ಶ್ರೀ ವೀರಭದ್ರಸ್ವಾಮಿಯ ಧ್ಯಾನಶ್ಲೋಕಗಳು – ಶಬ್ಧಾರ್ಥದೊಂದಿಗೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

ಶ್ರೀ ವೀರಭದ್ರನ ಉಲ್ಲೇಖ ಇರುವುದು ಪುರಾಣಗಳಲ್ಲಿ. ಪುರಾಣಗಳನ್ನು ಐದನೆಯ ವೇದ ಎಂದೇ ಕರೆಯಲಾಗಿದೆ. ವೇದ ಉಪನಿಷತ್ತುಗಳಲ್ಲಿರುವ ಗಹನವಾದ ವಿಷಯಗಳನ್ನು ಕಥಾನಕಗಳಾಗಿ ವಿವರಿಸುವ ಪ್ರಯತ್ನವೇ ಪುರಾಣಗಳು ಎಂದರೆ ತಪ್ಪಾಗಲಾರದು. ಪುರಾಣಗಳ ಕಾಲ ಕ್ರಿ. ಪೂ. ಏಳನೆಯ ಶತಮಾನ ಎನ್ನುವುದು ಇತಿಹಾಸಕಾರರ, ವೇದ ಪಂಡಿತರುಗಳ ಅಭಿಪ್ರಾಯ. ಚದುರಿಹೋಗಿದ್ದ ಈ ಪುರಾಣಗಳನ್ನು ಮತ್ತೆ ಒಂದೆಡೆ ಸೇರಿಸಿ ಅದಕ್ಕೆ ಬರಹದ ರೂಪ ಕೊಟ್ಟಿದ್ದು ಗುಪ್ತರ ಕಾಲದಲ್ಲಿ ಅಂದರೆ ಕ್ರಿ. ಶ 375 ರಿಂದ 450 ರವರೆಗೆ ಎಂದು ಸಹಾ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.

ನಾವು ದೇವರು ಎಂದು ಭಾವಿಸಿ ಪೂಜಿಸುವ ಚೈತನ್ಯಕ್ಕೆ ಯಾವುದೇ ಆಕಾರವಿಲ್ಲ ವಾದರೂ, ಬ್ರಹ್ಮಾಂಡದಲ್ಲಿ ಇರುವ ವಿವಿಧ ಶಕ್ತಿಗಳಿಗೆ ವಿವಿಧ ರೂಪಗಳನ್ನು ನೀಡುವುದರ ಮೂಲಕ ಆ ವಿವಿಧ ಶಕ್ತಿಗಳನ್ನು ಅರಿಯುವ ಮತ್ತು ಆ ಶಕ್ತಿಗಳಿಂದ ಉಪಯೋಗ ಪಡೆದುಕೊಳ್ಳುವ ಪ್ರಯತ್ನವನ್ನು ಮನುಷ್ಯ ಮಾಡಿದ್ದಾನೆ.

ಇದೇ ರೀತಿ ಪ್ರಾಣಿಗಳೂ ಸಹಾ ಆ ವಿವಿಧ ಶಕ್ತಿಗಳನ್ನು ಅರಿಯುವ ಪ್ರಯತ್ನ ಮಾಡಿದ್ದೇ ಆದರೆ ಅವು ಸಹಾ ಆ ಶಕ್ತಿಗಳಿಗೆ ತಮ್ಮದೇ ರೂಪವನ್ನು ಕೊಟ್ಟು ಚಿತ್ರಿಸುವ ಪ್ರಯತ್ನ ಆಗುತ್ತಿತ್ತೇನೋ?

ಶ್ರೀ ವೀರಭದ್ರನು ಶಿವನ ಗಣಗಳಲ್ಲಿ ಒಬ್ಬ ಎಂದು ಉಲ್ಲೇಖವಿದ್ದರೂ, ಶಿವನ ಜಟೆಯಿಂದ ಉದ್ಭವ ನಾಗಿದ್ದರಿಂದ, ರುದ್ರ ಜಟಾ ಸಂಭವ, ರುದ್ರ ಕೋಪ ಸಮುದ್ಭೂತ ಎಂದು ಕರೆಯಲಾಗಿದೆ. ಇಲ್ಲಿ ದಕ್ಷನ ಕಥೆಯನ್ನು ಮತ್ತೆ ಮತ್ತೆ ಹೇಳುವ ಅವಶ್ಯಕತೆ ಇಲ್ಲಾ ಎಂದು ಭಾವಿಸಿದ್ದೇನೆ.

ಶ್ರೀ ವೀರಭದ್ರನನ್ನು ಹಲವು ರೂಪಗಳಲ್ಲಿ ಬಣ್ಣಿಸಲಾಗಿದೆ. ಕಪ್ಪು ಬಣ್ಣ ಹೊಂದಿದವನು, ಮೂರು ಕಣ್ಣುಳ್ಳವನು, ಕತ್ತಿ ಗುರಾಣಿಗಳ ಜತೆಗೆ ಬಿಲ್ಲು ಬಾಣಗಳನ್ನೂ ಹಿಡಿದಿರುವವನು, ಸರ್ಪಗಳನ್ನೇ ಆಭರಣಗಳನ್ನಾಗಿ ಧರಿಸಿರುವುದಲ್ಲದೆ, ರುಂಡಮಾಲೆಯನ್ನು ಸಹಾ ಧರಿಸಿರುವವನು ಎಂದು ಸಾಮಾನ್ಯವಾಗಿ ಬಣ್ಣಿಸಲಾಗುತ್ತದೆ.

ಸದ್ಯೋಜಾತಾದಿ ಪಂಚಮುಖಗಳಿಂದ ಬಂದಿದ್ದು ಎಂದು ಹೇಳಲಾದ 28 ಶೈವಾಗಮಗಳಲ್ಲಿ, ಸದ್ಯೋಜಾತ ಮುಖದಿಂದ ಬಂದ ಐದು ಆಗಮಗಳ ಪೈಕಿ ಒಂದು ಕರಣಾಗಮ. ಈ ಆಗಮವು, ದಕ್ಷನು ಕೊಂಬು ಇರುವ ಮೇಕೆಯ ತಲೆಯನ್ನು ಹೊಂದಿ ಶ್ರೀ ವೀರಭದ್ರನ ಬಲಭಾಗದಲ್ಲಿ ಅಂಜಲೀಬದ್ಧನಾಗಿ ( ನಮಸ್ಕಾರ ಮಾಡುತ್ತಾ) ಶಿವ ಧ್ಯಾನಪರಾಯಣ ನಾಗಿ ನಿಂತಿರುವುದಾಗಿ ಹೇಳುತ್ತದೆ.

ಶ್ರೀ ವೀರಭದ್ರನ ಮೂರ್ತಿಯನ್ನು, ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಮೂರ್ತಿಗಳಾಗಿ ಶಿಲ್ಪಶಾಸ್ತ್ರವು ಕಲ್ಪಿಸಿದೆ. ಸಾತ್ವಿಕ ಮೂರ್ತಿಗೆ, ಎರಡು ಕೈಗಳು, ರಾಜಸಿಕ ಮೂರ್ತಿಗೆ ನಾಲ್ಕು ಕೈಗಳು, ತಾಮಸಿಕ ಮೂರ್ತಿಗೆ ಎಂಟು ಕೈಗಳನ್ನು ಚಿತ್ರಿಸಿದೆ. ಈ ಎಲ್ಲಾ ಮೂರ್ತಿಗಳೂ ಕಪ್ಪುಬಣ್ಣ ಹೊಂದಿರುವುದಾಗಿಯೂ ವಿವಿಧ ಆಯುಧಗಳನ್ನು ಧರಿಸಿರುವುದಾಗಿಯೂ ಹೇಳಲಾಗಿದೆ.

ಇಷ್ಟೇ ಅಲ್ಲದೆ ಶ್ರೀ ವೀರಭದ್ರನನ್ನು, ಯೋಗ ವೀರಭದ್ರ, ಭೋಗ ವೀರಭದ್ರ ಮತ್ತು ವೀರ ವೀರಭದ್ರನೆಂತಲೂ ಚಿತ್ರಿಸಲಾಗಿದೆ. ಯೋಗ ವೀರಭದ್ರನು ಎರಡು ಕೈಗಳಲ್ಲಿ ಕತ್ತಿ ಮತ್ತು ಗುರಾಣಿಯನ್ನು ಹಿಡಿದು ಸುಖಾಸನದಲ್ಲಿ ಕುಳಿತಿರುವಂತೆ ಚಿತ್ರಿತವಾಗಿದ್ದರೆ, ಭೋಗ ವೀರಭದ್ರನು ಕತ್ತಿ, ಗುರಾಣಿ, ಬಿಲ್ಲು ಮತ್ತು ಬಾಣಗಳನ್ನು ತನ್ನ ನಾಲ್ಕು ಕೈಗಳಲ್ಲಿ ಹಿಡಿದು,ರುಂಡ ಮಾಲೆಯನ್ನು ಧರಿಸಿ ನಿಂತಿರುವ ಭಂಗಿಯಲ್ಲಿ ಚಿತ್ರಿಸಲಾಗಿದೆ.

ತನ್ನ ಬಲಗಡೆಯ ನಾಲ್ಕು ಕೈಗಳಲ್ಲಿ , ತ್ರಿಶೂಲ, ಕತ್ತಿ, ಬಾಣ, ಜಿಂಕೆಯ ಮರಿ ಹಿಡಿದಿದು ಎಡಗಡೆಯ ನಾಲ್ಕು ಕೈಗಳಲ್ಲಿ ಕಪಾಲ, ಗುರಾಣಿ, ಬಿಲ್ಲು, ತಿವಿಗೋಲು ( ಚುಚ್ಚುಗೋಲು) ಹಿಡಿದು ನಡೆಯುತ್ತಿರುವ ಭಂಗಿಯಲ್ಲಿ ವೀರ ವೀರಭದ್ರನನ್ನು ಚಿತ್ರಿಸಲಾಗಿದೆ.

ತಿರುವಣ್ಣಾಮಲೈ ಯಲ್ಲಿ ಈ ಸುಂದರವಾದ ವಿಗ್ರಹವನ್ನು ನೋಡಬಹುದು. ಈ ಮೂರ್ತಿಯನ್ನುಅಘೋರ ರುದ್ರಮೂರ್ತಿ / ಮಹಾ ಭೈರವ ಮೂರ್ತಿ ಎಂದು ಪೂಜಿಸಲಾಗುತ್ತದೆ.

ಸಪ್ತಮಾತೃಕೆಯರ ಬಗ್ಗೆ ನಾವು ಕೇಳಿದ್ದೇವೆ. ಬ್ರಾಹ್ಮೀ, ವೈಷ್ಣವೀ, ಮಾಹೇಶ್ವರೀ, ಇಂದ್ರಾಣೀ, ಕೌಮಾರೀ, ವಾರಾಹೀ, ಚಾಮುಂಡಾ. ತಮಿಲ್ನಾಡಿನ ಎಲ್ಲಾ ಹಳೆಯ ಶೈವ ದೇವಾಲಯಗಳಲ್ಲಿ ಸಪ್ತಮಾತೃಕೆಯರ ವಿಗ್ರಹಗಳನ್ನು ಕಾಣಬಹುದು. ಈ ಸಪ್ತಮಾತೃಕೆಯರ ಬಲಗಡೆ ವೀರಭದ್ರನನ್ನೂ, ಎಡಗಡೆ ಗಣಪತಿಯನ್ನೂ ನಾವು ನೋಡಬಹುದಾಗಿದೆ.

ಈ ವೀರಭದ್ರನ ರೂಪ ವರ್ಣನೆ: “ವೀರೇಶ್ವರಾಚ ಭಗವಾನ್ ವೃಷಾರೂಢೋ ಧನುರ್ಧರಃ ವೀಣಾಹಸ್ತ ತ್ರಿಶೂಲಂಚ ಮಾತೄಣಾಂ ಅಕ್ರಾಧೋ ಭವೇತ್”
ಬಿಲ್ಲುಬಾಣ ಗಳು, ವೀಣಾ ತ್ರಿಶೂಲ ಗಳನ್ನು ಹಿಡಿದು, ವರದ ಹಸ್ತದೊಂದಿಗೆ ಕುಳಿತಿರುವ ಭಂಗಿಯಲ್ಲಿ, ತನ್ನ ಕಾಲ ಬಳಿ ನಂದಿಯ ವಾಹನ ಇರುವಂತೆ ಚಿತ್ರಿಸಲಾಗಿದೆ.

ವೀರಭದ್ರನನ್ನು ಮುವ್ವತ್ತೆರಡು ಕೈಗಳುಳ್ಳವನಾಗಿ ಚಿತ್ರಿಸಲೂ ಸಹಾ ಆಗಮಗಳ ಆಧಾರ ಇದೆ ಎನ್ನುವುದು ಶಿಲ್ಪಶಾಸ್ತ್ರಜ್ಞರ ಅಭಿಮತ.

ವೀರಭದ್ರನನ್ನು ಕುರಿತು ಹೇಳಲಾಗಿರುವ ಹಲವು ಧ್ಯಾನಶ್ಲೋಕಗಳು ಮತ್ತು ಅವುಗಳ ಭಾವಾರ್ಥವನ್ನು ನೀಡಿದರೆ, ವೀರಭದ್ರನ ವಿವಿಧ ರೂಪಗಳ ಪರಿಚಯ ಆಗಬಹುದು ಎಂದು ಭಾವಿಸಿದ್ದೇನೆ.

ಶ್ವೇತಾಂಗಂ ಶೇಷ ಭೂಷಾಂಗಂ ಖಡ್ಗ ವೀಣಾಧರಂ ಶುಭಂ
ದೃತಕೃಷ್ಣಮೃಗಂ ವೀರಂ ಶಾರ್ದೂಲಾಜಿಧವಸಂ
ಅರ್ಧೋನ್ಮೀಲಿತ ನೇತ್ರಾಂ ತಂ ತ್ರಿನೇತ್ರಂಚ ಜಟಾಧರಂ
ಸುಗಂಧಿ ಪುಷ್ಪಮಾಲಾಂ ಶ್ರೀ ವೀರಭದ್ರಂ ನಮಾಮ್ಯಹಂ

ಬಿಳಿಯ ಮೈಬಣ್ಣದ, ಸರ್ಪಗಳನ್ನೇ ಆಭರಣಗಳನ್ನಾಗಿ ಧರಿಸಿ, ಜಿಂಕೆಯ ಮರಿಯನ್ನು( ಹುಲ್ಲೆ) ಕೈಯಲ್ಲಿ ಹಿಡಿದು, ಹುಲಿಯ ಚರ್ಮವನ್ನು ನಡುವಿಗೆ ಸುತ್ತಿಕೊಂಡು, ಅರ್ಧಮುಚ್ಚಿದ ಕಣ್ಣುಗಳಿಂದ ಕೂಡಿ, , ಜಟೆಯನ್ನು ಬಿಗಿದು, ಸುವಾಸಿತ ಹೂಮಾಲೆಯನ್ನು ಧರಿಸಿರುವ, ಹಣೆಯಲ್ಲಿ ಮೂರನೆಯ ಕಣ್ಣುಳ್ಳ ಶ್ರೀ ವೀರಭದ್ರನಿಗೆ ನಮಸ್ಕರಿಸುತ್ತಿದ್ದೇನೆ.

ಷನ್ನೇತ್ರಾಂ ತ್ರಿಮುಖಂ ಭೀಮಂ ಕಾಲಮೇಘ ಸಮಪ್ರಭಾಂ
ಉಧರಸಿಜ್ವಲನಾಂ ನೀಲಘಾತ್ರಂ ಷಟ್ಬಾಹು ಶೋಭಿತಂ
ಪಾನಪಾತ್ರಾಸಿ ಶೂಲೇಕ್ಷು ಚಾಪ ಖಡ್ಗಧರಂ ಶುಭಂ
ಭೂತಪ್ರೇತಾದಿ ದಮನಂ ದುಷ್ಟಾರತಿ ವಿನಾಶನಂ
ಮೇರು ವಾಸಂ ಮಹೇಶಂ ತಂ ವೀರಭದ್ರಂ ನಮಾಮ್ಯಹಂ

ಕಪ್ಪು ಮೈಬಣ್ಣದ ಮೂರು ಮುಖ, ಆರು ಕಣ್ಣು, ಆರು ಬಾಹುಗಳಿಂದ ಶೋಭಿತನಾಗಿ, ಪಾನಪಾತ್ರೆ, ತ್ರಿಶೂಲ, ಬಿಲ್ಲು, ಬಾಣ, ಖಡ್ಗ ವನ್ನು ಹಿಡಿದು ವರದ ಹಸ್ತನಾಗಿ, ಭೂತ ಪ್ರೇತಗಳನ್ನು ಪಳಗಿಸಿ, ದುಷ್ಟ ಶತೃಗಳನ್ನು ಕೊಂದು, ಮೇರು ಪರ್ವತದಲ್ಲಿ ವಾಸಿಸುತ್ತಾ ನಮ್ಮನ್ನು ಪೊರೆಯುತ್ತಿರುವ ಶ್ರೀ ವೀರಭದ್ರನಿಗೆ ನಮಸ್ಕರಿಸುತ್ತಿದ್ದೇನೆ

ಚತುರ್ಭುಜಮ್ ತ್ರಿನೇತ್ರಂ ಚ ಜಟಾಮಕುಟ ಮಂಡಿತಂ
ಸರ್ವಾಭರಣ ಸಂಯುಕ್ತಂ ಶ್ವೇತವರ್ಣಂ ವೃಷಧ್ವಜಂ
ಶೂಲಂ ಚ ಅಭಯ ಹಸ್ತಂ ಚ ದಕ್ಷಿಣೇಂದು ಕರದ್ವಯಂ
ಗಧಾ ವರದ ಹಸ್ತಂ ಚ ವಾಮ ಪಾರ್ಶ್ವೇ ಕರದ್ವಯಂ
ಶ್ವೇತ ಪದ್ಮಾಸನಾಸೂನಂ ವಟವೃಕ್ಷ ಸಮಾಶ್ರಿತಂ
ವೀರಭದ್ರಂ ಇತಿ ಖ್ಯಾತಂ ಬ್ರಾಹ್ಮೀರೂಪಂ ತಥಾ ಶ್ರುಣು

ಬಿಳಿ ಮೈಬಣ್ಣದ, ನಾಲ್ಕು ಕೈ, ಮೂರು ಕಣುಗಳುಳ್ಳ, ಜಟಾಧಾರಿಯಾದ, ಸರ್ವ ಆಭರಣಗಳಿಂದ ಭೂಷಿತನಾಗಿ, ನಂದೀ ಧ್ವಜವನ್ನು ಹೊಂದಿ, ಬಲ ಕೈಗಳಲ್ಲಿ ತ್ರಿಶೂಲ, ಅಭಯ ಮುದ್ರೆ, ಎಡ ಕೈಗಳಲ್ಲಿ ಗಧೆ ಮತ್ತು ವರದ ಮುದ್ರೆಯಿಂದ ಕೂಡಿ, ಆಲದಮರದ ಅಡಿಯಲ್ಲಿ ಕಮಲದ ಹೂವಿನ ಮೇಲೆ ಕುಳಿತಿರುವ ಬ್ರಾಹ್ಮೀ ರೂಪಿ ವೀರಭದ್ರನೆಂದು ಖ್ಯಾತಿಯಾಗಿದ್ದಾನೆ ಕೇಳು-
ಇದು ಅಂಸುಮದ್ ವೇದಾಗಮದಲ್ಲಿ ಶಿವನು ಪಾರ್ವತಿಗೆ ಹೇಳಿದ್ದು.

ಮರಗತ ಮಣಿನೀಲಂ ಕಿಂಕಿಣೀ ಜಲಮಾಲಾಂ
ಪ್ರಕಟಿತ ಮುಖಮೀಶಂ ಭಾನು ಸೋಮ ಅಗ್ನಿ ನೇತ್ರಂ
ಹರಿಹರಮಸಿಕೇದತ್ರಯ ಕ್ರಧಾಂದಕ್ರ ಹಸ್ತಾಂ
ವಿಧುಧರಂ ಅಹಿ ಭೂಷಮ್ ವೀರಭದ್ರಂ ನಮಾಮಿ

ಕಪ್ಪು ನೀಲ ಮಿಶ್ರಿತ ಮೈಬಣ್ಣದ, ಘಂಟಾನಾದ ಮಾಡುವಂತ ಮಾಲೆಯನ್ನು ಧರಿಸಿ, ಉಗ್ರರೂಪಿಯಾದ ಶಿವನ ರೂಪ ಹೊಂದಿರುವ, ಸೂರ್ಯ, ಚಂದ್ರ ಮತ್ತು ಅಗ್ನಿಗಳೆಂಬ ಮೂರು ಕಣ್ಣುಗಳುಳ್ಳ, ಶಿವ ಮತ್ತು ವಿಷ್ಣು ರೂಪಿಯಾಗಿ, ಕತ್ತಿ, ಗುರಾಣಿ, ಬೆತ್ತ ಗಳನ್ನು ಹಿಡಿದು ಚಂದ್ರನನ್ನು ಶಿರದಲ್ಲಿ ಧರಿಸಿ, ಸರ್ಪಗಳ ಮಾಲೆಗಳಿಂದ ಭೂಷಿತನಾಗಿರುವ ವೀರಭದ್ರನಿಗೆ ನಮಸ್ಕಾರಗಳು.

ಈ ಧ್ಯಾನ ಶ್ಲೋಕಕ್ಕೆ ಒಂದು ಮಂತ್ರವನ್ನೂ ಹೇಳಲಾಗಿದೆ. ಅದನ್ನೂ ಇಲ್ಲಿ ತಿಳಿಸಲು ಬಯಸುತ್ತೇನೆ.

ಅಸ್ಯ ಶ್ರೀ ವೀರಭದ್ರ ಮಹಾ ಮಂತ್ರಸ್ಯ
ಕಾಳರುದ್ರ ಋಷಿಃ ಜಗತೀ ಛಂದಃ ವೀರಭದ್ರ ದೇವತಾ
ವಂ ಬೀಜಂ ಹುಂ ಶಕ್ತಿಃ ( ಕೀಲಕವನ್ನು ಹೇಳಿಲ್ಲಾ) ಶ್ರೀ ವೀರಭದ್ರ ಪ್ರಸಾದ ಸಿಧ್ಯರ್ಥೇ ಜಪೇ ವಿನಿಯೋಗಃ

ಮಂತ್ರಃ : ಓಂ ನಮೋ ವೀರಭದ್ರಾಯ ವೈರಿ ವಂಶ ವಿನಾಶಾಯ ಸರ್ವಲೋಕ ಭಯಂಕರಾಯ
ಭೀಮ ವೇಷಾಯ ಹುಂ ಫಟ್ ವಿಜಯ ವಿಜಯ ಹ್ರೀಂ ಹುಂ ಫಟ್ ಸ್ವಾಹಾ

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: