ಅಂಬಾ ಮೋಹಿನಿ ದೇವತಾ ತ್ರಿಭುವನೀ ಆನಂದಸಂದಾಯಿನೀ
ವಾಣೀ ಪಲ್ಲವಪಾಣಿ ವೇಣುಮುರಲೀಗಾನಪ್ರಿಯಾ ಲೋಲನೀ
ಕಲ್ಯಾಣೀ ಉಡುರಾಜಬಿಂಬವದನಾ ಧೂಮ್ರಾಕ್ಷಸಂಹಾರಿಣೀ
ಚಿದ್ರೂಪೀ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ
ತಾಯೀ, ಮೋಹಿನಿ ಅಂದ ಕ್ಷಣ ನೆನಪಿಗೆ ಬರುವುದು ಸಾಗರಮಥನಕಾಲದಲ್ಲಿ ವಿಷ್ಣು ವಿನ ಮೋಹಿನೀ ರೂಪ, ಭಸ್ಮಾಸುರನ ಸಂಹಾರಕ್ಕೆ ಅವತರಿಸಿದ ಮೋಹಿನೀ ರೂಪ. ಬ್ರಹ್ಮ ಪುರಾಣ ಹೇಳುವಂತೆ ಸೃಷ್ಟಿಕರ್ತ ಬ್ರಹ್ಮ ಧ್ಯಾನದಲ್ಲಿ ಕುಳಿತಾಗ ಮೊದಲು ಪ್ರಕೃತಿಯ ರೂಪದಲ್ಲಿ ಶಕ್ತಿಯ ದರ್ಶನ ಆಯಿತಂತೆ ನಂತರ ದರ್ಶನ ಆಗಿದ್ದೇ ಎಲ್ಲರನ್ನೂ ಮೋಹಿತಗೊಳಿಸಿದ ಮೋಹಿನಿ ರೂಪವಂತೆ. ಲಲಿತಾ ಸಹಸ್ರನಾಮದ 703 ನೇ ನಾಮ ಸರ್ವಮೋಹಿನಿ. 954 ನೇ ನಾಮ ಶಂಭುಮೋಹಿನಿ. ತಾಯಿಯ ಮೋಹಿನೀ ರೂಪಕ್ಕೆ ಶಿವನೇ ಮೋಹಿತನಾದನಂತೆ. ದೇವತಾ ತ್ರಿಭುವನೀ ಮೂರು ಲೋಕಗಳಿಗೆ ಗಳಿಗೆ, ಸ್ವರ್ಗ, ಮರ್ತ್ಯ ಪಾತಾಳ ಗಳಿಗೆ ದೇವತೆ. ಜಾಗ್ರತ್ ಸ್ವಪ್ನ ಸುಷುಪ್ತಾವಸ್ತೆಯ ಮೂರು ಅವಸ್ಥೆಗಳೂ ಮೂರು ಲೋಕಗಳೇ. ಆನಂದ ದಾಯಿನಿ. ಆನಂದವನ್ನು ನೀಡುತ್ತಿರುವವಳು.