ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ
ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ
ತವ ಸ್ವಾಧಿಷ್ಠಾನೇ ಹುತವಹಮಧಿಷ್ಠಾಯ ನಿರತಂ
ತಮೀಡೇ ಸಂವರ್ತಂ ಜನನಿ ಮಹತೀಂ ತಾಂ ಚ ಸಮಯಾಮ್ ।
ಯದಾಲೋಕೇ ಲೋಕಾನ್ ದಹತಿ ಮಹತಿ ಕ್ರೋಧಕಲಿತೇ
ದಯಾರ್ದ್ರಾ ಯಾ ದೃಷ್ಟಿಃ ಶಿಶಿರಮುಪಚಾರಂ ರಚಯತಿ ॥ 39॥
ಓ ತಾಯಿ, ಅಗ್ನಿತತ್ವವನ್ನು ನಿನ್ನ ಸ್ವಾಧಿಷ್ಟಾನ ಚಕ್ರದಲ್ಲಿ ಸದಾ ಆವಾಹಿಸುತ್ತಿರುವ ಹಾಗೂ ಪ್ರಪಂಚದ ಲಯಕ್ಕೆ ಕಾರಣವಾದ ಅಗ್ನಿಗೆ ಒಡೆಯನಾದ ಸಂವರ್ತನನ್ನು ನಾನು ಪೂಜಿಸುತ್ತಿದ್ದೇನೆ, ಕೊಂಡಾಡುತ್ತಿದ್ದೇನೆ. ಓ ತಾಯೇ, ಸಂವರ್ತನ ಪ್ರಬಲ ಶಕ್ತಿಯಾದ ಸಮಯೇಶ್ವರಿಯೇ, ನಿನ್ನನ್ನು ಆರಾಧಿಸುತ್ತಿದ್ದೇನೆ. ಸಂವರ್ತನ ಕೋಪದ ನೋಟದಿಂದ ಬ್ರಹ್ಮಾಂಡವು ಸುಟ್ಟು ಹೋಗುವ ಸಮಯದಲ್ಲಿ , ನಿನ್ನ ಅನುಕಂಪದ ಒಂದು ಕುಡಿನೋಟ ಶೀತಲ ಅನುಭವವನ್ನು ನೀಡುತ್ತದೆ.
ಶಿವ ಶಕ್ತಿಯರು ಅನಾಹತದಿಂದ ಅಗ್ನಿತತ್ವವಾದ ಸ್ವಾಧಿಷ್ಠಾನ ಚಕ್ರವನ್ನು ತಲುಪಿದಾಗ .ಅವರನ್ನು 62 ತೇಜಸ ಕಿರಣಗಳಿಂದ ಆವೃತರಾಗಿರುವ ಸಂವರ್ತೇಶ್ವರ ಮತ್ತು ಸಮಯೇಶ್ವರಿ ಯರೆಂದು ಭಾವಿಸಿ ಪೂಜಿಸಲಾಗುತ್ತದೆ.
ಸಮಯ ಎಂದರೆ ಕಾಲ ಎಂದು ಮಾತ್ರ ಅರ್ಥ ಅಲ್ಲಾ, ಒಂದಾಗಿ ಸೇರುವುದು, ಎಂಬ ಅರ್ಥವೂ ಇದೆ. ಇದು ಶಿವ ಶಕ್ತಿ ಗಳು ಒಂದೇ ಎಂಬ ಅರ್ಥವನ್ನು ಕೊಡುತ್ತದೆ. ಶ್ರೀ ಲಲಿತಾ ಸಹಸ್ರ ನಾಮದ ಸಮಯಾಚಾರ ತತ್ಪರಾ ಎನ್ನುವ ನಾಮ ಶ್ರೀ ವಿದ್ಯೆಯ ಸಮಯಾಚಾರ ಪದ್ಧತಿ ಅಂದರೆ ಅಂತರಂಗದಲ್ಲಿ ಆರಾಧನೆ, ಉಪಾಸನೆಯ ಕ್ರಮ ವನ್ನು ಸೂಚಿಸುತ್ತದೆ. ಸೌಂದರ್ಯಲಹರಿಯು ದೇವಿಯನ್ನು ಸಮಯೇಶ್ವರಿ ಎಂದು ಸಂಭೋಧಿಸುವ ಮೂಲಕ ಶ್ರೀ ವಿದ್ಯಾ ಉಪಾಸನೆಯಲ್ಲಿ ಸಮಯಾಚಾರ ಪದ್ಧತಿ ಯನ್ನು ಪ್ರತಿಪಾದಿಸಿದೆ.
ಪರಿವರ್ತನೆಯ ಒಡೆಯನಾದ ಸಂವರ್ತೇಶ್ವರನು ಪೃಥ್ವಿಯನ್ನು ಜಲದಲ್ಲೂ, ಜಲವನ್ನು ಅಗ್ನಿಯಲ್ಲೂ, ಅಗ್ನಿಯನ್ನು ವಾಯುವಿನಲ್ಲಿಯೂ ವಾಯುವನ್ನು ಅಕಾಶದಲ್ಲೂ, ಆಕಾಶವನ್ನು ಮನಸ್ಸಿನಲ್ಲೂ, ಮನಸ್ಸನ್ನು ಅಹಂಕಾರದಲ್ಲೂ, ಅಹಂಕಾರವನ್ನು ಮಹತ್ ಅಂದರೆ ಪರಮಾತ್ಮನಲ್ಲೂ ಲಯಗೊಳಿಸಿಬಿಡುತ್ತಾನೆ.
ಈ ಕ್ರಿಯೆಯ ತದ್ವಿರುದ್ದ ಕ್ರಿಯಯೇ ಸೃಷ್ಟಿ ಕ್ರಿಯೆ.
ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಮ್ಭೂತಃ । ಆಕಾಶಾದ್ವಾಯುಃ ।
ವಾಯೋರಗ್ನಿಃ । ಅಗ್ನೇರಾಪಃ । ಅದ್ಭ್ಯಃ ಪೃಥಿವೀ । -ತೈತ್ತರೇಯ ಉಪನಿಷದ್ ವಾಕ್ಯ.
ಸಂವರ್ತೇಶ್ವರನ ಲಯಗೊಳಿಸುವ ಪರಿವರ್ತನೆಯ ಪ್ರಕ್ರಿಯೆಯೇ ಧ್ಯಾನದಲ್ಲಿ ತೊಡಗಿಕೊಂಡಾಗಲೂ ಆಗುತ್ತದೆ. ಆಗ ಸಮಯೇಶ್ವರಿಯ ದಯಾರ್ದ್ರ ದೃಷ್ಟಿಯಿಂದ ಶೀತಲ ಮತ್ತು ಶಾಮಕ ಕಿರಣಗಳು ಇಲ್ಲದೇ ಹೋಗಿದ್ದರೆ, ಈ ಶರೀರವು ಲಯವಾಗಿ ಹೋಗುತ್ತಿತ್ತು.
ಸಮಯೇಶ್ವರಿಯು ಸಂವರ್ತೇಶ್ವರನ ಪ್ರಬಲ ಶಕ್ತಿಯಾಗಿದ್ದ್ದು, ಸಂವರ್ತೇಶ್ವರನ ವಿನಾಶಕಾರಕ, ಲಯಕಾರಕ ಅಂಶವನ್ನು ತನ್ನ ಕರುಣಾಪೂರಿತ ಅನುಕಂಪ ದೃಷ್ಟಿಯಂದ ಶಮನಗೊಳಸುವ ಮೂಲಕ ತನ್ನ ಭಕ್ತರನ್ನು ರಕ್ಷಿಸುತ್ತಾಳೆ.
ಸ್ವಾಧಿಷ್ಠಾನ ಚಕ್ರವು ನಮ್ಮ ಎಲ್ಲಾ ಕಾಮನೆಗಳ, ಆಸೆಗಳ ತಾಣವಾಗಿದೆ. ಒಂದು ಆಸೆಯ ಪೂರೈಕೆಯಾದರೆ, ಮತ್ತೊಂದು ಚಿಗುರೊಡೆಯತ್ತದೆ, ನಂತರ ಮತ್ತೊಂದು, ಮಗದೊಂದು. ಹೀಗೆ ನಾವು ಈ ವಿಷಚಕ್ರದಲ್ಲಿ ಮುಳುಗಿಹೋಗಿರುವದರಿಂದ ನಮ್ಮನ್ನು ಎಚ್ಚರಿಸಲು ರುದ್ರಕೋಪ ನಮ್ಮನ್ನ ಸುತ್ತುವರೆದಿರುವ ಮಾಯೆಯಿಂದ ಮುಕ್ತ ಗೊಳಿಸಿ ನಮ್ಮ ನಿಜಸ್ವರೂಪದ ಅರಿವು ಮೂಡಿಸಲು ಆರಂಭ ವಾದಾಗ, ಶಕ್ತಿಯು ತನ್ನ ಶೀತಲ ಕಿರಣಗಳಿಂದ ನಮ್ಮನ್ನು ರಕ್ಷಿಸುವುದೇ ಅಲ್ಲದೆ ನಮ್ಮ ಮೇಲಿನ ಅನುಕಂಪದಿಂದ ನಮಗೆ ನಮ್ಮ ನಿಜರೂಪದ ಅರಿವನ್ನೂ ಮೂಡಿಸುತ್ತಾಳೆ.
ಮಕ್ಕಳನ್ನು ತಂದೆ ತಾಯಿಯರು ಹೇಗೆ ಸರಿದಾರಿಗೆ ತರುತ್ತಾರೋ ಅದೇ ರೀತಿ ಶಿವ ಶಕ್ತಿಯರು, ಸಂವರ್ತೆಶ್ವರ ಮತ್ತು ಸಮಯೇಶ್ವರಿಯರು ನಮ್ಮನ್ನು ಸರಿದಾರಿಗೆ ತರುತ್ತಾರೆ.
ಕುಂಡಲಿನಿ ಶಕ್ತಿಯನ್ನು ಎಚ್ಚರಿಸಲು ಶಕ್ತಿಯ ಸಹಾಯ ಬೇಕು ಇಲ್ಲವಾದರೆ ಆಗ ಉದ್ಭವಿಸುವ ಅಪಾರವಾದ ಶಕ್ತಿ ಯನ್ನು ಸರಿದೂಗಿಸಲು ಅಸಾಧ್ಯವಾಗುತ್ತದೆ. 36 ರಿಂದ 42 ರವರೆಗಿನ 7 ಮಂತ್ರಗಳು ಶಿವ ಶಕ್ತಿಯರ ಅವರೋಹಣ ಚಲನೆಯನ್ನು ವಿವರಿಸಿದ್ದು, ಶಿವ ಶಕ್ತಿ ತತ್ವಗಳ ನಡುವಿನ ಸಮ ಮತ್ತು ವಿರೋಧ ಶಕ್ತಿಗಳನ್ನು ಶ್ರೀ ಶಂಕರ ಭಗವತ್ಪಾದಾಚಾರ್ಯರು ಒಟ್ಟಿಗೆ ಆರಾಧಿಸುವ ಮೂಲಕ ಅದೇ ಮಾರ್ಗವನ್ನು ನಮಗೂ ತೋರಿದ್ದಾರೆ.
ರುದ್ರನು ಬ್ರಹ್ಮಾಂಡವನ್ನು ದಹಿಸುವ ಕ್ರಿಯೆಯಲ್ಲಿ ತೊಡಗಿದರೆ ಸಮಯೇಶ್ವರಿಯು ಅದನ್ನು ತನ್ನ ಅನುಕಂಪದ ಅಲೆಯಲ್ಲಿ ತೋಯಿಸುವ ಮೂಲಕ ತಣ್ಣಗಾಗಿಸುತ್ತಾಳೆ.
ಅಮೂರ್ತವಾದ ಬ್ರಹ್ಮಾಂಡದ ಪ್ರಜ್ಞೆ ಮತ್ತು ಶಕ್ತಿಗಳನ್ನು ಬಹಳ ಸುಂದರವಾಗಿ ಬಣ್ಣಿಸುವ ಮೂಲಕ ಅವು ಪ್ರಕಾಶಮಾನವಾಗಿ ಮನಸ್ಸಿಗೆ ಆಕರ್ಷಕಾರಕವಾಗುವಂತೆ ಮಾಡಿದ್ದಾರೆ. ಹಾಗಯೇ ಈ ಪ್ರಜ್ಞೆ ಮತ್ತು ಶಕ್ತಿಗಳು ಅಮೂರ್ತವಾದರೂ ಭಾವನೆಗಳಿಂದ ಹೊರತಾಗಿಲ್ಲಾ ಎಂಬುದನ್ನೂ ಹೇಳಿದ್ದಾರೆ.
ಶಕ್ತಿ ಎನ್ನುವುದು ದುಃಖವನ್ನೂ ಕೊಡಬಲ್ಲದು ಹಿಗ್ಗನ್ನೂ ಕೊಡಬಲ್ಲದು ಮತ್ತು ಅನುಕಂಪ ಹಾಗೂ ದಯಾ ಭಾವನೆಗಳನ್ನೂ ಮೂಡಿಸಬಲ್ಲುದು. ಶಕ್ತಿಯು ಮಾರ್ಗದರ್ಶನವನ್ನು ಸಹಾ ನೀಡಬಲ್ಲುದು ಹಾಗಾಗಿ ಶಕ್ತಿಯ ಆರಾಧನೆ ನಮ್ಮೆಲ್ಲರಿಗೂ ಅನಿವಾರ್ಯ ಮತ್ತು ಕಡ್ಡಾಯ ಜೀವನದ ಎಲ್ಲಾ ಆಯಾಮಗಳಲ್ಲೂ ಯಶಸ್ಸನ್ನು ಕಾಣಲು ಸುಲಭ ಮಾರ್ಗವೂ ಇದೇ ಆಗಿದೆ.
ಸೌಂದರ್ಯ ಲಹರಿಯ ಮಂತ್ರಗಳು ಆಧ್ಯಾತ್ಮಿಕ ನಿಧಿ ಯಾಗಿದ್ದರೂ ಒಂದೊಂದು ಮಂತ್ರಕ್ಕೂ ಯಂತ್ರವನ್ನು ಹೇಳಿದ್ದು, ಅವುಗಳ ಪೂಜೆ ಮತ್ತು ಜಪ ನಮ್ಮ ಪ್ರಾಪಂಚಿಕ ಸುಖಭೋಗಗಳನ್ನು ಸಹಾ ನೀಡುತ್ತವೆ.
ಬೆಳ್ಳಿ ಅಥವಾ ಬಂಗಾರದ ಸಣ್ಣ ತಗಡಿನ ಮೇಲೆ ಚೌಕಾಕಾರವನ್ನು ರಚಿಸಿ ಅದರ ಮಧ್ಯಭಾಗದಲ್ಲಿ ಮೊದಲ ಸಾಲಿನಲ್ಲಿ ಠಂ ಪಂ ಪಃ ಮತ್ತು ಎರಡನೇ ಸಾಲಿನಲ್ಲಿ ಷಂ ಸಂ ಎಂದು ಬರೆದು ಹೂವು ಗಂಧ ಅಕ್ಷತೆ ಮತ್ತು ಕುಂಕುಮಗಳಿಂದ ಪೂಜಿಸಿ ಸಿಹಿ ಪೊಂಗಲ್ ನೈವೇದ್ಯ ಮಾಡಿ ಈ 39 ನೇ ಮಂತ್ರವನ್ನು 108 ಬಾರಿ ಜಪಿಸುವಾಗ ಶಿವ ಶಕ್ತಿಯರನ್ನು ಸ್ವಾಧಿಷ್ಠಾನ ಚಕ್ರದಲ್ಲಿ ಧ್ಯಾನಿಸಬೇಕು. ಹೀಗೆ 12 ದಿನ ಮಾಡಿದರೆ ಕೆಟ್ಟ ಸ್ವಪ್ನಗಳು ಕಾಣುವದಿಲ್ಲಾ ಎಂದು ಹೇಳಲಾಗಿದೆ.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.