ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
I REQUEST THE READERS TO KINDLY TRANSLATE THIS TO ENGLISH SO THAT IT WILL REACH MORE PEOPLE.
ಶ್ರೀ ರುದ್ರದ 6 ನೇ ಅನುವಾಕವು 15 ಮಂತ್ರಗಳನ್ನು ಹೊಂದಿದೆ. ಈ ಮಂತ್ರಗಳನ್ನು ಒಂದು ಬಾರಿ ಹೇಳಿ ನಂತರ ಒಂದೊಂದು ಮಂತ್ರಕ್ಕೆ ವಿವರಣೆಯನ್ನು ನೋಡೋಣ. ನಮೋ” ಜ್ಯೇಷ್ಠಾಯ’ ಚ ಕನಿಷ್ಠಾಯ’ ಚ ನಮಃ’ ಪೂರ್ವಜಾಯ’ ಚಾಪರಜಾಯ’ ಚ ನಮೋ’ ಮಧ್ಯಮಾಯ’ ಚಾಪಗಲ್ಭಾಯ’ ಚ
ನಮೋ’ ಜಘನ್ಯಾ’ಯ ಚ ಬುಧ್ನಿ’ಯಾಯ ಚ ನಮಃ’ ಸೋಭ್ಯಾ’ಯ ಚ ಪ್ರತಿಸರ್ಯಾ’ಯ ಚ ನಮೋ ಯಾಮ್ಯಾ’ಯ ಚಕ್ಷೇಮ್ಯಾ’ಯ ಚ
ನಮ’ ಉರ್ವರ್ಯಾ’ಯ ಚ ಖಲ್ಯಾ’ಯ ಚ ನಮಃ ಶ್ಲೋಕ್ಯಾ’ಯ ಚಾஉವಸಾನ್ಯಾ’ಯ ಚ ನಮೋ ವನ್ಯಾ’ಯ ಚ ಕಕ್ಷ್ಯಾ’ಯ ಚ ನಮಃ’ ಶ್ರವಾಯ’ ಚಪ್ರತಿಶ್ರವಾಯ’ ಚ ನಮ’ ಆಶುಷೇ’ಣಾಯ ಚಾಶುರ’ಥಾಯ ಚ ನಮಃ ಶೂರಾ’ಯ ಚಾವಭಿಂದತೇ ಚ ನಮೋ’ ವರ್ಮಿಣೇ’ ಚ ವರೂಧಿನೇ’ ಚ ನಮೋ’ ಬಿಲ್ಮಿನೇ’ ಚ ಕವಚಿನೇ’ ಚ ನಮಃ’ ಶ್ರುತಾಯ’ ಚ ಶ್ರುತಸೇ’ನಾಯ ಚ || 6 ||
ಈ ಮಂತ್ರಗಳು ಆತ್ಮ ಮತ್ತು ಅದರ ಸರ್ವವ್ಯಾಪಿತ್ವವನ್ನು ಹೇಳುತ್ತವೆ.
ಈಗ ಮೊದಲನೇ ಮಂತ್ರ:
ನಮೋ ಜ್ಯೇಷ್ಟಾಯ ಚ ಕನಿಷ್ಟಾಯ ಚ
ಜ್ಯೇಷ್ಟ ನೂ ಆದ ಮತ್ತು ಕನಿಷ್ಟ ನೂ ಆದ ರುದ್ರನೇ ನಿನಗೆ ನಮಸ್ಕಾರಗಳು.
ರುದ್ರನು ಕಾಲಾತೀತನು, ದೇಶಾತೀತನು. ಇದನ್ನು ಮತ್ತೆ ಮತ್ತೆ ಹೇಳಲಾಗಿದೆ. ಬ್ರಹ್ಮಾಂಡದಲ್ಲಿ ಮೊದಲನೆಯವನೂ ರುದ್ರನೇ ಕೊನೆಯವನೂ ರುದ್ರನೇ. ಶಿವನಿಗೆ ಮನೋನ್ಮನ ಎಂಬ ಹೆಸರೂ ಇದೆ.
ಪರಮಶಿವನ ಮನಃಶಕ್ತಿಯು ಪ್ರಕಟವಾಗಲು ಚಲಿಸಿದಾಗ, ಅದು ಶಿವನಿಂದ ಬೇರ್ಪಡಿಸಲಾಗದಿದ್ದರೂ ಆ ಸ್ಥಿತಿಯನ್ನು ಉನ್ಮನಾ ಅಥವಾ ಉನ್ಮನೀ ಎನ್ನಲಾಗುತ್ತದೆ. ಈ ಉನ್ಮನಾ ಅಥವಾ ಉನ್ಮನೀ ಎನ್ನುವ ಸ್ಥಿತಿ, ದೇಶ ಕಾಲಗಳನ್ನು ಮೀರಿದ್ದು. Beyond time and space ಹಾಗೂ ಅಪರಿಮಿತವಾದ್ದು, ವಿಶಾಲವಾದ್ದು ಮತ್ತು ಅಳತೆಗೆ ನಿಲುಕದ್ದು. ಈ ಉನ್ಮನೀ ಸ್ಥಿತಿ ಪ್ರಕಟವಾಗುವುದೇ ಪ್ರಾಣ. ಇದೇ ಸೃಷ್ಟಿಯಲ್ಲಿ ಮೊದಲನೆಯದು, ಹಾಗಾಗಿ ಅದು ಜ್ಯೇಷ್ಟ.
ಈ ಹಿಂದೆಯೂ ನಾವು ಬೃಹದಾಕಾರದ ಆಲದಮರದ ಕೆಳಗೆ ಕುಳಿತ ದಕ್ಷಿಣಾಮೂರ್ತಿಯ ಬಗ್ಗೆ ಕೇಳಿದ್ದೇವೆ. ಇದು ಸೂಕ್ಷ್ಮವು ಸ್ಥೂಲ ರೂಪವನ್ನು ಪಡೆದುಕೊಳ್ಳುವ ಸಂಕೇತ. ಇದು ಪ್ರಾಣದ ನಂತರ ಸೃಷ್ಟಿಯಾಗಿದ್ದು ಇದು ಕನಿಷ್ಟ. ಬ್ರಹ್ಮಾಂಡವೇ ಇಲ್ಲದಿರುವಾಗಲೂ ಇದ್ದ ವಸ್ತು ಅದು ರುದ್ರ. ರುದ್ರನ ಪ್ರಕಟವಾದಾಗ ಸೃಷ್ಟಿಯಾಗಿದ್ದು ಬ್ರಹ್ಮಾಂಡ. ಅದರಲ್ಲೂ ಮೊದಲು ಸೃಷ್ಟಿಯಾಗಿದ್ದು ಸೂಕ್ಷ್ಮ ನಂತರದ್ದು ಸ್ಥೂಲ.
ನಮಃ ಪೂರ್ವಜಾಯ ಚಾಪರಜಾಯಚ
ಜಗದ ಆದಿಯಲ್ಲಿ ಜನಿಸಿದ ಹಿರಣ್ಯಗರ್ಭನೂ ಮತ್ತು ಜಗದ ಅಂತ್ಯಕಾಲದ ಅಗ್ನಿಯೂ ಆದ ರುದ್ರನೇ ನಿನಗೆ ನಮಸ್ಕಾರಗಳು.
ಹಿರಣ್ಯಗರ್ಭದ ಬಗ್ಗೆ ಹಿಂದಿನ ಅನುವಾಕದಲ್ಲಿ ವಿವರಗಳನ್ನು ತಿಳಿದುಕೊಂಡಿದ್ದೇವೆ. ಜಗದ ಅಂತ್ಯಕಾಲದಲ್ಲದೆ ನಮ್ಮ ದೇಹದ ಅಂತ್ಯಕಾಲದ ಆಧಿಪತ್ಯವೂ ರುದ್ರನದೇ. ಈ ಆಧಿಪತ್ಯವು ತನ್ನ ತಮೋಗುಣದಿಂದ ಹುಟ್ಟಿದ ಕಾಳರಾತ್ರಿ ದೇವಿಯದಾಗಿದೆ.
ದೇಹಾಂತ್ಯ ಕಾಲದಲ್ಲಿ ಕಾಳರಾತ್ರಿಯ ದರ್ಶನ ಆಗುತ್ತದೆ ಎಂಬುದು ನಂಬಿಕೆ. ಮನುಷ್ಯನ 77 ನೇ ವರ್ಷ 7 ತಿಂಗಳು 7 ದಿನದ ರಾತ್ರಿಯ ಆಧಿಪತ್ಯವೂ ಕಾಳರಾತ್ರಿದೇವಿಯದೇ ಆಗಿದೆ. . ಈ ರಾತ್ರಿಯನ್ನು ಕಳೆದ ಮನುಷ್ಯರು ಯಾವುದೇ ಧರ್ಮಶಾಸ್ತ್ರಗಳಿಗೆ ಬದ್ಧರಾಗಬೇಕಿಲ್ಲಾ ಎಂಬುದಾಗಿ ಶಾಸ್ತ್ರಗಳು ಹೇಳುತ್ತವೆ.
ವಾರಾಹ ಪುರಾಣವು ಇವಳನ್ನು ರೌದ್ರಿಯೆಂದೇ ಕರೆದಿದೆ.
ಮಾರ್ಕಂಡೇಯ ಪುರಾಣದ ದುರ್ಗಾ ಸಪ್ತಶತೀಯಲ್ಲೂ ಕಾಳರಾತ್ರಿಯ ಉಲ್ಲೇಖವಿದೆ.
ಕರಾಳ ವಂದನಾ ಘೋರಾ ಮುಕ್ತಕೇಶೀ ಚತುರ್ಭುಜಾಂ
ಕಾಳರಾತ್ರೀಂ ಕರಾಲಿಕಾಂ ದಿವ್ಯಾಂ ವಿದ್ಯುತಮಲಾ ವಿಭೂಷಿತಾಮ್
ದಿವ್ಯಂ ಲೋಹವಜ್ರ ಖಡ್ಗ ವಾಮೋಘೋರ್ದ್ವ ಕರಾಂಬುಜಾಮ್
ಅಭಯಂ ವರದಂ ಚೈವ ದಕ್ಷಿಣೋಧ್ವಾಘಃ ಪಾರ್ಣಿಕಾಂ ಮಂ
ಮಹಾಮೇಘ ಪ್ರಭಾಂ ಶ್ಯಾಮಾಂ ತಕ್ಷಾ ಚೈವ ಗರ್ದಭಾರೂಡಾ
ಘೋರದಂಷ ( ಘೋರದಂಷ್ಟ್ರ) ಕಾರಾಲಾಸ್ಯಂ ಪೀನೋನ್ನತ ಪಯೋಧರಾಂ
ಸುಖ ಪಪ್ರಸನ್ನ ವದನಾ ಸ್ಮೇರಾನ್ನ ಸರೋರುಹಾಂ
ಏವಂ ಸಚಿಯಂತಯೇತ್ ಕಾಳರಾತ್ರೀಂ ಸರ್ವಕಾಮ ಸಮೃದ್ಧಿದಾಂ
ಇದು ಕಾಳರಾತ್ರಿ ದೇವಿಯ ಧ್ಯಾನ ಶ್ಲೋಕ
ಯಾವುದು ಭಯಾನಕವೋ ಅದರಿಂದಲೇ ನಮಸ್ಕರಿಸಲ್ಪಡುವ , ಘೋರಳೂ ಮುಕ್ತಕೇಶಿಯೂ ಆಗಿರುವ, ಮುಕ್ತಕೇಶಿ ಅಂದರೆ ಕೂದಲನ್ನು ಹೆಣೆಯದೆ ಬಿಟ್ಟಿರುವವಳು- ದೇವಿಯ ಉಗ್ರರೂಪಗಳು, ಘೋರರೂಪಗಳು ಸಾಮಾನ್ಯವಾಗಿ ಮುಕ್ತಕೇಶಿಗಳು. ಹೆಂಗಸರು ಕೂದಲು ಬಿಚ್ಚಿಕೊಂಡಿರಬಾರದು ಎಂದು ನಮ್ಮ ಹಿರಿಯರು ಸಲಹೆ ನೀಡುತ್ತಿದ್ದರು ಏಕೆಂದರೆ ದೇವಿಯ ರೂಪವೇ ಆದ ಹೆಂಗಸರು ಘೋರರೂಪಿಗಳಾಗುತ್ತಾರೆ, ಉಗ್ರರೂಪಿಗಳಾಗುತ್ತಾರೆ ಎನ್ನುವ ತಿಳಿವಳಿಕೆ, ಜ್ನಾನ ಅವರಿಗೆ ಇತ್ತು. ಈಗ ಕೂದಲು ಬಿಚ್ಚಿಕೊಂಡಿರುವುದೇ ಹೆಣ್ಣಿನ ಸೌಂದರ್ಯಕ್ಕೆ ಪೂರಕ ಎಂದಾಗಿದೆ. ಕಾಲಾಯ ತಸ್ಮೈ ನಮಃ
ಅಮಾವಾಸ್ಯೆಯ ಕತ್ತಲಿಗಿಂತಲೂ ಅತಿಯಾದ ಕಪ್ಪು ಬಣ್ಣದ ಮುಖ ಹೊಂದಿದವಳೂ, ಸಿಡಿಲನ್ನೂ, ಖಡ್ಗವನ್ನೂ, ಎರಡು ಕೈಗಳಿಂದ ಹಿಡಿದು ಮತ್ತೆರಡು ಕೈಗಳಲ್ಲಿ ಅಭಯ ಮತ್ತು ವರದ ಮುದ್ರೆಗಳಿಂದ ನಮ್ಮನ್ನು ಹರಸುತ್ತಿರುವವಳೂ, ಅತ್ಯಂತ ಹೆಚ್ಚಿನ ಗಾತ್ರದ ಭಯಹುಟ್ಟಿಸುವ ಸ್ತನಗಳನ್ನು ಹೊಂದಿರುವವಳೂ, ಕತ್ತೆಯ ವಾಹನವನ್ನೇರಿ ಸಂಚರಿಸುವವಳೂ, ವಿಶಾಲವಾದ ಕೋರೆಹಲ್ಲುಗಳುಳವಳು,ಇಷ್ಟೆಲ್ಲಾ ಘೋರರೂಪ, ಉಗ್ರರೂಪ ವನ್ನು ಹೊಂದಿದ್ದರೂ ಅವಳು ಸುಪ್ರಸನ್ನಳು, ಕಮಲಮುಖಿಯಾಗಿ, ಮುಗುಳ್ನಗೆಯಿಂದ ಕೂಡಿ ಭಕ್ತರ ಎಲ್ಲ ಕಾಮನೆಗಳನ್ನೂ ಪೂರೈಸುತ್ತಿರುವ ಕಾಳರಾತ್ರಿ ದೇವಿಯನ್ನು ಧ್ಯಾನಿಸೋಣ. ಇದು ಧ್ಯಾನಶ್ಲೋಕದ ಅರ್ಥ.
ನವರಾತ್ರಿಯ ಏಳನೇ ದಿವಸದ ದುರ್ಗೆಯ ರೂಪ ಕಾಳರಾತ್ರಿದೇವಿ .
ಅಷ್ಟೇ ಅಲ್ಲದೆ, ಕಾಳರಾತ್ರಿ,ಖಾಟೀಕಾ, ಗಾಯತ್ರೀ, ಘಂಟಧಾರಿಣಿ, ಜ್ನಾಮಿನಿ, ಚಂದ್ರಾ, ಛಾಯಾ, ಜಯಾ, ಝಂಕಾರೀ, ಜ್ನಾನರೂಪಾ, ಟಂಕಹಸ್ತಾ, ಠಂಕಾರಿಣಿ, ಈ ಶಕ್ತಿ ದೇವತೆಯರು ಅನಾಹತ ಚಕ್ರದ 12 ದಳಗಳಲ್ಲಿರುವ ದೇವತೆಗಳು.
ಕಾಲರಾತ್ರ್ಯಾದಿ ಶಕ್ತೌಘವೃತಾಯೈ ನಮಃ.ಲಲಿತಾ ಸಹಸ್ರನಾಮದ 491 ನೇ ನಾಮ
ರಾಕಿಣೀ ದೇವಿಯು ಅನಾಹತಾ ಚಕ್ರದ ದೇವತೆ- ರಾಕಿಣ್ಯಂಬಾ ಸ್ವರೂಪಿಣಿ ಲಲಿತಾ ಸಹಸ್ರನಾಮದ 494 ನೆಯ ನಾಮ.
ಕಾಳರಾತ್ರಿಯ ಬೀಜಮಂತ್ರವು ಬಹಳ ರಹಸ್ಯವಾಗಿದ್ದು, ಆ ಮಂತ್ರ ಪ್ರಯೋಗದಿಂದ ಶತೃಗಳ ನಾಶ ಖಂಡಿತಾ. ಈ ಮಂತ್ರವನ್ನು, ದೇಶದ, ಸಮಾಜದ ಮತ್ತು ನಮ್ಮೊಳಗಿನ ಶತೃಗಳ ವಿನಾಶಕ್ಕೆ ಮಾತ್ರ ಉಪಯೋಗಿಸಬೇಕೇ ಹೊರತು ವ್ಯಕ್ತಿಗಳ ವಿರುದ್ಧ ಉಪಯೋಗಿಸಬಾರದು, ಉಪಯೋಗಿಸಲೇ ಬಾರದು. ಅಂತಹ ಸಂಯಮ ಇರುವವರಿಗೆ ಮಾತ್ರವೇ ಅದೂ ತಮ್ಮ ಗುರುಗಳ ಮೂಲಕ ಕನಸಿನಲ್ಲಿ ಈ ಮಂತ್ರ ದೊರಕುತ್ತದೆಯಂತೆ. ಕಾಳರಾತ್ರಿಯ ಬಗ್ಗೆ ಇಷ್ಟು ವಿವರಣೆ ಕೊಟ್ಟಿದ್ದು, ರುದ್ರನು ತನ್ನ ಭಕ್ತರ ಮತ್ತು ಸಮಾಜದಲ್ಲಿನ ಶತೃಗಳನ್ನು ನಾಶ ಮಾಡಲು ಎಂತಹ ಶಕ್ತಿದೇವತೆ ಯನ್ನು ಸೃಷ್ಟಿ ಮಾಡಿದ್ದಾನೆ ಎನ್ನುವದನ್ನು ತಿಳಿಸಲು.
ಕಾಳರಾತ್ರಿ ದೇವಿಗೂ, ರುದ್ರನಿಗೂ ನಮಸ್ಕಾರಗಳು.
ನಮೋ ಮಧ್ಯಮಾಯ ಚಾಪಗಲ್ಭಾಯ ಚ
ಯಾರು ಮಧ್ಯಮನೋ ಯಾರು ಪರಿಪಕ್ವತೆ ಗಾಗಿ ಕಾಯುತ್ತಿದ್ದಾರೋ ಅವರೆಲ್ಲರಲ್ಲೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ರುದ್ರನು ಎಂದೆಂದಿಗೂ ಶಾಶ್ವತನಾದರೂ ಶಾಶ್ವತವಲ್ಲದ ಮನುಷ್ಯನ ಬಾಲ್ಯ, ಯೌವನ ಮತ್ತು ವಾರ್ಧಕ್ಯ ಗಳ ರೂಪದಲ್ಲಿಯೂ ಇದ್ದು ಸಾವು ಬಂದಾಗ ಸಾವಿನ ರೂಪದಲ್ಲಿಯೂ ರುದ್ರ ಇದ್ದಾನೆ.
ನಮೋ ಜಘನ್ಯಾಯ ಚ ಬುಧ್ನಿಯಾಯ ಚ
ಪ್ರಾಣಿಗಳ ರೂಪ ದಲ್ಲಿಯೂ ಮರಗಳ ರೂಪದಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ಈ ಮಂತ್ರವೂ ಸಹಾ ರುದ್ರನು ಎಲ್ಲಾ ಅಣು ರೇಣು ತೃಣ ಕಾಷ್ಟ ಗಳಲ್ಲಿಯೂ ಇದ್ದಾನೆ ಎಂದು ಹೇಳಿದೆ.
ನಮಃ ಸೋಭ್ಯಾಯ ಚ ಪ್ರತಿಸರ್ಯಾಯ ಚ
ಯಾರು ಮನುಷ್ಯರ ರೂಪದಲ್ಲಿರುವರೂ, ಯಾರು ಬೇರೆ ಜೀವಗಳ ರೂಪದಲ್ಲಿರುವವರೋ ಆ ರುದ್ರನಿಗೆ ನಮಸ್ಕಾರಗಳು.
ಈ ಮಂತ್ರವೂ ಸಹಾ ರುದ್ರನು ಎಲ್ಲಾ ರೂಪಗಳಲ್ಲೂ ಇದ್ದಾನೆ, ಸರ್ವವ್ಯಾಪಿ, omnipresent ಎಂದು ಹೇಳಿದೆ.
ನಮೋ ಯಾಮ್ಯಾಯ ಚ ಕ್ಷೇಮ್ಯಾಯ ಚ
ಯಾರು ಯಮಲೋಕದಲ್ಲಿರುವರೋ, ಯಾರು ದೇವಲೋಕದಲ್ಲಿದ್ದಾರೋ, ಎಲ್ಲರಿಗೂ ನಮಸ್ಕಾರ.
ಯಮ ಮೃತ್ಯು ದೇವತೆ. ಯಮ ಧರ್ಮದೇವತೆ. ರುದ್ರನು ಯಮನಿಗೆ ಅಧಿಪತಿಯಾಗಿರುವುದರಿಂದ, ರುದ್ರನ ಆರಾಧನೆ ಮಾಡುವುದರಿಂದ ಸಾವಿನ ಭಯ ದೂರವಾಗುತ್ತದೆ, ಹಾಗಾಗಿಯೇ ವೇದಗಳಲ್ಲಿ ಶ್ರೀ ರುದ್ರಕ್ಕೆ ಪ್ರಾಮುಖ್ಯತೆ. ಪಿತೃಲೋಕದಲ್ಲಿರುವ ಪಿತೃಗಳ ರೂಪದಲ್ಲಿಯೂ ರುದ್ರನು ಇರುವುದರಿಂದ ರುದ್ರನ ಆರಾಧನೆಯಿಂದ ಪಿತೃಗಳ ತೃಪ್ತಿಯೂ ಆಗುತ್ತದೆ.
ರುದ್ರನು ದೇವಲೋಕಕ್ಕೂ ಒಡೆಯನಾಗಿದ್ದು ರುದ್ರನ ಆರಾಧನೆಯಿಂದ ದೇವಲೋಕದಲ್ಲಿರುವ ಪಿತೃಗಳೂ ಸಂತೃಪ್ತರಾಗುತ್ತಾರೆ.
ರುದ್ರನ ಭಯದಿಂದ ಅಗ್ನಿಯು ಬಿಸಿಯನ್ನೂ, ರವಿಯು ಬೆಳಕನ್ನೂ ಕೊಡುತ್ತಾ, ಇಂದ್ರ, ಯಮ ವರುಣರು ತಮ್ಮ ತಮ್ಮ ಕರ್ತವ್ಯ ಗಳನ್ನು ಮಾಡುತ್ತಾರೆ ಎನ್ನುವುದು ಕಠೋಪನಿಷದ್ ವಾಕ್ಯ.
ನಮಗೆ ಕಾಣುವುದು ಸ್ಥೂಲ ದೇಹ ( physical body) ಆದರೂ ಮನಸ್ಸು, ಬುದ್ಧಿ, ಅಹಂಕಾರ ಎಂಬ ಸೂಕ್ಷ ದೇಹವೂ ( subtle body) ಮತ್ತು ಈ ಸೂಕ್ಷ್ಮ ಮತ್ತು ಸ್ಥೂಲ ದೇಹಗಳಿಗೆ ಕಾರಣವಾದ ಕಾರಣ ದೇಹವೂ ಇವೆ (causal body). ಈ ಕಾರಣ ದೇಹವೇ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಬೀಜ.
ಜೀವಾತ್ಮವು ದೇಹವನ್ನು ಬಿಟ್ಟಾಗ ನಿರ್ಜೀವವಾದ ಸ್ಥೂಲ ದೇಹ ನಮ್ಮ ಕಣ್ಣಮುಂದೆಯೇ ಇರುತ್ತದೆ. ಹಾಗಾದರೆ ಇನ್ನೆರಡು ಎಲ್ಲಿ? ಕಾರಣ ದೇಹವು ಜೀವಾತ್ಮನೊಂದಿಗೆ ತಾನೂ ಹೋಗಿಬಿಡುತ್ತದೆ. ದೇಹವನ್ನು ಬಿಟ್ಟ ಜೀವಾತ್ಮವು ವಿವಿಧ ಸೂಕ್ಷ್ಮ ದೇಹಗಳನ್ನು ಪಡೆದುಕೊಳ್ಳುತ್ತದೆ. ಇದನ್ನು ಅಧಿಷ್ಠಾನದೇಹ ಎಂದು ಹೇಳುತ್ತಾರೆ. ಈ ಅಧಿಷ್ಟಾನ ದೇಹಗಳನ್ನು ಜೀವಾತ್ಮನು ಪಡೆಯಲು ಕಾರಣವೇ ಕಾರಣ ದೇಹ ಹಾಗಾಗಿಯೇ, ದೇಹ ಬಿಡುವ ಜೀವಾತ್ಮನು ತನ್ನೊಟ್ಟಿಗೆ ಕಾರಣ ದೇಹವನ್ನೂ ತೆಗೆದುಕೊಂಡು ಹೋಗುತ್ತದೆ. ಈ ಅಧಿಷ್ಟಾನ ದೇಹವು ತನ್ನ ಕರ್ಮಾನುಸಾರ ಬೇರೆ ಬೇರೆ ಲೋಕಗಳಲ್ಲಿ ( (space) ಸಂಚರಿಸುತ್ತದೆ.
ಮನಸ್ಸು, ಬುದ್ಧಿ ಮತ್ತು ಅಹಂಕಾರ ಗಳ ರೂಪವಾದ ಸೂಕ್ಷ್ಮ ದೇಹ ದೇಹದಲ್ಲಿಯೂ ಇರದೆ, ಜೀವಾತ್ಮ ನೊಟ್ಟಿಗೂ ಹೋಗದೆ ಉಳಿದು ಹೋಗುತ್ತದೆ. ಈ ಸೂಕ್ಷ್ಮ ದೇಹವು, ಸ್ಥೂಲ ದೇಹದಲ್ಲಿದ್ದಾಗ ಮಾಡಿದ ಯೋಚನೆಗಳು, ಗಳಿಸಿದ ಜ್ನಾನ, ಅಜ್ನಾನ, ಎಲ್ಲವೂ ಸೂಕ್ಷ್ಮ ರೂಪದಲ್ಲಿ ಇಲ್ಲಿಯೇ ಉಳಿದು ಹೋಗುತ್ತದೆ ಹಾಗೂ ಪ್ರಕೃತಿಯ ಭಾಗವೇ ಆಗಿಬಿಡುತ್ತದೆ.
ಕೆಲವೊಮ್ಮೆ ಈ ಸೂಕ್ಷ್ಮ ದೇಹ ಅಂದರೆ ಮನಸ್ಸು ಬುದ್ಧಿ ಅಹಂಕಾರ ಇವು, ಇನ್ನೊಂದು ದೇಹದ ಮೂಲಕ ಪ್ರಕಟವಾಗುವ ಸಾಧ್ಯತೆಗಳೂ ಇದೆ. ಹಾಗಾದಾಗ ಸತ್ತವರು ಮೈಮೇಲೆ ಬಂದಿದ್ದಾರೆ ಎಂದು ಹೇಳುವುದು ಉಂಟು. ಆದರೆ ಇನ್ನೊಂದು ದೇಹದಲ್ಲಿ ಪ್ರಕಟವಾದ ಸೂಕ್ಷ್ಮ ದೇಹ ಶಾಶ್ವತವಾಗಿ ಅಲ್ಲಿಯೇ ಇರಲು ಸಾಧ್ಯವಾಗದು.
ಸತ್ತ ಎಷ್ಟೋ ವರ್ಷಗಳ ನಂತರ, ಯಾವುದೋ ದೂರದ ಊರಿನಲ್ಲಿ ಇನ್ಯಾವುದೋ ವ್ಯಕ್ತಿಯ ಮನಸ್ಸು ಆ ವ್ಯಕ್ತಿಯ ಅರಿವಿಗೇ ಬಾರದಂತೆ ಈ ಮನಸ್ಸಿನ ಜತೆ ಸಂಪರ್ಕಕ್ಕೆ ಬಂದಾಗ, ಆ ಮನಸ್ಸು ತನ್ನ ಹಿಂದಿನ ಎಲ್ಲಾ ಘಟನೆಗಳನ್ನೂ ನೆನಪಿಸಿ ಕೊಂಡು ಆ ವ್ಯಕ್ತಿಯ ಮೂಲಕ ಪ್ರಕಟಗೊಳ್ಳುವುದನ್ನು ನಾವು ಹಲವಾರು ಬಾರಿ ಕೇಳಿದ್ದೇವೆ ಮತ್ತು ಆ ಸತ್ತ ವ್ಯಕ್ತಿ, ಈಗ ಈ ವ್ಯಕ್ತಿಯಾಗಿ ಪುನರ್ಜನ್ಮ ಪಡೆದಿರುವುದಾಗಿ ಭಾವಿಸಿದ್ದೇವೆ. ಈ ವಿಷಯದ ಬಗ್ಗೆಯೇ ಹೇಳುತ್ತಾ ಹೋದರೆ,ಅದು ಮುಗಿಯಲ್ಲಾ.
ನಮೋ ಉರ್ವರ್ಯಾಯ ಚ ಖಲ್ಯಾಯ ಚ
ಯಾರು ಭತ್ತದ ಗದ್ದೆಯಲ್ಲೂ ಭತ್ತದಲ್ಲಿಯೂ ಇದ್ದಾನೋ, ಮತ್ತು ಭತ್ತವನ್ನು ದಾಸ್ತಾನು ಮಾಡುವ ಗೋದಾಮಿನಲ್ಲಿಯೂ ಇದ್ದಾನೋ ಆ ರುದ್ರನೇ ನಿನಗೆ ನಮಸ್ಕಾರಗಳು.
ರುದ್ರನು ವ್ಯವಸಾಯದ ಎಲ್ಲ ಚಟುವಟಿಕೆ ಗಳಲ್ಲಿದ್ದು, ನಮಗೆ ಆಹಾರ ಪೂರೈಕೆ ಮಾಡುತ್ತಿದ್ದಾನೆ ಹಾಗೂ ಅನ್ನಮಯ ಕೋಶದ ಅಧಿಪತಿಯಾಗಿದ್ದಾನೆ.
ನಮಃ ಶ್ಲೋಕ್ಯಾಯ ಚ ವಸಾನ್ಯಾಯ ಚ
ವೇದಗಳಲ್ಲಿಯೂ ವೇದಾಂತದಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು. ವೇದ ಅಂದರೆ ಜ್ನಾನ. ಅದರ ಅಂತ ಅಂದರೆ ಕೊನೆ ಅಥವಾ ನಿರ್ಣಾಯಕ. ವೇದಾಂತ ಅಂದರೆ ನಿರ್ಣಾಯಕವಾದ ಜ್ನಾನ. ಇದು ಆಧ್ಯಾತ್ಮದ ಜ್ನಾನವನ್ನು ಕೊಡುವಂತಾದ್ದು. ಇದು ಅನಂತವೂ ಮತ್ತು ಶಾಶ್ವತವೂ ಆದ ಬ್ರಹ್ಮ ಜ್ನಾನವನ್ನು ಕೊಡುವಂತಾದ್ದು. . ಶಾಶ್ವತ ಸುಖ ಮತ್ತು ಸಂತೋಷ ವನ್ನು ಕೊಡುವಂತಾದ್ದು ವೇದಾಂತ. ವೇದಾಂತದ ಮೊದಲ ಹಂತ ’ ನಾನು ಯಾರು ’ ಎಂಬ ಪ್ರಶ್ನೆ, ವೇದಾಂತ ಈ ಪ್ರಶ್ನೆಗೆ ವಿವಿಧ ದೃಷ್ಟಿಕೋನಗಳಿಂದ ಉತ್ತರ ನೀಡುತ್ತಾ ಹೋಗುತ್ತದೆ.
ನಮೋ ವನ್ಯಾಯ ಚ ಕಕ್ಷ್ಯಾಯ ಚ ಅರಣ್ಯದಲ್ಲಿರುವ ಮರಗಳಲ್ಲಿಯೂ, ಪೊದರೆಗಳಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ಅರಣ್ಯವು ನಿಗೂಢವೇ, ಅಲ್ಲಿನ, ಪೊದರಗಳಲ್ಲಿ ಬೆಳೆಯುವ ಅಮೂಲ್ಯ ಮೂಲಿಕೆಗಳನ್ನು ಹುಡುಕುವ ಹಾಗೆ ನಮ್ಮಲ್ಲೇ ಇರುವ ಆತ್ಮನ ರಹಸ್ಯಗಳನ್ನು ಜ್ನಾನದ ಮೂಲಕ ಹುಡುಕ ಬೇಕು.
ನಮಃ ಶ್ರವಾಯ ಚ ಪ್ರತಿಶ್ರವಾಯ ಚ
ಶಬ್ಧದಲ್ಲಿಯೂ ಪ್ರತಿಧ್ವನಿ ಯಲ್ಲಿಯೂ ಇರುವ ರುದ್ರನಿಗೆ ನಮಸ್ಕಾರಗಳು Echo
ಶಬ್ಧದ ಉತ್ಪತ್ತಿಯ ನಾಲ್ಕು ಹಂತಗಳನ್ನು ಹೇಳಲಾಗಿದೆ, ಪರಾ, ಪಶ್ಯಂತಿ ಮಧ್ಯಮಾ ಮತ್ತು ವೈಖರೀ. ಪರಾ ಹಂತದಲ್ಲಿ ಆರಂಭವಾದ ಶಬ್ಧವು ಕೇಳಿಸುವಂತೆ ಆಗುವುದು ಅದು ವೈಖರಿ ಹಂತವನ್ನು ಮುಟ್ಟಿದಾಗ. ಶಬ್ಧವೇ ಇಲ್ಲದೆ ಪಿಸುಗುಟ್ಟುವುದೂ ಸಹಾ ಇಲ್ಲದೆ ನಮ್ಮೊಳಗೆ ಅನೇಕ ಶಬ್ಧಗಳು ಸದಾ ಹುಟ್ಟಿ ಕೊಳ್ಳುತ್ತಲೇ ಇರುತ್ತವೆ, ಆದರೆ ಆ ಶಬ್ಧಗಳು ಕೇಳಿಸುವಂತಾಗಲು ಆ ಹುಟ್ಟಿಕೊಂಡ ಶಬ್ಧಗಳು ವೈಖರೀ ಹಂತವನ್ನು ತಲುಪಬೇಕು. ಇಲ್ಲಿ ಕೂಡ ಪ್ರಜ್ನೆಯ ಬಗ್ಗೆಯೇ Consciousness ಹೇಳಲಾಗಿದೆ.
ಪರಾ ಪ್ರತ್ಯಕ್ಚಿತಾ ರೂಪಾ ಪಶ್ಯಂತೀ ಪರದೇವತಾ ಮಧ್ಯಮಾ ವೈಖರೀ ರೂಪಾ ಎನ್ನುವ ಲಲಿತಾ ಸಹಸ್ರನಾಮದ ನಾಮಗಳು ಸಹಾ ಇದನ್ನೇ ಹೇಳಿವೆ.
ನಮೋ ಆಶುಷೇಣಾಯ ಚ ಶುರಥಾಯ ಚ
ವೇಗವಾಗಿ ಚಲಿಸಬಲ್ಲ ಸೈನ್ಯವನ್ನು ಹೊಂದಿದ್ದಾನೆ. ಹಾಗೆಯೇ ವೇಗವಾಗಿ ಚಲಿಸಬಲ್ಲ ರಥವನ್ನೂ ಹೊಂದಿರುವ ರುದ್ರನೇ ನಿನಗೆ ನಮಸ್ಕಾರಗಳು.
ಅತ್ಯಂತ ವೇಗದ ಜೆಟ್ ಫ಼ೈಟರ್ ಗಳನ್ನು ಮತ್ತು ಬಾಂಬರ್ ಗಳನ್ನು ರುದ್ರನು ಹೊಂದಿದ್ದಾನೆ.
ಪಂಚಭೂತಗಳು ಅವನ ಸೈನ್ಯ. ರುದ್ರನು ಈ ಪಂಚಭೂತಗಳಿಗಿಂತಲೂ ವೇಗವಾಗಿ ಕ್ರಮಿಸಬಲ್ಲ.
ಭೂಮಿರಾಪೋsನಲೋ ವಾಯುಃ ಖಂ ಮನೋ ಬುದ್ಧಿ ರೇವ ಚ
ಅಹಂಕಾರ ಇತೀಯಂ ಮೇ ಭಿನ್ನಾ ಪ್ರಕೃತಿರಷ್ಟಧಾ
ಅಪರೇಯಮಿತಸ್ಚನ್ಯಾಂ ಪ್ರಕೃತಿಂ ವಿದ್ಧಿ ಮೇ ಪರಾಮ್
ಜೀವಭೂತಾಂ ಮಹಾಬಾಹೋ ಯಯೇದಂ ಧಾರ್ಯತೇ ಜಗತ್
ಇವು ಶ್ರೀ ಕೃಷ್ಣನ ವಾಣಿ, ಭಗವದ್ಗೀತೆಯ 7 ನೇ ಅಧ್ಯಾಯದ ನಾಲ್ಕು ಮತ್ತು ಐದನೆಯ ಶ್ಲೋಕಗಳು;
ಭೂಮಿ,ನೀರು, ಅಗ್ನಿ, ಗಾಳಿ ಮತ್ತು ಆಕಾಶ,ಮನಸ್ಸು,ಬುದ್ಧಿ, ಹಾಗೂ ಅಹಂಕಾರ ಸೇರಿ ಈ ನನ್ನ ಪ್ರಕೃತಿಯು ಎಂಟು ವಿಧವಾಗಿ ವಿಭಾಗಿಸಲ್ಪಟ್ಟಿದೆ.
ಇವು ನನ್ನ ಜಡ ಪ್ರಕೃತಿಗಳು, ಎಲೈ ಮಹಾಬಾಹುವೇ, ಅಂದರೆ ಅರ್ಜುನನೇ ಈ ಎಂಟಕ್ಕಿಂತ ಭಿನ್ನವಾದ ಪರಾ ಎಂಬ ಇನ್ನೊಂದಿದೆ, ಅದೇ ಚೇತನ ಪ್ರಕೃತಿ. ಇದರಿಂದಲೇ ಈ ಜಗತ್ತೆಲ್ಲವೂ ಧರಿಸಲ್ಪಟ್ಟಿರುವುದು.
ಈ ಚೇತನಾ ಪ್ರಕೃತಿಯೇ, ಜೀವ, ಅದೇ ಸ್ವಯಂಪ್ರಜ್ನೆ.
ಜೀವಾತ್ಮನ ಪ್ರಕೃತಿಯೊಂದಿಗಿನ ಸಂವಹನ ವೇ ಸ್ಥೂಲ ಶರೀರವು ಪ್ರಕಟವಾಗಲು ಕಾರಣ. ಜ್ನಾನೇಂದ್ರಿಯಗಳು ಈ ಸ್ಥೂಲ ಶರೀರದಲ್ಲಿ ಅಂತರ್ಗತವಾಗಿದ್ದು ಅವು ಅಂತಃಕರಣ ದೊಂದಿಗೆ ಅಂದರೆ, ಮನಸ್ಸು, ಬುದ್ಧಿ ಚಿತ್ತ ಅಥವಾ ಪ್ರಜ್ನೆ ಮತ್ತು ಅಹಂಕಾರ ಗಳೊಂದಿಗೆ ಜೋಡಿಸಿಕೊಳ್ಳುತ್ತವೆ.
ನಮ್ಮ ಜ್ನಾನೇಂದ್ರಿಯಗಳು ರುದ್ರನ ಸೈನ್ಯ ಮತ್ತು ನಮ್ಮ ದೇಹವೇ ರುದ್ರನ ರಥವು ಎನ್ನುವುದು. ಈಗ ನಮಗೆ ಅರ್ಥವಾಯಿತು
ನಮಃ ಶೂರಾಯ ಚ ಅವಭಿಂದಿತೇ ಚ
ತನ್ನ ಶೂರತ್ವದಿಂದ ಶತೃಗಳಿಗೆ ಹಾನಿ ಮಾಡುವ ರುದ್ರನೇ ನಿನಗೆ ನಮಸ್ಕಾರಗಳು.
ಈ ಮಂತ್ರವು ಈ ಹಿಂದಿನ ಮಂತ್ರದ ಮುಂದುವರೆದ ಭಾಗವೇ ಆಗಿದೆ. ಶುದ್ಧ ಅಂತಃಕರಣದಿಂದ ರುದ್ರನನ್ನು ಧ್ಯಾನಿಸಿದರೆ ಅವನು ನಮ್ಮ ನಿಜವಾದ ಶತೃಗಳಾದ ಇಂದ್ರಿಯಗಳನ್ನು ನಾಶ ಮಾಡಿ ನಮ್ಮನ್ನು ಅವನೊಂದಿಗೇ ಸೇರಿಸಿಕೊಂಡು ಬಿಡುತ್ತಾನೆ.
ನಮೋ ವರ್ಮಿಣೇ ಚ ವರೂಥಿನೇ ಚ.
ಎದೆಯಲ್ಲಿ ಕವಚ ವನ್ನು ತೊಟ್ಟಿರುವ ರಥದ ಸಾರಥಿಯ ರಹಸ್ಯ ಸ್ಥಳದಲ್ಲಿ ಕುಳಿತಿರುವ (ವರೂಥಿನ್) ರುದ್ರನೇ ನಿನಗೆ ನಮಸ್ಕಾರಗಳು.
ತನ್ನ ಭಕ್ತರಿಗಾಗಿ ಅವರ ಶತೃಗಳ ವಿರುದ್ಧ ಹೋರಾಟ ಮಾಡುವುದೇ ಅಲ್ಲದೆ ಭಕ್ತರನ್ನು ರಹಸ್ಯವಾಗಿ ರಕ್ಷಿಸುತ್ತಾನೆ.
ನಮೋ ಬಿಲ್ಮಿನೇ ಚ ಕವಚಿನೇ ಚ.
ಕಿರೀಟವನ್ನು ಧರಿಸಿರುವ ಮತ್ತು ರಕ್ಷಾ ಕವಚವನ್ನು ತೊಟ್ಟಿರುವ ರುದ್ರನೇ ನಿನಗೆ ನಮಸ್ಕಾರಗಳು.
ಶಿವನಿಗೆ ಕವಚಿನ್ ಎಂಬ ಹೆಸರೂ ಇದೆ ಅಂದರೆ, ಹಲವಾರು ಗುಂಪುಗಳ ಮಂತ್ರಗಳಿಂದ ಆವೃತನಾಗಿರುವವನು, ಅರ್ಥಾತ್ ಎಲ್ಲ ಮಂತ್ರಗಳ ಅಧಿಪತಿ.
ಕಿರೀಟ ಎನ್ನುವುದು, ಅತ್ಯುನ್ನತವಾದದ್ದನ್ನು ಸೂಚಿಸುವ ಸಂಕೇತ. ಇಲ್ಲಿ ಇದು ಪುರುಷ ಮತ್ತು ಪ್ರಕೃತಿಯ, ಶಿವ ಮತ್ತು ಶಕ್ತಿಯರ ಐಕ್ಯಸ್ಥಾನವೂ ಅತ್ಯುನ್ನತವೂ ಆದ ಸಹಸ್ರಾರವನ್ನು ಸೂಚಿಸುತ್ತದೆ.
ನಮಃ ಶೃತಾಯ ಚ ಶ್ರುತಸೇನಾಯ ಚ
ಯಾರನ್ನು ವೇದಗಳು ತೋರಿಸಿವೆಯೂ, ಯಾರು ಗೌರವಾನ್ವಿತವೂ, ಪ್ರಸಿದ್ಧವೂ ಆದ ಸೈನ್ಯದ ಅಧಿಪತಿಯೋ ಅಂತಹ ರುದ್ರನಿಗೆ ನಮಸ್ಕಾರಗಳು.
ವೇದಗಳು ರುದ್ರನನ್ನು ತೋರಿಸಿವೆ ಎಂದರೆ ವೇದಗಳು ರುದ್ರನ ಬಗ್ಗೆ ಹೇಳಿವೆ ಎಂದು ಅರ್ಥ.ಜಪ ಮಂತ್ರಗಳು ಪ್ರಸಿದ್ಧವೂ ಹೌದು ಮತ್ತು ಗೌರವಾನ್ವಿತವೂ ಹೌದು. ಎಲ್ಲಾ ಮಂತ್ರಗಳನ್ನು ಸೈನ್ಯ ಎಂತಲೂ ಮತ್ತು ಸೈನ್ಯದ ಅಧಿಪತಿ ಯನ್ನು ರುದ್ರ ಎಂತಲೂ ಹೇಳಲಾಗಿದೆ.
ಶ್ರೀ ರುದ್ರ ದ 5 ಮತ್ತು 6 ನೇ ಅನುವಾಕಗಳನ್ನು ಒಟ್ಟಿಗೆ 11 ದಿನ ಪಾರಾಯಣ ಮಾಡುವುದರಿಂದ ನ್ಯಾಯಾಲಯದ ವ್ಯವಹಾರಗಳಲ್ಲಿ ಜಯಲಭಿಸುತ್ತದೆ ಮತ್ತು ಎಲ್ಲ ರೀತಿಯ ಶುಭವೂ ಉಂಟಾಗುತ್ತದೆ. ನಾವು ಯಾರಿಗೋ ಅನ್ಯಾಯ ಮಾಡಲಿಕ್ಕೆ, ಮೋಸ ಮಾಡಲಿಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಿ ಈ ಅನುವಾಕಗಳನ್ನು 11 ದಿನ ಪಾರಾಯಣ ಮಾಡಿಬಿಟ್ಟರೆ ಜಯ ಸಿಗುತ್ತದೆ ಎಂದು ಯಾರೂ ಪ್ರಯತ್ನಿಸಬಾರದು. ಹಾಗೆ ಮಾಡಿದರೆ ಅನುಕೂಲಕ್ಕಿಂತ ಹೆಚ್ಚು ತೊಂದರೆಯೇ ಆಗಬಹುದು.
ಇಲ್ಲಿಗೆ ಶ್ರೀ ರುದ್ರದ 6 ನೇ ಅನುವಾಕ ಸಂಪನ್ನವಾಗುತ್ತಿದೆ.
ಸಹನಾವವತು, ಸಹನೌಭುನಕ್ತು ಸಹವೀರ್ಯಮ್ ಕರವಾವಹೈಃ
ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ ಓಂ ಶಾಂತಿಃ ಶಾಂತಿಃ ಶಾಂತಿಃ
ನಮ್ಮೆಲ್ಲರಿಗೂ ರಕ್ಷಣೆ ಸಿಗಲಿ, ನಮ್ಮೆಲ್ಲರಿಗೂ ಪೌಷ್ಟಿಕ ಆಹಾರ ಸಿಗಲಿ, ನಾವು ಹೆಚ್ಚು ಶಕ್ತಿಯೊಂದಿಗೆ ಒಟ್ಟಿಗೆ ಕೆಲಸ ಮಾಡೋಣ ನಮ್ಮ ಬುದ್ಧಿ ಚುರುಕಾಗಲಿ, ನಮ್ಮ ಅಧ್ಯಯನ ಪರಿಣಾಮಕಾರಿಯಾಗಲಿ ನಮ್ಮಲ್ಲಿ ಯಾವುದೇ ದ್ವೇಷಾಸೂಯೆಗಳು ಇಲ್ಲದಂತಾಗಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ