ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ನ ಚ ಪ್ರಾಣ ಸಂಜ್ಞ್ಯೋ ನ ವೈ ಪಂಚವಾಯುಃ
ನ ವಾ ಸಪ್ತಧಾತುರ್ ನ ವಾ ಪಂಚಕೋಶಃ
ನ ವಾಕ್ಪಾಣಿಪಾದೌ ನ ಚೋಪಸ್ತಪಾಯೂ
ಚಿದಾನಂದ ರೂಪಃ ಶಿವೋಹಂ ಶಿವೋಹಂ
ನಾನು ಪ್ರಾಣ ಅಲ್ಲಾ- ನಾನು ಪಂಚವಾಯುಗಳೂ ಅಲ್ಲಾ, ನಾನು ಸಪ್ತ ಧಾತುಗಳೂ ಅಲ್ಲಾ, ನಾನು ಐದು ಕೋಶಗಳೂ ಅಲ್ಲಾ. ನಾನು ವಾಕ್ಕು ಆಗಲೀ, ಕೈಗಳಾಗಲೀ ಕಾಲುಗಳಾಗಲಿ, ಜನನೇಂದ್ರಿಯಗಳಾಗಲೀ ವಿಸರ್ಜನಾ ಅಂಗಗಳಾಗಲೀ ಅಲ್ಲಾ ನಾನು ಮಂಗಳಕರವಾದ ಶಿವ, ಆನಂದರೂಪವಾದ ಪ್ರಜ್ಞೆ ನಾನಾಗಿದ್ದೇನೆ.
ಈ ಶ್ಲೋಕದಲ್ಲು ಸಹಾ ಆತ್ಮನು ಸ್ಥೂಲ, ಸೂಕ್ಷ್ಮ ಕಾರಣ ದೇಹಗಳಿಂಗಿಂತಾ ಮಿಗಿಲಾದದ್ದು ಎಂಬುದನ್ನೇ ಭಗವಾನ್ ಶಂಕರರು ಪ್ರತಿಪಾದಿಸಿದ್ದಾರೆ
ನ ಚ ಪ್ರಾಣ ಸಂಜ್ಞ್ಯೋ – ಪ್ರಾಣ ಎನ್ನುವುದು ಮೂಲಪ್ರಕೃತಿ ಅಥ್ವಾ ಮಾಯಾ. ಈ ಮೂಲಪ್ರಕೃತಿಯೂ ಆತ್ಮ ಅಲ್ಲಾ ಅಂದಾಗ ಕಾರಣದೇಹವೂ ಆತ್ಮ ಅಲ್ಲಾ ನಾನು ಅಲ್ಲಾ ಎಂದಾಯಿತು. ಪ್ರಾಣ ಎನ್ನುವುದು ಆತ್ಮ ಮತ್ತು ದೇಹವನ್ನು ಕಟ್ಟಿಹಾಕಿರುವ ಒಂದು ಚಿಕ್ಕ ಹಗ್ಗದ ಹುರಿ ಅಷ್ಟೆ. ಪ್ರಾಣವು ದೇಹವನ್ನು ಬಿಟ್ಟಾಗ, ಆ ಹಗ್ಗ ಬಿಚ್ಚಿಕೊಂಡು ಆತ್ಮನನ್ನು ಆ ದೇಹದಿಂದ ಬಿಡುಗಡೆ ಗೊಳಿಸುತ್ತದೆ ಹಾಗಾಗಿ ನಾನು ಎನ್ನ್ನುವ ಆತ್ಮ ಪ್ರಾಣವೂ ಅಲ್ಲಾ.
ನ ವೈ ಪಂಚವಾಯುಃ – ನಾನು ಪಂಚವಾಯುಗಳೂ ಅಲ್ಲಾ. ಪ್ರಾಣ, ಅಪಾನ, ವ್ಯಾನ, ಉದಾನ ಸಮಾನ ಇವು ಪಂಚವಾಯುಗಳು. ಪ್ರಾಣವು ಸೂರ್ಯ ಅಥವಾ ಅಗ್ನಿಯ ಶಕ್ತಿ. ಈ ಜ್ವಾಲೆ ಮೇಲ್ಮುಖವಾಗಿ ಹರಿಯುವಂತಾದ್ದು. ಪ್ರಾಣವಾಯುವಿನ ಸ್ಥಾನ ಶ್ವಾಸಕೋಶ. ಇದು ಉಸಿರಾಟದ ಪ್ರಕ್ರಿಯೆಯನ್ನು ನಿರ್ವಹಿಸುವುದೇ ಈ ಪ್ರಾಣ ವಾಯು. ಉಸಿರಾಟದ ಅಂಗಾಂಗಗಳು, ಮಾತು ಇವಕ್ಕ್ ಸಂಬಂಧಿಸಿದ ಮಾಂಸಖಂಡಗಳಾನ್ನು ಇದು ನಿಯಂತ್ರಿಸುತ್ತದೆ. ಪ್ರಾಣ ವಾಯುವಿನ ಹರಿವಿನಿಂದ ಸಂವೇದನೆಯ, ಭಾವನೆಗಳ ಅನುಭವ ಆಗುತ್ತದೆ. ಅಷ್ಟೆ ಅಲ್ಲದೆ ಈ ಪ್ರಾಣ ವಾಯುವು ಮನಸ್ಸಿನ ಹತೋಟಿಗೂ ಕಾರಣ ಆಗಿದೆ. ಉಳಿದ ನಾಲ್ಕು ವಾಯುಗಳೂ ಸಹಾ ಈ ಪ್ರಾಣ ವಾಯುವಿನಿಂದಲೇ ಶಕ್ತಿಯನ್ನು ಪಡೆದುಕೊಳ್ಳುತ್ತದೆ.
ಅಪಾನ ವಾಯುವು ಚಂದ್ರನ ಶೀತಲ ಶಕ್ತಿ. ಇದು ದೇಹವನ್ನು ಹೊರಗಿನಿಂದ ರಕ್ಷಿಸುತ್ತದೆ. ಇದು ಗುರುತ್ವಾಕರ್ಷಣೆಯೊಂದಿಗೆ ಜತೆಗೂಡಿದೆ. ಅಧೋಮುಖವಾಗಿ ಚಲಿಸುವ ತಣ್ಣನೆಯ ನೀರಿನೊಂದಿಗೆ ಸಂಪರ್ಕಹೊಂದಿದೆ ಈ ಅಪಾನ ವಾಯು. ಹೊಟ್ಟೆಯ ಭಾಗದಲ್ಲಿ ನಾಭಿಯ ಕೆಳಗೆ ಈ ಅಪಾನ ವಾಯುವಿನ ಸ್ಥಾನವಾಗಿದೆ. ವಿಸರ್ಜನಾ ಅಂಗಗಳ ಮತ್ತು ಜನನೇಂದ್ರಿಯಗಳ ಮೂಲಕ ಆಗುವ ವಿಸರ್ಜನೆಗೆ ಅಪಾನ ವಾಯು ಕಾರಣವಾಗಿದೆ.
ಶರೀರದ ಎಲ್ಲೆಡೆ ವ್ಯಾಪಿಸಿದೆ ವ್ಯಾನ ವಾಯು. ಚಲನೆಯ ಶಕ್ತಿಯೇ ವ್ಯಾನ ವಾಯು. ಇದು ಐಚ್ಚಿಕ ಮತ್ತು ಅನೈಚ್ಚಿಕ ಮಾಂಸಖಂಡಗಳ ಸಂಕುಚನೆ ಮತ್ತು ವಿಕಸನೆಗೆ ಕಾರಣ ವಾದ ವಾಯು. ಕೀಲುಗಳ ಚಲನೆಗೂ ಈ ವಾಯುವೇ ಕಾರಣ ವಾಗಿದೆ, ಹಾಗಾಗಿಯೇ ಕೀಲು ನೋವನ್ನು ವಾಯು ಎಂದು ಆಯುರ್ವೇದ ಎಂದು ಹೇಳಿದೆ ಆಷ್ಟೇ ಅಲ್ಲಾ ಮಾಂಸಖಂಡಗಳ ಉಳಕು ಆಗಿ ನೋವಾದಾಗ ಧೀರ್ಘಉಸಿರಾಟ ಮಾದರೆ ಉಳುಕಿದ ಮಾಂಸಖಂಡ ಸರಯಾಗಿ ನೋವು ಕಡಿಮೆ ಆಗುವುದು ನಮ್ಮಲ್ಲಿ ಅನೇಕರಿಗೆ ಅನುಬವ ಆಗಿರುತ್ತದೆ.
ಉದಾನ ವಾಯುವು ಧ್ವನಿಪೆಟ್ಟಿಗೆಯ ಮೇಲ್ಭಾಗದ ಆಧಿಪತ್ಯವನ್ನು ಹೊಂದಿದೆ. ಈ ವಾಯುವಿನ ಸಹಾಯದಿಂದಲೇ ನಮ್ಮ ವಿಶೇಷವಾದ ಒಳಗಿನ ಭಾವದ ಅರಿವಾಗುವುದು (Intution) ಕುಂಡಲಿನೀ ಸೂಕ್ಷ್ಮ ದೇಹದಲ್ಲಿ ಮೇಲ್ಭಾಗದ ಚಲನೆಗೆ ಸಹಕರಿಸುವುದೇ ಈ ವಾಯು. ಬುದ್ಧಿ, ವಿವೇಚನೆ ಸಹಾ ಈ ವಾಯುವಿನಂದಲೇ ನಿಯಂತ್ರಿಸಲ್ಪಟ್ಟಿದೆ. ಈ ವಾಯವಿನ ಕ್ರಿಯೆಯು ಸುಷುಮ್ನಾ ನಾಡಿಯಲ್ಲಿ ಗೋಚರಿಸುತ್ತದೆ. ಪ್ರಾಣ ಮತ್ತು ಅಪಾನ ವಾಯುಗಳನ್ನು ಒಳಗೆ ಮತ್ತು ಹೊರ ಗೆ ಹೋಗುವುದನ್ನು ತಡೆಯವುದರ ಮೂಲಕ ಅವನ್ನು ಒಟ್ಟಿಗೆ ಸುಷುಮ್ನಾ ನಾಡಿಯಲ್ಲಿ ಸಂಚರಿಸುವಂತೆ ಮಾಡುವದೇ ಉದಾನ ವಾಯು. ಹೀಗೆ ಪ್ರಾಣ ಅಪಾನ ವಾಯುಗಳು ಸುಷುಮ್ನಾ ನಾಡಿಯಲ್ಲಿ ಸಂಚರಿಸದಾಗ ಅದೇ ತುರೀಯಾತೀತ ಸ್ಥಿತಿ ಅಥವಾ ಸಮಾಧಿ.
ಈ ಬಗೆಯ ವಾಯು ಸಂಚಾರದಿಂದ ಸಾವು ಕೂಡ ಸಂಭವಿಸಬಹುದು.
ಶರೀರದ ಮಧ್ಯ ಭಾಗವು ಸಮಾನ ವಾಯುವಿನ ಸ್ಥಾನ ಆಗಿದೆ. ಪ್ರಾಣ ಮತ್ತು ಆಹಾರವನ್ನು ಹೀರಿಕೊಳ್ಳುವುದೇ ಅಲ್ಲದೆ ಆಹಾರದ ಜೀರ್ಣಕ್ರಿಯೆಯಲ್ಲೂ ಸಹಕರಿಸುತ್ತದೆ. ಪ್ರಾಣ ಮತ್ತು ಅಪಾನ ವಾಯುಗಳ ನಡುವೆ ಸಮತೋಲನಕ್ಕೆ ಸಹಾ ಸಮಾನವಾಯುವೇ ಕಾರಣವಾಗಿದೆ. ಸ್ಥೂಲ ದೇಹದಲ್ಲಿ ಸಮಾನವಾಯುವನ್ನು ನಾಭಿಯಭಾಗದಲ್ಲಿ ಗುರುತಿಸಿದರೆ ಸೂಕ್ಷ್ಮ ದೇಹದಲ್ಲಿ ಮಣಿಪೂರ ಚಕ್ರದಲ್ಲಿ ಗುರುತಿಸಲಾಗಿದೆ. ಇದು ನಾಭಿಯ ಪ್ರಮುಖ ಶಕ್ತಿ ಕೇಂದ್ರ ವಾಗಿದೆ. ಜಠರಾಗ್ನಿಯನ್ನು ಇದು ಉದ್ದೀಪನ ಗೊಳಿಸುತ್ತದೆ. ನಾಭಿಯನ್ನು ಮುಖ್ಯ ಪ್ರಾಣ ಶಕ್ತಿಯ ಕೇಂದ್ರ ಎನ್ನಬ್ಹುದ.
ಭಗವಾನ್ ಶಂಕರರು ಈ ಪಂಚಪ್ರಾಣ ಗಳನ್ನು ಮಾತ್ರ ಹೇಳಿ ಉಳಿದ ಐದು ಉಪಪ್ರಾಣಗಳ ಬಗ್ಗೆ ಹೇಳಿಲ್ಲಾ ಏಕೆಂದರೆ ಈ ಉಪಪ್ರಾಣಗಳು, ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ವಾಯುಗಳಿಂದಲೇ ನಿಯಂತ್ರಿಸಲ್ಪಡುತ್ತವೆ. ಆದರೂ ನಾವು ಅವುಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ನಾಗ ಹೆಸರಿನ ಉಪವಾಯವು ಜಠರದ ವಾಯುವನ್ನು ಬಾಯಿಯಿಂದ ತೇಗಿನ ಮೂಲಕ ಹೊರಗೆ ತಳ್ಳುತ್ತದೆ. ಕಣ್ಣು ಮಿಟುಕಿಸುವ ಕ್ರಿಯೆಗೆ ಕಾರಣ ಕೂರ್ಮ ಎಂಬ ಉಪವಾಯು. ಕೆಮ್ಮು, ಸೀನುವಿಕೆ, ಹಸಿವು ಮತ್ತು ಬಾಯಾರಿಕೆಗೆ ಕಾರಣ ಕೃಕರ ಎಂಬ ಉಪ ವಾಯು. ದೇವದತ್ತ ಎಂಬ ಉಪವಾಯು ಆಕಳಿಕೆ ಆಗಿದೆ.
ಧನಂಜಯ ಎಂಬುವ ಉಪವಾಯು ದೇಹದಲ್ಲೆಡೆ ವ್ಯಾಪಿಸಿದೆ. ನಿದ್ರೆ, ಕಫ, ಹೃದಯದಲ್ಲಿ ರಕ್ತ ಪರಿಚಲನೆಯಲ್ಲಿ ಈ ವಾಯುವಿನ ಪಾತ್ರ ಇದೆ. ಎಲ್ಲಕ್ಕಿಂತ ಪ್ರಮುಖವಾಗಿ, ಎಲ್ಲಾ ಪ್ರಾಣಗಳೂ ಸ್ಥೂಲ ದೇಹವ ನ್ನು ತೊರೆದ ಬಳಿಕವೂ ದನಂಜಯ ಉಪವಾಯುವು ಸ್ಥೂಲ ದೇಹದಲ್ಲಿಯೇ ಉಳಿಯುತ್ತದೆ ಏಕೆಂದರೆ ದೇಹ ಕೊಳೆಯಲು ದನಂಜಯ ಉಪವಾಯುವಿನ ಅವಶ್ಯಕತೆ ಇದೆ.
ದನಂಜಯ ಉಪವಾಯುವಿನ ಬಗ್ಗೆ ಹೆಚ್ಚು ವಿವರ ಇಲ್ಲಿ ಪ್ರಸ್ತುತ ಅಲ್ಲವಾದರೂ, ದನಂಜಯ ಉಪವಾಯು ವಿನ ಬಗ್ಗೆ ಮತ್ತಷ್ಟು ವಿವರ ತಿಳಿದುಕೊಳ್ಳಲು ಇದು ಒಂದು ಅವಕಾಶ ಎಂದು ಭಾವಿಸಿದ್ದೇನೆ. ತಿರುಮೂಲರ್ ಎಂಬ ಸಿದ್ದರು ಈ ಉಪವಾಯುವಿನ ಬಗ್ಗೆ ಹೆಚ್ಚು ವಿವರ ನೀಡಿದ್ದಾರೆ ಎಂಬ ಮಾಹಿತಿ ಇದ್ದರೂ ಆ ಮಾಹಿತಿ ನನಗೆ ದೊರೆತಿಲ್ಲಾ. ಅದು ತಮಿಳು ಭಾಷಯಲ್ಲಿ ಇರುವ ಸಾದ್ಯತೆ ಇದೆ. ಪ್ರಾಣ ಹೋದ ಹಲವು ಸಮಯದ ನಂತರ ಮತ್ತೆ ಪ್ರಾಣ ಬಂದ ಅಪರೂಪ ಪ್ರಕರಣಗಳನ್ನ ನಾವು ಕೇಳಿದ್ದೇವೆ. ಪ್ರಾಣ ಹೋದನಂತರ ದೇಹದಲ್ಲೇ ಉಳಿಯುವ ಧನಂಜಯ ಉಪವಾಯು ಇದ್ದಕ್ಕಿದ್ದಂತೆ ಹೆಚ್ಚು ಸಕ್ರಿಯ ಆಗಿ ಹೃದಯದಲ್ಲಿ ರಕ್ತ ಪರಿಚಲನೆ ಆರಂಭಿಸಿರುವ ಅಪರೂಪ ಪ್ರಕರಣಗಳು ಇವು ಎಂದೇ ಭಾವಿಸಬೇಕಿದೆ. ಪ್ರಾಣ ಹೋದ ದೇಹವನ್ನು ದಹನ ಮಾಡುವ ಪದ್ಧತಿ ಇರುವ ಸಮಾಜಗಳೂ ಸಹಾ ಆ ಸಮಾಜಕ್ಕೆ ಸೇರಿದ ಸನ್ಯಾಸಿಗಳ ದೇಹವನ್ನು ದಹನ ಮಾಡದೆ ಬೃಂದಾವನ ನಿರ್ಮಿಸುವ ಪದ್ಧತಿ ಇರುವದನ್ನು ಗಮನಿಸಿದರೆ, ಆ ಮಹಾನುಭಾವರು ಧನಂಜಯ ಉಪವಾಯುವನ್ನೂ ಸಹಾ ತಮ್ಮ ಸಾಧನೆ ಇಂದ ಹೊರಹಾಕಿದ್ದು, ಆ ದೇಹ ಕೊಳೆಯವುದಿಲ್ಲಾ ಎಂಬ ನಂಬಿಕೆ ಇರಬಹುದೇ ಎಂಬ ಬಗ್ಗೆ ವಿದ್ವಾಂಸರು ಚಿಂತನೆ ಮಾಡಬಹುದಾಗಿದೆ. ಹಾಗೆಯೇ ವಿಶೇಷ ದೀಕ್ಷೆ ಪಡೆದಿರುವ ವೀರಶೈವರ ಮತ್ತು ಸನ್ಯಾಸಿಗಳ , ಮಠಾಧಿಪತಿಗಳ ಅಂತ್ಯ ಸಂಸ್ಕಾರದಲ್ಲಿ ಕ್ರಿಯಾ ಸಮಾಧಿ ಎಂಬ ವಿಸ್ತೃತ ವಾದ ಧಾರ್ಮಿಕ ಕ್ರಿಯೆ ಇದ್ದು , ಈ ಕ್ರಿಯೆಯ ಮೂಲಕ ಧನಂಜಯ ಉಪವಾಯುವನ್ನು ಹೊರಹಾಕುವ ಪ್ರಕ್ರಿಯೆ ಆಗಿರಬಹುದೇ ಎಂಬ ಬಗ್ಗೆಯೂ ವಿದ್ವಾಂಸರು ಬೆಳಕು ಚೆಲ್ಲಬೇಕಿದೆ. ಧನಂಜಯ ಎನ್ನುವ ಹೆಸರು ಗೀತಾ ಚಾರ್ಯ ಶ್ರೀ ಕೃಷ್ಣ ನಿಗೆ ಮಾತ್ರವಲ್ಲದೆ ಅರ್ಜುನ ನ ಹತ್ತು ಹೆಸರುಗಳಲ್ಲಿ ಒಂದು ಹೆಸರಾಗಿರು ವುದರ ವಿಶೇಷತಯೂ ಸಹಾ ಧನಂಜಯ ಉಪ ವಾಯು
ನ ವಾ ಸಪ್ತಧಾತುರ್ – ಪಂಚವಾಯುಗಳು ಆದಮೇಲೆ ಸಪ್ತ ಧಾತುಗಳ ಬಗ್ಗೆ ಶ್ರೀ ಶಂಕರ ಭಗವತ್ಪಾದರು ಪ್ರಸ್ತಾಪಿಸಿ ಈ ಸಪ್ತಧಾತುಗಳೂ ’ನಾನು” ಅಲ್ಲಾ ಎನ್ನುತ್ತಾರೆ. ಸ್ಥೂಲ ದೇಹದ ಮೂಲ ವಸ್ತು ಗಳು ಈ ಸಪ್ತಧಾತುಗಳು. ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜ ಮತ್ತು ಶುಕ್ರ. ನಾನು ಎನ್ನುವ “ಆತ್ಮ” ಸ್ಥೂಲ ದೇಹವೂ ಅಲ್ಲಾ. ಈ ಸಪ್ತ ಧಾತುಗಳ ಬಗ್ಗೆ ವಿವರಣೆ ಬೇಕಲ್ಲಾ.
ನ ವಾ ಪಂಚಕೋಶಃ – ಇದಾದ ಬಳಿಕ ಜೀವನನ್ನು ಬಂಧನದಲ್ಲಿ ಮತ್ತು ಅಜ್ಞಾನದಲ್ಲಿ ಇಟ್ಟಿರುವ ಐದು ಪದರಗಳಾದ ಪಂಚಕೋಶಗಳ ಬಗ್ಗೆ ಹೇಳುತ್ತಾ ಅವೂ ಸಹಾ ನಾನು ಎಂಬ ಆತ್ಮ ಅಲ್ಲಾ ಎನ್ನುತ್ತಾರೆ ಭಗವಾನ್ ಶಂಕರರು. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದ ಮಯ ಎನ್ನುವ ಕೋಶಗಳೇ ಈ ಐದು ಪದರಗಳು.
ಅನ್ನಮಯ ಕೋಶವು ಸ್ಥೂಲ ದೇಹಕ್ಕೆ ಸಂಬಂಧಿಸಿದ್ದಾಗಿದೆ. ಅನ್ನ ಸ್ಥೂಲ ವಸ್ತು ವನ್ನು ಹೇಳುತ್ತದೆ. ಹಾಗಾಗಿ ಸ್ಥೂಲ ದೇಹದಲ್ಲಿನ ಜೀವವು ಈ ಅನ್ನದಿಂದ ಜೀವಿಸಿದೆ, ಅನ್ನದ ಮೇಲೆ ಅವಲಂಬಿತ ಆಗಿದೆ. ಈ ಜೀವನು ಹುಟ್ಟು ಸಾವು, ಅನಾರೋಗ್ಯ, ಅಂಗವೈಕಲ್ಯ ಇವೆಲ್ಲವ ನ್ನೂ ಹೊಂದತ್ತಾನೆ.
ಪ್ರಾಣಮಯ ಕೋಶವು ಪಂಚವಾಯುಗಳಿಂದ ಮತ್ತು ಪಂಚ ಕರ್ಮೇಂದ್ರಿಯಗಳಿಂದ ಕೂಡಿದೆ. ಈ ಹಿಂದೆಯೇ ಪಂಚವಾಯುಗಳಾಗಲೀ ಕರ್ಮೇಂದ್ರಿಯಗಳಾಗಲೀ ನಾನು ಎನ್ನುವ ಆತ್ಮ ಅಲ್ಲಾ ಎಂದು ಹೇಳಿದ ಮೇಲೆ ಇವುಗಳಿಂದ ಮಾಡಲ್ಪಟ್ಟ ಪ್ರಾಣಮಯ ಕೋಶವೂ ಸಹಾ ನಾನು ಎನ್ನುವ ಆತ್ಮ ಅಲ್ಲಾ.
ಮನೋಮಯ ಕೋಶವು ಮನಸ್ಸು ಮತ್ತು ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದ್ದಾದರೆ, ವಿಜ್ಞಾನ ಮಯಕೋಶವು ಬುದ್ಧಿ ಮತ್ತು ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದೆ. ಮನೋ ಮಯ ಕೋಶ ಮತ್ತು ವಿಜ್ಞಾನಮಯ ಕೋಶಗಳು ಸೂಕ್ಷ್ಮ ದೇಹವಾಗಿದೆ. ಪ್ರಾಣಮಯ ಮತ್ತು ಮನೋಮಯ ಕೋಶಗಳು, ಭಯ, ದುಃಖ, ರೋಗ, ಇವುಗಳಿಗೆ ಸೀಮಿತವಾಗಿವೆ.
ವಿಜ್ಞಾನಮಯ ಕೋಶದಲ್ಲಿ ಜೀವನು ಸ್ಥೂಲ ಮತ್ತು ಸೂಕ್ಷ್ಮ ಗಳ ಅಸ್ಥಿತ್ವದ ಮಿತಿಯಿಂದ ಅಂದರೆ ಬಿಸಿ, ತಂಪು, ದುಃಖ ಭಯ ಇವುಗಳಿಂದ ಮುಕ್ತ ವಾಗಿದ್ದರೂ, ಜ್ಞಾನೇಂದ್ರಿಯಗಳಲ್ಲಿ ಸೂಕ್ಷ್ಮ ಅಸ್ಥಿತ್ವ ದ ಬಂಧನ ಇದ್ದೇ ಇರುತ್ತದೆ. ಆ ಬಂಧನವನ್ನೂ ಮೀರಿ ಮೇಲೇರಲು ಜೀವಿಗೆ ಕಷ್ಟ ಸಾಧ್ಯ.
ಅನಂದಮಯ ಕೋಶವು, ಮೂಲಪ್ರಕೃತಿ ಅಂದರೆ ಕಾರಣ ಶರೀರವೇ ಆಗಿದೆ. ಇದು ಎಲ್ಲಾ ಕರ್ಮಗಳ ಉಗ್ರಾಣ.ಇಲ್ಲಿ ಸಹಾ ಜೀವನು ಕಾರಣ ಶರೀರದ ಮಿತಿಯಲ್ಲೇ ಇರುತ್ತಾನೆ. ಹಾಗಾಗಿ ಈ ಕೋಶವೂ ಸಹಾ ನಾನು ಎಂಬ ಆತ್ಮ ಅಲ್ಲಾ. ಹಾಗಾಗಿ ಸ್ಥೂಲ, ಸೂಕ್ಷ್ಮ ಕಾರಣ ದೇಹಗಳೂ ಪಂಚಕೋಶಗಳೂ ಸಹಾ ನಾನು ಎಂಬ ಆತ್ಮ ಅಲ್ಲಾ.
ನ ವಾಕ್ಪಾಣಿಪಾದೌ ನ ಚೋಪಸ್ತಪಾಯೂ – ದೇಹ ಆದನಂತರ ಪಂಚ ಕರ್ಮೇಂದ್ರಿಯಗಳನ್ನು ಪ್ರಸ್ತಾಪಿಸಿ ವಾಕ್ ಅಂದರೆ ಮಾತು, ಚಲನೆ, ವಿಸರ್ಜನೆ ಅಥವಾ ಜನ್ಮ ಕೊಡವುದು ( procreation) ಇವು ಯಾವವು ಸಹಾ ನಾನು ಎಂಬ ಆತ್ಮ ಅಲ್ಲಾ ಎನ್ನುತ್ತಾರೆ ಭಗವಾನ್ ಶಂಕರರು
ಚಿದಾನಂದ ರೂಪಃ ಶಿವೋಹಂ ಶಿವೋಹಂ – ನಾನು ಎನ್ನುವ ಆತ್ಮ ಅದು ಮಂಗಳಕರವಾದದ್ದು ಅದು ಶಿವ. ಅದು ಶುದ್ಧ ವಾದ್ದು. ಅದು ಆನಂದವಾದ್ದು, ಅದು ಶುದ್ಧವೂ ಮಂಗಳಕರವೂ, ಆನಂದಕರವೂ ಆಗಿರುವುದರಿಂದ ಅದು ಪರಮಾತ್ಮ- ಅದೇ ನಾನು ಎನ್ನುವ ಆತ್ಮ ಶಿವೋಹಂ
ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು