ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ನನ್ನ ಪರಮೇಷ್ಠಿ ಗುರುಗಳು ಶ್ರೀ ಚಿದಾನಂದ ನಾಥರು, 1938 ರಲ್ಲಿ ಸಂಕಲಿಸಿದ, ’ ಶ್ರೀ ವಿದ್ಯಾ ಸಪರ್ಯಾ ಪದ್ಧತಿ” ಯ ಸಂಸ್ಕೃತ ಅವತರಿಣಿಕೆಯ ಕನ್ನಡ ಲಿಪ್ಯಂತರ ” ಶ್ರೀ ಚಕ್ರಾರ್ಚನ ಚಂದ್ರಿಕಾ” ಅದ್ರಿತಿ ಪಬ್ಲಿಕೇಶನ್ಸ್ ಬೆಂಗಳೂರು ಇವರಿಂದ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ.
ಈ ಪುಸ್ತಕವು ಶ್ರೀ ಚಕ್ರಪೂಜೆಯ ಪಾರಂಪರಿಕ ಹಾಗೂ ಅಧಿಕೃತ ಪೂಜಾವಿಧಾನವನ್ನು ಒಳಗೊಂಡಿದೆ.
ಹಲವು ದಶಕಗಳಿಂದ ಶ್ರೀ ಕಂಚಿ ಕಾಮಾಕ್ಷಿ ಅಮ್ಮನವರ ದೇಗುಲದಲ್ಲಿ ಶ್ರೀ ಚಕ್ರ ಪೂಜೆಯು ಕಾರಣಾಂತರಗಳಿಂದ ನಿಂತು ಹೋಗಿದ್ದು, ಗುಹಾನಂದ ಮಂಡಳಿಯ ಸಂಸ್ಥಾಪಕರಾದ ನನ್ನ ಪರಮೇಷ್ಠಿ ಗುರುಗಳು ಶ್ರೀ ಚಿದಾನಂದ ನಾಥರು ರಕ್ತಾಕ್ಷಿ ನಾಮ ಸಂವತ್ಸರದ ಅಶ್ವಯುಜ ಹುಣ್ಣೆಮೆಯಂದು ( 12-10-1924) ರಂದು ಪುನಃ ಪ್ರಾರಂಭಿಸಿದ್ದು, ಕಾಮಾಕ್ಷಿ ಅಮ್ಮನವರ ದೇವಸ್ಥಾನದಲ್ಲಿ ದಾಖಲಾಗಿದೆ. ಇಂದಿಗೂ ಈ ಪರಂಪರೆಯ ಶ್ರೀ ವಿದ್ಯಾ ಉಪಾಸಕರೇ ಕಾಮಾಕ್ಷಿ ಅಮ್ಮನವರ ಅರ್ಚಕರಾಗಿದ್ದು, ಈ ಶ್ರೀ ವಿದ್ಯಾ ಸಪರ್ಯಾ ಪದ್ಧತಿಯ ಪೂಜಾವಿಧಾನವನ್ನೇ ಅನುಸರಿಸಲಾಗುತ್ತಿದೆ.
ಇಂತಹ ಒಂದು ಅಧಿಕೃತ ಹಾಗೂ ಪಾರಂಪರಿಕ ಶ್ರೀ ಚಕ್ರ ಪೂಜೆಯ ವಿಧಾನವು ಕನ್ನಡ ಭಾಷೆಯಲ್ಲಿ ಪ್ರಕಟವಾಗುವ ಮೂಲಕ ಕನ್ನಡ ಬಲ್ಲ ಶ್ರೀ ವಿದ್ಯೋ ಪಾಸಕರಿಗೆ, ಶ್ರೀ ಚಕ್ರಾರಾಧಕರಿಗೆ ಯಾವುದೇ ಅನುಮಾನಗಳಿಗೆ ಎಡೆಗೊಡದೆ ಶ್ರೀ ಚಕ್ರ ಪೂಜೆಯನ್ನು ಶಾಸ್ತ್ರೋಕ್ತವಾಗಿ ಮಾಡಲು ಈ ಪುಸ್ತಕ ಅನುವು ಮಾಡಿ ಕೊಡುತ್ತದೆ.
ಶ್ರೀ ಷೋಡಶೀ ಮತ್ತು ಮಹಾ ಷೋಡಶೀ ಉಪಾಸಕರ ಅನುಕೂಲಕ್ಕಾಗಿ ಶ್ರೀ ತ್ರೈಲೋಕ್ಯ ಮೋಹನ ಕವಚವನ್ನು ಅನುಬಂಧ ದಲ್ಲಿ ಸೇರಿಸಲಾಗಿದೆಯಲ್ಲದೆ, ಶ್ರೀ ಭಾಸ್ಕರಮಖೀನ್ ಅವರ ಶಿಷ್ಯರಾದ ಶ್ರೀ ಉಮಾನಂದನಾಥರ ’ ನಿತ್ಯೋತ್ಸವ” ದಿಂದ ಲಘು ಷೋಢಾ ನ್ಯಾಸ ಮತ್ತು ಮಹಾ ಷೋಢಾ ನ್ಯಾಸವನ್ನೂ ಸಹಾ ಅನುಬಂಧದಲ್ಲಿ ಸೇರಿಸಲಾಗಿದೆ. ಶ್ರೀ ಚಿದಾನಂದನಾಥರ ’ಶ್ರೀ ವಿದ್ಯಾ ನಿತ್ಯಾಹ್ನಿಕ ಮತ್ತು ಅವರ ಶಿಷ್ಯರಾದ ಶ್ರೀ ರಾಮಮೂರ್ತಿ ಅವರಿಂದ ಸಂಕಲಿತ ” ಶ್ರೀ ವಿದ್ಯಾರ್ಚನ ದೀಪಿಕಾ” ವನ್ನು ಆಧರಿಸಿದ ‘ ಆಮ್ನಾಯ ಪಕರಣವನ್ನು ” ಸಹಾ ಪರಿಶಿಷ್ಟದಲ್ಲಿ ಸೇರಿಸಿದ್ದು ಆಮ್ನಾಯ ದೇವತೆಗಳ ಆರಾಧನೆ ಮಾಡುವ ಇಚ್ಚೆಯುಳ್ಳ ಶ್ರೀ ವಿದ್ಯಾ ಉಪಾಸಕರಿಗೆ ಕನ್ನಡದಲ್ಲಿ ಒಂದು ಅಧಿಕೃತ ಮತ್ತು ಪಾರಂಪರಿಕ ಪೂಜಾವಿಧಾನ ದೊರಕಿದಂತಾಗುತ್ತದೆ. ಇದಲ್ಲದೆ ಶ್ರೀ ಚಿದಾನಂದ ನಾಥರ ” ಶ್ರೀ ವಿದ್ಯಾ ಸಪರ್ಯಾ ವಾಸನೆ ” ಎನ್ನುವ ಗ್ರಂಥದಿಂದ ಆಯ್ದು , ಶ್ರೀ ಚಕ್ರಾರ್ಚನೆಯ ವಿವರಗಳನ್ನೂ ಮತ್ತು ಸೂಚನೆಗಳು ಬೇಕಿದ್ದೆಡೆ ಸೂಚನೆಗಳನ್ನೂ ನೀಡಲಾಗಿದ್ದು, ಯಾವುದೇ ಅನುಮಾನ ಗೊಂದಲಗಳಿಗೆ ಒಳಗಾಗದೆ ಶ್ರೀ ಚಕ್ರಾರ್ಚನೆ ಮಾಡಬಹುದಾಗಿದೆ.
ಎಲ್ಲಕ್ಕಿಂತ ಮಿಗಿಲಾಗಿ, ಶ್ರೀ ವಿದ್ಯಾ ಮಂತ್ರಗಳ ಉಪದೇಶವಿಲ್ಲದ ದೇವೀ ಆರಾಧಕರು ಸಹಾ ತಮ್ಮ ಮನೆಗಳಲ್ಲಿ , ದೇವಸ್ಥಾನಗಳಲ್ಲಿ ಶ್ರೀ ಚಕ್ರವನ್ನಿಟ್ಟು ಪೂಜಿಸುತ್ತಿರುವುದು ಸಾಮಾನ್ಯವಾಗಿದೆ. ಅಂತಹ ದೇವೀ ಭಕ್ತರ ಅನುಕೂಲಕ್ಕಾಗಿ ಶ್ರೀ ಚಕ್ರ ಲಘು/ ಸುಲಭ ಪೂಜಾವಿಧಾನವನ್ನೂ ಸಹಾ ಪರಿಶಿಷ್ಟದಲ್ಲಿ ಸೇರಿಸಲಾಗಿದ್ದು, ಇಂತಹ ದೇವೀಭಕ್ತರಿಗೆ ಶ್ರೀ ಚಕ್ರಪೂಜೆಯನ್ನು ಮಾಡಲು ಅವಕಾಶವಾಗಲಿದೆ.
ಪುಸ್ತಕ ಪ್ರಕಟವಾಗುವ ಮೊದಲು , ಈ ಪುಸ್ತಕ ದೊರೆಯುವ ಸ್ಥಳ, ಬೆಲೆ ಇವೆಲ್ಲವುಗಳ ವಿವರವನ್ನು ಇದೇ ಬ್ಲಾಗ್ ನ ಮೂಲಕ ತಿಳಿಸಲಾಗುತ್ತದೆ.
ಗುರುಮಂಡಲ ಸಂಪೂರ್ಣ ಅನುಗ್ರಹ ಪ್ರಾಪ್ತಿರಸ್ತು