದೊಡ್ಡ ಸೇವೆಯನ್ನು ಮಾಡಿದ್ದಾರೆ. ಇಹಪರದ ಸಾಧನೆಗೆ ಮತ್ತು ಬ್ರಹ್ಮಾನುಭೂತಿಗೆ ಚಂಡಿಪಾರಾಯಣದ ಸರಿಯಾದ ಕ್ರಮ ತಿಳಿಯುವುದು ಒಂದು ವರವೇ ಆಗಿದೆ. ಆದಿಗುರು ಸದಾಶಿವನಿಂದ ಪ್ರಾರಂಭಗೊಂಡು ಅವಿಚ್ಚಿನ್ನವಾಗಿ ಹರಿದು ಬಂದಿರುವ ಗುರು ಪರಂಪರೆಯ ಸಮರ್ಥಗುರುವಿನ ಮುಖಾಂತರ ಉಪಾಸನಾ ದೀಕ್ಷೆಯನ್ನು ಪಡೆದು ಶ್ರೀ ಗುರುವಿನ ಮಾರ್ಗದರ್ಶನದಂತೆ ಪಾರಾಯಣ ಮಾಡುವುದು ಬಹಳ ಮುಖ್ಯ.

ಶ್ರೀ ಪರಾನಂದಗ್ರಂಥಮಾಲೆಯಿಂದ ಈ ಎರಡನೇ ಪುಷ್ಪವನ್ನು ಹೊರತರುತ್ತಿರುವ ಶ್ರೀ ಜೆ.ಎಸ್.ಡಿ ಪಾಣಿಯವರಿಗೆ  (ಆತ್ಮಾನಂದನಾಥ) ಗುರುಮಂಡಲದ ಮತ್ತು ನನ್ನ ಸಂಪೂರ್ಣ ಅನುಗ್ರಹ ಇದೆ .ಉಪಾಸಕರಿಗೆ ಮತ್ತು ಸರ್ವರಿಗೂ  ಉಪಯೋಗವಾಗುವಂತಹ ಈ ರೀತಿ ಗ್ರಂಥಗಳು ಅವರಿಂದ ಹೆಚ್ಚುಹೆಚ್ಚು ಬೆಳಕಿಗೆ ಬರಲಿ ಎಂದು ಆಶಿಸುತ್ತೇವೆ.

ಅನಘಾ ಪುತ್ತೂರು                                            ಗುರುಚರಣರೇಣು

ಚೆನ್ನೈ                                                              ಪರಾಂಬ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: