ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ
ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ಸಮುನ್ಮೀಲತ್ ಸಂವಿತ್ ಕಮಲಮಕರನ್ದೈಕರಸಿಕಂ ಭಜೇ ಹಂಸದ್ವನ್ದ್ವಂ ಕಿಮಪಿ ಮಹತಾಂ ಮಾನಸಚರಮ್ ।
ಯದಾಲಾಪಾದಷ್ಟಾದಶಗುಣಿತವಿದ್ಯಾಪರಿಣತಿ-
ರ್ಯದಾದತ್ತೇ ದೋಷಾದ್ ಗುಣಮಖಿಲಮದ್ಭ್ಯಃ ಪಯ ಇವ ॥ 38॥
समुन्मीलत् संवित् कमलमकरन्दैकरसिकं
भजे हंसद्वन्द्वं किमपि महतां मानसचरम् ।
यदालापादष्टादशगुणितविद्यापरिणति-
र्यदादत्ते दोषाद् गुणमखिलमद्भ्यः पय इव ॥ ३८॥
ಓ ತಾಯೇ ಅನಾಹತ ಚಕ್ರದಲ್ಲಿ ಪೂರ್ತಿಯಾಗಿ ಅರಳಿರುವ ಜ್ಞಾನವೆಂಬ ಕಮಲದ ಹೂವಿನಲ್ಲಿರುವ ಜೇನಿನಲ್ಲಿ ಸಂತೋಷವಾಗಿ ವಿಹರಿಸುತ್ತಿರುವ ಹಂಸಪಕ್ಷಿಗಳ ಜೋಡಿಯ ರೂಪದಲ್ಲಿರುವ ಶಿವ ಶಕ್ತಿಯರನ್ನು ನಾನು ಪೂಜಿಸುತ್ತಿದ್ದೇನೆ. ಈ ಶಿವ ಶಕ್ತಿಯರೆಂಬ ಜೋಡಿ ಹಂಸಗಳು ಸಾಧಕರ ಮನದಲ್ಲಿ ಹೃದಯದಲ್ಲಿ ಈಜಾಡುತ್ತಾ ವಿಹರಿಸುತ್ತಿರುವಾಗ ಇವರೀರ್ವರ ನಡುವಿನ ಸಂಭಾಷಣೆ 18 ವಿದ್ಯೆಗಳನ್ನು ನಾಂದಿಯಾಗಿದೆ. ನೀರು ಬೆರೆತ ಹಾಲಿನಿಂದ ಹಾಲನ್ನು ಮಾತ್ರ ಬೇರ್ಪಡಿಸುವಂತೆ ಈ ಜೋಡಿ ಹಂಸಗಳು ಒಳ್ಳೆಯ ಮತ್ತು ಕೆಟ್ಟಗುಣಗಳನ್ನು ಬೇರ್ಪಡಿಸುತ್ತಿವೆ.
ಶಿವ ಶಕ್ತಿಯರು ಸಹಸ್ರಾರದಲ್ಲಿ ಸಂಗಮವಾದ ನಂತರ ಅಲ್ಲಿಂದ ಅವರೋಹಣ ಕ್ರಮದಲ್ಲಿ ಚಲಿಸಿ ಅನಾಹತ ಚಕ್ರದಲ್ಲಿ ವಿಹರಿಸುವುದನ್ನು ಈ ಮಂತ್ರವು ಕಾವ್ಯಮಯವಾಗಿ ಚಿತ್ರಿಸಿದೆ.
ಶಿವಶಕ್ತಿಯರೆಂಬ ಈ ಹಂಸಗಳು ಸಾಧಕರ ಹೃದಯಕಮಲದಲ್ಲಿ ಈಜುತ್ತಾ ವಿಹರಿಸುವುದರಿಂದ ಅಂತಹ ಸಾಧಕರು ಪರಮಹಂಸ ಎನಿಸಿಕೊಳ್ಳುತ್ತಾರೆ.
ಶಿವ ಶಕ್ತಿಯರೆಂಬ ಹಂಸಗಳು ನಮ್ಮೆಲ್ಲರ ಹೃದಯಕಮಲದಲ್ಲಿ ವಿಹರಿಸುತ್ತಾ ಸಂಭಾಷಣೆಯಲ್ಲಿ ತೊಡಗಿದ್ದರೂ ಸಹಾ, ನಮ್ಮ ಅಜ್ಞಾನದ ಅಂಧಕಾರದಿಂದ ಅದರ ಅರಿವು ನಮಗೆ ಆಗುತ್ತಿಲ್ಲಾ. ಒಮ್ಮೆ ಈ ಅಂಧಕಾರದ ಅಜ್ಜಾನ ತೊಲಗಿ ಬೆಳಕು ಮೂಡಿದರೆ ಆ ಅನುಭವ ನಮ್ಮೆಲ್ಲರಿಗೂ ಸಹಾ ಆಗುತ್ತದೆ. ಅದಕ್ಕೆ ಸಾಧನೆ ಬೇಕು, ಗುರುವಿನ ಅನುಗ್ರಹ ಆಗಬೇಕು.
ಹಂಸ ಎನ್ನುವ ಎರಡಕ್ಷರದಲ್ಲಿ “ಹ” ಶಿವನಾದರೆ “ಸ” ಎನ್ನುವುದು ಶಕ್ತಿ. “ ಹಂಸ ಸೋಹಂ ’ ಎಂಬುದು ಶಿವಶಕ್ತಿಯರ ಸಮಾಗಮ. ಇವರು ಹಂಸೇಶ್ವರೀ ಮತ್ತು ಹಂಸೇಶ್ವರ ಎಂಬ ಹೆಸರಿನಿಂದ 52 ವಾಯು ಮಯೂಖ ಎಂದರೆ ಕಿರಣಗಳಿಂದ ಸುತ್ತುವರೆದು ಅನಾಹತ ಚಕ್ರದಲ್ಲಿ ವಿಹರಿಸುತ್ತಿರುವಂತೆ ಭಾವಿಸಿ ಧ್ಯಾನಾಸಕ್ತರಾಗಬೇಕು ಎನ್ನುವುದೇ ಈ ಮಂತ್ರದ ಮೂಲ ಉದ್ದೇಶವಾಗಿದೆ.
ಶಿವಶಕ್ತಿಯರು ಕುಲಪಥದಲ್ಲಿ ಅಂದರೆ ಸುಷುಮ್ನಾ ನಾಡಿಯ ಮೂಲಕ ಅವರೋಹಣ ಕ್ರಮದಲ್ಲಿ ಸಂಚರಿಸುತ್ತಾ ತಮ್ಮ ಸಮಾಗಮದಿಂದ ಉದ್ಭವಿಸಿರುವ ಅಮೃತವನ್ನು ಎಲ್ಲಕಡೆ ಸುರಿಸುತ್ತಿದ್ದಾರೆ.
ಶಿವಶಕ್ತಿಯರು ವಿಹರಿಸುತ್ತಿರುವ ಅನಾಹತ ಚಕ್ರದಲ್ಲಿ ಇರುವ ಜೇನು, ಅದು ’ಪರಾವಿದ್ಯೆ” ಅದು ಅತೀಂದ್ರಿಯ ಜ್ಞಾನ. ಈ ಸ್ಥಿತಿಯಲ್ಲಿ ಒಳಗಣ ಭಾವ, ಒಳಗಿನ ಪ್ರಜ್ಞೆ ಅತೀಂದ್ರಿಯ ಅನುಭವ ಆಗುತ್ತದೆ ಮತ್ತು ಮಧುರವಾದ ವೀಣಾ ಗಾನ ಕೊಳಲಿನ ಧ್ವನಿ ಕೇಳುತ್ತದೆ.
ಈ ಮಂತ್ರವು “ ಅಷ್ಟಾದಶ ಗುಣಿತ ವಿದ್ಯಾ ಪರಿಣಿತಿಃ “ ಎಂದು ಹೇಳಿರುವುದು ಅನಾಹತದಿಂದ ಹೊರಹೊಮ್ಮುವ 18 ಕಿರಣಗಳನ್ನು ಸೂಚಿಸಿದೆ. ಶಿವ ಶಕ್ತಿ ತತ್ವಗಳ ಅತ್ಯುನ್ನತ ಮಟ್ಟದ ಪರಸ್ಪರ ಪ್ರಭಾವದಿಂದ, ಪರಸ್ಪರ ಕ್ರಿಯೆಯಿಂದ ಉದ್ಭವವಾದ ಈ 18 ಕಿರಣಗಳು 18 ವಿವಿಧ ಬಗೆಯ ವಿದ್ಯೆಗಳನ್ನು ಸೂಚಿಸುತ್ತದೆ ಎಂಬ ಆಭಿಪ್ರಾಯವನ್ನು ಹಲವು ವಿದ್ವಾಂಸರು ಸೂಚಿಸಿದರೆ, ಇನ್ನು ಹಲವರು ಈ ಹದಿನೆಂಟು ಕಿರಣಗಳನ್ನುಶಿವ ಶಕ್ತಿ ಸಹಿತವಾದ ಶ್ರೀ ಷೋಡಶೀವಿದ್ಯೆ ಎಂಬುದಾಗಿಯೂ ಅಭಿಪ್ರಾಯಪಡುತ್ತಾರೆ.
ಯಾವುದೇ ಅತ್ಯುನ್ನತವಾದ ಜ್ಞಾನವು, ವೇದಗಳೂ ಸೇರಿದಂತೆ ನಮಗೆ ದೊರೆತಿರುವುದು, ಸಾಧಕರು ಧ್ಯಾನದಲ್ಲಿ ಪರಮೋಚ್ಛ ಸ್ಥಿತಿಯನ್ನು ತಲುಪಿದಾಗ ಅವರಿಗೆ ’ಶೃತವಾದದ್ದು”. ಅವರಿಗೆ ಕೇಳಿಸಿದ್ದು. ನಂತರ ಆ ಜ್ಞಾನವನ್ನು ಹಂಚಲಾಗಿದೆ. ಹಾಗಾಗಿಯೇ ವೇದಗಳು ’ಅಪೌರುಷೇಯ” ಎನಿಸಿಕೊಂಡಿರುವುದು.
ಈ ಸಾಧಕರು ತಮ್ಮ ಆ ಪರಮೋಚ್ಛ ಧ್ಯಾನಸ್ಥಿತಿಯಲ್ಲಿ ಕೇಳಿಸಿಕೊಂಡ ಶಬ್ಧತರಂಗಗಳೇ ಮಂತ್ರಗಳಾಗಿವೆ. ಅವರು ಮಂತ್ರದ್ರಷ್ಟಾರರು. ಮಂತ್ರವನ್ನು ಕಂಡವರು. ಹಾಗಾಗಿಯೇ ಎಲ್ಲಾ ಮಂತ್ರಗಳಿಗೂ ಆ ಮಂತ್ರವನ್ನು ಕಂಡುಕೊಂಡವರನ್ನು ಆ ಮಂತ್ರದ ಋಷಿ ಎಂದು ಹೇಳಿದೆ. ಒಂದು ಮಂತ್ರವನ್ನು ಋಷಿ, ಛಂದಸ್ಸು ಹೇಳದೆ, ಬೀಜ, ಶಕ್ತಿ, ಕೀಲಕ ಗಳನ್ನು ಗುರುತಿಸದೆ ಕರನ್ಯಾಸ ಅಂಗನ್ಯಾಸಗಳನ್ನು ಮಾಡದೆ ಮಂತ್ರಜಪವನ್ನು ಮಾಡುವುದರಿಂದ ಮಂತ್ರಸಿದ್ಧಿ ಯಾಗುವುದಿಲ್ಲಾ ಎನ್ನುತ್ತದೆ ಮಂತ್ರ ಶಾಸ್ತ್ರ
ಇವೆಲ್ಲಾ ಯಾವುದೋ ಕಾಲದಲ್ಲಿ ಆಗಿದ್ದು ಎಂದು ಉದಾಸೀನ ಮಾಡಬೇಕಿಲ್ಲಾ, ಈಗಲೂ, ಈ ಆದುನಿಕ ಪ್ರಪಂಚದಲ್ಲಿಯೂ ಇದು ಸಾದ್ಯ. ಸಾಧ್ಯ ಮಾಡಿಕೊಂಡಿರುವ ಮಹಾತ್ಮರು, ಜ್ಞಾನಿಗಳು ಈಗಲೂ ಇದ್ದಾರೆ ಆದರೆ ಅವರಾರೂ ಫ಼್ಯಾನ್ಸಿ ಡ್ರೆಸ್ ತೊಟ್ಟು, ಮೇಕಪ್ ಹಾಕಿಕೊಂಡು ನಮ್ಮ ಮುಂದೆ ಕಾಣಿಸುತ್ತಿಲ್ಲಾ
ಸಾಧನೆ ಮಾಡಿದರೆ, ಗುರುವಿನ ಅನುಗ್ರಹ ದೊರಕಿದರೆ, ಒಬ್ಬ ಸಾಮಾನ್ಯ ವ್ಯಕ್ತಿಯೂ ಈ ಸ್ಥಿತಿಯನ್ನು ತಲುಪಲು ಸಾಧ್ಯ.
ಸೌಂದರ್ಯ ಲಹರಿಯ ಎಲ್ಲಾ ಮಂತ್ರಗಳೂ ಅತ್ಯುನ್ನತವಾದ ಆಧ್ಯಾತ್ಮಿಕ ತತ್ವಗಳನ್ನು ಕಾವ್ಯಮಯವಾಗಿ ವಿವರಿಸಿದರೂ, ಈ ಮಂತ್ರಗಳಿಂದ ಪ್ರಾಪಂಚಿಕ ಸುಖಭೋಗಗಳನ್ನೂ ಹೊಂದಲೂ ಸಾಧ್ಯವಾಗುತ್ತದೆ ಎನ್ನುವುದೇ ಒಂದು ವಿಶೇಷ.
ಈ 38 ನೆಯ ಮಂತ್ರವನ್ನು ಈ ಮಂತ್ರದ ಚಕ್ರ, ಎಂದರೆ ಒಂದು ವೃತ್ತಾಕಾರದ ಮಧ್ಯೆ ಕಂ ಎಂಬ ಬೀಜಾಕ್ಷರ. ಈ ಚಕ್ರವನ್ನು ಒಂದು ಚಿಕ್ಕ ಚಿನ್ನದ ತಗಡಿನ ಮೇಲೆ ರಚಿಸಿ. ಅದನ್ನು ಒಂದು ನೀರಿನ ಲೋಟದಲ್ಲಿ ಹಾಕಿ, ಆ ನೀರಿನ ಮೇಲೆಯೂ ಈ ಚಕ್ರವನ್ನು ರಚಿಸಿ, ಈ ಮಂತ್ರವನ್ನು ದಿನಕ್ಕೆ 4000 ಬಾರಿ ನಾಲ್ಕು ದಿವಸ ಜಪಮಾಡುವಾಗ ಅನಾಹತ ಚಕ್ರದಲ್ಲಿ ಮನಸ್ಸನ್ನು ಸ್ಥಿರಗೊಳಿಸಿ ಆ ನೀರನ್ನು ಪ್ರತಿದಿನ ಕುಡಿದರೆ ಎಲ್ಲ ವಿಧದ ಖಾಯಿಲೆಗಳ ವಿರುದ್ಧ ಪ್ರತಿರೋಧ ಶಕ್ತಿ ಉಂಟಾಗುತ್ತದೆ ಎಂದು ಹೇಳಲಾಗಿದೆ.
ಈ ರೀತಿಯಾಗಿ ಪ್ರತಿದಿನ 108 ಬಾರಿ ಮಂತ್ರವನ್ನು ಜಪಿಸಿ ಆ ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಅದೂ ಸಹಾ ಪರಿಣಾಮಕಾರಿಯೇ ಆಗುತ್ತದೆ.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.