ಲಲಿತಾ ಸಹಸ್ರನಾಮದ ” ದಹರಾಕಾಶ ರೂಪಿಣಿ” ಎಂಬ ನಾಮಕ್ಕೆ ವಿವರಣೆ ನೀಡುವ ಒಂದು ಚಿಕ್ಕ ಪ್ರಯತ್ನ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಬ್ಯೋ ನಮಃ
शान्ता विमला प्रकाशा आत्मा गुहा चित् यॊगास्य
श्री परानंदादि सद्गुरून् नमाम्यहम् पुनः पुनः
ಶಾಂತಾ ವಿಮಲಾ ಪ್ರಕಾಶಾ ಆತ್ಮಾ, ಗುಹಾ ಚಿತ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

ಶ್ರೀ ಲಲಿತಾ ಸಹಸ್ರನಾಮದ 609 ನೆಯ ನಾಮ” ದಹರಾಕಾಶ ರೂಪಿಣೀ” ಯನ್ನು ಅರ್ಥ ಮಾಡಿಕೊಳ್ಳುವ ಚಿಕ್ಕ ಪ್ರಯತ್ನ ಇದಾಗಿದೆ.
ಆಕಾಶ ಎಂದರೆ, ಸ್ಥಳ,ಜಾಗ, ಬಾಹ್ಯಾಕಾಶ ಇವೆಲ್ಲಾ ಅರ್ಥಗಳನ್ನು ಕೊಡಬಹುದು, ದಹರಾ ಎಂದರೆ ಚಿಕ್ಕ, ತೆಳುವಾದ, ಸೂಕ್ಷ್ಮವಾದ ಎಂತೆಲ್ಲಾ ಅರ್ಥಗಳಿವೆ. ಹಾಗಾದರೆ ದೇವಿಯು ಚಿಕ್ಕದಾದ ಆಕಾಶ ರೂಪಿಣಿ ಎಂಬ ಅರ್ಥವೇ? ಅಥವಾ ಈ ಚಿಕ್ಕದಾದ, ಸೂಕ್ಷ್ಮವಾದ ಆಕಾಶ ಯಾವುದು ಎಂದು ಅರಿಯುವ ಪ್ರಯತ್ನ ಮಾಡಬೇಕೆ ? ಅಹುದು ಆ ಪ್ರಯತ್ನ ಮಾಡಿದಾಗ ದೇವಿಯ ರೂಪದ ಅರಿವು ಆಗಲು ಸಾಧ್ಯ.
ಶ್ರೀ ಭಾಸ್ಕರಾಚಾರ್ಯರು ತಮ್ಮ ಲಲಿತಾ ಸಹಸ್ರನಾಮ ಭಾಷ್ಯದಲ್ಲಿ ದಹರಾಕಾಶದ ಬಗ್ಗೆ ತಿಳಿದುಕೊಳ್ಳಲು ಛಾಂದೋಗ್ಯ ಉಪನಿಷತ್ತಿನ 8 ನೆಯ ಅಧ್ಯಾಯವನ್ನು ಉಲ್ಲೇಖಿಸಿದ್ದಾರೆ.
ನಮ್ಮೊಳಗೇ ನಾವು ಒಂದು ಮಹಾನ್ ನಿಗೂಢ ರಹಸ್ಯವನ್ನು ಹೊಂದಿದ್ದೇವೆ. “ನಾನು’ ಎನ್ನುವ ಈ ಮಹಾನ್ ರಹಸ್ಯಕ್ಕಿಂತ ಮಿಗಿಲಾದ್ದು ಬೇರೆ ಯಾವುದೂ ಇರಲು ಸಾಧ್ಯವಿಲ್ಲಾ. ಬ್ರಹ್ಮಾಂಡದಲ್ಲಿನ ಎಲ್ಲಕ್ಕೂ ಅರ್ಥವನ್ನು ಕೊಡಬಹುದು, ವಿವರಿಸಬಹುದು, ಅರ್ಥಮಾಡಿಕೊಳ್ಳಬಹುದು ಆದರೆ ”ನನ್ನೊಳಗಿನ ನಾನು” ಎಂಬುದು ಪ್ರಪಂಚದಲ್ಲಿ ಒಂದು ಮಹಾನ್ ಒಗಟಾಗಿದೆ, ಇದು ಅಡಗಿ ಕುಳಿತಿರುವ ಪ್ರಚಂಡ ರಹಸ್ಯವಾಗಿದೆ. ಇಡೀ ವಿಶ್ವದ ಪವಾಡವೇ ಆಗಿದೆ.

“ಓಂ ಅಥ ಯದಿದಮಸ್ಮಿನ್ಬ್ರಹ್ಮಪು ರೇ ದಹರಂ ಪುಂಡರೀಕಮ್ ವೇಶ್ಮ ದಹರೋ sಸ್ಮಿನ್ನನಂತರಾಕಾಶಸ್ತ ಸ್ಮಿನ್ಯದನ್ತಸ್ತದನ್ವೇಷ್ಟವ್ಯಂ ತದ್ವವ ವಿಜಿಜ್ಞಾಸಿತವ್ಯಮಿತಿ”

ಬ್ರಹ್ಮನ ನಗರದ ಒಳಗೆ ಒಂದು ಚಿಕ್ಕ ಸ್ಥಳವಿದೆ. ಈ ಚಿಕ್ಕ ಸ್ಥಳದಲ್ಲಿ ಇರುವ ವಸ್ತು ಯಾವುದು ಎಂದು ಅರಿಯಬೇಕು.
ಸ್ಥೂಲ ಮತ್ತು ಸೂಕ್ಷ್ಮ ದೇಹಗಳು ಬ್ರಹ್ಮನ ನಗರ. ಇಲ್ಲಿ ಹಲವಾರು ಅಂಗಗಳು, ಮನಸ್ಸು ಬುದ್ಧಿ ಇವೆಲವೂ ಇದ್ದು ದೇಹದ ಅವಶ್ಯಕತೆಗಳನ್ನು ಪೂರೈಸುತ್ತಿರುತ್ತವೆ. ಹೇಗೆ ರಾಜನಿಗೆ ತನ್ನ ನಗರದಲ್ಲಿ ಅರಮನೆ ಇರುತ್ತದೆಯೋ ಹಾಗೆ ಈ ಬ್ರಹ್ಮನಗರದ ರಾಜನಿಗೂ ಈ ಬ್ರಹ್ಮನಗರದಲ್ಲಿ ಒಂದು ಅರಮನೆ ಇದೆ. ಇಲ್ಲಿ ಬ್ರಹ್ಮನನ್ನು ಕಾಣಬೇಕು.
ಬ್ರಹ್ಮ ಅಂದರೆ ಅಸ್ಥಿತ್ವ, . ಈ ಅಸ್ತಿತ್ವವು, ಅಭಿವ್ಯಕ್ತ ನಾಮ ರೂಪಗಳಿಗಾಗಿ ಜೀವಾತ್ಮನ ರೂಪದಲ್ಲಿ ದೇಹದಲ್ಲಿ ಇದೆ. ಯಾರು ತಮ್ಮ ಇಂದ್ರಿಯಗಳನ್ನು ಭೌತಿಕ ವಸ್ತುಗಳಿಂದ ಹಿಂತೆಗೆದುಕೊಳ್ಳುತ್ತಾರೋ, ಯಾರು ಬಾಹ್ಯ ಪ್ರಪಂಚಕ್ಕೆ ಅಂಟಿಕೊಂಡಿದ್ದರೂ ಅದರಿಂದ ಕಳಚಿಕೊಂಡಿರುತ್ತಾರೋ, ಯಾರು ಬ್ರಹ್ಮಚರ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೋ, ಯಾರು ಬ್ರಹ್ಮನ್ ಅಲ್ಲಿ ಧ್ಯಾನಾಸಕ್ತರಾಗುತ್ತಾರೋ ಅಂತಹವರು ಬ್ರಹ್ಮನ್ ಅನ್ನು ಅರಿಯಲು, ಸಾಧಿಸಲು,ಹೊಂದಲು ಸಾಧ್ಯವಾಗುತ್ತದೆ.
ದಹರಾ ಎನ್ನುವುದು ಚಿಕ್ಕದು ಎನ್ನ್ನುವುದಾದರೆ, ಅಲ್ಲಿ ನೆಲೆಸಿರುವ ವಸ್ತು ಅದಕ್ಕಿಂತಲೂ ಚಿಕ್ಕದಾಗಿರಬೇಕು. ಅದು ಆಕಾಶ. ಅದು ಬ್ರಹ್ಮನ್.

ಆಕಾಶೋ ವೈ ನಾಮ ನಾಮರೂಪಯೋರ್ನಿರ್ವಹಿತಾ ತೇ ಯದನ್ತರಾ ತದ್ಬ್ರಹ್ಮಾ ತದಮೃತಂ ಸ ಆತ್ಮಾ ( ಪ್ರಜಾಯತೇಃ ಸಭಾಂ ವೇಶ್ಮ ಪ್ರಪದ್ಯೇ ಯಶೋsಹಂ ಭವಾಮಿ ಬ್ರಾಹ್ಮಣಾನಾಂ ಯಶೋ ರಾಜ್ಞಾಂ ಯಶೋsಹಮನು ಪ್ರಾಪತ್ಸಿ ಸ ಹಾಹಂ ಯಶಸಾಂ ಯಶಃ ಶ್ಯೋತಮದತ್ಕಕಮದಕ್ತಮ್ ಶ್ಯೇತಂ ಲಿನ್ದು ಮಾಭಿಗಾಂ ಲಿನ್ದು ಮಾಭಿಗಾಮ್)

ಛಾಂದೋಗ್ಯ ಉಪನಿಷತ್ತಿನ 14 ನೆಯ ಅಧ್ಯಾಯದ ಶ್ಲೋಕ.

ಯಾವುದನ್ನು ಆಕಾಶ ಎಂದು ಕರೆಯಲಾಗುತ್ತದೆಯೋ ಅದೇ ನಾಮ ರೂಪಗಳ ಅಭಿವ್ಯಕ್ತಿಯಾಗಿದೆ. ಆ ಅಭಿವ್ಯಕ್ತದಲ್ಲಿಯೇ ಬ್ರಹ್ಮನ್ ಇರುವುದು. ಅದು ಅಮರವಾದದ್ದು, ಅದುವೇ ಆತ್ಮ.

ಬ್ರಹ್ಮನ್ ನಿರಾಕಾರ, ಸೂಕ್ಷ್ಮ ಆದರೂ ಆಕಾಶದಂತೆ ಎಲ್ಲೆಡೆ ವ್ಯಾಪಿಸಿರುವಂತಾದ್ದು. ಯಾವುದು ಈ ಆಕಾಶ ಎಂಬಲ್ಲಿ ಅಸ್ಥಿತ್ವದಲ್ಲಿದೆಯೋ ಅದನ್ನು ಅರಿಯಬೇಕು. ಅದನ್ನು ಸಾಧಿಸಲು ಬಯಸಬೇಕು, ಪ್ರಯತ್ನಿಸಬೇಕು. ಅದಕ್ಕೆ ಗುರುವಿನ ಮಾರ್ಗದರ್ಶನ ಬೇಕು.

ಸ ಬ್ರೂಯಾತ್ ಯಾವಾನ್ವಾ ಅಯಮಾಕಾಶಸ್ತವಾನೇಷೋsನ್ತಹೃದಯ ಆಕಾಶ ಉಭೇ ಅಸ್ಮಿನ್ದ್ಯಾವಾಪೃಥಿವೀ ಅನ್ತರೇವ ಸಮಾಹಿತೇ ಉಭವಗ್ನಿಶ್ಚ ವಾಯುಶ್ಚ ಸೂರ್ಯಾಚಂದ್ರಮಸಾವುಭೌ ವಿದ್ಯುನ್ನಕ್ಷತ್ರಾಣಿ ಯಚ್ಚಾಸ್ಯೇಹಸ್ತಿಯಚ್ಚ ನಾಸ್ತಿ ಸರ್ವಂ ತದಾಸ್ಮಿನ್ಸಮಾಹಿತಮಿತಿ.

ಈ ಚಿಕ್ಕ ಆಕಾಶದಲ್ಲಿ ಏನಿದೆ ಎಂದು ಕೇಳುತ್ತಿರುವೆ, ನಾನೀಗ ಅದನ್ನು ಹೇಳುತ್ತೇನೆ ಎನ್ನುತ್ತಾರೆ ಗುರುಗಳು.
ಅದು ಸೂರ್ಯನ ಕಲೆಯಂತೆ ಇದೆ. ಅದು ಕಲೆಯಂತೆ ಕಂಡುಬಂದರೂ ಅದರಲ್ಲಿ ಸೂರ್ಯ ಮಂಡಲದಲ್ಲಿರುವ ಎಲ್ಲವೂ ಇದೆ. ಹಾಗೆಯೇ ಈ ಪುಟ್ಟ ಜಾಗದಲ್ಲಿರುವ ವಸ್ತು ಎಷ್ಟು ಬೇಕಾದರೂ ವಿಸ್ತಾರವನ್ನು ಹೊಂದುವಂತಹುದು. ಇದು ಬ್ರಹ್ಮಾಂಡದ ರಹಸ್ಯದ ಚಿಹ್ನೆ, ಕುರುಹು, ಸಂಕೇತ. ಈ ವಸ್ತು ಹೊರಗೆ ಅಪರಿಮಿತ ಆಕಾಶವಾಗಿದೆಯೋ ಅಷ್ಟೇ ಅಪರಿಮಿತವಾಗಿ ಈ ಪುಟ್ಟದಾದ ಜಾಗದಲ್ಲಿಯೂ ಇದೆ. ಈ ದಹರಾಕಾಶದಲ್ಲಿ ಬ್ರಹ್ಮಾಂಡವೇ ಅಡಗಿದೆ ಅಂದರೆ ನಾವು ಕಾಣುವ ಪಂಚಭೂತ ತತ್ವಗಳಲ್ಲದೆ, ಏನೆಲ್ಲವನ್ನೂ ನಾವು ಹೊರಗೆ ಕಾಣುತ್ತಿದ್ದೇವೆಯೋ ಅದೆಲ್ಲವೂ ಈ ಪುಟ್ಟ ಜಾಗದಲ್ಲಿ ಇದೆ.
ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನೂ ಈ ಪುಟ್ಟಜಾಗದಲ್ಲಿ ಕಾಣಬಹುದು. ಸೂರ್ಯನನ್ನು ನಾವು ಹೊರಗೆ ಕಾಣಬೇಕಿಲ್ಲ. ಸೂರ್ಯ ಈ ಪುಟ್ಟಜಾಗದಲ್ಲಿ ಹೊರಗಿನಂತೆಯೇ ಪ್ರಕಾಶಿಸುತ್ತಿದ್ದಾನೆ. ಮಿಂಚು, ಗುಡುಗು, ಸಿಡಿಲು ಸಹಾ ಈ ಪುಟ್ಟಜಾಗದಲ್ಲಿ ಆಗುತ್ತಿದೆ. ಏನೆಲ್ಲಾ ಹೊರಗಿನ ಪ್ರಪಂಚದಲ್ಲಿ ಆಗುತ್ತಿದೆಯೋ ಅದೆಲ್ಲವೂ ಈ ಪುಟ್ಟ ಜಾಗದಲ್ಲಿಯೂ ಆಗುತ್ತಿದೆ. ಒಳಗಿನ ಈ ಪುಟ್ಟ ಜಾಗ ಹೊರಗೆ ಕಾಣುವ ಬ್ರಹ್ಮಾಂಡಕ್ಕಿಂತ ಹೆಚ್ಚು ನಿಗೂಢವಾಗಿದೆ. ಯಾವುದು ನಮಗೆ ಹೊರಗಿನ ಪ್ರಪಂಚದಲ್ಲಿ ಕಾಣುವುದಿಲ್ಲವೋ ಅವೆಲ್ಲವೂ ಸಹಾ ಈ ಪುಟ್ಟಜಾಗದಲ್ಲ್ಲಿ ಇವೆ. ಅಂತರ್ಮುಖಿಯಾಗಿ ಆಳವಾಗಿ ಈ ಪುಟ್ಟಜಾಗದ ಒಳಹೊಕ್ಕರೆ, ಬ್ರಹ್ಮಾಂಡದ ನಿಗೂಢತೆಯನ್ನು ಅರಿಯಬಹುದು. ಏಕೆಂದರೆ, ಬ್ರಹ್ಮಾಂಡದ ಎಲ್ಲ ಅಂಗಗಳೂ ಇಲ್ಲಿಯೇ ಕೇಂದ್ರೀಕೃತವಾಗಿವೆ. ಈ ಪುಟ್ಟ ಜಾಗವೇ ಬೇರೆನೂ ಅಲ್ಲ ಅದು ನಮ್ಮ ಹೃದಯ. ಈ ಹೃದಯವು ಮಾಂಸದ ಮುದ್ದೆಯಲ್ಲ, ಅದು ಆಕಾಶ.

ತದ್ವಾ ಏತದಕ್ಷರಂ ಗಾರ್ಗ್ಯದೃಷ್ಟಂ ದ್ರಷ್ಟ್ರ್ಯ, ಅಶೃತಂ ಶ್ರೋತೃ,ಅಮತಂ ಮಂತೃ, ಅವಿಜ್ಞಾತಂ ವಿಜ್ಞಾತೃ, ನಾನ್ಯದತೋsಸ್ತಿ ವಿಜ್ಞಾತೃ; ಏತಸ್ಮಿನ್ನು ಖಲ್ವಕ್ಷರೇ ಗಾರ್ಗ್ಯಾಕಾಶ ಓತಶ್ಚ ಪ್ರೋತಶ್ಚೇತಿ.

ಇದು ಬೃಹದಾರಣ್ಯಕ ಉಪನಿಷತ್ತಿನ ಮೂರನೆಯ ಅದ್ಯಾಯದಲ್ಲಿ, ಎಂಟನೇ ಬ್ರಾಹ್ಮಣದ 11 ನೆಯ ಶ್ಲೋಕ. ಯಾಜ್ಞವಲ್ಕ್ಯರು ಗಾರ್ಗಿಯ ಪ್ರಶ್ನೆಗೆ ಉತ್ತರ ನೀಡುತ್ತಾ, ಈ ಅಕ್ಷರವು ನೋಡಲ್ಪಡುವುದಿಲ್ಲಾ, ಆದರೆ ಸಾಕ್ಷಿಯು. ಅದು ಕೇಳಲ್ಪಡುವುದಿಲ್ಲ ಆದರೆ ಶ್ರೋತೃವು, ಅದು ಮನಸ್ಸಿಗೆ ವಿಷಯವಲ್ಲಾ ಆದರೆ ಮಂತೃವು ( ಮನನ ಮಾಡುವಂತಾದ್ದು) ಅದು ತಿಳಿಯಲ್ಪಡುವುದಿಲ್ಲ ಆದರೆ ತಿಳಿಯುವಂತಾದ್ದು. ಅದಕ್ಕಿಂತ ಬೇರೆ ಸಾಕ್ಷಿಯಿಲ್ಲ, ಅದಕ್ಕಿಂತ ಬೇರೆಯಾದ ಶ್ರೋತೃವಿಲ್ಲ, ಮಂತೃವಿಲ್ಲ, ವಿಜ್ಞಾತೃವಿಲ್ಲ. ಈ ಅಕ್ಷರದಿಂದಲೇ ಅವ್ಯಕ್ತವಾದ ಆಕಾಶವು ವ್ಯಾಪ್ತವಾಗಿದೆ. ಜೀವಾತ್ಮ, ಅಂತರ್ಯಾಮಿಯಾದ ಈಶ್ವರ ಅಂದರೆ ಪರಮಾತ್ಮ, ಆತ್ಮ, ಬ್ರಹ್ಮನ್, ಮತ್ತು ಅಕ್ಷರ ಈ ಮೂರರಲ್ಲಿ ಯಾವ ಭೇದವೂ ಇಲ್ಲ. ಅವಿದ್ಯೆಯಿಂದ ಕೂಡಿದ ಶರೀರೇಂದ್ರಿಯಗಳಲ್ಲಿ ಪ್ರತಿಬಿಂಬಿತವಾದ ಬ್ರಹ್ಮನ್ ಸಂಸಾರಿಯಾದ ಜೀವ ಎನಿಸುತ್ತದೆ. ನಿತ್ಯವೂ, ನಿರತಿಶಯವೂ ಆದ ಜ್ಞಾನ ಶಕ್ತಿ ಎಂಬ ಉಪಾಧಿಯಲ್ಲಿ ಪ್ರತಿಬಿಂಬವಾದ ಬ್ರಹ್ಮನ್ ಅಂತರ್ಯಾಮಿಯಾದ ಈಶ್ವರ ಎನಿಸುತ್ತದೆ. ಅದೇ ಬ್ರಹ್ಮನ್ ಯಾವುದೇ ಉಪಾಧಿಯಿಲ್ಲದ ತನ್ನ ಕೇವಲ ಶುದ್ಧ ಸ್ವರೂಪದಿಂದ ಅಕ್ಷರ ಅಥವಾ ಪರಮಾತ್ಮ ಎಂದು ಹೇಳಲ್ಪಡುತ್ತದೆ

ಬ್ರಹ್ಮಪುರಿ ಎನಿಸಿಕೊಳ್ಳುವ ಈ ಶರೀರ ನಶಿಸಿದಾಗ, ನಾಶವಾದಾಗಲೂ ಈ ಬ್ರಹ್ಮನ್ ನಶಿಸುವುದೂ ಇಲ್ಲಾ, ನಾಶವಾಗುವುದೂ ಇಲ್ಲ. ಇದನ್ನೇ ಗೀತಾಚಾರ್ಯ,

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯ್ಯಾಪೋ ನ ಶೋಸಯತಿ ಮಾರುತಃ ಎಂದಿದ್ದಾರೆ.

ಯಾವ ಶಸ್ತ್ರವೂ ಛೇದಿಸಲಾಗದ, ಅಗ್ನಿಯಿಂದ ದಹಿಸಲಾಗದ, ನೀರಿನಿಂದ ತೋಯಿಸಲಾಗದ, ಗಾಳಿಯಿಂದ ಒಣಗಿಸಲಾಗದ್ದು ಯಾವುದೋ ಅದು ಆತ್ಮ, ಅದು ಬ್ರಹ್ಮನ್.

ದೇವೀ ಉಪನಿಷತ್ತಿನಲ್ಲಿ “ ಸಾಬ್ರವೀದಹಮ್ ಬ್ರಹ್ಮ ಸ್ವರೂಪಿಣೀ “ ನಾನು ಬ್ರಹ್ಮ ಸ್ವರೂಪಿಣೀ ಎನ್ನುತ್ತಾಳೆ ದೇವಿ.

ಹೃದಯ ಕಮಲದಲ್ಲಿ ಅತಿ ಚಿಕ್ಕದಕ್ಕಿಂತಲೂ ಚಿಕ್ಕದಾದ ಸ್ಥಾನ, ದಹರಾಕಾಶ ಅಲ್ಲಿಯೇ ಬ್ರಹ್ಮನ್ ಅನ್ನು ಅರಿಯಬೇಕು. ದಹರ ಎನ್ನುವುದು ಅದರ ಅರ್ಥ ಸೂಚಿಸುವಂತೆ ಅತ್ಯಂತ ಚಿಕ್ಕ ದಾಗಿದ್ದರೂ ಇಡೀ ಬ್ರಹ್ಮಾಂಡವೇ ಅಲ್ಲಿ ಅಡಗಿದೆ. ಶ್ರೀ ಮಾತೆಯು ದಹರಾಕಾಶರೂಪಿಣಿ, ದಹರಾಕಾಶ ಅದು ಬ್ರಹ್ಮನ್, ಬ್ರಹ್ಮನ್ ಎನ್ನ್ನುವುದು ಆತ್ಮ, ಹಾಗಾಗಿ ದೇವಿಯು ಬ್ರಹ್ಮ ಸ್ವರೂಪಿಣಿ, ಆತ್ಮಸ್ವರೂಪಿಣಿ. ಆ ದಹರಾಕಾಶದಲ್ಲಿ ಅವಳ ಸಾಕ್ಷಾತ್ಕಾರ ಮಾಡಿಕೊಳ್ಳುವುದೇ ಜೀವನದ ಪರಮೋಚ್ಛ ಗುರಿ. ಆ ಗುರಿ ಮುಂದೆ ಇದ್ದು ಅದನ್ನು ತಲುಪಲು ನಮ್ಮ ಹಿಂದೆ ಗುರು ಇರಬೇಕು, ಗುರುವಿನ ಅನುಗ್ರಹ ಇರಬೇಕು. ಅಂತಹ ಅನುಗ್ರಹ ನಮ್ಮೆಲ್ಲರಿಗೂ ದೊರೆಯಲಿ ಎಂದು ಗುರುಮಂಡಲ ಮತ್ತು ಗುರುಮಂಡಲ ರೂಪಿಣಿ ಶ್ರೀ ಮಾತೆಯಲ್ಲಿ ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥನೆಯನ್ನು ಸಲ್ಲಿಸುತ್ತಾ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: