ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಅತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ಶ್ರೀ ಶಂಕರ ಭಗವತ್ಪಾದಾಚಾರ್ಯರ ಶ್ರೀ ಲಲಿತಾ ತ್ರಿಶತಿಯ ಭಾಷ್ಯವನ್ನು ಕನ್ನಡದಲ್ಲಿ ವಿವರಿಸುವ ಒಂದು ವಿನಮ್ರ ಪ್ರಯತ್ನ ಇದಾಗಿದೆ. ಈ ನಾಮಗಳಿಗೆ ವಿವರಣೆ ನೀಡುವಾಗ ಶ್ರೀ ಶಂಕರ ಭಾಷ್ಯವಲ್ಲದೆ ಹಲವಾರು ಮೂಲಗಳಿಂದ ಸಂಗ್ರಹಿಸಿರುವ ವಿವರಣೆಯನ್ನೂ ಮತ್ತು ತ್ರಿಶತೀ ನಾಮಗಳಿಗೆ ಸಮಾನಾಂತರಾವಾದ ಶ್ರೀ ಲಲಿತಾ ಸಹಸ್ರನಾಮದಲ್ಲಿನ ನಾಮಗಳಿಗೆ ಶ್ರೀ ಭಾಸ್ಕರಮಖೀನ್ ಅವರು ನೀಡಿರುವ ಭಾಷ್ಯವನ್ನು ಸಹಾ ನೀಡಲು ಪ್ರಯತ್ನಿಸಿದ್ದೇನೆ. ಅಲ್ಲದೆ ಶ್ರೀ ಶಂಕರ ಭಗವತ್ಪಾದಾಚಾರ್ಯರು, ತಮ್ಮ ಭಾಷ್ಯದಲ್ಲಿ ಉದಹರಿಸಿರುವ ಉಪನಿಷದ್ ವಾಕ್ಯಗಳಿಗೆ ಅವರದೇ ಆದ ಭಾಷ್ಯದ ವಿವರಣೆಯನ್ನು ನೀಡುವ ಪ್ರಯತ್ನವನ್ನೂ ಮಾಡಿದ್ದೇನೆ. ಇವೆಲ್ಲವೂ ಶ್ರೀ ಗುರುಮಂಡಲದ ಅನುಗ್ರಹದೊಂದಿಗೆ ಮಾತ್ರ ಸಾಧ್ಯವೇ ಹೊರತು ಇಲ್ಲಿ ನನ್ನ ಪಾತ್ರವೇನೂ ಇಲ್ಲಾ ಎಂಬುದನ್ನು ಸಹಾ ತಿಳಿಸುತ್ತಿದ್ದೇನೆ. ಒಂದೇ ಒಂದು ಅಕ್ಷರವನ್ನು ನುಡಿಯಬೇಕಾದರೂ ಅದು ಗುರುಮಂಡಲರೂಪಿಣಿ ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಭಿಕ್ಷೆಯೇ ಅಲ್ಲದೆ ಮತ್ತೇನೂ ಆಗಿರಲು ಸಾಧ್ಯವಿಲ್ಲಾ.
ಈ ಸಂದರ್ಭದಲ್ಲಿ ಬರ್ಹ್ಮೀಭೂತ ಸ್ವಾಮಿನಿ ಸ್ವಾತ್ಮಾಬೊಧಾನಂದ ಸರಸ್ವತಿ ಅವರ ಸ್ಮರಣೆಯನ್ನು ಮಾಡಲೇ ಬೇಕಾದ್ದು ನನ್ನ ಆದ್ಯ ಕರ್ತವ್ಯವಾಗಿದೆ. ಸ್ವಾಮಿನಿಯು ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸಮಾಡಿ ಎಂ ಏ. ಸ್ನಾತಕೋತ್ತರ ಪದವಿಯನ್ನು ಪಡೆದವರು. ಅರ್ಷವಿದ್ಯಾ ಕುಲದ ಸಂಸ್ಥಾಪಕರಾದ ಸ್ವಾಮಿ ದಯಾನಂದ ಸರಸ್ವತಿಯವರಿಂದ ಸನ್ಯಾಸ ದೀಕ್ಷೆ ಪಡೆದು ಅರ್ಷವಿದ್ಯಾ ವಿದ್ಯಾಕುಲದ ಬೆಂಗಳೂರು ಶಾಖೆಯನ್ನು ನಿರ್ವಹಿಸಿದವರು. ಅವರು ಬ್ರಹ್ಮೀಭೂತರಾಗುವ ಕೆಲವೇ ದಿನಗಳ ಮೊದಲು ಶ್ರೀ ಶಂಕರ ಭಗವತ್ಪಾದರ ಶ್ರೀ ಲಲಿತಾ ತ್ರಿಶತಿ ಭಾಷ್ಯದ ಜ಼ೀರಾಕ್ಸ್ ಪ್ರತಿಯನ್ನು ಸ್ಪೈರಲ್ ಬೈಂಡ್ ಮಾಡಿ ನನಗೆ ಕಳಿಸಿ, ಇದರ ಕನ್ನಡ ವ್ಯಾಖ್ಯಾನ ಮಾಡುವಂತೆ ಹಾಗೂ ಅದನ್ನು ಪುಸ್ತಕರೂಪದಲ್ಲಿ ಹೊರತರಬೇಕೆಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಅವರ ಆಶಯದ ಫಲವೇ ಈ ನನ್ನ ವಿನಮ್ರ ಪ್ರಯತ್ನ. ಸ್ವಾಮಿನಿಯವರ ಫ಼ೋಟೊ ಸಹಾ ಇಲ್ಲಿದೆ.
ಸ್ವಾಮಿ ದಯಾನಂದ ಸರಸ್ವತಿ ಯವರ ಮತ್ತು ನನ್ನ ಶ್ರೀ ವಿದ್ಯಾಗುರುಗಳಾದ ಶ್ರೀ ಪರಾನಂದನಾಥರ ನಡುವಿನ ಬಾಂಧವ್ಯದ ಬಗ್ಗೆಈ ಬ್ಲಾಗಿನಲ್ಲಿ ಗುರುಪರಂಪರೆಯ ವಿವರ ನೀಡುವಾಗ ಬರೆದಿದ್ದೇನೆ.
ಪ್ರತಿಯೊಂದು ಭಾಗದ ಯುಟ್ಯೂಬ್ ವಿಡಿಯೋ ವನ್ನು ಮತ್ತು ಆ ಭಾಗದ ಶ್ರೀ ಶಂಕರರ ಸಂಸ್ಕೃತ ಭಾಷೆಯ ಭಾಷ್ಯವನ್ನು ಸಹಾ ಲಗತ್ತಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ವಿಡಿಯೋ ಗಳನ್ನು ಅಕ್ಷರರೂಪದಲ್ಲಿ / ಪುಸ್ತಕದ ರೂಪದಲ್ಲಿ ಹೊರತರುವ ಆಸೆ ಇದೆ. ಅದು ತಾಯಿಯ ಕೃಪೆಯಿಂದ ಮಾತ್ರವೇ ಆಗುವಂತಹುದು.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ