ಭಾನುವಾರ ರಾತ್ರಿ 9 ಘಂಟೆಗೆ ದೀಪ ಹಚ್ಚಿ, ಮಹಾಮಾರಿ ತೊಲಗಲು ಪ್ರಾರ್ಥನೆ ಮಾಡೋಣ.


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಮನೆಯ ಮುಂದೆ ಬಾಗಿಲ ಎರಡೂ ಕಡೆ ಸಂಜೆಯ ಹೊತ್ತಿನಲ್ಲಿ ದೀಪ ಹೊತ್ತಿಸುವ ಪದ್ಧತಿ ನೂರಾರು ವರ್ಷಗಳಿಂದ ಇದೆ. ಮನೆಯ ಮುಂದೆ ಬೃಂದಾವನದಲ್ಲಿ ತುಳಸಿ ಗಿಡ ಇರುತ್ತಿದ್ದು ಅದರ ಮುಂದೆಯೂ ದೀಪ ಬೆಳಗುವ ಪದ್ದತಿಯು ನನ್ನ ವಯಸ್ಸಿನ ಹಿರಿಯರಿಗೆ ಖಂಡಿತಾ ನೆನಪಿರುತ್ತದೆ. ಹೊಸ ಪೀಳಿಗೆಯ ಯುವಕರಿಗೆ ಬೃಂದಾವನ ಅಂದರೆ ಅದು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ದಲ್ಲಿ ಇರುವಂತಹದ್ದು ಎಂದು ಮಾತ್ರ ತಿಳಿದಿದೆ ಅಂದರೆ ತಪ್ಪಾಗಲಾರದು. ಪ್ರತಿದಿನ ಮನೆಯ ಮುಂದೆ ದೀಪ ಹಚ್ಚುವ ಪದ್ಧತಿ ನಿಧಾನವಾಗಿ ಕಣ್ಮರೆ ಯಾಗುತ್ತಿದ್ದರೂ, ಕಾರ್ತಿಕ ಮಾಸದಲ್ಲಿ, ನವರಾತ್ರ್ರಿಯ ದಿನಗಳಲ್ಲಿ, ಹಬ್ಬ ಹರಿದಿನಗಳಲ್ಲಿ ದೀಪ ಹಚ್ಚುವ ಪದ್ಧತಿ ಇನ್ನೂ ಉಳಿದುಕೊಂಡಿದೆ..

ನಮ್ಮ ಸನ್ಮಾನ್ಯ ಪ್ರಧಾನ ಮಂತ್ರಿಯವರು ಈ ಭಾನುವಾರ ರಾತ್ರಿ ೯ ಘಂಟೆಗೆ ಮನೆಯೊಳಗಣ ಎಲ್ಲಾ ವಿದ್ಯುದ್ದೀಪ ಗಳನ್ನು ಆರಿಸಿ ಮನೆಯ ಮುಂದೆ ದೀಪ ಹಚ್ಚುವಂತೆ ರಾಷ್ಟ್ರಕ್ಕೆ ಕರೆ ನೀಡಿದ ಕಾರಣ ನಾನು ಈ ಬಗ್ಗೆ ಹಲವಾರು ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಮಾತಾಡಬೇಕಾದ / ಬರೆಯಬೇಕಾದ ಅವಕಾಶ ಒದಗಿಬಂತು.

ದೀಪ ಬೆಳಗುವುದು ಮೂಢನಂಬಿಕೆಯಲ್ಲ ಅದರ ಹಿಂದೆ ವೈಜ್ಞಾನಿಕ ಸತ್ಯ ಇದೆ ಎನ್ನುವುದು ನಮಗೆ ಅರಿವಾಗಬೇಕಿದೆ. ಉರಿಯುವ ದೀಪ ಶಾಂತಿ ಮತ್ತು ಬೆಳಕನ್ನು ಮಾನವನಿಗೆ ನೀಡುತ್ತದೆ.

ಭೋದೀಪ ಬ್ರಹ್ಮ ರೂಪತ್ಸ್ವಮ್ ಜ್ಯೋತಿಷಾಮ್ ಪ್ರಭುರವ್ಯಹ
ಆರೋಗ್ಯಮ್ ದೇಹಿ ಪುತ್ರಂಶ್ಚಮತಃ ಶಾಂತಿ ಪ್ರಯಚ್ಛಮೇ

ಇದು ದೀಪವನ್ನು ಪ್ರಾರ್ಥಿಸುವ ಶ್ಲೋಕಗಳಲ್ಲಿ ಒಂದು. ದೀಪವನ್ನು ಬ್ರಹ್ಮನ್ ಎಂದು ಸಂಭೋದಿಸಲಾಗಿದೆ. ಅದು ಪರಿಪೂರ್ಣ ಸತ್ಯ ಮತ್ತು ಪ್ರಕಾಶಮಾನವಾದದ್ದಾಗಿದೆ.
ದೀಪ ಎನ್ನುವುದು “ತೇಜ” ಅಂದರೆ ಅಗ್ನಿ ತತ್ವದ ಸ್ಥೂಲ ರೂಪ ವಾಗಿದೆ. ಅಗ್ನಿಯು ಪಂಚಭೂತಗಳಲ್ಲಿ ಒಂದು ಎಂದು ನಮಗೆಲ್ಲಾ ತಿಳಿದಿದೆ
ಶ್ರೀ ದುರ್ಗಾ ಸಪ್ತಶತಿಯ ಪಾರಾಯಣ ಮಾಡುವಾಗ, ಶ್ರೀ ಚಕ್ರ ಪೂಜೆ ಮಾಡುವಾಗ ಎರಡು ದೀಪಗಳನ್ನು ಹಚ್ಚುವುದು ಕಡ್ಡಾಯವಾಗಿದ್ದು, ಅದರಲ್ಲಿ ಒಂದು ತಿಲ ತೈಲದ ದೀಪ ಮತ್ತೊಂದು ತುಪ್ಪದ ದೀಪ ಆಗಿರುತ್ತದೆ. ಈ ದೀಪಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಣ್ಣೆಯ ದೀಪವು ತುಪ್ಪದ ದೀಪಕ್ಕಿಂತ ಹೆಚ್ಚು ಹಳದಿ ಬಣ್ಣದಿಂದ ಉರಿಯುವುದನ್ನು ಮತ್ತು ತುಪ್ಪದ ದೀಪವು ಎಣ್ಣೆಯ ದೀಪಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಉರಿಯುವುದನ್ನು ಗಮನಿಸ ಬಹುದು. ಹಾಗೆಯೇ ಎಣ್ಣೆಯ ದೀಪವು ತುಪ್ಪದ ದೀಪಕ್ಕಿಂತ ಹೆಚ್ಚು ಶಾಖವನ್ನು ಕೊಡುವುದನ್ನು ಕೂಡಾ ಗಮನಿಸಬಹುದಾಗಿದೆ ದೀಪಗಳು ಈ ರೀತಿಯಾಗಿ ಅಗ್ನಿಯ ಸ್ಥೂಲ ರೂಪವಾಗಿ “ತೇಜ” ವನ್ನು ಪಸರಿಸುತ್ತವೆ
ವಿದ್ಯುಚ್ಛಕ್ತಿಯ ದೀಪಗಳು ಬೆಳಕನ್ನು ಮತ್ತು ಕೊಂಚಮಟ್ಟಿಗೆ ಶಾಖವನ್ನು ನೀಡಿದರೂ ಅವು ಅಗ್ನಿಯ ಸ್ಥೂಲ ರೂಪವಾದ ‘ತೇಜ”ವನ್ನು ನೀಡಲಾರವು.
ಈ “ತೇಜ” ಎನ್ನುವ ಪರಿಪೂರ್ಣ ಅಗ್ನಿ ತತ್ವ ತನ್ನದೇ ಆದ ತರಂಗಾಂತರಗಳನ್ನು ಹೊಂದಿದೆ, ಶಕ್ತಿಯ ಪ್ರಭಾವಲಯವನ್ನು ಹೊಂದಿದೆ, ಹಾಗೂ ಅದರಲ್ಲಿ ಚೈತನ್ಯವು ಸಹಾ ಇದೆ. ಚೈತನ್ಯ ಎಂದರೆ ಚೇತನ ಹಾಗು ಸಂವೇದನೆಯನ್ನು ಒಳಗೊಂಡಿದೆ ಎಂದು ಅರ್ಥ. ಈ ಎಲ್ಲವನ್ನು ಒಳಗೊಂಡ ದೀಪ ಶಕ್ತಿಯ ಕಣ ಗಳನ್ನು ಹೊರಚೆಲ್ಲುತ್ತದೆ . ಇದನ್ನು ಚಿತ್ರದ ಮೂಲಕ ತೋರಿಸಿದ್ದು, ಚಿತ್ರವನ್ನು ನನ್ನ ಬ್ಲಾಗ್ ನಲ್ಲಿ ನೋಡಬಹುದಾಗಿದೆ.
ಈ ಚಿತ್ರದಲ್ಲಿ ಕಾಣುವ ಹಳದಿ ಬಣ್ಣದ ವೃತ್ತವು ದೀಪದ ಚೈತನ್ಯವನ್ನು ತೋರಿದರೆ, ಕೆಂಪು ಗೆರೆಗಳು ಕಾಂತಿಯುತವಾದ ಶಕ್ತಿಯು ಹೊರಹೊಮ್ಮುವುದನ್ನು ತೋರುತ್ತದೆ. ಉರಿಯುತ್ತಿರುವ ದೀಪವು ಪರಿಪೂರ್ಣವಾದ ಅಗ್ನಿ ತತ್ವದ ತರಂಗಾತರಗಳನ್ನು ಹೊರಚೆಲ್ಲುತ್ತದೆ. ಇಲ್ಲಿ ಕಾನುಇವ ಚಿಕ್ಕ ಚಿಕ್ಕ ಕೆಂಪು ಕಣಗಳು ಅಗ್ನಿ ಶಕ್ತಿಯ ಕಣಗಳೇ ಆಗಿವೆ.
ನಿಂಬೆಹಣ್ಣು ಸಿಪ್ಪೆಯಿಂದ ಸುಮಂಗಲಿಯರು ದೇವಸ್ಥಾನಗಳ ಮುಂದೆ ಅದರಲ್ಲೂ ದುರ್ಗಾ ದೇವಿಯ ದೇವಸ್ಥಾನಗಳಲ್ಲಿ ದೀಪ ಹಚ್ಚುವುದನ್ನು ನಾವು ನೋಡುತ್ತಿದ್ದೇವೆ. ಈ ದೀಪಗಳು ಅಗ್ನಿಯ ತೇಜದ ಅತ್ಯಂತ ಹೆಚ್ಚಿನ ತರಂಗಾತರಗಳನ್ನು ಸೃಷ್ಟಿ ಮಾಡುತ್ತಿದ್ದು, ಈ ತರಂಗಾಂತರಗಳು ನಕಾರಾತ್ಮಕ ಚಿಂತನೆಗಳನ್ನು ದೂರಮಾಡಿ ವ್ಯಕ್ತಿಯಲ್ಲಿ ಆತ್ಮಸ್ಥೈರ್ಯ ವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ. ಈ ತರಂಗಾಂತರಗಳ ಇರುವಿಕೆಯನ್ನು ಮೂಢನಂಬಿಕೆ ಎಂಬ ಹಣೆ ಪಟ್ಟಿ ಕಟ್ಟುವ ಬದಲು, ವಿಜ್ಞಾನ ತನ್ನ ಬುದ್ಧಿ ಮತ್ತೆಯನ್ನು ಮತ್ತು ತನ್ನಲ್ಲಿರುವ ಉಪಕರಣಗಳನ್ನು ಉಪಯೋಗಿಸಿ ಈ ತರಂಗಾಂತರಗಳನ್ನು ಗುರುತಿಸುವ ಮತ್ತು ಅಳೆಯುವ ದಿಸೆ ಯಲ್ಲಿ ಚಿಂತಿಸಬೇಕಿದೆ.
ಇಲ್ಲಿ ನಾನು ಒಂದು ಪ್ರಸಂಗವನ್ನು ಉದಾಹರಿಸಲೇ ಬೇಕಿದೆ. ಹಲವು ವರ್ಷಗಳ ಹಿಂದೆ ಅಂದರೆ ೨೦೧೨ ರಲ್ಲಿ ನನ್ನ ಹುಟ್ಟುಹಬ್ಬದ ಆಚರಣೆಯ ಸಂದರ್ಭವಾಗಿ ಹಮ್ಮಿಕೊಂಡಿದ್ದ ಶ್ರೀ ವಿದ್ಯಾ ಹೋಮ ಮತ್ತು ನವಚಂಡಿ ಹೋಮದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವು ಹೊಂದಿರುವ ರಾಂಡಮ್ ಇವೆಂಟ್ ಜೆನೆರಾಟರ್ ಎಂಬ ಉಪಕರಣವನ್ನು ಉಪಯೋಗಿಸಿ, ಹೋಮವು ಆರಂಭ ಆದಾಗಿನಿಂದ ಕಡೆಯವರೆಗೂ ಸುತ್ತಲಿನ ಪರಿಸರದಲ್ಲಿ ಆಗುವ ಸಕಾರಾತ್ಮಕ ಬದಲಾವಣೆಯನ್ನು ದಾಖಲಿಸಲಾಗಿದೆ. ಹಾಗೆಯೇ ೨೦೧೩ ರಲ್ಲಿ ಇದೆ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ ವು ಹೊಂದಿರುವ ಮತ್ತೊಂದು ಉಪಕರಣವನ್ನು ಉಪಯೋಗಿಸಿ ಹೋಮ ಆರಂಭ ವಾಗಿ ಕಡೆಯವೆರೆಗೂ ಕುಳಿತಿರುವ ಸುಮಾರು ೫೦ ಮಂದಿಯನ್ನು ಗುರುತಿಸಿ, ಹೋಮ ಆರಂಭವಾಗುವ ಮೊದಲು ಅವರ ಪ್ರಭಾವಲಯ ಮತ್ತು ಷಟ್ ಚಕ್ರ ಗಳ ಸ್ಥಿತಿಯನ್ನು ದಾಖಲಿಸಿ ನಂತರ ಎಲ್ಲ ಕಾರ್ಯಕ್ರಮಗಳು ಮುಗಿದ ನಂತರ ಪ್ರಭಾವಲಯವು ಹೆಚ್ಚಾಗಿರುವುದನ್ನೂ ಮತ್ತು ಷಟ್ ಚಕ್ರ ಗಳ ಸ್ಥಿತಿ ಉತ್ತಮವಾಗಿರುವುದನ್ನೂ ದಾಖಲಿಸಲಾಗಿದೆ. ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನವು ಈ ಉಪಕರಣಗಳನ್ನು ನೂರಾರು ಇಂತಹ ಕಾರ್ಯಕ್ರಮಗಳಲ್ಲಿ ಉಪಯೋಗಿಸಿ ದಾಖಲೆಗಳನ್ನು ಶೇಖರಿಸಿದೆ.

ದೀಪಗಳು ಮತ್ತು ಅವುಗಳಿಂದ ಎಲ್ಲ ಜೀವ ಜಡ ವಸ್ತುಗಳ ಮೇಲೆ ಉಂಟಾಗುವ ಪರಿಣಾಮಗಳನ್ನು ತಿಳಿಸುವ ಸಾಕಷ್ಟು ಪುರಾತನ ಸಾಹಿತ್ಯ ಭಂಡಾರ ನಮ್ಮಲ್ಲಿದೆ.

ಸೂರ್ಯನ ಬೆಳಕು ಮತ್ತು ಶಾಖ ಮತ್ತು ಅಗ್ನಿಯಿಂದ ಬರೆಯುವ ಶಾಖ ಮತ್ತು ಬೆಳಕಿಗೂ ವ್ಯತ್ಯಾಸ ಇದೆ ಎಂದು ನಂಬಲು ಸಾಕಷ್ಟು ಕಾರಣಗಳನ್ನು ಕೊಡಬಹುದು. ಯಾವ ಯಾವ ಮೂಲವಸ್ತುಗಳನ್ನು ಸೂರ್ಯ ವು ಹೊಂದಿದ್ದಾನೋ ಅವುಗಳಲ್ಲಿ ಅಗ್ನಿಯೂ ಒಂದು.
ಹಾಗಾಗಿಯೇ ನಾವು ಬ್ರಹ್ಮಾಂಡ ದ ಪ್ರಜ್ಞೆಗೆ ರೂಪ ಕಲ್ಪನೆ ಮಾಡಿದಾಗ ಸೋಮ ಸೂರ್ಯ ಅಗ್ನಿ ಲೋಚನ ಎಂದು ಹೇಳಿ ಸೂರ್ಯ ಮತ್ತು ಅಗ್ನಿಯಲ್ಲಿನ ವ್ಯತ್ಯಾಸ ವನ್ನು ಗುರುತಿಸಿದ್ದೇವೆ.

ಶ್ರೀ ಚಕ್ರ ಪೂಜೆಯಲ್ಲಿಯೂ ಸಹಾ ಸೋಮ ಸೂರ್ಯ ಮತ್ತು ಅಗ್ನಿಮಂಡಲ ಗಳನ್ನು ಗುರುತಿಸಿ ಆಯಾಯ ಮಂಡಲದ ದೇವತೆಗಳಿಗೆ ಪೂಜೆ ಸಲ್ಲಿಸುವ ಕ್ರಮವಿದ್ದು ಸೂರ್ಯ ಮತ್ತು ಅಗ್ನಿ ಹೊರಸೂಸುವ ಶಾಖ ಮತ್ತು ಬೆಳಕಿನ ಗುಣಗಳಲ್ಲಿ ವ್ಯತ್ಯಾಸವಿದೆ ಎಂಬುದನ್ನು ಸೂಚಿಸುತ್ತದೆ..

ಏಪ್ರಿಲ್ ಐದರಂದು ಭಾನುವಾರ ರಾತ್ರಿ ೯ ಘಂಟೆಗೆ ದೀಪವನ್ನು ಹೇಗೆ ಹಚ್ಚ ಬೇಕು ಎನ್ನುವ ಬಗ್ಗೆ ಮಾಧ್ಯಮಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಹಲವಾರು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಎಲ್ಲಾ ಅಭಿಪ್ರಾಯಗಳನ್ನು ಗೌರವಿಸುವುದರೊಂದಿಗೆ ನನ್ನ ಅಭಿಪ್ರಾಯವನ್ನು ಈ ಮೂಲಕ ನಿಮ್ಮಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದ್ದೇನೆ.

1 ದೀಪ ಹಚ್ಚುವ ಸಮಾಯ ರಾತ್ರಿ ೯ ಘಂಟೆ. ದೀಪ ಕನಿಷ್ಠ ೯ ನಿಮಿಷ ಉರಿಯಲೇ ಬೇಕು
2. ದೀಪ ಹಚ್ಚ ಬೇಕಾದ್ದು,ಮನೆಯ ಬಾಗಿಲನ ಮುಂದೆ, ಮನೆಯ ತಾರಸಿಯ ಮೇಲೆ. ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವವರು ತಮ್ಮ ತಮ್ಮ ಬಾಲ್ಕನಿಗಳಲ್ಲಿ.
3. ಈ ಸಮಯದಲ್ಲಿ ಮನೆಯೊಳಗಡೆ ಮತ್ತು ಹೊರಗಡೆ ಬಾಲ್ಕನಿಯು ಸೇರಿದಂತೆ ವಿದ್ಯುಚ್ಛಕ್ತಿಯ ದೀಪಗಳನ್ನು ಆರಿಸುವುದು. ಮನೆಯೊಳಗಿನ ಬೇರೆ ವಿದ್ಯುತ್ ಉಪಕರಣಗಳನ್ನು ಆರಿಸಬೇಕಿಲ್ಲ’

 
4. ಮೋಮ್ಬತ್ತಿ, ಮೊಬೈಲ್ ನಲ್ಲಿನ ಟಾರ್ಚ್, ಇತ್ಯಾದಿಗಳಿಗಿಂತ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದು ಉತ್ತಮ. ಎಳ್ಳೆಣ್ಣೆ ಯ ದೀಪವು ಬೇರೆ ಎಣ್ಣೆಯ ದೀಪಕ್ಕಿಂತ ಹೆಚ್ಚು ಶಾಖವನ್ನು ಕೊಡುತ್ತದೆ. ವಿಪರ್ಯಾಸ ಎಂದರೆ ನಮಗೆ ಸಿಗುತ್ತಿರುವ ಎಳ್ಳೆಣ್ಣೆಯು ಅದರಲ್ಲ್ಲೂ ದೀಪ ಹಚ್ಚಲು ಎಂಬ ಲೇಬಲ್ ಹೊತ್ತ ಎಳ್ಳೆಣ್ಣೆಯು ಕಲಬರಕೆ ಎಳ್ಳೆಣ್ಣೆಯಾಗಿರುವುದು. ಕಾಲಾಯ ತಸ್ಮೈ ನಮಃ
5. ಒಂದೊಂದು ಹಣತೆಯಲ್ಲಿಯೂ ಐದು ಬತ್ತಿಗಳಿರಲಿ. ಎಷ್ಟು ದೀಪಗಳನ್ನಾದರೂ ಹಚ್ಚ ಬಹುದು. ಒಂಭತ್ತು ಹಣತೆಗಳನ್ನು ಹಚ್ಚುವುದು ಉತ್ತಮ.

ಭಾನುವಾರ 9 ಘಂಟೆಗೆ ಇಡೀ ಭಾರತ ದೇಶ ಕೋಟ್ಯಾನು ಕೋಟಿ ದೀಪಗಳಿಂದ ಬೆಳಗುವುದನ್ನು ಕಲ್ಪಿಸಿಕೊಂಡರೆ ಸಾಕು, ಸಕಾರಾತ್ಮಕ ಭಾವನೆಗಳು ಚಿಂತನೆಗಳು ನಮ್ಮಲ್ಲಿ ಉಂಟಾಗುತ್ತದೆ. ಆ ದಿವಸ ೯ ನಿಮಿಷಗಳ ಕಾಲ ಅಗ್ನಿಯ ಶಕ್ತಿಯು ಎಲ್ಲೆಡೆ ವ್ಯಾಪಿಸಲಿ, ಅದರ ಪರಿಣಾಮಗಳನ್ನುನಾವು ಈಗ ನಿರ್ಧರಿಸುವುದು ಬೇಡ. ಕಾಲ ಅದನ್ನು ನಿರ್ಧರಿಸುತ್ತದೆ.

ಈ ಒಂಭತ್ತು ನಿಮಿಷಗಳ ಕಾಲ ಪಠನೆ ಮಾಡಲು ಅಥವಾ ಶ್ರವಣ ಮಾಡಲು ದೇವಿಯ ಒಂದು ಪ್ರಬಾವ ಯುತವಾದ ಸ್ತೋತ್ರವನ್ನು ಧನಿಮುದ್ರಿಸಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈ ಸ್ತೋತ್ರವನ್ನು ಪಠನೆ ಮಾಡೋಣ ಅಥವಾ ಆಲಿಸೋಣ . ಅಗ್ನಿಯ ತರಂಗಗಳೊಂದಿಗೆ ಶಬ್ದತರಂಗಗಳೂ ಸೇರಿ ಒಂದು ಅತ್ಯುತ್ತಮ ಪ್ರಭಾವಲಯವನ್ನು ನಮ್ಮ ಸುತ್ತ ನಿರ್ಮಿಸಲಿ ಎಂದು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯ ಪಾದಕಮಲಗಳಲ್ಲಿ ಭಕ್ತಿ ಪೂರ್ವಕ ಪ್ರಾರ್ಥನೆಯನ್ನು ಸಲ್ಲಿಸೋಣ.

ಒಂದೇ ಸಂಕಲ್ಪವನ್ನು ಒಂದೇ ಕಾಲದಲ್ಲಿ ವಿವಿಧ ಕಡೆಗಳಲ್ಲಿ ಮಾಡಿ ಪ್ರಾರ್ಥನೆ ಸಲ್ಲಿಸಿದರೆ ಆ ಪ್ರಾರ್ಥನೆ ಈಡೇರುವ ಬಗ್ಗೆ ನಮ್ಮ ಪುರಾತನ ಗ್ರಂಥಗಳಲ್ಲಿ ಮಾಹಿತಿ ಇದೆ. ಅದರ ಬಗ್ಗೆ ಅಪಹಾಸ್ಯ ಮಾಡುವವರ ಬಗ್ಗೆ ನಾವು ಚಿಂತಿಸಬೇಕಿಲ್ಲಾ ಮತ್ತು ಆ ಸತ್ಯವನ್ನು ನಾವು ಪ್ರತಿಪಾದಿಸಲು ಸಹಾ ಬೇಕಿಲ್ಲ. ಸೂರ್ಯನ ಇರುವುಕೆಗೆ, ಸಾಕ್ಷಿ, ಪ್ರತಿಪಾದನೆ ಬೇಕಿಲ್ಲಾ. ಈ ಹಿಂದೆ ಋಷಿ ಮುನಿಗಳು ತಮ್ಮ ತಮ್ಮ ಅಶ್ರಮಗಳಲ್ಲಿ ವಿಶ್ವ ಕಲ್ಯಾಣಕ್ಕಾಗಿ ಸಂಕಲ್ಪ ಮಾಡಿ ಹೋಮ ಹವನಾದಿಗಳನ್ನು ಆಚರಿಸುತ್ತಿದ್ದು ಅದರಿಂದ ದೇಶ ಸುಭಿಕ್ಷವಾಗಿದ್ದುದರ ಬಗ್ಗೆಯೂ ನಾವು ಓದಿದ್ದೇವೆ ಮತ್ತು ತಮ್ಮ ಸಾರ್ವಭೌಮತ್ವವನ್ನು ಮೆರೆಯಲು ಮಹಿಷ ಮುಂತಾದವರು ಅಂತಹ ಯಜ್ಞ ಯಾಗಾದಿಗಳನ್ನು ಹಾಳುಮಾಡಲು ಸತತ ಪ್ರಯತ್ನ ಮಾಡಿರುವುದು ಸಹಾ ನಮ್ಮ ಪುರಾಣಗಳಲ್ಲಿ ನಾವು ಓದುತ್ತಿದ್ದೇವೆ. ಎಲ್ಲ ಕಾಲದಲ್ಲೂ, ಮಧು ಕೈಟಭರು, ಶುಂಭ ನಿಶುಂಭರು, ರಕ್ತಬೀಜ, ಧೂಮ್ರಲೋಚನ, ಮಹಿಷಾಸುರರು ಇರುತ್ತಾರೆ, ಅವರ ಚಿಂತೆ ಪ್ರಕೃತಿ ಮಾತೆಗೆ ಬಿಟ್ಟುಬಿಡೋಣ, ನಮ್ಮ ಸಂಕಲ್ಪ ಮತ್ತು ಪ್ರಾರ್ಥನೆ ಧೃಢವಾಗಿರಲಿ.

ಮಹಾಮಾರಿಯನ್ನು ಹೊಡೆದೋಡಿಸುವ ಸಂಕಲ್ಪದೊಂದಿಗೆ ಪ್ರಾರ್ಥನೆಯನ್ನು ದೇಶದಾದ್ಯಂತ ಈ ೯ ನಿಮಿಷಗಳಲ್ಲಿ ಸಲ್ಲಿಸುವುದರಿಂದ ವೈಯಕ್ತಿಕ ಪ್ರಜ್ಞೆಯ ತರಂಗಗಳು, ಬ್ರಹ್ಮಾಂಡ ದ ಪ್ರಜ್ಞೆಯೊಂದಿಗೆ ಸ್ಪಂದಿಸಲು ಸಾಧ್ಯವಾಗುತ್ತದೆ ತನ್ಮೂಲಕ ಈ ಮಾಹಾಮಾರಿಯ ವಿರುದ್ಧದ ನಮ್ಮ ಹೋರಾಟಕ್ಕೆ ಪ್ರಕೃತಿಯ ಸಹಾಯ, ಬಲ, ಮತ್ತು ಶಕ್ತಿ ದೊರಕುತ್ತದೆ. ಹಾಗಾಗಿ ಈ ದೀಪ ಹಚ್ಚುವ ಪ್ರಕ್ರಿಯೆಯನ್ನು ಪ್ರಾರ್ಥನೆ ಮಾಡುವ ಪ್ರಕ್ರಿಯೆಯನ್ನು ಹಗುರವಾಗಿ ತೆಗೆದುಕೊಳ್ಳುವುದು ಬೇಡ. ನಾವೆಲ್ಲರೂ ಈಗ ಮಾಹಾಮಾರಿಯನ್ನು ನಿರ್ನಾಮ ಮಾಡುವ ಈ ಪ್ರಕ್ರಿಯೆಯಲ್ಲಿ ಸಕ್ರಿಯ ವಾಗಿ ಮನಃ ಪೂರ್ತಿಯಾಗಿ ಪಾಲ್ಗೊಳ್ಳೋಣ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸಂಮಂಗಳಾನಿ ಭವಂತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: