ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಮ್ ಪುನಃ ಪುನಃ
ತಟಿತ್ತ್ವನ್ತಂ ಶಕ್ತ್ಯಾ ತಿಮಿರಪರಿಪನ್ಥಿಫುರಣಯಾ
ಸ್ಫುರನ್ನಾನಾರತ್ನಾಭರಣಪರಿಣದ್ಧೇನ್ದ್ರಧನುಷಮ್ ।
ತವ ಶ್ಯಾಮಂ ಮೇಘಂ ಕಮಪಿ ಮಣಿಪೂರೈಕಶರಣಂ
ನಿಷೇವೇ ವರ್ಷನ್ತಂ ಹರಮಿಹಿರತಪ್ತಂ ತ್ರಿಭುವನಮ್ ॥ 40॥
तटित्त्वन्तं शक्त्या तिमिरपरिपन्थिफुरणया
स्फुरन्नानारत्नाभरणपरिणद्धेन्द्रधनुषम् ।
तव श्यामं मेघं कमपि मणिपूरैकशरणं
निषेवे वर्षन्तं हरमिहिरतप्तं त्रिभुवनम् ॥ ४०॥
ತಾಯೇ ನಿನ್ನ ಮಣಿಪೂರಚಕ್ರದಲ್ಲಿ ಸ್ಥಿತವಾಗಿ ಶಕ್ತಿಯ ಮಿಂಚಿನ ಪ್ರಭೆಯಿಂದ ಹೊಳೆಯುತ್ತಿರುವ ವಿಶಿಷ್ಟವಾದ ಗಾಢವಾದ ನೀಲಿಬಣ್ಣದ ಮೋಡಗಳನ್ನು ಧ್ಯಾನಿಸುತ್ತಿದ್ದೇನೆ. ಅಲ್ಲಿ, ಬೆರುಗುಗೊಳಿಸುವ, ಪ್ರಕಾಶಮಾನವಾದ ಮುತ್ತು ರತ್ನಗಳಿಂದ ಕೂಡಿದ ಆಭರಣಗಳಿಂದ ರೂಪುಗೊಂಡಿರುವ ಕಾಮನಬಿಲ್ಲು ಈ ಗಾಢವಾದ ಕತ್ತಲನ್ನು ಹೊಡೆದೋಡಿಸುತ್ತಿದೆ ಹಾಗೂ ಹರ ಮತ್ತು ಮಿಹಿರರಿಂದ ಅಂದರೆ, ರುದ್ರ ಮತ್ತು ಸೂರ್ಯರ ಬೆಂಕಿಯಿಂದ ಬೆಂದು ಹೋಗುತ್ತಿರುವ ಮೂರೂ ಲೋಕಗಳ ಮೇಲೆ ಮಳೆಯನ್ನು ಸುರಿಸುತ್ತಿದೆ.
ಮಣಿಪೂರ ಚಕ್ರದಲ್ಲಿ ಸ್ಥಿತವಾಗಿರುವ ದೈವೀ ಶಕ್ತಿಯನ್ನು ಮೇಘೇಶ್ವರ ಮತ್ತು ಸೌದಾಮಿನೀ ಎಂದು ಕರೆಯಲಾಗಿದೆ. ಇವರನ್ನ್ನು ಅಮೃತೇಶ್ವರ ಮತ್ತು ಅಮೃತೇಶ್ವರೀ ಎಂದೂ ಸಹಾ ಹೇಳಲಾಗಿದೆ. ಈ ಶಕ್ತಿಗಳನ್ನು ಜಲದ 52 ಕಿರಣಗಳು ಸುತ್ತುವರೆದರುವಂತೆ ಭಾವಿಸಿ ಸಾಧಕರು ಧ್ಯಾನಾಸಕ್ತರಾಗುತ್ತಾರೆ
ಅನಾಹತದಲ್ಲಿನ ಸೂರ್ಯಕಿರಣಗಳು, ಸ್ವಾಧಿಷ್ಟಾನದ ಬೆಂಕಿಯ ಕಿರಣಗಳೊಂದಿಗೆ ಸೇರಿ ಮಣಿಪೂರ ಚಕ್ರದ ಜಲವನ್ನು ಮೋಡಗಳಾಗಿ ಪರಿವರ್ತಿಸುತ್ತದೆ ಎಂಬದು ಒಂದು ಅಭಿಪ್ರಾಯವಾದರೆ, ಸಮಯ ತಂತ್ರವು, ಅನಾಹತದಲ್ಲಿನ ವಾಯುವು ಸ್ವಾಧಿಷ್ಟಾನದ ಬೆಂಕಿಯ ಕಿರಣಗಳೊಂದಿಗೆ ಸೇರಿ ತಂಪಾಗಿ ಮಣಿಪೂರವನ್ನು ಸೇರಿ ಜಲದ ರೂಪ ಪಡೆಯುತ್ತದೆ ಎಂಬ ಅಭಿಪ್ರಾಯವನ್ನು ಸೂಚಿಸುತ್ತದೆ.
ಇಡೀ ಬ್ರಹ್ಮಾಂಡವೇ ಸ್ವಾಧಿಷ್ಟಾನದ ಕಾಮಾಗ್ನಿಯಲ್ಲಿ, ಆಸೆಗಳ ಬೆಂಕಿಯಲ್ಲಿ ದಹಿಸಿಹೋಗುತ್ತಿರುವಾಗ ಅದು ಮಳೆಯಲ್ಲಿ ತೋಯ್ದು ಹೋಗಿ ಮಣಿಪೂರದಲ್ಲಿ ಬೆಂಕಿ ಶಮನವಾದ ಅನುಭವವನ್ನು ಪಡೆಯುತ್ತದೆ. ಹಾಗಾಗಿ ಕುಂಡಲಿನಿಯು ಮಣಿಪೂರ ತಲುಪಿದಾಗ ಸಾಧಕನಿಗೆ ಒಂದು ಬಗೆಯ ಸಮಾಧಾನದ ಅನುಭವ ಆಗುತ್ತದೆ. ಎಲ್ಲಾ ವಾಸನೆಗಳ, ಸಂಸ್ಕಾರಗಳ ಹಿಡಿತದಿಂದ ಬಿಡುಗಡೆ ಹೊಂದುವುದು ಮಣಿಪೂರ ಚಕ್ರದಲ್ಲಿಯೇ.
ಶ್ರೀ ಲಕ್ಷ್ಮೀಧರರು ಈ ಮಂತ್ರಕ್ಕೆ ವ್ಯಾಖ್ಯಾನ ನೀಡುತ್ತಾ ಸಿದ್ಧ ಘುಟಿಕಾ ಎಂಬ ಪುರಾತನ ಐಂದ್ರಜಾಲಿಕ ಗ್ರಂಥವನ್ನು ಉಲ್ಲೇಖಿಸಿ, ಚಳಿಗಾಲದ ಮೋಡದ ರೂಪದ ಸದಾಶಿವ ಶಕ್ತಿಯು, ಮಿಂಚಿನರೂಪದ ತನ್ನ ಅರ್ಧಾಂಗಿಯೊಂದಿಗೆ ಮಣಿಪೂರದಲ್ಲಿ ಹೊಳೆಯುತ್ತಿದೆ ಎಂದಿದ್ದಾರೆ.
ಹಗಲು ಮತ್ತು ರಾತ್ರಿಗಳಿಗೆ ಕಾರಣವಾದ ಸೂರ್ಯ, ಚಂದ್ರ ಅಗ್ನಿ ಮತ್ತು ನಕ್ಷತ್ರಗಳ ಉಗಮವನ್ನು ವಿವರಿಸಿರುವ ತೈತ್ತಿರೀಯ ಅರಣ್ಯಕದ ಒಂದು ಅಧ್ಯಾಯವು, ಈ ಎಲ್ಲಾ ಬೆಳಗುವ ಆಕಾಶಕಾಯಗಳು ಜಲದಿಂದಲೇ ಉಗಮ ವಾಗಿದೆ ಎಂದು ಹೇಳಿದೆ.
ಜಲ ಅಥವಾ ಅಮೃತದ ಮೂಲತತ್ವವೇ ಸೂರ್ಯನನ್ನು ಸುತ್ತುವರೆದಿದೆ ಹಾಗೂ ಚಂದ್ರನು ಜಲದ ಮೂಲತತ್ವ ಎಂದು ವಿವರಿಸಲಾಗಿದೆ.
ಮಣಿಪೂರದ ಜಲತತ್ವವು ಎಲ್ಲಾ ಅಮೃತಗಳ ಬುಗ್ಗೆಯಾಗಿ, ಚಂದ್ರನಿಂದ ಹರಿದು ಸೂರ್ಯನ ಸುತ್ತಲೂ ಪಸರಿಸಿ, ಅದು ಹರಿಯುವಷ್ಟು ಕಾಲವೂ ಪೋಷಣೆಯನ್ನು ನೀಡುವ ಚಂದ್ರನನ್ನು ಹೊಂದಲು ಸಾಧಕನು ಬಯಸುತ್ತಾನೆ
ಕುಲಪಥ ಅಥವಾ ಕುಂಡಲನೀ ಪಥವು ಸಮಯ ಪದ್ಧತಿಯಲ್ಲಿ ಬೇರೆ ಪದ್ದತಿಗಳಿಗೆ ಭಿನ್ನ ವಾಗಿರುವ ಕಾರಣ ಶ್ರೀ ಭಗವಾನ್ ಶಂಕರರು ಸ್ವಾಧಿಷ್ಠಾನ ವನ್ನು ಮಣಿಪೂರಕ್ಕೆ ಮೊದಲು ಪೂಜಿಸಿದ್ದಾರೆ, ಧ್ಯಾನಿಸಿದ್ದಾರೆ.
ಆಧ್ಯಾತ್ಮಿಕ ಪಯಣಕ್ಕೆ ಎರಡು ಹಾದಿಗಳಿವೆ,ಒಂದು ಜ್ಞಾನ ಮಾರ್ಗ ಮತ್ತೊಂದು ಅನುಭವ. ಜ್ಞಾನ ಮಾರ್ಗದಲ್ಲಿ ಮಾರ್ಗದರ್ಶನ ನೀಡುವುದು ತರ್ಕದ ಮೂಲಕ ಚಿಂತಿಸುವ ಬುದ್ಧಿ ಆಗಿದ್ದರೆ, ಅನುಭವದ ಮಾರ್ಗದಲ್ಲ ಪರಿಶುದ್ಧತೆ ಮತ್ತು ಮುಗ್ಧತೆಗಳು ಶ್ರದ್ಧೆಯ ಮೂಲಕ ಮಾರ್ಗದರ್ಶನ ನೀಡುತ್ತವೆ. ಈ ಎರಡೂ ಮಾರ್ಗಗಳೂ ನಮ್ಮನ್ನು ಗಮ್ಯಕ್ಕೆ ಕರೆದೊಯ್ದರೂ, ಅನುಭವದ ಮಾರ್ಗವು ಉತ್ತಮ ಎನ್ನುವುದು ಸತ್ಯ.
ಶ್ರೀ ಶಂಕರ ಭಗವತ್ಪಾದರ ಪ್ರಾರ್ಥನೆಯಲ್ಲಿನ ಪರಿಶುದ್ಧತೆ ಮತ್ತು ಮುಗ್ಧತೆಯಿಂದ ಅವರಿಗೆ ಭವ್ಯವಾದ, ಉದಾತ್ತವಾದ,ಮಹೋನ್ನತವಾದ ಸತ್ಯಗಳು ಅರಿವಿಗೆ ಬರಲು ಸಾಧ್ಯವಾಯಿತು. ಶ್ರೀ ಶಂಕರರ ಕುಲಪಥದ ಮಾರ್ಗ ಬೇರೆ ತಂತ್ರ ಮಾರ್ಗಗಳಿಗಿಂತ ಬೇರೆಯೇ ಆದರೂ ಅವರ ಅನುಭವವನ್ನು ಅಲ್ಲಗಳೆಯಲು ಸಾದ್ಯವೇ ಇಲ್ಲಾ. .
ಶಿವ ತತ್ವವನ್ನು ಜಲದಿಂದ ತುಂಬಿಹೋಗಿರುವ ಗಾಢ ನೀಲಿ ಬಣ್ಣದ ಮೋಡವೆಂತಲೂ, ಹಾಗೂ ಈ ಮೋಡದಲ್ಲಿನ ಮಿಂಚು ಶಕ್ತಿತತ್ವ ವೆಂತಲೂ ಹೇಳುವ ಮೂಲಕ ಮಣಿಪೂರ ಚಕ್ರದ ಚಿಹ್ನೆಯನ್ನು ಬಣ್ಣಿಸಿರುವುದು ಅತ್ಯಂತ ಯುಕ್ತವಾಗಿದ್ದು ಇಂತಹ ಬಣ್ಣನೆ ಶ್ರೀ ಶಂಕರ ಭಗವತ್ಪಾದರಿಂದ ಮಾತ್ರವೇ ಸಾಧ್ಯವಾಗುವಂತದ್ದು.
ಕುಂಡಲಿನೀ ಶಕ್ತಿಯು ಮಣಿಪೂರಚಕ್ರದಲ್ಲಿ ಸಂಚರಿಸುವಾಗ ಕೆಳ ಹಂತಗಳಲ್ಲಿನ ಅಂದರೆ ಸ್ವಾಧಿಷ್ಠಾನ ಮತ್ತು ಮೂಲಾಧಾರಗಳಲ್ಲಿ ಇದ್ದಿರಬಹದಾದ ಕೊನೆಯ ಗುರುತುಗಳನ್ನು, ಲಕ್ಷಣಗಳನ್ನು, ಮತ್ತು ಉಳಿದಿರಬಹುದಾದ ಅಶುದ್ಧತೆಯನ್ನು ಜಾಲಾಡಿಬಿಡುವುದರಿಂದ ಅದು ಹಗುರವಾಗಿ ಮುಂದಿನ ಚಕ್ರಗಳಲ್ಲಿ ಚಲನೆ ಸುಲಭವಾಗುತ್ತದೆ.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು