ಸೌಂದರ್ಯಲಹರಿಯ 37 ನೇ ಮಂತ್ರಕ್ಕೆ ವಿವರಣೆ: ವಿಶುದ್ಧಿಚಕ್ರದಲ್ಲಿ ಧ್ಯಾನ Soundarya Lahari Verse#37 explained


ಶ್ರೀ ಗುರುಭ್ಯೋ ನಮಃ
ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿದ್ ಯೋಗಾಸ್ಯ
ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

ಸೌಂದರ್ಯಲಹರೀ ಶ್ಲೋಕ 37

विशुद्धौ ते शुद्धस्फटिकविशदं व्योमजनकं
शिवं सेवे देवीमपि शिवसमानव्यवसिताम् ।
ययोः कान्त्या यान्त्याः शशिकिरणसारूप्यसरणे-
विधूतान्तर्ध्वान्ता विलसति चकोरीव जगती ॥ ३७॥

ವಿಶುದ್ಧೌ ತೇ ಶುದ್ಧಸ್ಫಟಿಕವಿಶದಂ ವ್ಯೋಮಜನಕಂ
ಶಿವಂ ಸೇವೇ ದೇವೀಮಪಿ ಶಿವಸಮಾನವ್ಯವಸಿತಾಮ್ ।
ಯಯೋಃ ಕಾನ್ತ್ಯಾ ಯಾನ್ತ್ಯಾಃ ಶಶಿಕಿರಣಸಾರೂಪ್ಯಸರಣೇ-
ವಿಧೂತಾನ್ತರ್ಧ್ವಾನ್ತಾ ವಿಲಸತಿ ಚಕೋರೀವ ಜಗತೀ ॥ 37॥

ಆಕಾಶವನ್ನು ಸೃಷ್ಟಿಸಿದ, ಶುದ್ಧ ಸ್ಪಟಿಕದಂತೆ ಹೊಳೆಯುತ್ತಿರುವ ನಿನ್ನ ವಿಶುದ್ಧಿಚಕ್ರವನ್ನು ಪೂಜಿಸುತ್ತಿದ್ದೇನೆ, ಧ್ಯಾನಿಸುತ್ತಿದ್ದೇನೆ. ನಿನ್ನ ಅಂದರೆ ಶಕ್ತಿಯ ಮತ್ತು ಶಿವನ ಗುಣಲಕ್ಷಣಗಳು ಒಂದೇ ಆಗಿವೆ. ನಿಮ್ಮಿಂದ ಹೊರಸೂಸುತ್ತಿರುವ ಕಾಂತಿಯುಕ್ತ ಕಿರಣಗಳು ಸೂರ್ಯ ಮತ್ತು ಚಂದ್ರರು ಕಿರಣಗಳಂತೆ ತೋರುತ್ತಿದ್ದು, ಬ್ರಹ್ಮಾಂಡವನ್ನು ಮುಚ್ಚಿರುವ ಅಂಧಕಾರವನ್ನು ಈ ಕಿರಣಗಳು ಬೆಳಗುತ್ತಿವೆ. ಇದು ಚಕೋರ ಪಕ್ಷಿಯು ಚಂದ್ರನ ಬೆಳದಿಂಗಳನ್ನು ಆಸ್ವಾದಿಸಿದಂತೆ, ಆನಂದಿಸಿದಂತೆ ತೋರುತ್ತಿದೆ.

ಈ ಶ್ಲೋಕವು ಆಕಾಶತತ್ವದ ಪ್ರತೀಕವಾಗಿರುವ ವಿಶುದ್ಧಿ ಚಕ್ರದ ಬಗ್ಗೆ ವಿವರ ನೀಡುತ್ತಿದೆ.
ಬ್ರಹ್ಮಾಂಡದ ಸೃಷ್ಟಿಯ ಸಮಯದಲ್ಲಿ ಮೊದಲು ಸೃಷ್ಟಿಯಾಗಿದ್ದು ಆಕಾಶ

ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಮ್ಭೂತಃ । ಆಕಾಶಾದ್ವಾಯುಃ ।
ವಾಯೋರಗ್ನಿಃ । ಅಗ್ನೇರಾಪಃ । ಅದ್ಭ್ಯಃ ಪೃಥಿವೀ ।
ಪೃಥಿವ್ಯಾ ಓಷಧಯಃ । ಓಷಧೀಭ್ಯೋನ್ನಮ್ । ಅನ್ನಾತ್ಪುರುಷಃ ।

ಇದು ತೈತ್ತರೀಯ ಉಪನಿಷತ್ತಿನ ಬ್ರಹ್ಮಾಂಡವಲ್ಲಿಯಲ್ಲಿನ ಮೊದಲನೇ ಅನುವಾಕ. ಸೃಷ್ಟಿಯ ಪ್ರಥಮದಲ್ಲಿ ಉದ್ಭವವಾದ ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿಂದ ಪೃಥ್ವೀ ಪೃಥ್ವಿಯಿಂದ ಔಷಧ ಅಂದರೆ ವನಸ್ಪತಿಗಳು, ಅದರಿಂದ ಅನ್ನ, ಅನ್ನದಿಂದ ಜೀವಿಗಳು.
ಇದೇ ಕಾರಣದಿಂದಲೇ ಇದ್ದಿರಬಹುದು, ಲಲಿತಾ ಸಹಸ್ರನಾಮವು ಸಪ್ತ ಚಕ್ರಗಳನ್ನು ವಿವರಿಸುವಾಗ ಆಕಾಶ ತತ್ವವಾದ ವಿಶುದ್ಧಿ ಚಕ್ರವನ್ನು ಮೊಟ್ಟಮೊದಲು ಹೇಳಿರುವುದು.
ಕುಂಡಲಿನೀ ಶಕ್ತಿಯು ಸೃಷ್ಟಿಕ್ರಿಯೆಗೆ ನೇರ ಸಂಬಂಧ ಹೊಂದಿದೆ. ಆಜ್ಞಾಚಕ್ರದ ಮನಸ್ಸು ತತ್ವದಲ್ಲಿ ಸೃಷ್ಟಿಸಬೇಕೆಂಬ ಇಚ್ಛೆಯ ಫಲವೇ ಆಕಾಶದ ಸೃಷ್ಟಿ, ನಂತರ ಅನಾಹತದಲ್ಲಿ ವಾಯು, ಮಣಿಪೂರದಲ್ಲಿ ಅಗ್ನಿ, ಸ್ವಾಧಿಷ್ಠಾನದಲ್ಲಿ ಜಲ ಮತ್ತು ಕಡೆಯದಾಗಿ ಮೂಲಾಧಾರದಲ್ಲಿ ಪೃಥ್ವಿಯ ಸೃಷ್ಟಿ.

ಮಣಿಪೂರದಲ್ಲಿ ಜಲ ಮತ್ತು ಸ್ವಾಧಿಷ್ಠಾನದಲ್ಲಿ ಬೆಂಕಿ ಎಂಬ ಅಭಿಪ್ರಾಯ ಭೇದವಿದ್ದಾಗ್ಯೂ, ಈ ಚಕ್ರಗಳಿಗೂ ಸೃಷ್ಟಿಕ್ರಿಯೆಗೂ ಸಂಬಂಧ ಇದೆ ಎನ್ನುವ ಬಗ್ಗೆ ಯಾವ ಅಭಿಪ್ರಾಯಭೇದವೂ ಇಲ್ಲಾ.

ಶುದ್ಧಸ್ಪಟಿಕವಿಶದಮ್ ಎಂದು ಹೇಳುವ ಮೂಲಕ ಸ್ಫಟಿಕದಂತೆ ಶುದ್ಧವಾಗಿರುವ ಬಣ್ಣ ಉಳ್ಳದ್ದು ಎಂದು ಹೇಳಿರುವುದು ವಿಶುದ್ಧಿಯಲ್ಲಿ ಸಂಚರಿಸುತ್ತಿರುವ ಶಿವನನ್ನು ಕುರಿತಾದ್ದು.

ವಿಶುದ್ಧಿ ಚಕ್ರ ನಿಲಯಾsರಕ್ತವರ್ಣಾ ತ್ರಿಲೋಚನಾ ಖಡ್ವಾಂಗಾದಿಪ್ರಹರಣಾ ವದನೈಕಸಮನ್ವಿತಾ ಪಾಯಸಾನ್ನ ಪ್ರಿಯಾ ತ್ವಕ್ಸ್ಥಾ ಪಶುಲೋಕ ಭಯಂಕರೀ ಅಮೃತಾದಿ ಮಹಾಶಕ್ತಿ ಸಂವೃತಾ ಡಾಕಿನೀಶ್ವರೀ ಎಂಬ ಲಲಿತಾ ಸಹಸ್ರನಾಮ ಸ್ತೋತ್ರ, ವಿಶುದ್ಧಿಚಕ್ರದಲ್ಲಿ ದೇವಿಯು ಡಾಕಿನೀ ರೂಪದಲ್ಲಿ ಅಮೃತಾದಿ ಮಹಾಶಕ್ತಿಗಳೊಡಗೂಡಿ ರಕ್ತವರ್ಣವನ್ನು ಹೊಂದಿದ್ದಾಳೆ ಎಂದು ಹೇಳಲಾಗಿದೆ.

ಸೌಂದರ್ಯಲಹರಿಯನ್ನು ಆಧರಿಸಿ, ವಿಶುದ್ಧಿಚಕ್ರದಲ್ಲಿ ಆಸೀನನಾಗಿರುವ ಶಿವನ ಬಣ್ಣ ಶುದ್ಧ ಸ್ಪಟಿಕದಂತೆ ಇದೆ ಎಂತಲೂ ಮತ್ತು ಲಲಿತಾ ಸಹಸ್ರನಾಮವನ್ನು ಆದ್ಜರಿಸಿ ಅಲ್ಲಿ ಶಿವನ ಒಡಗೂಡಿ ಇರುವ ಶಕ್ತಿಯ ಬಣ್ಣ ರಕ್ತವರ್ಣ ಎಂದಾಗ ವಿಶುದ್ಧಿ ಚಕ್ರಕ್ಕೆ ಬಣ್ಣ ಇಲ್ಲವೇ? ಇದ್ದರೆ ಅದು ಯಾವ ಬಣ್ಣ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ.

ನಮಗೆಲ್ಲಾ ತಿಳಿದಿರುವ ಹಾಗೆ ಏಳು ಮೂಲಬಣ್ಣಗಳ ಮಿಶ್ರವೇ ಬಿಳಿಯ ಬಣ್ಣ ಆಗಿದೆ. ಈ ಏಳು ಕಾಮನ ಬಿಲ್ಲಿನ ಬಣ್ಣಗಳು ಕ್ರಮವಾಗಿ, ನೇರಳೆ, ಒಂದು ಬಗೆಯ ಸಸ್ಯದಿಂದ ಪಡೆಯುವ ನೀಲಿ ಬಣ್ಣಕ್ಕೆ ಹತ್ತಿರವಾದ ಬಣ್ಣ ಇಂಡಿಗೋ, ನೀಲಿ, ಹಸಿರು, ಹಳದಿ ಮತ್ತು ಕೆಂಪು. ನಮ್ಮ ಏಳು ಚಕ್ರಗಳೂ ಇದೇ ಬಣ್ಣಗಳನ್ನು ಹೊಂದಿವೆ. ಕಡೆಯದಾದ ಕೆಂಪು ಬಣ್ಣ ಮೂಲಾಧಾರದ ಬಣ್ಣವಾದರೆ ಮೊದಲ ಬಣ್ಣ  ಸಹಸ್ರಾರದ ನೇರಳೆ  ಬಣ್ಣವಾಗಿದೆ. ಸಹಸ್ರಾರ ಚಕ್ರದ ಬಣ್ಣ ಬಿಳಿಯ ಬಣ್ಣ ಎಂದು ಸಹಾ ಹೇಳಲಾಗುತ್ತದೆ.

ವಿಶುದ್ದಿ ಚಕ್ರದ ಬಣ್ಣ ಏನೇ ಇರಲಿ, ಅಲ್ಲಿರುವ ಶಕ್ತಿಯ ಬಣ್ಣ ಏನೇ ಇರಲಿ, ಇವೆಲ್ಲವೂ ಶುದ್ದ ಸ್ಪಟಿಕದಂತೆಯೇ ಇವೆ ಎನ್ನುತ್ತಾರೆ ಆಚಾರ್ಯ ಶಂಕರರು.

ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ಶುದ್ಧೀಕರಿಸುವ ಉದಾನ ಪ್ರಾಣ ಆರಂಭವಾಗುವುದೇ ವಿಶುದ್ಧಿ ಚಕ್ರದಿಂದ. ವಿಶುದ್ಧಿ ಚಕ್ರವು ಮಿತಿಯಿಲ್ಲದ ಆನಂದ ಮತ್ತು ಸ್ವಾತಂತ್ರ್ಯವನ್ನು ಬಿಡುಗಡೆಗೊಳಿಸುತ್ತದೆಯಾಗಿ ನಮ್ಮ ಸಾಮರ್ಥ್ಯ ಮತ್ತು ಕೌಶಲ್ಯ ವಿಕಸಿತವಾಗುತ್ತದೆ ಅಷ್ಟೇ ಅಲ್ಲದೆ ಧ್ವನಿ ಉತ್ತಮವಾಗುತ್ತದೆ. ಹಾಡುವ ಮತ್ತು ಸವಿಯಾಗಿ ಮಾತನಾಡುವ ಪ್ರತಿಭೆ ಹೆಚ್ಚುತ್ತದೆ ಮತ್ತು ಶಾಂತ ಮನಸ್ಥಿತಿ ಉಂಟಾಗುತ್ತದೆ.

“ಶಿವಸಮಾನವ್ಯವಸಿತಾಂ”ಎಂದು ಹೇಳುವ ಮೂಲಕ ಶಿವ ಶಕ್ತಿಯರು ಹಾಲು ನೀರಿನಂತೆ ಬೆರೆತು ಹೋಗಿದ್ದು, ಈ ತತ್ವಗಳ ಅನುಭವ ಪಡೆಯುವ ಪ್ರಾವೀಣ್ಯತೆ ಪರಮಹಂಸರಿಗೆ ಮಾತ್ರವೇ ಇರುವಂತಾದ್ದು.

ಸೃಷ್ಟಿಯ ಎಲ್ಲಾ ಘಟಕಾಂಶಗಳನ್ನು ಆಕಾಶ ತತ್ವವು ಹೊಂದಿದ್ದರೂ ಸೃಷ್ಟಿಯ ಘನ ರೂಪವನ್ನು ವಸ್ತು ರೂಪವನ್ನು ಹೊಂದುವಷ್ಟು ವಿಕಸಿತವಾಗಿಲ್ಲಾ.

ಶುದ್ದವಾದ ಸ್ಫಟಿಕದ ಮೂಲಕ ಪೂರ್ಣಚಂದ್ರನ ಬೆಳಕನ್ನು ಹಾಯಿಸಿದರೆ ಅದರ ಸುತ್ತಲೂ ಹೇಗೆ ಕಾಂತಿ ಬೆಳಗುತ್ತದೆಯೋ ಹಾಗೆ ಶಿವಶಕ್ತಿ ತತ್ವಗಳು ವಿಶುದ್ದಿ ಚಕ್ರವನ್ನು ಅನುಗ್ರಹಿಸಿದರೆ, ಆ ಕಾಂತಿಯು ನಮ್ಮೊಳಗಿನ ಪ್ರಜ್ಞೆಯನ್ನು ಬೆಳಗಿ ಅಂಧಕಾರವನ್ನು ಹೊರದೂಡುತ್ತದೆ.
ಚಕೋರ ಪಕ್ಷಿಯು ಚಂದ್ರನ ಬೆಳದಿಂಗಳಿಗೆ ಕಾಯುವಂತೆ ನಿಜವಾದ ಸಾಧಕ ಸದಾ ಆ ದೈವಿಕ ಅಮೃತಕ್ಕಾಗಿ ಕಾಯುತ್ತಾನೆ.ಈ ರೀತಿಯಾಗಿ ವಿಶುದ್ಧಿ ಚಕ್ರದಲ್ಲಿ ಶಿವಶಕ್ತಿಯರನ್ನು ಧ್ಯಾನಿಸಿದರೆ, ಮನಸ್ಸಿನ ಅಂಧಕಾರ ಕಳೆಯುತ್ತದೆ.

ಸಹಸ್ರಾರದಲ್ಲಿ ಸಂಯೋಗದ ನಂತರ ಶಿವ ಶಕ್ತಿಯರ ಅವರೋಹಣವೇ ಆಚಾರ್ಯ ಶಂಕರರ ಆರಾಧನೆಯ ಲಕ್ಷಣವಾಗಿದೆ. ಈ ಅವರೋಹಣದಿಂದ ಪ್ರಜ್ಞೆ ಮತ್ತು ಶಕ್ತಿಯ ದೈವಿಕ ಸಂಯೋಜನೆ ಆಸೆಗಳನ್ನು ಪೂರೈಸುತ್ತದೆ. ಸುಷುಮ್ನಾ ನಾಡಿಯ ಮೂಲಕ ಪಸರಿಸುವ ಚಂದ್ರನ ಕಿರಣಗಳ ಪ್ರಕಾಶದ ಪ್ರವಾಹದಲ್ಲಿ ದೇಹ ಮುಳುಗಿಹೋಗುತ್ತದೆ.

ಸೃಷ್ಟಿಯ ಪ್ರಥಮದಲ್ಲಿ ಶಿವ ತತ್ವ ಒಂದೇ ಇದ್ದು ಅದು ಸ್ವಯಂ ಪ್ರಕಾಶವಾಗಿದ್ದು ಆ ಪ್ರಕಾಶವನ್ನು ಪ್ರತಿಬಿಂಬಿಸಲು ಅಥವಾ ಹೊರಸೂಸಲು ಶಿವನಿಂದ ಪರಾಶಕ್ತಿಯ ಸೃಷ್ಟಿ ಆಯಿತು ಎಂದು ಹೇಳುವ ವರ್ಗವೂ ಇದೆ. ಇದು ಬ್ರಹ್ಮಾಂಡಕ್ಕೆ ಸಂಬಂಧಿಸಿದ ಕ್ರಿಯೆಯಾದರೆ, ಪಿಂಡಾಂಡದಲ್ಲಿಯೂ ಸಹಾ ಅಧ್ಯಾತ್ಮಿಕ ಅಂಧಕಾರವನ್ನು ತೊಲಗಿಸಲು ಶಿವಶಕ್ತಿಯರಲ್ಲಿ ಧ್ಯಾನಾಸಕ್ತರಾಗಬೇಕು. ಆಗ ಸಾಧಕರು ಶಿವಶಕ್ತಿಯರನ್ನು ತಮ್ಮಲ್ಲೇ ಕಾಣುವಂತಾಗುತ್ತದೆ.

ಸೌಂದರ್ಯಲಹರಿಗೆ ಭಾಷ್ಯವನ್ನು ಬರೆದ ಹಲವು ಭಾಷ್ಯಕಾರರು ವಿಶುದ್ಧಿಯಲ್ಲಿಯ ಶಿವಶಕ್ತಿಯರನ್ನು ಅರ್ಧನಾರೀಶ್ವರ ಎಂದು ಹೇಳಿದ್ದಾರೆ. ಆದರೆ ಶ್ರೀ ಲಕ್ಷ್ಮೀಧರರು ತಮ್ಮ ಭಾಷ್ಯದಲ್ಲಿ ವಿಶುದ್ಧಿಯಲ್ಲಿಯ ಶಿವ ಶಕ್ತಿಯರನ್ನು ವ್ಯೋಮೇಶ್ವರ ಮತ್ತು ವ್ಯ್ಯೋಮೇಶ್ವರೀ ಎಂದಿದ್ದಾರೆ. ವ್ಯೋಮ ಎನ್ನುವ ಪದ ಆಕಾಶ ಸೂಚಿತವಾಗಿದ್ದು ವ್ಯೋಮೇಶ್ವರ ಮತ್ತು ವ್ಯೋಮೇಶ್ವರಿ ಎಂದು ಗುರುತಿಸಿರುವುದು ಅರ್ಥಪೂರ್ಣವಾಗಿದೆ.
ಅಷ್ಟೆ ಅಲ್ಲದೆ ವ್ಯೋಮೇಶ್ವರ ವ್ಯೋಮೇಶ್ವರಿಯರನ್ನು 72 ನಾಭಸ ಮಯೂಖಗಳು ಅಂದರೆ ಬಾಹ್ಯಾಕಾಶದ ಕಿರಣಗಳು ಸುತ್ತುವರೆದಿವೆ ಎಂದು ಹೇಳಿದ್ದಾರಲ್ಲದೆ, ಈ 72 ನಾಭಸ ಮಯೂಖಗಳ ಹೆಸರನ್ನೂ ತಿಳಿಸಿದ್ದಾರೆ.
ವಿಶುದ್ಧಿ ಚಕ್ರ ನಿಲಯಾ ಇಂದ ಆರಂಭವಾಗಿ ಡಾಕಿನೀಶ್ವರೀ ಎನ್ನುವ ನಾಮದವರೆಗಿನ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರವು ಅಮೃತಾದಿ 16 ಶಕ್ತಿಗಳು ವಿಶುದ್ಧಿ ಚಕ್ರದ 16 ಕಮಲದಳಗಳಲ್ಲಿ ನೆಲೆಸಿದ್ದಾರೆ ಎಂದು ಹೇಳಿದೆ.
ಸರ್ವೋಚ್ಛ ಶಕ್ತಿಯು ಶಿವನ ಒಡಗೂಡಿ ಚಕ್ರಗಳಲ್ಲಿ ಅವರೋಹಣ ಕ್ರಮದಲ್ಲಿ ಸಂಚರಿಸುತ್ತಿದ್ದಾಳೆ ಎಂಬ ಭಾವನೆಯಿಂದ ಧ್ಯಾನಿಸಿದರೆ ಸಾಧಕರ ಎಲ್ಲಾ ಶೋಕಗಳನ್ನು ಪರಿಹರಿಸಿ ಅಜ್ಞಾನವು ನಶಿಸಿಹೋಗುತ್ತದೆ.
ಈ ಶ್ಲೋಕವನ್ನು ಮಂತ್ರವೆಂದೇ ಭಾವಿಸಿ ಜಪಿಸಿದರೆ, ಎಲ್ಲ ರೀತಿಯ ರೋಗಗಳ ಪರಿಹಾರ ಆಗುತ್ತದೆ ಎಂದು ಹೇಳಲಾಗಿದೆ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: