ಸೌಂದರ್ಯ ಲಹರಿಯ 36 ನೇ ಮಂತ್ರಕ್ಕೆ ವಿವರಣೆ: ಆಜ್ಞಾಚಕ್ರದಲ್ಲಿ ಧ್ಯಾನ Soundarya Lahari Verse#36 explained


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಬ್ಯೋ ನಮಃ
शान्ता विमला प्रकाशा आत्मा गुहा चित् यॊगास्य
श्री परानंदादि सद्गुरून् नमाम्यहम् पुनः पुनः
ಶಾಂತಾ ವಿಮಲಾ ಪ್ರಕಾಶಾ ಆತ್ಮಾ, ಗುಹಾ ಚಿತ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಂ ಪುನಃ ಪುನಃ

ಸೌಂದರ್ಯ ಲಹರಿಯ 36 ನೇಯ ಶ್ಲೋಕ ಹೀಗಿದೆ:

ತವಾಜ್ಞಾಚಕ್ರಸ್ಥಂ ತಪನಶಶಿಕೋಟಿದ್ಯುತಿಧರಂ
ಪರಂ ಶಂಭುಂ ವಂದೇ ಪರಿಮಿಲಿತಪಾರ್ಶ್ವಂ ಪರಚಿತಾ
ಯಮಾರಾಧ್ಯನ್ ಭಕ್ತ್ಯಾ ರವಿಶಶಿಶುಚೀನಾಮವಿಷಯೇ
ನಿರಾಲೋಕೇ sಲೋಕೇ ನಿವಸತಿ ಹಿ ಭಾಲೋಕಭುವನೇ

“ತಾಯೇ ನಿನ್ನ ಆಜ್ಞಾ ಚಕ್ರದಲ್ಲಿ ಇರುವ ಆ ಸರ್ವೋಚ್ಛನಾದ ಶಿವನನ್ನು ಹೊಗಳಿ ಹಾಡುತ್ತಿದ್ದೇನೆ. ಈ ಚಕ್ರದ ಎಲ್ಲಕಡೆಯೂ ವ್ಯಾಪಿಸಿರುವ ಆ ಸರ್ವೋಚ್ಛ ಪ್ರಜ್ಞೆಯ ಉಜ್ವಲ ಕಾಂತಿಯು ಅಸಂಖ್ಯಾತ ಸೂರ್ಯ ಚಂದ್ರರುಗಳ ಕಾಂತಿಗಿಂತಲೂ ಮಿಗಿಲಾದದ್ದಾಗಿದೆ. ಯಾರು ಸೂರ್ಯ, ಚಂದ್ರ ಮತ್ತು ಅಗ್ನಿಯು ತಲುಪದಿರುವ ಪ್ರಪಂಚದಲ್ಲಿದ್ದಾರೋ ಅಂದರೆ ನಮಗೆ ಅನುಭವವಾಗುತ್ತಿರುವ ಭೌತಿಕ ಪ್ರಪಂಚದಲ್ಲಿ ಇಲ್ಲವೋ ಅಂತಹವರು ಸ್ವಪ್ರಕಾಶವಾಗಿ ಬೆಳಗುತ್ತಿರುವ ಪ್ರಪಂಚದಲ್ಲಿ ಇದ್ದಾರೆ.

ಈ ಶ್ಲೋಕದಲ್ಲಿ ಭಗವತ್ಪಾದರು ಆಜ್ಞಾಚಕ್ರದ ಬಗ್ಗೆ ಹೇಳುತ್ತ್ತಾ ಇನ್ನು ಮುಂದಿನ ಶ್ಲೋಕಗಳಲ್ಲಿ ಇನ್ನುಳಿದ ಚಕ್ರಗಳ ಬಗ್ಗೆ ಹೇಳುತ್ತಾರೆ.

ಶಿವನು ಸ್ವಯಂ ಪ್ರಕಾಶನಾಗಿ, ಅಸಂಖ್ಯಾತ ಸೂರ್ಯ ಚಂದ್ರ ಮತ್ತು ಅಗ್ನಿಯ ಉಜ್ವಲ ಬೆಳಕು ಮತ್ತು ಕಾಂತಿಯನ್ನು ಮೀರಿಸುತ್ತಿದ್ದಾನೆ ಎನ್ನುತ್ತಾರೆ ಶಂಕರರು.

ಅಥ ಯ ಏವ ಸಂಪ್ರಸಾದೋsಸ್ಮಚ್ಛರೀರಾತ್ಸಮುಥ್ಯಾಯ ಪರಂ  ಜ್ಯೋತಿರೂಪ ಸಂಪದ್ಯ ಸ್ವೇನ ರೂಪೇಣಾಭಿ ನಿಷ್ಪದ್ಯಾತ್ ಏಷ ಆತ್ಮೇತಿ ಹೋವಾಚೈತದಮೃತಮಭಯಮೇತದೂಬ್ರಹೋತಿ ತಸ್ಯ ಹ ವಾ ಏತಸ್ಯ ಬ್ರಹ್ಮಣೋ ನಾಮ ಸತ್ಯಮಿತಿ.

ಇದು ಛಾಂದೋಗ್ಯ ಉಪನಿಷದ್ ವಾಕ್ಯ:

ಯಾರು ನಿರ್ಮಲರೂ ಪ್ರಶಾಂತರೂ ಆಗಿರುತ್ತಾರೋ ಅಂತಹವರು, ತಮ್ಮ ದೇಹ ಭಾವದಿಂದ ಮೇಲೆದ್ದು ಆ ಉನ್ನತವಾದ, ಪ್ರಾಜ್ವಲ್ಯಮಾನವಾದ, ಕಾಂತಿಯನ್ನು, ಬೆಳಗನ್ನು ತಮ್ಮ ನೈಜ ಪ್ರಕೃತಿಯಲ್ಲಿ ಸ್ಥಾಪಿಸಬಲ್ಲವರಾಗುತ್ತಾರೆ. ಅದೇ ಆತ್ಮ. ಅದೇ ಅಮರ. ಅಲ್ಲಿ ಯಾವ ಭಯವೂ ಸುಳಿಯಲಾರದು. ಅದೇ ಸತ್ಯ ಮತ್ತು ಅದನ್ನೇ ಬ್ರಹ್ಮನ್ ಎನ್ನುವುದು.

ಶಿವನು ಸ್ವಯಂ ಪ್ರಕಾಶವಾದ ಪ್ರಕಾಶ, ಅಂದರೆ ಅದು ಪ್ರಜ್ಞೆ. ಈ ಪ್ರಕಾಶವನ್ನು ಪ್ರಕಟಗೊಳಿಸಿದರೆ ಅದು ಸೃಷ್ಟಿ. ಅದೇ ವಿಮರ್ಶಾ, ಅದೇ ಶಕ್ತಿ. ಈ ಪ್ರಕಾಶ ವಿಮರ್ಶಗಳು ಒಂದನ್ನೊಂದು ಅವಲಂಬಿಸಿರುವುದಷ್ಟೇ ಅಲ್ಲಾ ಅವು ಎರಡೂ ಒಂದೇ ಆಗಿರುವಂತಹವು ಮತ್ತು ಬೇರ್ಪಡಿಸಲು ಅಸಾಧ್ಯವಾಗಿರುವಂತಹವು.

ಶಿವನು ಆಜ್ಞಾ ಚಕ್ರದಲ್ಲಿ ಸ್ವಯಂಪ್ರಕಾಶನಾಗಿದ್ದರೆ, ಶಕ್ತಿಯು ಸಹಾ ಅದರ ಸುತ್ತಲೂ ವ್ಯಾಪಿಸಿಕೊಂಡಿದ್ದಾಳೆ. ಯಾವಾಗ, ಶಕ್ತಿಯು ಪ್ರಕಟಗೊಳಿಸುತ್ತಿರುವ ಶಿವನ ಈ ಸ್ವಯಂಪ್ರಕಾಶದ ಅನುಭವವನ್ನು ಸಾಧಕನು ಹೊಂದುತ್ತಾನೋ, ಅದೇ ಆತ್ಮದ ಬೆಳಕು. ಆಗ ಸಾಧಕನು ಈ ಭೌತಿಕ ಪ್ರಪಂಚದ ಕೊಂಡಿಯನ್ನು ಕಳಚಿಕೊಳ್ಳುತ್ತಾನೆ.

ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿಗಳನ್ನು, ಚಂದ್ರ, ಸೂರ್ಯ ಮತ್ತು ಅಗ್ನಿ ನಾಡಿಗಳೆಂದು ಹೇಳಿದ್ದು, ಇವುಗಳ ಉಜ್ವಲವಾದ, ಪ್ರಕಾಶವಾದ ಕಾಂತಿಗಿಂತಲೂ ಅತಿಶಯವಾಗಿರುವುದು, ಶಿವನ ಸ್ವಯಂಪ್ರಕಾಶ ಎಂತಲೂ ಈ ಶ್ಲೋಕವನ್ನು ಅರ್ಥೈಸಬಹುದಾಗಿದೆ.

ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ
ಯದ್ಗತ್ವಾ ನ ನಿವರ್ತನ್ತೇ ತದ್ಧಾಮ ಪರಮಂ ಮಮ.

ಇದು ಗೀತಾಚಾರ್ಯರ ವಾಣಿ.

ಸೂರ್ಯ ಚಂದ್ರ ಮತ್ತು ಅಗ್ನಿಗಳು ಪ್ರಕಾಶಿಸದೇ ಇರುವ ನನ್ನ ಸ್ವಯಂ ಪ್ರಕಾಶವಾದ ಉನ್ನತವಾದ ಸಾನ್ನಿಧ್ಯವನ್ನು ಸಾಧಕ ಒಮ್ಮೆ ತಲುಪಿಬಿಟ್ಟರೆ ಮತ್ತೆ ನನ್ನ ಸಾನ್ನಿಧ್ಯದಿಂದ ಹಿಂತಿರುಗಲಾಗದು.

ಈ ಶ್ಲೋಕಕ್ಕೆ ಭಾಷ್ಯ ಬರೆದ ಶ್ರೀ ಭಗವತ್ಪಾದರು, ಒಂದು ಮಡಕೆಯಲ್ಲಿ, ಆ ಮಡಿಕೆಯಷ್ಟಕ್ಕೆ ಮಾತ್ರ ಸೀಮಿತವಾಗಿರುವ ಆಕಾಶದ ಹೋಲಿಕೆಯನ್ನು ಕೊಡುತ್ತಾ, ಆ ಮಡಕೆ ಒಡೆದುಹೋದರೆ,ಅದರಲ್ಲಿನ ಸೀಮಿತವಾದ ಆಕಾಶ,ಅನಂತವಾದ ಆಕಾಶದೊಂದಿಗೆ ಬೆರತು ಹೋಗುತ್ತದೆ ಮತ್ತು ಅದು ಹಿಂತಿರುಗುವುದೇ ಇಲ್ಲ ಎಂದಿದ್ದಾರೆ.

ಸಾಧಕನಿಗೆ ಬೇಕೆನಿಸಿದ,ಇಷ್ಟವೆನಿಸಿದ ಶಕ್ತಿಯ ರೂಪವನ್ನು ಆಜ್ಞಾ ಚಕ್ರದಲ್ಲಿ ಧ್ಯಾನಿಸಿದಾಗ,ಆ ರೂಪದ ಅನುಭವವು ಆಗುತ್ತದೆ. ಆಗ ವೈಯಕ್ತಿಕ ಪ್ರಜ್ಞೆಯು ತುರೀಯ ಹಂತವನ್ನು ತಲುಪಿ ಅತ್ತ್ಯುನ್ನತವಾದ ಪರಮಾನಂದದ ಅನುಭವವನ್ನು ಸಾಧಕ ಪಡೆಯಲು ಸಾಧ್ಯ. ಸ್ವಲ್ಪ ಸಮಯದ ನಂತರ ಸಾಮಾನ್ಯ ಸ್ಥಿತಿಯನ್ನು ಸಾಧಕ ತಲುಪಿದರೂ, ಆ ಪರಮಾನಂದದ ಅನುಭವವನ್ನು ಮತ್ತೆ ಮತ್ತೆ ಹೊಂದುವ ಆಸಕ್ತಿ,ಆಸೆ, ತೀವ್ರವಾಗಿ ಸಾಧನೆಯು ಬದುಕಿನ ಅವಿಭಾಜ್ಯ ಅಂಗವಾಗಿಬಿಡುತ್ತದೆ,ಆಗ ಶಿವ ಶಕ್ತಿಯರನ್ನು ತನ್ನಲ್ಲೇ ಕಾಣುವಂತಾಗುತ್ತದೆ.

ಸೌಂದರ್ಯ ಲಹರಿಯ ಭಾಷ್ಯಕಾರರಲ್ಲಿ ಪ್ರಮುಖರಾದ ಶ್ರೀ ಲಕ್ಷ್ಮೀಧರರು “ಪರಿಮಿಲಿತ ಪಾರ್ಶ್ವಮ್ ಪರಿಚಿತ ” ಎಂಬುದನ್ನು ಆಜ್ಞಾ ಚಕ್ರದಲ್ಲಿರುವ ಶಿವನ ಎಡ ಪಾರ್ಶ್ವ ದಲ್ಲಿ ಶಕ್ತಿಯು ಆಸೀನಳಾಗಿದ್ದಾಳೆ ಎಂದು ಹೇಳಿದ್ದಾರೆ. ಮತ್ತೆ ಮುಂದುವರೆದು ಆಜ್ಞಾ ಚಕ್ರವು ಕೇವಲ ದ್ವಿದಳ ಪದ್ಮ ಮಾತ್ರವಲ್ಲಾ, ಅಲ್ಲಿ ಅರವತ್ನಾಲ್ಕು ಮಾನಸಿಕ ಮಯೂಖಗಳ ಅಂದರೆ ಕಿರಣಗಳ ಪ್ರಕಾಶವು ಮಾಹಾಯೋಗಿ ಗಳ ಅನುಭವಕ್ಕೆ ಬಂದಿದೆ ಎಂದು ಹೇಳುತ್ತಾ, ಈ ಮಯೂಖಗಳ ಹೆಸರನ್ನು “ಪರಾ ” ಇಂದ ಆರಂಭಿಸಿ ” ಮಂತ್ರವಿಗ್ರಹ ಪರಾ ” ದ ವರೆಗೆ ಅರವತ್ನಾಲ್ಕು ಹೆಸರುಗಳನ್ನು ತಿಳಿಸಿದ್ದಾರೆ.

ಈ 64 ಸಂಖ್ಯೆಯನ್ನು ಕೇಳಿದಾಗ ತಂತ್ರಶಾಸ್ತ್ರಗಳಲ್ಲಿ ಹೇಳಿರುವ 64 ಯೋಗಿನಿಯರನ್ನು ಈ 64 ಮಾನಸಿಕ ಮಯೂಖಗಳೊಂದಿಗೆ ಸಮೀಕರಿಸಬಹುದೇ ಎಂಬ ಜಿಜ್ಞಾಸೆ ಮೂಡುವುದು ಸಹಜ ಮತ್ತು ಆ ಸಮೀಕರಣ ಸರಿಯಾಗಿರಲಿಕ್ಕೂ ಸಾಧ್ಯವಿದೆ.

ಕುಂಡಲಿನೀ ಯೋಗದ ಬಗ್ಗೆ ವಿವರಿಸುವ ಗ್ರಂಥಗಳು ಸಾಮಾನ್ಯವಾಗಿ ಮೂಲಾಧಾರದಿಂದ ಆರಂಭಿಸಿ ಸಹಸ್ರಾರದವರೆಗೂ ವಿವರಣೆ ನೀಡುತ್ತವೆ. ಆದರೆ ಶ್ರೀ ಭಗವತ್ಪಾದರು ಆಜ್ಞಾ ಚಕ್ರದಿಂದ ಆರಂಭಿಸುತ್ತಾರೆ ಮತ್ತು ಬ್ರಹ್ಮಾಂಡ ಪುರಾಣದ ಲಲಿತಾ ಸಹಸ್ರನಾಮವು ವಿಶುದ್ಧಿ ಚಕ್ರದಿಂದ ಆರಂಭಿಸಿ , ಅನಾಹತ, ಮಣಿಪೂರಾ, ಸ್ವಾಧಿಷ್ಠಾನ, ಮೂಲಾಧಾರ, ಆಜ್ಞಾ ಮತ್ತು ಸಹಸ್ರಾರದವರೆಗೆ ವಿವರಣೆ ನೀಡುತ್ತದೆ. ಹಾಗಾಗಿ ಈ ಚಕ್ರಗಳಲ್ಲಿ ಧ್ಯಾನಾಸಕ್ತರಾಗಬಯಸುವ ಸಾಧಕರು ಗುರುವಿನ ಮಾರ್ಗದರ್ಶನದಲ್ಲಿ ಮುಂದುವರೆಯ ಬೇಕಾದ್ದು ಅವಶ್ಯವಾಗಿದೆ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: