ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಜ್ಯೋತಿಷ್ಯ ವೇದಿಕೆ
ಜ್ಯೋತಿಷ್ಯ ಶಾಸ್ತ್ರವನ್ನು ತಮ್ಮ ಸ್ವಾರ್ಥಕ್ಕಾಗಿ ಇಷ್ಟೊಂದು ರೀತಿಯಲ್ಲಿ ದುರುಪಯೋಗ ಪಡಿಸಿಕೊಂಡಿರುವುದು, ಭಾರತದ ಇತಿಹಾಸದಲ್ಲೇ ಮೊದಲಬಾರಿಯೇನೋ ಎಂದು ಎನಿಸಿದರೆ ತಪ್ಪಲ್ಲ. ಸಾಮಾನ್ಯ ಜನರನ್ನು ಮೋಸಗೊಳಿಸಲು, ಹಲವು ನಡೆಗಳು, ವೇಷಭೂಷಣಗಳು. ಜ್ಯೋತಿಷ್ಯ ಪಾಠ ಮಾಡುವ ನೆಪದಲ್ಲಿ ಜನರನ್ನು ಸೆಳೆಯುವುದೂ ಒಂದು ವಿಧಾನ. ಜ್ಯೋತಿಷ್ಯ ಶಾಸ್ತ್ರಕ್ಕೆ ಹೈಯರ್ ಅಸ್ಟ್ರಾಲಜಿ, ಸೂಪರ್ ಅಸ್ಟ್ರಾಲಜಿ ಅಂತಹ ವಿಚಿತ್ರವಾದ ಗುಣವಾಚಕಗಳನ್ನು ಸೇರಿಸಿ ಜನರನ್ನು ಮರುಳು ಮಾಡುತ್ತಿರುವುದು ಇತ್ತೀಚಿಗೆ ಹುಟ್ಟಿಕೊಂಡಿರುವ ಅತೀ ಬುದ್ದಿವಂತರ ವರಸೆಯಾಗಿದೆ. ಈ ಮನುಷ್ಯ ಏನನ್ನೋ ಹೊಸದಾಗಿ ಹೇಳುತ್ತಾನೆ ಎಂದು ಭ್ರಮೆ ಹುಟ್ಟಿಸುವ ನಾಟಕ.. ಒಬ್ಬ ವ್ಯಕ್ತಿ ಸಕಲ ಸಂಪತ್ತುಗಳನ್ನು, ಸಕಲ ವೈಭೋಗಗಳನ್ನು ಬಯಸುವುದು ತಪ್ಪಲ್ಲ , ಅದನ್ನು ಪಡೆಯುವುದೂ ತಪ್ಪಲ್ಲ. ಅದಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಮೂಲಕ, ಅತಿ ವೆಚ್ಚದ ಶಾಂತಿ ಕರ್ಮಗಳನ್ನು ಮಾಡಿಸುವ ಮೂಲಕ ಸಾಮಾನ್ಯ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುವುದು ಸಮಾಜ ದ್ರೋಹ ಎಂದರೆ ತಪ್ಪಾಗಲಾರದು.
ನನ್ನನ್ನು ಕಾಡುವ ಇನ್ನೊಂದು ಪ್ರಶ್ನೆ ಎಂದರೆ, ಒಂದೆರಡು ವರ್ಷಗಳ ಹಿಂದೆ ಜ್ಯೋತಿಷ್ಯವೇ ಗೊತ್ತಿಲ್ಲದ ವ್ಯಕ್ತಿಗಳು, ಜ್ಯೋತಿಷ್ಯದ ಗುರುಗಳಾಗಿ ತಮ್ಮನ್ನು ಬಿಂಬಿಸಿಕೊಳ್ಳುವುದು ಜ್ಯೋತಿಷ್ಯ ಶಾಸ್ತ್ರಕ್ಕೆ, ಮತ್ತು ಗುರು ಎನ್ನುವ ತತ್ವಕ್ಕೆ ಎಸಗುವ ದ್ರೋಹ ಎನ್ನಬಹುದೇ?
ಇಂತಹುಗಳ ವಿರುದ್ಧ ದನಿ ಎತ್ತುವುದು, ಜನಾಭಿಪ್ರಾಯ ಮೂಡಿಸುವುದು ಮತ್ತು ಜ್ಯೋತಿಷ್ಯದ ಬಗ್ಗೆ ಸಾಮಾನ್ಯ ಜನರಿಗೆ ತಿಳಿವಳಿಕೆ ಕೊಡುವ ಸಲುವಾಗಿ ಆರಂಭಿಸಿರುವ ಚಳುವಳಿ ಈ ’ ಜ್ಯೋತಿಷ್ಯ ವೇದಿಕೆ”
ಜ್ಯೋತಿಷ್ಯಾಸಕ್ತರು, ಜ್ಯೋತಿಷ್ಯದ ಆರಂಭ ಪಾಠಗಳನ್ನು ಭೋದಿಸುವ ಪುಸ್ತಕಗಳನ್ನು ಕೊಂಡು, ಅಭ್ಯಾಸ ಮಾಡಿ, ಹಾಗೆ ಮಾಡುವಾಗ ತಮಗೆ ಬರಬಹುದಾದ ಸಂದೇಹಗಳನ್ನು, ಈ ಬ್ಲಾಗ್ ನ ಕಾ ಮೆಂಟ್ ಬಾಕ್ಸ್ ನಲ್ಲಿ ಹಾಕಿದರೆ, ಆ ಸಂದೇಹಗಳನ್ನು ನಿವಾರಿಸುವ ಪ್ರಯತ್ನ ಮಾಡಲಾಗುತ್ತದೆ.
ಆ ಮೂಲಕ ಜ್ಯೋತಿಷ್ಯ ಕಲಿಯುವ ಪ್ರಕ್ರಿಯೆ ಸುಲಭ ವಾಗುತ್ತದೆ. ಜ್ಯೋತಿಷ್ಯ ಕಲಿಯುವರೇ ಅಲ್ಲದೆ ಈ ಬಗ್ಗೆ ಆಸಕ್ತಿ ಇರುವವರು ಸಹಾ ತಮ್ಮ ಸಂದೇಹಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿದರೆ ಇದರಿಂದ ಮಿಕ್ಕ ಆಸಕ್ತರಿಗೂ ಅನುಕೂಲ ಆಗುತ್ತದೆ .
ಜ್ಯೋತಿಷ್ಯದ ಹೆಸರಿನಲ್ಲಿ ಮುಗ್ಧಜನತೆಯನ್ನು ದೋಚುವುದರ ವಿರುದ್ಧ ಇದು ಒಂದು ಅಭಿಯಾನವಾಗುತ್ತದೆ.
ಈ ಅಭಿಯಾನಕ್ಕೆ ನನ್ನೊಂದಿಗೆ ಕೈ ಜೋಡಿಸಿ ಎಂದು ವಿನಂತಿಸುತ್ತಾ , ಡಾ ಬಿ ವಿ ರಾಮನ್ ಅವರ “ Astrology for beginners ‘ ಪುಸ್ತಕ ಹಾಗೂ “ BRIHAT PARASHARA HORA SHASTRA” ಇಂಗ್ಲಿಷ ಅವತರಿಣೆಕೆಯೆ ಸಾಫ್ಟ್ ಪ್ರತಿಯನ್ನು ಇಲ್ಲಿ ನೀಡಲಾಗಿದ್ದು ಆಸಕ್ತರು ಡೌನ್ಲೋಡ್ ಮಾಡಿಕೊಂಡು ಅಭ್ಯಸಿಸಬಹುದು. ಈ ಪುಸ್ತಕಗಳ ಕನ್ನಡ ಅವತರಿಣಿಕೆ ನನ್ನ ಬಳಿ ಸಾಫ್ಟ್ ಪ್ರತಿಯಲ್ಲಿ ಇಲ್ಲದ ಕಾರಣ ಕನ್ನಡದಲ್ಲೇ ಅಭ್ಯಾಸ ಮಾಡುವ ಇಚ್ಚೆಯುಳ್ಳವರು ಈ ಪುಸ್ತಕಗಳನ್ನು ಮಾರುಕಟ್ಟೆಯಲ್ಲಿ ಖರೀದಿಸಬಹುದಾಗಿದೆ.
ಈ ಅಭಿಯಾನ ತನ್ನ ಗುರಿಮುಟ್ಟಲು ನಿಮ್ಮೆಲ್ಲರ ಸಹಕಾರದಿಂದ ಮಾತ್ರ ಸಾಧ್ಯ ಎಂದು ಹೇಳುತ್ತಾ “ಜ್ಯೋತಿಷ್ಯ ವೇದಿಕೆ” ಯ ಮೊದಲ ಲೇಖನವನ್ನು ಸಂಪನ್ನಗೊಳಿಸುತ್ತಿದ್ದೇನೆ.
Astrology For Beginners BVRaman_text
Brihat parashara Hora shastra English