ಸೌಂದರ್ಯ ಲಹರಿಯ 42 ನೇ ಮಂತ್ರಕ್ಕೆ ವಿವರಣೆ: ಸಹಸ್ರಾರ ಚಕ್ರದಲ್ಲಿ ಧ್ಯಾನ Soundarya lahari Verse# 42 explained


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

गतैर्माणिक्यत्वं गगनमणिभिः सान्द्रघटितं
किरीटं ते हैमं हिमगिरिसुते कीर्तयति यः ।
स नीडेयच्छायाच्छुरणशबलं चन्द्रशकलं
धनुः शौनासीरं किमिति न निबध्नाति धिषणाम् ॥ ४२॥

ಗತೈರ್ಮಾಣಿಕ್ಯತ್ವಂ ಗಗನಮಣಿಭಿಃ ಸಾನ್ದ್ರಘಟಿತಂ
ಕಿರೀಟಂ ತೇ ಹೈಮಂ ಹಿಮಗಿರಿಸುತೇ ಕೀರ್ತಯತಿ ಯಃ ।
ಸ ನೀಡೇಯಚ್ಛಾಯಾಚ್ಛುರಣಶಬಲಂ ಚನ್ದ್ರಶಕಲಂ
ಧನುಃ ಶೌನಾಸೀರಂ ಕಿಮಿತಿ ನ ನಿಬಧ್ನಾತಿ ಧಿಷಣಾಮ್ ॥ 42॥

ಓ ಹಿಮವನ್ನು ಹೊದ್ದಿರುವ ಪರ್ವತದ ಮಗಳೇ, ನಿನ್ನ ಶಿರದ ಮೇಲಿನ ಕಿರೀಟವು ಅಮೂಲ್ಯವಾದ ಮುತ್ತು ರತ್ನಗಳಿಂದ ಕೂಡಿದ್ದು, ನಕ್ಷತ್ರಗಳು ಮಾಣಿಕ್ಯದಂತೆ ಹೊಳೆಯುತ್ತಿರುವಂತೆ ತೋರುತ್ತಿದೆ. ಕವಿ ಇದನ್ನು ವರ್ಣಿಸುವಾಗ ನಿನ್ನ ಶಿರದ ಮೇಲಿನ ಅರ್ಧ ಚಂದ್ರನನ್ನು ಕಾಮನಬಿಲ್ಲು ಎಂದು ವರ್ಣಿಸಿಯಾನು ಏಕೆಂದರೆ ಆ ಮುತ್ತು ರತ್ನಗಳು ವಿವಿಧ ಬಣ್ಣಗಳಿಂದ ಹೊಳೆಯುತ್ತಿವೆ.

ಭಗವಾನ್ ಶಂಕರರು ದೇವಿಯನ್ನು ಬಗೆಬಗೆಯಾಗಿ ವರ್ಣಿಸುವ ಮೂಲಕ, ಭಕ್ತರು ದೇವಿಯ ಸಗುಣ ಸ್ವರೂಪವನ್ನು ಅರಿಯಲು ಸಹಕಾರಿಯಾಗಿದ್ದಾರೆ.
42 ನೇ ಮಂತ್ರದಿಂದ ಮುಂದಿನ ಮಂತ್ರಗಳನ್ನು ಸೌಂದರ್ಯ ಲಹರಿ ಎಂದೂ ಹಿಂದಿನ ಮಂತ್ರಗಳನ್ನು ಆನಂದ ಲಹರಿ ಎಂದು ಕರೆಯುವ ಪರಿಪಾಠವಿದ್ದರೂ, ಭಾಷ್ಯಕಾರರುಗಳಾದ, ಲಕ್ಷ್ಮೀ ಧರ, ಭಾಸ್ಕರಾಚಾರ್ಯ, ಕೈವಲ್ಯಾಶ್ರಮ ಇವರುಗಳು ಎಲ್ಲಾ ಮಂತ್ರಗಳನ್ನೂ ಸೌಂದರ್ಯ ಲಹರಿ ಎಂಬ ಹೆಸರನಿಂದಲೇ ಗುರುತಿಸಿದ್ದಾರೆ.

ಕಿರೀಟಮಂತ್ರ ಎಂದು ಕರೆಯಲ್ಪಡುವ ’ ಹಿರಣ್ಯಕಿರೀಟಾಯ ಸಹಸ್ರಾದಿತ್ಯ ತೇಜಸೇ ನಮಃ ’ದ ಮೂಲ ಈ 42 ನೇ ಮಂತ್ರ.
ದೇವಿಯ ಕಿರೀಟವು ಕೃಷ್ಣ ಚತುರ್ದಶಿಯಂದು ರವಿಯ ಉದಯಕಾಲದಲ್ಲಿ ಕಂದು ಬಣ್ಣ ಬೆರೆತ ಹಳದಿಬಣ್ಣದ ಹಾಸುಕಂಬಳಿಯಂತೆ ಆಕಾಶದಂತೆ ಕಾಣುತ್ತದೆ. ಹಾಗಾಗಿಯೇ ಕೃಷ್ಣ ಚತುರ್ದಶಿಯು ದೇವೀ ಉಪಾಸನೆಗೆ ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಅದರಲ್ಲೂ ಕಾರ್ತೀಕ ಕೃಷ್ಣ ಚತುರ್ದಶಿಯನ್ನು ’ರೂಪ ಚತುರ್ದಶಿ” ಎಂಬ ಹೆಸರಿದ್ದು ಆ ದಿನ ಆಕಾಶವು ದೇವಿಯ ಕಿರೀಟವು ಇಂದ್ರ ದನುಸ್ಸಿ ನಂತೆ ಅಂದರೆ ಕಾಮನಬಿಲ್ಲಿನಂತೆ ಕಾಣುತ್ತದೆ.

ಶಂಕರ ಭಗವತ್ಪಾದರು, ಈ ಮಂತ್ರದಿಂದ ಆರಂಭಿಸಿ ಸೌಂದರ್ಯದ ಅಲೆಗಳ ಅನುಭವವನ್ನು ಹೇಳುತ್ತಾ, ಸೌಂದರ್ಯವೇ ಬ್ರಹ್ಮಾಂಡದ ಪ್ರಜ್ಞೆಯ ನಿಜ ಸ್ವರೂಪ ಎಂಬುದನ್ನು ಪ್ರತಿಪಾದಿಸಿದ್ದಾರೆ. ಇದು ಅವರ ಒಳಗಿನ ಅನುಭವವೇ ಆಗಿದೆ. ಇದೆಲ್ಲವೂ ಶಂಕರರ ಪ್ರಬುದ್ಧ ಪ್ರಜ್ಞೆಯ ಆಳದಲ್ಲಿ ಆಗಿರುವ ಅನುಭವಗಳು
ಸೌಂದರ್ಯ ಲಹರಿಯು ಪೂಜಾವಿಧಾನಗಳನ್ನು ತಿಳಿಸುವ ಮಂತ್ರಗಳಾಗಿರದೆ, ಮಾನಸಿಕ ವರ್ತನೆಯ ಮೂಲಕ ದೇವಿಯಲ್ಲಿ ಸಂಪೂರ್ಣ ಶರಣಾಗತಿ ಮತ್ತು ಅಲ್ಲಿಯೇ ಐಕ್ಯ ವಾಗುವ ಅನುಭವವನ್ನು ನೀಡುತ್ತವೆ.

ಶ್ರೀ ಯಂತ್ರವನ್ನು ನಮ್ಮೊಳಗೇ ಪೂಜಿಸುವ ಮೂಲಕ ಸುಪ್ತವಾಗಿರುವ ಮಹಾಶಕ್ತಿಯು ಎಚ್ಚರಗೊಂಡು ಸಹಸ್ರಾರವನ್ನೂ ಮೀರಿದ ಅತ್ಯುನ್ನತ ಕೇಂದ್ರದಲ್ಲಿ ಪ್ರಕಾಶಿಸುತ್ತದೆ. ಈ ಸ್ಥಿತಿಯನ್ನು ತಲುಪಿದಾಗ ಶಕ್ತಿಯು ಮತ್ತಷ್ಟು ವಿಸ್ತಾರಗೊಂಡು ದೈವತ್ವದ ಅನುಭವವಾಗುತ್ತದೆ.

ಮಾನವರಲ್ಲಿ ಸಹಸ್ರಾರವು ಅತ್ಯುನ್ನತ ಜಾಗೃತ ಕೇಂದ್ರವಾದರೆ ಪ್ರಾಣಿಗಳಲ್ಲಿ ಮೂಲಾಧಾರವೇ ಅತ್ಯುನ್ನತ ಜಾಗೃತ ಕೇಂದ್ರ . ಮೂಲಾಧಾರದಿಂದ ಮಾನವನ ವಿಕಾಸ ಆರಂಭವಾಗಿ ಸಹಸ್ರಾರದಲ್ಲಿ ಪರಾಕಾಷ್ಟತೆಯ ಸ್ಥಿತಿಯನ್ನು ಹೊಂದುತ್ತದೆ.
ಶಂಕರರು ಇಲ್ಲಿ ಹೇಳುತ್ತಿರುವ ಅನುಭವ ಸಹಸ್ರಾರದಲ್ಲಿ ಹೊಂದುವ ಅನುಭವಕ್ಕಿಂತ ಮಿಗಿಲಾದದ್ದು. ದೈವಿಕ ಸಾಮ್ರಾಜ್ಯದಲ್ಲಿ ಸುಂದರವೇ ದೇವಿಯ ಅನುಭವ. ಪ್ರಕಟಗೊಂಡಿರುವ ಬ್ರಹ್ಮಾಂಡದಲ್ಲಿ ಮಾತ್ರವೇ ಅಲ್ಲದೆ ಅಪ್ರಕಟಿತ ಬ್ರಹ್ಮಾಂಡದಲ್ಲಿಯೂ ದೇವಿಯು ನೆಲೆಸಿದ್ದು ಮೂರು ಲೋಕಗಳಲ್ಲೂ ಸೌಂದರ್ಯ ರಾಣಿ ಯಾಗಿ ರಾಜ್ಯಭಾರ ಮಾಡುತ್ತಿದ್ದಾಳೆ.

ಶಂಕರರು ದೇವಿಯನ್ನು ತಮ್ಮ್ಮೊಳಗೆಯೇ ಸತ್ಯ, ಶಿವ ಮತ್ತು ಸುಂದರವಾಗಿ ಗ್ರಹಿಸಿದ್ದಾರೆ. ದೇವಿಯು ತ್ರಿಪುರಸುಂದರಿ ಯಾಗಿ ಸೃಷ್ಟಿಯ ಎಲ್ಲೆಡೆ ಸತ್ಯವಾಗಿ, ಮಂಗಳವಾಗಿ, ಸುಂದರವಾಗಿ ವ್ಯಾಪಿಸಿದ್ದಾಳೆ
ಶಿವ ಶಕ್ತಿ ತತ್ವಗಳು ಸಹಸ್ರಾರದಿಂದ ಅಧೋಮುಖವಾಗಿ ಚಲಿಸಿ ಮೂಲಾಧಾರವನ್ನು ತಲುಪಿದಾಗ ಮಾನವನ ಪ್ರಜ್ಞೆ ರೂಪಾಂತರಗೊಂಡು ಹೊಸದಾಗಿ ಮರುಹುಟ್ಟನ್ನು ಪಡೆದ ಅನುಭವವನ್ನು ನೀಡುತ್ತದೆ.
ಇಂತಹ ಸಮಾಗಮ ದ ಸ್ಥಿತಿಯಲ್ಲಿ ಪ್ರಜ್ಞೆಯು ಪರಮಾತ್ಮನ, ಆ ಬ್ರಹ್ಮಾಂಡದ ಪ್ರಜ್ಞೆಯ ದೈವೀಕ ಅನುಭವವನ್ನು ಪಡೆಯುತ್ತದೆ. ಇಂತಹ ಅನುಭವವನ್ನು ಹೊಂದಿದ ಶಂಕರರು ದೇವಿಯ ಸಾಂಕೇತಿಕ ರೂಪಗಳನ್ನು ಸಂಸ್ಕೃತ ಭಾಷೆಯ ಕಾವ್ಯಾಧಾರೆಯಾಗಿ ಹರಿಸಿದ್ದಾರೆ. ಈ ಸಾಂಕೇತಿಕ ರೂಪಗಳು ರಹಸ್ಯಾರ್ಥಗಳನ್ನು ಹೊಂದಿರುವುದಲ್ಲದೇ ಅತ್ಯಂತ ಪ್ರಭಾವಶಾಲಿ ಮಂತ್ರಗಳಾಗಿವೆ. ಇವು ಮಾರಣಾಂತಿಕ ರೋಗಗಳನ್ನು ಗುಣಪಡಿಸುತ್ತವೆ, ಶತೃಗಳನ್ನು ನಾಶಗೊಳಿಸುತ್ತವೆ, ಕಳೆದುಹೋಗಿರುವ ಗೌರವ ಘನತೆಗಳನ್ನು ಮತ್ತೆ ತರುತ್ತವೆ. ಅಪಾರ ದ್ರವ್ಯಸಂಪಾದನೆಗೆ ಹಾದಿ ತೋರುತ್ತವೆ, ಕನಸಿನಲ್ಲೂ ಕಾಣದ ಭಾಗ್ಯಗಳನ್ನು ನೀಡುತ್ತವೆ

ಶಂಕರರು ಸೌಂದರ್ಯ ಲಹರಿಯನ್ನು ಈ ರೀತಿ ಏಕೆ ರಚಿಸಿದರು ಎಂದು ಅಚ್ಚರಿ ಪಡದೇ ಅವುಗಳಲ್ಲಿ ಅಡಗಿರುವ ಅತ್ಯಂತ ಪ್ರಭಾವಶಾಲೀ ಮಂತ್ರಗಳನ್ನು ಗುರುತಿಸಬೇಕು.
ದೇವಿಯ ಶಕ್ತಿಯಿಂದ ಎಲ್ಲವನ್ನೂ ಏನನ್ನು ಬೇಕಾದರೂ ಅದು ಪ್ರಾಪಂಚಿಕ ಸುಖಭೋಗ ವಿರಲಿ, ಜೀವನ್ಮುಕ್ತಿಯೇ ಆಗಿರಲಿ ಎಲ್ಲವನ್ನು ನೀಡುವಳು ಎಂಬ ಭಾವನೆ ಸದಾ ಸಾಧಕನ ಮನಸ್ಸು ಮತ್ತು ಹೃದಯದಲ್ಲಿ ತುಂಬಿರಬೇಕು. . ತಾಯಿಯು ಭುಕ್ತಿ ಮುಕ್ತಿ ಪ್ರದಾಯಿನಿಯಾಗಿದ್ದಾಳೆ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: