ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ಶ್ರೀ ವಿದ್ಯಾ ಉಪಾಸಕರಿಗೆ, ದೇವಿಯ ಎಲ್ಲಾ ನಾಮ ರೂಪಗಳೂ ಪರಾಶಕ್ತಿ, ಪರಬ್ರಹ್ಮಸ್ವರೂಪಿಣಿ, ಗುರುಮಂಡಲ ರೂಪಿಣಿ, ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ವಿವಿಧ ರೂಪಗಳೇ ಆಗಿವೆ. ದಂಡನಾಥಾ, ದಂಡಿನೀ, ವಾರ್ತಾಲೀ ಮುಂತಾದ ನಾಮಗಳಿಂದ ಸ್ತುತಿಸಲ್ಪಡುವ ಶ್ರೀ ವಾರಾಹೀ ದೇವಿಯೂ ಸಹಾ, ಶ್ರೀ ಲಲಿತಾ ಮಹಾತ್ರಿಪುರಸುಂದರೀ ದೇವಿಯ ಸೇನಾನಾಯಿಕೆಯಾಗಿ ಉಪಾಸನೆಗೆ ತಡೆಯೊಡ್ಡುವ ಒಳಗಿನ ಮತ್ತು ಹೊರಗಿನ ಶತೃ ಸಮೂಹವನ್ನು ನಿಗ್ರಹಿಸುವ, ನಾಶಮಾಡುವ ಶಕ್ತಿಯಾಗಿದ್ದಾಳೆ. ತನ್ಮೂಲಕ ತನ್ನ ಭಕ್ತರ, ಉಪಾಸಕರ ಐಹಿಕ ಮತ್ತು ಪಾರಮಾರ್ಥಿಕ ಹಾದಿಯಲ್ಲಿ ಬರಬಹುದಾದ ಅಡೆತಡೆಗಳನ್ನು ನಿವಾರಿಸುತ್ತಾಳೆ.
ಈಗಿನ ಮತ್ತು ಹಿಂದಿನ ಕರ್ಮಗಳು ನಮ್ಮ ಐಹಿಕ ಮತ್ತು ಪಾರಮಾರ್ಥಿಕ ಹಾದಿಯನ್ನು ಸುಗಮಗೊಳಿಸುತ್ತವೆ ಅಥವಾ ಅಡೆತಡೆಗಳನ್ನು ಒಡ್ಡಿ ಹಾದಿಯನ್ನು ದುರ್ಗಮಗೊಳಿಸುವ ಮೂಲಕ ಗಮ್ಯ ತಲುಪಲು ಅಸಾದ್ಯವಾಗುವಂತೆ ಮಾಡುತ್ತವೆ.
ದೈಹಿಕ ಅನಾರೋಗ್ಯ, ಮಾನಸಿಕ ಕ್ಷೋಭೆಯೂ ಸೇರಿದಂತೆ ಮತ್ತು ಒಳಗಿನ ಮತ್ತು ಹೊರಗಿನ ಶತೃಗಳು, ಈ ಕರ್ಮಗಳ ಫಲಗಳೇ ಆಗಿವೆ. ಈ ಶತೃಗಳ ನಿಗ್ರಹ ಮತ್ತು ವಿನಾಶಕ್ಕೆ ಶ್ರೀ ವಾರಾಹೀ ದೇವಿಯ ಕವಚ, ಅಷ್ಟೋತ್ತರ ಮತ್ತು ಸಹಸ್ರನಾಮಗಳು ದಿವ್ಯಾಯುಧಗಳಾಗಿವೆ.
ಇವೆಲ್ಲವೂ ತಂತ್ರೋಕ್ತಗಳಾದ ಕಾರಣ, ಗುರೂಪದೇಶ ಅವಶ್ಯವಾಗಿದೆ. ಆದರೆ ಅದು ಸಾದ್ಯವಿಲ್ಲದಾಗ ಆದಿಗುರು ಶ್ರೀ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ ಶ್ರದ್ಧಾಭಕ್ತಿಗಳಿಂದ , ಕವಚ, ಅಷ್ಟೋತ್ತರ, ಸಹಸ್ರನಾಮಗಳನ್ನು ಪಠಿಸಬಹುದು.
ಈ ಮಂತ್ರಗಳ ಶಕ್ತಿ ಮತ್ತು ಅದರ ಪರಿಣಾಮಗಳು ನಮ್ಮ ಶ್ರದ್ದಾ ಭಕ್ತಿಗಳಿಗೆ ಅನುಗುಣವಾಗಿರುತ್ತದೆ ಎನ್ನುವುದು ಗಮನಿಸಬೇಕಾದ ಸಂಗತಿ.
ಗುರುಮಂಡಲ ಸಂಪೂರ್ಣ ಅನುಗ್ರಹ ಪ್ರಾಪ್ತಿರಸ್ತು-
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು