ಪ್ರಭಾವಲಯವನ್ನು ಹೆಚ್ಚಿಸಿಕೊಂಡು ಮಹಾಮಾರಿಯನ್ನು ಎದುರಿಸಲು ಸುಲಭ ಮಾರ್ಗ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಹಿ ಗುರುಭ್ಯೋ ನಮಃ

ಕೊರೋನಾ ಮಹಾಮಾರೀ ವಿಶ್ವಕ್ಕೆ ಒಂದು ದೊಡ್ಡ ಸವಾಲನ್ನು ಎಸೆದಿದೆ. ಅದರಲ್ಲೂ ತಾನು ಅತಿ ಬುದ್ಧಿವಂತ ಪ್ರಾಣಿ, ಜಗತ್ತನ್ನೇ ಜಯಿಸಿದ್ದೇನೆ ಎಂದು ಬೀಗುತ್ತಿರುವ ಮಾನವನಿಗೆ, ಒಂದು ಕಣ್ಣಿಗೆ ಕಾಣದ, ಜೀವವೂ ಇಲ್ಲದ ಕೇವಲ ಪ್ರೋಟೀನ್ ಒಂದು ತನ್ನನ್ನು ಬಲಿ ತೆಗೆದುಕೊಳ್ಳಬಲ್ಲದು ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಮಹಾಮಾರಿ ಮಾನವ ನಿರ್ಮಿತವಾಗಿದ್ದರೆ, ಅದು ಭಸ್ಮಾಸುರನ ಕಥೆಯನ್ನು ನೆನಪಿಗೆ ತರುತ್ತದೆ. ಮಾನವ ತನ್ನ ಬುದ್ಧಿಮತ್ತೆಯನ್ನು ವಿಶ್ವಕಲ್ಯಾಣಕ್ಕಾಗಿ ಉಪಯೋಗಿಸಬೇಕೇ ಹೊರತು ತನ್ನ ಸ್ವಾರ್ಥಸಾಧನೆಗಾಗಿ ವಿಶ್ವದ ನಾಶಕ್ಕೆ ಉಪಯೋಗಿಸಿದರೆ, ಅದು ತನ್ನನ್ನೂ ನಾಶಮಾಡಬಲ್ಲುದು ಎಂಬ ಸತ್ಯ ಅರಿವಾಯುವ ಕಾಲ ಸನ್ನಿಹಿತವಾಗಿದೆ ಎನಿಸುತ್ತದೆ.

ಈ ಮಹಾಮಾರೀ ಮಾನವ ನಿರ್ಮಿತವಲ್ಲದಿದ್ದರೆ, ಅದು ಮಾನವ ತಾನು ಪ್ರಕೃತಿಯ ಕೊಡುಗೆಯನ್ನು ದುರುಪಯೋಗ ಪಡಿಸಿಕೊಂಡಿರುವ ಫಲ ಇದು ಎಂದು ಹೇಳಬೇಕಾಗಿದೆ.

ನಮ್ಮ ಪುರಾಣದ ಕಥೆಗಳ ಸಾರಾಂಶವೂ ಇದೇ ಆಗಿದೆ. ಮಾನವ ತನ್ನ ಅತೀವ ಪ್ರಯತ್ನದಿಂದ ಮಹತ್ವವಾದದ್ದನ್ನು ಸಾಧಿಸಿ ಅದನ್ನು ಸ್ವಾರ್ಥ ಸಾಧನೆಗೆ ದುರುಪಯೋಗ ಪಡಿಸಿಕೊಂಡಾಗ (ತಪಸ್ಸಿನಿಂದ ದೇವರನ್ನು ಒಲಿಸಿ ವರ ಪಡೆದದ್ದು) ಅಥವಾ ತನ್ನ ಬಾಹು ಬಲ ಬುದ್ಧಿ ಬಲದಿಂದ ಪ್ರಕೃತಿಯ ಮೇಲೆ ಆಕ್ರಮಣ ಮಾಡಿ ಪ್ರಕೃತಿಯೇ ತನ್ನ ವಶವಾಗಬೇಕು ಎಂದಾಗ ಅವನ ಸರ್ವ ನಾಶ ವಾಗಿ ಪ್ರಕೃ ತಿ ತನ್ನ ಸಾರ್ವಭೌಮತ್ವವನ್ನು ಮೆರೆದಿರುವುದೇ ನಮ್ಮ ಪುರಾಣಗಳಲ್ಲಿನ ಕಥೆಗಳ ಸಾರಾಂಶ.ಇದರ ಅರಿವು ಮಾನವನಿಗೆ ಈಗಲಾದರೂ ಆಗಬೇಕಿದೆ.

ವೈದ್ಯಕೀಯ ವಿಜ್ಞಾನ ದೇಹವು ತನ್ನ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಮೂಲಕ ಈ ಮಹಾಮಾರಿಯ ಸೋಂಕನ್ನು ತಡೆಯಬಹುದು ಎಂದರೆ, ನಮ್ಮ ಆಧ್ಯಾತ್ಮಿಕ ಜ್ಞಾನ, ನಮ್ಮ ಸುತ್ತಲಿನ ಪ್ರಭಾವಲಯವನ್ನು ಹೆಚ್ಚಿಸಿಕೊಂಡರೆ ಈ ಮಹಾಮಾರಿಯ ಸೋಂಕನ್ನು ತಡೆಯಬಹುದು ಎನ್ನುತ್ತದೆ.  ಮಂಕುತಿಮ್ಮರು  ಹೇಳುವಂತೆ ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು.ಹಾಗಾಗಿ ಈ ಎರಡೂ ಅಭಿಪ್ರಾಯಗಳೂ ಮಾನ್ಯವೇ ಆಗಿವೆ.

ವೈಜ್ಞಾನಿಕ ಲೋಕ ಭೂಮಿಯ ಮೇಲಿನ ಎಲ್ಲಾ ಚರಾಚರ ವಸ್ತುಗಳಲ್ಲಿ ಕಂಪನ ವಿರುವುದನ್ನು ಗುರುತಿಸಿದೆ. ಕಂಪನ ಎನ್ನುವುದು ಶಬ್ದದಿಂದ ಉತ್ಪತ್ತಿಯಾಗುವುದೇ ಅಥವಾ ಶಬ್ದವು ಕಂಪನದಿಂದ ಉತ್ಪತಿಯಾಯಿತೇ ಎನ್ನುವ ಸಂದೇಹ ಬೇಕಿಲ್ಲಾ ಏಕೆಂದರೆ, ಬ್ರಹ್ಮಾಂಡದ ಉತ್ಪತ್ತಿಯೇ ಶಬ್ದದಿಂದ ಆಗಿದ್ದು ಎಂದು ನಮ್ಮ ಪುರಾತನ ಗ್ರಂಥಗಳು ಸಾರಿದ್ದು. ವೈಜ್ಞಾನಿಕ ಲೊಕವು ಸಹಾ ತನ್ನ ಸಂಶೋಧನೆಗಳಿಂದ ಅದನ್ನೇ ಸಾಬೀತು ಪಡಿಸಿದೆ. ಹಾಗಾಗಿ ಶಬ್ದದಿಂದ, ಭೂಮಂಡಲವೂ  ಯಾವುದೆಲ್ಲಾ ಉತ್ಪತ್ತಿಯಾಗಿದೆಯೋ , ಅಲ್ಲೆಲ್ಲಾ ಶಬ್ದದ ತರಂಗಗಳು ಇರಲೇಬೇಕು ಎನ್ನುವುದನ್ನು ಯಾರಾದರೂ ಒಪ್ಪಲೇ ಬೇಕು.  ಯಾವುದೇ ವಸ್ತು, ಗಿಡ, ಮರ, ಪ್ರಾಣಿ  ಪಕ್ಷಿ, ಕೀಟ, ಮಾನವ ಪ್ರಾಣಿಯೂ ಸೇರಿದಂತೆ ತನ್ನಿಂದ ಹೊರಡುವ ಈ ಶಬ್ದ ತರಂಗಗಳಿಂದ ತನ್ನ ಸುತ್ತಲೂ ಒಂದು ಪ್ರಭಾವಲಯವನ್ನು ಸೃಷ್ಟಿಸಿ ಕೊಳ್ಳುತ್ತದೆ ಎಂಬುದೂ ಸತ್ಯವೇ ಆಗಿದೆ.

ಶಬ್ದ ಕಂಪನಗಳನ್ನು  ಅಳೆಯುವ ಮೂಲಮಾನ ಹರ್ಟ್ಜ್.

ಭೂಮಂಡಲವೂ ಕಂಪನವನ್ನು ಹೊಂದಿದ್ದು  ಶತ ಶತ ಮಾನಗಳಿಂದ ಈ ಕಂಪನದ ಮಾನವು ಸೆಕೆಂಡಿಗೆ ೭.೬  ಇದ್ದು  ಕಳೆದ ಎರಡು ದಶಕಗಳಿಂದ ಹೆಚ್ಚುತ್ತಲೇ ಹೋಗಿ ಅದು ಈಗ  ಸೆಕೆಂಡಿಗೆ ೨೭. ೪ ನ್ನು ತಲುಪಿದೆ ಎಂದು ಹೇಳಲಾಗುತ್ತಿದೆ.

ಭೂಮಂಡಲದ ಈ ತರಂಗವನ್ನು ಎರಿಚ್ ಶುಮಾನ್ ಎಂಬ ಒಬ್ಬ ಶಬ್ದ ವಿಜ್ಞಾನಿ (೧೮೯೮-೧೯೮೫) ಪರಿಚಯಿಸಿದ್ದು ಇದನ್ನು ಶುಮಾನ್ ರೆಸೊನನ್ಸ್ ಎಂಬ ಹೆಸರಿನಂದಲೇ ಕರೆಯಲಾಗಿದೆ .

ಇನ್ನು ಸಾಮಾನ್ಯ ಮಾನವರ ಸರಾಸರಿ ಕಂಪನ ೭. ೬ ರಿಂದ ೭. ೮ ರವರೆಗೆ ಎಂದು ಹೇಳಲಾಗಿದೆ. ಈ ಕಂಪನವು (ಹರ್ಟ್ಜ್) ಮನಸ್ಸಿನ ಭಾವನೆಗಳಿಗೆ ಅನುಗುಣವಾಗಿ ಏರು ಪೇರಾಗುತ್ತಿದ್ದು ವಿವರಗಳು ಹೀಗಿದೆ :-

 • ದುಃಖ, ಕೊರಗು, ಚಿಂತೆ   0.1 -2
 • ಭಯ  0.2-2.2
 • ಕಿರಿಕಿರಿ, ಕಿರುಕುಳ  0.9-3.8
 • ಅಡಚಣೆ, ಕ್ಷೋಭೆ 0.6 – 1.9
 • ಕಠಿಣ ಮನೋಧರ್ಮ  0.9
 • ಹಿಂಸಾತ್ಮಕ   ಕೋಪ    0.5
 • ಕೋಪ   1.4
 • ಅಹಂಕಾರ   0.8
 • ಅಧಿಕಾರ ಮದ, ಹಣದ ಮದ, ಹಣ ಅಧಿಕಾರಕ್ಕಾಗಿ ಹಾತೊರೆಯುವಿಕೆ   3.1
 • ಮೇಲರಿಮೆ, ಅಹಂಭಾವ.  1.9
 • ಕೀಳರಿಮೆ     3

_________________________

ಔದಾರ್ಯ 9.5                  
ಉಪಕಾರ ಸ್ಮರಣೆ   45
ಎಲ್ಲರಲ್ಲು ಸಮಭಾವ    144
ಸಹಾನುಭೂತಿ, ಕರುಣೆ    150
ಸರ್ವ ಮಾನವರಲ್ಲಿ ಪ್ರೀತಿ  150
ಬೇಷರತ್ತಾದ ಸಾರ್ವತ್ರಿಕ ಪ್ರೇಮ ಪ್ರೀತಿ  250

ಕೊರೋನಾ ವೈರಸ್ ನ ಶಬ್ಶ ತರಂಗ ೭. ೫ ರಿಂದ ೧೪.೫ ರವರೆಗೂ ಇದ್ದು ಅದಕ್ಕೂ ಹೆಚ್ಚಿನ ಶಬ್ದತರಂಗವೇ ಆ ವೈರಸನ್ನು ಕೊಲ್ಲ್ಲುವಷ್ಟು ಶಕ್ತವಾಗಿದೆ ಎನ್ನುತ್ತದೆ ವಿಜ್ಞಾನ ಲೋಕ. ಅಂದರೆ ಎಲ್ಲಾ ಸಾಮಾನ್ಯ ಮನುಷ್ಯರಿಗೂ ಈ ವೈರಸ್ ಸೋಂಕಾಣು ತಗುಲುವ ಸಾಧ್ಯತೆ ಇದೆ ಎಂದು ಅರ್ಥವಲ್ಲಾ. ಆದರೆ ಈ ವೈರಸ್ ನ ಸಂಪರ್ಕಕ್ಕೆ ಸಾಮಾನ್ಯ ಮನುಷ್ಯ ಬಂದರೆ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ಈ ವೈರಸ್ನ ಸೋಂಕು ಇರುವವರಿಂದ ಅಂತರ ಕಾಪಾಡಿಕೊಳ್ಳುವುದು ಅತಿ ಮುಖ್ಯ ವಾಗುತ್ತದೆ. ಇನ್ನೊಂದು ಮಾರ್ಗ ವೆಂದರೆ ನಮ್ಮ ಶಬ್ದ ತರಂಗದ ಕಂಪನವನ್ನು ಹೆಚ್ಚಿಸಿಕೊಳ್ಳುವುದು.

ನಮ್ಮ ಮನೆಯಲ್ಲಿ ಅಥವಾ ಸುತ ಮುತ್ತಲಿನ ಶಬ್ದತರಂಗಗಳ ವ್ಯಾಪ್ತಿ ಮತ್ತು ಶಕ್ತಿ, ಅಲ್ಲಿ ಇರುವ ವಸ್ತುಗಳು, ಗಿಡ ಮರ ಬಳ್ಳಿಗಳು ಮತ್ತು ನಾವು ಉಂಟುಮಾಡುವ ಶಬ್ದ ತರಂಗಗಳ ಮೇಲೆ ನಿರ್ಧಾರವಾಗುತ್ತದೆ.

ಒಂದು ವಿಜ್ಞಾನ ಲೇಖನದ ಪ್ರಕಾರ, ಆಸ್ಪತ್ರೆಗಳಲ್ಲಿ, ಜೈಲುಗಳಲ್ಲಿ, ವಿದ್ಯುಚ್ಛಕ್ತಿ ತಂತಿ ಹರಿಯುವೆಡೆಯಲ್ಲಿ , ವಿದ್ಯುಚ್ಛಕ್ತಿ ವಾಹನಗಳಲ್ಲಿ, ಶಾಪಿಂಗ್ ಮಾಲ್  ಗಳಲ್ಲಿ ಮತ್ತು ಕಚೇರಿಗಳಲ್ಲಿ ಈ ಶಬ್ದತರಂಗಗಳ ಕಂಪನ ಕಡಿಮೆಯಾಗಿರುತ್ತದೆ. ಹಲವು ಕಚೇರಿಗಳಲ್ಲಿ ಕಚೇರಿ ಆರಂಭಕ್ಕೆ ಮುನ್ನ ಧ್ಯಾನಾಸಕ್ತರಾಗುವುದು, ಸಕಾರತ್ಮಕ ಶಕ್ತಿಯನ್ನುಂಟುಮಾಡುವ ಸ್ತೋತ್ರಗಳನ್ನು ಹೇಳುವ ಪರಿಪಾಠ ಇದೆ ಎಂಬುದನ್ನು ನಾವು ಗಮನಿಸ ಬಹುದಾಗಿದೆ.

ಒಬ್ಬ ವೈದ್ಯರ ಕೈಗುಣ ಚನ್ನಾಗಿದೆ ಅವರ ಬಳಿ ಹೋದವರು ಗುಣವಾಗುವುದು ಸಾಧ್ಯ ಏಕೆಂದರೆ ಅವರ ಪ್ರಭಾ ವಲಯ ರೋಗಿಗಳಿಗಿಂತ ಅತಿ ಹೆಚ್ಚಿರುವುದು ಕಾರಣ ಇರಬಹುದು ಎಂದು  ನನ್ನ ಸ್ನೇಹಿತರೊಬ್ಬರು ತಮ್ಮ ಫೇಸ್ ಬಕ್ಕಿನಲ್ಲಿ   ಬರೆದು ಕೊಂಡಿದ್ದಾರೆ. ಇದು ಸತ್ಯಕ್ಕೆ ಬಹಳ ಹತ್ತಿರ ಇದೆ ಎಂದು ನನಗನಿಸುತ್ತದೆ.

ನಮ್ಮ ದೈಹಿಕ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳುವಷ್ಟೇ ಮುಖ್ಯ ನಮ್ಮ ಸುತ್ತಲಿನ ಪ್ರಭಾ ವಲಯದ ಬೇಲಿಯನ್ನು ವಿಸ್ತರಿಸಿ ಕೊಳ್ಳುವುದು ಎಂದು ಹೇಳಲೇ ಬೇಕಾಗಿದೆ. ನಮ್ಮ ಮಾನಸಿಕ ಸ್ಥಿತಿ, ನಮ್ಮ  ಆಚರಣೆಗಳು, ನಮ್ಮ  ನಡತೆ,ನಮ್ಮ ಊಟ ಉಪಚಾರಗಳು ಇವೆಲ್ಲವೂ ನಮ್ಮ ಪ್ರಭಾವಲಯವನ್ನು ಹೆಚ್ಚಿಸಲು ಸಾಧ್ಯ. ಹೀಗೆ ಪ್ರಭಾ ವಲಯವನ್ನು ಹೆಚ್ಚಿಸಿಕೊಳ್ಳುವುದರಿಂದ ನಮ್ಮ ಸಾಮಾಜಿಕ, ಔದ್ಯೋಗಿಕ, ಮತ್ತು ಆರ್ಥಿಕ ಪ್ರಗತಿಯೂ ಸಾಧ್ಯ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇನೆ.

ದುರ್ಗಾ ಸಪ್ತಶತಿಯ ಪಾರಾಯಣಕ್ಕೆ ಮೊದಲು ಅರ್ಗಲಾ ಸ್ತೋತ್ರ ಪಠನೆ ಮಾಡುವ ವಿದ್ದು ಈ ಸ್ತೋತ್ರದ ಒಂದೊಂದು ಶ್ಲೋಕದ  ಕಡೆಯಲ್ಲೂ ” ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ” ಎಂದು ಹೇಳುತ್ತೇವೆ. ಇದರ ಅರ್ಥ ನನಗೆ ರೂಪವನ್ನು ಕೊಡು, ಜಯವನ್ನು  ಕೊಡು,ಯಶಸ್ಸನ್ನು ಕೊಡು ಮತ್ತು ದ್ವಿಷೋ ಜಹೀ ಎಂದರೆ ಒಂದು ಅರ್ಥ ಶತ್ರುಗಳನ್ನು ಜಯಿಸುವಂತಾಗಲಿ ಆದರೆ ಇನ್ನೊಂದು ಅರ್ಥದಲ್ಲಿ ನನ್ನ ಆಧ್ಯಾತ್ಮದ ಹಾದಿಯಲ್ಲಿ ಪ್ರಗತಿಯನ್ನು ಕೊಡು ಎಂದು ಸಹಾ ಹೇಳಲಾಗಿದೆ.

ರೂಪ ಅಂದರೆ ಏನು , ಈ ಪದದ ಅರ್ಥವನ್ನು ಮಾತ್ರ ನೋಡುವುದಾದರೆ ಆಕಾರ ಎಂದಾಗುತ್ತದೆ. ಇಲ್ಲಿ ರೂಪ ಎಂದರೆ ನನಗೆ  ಪ್ರಭಾ ವಲಯವನ್ನು ಕೊಡು ಎಂತಲೇ ಅರ್ಥೈಸ ಬೇಕಾಗುತ್ತದೆ ಹಾಗಾದಾಗ ಮಾತ್ರವೇ ಜಯ ಮತ್ತು ಯಶಸ್ಸು ಸಾಧ್ಯ.

ದುರ್ಗಾ ಸಪ್ತಶತಿಯ ಮಂತ್ರಗಳು ಪ್ರಭಾ ವಲಯವನ್ನು ಹೆಚ್ಚಿಸಲು ಸಹಕಾರಿ ಎನ್ನಲು ಈ ಒಂದು ಆಧಾರ ಸಾಕು,

ವೈದ್ಯ ಲೋಕ, ಶಬ್ದತರಂಗಗಳನ್ನು ಹಾಯಿಸುವ ಮೂಲಕವೇ ನಮ್ಮ ಶರೀರದಲ್ಲಿನ ಅಂಗಾಗಗಳ ಪರೀಕ್ಷೆ ಮಾಡುತ್ತಿದೆ ಎಂಬುದು ನಮಗೆಲ್ಲಾ ತಿಳಿದಿರುವ ವಿಷಯವೇ ಆಗಿದೆ. ಹಾಗೆಯೇ ನಮ್ಮ ಪ್ರಭಾವಲಯವನ್ನು ಅಳೆಯುವ ಮತ್ತು ಅದನ್ನು ಹೆಚ್ಚು ಮಾಡಿಕೊಳ್ಳುವುದರ ಬಗ್ಗೆಯೂ ಚಿಂತನೆ ಆಗಬೇಕಿದೆ.  ಈ ಬಗ್ಗೆ ಇನ್ನಷ್ಟು ಸಂಶೋದನೆಗಳು ಅಗತ್ಯ.

ಇವೆಲ್ಲಾ ಆಗಲಿಕ್ಕೆ ಇನ್ನೂ ಹಲವು ಕಾಲ ಬೇಕಾಗಬಹುದು. ಅಷ್ಟರಲ್ಲಿ ಈಗ ನಮ್ಮನ್ನು ಕಾಡುತ್ತಿರುವ ಮಹಾಮಾರಿಯನ್ನು ಎದುರಿಸಲು ಹೋರಾಡಬೇಕಿದೆ. ಮೊಟ್ಟ ಮೊದಲನೆಯದಾಗಿ ನಮ್ಮನ್ನು ಆವರಿಸುವ ಭಯದಿಂದ ಹೊರಬರುವುದು.  ನಮ್ಮ ಪ್ರಭಾ ವಲಯ  ಚನ್ನಾಗಿದೆ ಎಂಬ ಅರಿವು ನಮಗೆ ಬಂದರೆ ಸಾಕು ಭಯ ದೂರವಾಗುತ್ತದೆ.

ದೀರ್ಘ ಉಸಿರನ್ನು ತೆಗೆದುಕೊಂಡು ಎಷ್ಟು ಸಾಧ್ಯವೋ ಅಷ್ಟು ಸಮಯ ಆ ಉಸಿರನ್ನು ಹಿಡಿದಿಟ್ಟುಕೊಂಡು ನಿಧಾನವಾಗಿ ಉಸಿರನ್ನು ಹೊರಗೆ ಬಿಡುವುದು. ಈ ಉಸಿರಾಟದ ಪ್ರಕ್ರಿಯೆಯನ್ನು ಮನಸ್ಸಿಟ್ಟು ಗಮನಿಸುವುದು. ಈ ಕ್ರಿಯೆಯನ್ನು  ಒಂದು ಬಾರಿಗೆ ಹತ್ತರಿಂದ ಹದಿನೈದು ನಿಮಿಷದವರೆಗೆ ಮಾತ್ರ ಮಾಡುವುದು.

ಇಂತಹ ಮಹಾಮಾರಿಗಳನ್ನು ಧ್ವಂಸ ಮಾಡುವಂತಹ ಅನೇಕ ಶ್ಲೋಕಗಳು ದುರ್ಗಾ ಸಪ್ತಶತಿಯಲ್ಲಿ ಇವೆ. ಅವುಗಳಲ್ಲಿ ಒಂದೆರಡನ್ನು ಆರಿಸಿಕೊಂಡು ಪಠಣ ಮಾಡಲು ಪ್ರಯತ್ನ ಪಡುವುದು ಪಠಣ ಸಾಧ್ಯವಿಲ್ಲವಾದರೆ ಅವುಗಳನ್ನು ಶ್ರದ್ಧಾ ಭಕ್ತಿಗಳಿಂದ ಹದಿನೈದರಿಂದ ಇಪ್ಪತ್ತು ನಿಮಿಷ ಆಲಿಸುವುದು. ಹೀಗೆ ಪ್ರತಿದಿನ ಮೂರರಿಂದ ನಾಲ್ಕು ಬಾರಿ ಮಾಡುವುದರಿಂದ ನಮ್ಮ ಪ್ರಭಾ ವಲಯ ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ನಮ್ಮ ಸುತ್ತಲಿನ ಪರಿಸರವು ಸಹಾ ಸಕಾರಾತ್ಮಕ ಶಕ್ತಿಯನ್ನು ಪಡೆಯುತ್ತದೆ.

ಈ ಬಗ್ಗೆ ನಾವೆಲ್ಲರೂ ಪ್ರಯತ್ನಿಸೋಣ ಈ ಮಹಾಮಾರಿಯನ್ನು ಹೊಡೆದೋಡಿಸೋಣ. ಒಂದು ಬಲಿಷ್ಠ ಸಮಾಜವನ್ನು ನಿರ್ಮಾಣ ಮಾಡೋಣ. ಅದು ಆದಷ್ಟು ಬೇಗ ಆಗುವಂತೆ ಮಾಡಲಿ ಎಂದು ಶ್ರೀ ಗುರು ಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯನ್ನು ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥಿಸೋಣ.

ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮಾ ಅಮೃತಂಗಮಯ

ಓಂ ಶಾಂತಿಃ ಶಾಂತಿಃ ಶಾಂತಿಃ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: