ಸೌಂದರ್ಯ ಲಹರೀ 9 ನೇ ಮಂತ್ರಕ್ಕೆ ವಿವರಣೆ Soundarya Lahari Verse#9 explained


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಮಹೀಮ್ ಮೂಲಧಾರೇ ಕಮಪಿ ಮಣಿಪೂರೇ ಹುತವಹಂ
ಸ್ಥಿತಂ ಸ್ವಾಧಿಷ್ಠಾನೇ ಹೃದಿ ಮಾರುತಮಾಕಾಶಮುಪರಿ
ಮನೋsಪಿ ಭ್ರೂಮಧ್ಯೇ ಸಕಲಮಪಿ ಭಿತ್ತ್ವಾ ಕುಲಪಥಮ್
ಸಹಸ್ರಾರೇ ಪದ್ಮೇ ಸಹ ರಹಸಿ ಪತ್ಯಾ ವಿಹರಸೇ

ಇದು ಸೌಂದರ್ಯಲಹರಿಯ ಒಂಭತ್ತನೇ ಶ್ಲೋಕ. ಸೌಂದರ್ಯಲಹರಿಯ ಎಲ್ಲಾ ಶ್ಲೋಕಗಳೂ ಮಂತ್ರಗಳೇ ಆಗಿವೆ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತಿದ್ದೇನೆ.
ಶಕ್ತಿಯು ಮೂಲಾಧಾರದಿಂದ ಕುಲಪಥ ಅಂದರೆ ಸುಷುಮ್ನಾ ನಾಡಿಯ ಮೂಲಕ ಚಲಿಸಿ ಸಹಸ್ರಾರ ಪದ್ಮದಲ್ಲಿ ತನ್ನ ಪತಿಯೊಂದಿಗೆ ರಹಸ್ಯವಾಗಿ ವಿಹರಿಸುತ್ತಾಳೆ ಎಂಬುದು ಈ ಮಂತ್ರದ ತಾತ್ಪರ್ಯ.

ಕಮಪಿ ಎನ್ನುವುದನ್ನು ಬಿಡಿಸಿ ಕಂ ಅಪಿ ಅಂದರೆ ಜಲವೂ ಸಹಾ ಮಣಿಪೂರ ಚಕ್ರದಲ್ಲಿರುವ ತತ್ವ ಎಂದು ಹೇಳಲಾಗಿದೆ. ತಂತ್ರ ಶಾಸ್ತ್ರಗಳು ಮಣಿಪೂರವನ್ನು ಅಗ್ನಿ ತತ್ವ ಎಂದು ಗುರುತಿಸಲಾಗಿದ್ದು ಭಗವಾನ್ ಶಂಕರರು ಅಲ್ಲಿ ಜಲ ತತ್ವವನ್ನು ಗುರುತಿಸುವುದರ ಬಗ್ಗೆ ಏನನ್ನೂ ಹೇಳಲಾಗದು ಮತ್ತು ಹೇಳಬಾರದು. ಸಮಯ ತಂತ್ರದ ಪ್ರಕಾರ ಇದು ಸರಿಯಾಗಿಯೇ ಇದೆ. ಲಂ ಹಂ ಯಂ ರಂ ವಂ ಬೀಜಾಕ್ಷರಗಳು ಕ್ರಮವಾಗಿ ಪೃಥ್ವಿ,ಆಕಾಶ, ವಾಯು, ಅಗ್ನಿ ಮತ್ತು ಜಲದ ಬೀಜಮಂತ್ರಗಳಾಗಿರುವುದು ನಮಗೆ ತಿಳಿದಿದೆ
ಈ ಐದು ತತ್ವಗಳ ಪೈಕಿ ಅತ್ಯಂತ ಹೆಚ್ಚು ಸ್ಥೂಲ ರೂಪವಾದ್ದು ಭೂ ತತ್ವ ವಾದರೆ, ಅತ್ಯಂತ ಹೆಚ್ಚು ಸೂಕ್ಷ್ಮ ರೂಪವಾದದ್ದು ಆಕಾಶ ತತ್ವ. ಇವೆರಡರ ಮಧ್ಯೆ ಭೂತತ್ವಕ್ಕಿಂತ ಕಡಿಮೆ ಸ್ಥೂಲ ರೂಪವುಳ್ಳ ಜಲ ತತ್ತ್ವ ಅದಕ್ಕಿಂತಲೂ ಕಡಿಮೆ ಸ್ಥೂಲ ರೂಪವುಳ್ಳ ಅಗ್ನಿ, ಅದಕ್ಕಿಂತಲೂ ಕಡಿಮೆ ಸ್ಥೂಲ ವಾದದ್ದು ವಾಯು, ನಂತರ ಸೂಕ್ಶ್ಮವೇ ಆಗಿರುವ ಆಕಾಶ. ಹಾಗೆಯೇ ತೈತ್ತರೀಯ ಉಪನಿಷದ್ ವಾಕ್ಯ

ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶಃ ಸಮ್ಭೂತಃ । ಆಕಾಶಾದ್ವಾಯುಃ ।
ವಾಯೋರಗ್ನಿಃ । ಅಗ್ನೇರಾಪಃ । ಅದ್ಭ್ಯಃ ಪೃಥಿವೀ ।
ಪೃಥಿವ್ಯಾ ಓಷಧಯಃ । ಓಷಧೀಭ್ಯೋನ್ನಮ್ । ಅನ್ನಾತ್ಪುರುಷಃ ।

ಆತ್ಮನಿಂದ ಅಂದರೆ ಬ್ರಹ್ಮನ್ ನಿಂದ ಆಕಾಶವು, ಆಕಾಶದಿಂದ ವಾಯುವೂ , ವಾಯುವಿನಿಂದ ಅಗ್ನಿಯೂ , ಅಗ್ನಿಯಿಂದ ಜಲವೂ ಮತ್ತು ಜಲದಿಂದ ಪೃಥಿವಿಯೂ ಉತ್ಪತ್ತಿಯಾಗಿರುವುದಾಗಿ ಹೇಳಿದೆ.
ಸ್ಥಿತಮ್ ಸ್ವಾಧಿಷ್ಠಾನೇ ಎಂದಾಗ ಶಕ್ತಿಯ ಸ್ಥಾನ ಸ್ವಾಧಿಷ್ಠಾನ ಎಂದು ಹೇಳಿದಂತಾಯಿತು. ಅಷ್ಟೇ ಅಲ್ಲಾ ಸ್ವ ಅಧಿಷ್ಠಾನ ಎಂದು ಪದ ವಿಭಾಗ ಮಾಡಿದಾಗಲೂ ಅದೇ ಅರ್ಥವನ್ನು ಕೊಡುತ್ತದೆ. ಹಾಗಾದರೆ ಕುಂಡಲಿನಿ ಶಕ್ತಿಯ ಸ್ಥಾನ ಮೂಲಧಾರವೇ? ಅಥವಾ ಸ್ವಾಧಿಷ್ಠಾನವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೂಲಾಧಾರದಲ್ಲಿ ಕುಂಡಲಿನೀ ಶಕ್ತಿಯು ಸ್ವಯಂಭು ಲಿಂಗಕ್ಕೆ ಮೂರುವರೆ ಸುತ್ತು ಸುತ್ತಿಕೊಂಡು ಮಲಗಿರುವುದು ಸತ್ಯ ಆದರೆ ಅದು ಎಚ್ಚೆತ್ತಾಗ ಅದು ಸ್ವಾಧಿಷ್ಠಾನದಲ್ಲಿ ನೆಲೆಗೊಳ್ಳುತ್ತದೆ. ಹಾಗಾಗಿ “ಸ್ಥಿತಮ್ ಸ್ವಾಧಿಷ್ಠಾನೇ” ಎಂದಿದೆ ಈ ಮಂತ್ರ . ಯಾವುದೇ ಸಾಧನೆ ಮಾಡದೆ ಇರುವ ಎಲ್ಲಾ ಸಾಮಾನ್ಯ ಮಾನವರಲ್ಲೂ ಮೂಲಾಧಾರದಲ್ಲಿ ಮಲಗಿರುವ ಕುಂಡಲಿನಿ ಶಕ್ತಿ ಎಚ್ಚತ್ತು ಕೊಂಡಿರಬೇಕು ಇಲ್ಲವಾದರೆ ಮನುಷ್ಯನಿಂದ ಯಾವುದೇ ಕ್ರಿಯೆ ಸಾಧ್ಯವಿಲ್ಲಾ ಎಂಬುದನ್ನು ಗಮನಿಸ ಬೇಕು. ಇಲ್ಲಿಂದ ಕುಂಡಲಿನಿಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧನೆ ಬೇಕು. ಆ ಸಾಧನೆಯಿಂದ ಅದು ಸ್ವಾಧಿಷ್ಠಾನದ ರೂಪದಲ್ಲಿರುವ ಬ್ರಹ್ಮಗ್ರಂಥಿಯನ್ನು ಭೇದಿಸಿ ಮಣಿಪುರಕ್ಕೆ ತಲುಪಲು ಸಾಧ್ಯ.

“ಮೂಲಾಧಾರೈಕ ನಿಲಯಾ ಬ್ರಹ್ಮಗ್ರಂಥಿ ವಿಭೇದೀನೀ ಮಣಿಪೂರಾಂ;ತರುದಿತಾ”ಎನ್ನುತ್ತದೆ ಲಲಿತಾ ಸಹಸ್ರನಾಮ ಸ್ತ್ರೋತ್ರ.

ಕುಂಡಲಿನಿಯು ಕುಲಪಥದಲ್ಲಿ ಅಂದರೆ ಸುಷುಮ್ನಾ ನಾಡಿಯಲ್ಲಿ ಸಂಚರಿಸಿ ಇನ್ನುಳಿದ ಶಕ್ತಿ ಕೇಂದ್ರಗಳನ್ನು ತಲುಪುವುದರ ಬಗ್ಗೆ ತಿಳಿಯುವ ಮೊದಲು, ಈ ಭೂಮಿಯ ಮೇಲೆ ನಮಗೆ ಕೇಳುವ ಎಲ್ಲಾ ಶಬ್ಧಗಳೂ, ನಾವು ಮನುಷ್ಯರು ಮಾತಾಡುವಾಗ, ಮಂತ್ರ ಹೇಳುವಾಗ, ಸ್ತೋತ್ರಮಾಡುವಾಗ ಹೊರಡುವ ಶಬ್ಧಗಳೂ ಸಹಾ ಆಕಾಶ ತತ್ವವೇ ಆಗಿದೆ. ಈ ಶಬ್ಧಗಳು ವೈಖರೀ ರೂಪವನ್ನು ಪಡೆದಾಗ ಮಾತ್ರವೇ ಆ ಶಬ್ಧ ಕೇಳಿಸುತ್ತದೆ, ಈ ವೈಖರೀ ರೂಪವನ್ನು ಶಬ್ದವು ಪಡೆಯುವ ಮೊದಲು ಪರಾ, ಪಶ್ಯಂತಿ ಮತ್ತು ವೈಖರೀ ರೂಪಗಳನ್ನು ಹೊಂದಿರುತ್ತದೆ. “ಪರಾ ಪ್ರತ್ಯಕ್ಚಿತೀ ರೂಪ ಪಶ್ಯಂತೀ ಪರದೇವತಾ ಮಧ್ಯಮಾ ವೈಖರೀ ರೂಪ ಭಕ್ತ ಮಾನಸ ಹಂಸಿಕಾ” ಎನ್ನುತ್ತದೆ ಶ್ರೀ ಲಲಿತಾ ಸಹಸ್ರನಾಮ. ಶಬ್ದವು ಯಾವುದೇ ರೂಪದಲ್ಲಿದ್ದರೂ ವಿದ್ಯುತ್ಕಾಂತ ಕಿರಣಗಳನ್ನು ಹೊರಡಿಸುತ್ತದೆ. ಶಬ್ದವು ಯಾವುದೇ ಇರಲಿ ಅವುಗಳಲ್ಲಿ ಅಕ್ಷರ ಗಳು ಅಡಗಿರುತ್ತವೆ. ಪ್ರಾಣಿಗಳು ಮಾಡುವ ಶಬ್ದದಲ್ಲಿ ಸಹಾ ಅಕ್ಷರ ರೂಪ ಇರುವುದನ್ನು ನಾವು ಗಮನಿಸಬಹುದು. ಅಕ್ಷರಗಳು ಎಂದರೆ ಅವಿನಾಶವಾದವು, ನಾಶವಾಗದಂತಹವು. ಈ ಶಬ್ದ ತರಂಗದ ಕಿರಣಗಳು ಅತ್ಯಂತ ಹೆಚ್ಚು ತರಂಗಾಂತರಗಳಲ್ಲಿ ಪಯಣಿಸಿ ವಾಯುಮಂಡಲವನ್ನು ( Stratosphere) ತಲುಪುತ್ತದೆ. ಈ ವಾಯು ಮಂಡಲವು ಭೂಮಿಯ ಮೇಲ್ಮೈಯಿಂದ ಹತ್ತರಿಂದ ಹದಿನೆಂಟು ಕಿಲೋಮೀಟರ್ ಗಿಂತ ಮೇಲೆ ಇರುವ ಮಂಡಲ ಎಂದು ಹೇಳಲಾಗಿದೆ. ಒಮ್ಮೆ ಈ ಶಬ್ಧ ತರಂಗಗಳು ವಾಯುಮಂಡಲ ಸೇರಿದ ನಂತರ ಈ ತರಂಗಾಂತರವು ಮತ್ತಷ್ಟು ಹೆಚ್ಚ್ಚಾಗಿ ಅದು ಸಾಂದ್ರೀಕರಣಗೊಂಡು ತತ್ವಗಳಾಗಿ ಪರಿವರ್ತಿತವಾಗುತ್ತವೆ. ಈ ತತ್ವಗಳು ಶಕ್ತಿಯ ಬಾಹ್ಯಾಕಾಶದ ವಿಕಸನ ಅಷ್ಟೆ. ಈ ತತ್ವಗಳು ಅದಲು ಬದಲಾಗಿ ಮತ್ತು ಒಂದಾಗಿ ಸೇರಿ ಭೌತಿಕ ವಸ್ತು ಆಗುತ್ತದೆ. ಈ ತತ್ವಗಳು ಎಲ್ಲಾ ಭೌತಿಕ ವಸ್ತುಗಳನ್ನು ಸೃಷ್ಟಿಸುವ ವಸ್ತುಗಳಾಗಿವೆ. ಈ ತತ್ವಗಳು ದೇಹದಲ್ಲಿ ಸೂಕ್ಷ್ಮ ರೂಪದಲ್ಲಿದ್ದು ಬ್ರಹ್ಮಾಂಡದಲ್ಲಿ ಸಮಷ್ಟಿ ರೂಪದಲ್ಲಿರುತ್ತವೆ.
ಶಬ್ಧದ ತರಂಗಳು ಭೌತಿಕವಸ್ತುಗಳಾಗಿ ಪರಿವರ್ತನೆ ಯಾಗುವುದನ್ನ್ನು ತಿಳಿದುಕೊಂಡಾಗ. ಶಬ್ಧದಿಂದ ಬ್ರಹ್ಮಾಂಡವು ಸೃಷ್ಟಿಯಾಗಿರುವುದು ಯಾವುದೇ ಅನುಮಾನವಿಲ್ಲಾ.
ನಾವು ಮಾತಾಡುವಾಗ ಹೊರಡುವ ಶಬ್ಧತರಂಗಗಳಿಗೆ ಮಹಾನ್ ಶಕ್ತಿಯಿರುವುದರಿಂದ ಒಳ್ಳೆಯ ಮಾತುಗಳನ್ನು ಆಡಬೇಕಾದ ಅವಶ್ಯಕತೆಯನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಈ ಮಾತುಗಳು ವೈಖರೀ ರೂಪದಲ್ಲಿಯೇ ಇರಬೇಕೆಂದೇನೂ ಇಲ್ಲಾ, ಪರಾ, ಪಶ್ಯಂತಿ ಅಥವಾ ಮದ್ಯಮಾ ರೂಪದಲ್ಲಿದ್ದರೂ ಅವು ಸಹಾ ತರಂಗಗಳನ್ನು ಹೊರಡಿಸಲು ಶಕ್ತವಾಗಿರುವುದರಿಂದ ನಮ್ಮ ಯೋಚನೆಗಳೂ ಸಹಾ ಒಳ್ಳೆಯ ಯೋಚನೆಗಳಾಗಿರಬೇಕು ಎಂಬುದನ್ನು ನಾವು ಅರ್ಥ ಮಾಡಿಕೊಂಡರೆ ಒಂದು ಸಕಾರಾತ್ಮಕ ಮನಸ್ಸನ್ನು ನಾವು ಹೊಂದುವುದೇ ಅಲ್ಲದೆ ಆ ಸಕಾರಾತ್ಮಕ ತರಂಗಗಳು ವಿಶ್ವಕ್ಕೇ ಉಪಯೋಗವಾಗುತ್ತವೆ.
ನಾವು ಆಗಾಗ್ಗೆ ಹೇಳುತ್ತೇವೆ, ಎಲ್ಲಿಯೋ ದೂರದ ಹಿಮಾಲಯದಲ್ಲ್ಲಿ ಕುಳಿತು ಧ್ಯಾನಾಸಕ್ತರಾಗಿರುವ ಸಾಧಕರಿಂದ ನಮ್ಮ ಪ್ರಪಂಚ ಇಷ್ಟು ಮಟ್ಟಿಗಾದರೂ ಇದೆ ಎಂಬುದಾಗಿ. ಇದು ಕಲ್ಪನೆಯಲ್ಲಾ, ಸತ್ಯ. ಅಂತಹವರಿಂದ ಹೊರಡುವ ಸಕಾರಾತ್ಮಕ ತರಂಗಗಳು ನಮ್ಮನ್ನು ರಕ್ಷಿಸುತ್ತಿವೆ ಎಂಬುದು ಸುಳ್ಳಲ್ಲಾ.
ಸೌಂದರ್ಯಲಹರಿಯ ಈ ಮಂತ್ರವು ಈ ತತ್ವಗಳ ಸ್ಥಾನವನ್ನು ಸಮಯ ತಂತ್ರದ ಪ್ರಕಾರ ಗುರುತಿಸಿದೆ. ಪೃಥ್ವೀ ತತ್ವವು ಮೂಲಾಧಾರದಲ್ಲೂ ಆಕಾಶ ತತ್ವವು ವಿಶುದ್ಧಿ ಚಕ್ರದಲ್ಲೂ, ವಾಯು ತತ್ವವು ಅನಾಹತದಲ್ಲೂ, ಜಲ ತತ್ವವು ಮಣಿಪೂರದಲ್ಲೂ, ಅಗ್ನಿ ತತ್ವವು ಸ್ವಾಧಿಷ್ಠಾನದಲ್ಲೂ ಇರುವುದಾಗಿ ಹೇಳಿದೆ.
ಈ ಮಂತ್ರದಲ್ಲಿ ವಿಶುದ್ಧಿ ಚಕ್ರದ ಬಗ್ಗೆ ಹೇಳಿಲ್ಲಾ.
ಆಕಾಶವು ಶಬ್ಧವನ್ನು ಸೂಚಿಸಿ ಕಿವಿಗಳು ಆಕಾಶ ತತ್ವ ವಾಗುತ್ತದೆ. ವಾಯುವು ಸ್ಪರ್ಶವನ್ನು ಸೂಚಿಸಿ -ಚರ್ಮವು ವಾಯು ತತ್ವವಾಗಿದೆ. ಅಗ್ನಿಯು ರೂಪವನ್ನು ಸೂಚಿಸಿ ನೇತ್ರಗಳು ಅಗ್ನಿತತ್ವವಾಗುತ್ತದೆ
ಜಲವು ರಸವನ್ನು ಸೂಚಿಸಿ- ನಾಲಿಗೆಯು ಜಲ ತತ್ವವಾಗುತ್ತದೆ, ಗಂಧ – ಪೃಥ್ವಿಯು ಗಂಧವನ್ನು ಸೂಚಿಸಿ ಮೂಗು ಪೃಥ್ವೀ ತತ್ವವಾಗುತ್ತದೆ
ಹೀಗೆ ಪಂಚ ಜ್ಞಾನೇಂದ್ರಿಯಗಳು ಪಂಚ ಭೂತಗಳನ್ನು ಸೂಚಿಸುತ್ತವೆ.
ಈ ಪಂಚ ಭೂತಗಳ ಬೀಜ ಮಂತ್ರಗಳನ್ನು ಈ ಹಿಂದೆ ಹೇಳಲಾಗಿದೆ.
ಈ ಮಂತ್ರ ಸಾಧನೆಯಿಂದ ಪಂಚಭೂತಗಳ ಬಗ್ಗೆ ಪಾಂಡಿತ್ಯವನ್ನು ಪಡೆಯಬಹುದು ಹಾಗೂ ಪರದೇಶಗಳಲ್ಲಿರುವವರು ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತದೆ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: