ಸೌಂದರ್ಯ ಲಹರಿಯ 35 ನೇ ಮಂತ್ರಕ್ಕೆ ವಿವರಣೆ Soundarya Lahari Verse#35 explained


ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಬ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಮನಸ್ತ್ವಂ ವ್ಯೋಮ ತ್ವಂ ಮರುದಸಿ ಮರುತ್ಸಾರಥಿರಸಿ
ತ್ವಮಾಪಸ್ತ್ವಂ ಭೂಮಿಸ್ತ್ವಯಿ ಪರಿಣತಾಯಾಂ ನ ಹಿ ಪರಮ್ ।
ತ್ವಮೇವ ಸ್ವಾತ್ಮಾನಂ ಪರಿಣಮಯಿತುಂ ವಿಶ್ವವಪುಷಾ
ಚಿದಾನನ್ದಾಕಾರಂ ಶಿವಯುವತಿ ಭಾವೇನ ಬಿಭೃಷೇ ॥ 35॥

ಓ ದೇವೀ, ತಾರುಣ್ಯವತಿಯಾದ ನೀನು ಶಿವನ ಅರ್ಧಾಂಗಿಯಾಗಿರುವೆ. ನೀನೇ ಮನಸ್ಸು, ನೀನೇ ಆಕಾಶ, ಅಗ್ನಿ, ಜಲ ಮತ್ತು ಪೃಥ್ವಿ ತತ್ವವಾಗಿದ್ದೀಯೆ ಇವೆಲ್ಲವು ನೀನೇ ಆಗಿ, ಬ್ರಹ್ಮಾಂಡ ವೇ ಆಗಿ ಪ್ರಕಟಗೊಂಡಿರುವೆ. ಪ್ರಜ್ಞೆ ಮತ್ತು ಆನಂದದ ಭೌತಿಕ ರೂಪವೇ ಬ್ರಹ್ಮಾಂಡವಾಗಿದೆ.
ದೇವಿಯನ್ನು ಅಷ್ಟಮೂರ್ತಿಯಾಗಿ ವರ್ಣಿಸಲು ಶಂಕರರು ಈ ಮಂತ್ರದಲ್ಲಿ ಎಲ್ಲ ರೀತಿಯಿಂದಲೂ ಸ್ತೋತ್ರಗೈದಿದ್ದಾರೆ.
ಅಷ್ಟಮೂರ್ತಿರಜಾಜೈತ್ರೀ ಎಂದು ಹೇಳುತ್ತದೆ, ಶ್ರೀ ಲಲಿತಾ ಸಹಸ್ರನಾಮ.

ಮಹಾನ್ ಶ್ರೀ ವಿದ್ಯೋಪಾಸಕರೂ ವೈದಿಕ ಮತ್ತು ಸಂಸ್ಕೃತ ವಿದ್ವಾಂಸರೂ ಆಗಿದ್ದ ಶ್ರೀ ಭಾಸ್ಜರ ಮಖಿನ್ ಅವರು ಈ ನಾಮಕ್ಕೆ ಭಾಷ್ಯವನ್ನು ಬರೆಯುತ್ತಾ ಮತ್ಯ ಪುರಾಣ, ಲಿಂಗ ಪುರಾಣ, ವಿಷ್ಣುಪುರಾಣ, ಯೋಗ ಶಾಸ್ತ್ರ, ಶಕ್ತಿ ರಹಸ್ಯ, ರುದ್ರಯಾಮಳ ಮತ್ತು ಭಗವದ್ಗೀತೆಗಳನ್ನು ಉಲ್ಲೇಖಿಸಿದ್ದಾರೆ

ಐಶ್ವರ್ಯ, ಬುದ್ಧಿಮತ್ತೆ, ಪೃಥ್ವಿ ತತ್ವ, ಪುಷ್ಟಿ ಗೌರಿ, ತೃಪ್ತಿ, ಪ್ರಕಾಶ, ಮತ್ತು ಸ್ಥಿರತೆ ಇವು ದೇವಿಯ ಅಷ್ಟರೂಪಗಳು ಎಂದು ಮತ್ಸ್ಯ ಪುರಾಣ ಹೇಳಿದರೆ , ವಿಷ್ಣು ಪುರಾಣವು, ಪಂಚಭೂತಗಳು, ಸೂರ್ಯ, ಚಂದ್ರ ಮತ್ತ್ತು ಬ್ರಾಹ್ಮಣ ಅಂದರೆ ಯಜ್ಞ ಮಾಡುವವನು, ಇವು ದೇವಿಯ ಎಂಟು ರೂಪಗಳು ಎಂದು ಹೇಳುತ್ತದೆ.

ಎಂಟು ಪ್ರಕೃತಿಗಳು ಮತ್ತು ಎಂಟು ವಿಕೃತಿಗಳು ದೇವಿಯ ರೂಪ ಎನ್ನುತ್ತದೆ ಲಿಂಗ ಪುರಾಣ.
ಶಕ್ತಿ ರಹಸ್ಯವು ಸಹಾ ಪಂಚಭೂತಗಳು, ಸೂರ್ಯ, ಚಂದ್ರ ಮತ್ತು ಸ್ಬರ್ಗಗಳು ದೇವಿಯ ಎಂಟು ರೂಪ ಎಂದರೆ, ಭಗವದ್ಗೀತೆಯು ಪಂಚಭೂತಗಳು, ಮನಸ್ಸು, ಬುದ್ಧಿ ಮತ್ತು ಅಹಂಕಾರ ಗಳು ದೇವಿಯ ಎಂಟು ಸ್ವರೂಪ ಎನ್ನುತ್ತದೆ
ರುದ್ರಯಾಮಲವು ಅನಂಗಕುಸುಮಾದಿ ಅಷ್ಟ ರೂಪಗಳನ್ನು ದೇವಿಯ ರೂಪಗಳು ಎನ್ನುತ್ತದೆ. ಅಷ್ಟೇ ಅಲ್ಲದೆ ವಶಿನ್ಯಾದಿ ಅಷ್ಟ ವಾಗ್ದೇವತೆಗಳು, ಬ್ರಾಹ್ಮ್ಯಾದಿ ಅಷ್ಟಮಾತೃಕೆಯರು ದೇವಿಯ ರೂಪವೇ ಆಗಿದ್ದಾರೆ..

ಯೋಗ ಶಾಸ್ತ್ರವು ಬ್ರಹ್ಮನ ವಿವಿಧ ಗುಣಗಳನ್ನು ದೇವಿಯ ರೂಪವೆಂದು ಹೇಳುತ್ತದೆ, ಜೀವಾತ್ಮ, ಅಂತರಾತ್ಮ, ಪರಮಾತ್ಮ, ನಿರ್ಮಲಾತ್ಮ, ಶುದ್ಧಾತ್ಮ, ಜ್ಞಾನಾತ್ಮ, ಮಹಾತ್ಮ, ಮತ್ತ್ತು ಭೂತಾತ್ಮ.

ಸಾಂಪ್ರದಾಯಿಕ ನಿಗೂಢ ಮಹತ್ವವನ್ನು ಹೇಳಬೇಕೆಂದರೆ, ದೇವಿಯು, ಆಜ್ಞಾಚಕ್ರದಲ್ಲಿ ಮನಸ್ ತತ್ವ ವಾಗಿಯೂ, ವಿಶುದ್ಧಿಯಲ್ಲಿ, ಆಕಾಶ ತತ್ವ, ಅನಾಹತದಲ್ಲಿ ವಾಯುತತ್ವ, ಸ್ವಾಧಿ ಷ್ಠಾನ ದಲ್ಲಿ ಅಗ್ನಿ ತತ್ವ, ಜಲತತ್ವವು ಮಣಿಪುರದಲ್ಲಿ ಮತ್ತು ಮೂಲಾಧಾರದಲ್ಲಿ ಪೃಥ್ವಿ ತತ್ವವೂ ಆಗಿದ್ದಾಳೆ ದೇವಿ.

ದೇವಿಯು ಪರಿವರ್ತನಾ ಸ್ಥಿತಿಯಲ್ಲಿರುವಾಗ, ಪಿಂಡಾಂಡದಲ್ಲಿ ವಿಶ್ವ ಅಥವಾ ವೈಶ್ವಾನರ,ತೈಜಸ ಮತ್ತು ಪ್ರಜ್ಞಾ ರೂಪದಲ್ಲಿದ್ದರೆ, ಬ್ರಹ್ಮಾಂಡದಲ್ಲಿ, ವಿರಾಟ್, ಹಿರಣ್ಯಗರ್ಭ ಮತ್ತು ಅಂತರ್ಯಾಮಿ ಯಾಗಿದ್ದು, ಇಚ್ಛಾ ಶಕ್ತಿಯಿಂದ ಸ್ಥೂಲರೂಪದಲ್ಲಿ ಚಿತ್ ಶಕ್ತಿಯಾಗಿ, ಆನಂದ ವೆಂಬ ಶಿವನಾಗಿ ಪ್ರಕಟಗೊಳ್ಳುತ್ತಾಳೆ.

ಬ್ರಹ್ಮಾಂಡವೇ ಪ್ರಳಯದಲ್ಲಿ ಲಯವಾಗಿ ಹೋದಾಗ , ಅದನ್ನು ತಿರೋಧಾನ ಎಂದು ಕರೆಯಲಾಗುತ್ತದೆ. ಆಗ ಉಳಿದಿರುವುದು ಬ್ರಹ್ಮನ್ ಮಾತ್ರವೇ ಆಗಿದೆ. ಆ ಬ್ರಹ್ಮನ್ ಶಿವ ಶಕ್ತಿಯಲ್ಲದೆ ಬೇರೇನೂ ಅಲ್ಲಾ.

ಶಂಕರರು ಸೌಂದರ್ಯ ಲಹರಿಯ ಮೊದಲ ಮಂತ್ರದಲ್ಲಿ ಹೇಳಿದಂತೆ ಶಿವನು ಯಾವುದೇ ಕ್ರಿಯೆಯಿಲ್ಲದೆ ಇದ್ದರೂ ಶಕ್ತಿಯ ಒಡಗೂಡಿ ಬ್ರಹ್ಮಾಂಡದ ಸೃಷ್ಟಿ ಯಾಗುತ್ತದೆ. ಶಕ್ತಿಯ ಪ್ರಕಟರೂಪವೇ ಬ್ರಹ್ಮಾಂಡವಾಗಿದೆ
ನಾಮ ರೂಪಗಳು ಅಸ್ಥಿರವಾದವುಗಳು ಆದರೆ ಆ ಪರವಸ್ತು ಶಾಶ್ವತವಾದದ್ದಾಗಿದೆ.

ದೇವಿಯು ಆರು ದೇವತೆಗಳಾಗಿ, ತನ್ನ ಆರು ಸ್ಥಾನಗಳಲ್ಲಿ ಶೋಭಾಯಮಾನವಾಗಿ ವಿರಾಜಿಸುತ್ತಾಳೆ. ಈ ಆರು ಸ್ಥಾನಗಳು ಆರು ತತ್ವಗಳು ಮತ್ತು ಆರು ಚಕ್ರಗಳಾಗಿವೆ. ಈ ಎಲ್ಲವುಗಳ ಸಂಯೋಜನೆಯಿಂದ ಬ್ರಹ್ಮಾಂಡ ದ ಸೃಷ್ಟಿ ಆಗಿದೆ.
ಸಹಸ್ರಾರದಲ್ಲಿ ಪರಾಶಕ್ತಿಯಿದ್ದು ಅದು ಸತ್ಯ ಲೋಕವಾಗಿದ್ದು ಇಲ್ಲಿ ಯಾವ ತತ್ವಗಳೂ ಇಲ್ಲದ ಬ್ರಹ್ಮಾನಂದವು ಮಾತ್ರವೇ ಇರುವ ಲೋಕವಾಗದೆ.
ಆಜ್ಞಾ ಚಕ್ರದಲ್ಲಿ ಶಿವನೇ ಇದ್ದು ಅದು ತಪಃ ಲೋಕವಾಗಿ ಅಲ್ಲಿ ಮನಸ್ ತತ್ವ ಇದೆ
ವಿಶುದ್ಧಿಯಲ್ಲಿ ಸದಾಶಿವನಿದ್ದು ಅದು ಜನಃ ಲೋಕವಾಗಿ ಅಲ್ಲಿ ಆಕಾಶ ತತ್ವ ಇದೆ
ಅನಾಹತದಲ್ಲಿ ಮಹೇಶ್ವರನಿದ್ದು ಅದು ಮಹಃ ಲೋಕವಾಗಿ ಅಲ್ಲಿ ವಾಯು ತತ್ವ ಇದೆ
ಸ್ವಾಧಿಷ್ಠಾನದಲ್ಲಿ ರುದ್ರನಿದ್ದು, ಸುವಃ ಲೋಕವಾಗಿ ಅಗ್ನಿ ತತ್ವ ಇದೆ
ಮಣಿಪೂರದಲ್ಲಿ ವಿಷ್ಣು ಇದ್ದು ಭುವಃ ಲೋಕವಾಗಿ ಅಲ್ಲಿ ಜಲ ತತ್ವ ಇದೆ.
ಮೂಲಾಧಾರದಲ್ಲಿ ಬ್ರಹ್ಮನಿದ್ದು ( ಬ್ರಹ್ಮನ್ ಅಲ್ಲಾ) ಭೂಲೋಕವಾಗಿ ಅಲ್ಲಿ ಪೃಥ್ವಿ ತತ್ವ ಇದೆ.

ಚಕ್ರಗಳನ್ನು ವಿವರಿಸುವಾಗ ಸ್ವಾಧಿಷ್ಠಾನ ಚಕ್ರವನ್ನು ಮೊದಲು ಹೇಳಿ ನಂತರ ಮಣಿಪುರ ಚಕ್ರವನ್ನು ಹೇಳಿರುವುದರ ಬಗ್ಗೆ ಅಚ್ಚರಿ ಪಡುವ ಅವಶ್ಯಕತೆ ಇಲ್ಲಾ.

ಮನಸ್ ತತ್ವವು ಸೂಕ್ಶ್ಮಾತಿ ಸೂಕ್ಷ್ನ ತತ್ವವಾಗಿದ್ದು ಪೃಥ್ವಿಯು ಅತಿಶಯವಾದ ಸ್ಥೂಲ ರೂಪವನ್ನು ಹೊಂದಿದೆ. ಸೂಕ್ಶ್ಮಾತಿ ಸೂಕ್ಷ್ನ ದಿಂದ ಅತಿಶಯವಾದ ಸ್ಥೂಲ ರೂಪದವರೆಗೆ ವಿವರಿಸುವಾಗ ಅಗ್ನಿಯು ಜಲಕ್ಕಿಂತ ಸೂಕ್ಷವಾದ ತತ್ವವಾದ ಕಾರಣ ಜಲತತ್ವವಾದ ಮಣಿಪೂರವನ್ನು ಮೊದಲು ಹೇಳಿ ಅಗ್ನಿ ತತ್ವವಾದ ಸ್ವಾಧಿಷ್ಠಾನವನ್ನು ನಂತರ ಹೇಳಲಾಗಿದೆ.

ಶಂಕರರು ಈ ಮಂತ್ರದಲ್ಲಿ ಶಕ್ತಿಯ ನಿರಾಕಾರ ರೂಪವನ್ನು ಧ್ಯಾನಿಸುವದನ್ನು ವಿವರಿಸಿದ್ದಾರೆ.

ಈ ಮಂತ್ರದಲ್ಲಿ ಧ್ಯಾನಾಸಕ್ತರಾದರೆ, ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: