ಶ್ರೀ ರುದ್ರ ನಮಕ- 5 ನೇ ಅನುವಾಕ -ಕನ್ನಡ ವಿವರಣೆ Sri Rudra namaka 5th Anuvaka Kannada explanation


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠೀ ಗುರುಭ್ಯೋ ನಮಃ

ಶ್ರೀ ರುದ್ರದ ಐದನೆಯ ಅನುವಾಕವು 15 ಮಂತ್ರಗಳನ್ನು ಒಳಗೊಂಡಿದೆ. ಈ ಅನುವಾಕದಿಂದ 9 ನೇ ಅನುವಾಕದವರೆಗೂ ನಮಃ ಎನ್ನುವುದನ್ನು ಒಂದೊಂದು ಮಂತ್ರದ ಪ್ರಾರಂಭದಲ್ಲಿ ಮಾತ್ರ ಹೇಳಲಾಗಿದೆ. ಎಲ್ಲ ಮಂತ್ರಗಳನ್ನೂ ಒಂದೇ ಅನುವಾಕವಾಗಿ ಹೇಳುವಾಗ ಒಂದು ಮಂತ್ರಕ್ಕೂ ಅದರ ಮುಂದಿನ ಮಂತ್ರಕ್ಕೂ ಸಂಪರ್ಕ ಉಳಿಸಲು, ಸಂಪರ್ಕ ಕಲ್ಪಿಸಲು ಚ ವನ್ನು ಉಪಯೋಗಿಸಲಾಗಿದೆ.
ಈಗ ಈ ಅನುವಾಕದ ಎಲ್ಲಾ 15 ಮಂತ್ರಗಳನ್ನೂ ಒಟ್ಟಿಗೆ ಹೇಳಿ ನಂತರ ಒಂದೊಂದು ಮಂತ್ರಕ್ಕೆ ವಿವರಣೆ ಕೊಡುವ ಪ್ರಯತ್ನ ಮಾಡೋಣ.
ನಮೋ’ ಭವಾಯ’ಚ ರುದ್ರಾಯ’ ಚ ನಮಃ’ ಶರ್ವಾಯ’ಚಪಶುಪತ’ಯೇ ಚ ನಮೋ ನೀಲ’ಗ್ರೀವಾಯ ಚ ಶಿತಿಕಂಠಾ’ಯ ಚನಮಃ’ ಕಪರ್ಧಿನೇ’ ಚ ವ್ಯು’ಪ್ತಕೇಶಾಯ ಚ ನಮಃ’ ಸಹಸ್ರಾಕ್ಷಾಯ’ ಚ ಶತಧ’ನ್ವನೇ ಚ ನಮೋ’ ಗಿರಿಶಾಯ’ ಚ ಶಿಪಿವಿಷ್ಟಾಯ’ ಚ ನಮೋ’ ಮೀಢುಷ್ಟ’ಮಾಯ ಚೇಷು’ಮತೇ ಚ ನಮೋ” ಹ್ರಸ್ವಾಯ’ ಚ ವಾಮನಾಯ’ ಚ ನಮೋ’ ಬೃಹತೇ ಚವರ್ಷೀ’ಯಸೇ ಚ ನಮೋ’ ವೃದ್ಧಾಯ’ ಚ ಸಂವೃಧ್ವ’ನೇ ಚ ನಮೋ ಅಗ್ರಿ’ಯಾಯ ಚ ಪ್ರಥಮಾಯ’ ಚ ನಮ’ ಆಶವೇ’ ಚಾಜಿರಾಯ’ ಚ ನಮಃ ಶೀಘ್ರಿ’ಯಾಯ ಚ ಶೀಭ್ಯಾ’ಯ ಚ ನಮ’ ಊರ್ಮ್ಯಾ’ಯ ಚಾವಸ್ವನ್ಯಾ’ಯ ಚ ನಮಃ’ ಸ್ತ್ರೋತಸ್ಯಾ’ಯ ಚ ದ್ವೀಪ್ಯಾ’ಯ ಚ || 5
ನಮೋ ಭವಾಯ ಚ ರುದ್ರಾಯ ಚ
ಇಲ್ಲಿ ಭವ ಮತ್ತು ರುದ್ರ ಎಂಬ ಎರಡು ನಾಮಗಳನ್ನು ಹೇಳಿದೆ.ಎರಡನೇ ಅನುವಾಕದಲ್ಲೂ ಭವಸ್ಯ ಹೇತವೇ ಎಂದಿರುವುದನ್ನು ನಾವು ಓದಿದ್ದೇವೆ. ಭವ ಎಂದರೆ ಅಸ್ಥಿತ್ವಕ್ಕೆ ಬರುವುದು, ಹುಟ್ಟು, ಜೀವ ಇವೆಲ್ಲ ಅರ್ಥಗಳು ಜತೆಗೆ ಸರ್ವವ್ಯಾಪೀ ಎನ್ನುವ ಅರ್ಥವನ್ನೂ ಸೇರಿಸಿಕೊಳ್ಳಬಹುದು ರುದ್ರ ಎಂದರೆ, ಮೊದಲನೇ ಅನುವಾಕ ಪ್ರಾರಂಭ ಮಾದಲಿಕ್ಕೆ ಮೊದಲೇ ಹೇಳಿದಂತೆ ರುದ್ರಂ ಸಂಸಾರ ದುಃಖಂ ದ್ರಾವಯತೀತಿ ಅಂದರೆ ನಮನ್ನು ಸಂಸಾರ ದುಃಖದಿಂದ ಪಾರುಮಾಡುವವನು.
ಭವನೂ ಮತ್ತು ರುದ್ರನೂ ಆದ ನಿನಗೆ ನಮಸ್ಕಾರಗಳು
ಇಲ್ಲಿ ಲಲಿತಾ ಸಹಸ್ರನಾಮದ 880 ನೇ ನಾಮ ’ಸಂಸಾರ ಪಂಕ ನಿರ್ಮಜ್ನ ಸಮುದ್ಧರಣ ಪಂಡಿತಾ” ಎನ್ನುವುದು ನೆನಪಿಗೆ ಬಂದೇ ಬರುತ್ತದೆ. ಸಂಸಾರದಲ್ಲಿ ಸಿಕ್ಕಿಹಾಕಿಕೊಂಡಿರುವ ನಮ್ಮನ್ನು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯು ನಮ್ಮನ್ನು ಪಾರುಮಾಡುತ್ತಾಳೆ. ಸಂಸಾರಿನ್ ಎಂಬ ಪದದಿಂದ ಸಂಸಾರ ಎನ್ನುವ ಪದ ಹುಟ್ಟಿಕೊಂಡಿದೆ. ಸಂಸಾರಿನ್ ಅಂದರೆ ಒಂದು ದೇಹದಿಂದ ಮತ್ತೊಂದು ದೇಹವನ್ನು ಪಡೆಯುತ್ತಲೇ ಸಾಗುವುದು. ಅಂದರೆ ಪ್ರತಿ ಬಾರಿಯೂ ದೇಹ ಬಿಟ್ಟಾಗ ಜೀವಾತ್ಮನು ಮತ್ತೊಂದು ದೇಹವನ್ನು ಧರಿಸುತ್ತಲೇ ಹೋಗುವುದು. ಈ ಪ್ರಕ್ರಿಯೆಗೆ ಅಂತ್ಯವೇ ಇಲ್ಲದಿರುವುದು. ಸಂಸಾರ ಬಂಧನದಿಂದ ಪಾರಾಗುವುದು ಎಂದರೆ, ಈ ಅಂತ್ಯವೇ ಇಲ್ಲದ ಪ್ರಕ್ರಿಯೆಗೆ ಅಂತ್ಯ ಕಾಣಿಸುವುದು. ಸಂಸಾರ ಅಂದರೆ ಗೃಹಸ್ಥನಾಗಿರುವುದು ಅನ್ನುವ ಅರ್ಥವಲ್ಲಾ. ಗೃಹಸ್ಥನಲ್ಲದವನು ಧಾರ್ಮಿಕ ಕ್ರಿಯೆಗಳಾದ ಯಜ್ನ ಯಾಗಾದಿ ಗಳನ್ನು ಮಾಡುವುದನ್ನು ಶಾಸ್ತ್ರ ನಿಷೇಧಿಸಿದೆ.
ಭಗವದ್ಗೀತೆಯ ಹನ್ನೆರಡನೇ ಅಧ್ಯಾಯದ ಏಳನೇ ಶ್ಲೋಕವು, “
ತೇಷಾಮಹಂ ಸಮುದ್ಧರ್ತಾ ಮೃತ್ಯುಸಂಸಾರಸಾಗರಾತ್
ಭವಾಮಿ ನಚಿರಾತ್ವಾರ್ಥ ಮಯ್ಯಾವೇಶಿತಚೇತಸಾಮ್
ಎಲೈ ಅರ್ಜುನಾ, ನನ್ನಲ್ಲಿಯೇ ಮನಸ್ಸನ್ನು ಲೀನಗೊಳಿಸಿರುವ ಭಕ್ತರನ್ನು ನಾನು ಶೀಘ್ರವಾಗಿ ಮೃತ್ಯುರೂಪೀ ಸಂಸಾರ ಸಮುದ್ರದಿಂದ ಪಾರುಮಾಡಿ, ಸಮುದ್ಧರ್ತಾ ಉದ್ದಾರಮಾಡುತ್ತೇನೆ.
ಸರ್ವವ್ಯಾಪಿಯೂ,ನಮ್ಮನ್ನು ಸಂಸಾರ ಸಾಗರದಿಂದ ಪಾರುಮಾಡುವವನೂ ಆದ ರುದ್ರನೇ ನಿನಗೆ ನಮಸ್ಕಾರಗಳು
ನಮಃ ಶರ್ವಾಯ ಚ ಪಶುಪತಯೇ ಚ
ಪಾಪಗಳನ್ನು ನಾಶಮಾಡುವ ಎಲ್ಲ ಪಶುಗಳನ್ನೂ ಪೊರೆಯುವ ರುದ್ರನೇ ನಿನಗೆ ನಮಸ್ಕಾರಗಳು. ಪಶುಗಳು ಅಂದರೆ ಪ್ರಾಣಿಗಳು ಮಾತ್ರ ಅಲ್ಲಾ ಅಜ್ನಾನಿಗಳಾದ ನಾವೂ ಪ್ರಾಣಿಗಳೇ ಪಶುಗಳೇ, ಜ್ನಾನಿಗಳನ್ನೂ ಅಜ್ನಾನಿಗಳನ್ನೂ ರಕ್ಷಿಸುವ ರುದ್ರನೇ ನಿನಗೆ ನಮಸ್ಕಾರಗಳು.
ಶ್ರೀ ಲಲಿತಾ ಸಹಸ್ರನಾಮದ 354 ನೇ ನಾಮ ಪಶುಪಾಶ ವಿಮೋಚನಿ ಇದೇ ಅರ್ಥವನ್ನು ಕೊಡುತ್ತದೆ. ಈ ಮೊದಲು ಹೇಳಿದಂತೆ ಪಶು ಎಂದರೆ ಜೀವಾತ್ಮ,ಇದು ಅಜ್ನಾನ ಎಂಬ ಪಾಶದಿಂದ ಬಂಧಿತವಾಗಿರುತ್ತದೆ. ಬಂಧನದಿಂದ ವಿಮೋಚನೆಗೊಳಿಸುವವಳು ಶ್ರೀ ಲಲಿತಾ ಮಹಾತ್ರಿಪುರ ಸುಂದರೀ. ಈ ಬಂಧನಕ್ಕೆ ಒಳಗಾಗಿರುವ ಪಶುಗಳ ಒಡೆಯನಾಗಿ ಅವುಗಳನ್ನು ಬಂಧಮುಕ್ತ ಮಾಡುವವನು ಪಶುಪತಿ.
ನಮೋ ನೀಲಗ್ರೀವಾಯ ಚ ಶಿತಿಕಂಠಾಯ ಚ
ಗ್ರೀವ ಅಂದರೆ ಕಂಠ. ಶಿತಿ ಅಂದರೆ ಬಿಳಿ ಎಂತಲೂ ದಟ್ಟ ನೀಲಿ ಎಂತಲೂ ಅರ್ಥವಿದೆ.
ನೀಲಕಂಠ ನಾದ ರುದ್ರನೇ ನಿನಗೆ ನಮಸ್ಕಾರಗಳು.
ರುದ್ರನಿಗೆ ಕಾಲಕಂಠ ಎನ್ನುವ ಹೆಸರೂ ಇದೆ. ಕಾಲಕೂಟ ಅಥವಾ ಕಾಲಾಹಾಲ ಎಂಬ ಮಾರಣಾಂತಿಕ ವಿಷವನ್ನು ಕುಡಿದವನು ರುದ್ರ. ಕಾಳೀ ಮತ್ತು ಕಾಲಕಂಠಿಯರನ್ನು ದಾನವರ ಸಂಹಾರಕ್ಕಾಗಿ ಸೃಷ್ಟಿ ಮಾಡಿದವನು ರುದ್ರ. ಶಿತಿಕಂಠ ಎಂದರೆ ಸೂಕ್ಷ್ಮ ದೇಹಗಳ ಸಮುಚ್ಛಯ. ಇದನ್ನು ಸೂತ್ರಾತ್ಮನ್ ಎಂತಲೂ ಹೇಳುತ್ತಾರೆ. ಸೂಕ್ಷದೇಹಗಳ ಪ್ರಜ್ನೆಗೆ ಸೀಮಿತಗೊಂಡ ಪ್ರಜ್ನೆಯೇ ಸೂತ್ರಾತ್ಮನ್.
ನಮೋ ಕಪರ್ದಿನೇ ಚ ವ್ಯುಪ್ತಕೇಶಾಯ ಚ
ಜಡೆಗೂದಲನ್ನು ಹೊಂದಿರುವ ರುದ್ರನೇ ನಿನಗೆ ನಮಸ್ಕಾರಗಳು. ಕೇಶಮುಂಡನ ವಾಗಿರುವ ರುದ್ರನೇ ನಿನಗೆ ನಮಸ್ಕಾರಗಳು.
ಜಡೆಗೂದಲನ್ನು ಹೊಂದಿರುವುದು, ಕೇಶಮುಂಡನ ಮಾಡಿಸಿಕೊಂಡಿರುವುದು ಇವೆರಡೂ ತದ್ವಿರುದ್ದ ವಾದವು. ಅಂದರೆ ಎಲ್ಲದರಲ್ಲಿಯೂ ಇರುವವನು ಸರ್ವವ್ಯಾಪಿ. ಯೋಗಿಗಳಲ್ಲಿ ಹಲವರು ಜಟಾಧಾರಿಗಳಾದರೆ ಹಲವರು ಕೇಶಮುಂಡನ ಆಗಿರುವವರು. ಇಬ್ಬರಲ್ಲೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ನಮ ಸಹಸ್ರಾಕ್ಷಾಯ ಚ ಶತಧನ್ವನೇ ಚ
ಸಹಸ್ರ ಕಣ್ಣುಗಳನ್ನೂ ಮತ್ತು ಸಹಸ್ರ ಬಾಣಗಳನ್ನೂ ಹೊಂದಿರುವ ರುದ್ರನೇ ನಿನಗೆ ನಮಸ್ಕಾರಗಳು.
ಸಹಸ್ರಾಕ್ಷ ಎನ್ನುವುದು ಸಹಾ ಸರ್ವವ್ಯಾಪ್ತಿತ್ವವನ್ನೇ ಹೇಳುವಂತಾದ್ದು. ಸಹಸ್ರ ಬಾಣಗಳು ಅಂದರೆ ದುಷ್ಟ ಸಂಹಾರಕ್ಕೆ ಇರುವ ಅಸಂಖ್ಯ ಆಯುಧಗಳು.
ನಮ ಗಿರಿಶಾಯ ಚ ಶಿಪಿವಿಷ್ಟಾಯ ಚ
ಬೆಟ್ಟಗಳಲ್ಲಿ ನೆಲೆಸಿರುವ ಮತ್ತು ಬೆಳಕಿನ ಕಿರಣಗಳಿಂದ ಸುತ್ತುವರೆದಿರುವ ರುದ್ರನೇ ನಿನಗೆ ನಮಸ್ಕಾರಗಳು.
ಕೈಲಾಸ ಪರ್ವತದಲ್ಲಿ ರುದ್ರನ ವಾಸ. ಜ್ನಾನ ಎನ್ನುವುದನ್ನು ಬೆಳಕಿನ ಕಿರಣಗಳು ಎಂದು ಹೇಳಲಾಗಿದೆ. ಜ್ನಾನದ ಬೆಳಕಿನಿಂದ ಸುತ್ತುವರೆದಿರುವ ರುದ್ರ.
ಯಾರು ತನ್ನ ಇಂದ್ರಿಯಗಳನ್ನು ಆಂತರಿಕ ಅಗ್ನಿಯಲ್ಲಿ ಹವಿಸ್ಸಾಗಿ ಅರ್ಪಿಸಿ ಯಜ್ನ ಮಾಡುತ್ತಾರೋ ಅವರು ಶಿಪಿ ಎನ್ನುವುದು ರಹಸ್ಯಾರ್ಥ.

ನಮೋ ಮೀದುಷ್ಟಮಾಯ ಚೇಶುಮತೇ ಚ
ಈ ಮಂತ್ರವನ್ನು ನಮೋ ಮೀದುಷ್ಟಮಾಯ ಚ ಇಶುಮತೇ ಚ
ಮೇಘಗಳಿಂದ ಹೇರಳವಾಗಿ ಮಳೆ ಸುರಿಸುವ ರುದ್ರನೇ ಬಾಣಗಳನ್ನು ಹೊಂದಿರುವ ರುದ್ರನೇ ನಿನಗೆ ನಮಸ್ಕಾರಗಳು. ಬಾಣಗಳು ಇಲ್ಲಿ ಸೃಷ್ಟಿ ಸ್ಥಿತಿ ಮತ್ತು ಲಯಗಳ ಸಂಕೇತ ಆಗಿದೆ.
ನಮೋ ಹ್ರಸ್ವಾಯ ಚ ವಾಮನಾಯ ಚ
ಹ್ರಸ್ವ ಅಂದರೂ ವಾಮನ ಅಂದರೂ ಒಂದೇ ಅರ್ಥ ಗಿಡ್ಡಾಗಿರುವವನು, ಉದ್ದವಾಗಿಲ್ಲದವನು. ಹ್ರಸ್ವ ಎಂದರೆ ಚಿಕ್ಕ ವಯಸಿನವನೂ ಎಂತಲೂ ಆಗುತ್ತದೆ.
ಹ್ರಸ್ವ ಎಂದರೆ ತನ್ನೊಳಗೇ ಇರುವವನು ಎನ್ನುವುದು ರಹಸ್ಯಾರ್ಥ.
ಸ್ವಯಂ ಎನ್ನುವುದನ್ನು ಆರಾಧಿಸುವುದು ಪ್ರಾಣ ಮತ್ತು ಅಪಾನಗಳ ನಡುವಣ ಹೃದಯಮಧ್ಯದಲ್ಲಿ. ಆ ಸ್ವಯಂ ಎನ್ನುವುದು ವಾಮನ. ಈ ಮಂತ್ರವು ರುದ್ರನನ್ನು ಧ್ಯಾನದ ಮೂಲಕ ತನ್ನೊಳಗೇ ತಾನು ಕಾಣಬೇಕು ಎಂಬುದನ್ನು ಹೇಳುತ್ತದೆ.
ಹ್ರಸ್ವನೂ ವಾಮನನೂ ಆದ ರುದ್ರನೇ ನಿನಗೆ ನಮಸ್ಕಾರಗಳು
ನಮೋ ಬೃಹತೇ ಚ ವರ್ಷಯಾಯ ಚ
ಬೃಹತ್ ಎನ್ನುವುದು ಹಲವಾರು ಅರ್ಥಗಳನ್ನು ಕೊಡುತ್ತದೆ. ದೊಡ್ಡದಾದ್ದು, ಗಟ್ಟಿಯಾದ್ದು, ಉದ್ದವಾದ್ದು, ಹೀಗೆ. ಬೃಹತ್ ಎನ್ನುವುದು ಬ್ರಹ್ಮ . ಅದಕ್ಕಿಂತ ದೊಡ್ಡದು ಯಾವುದೂ ಇಲ್ಲಾ. ಅಂದರೆ ರುದ್ರನು ಸರ್ವವ್ಯಾಪಿ ಎನ್ನುವುದೇ ಅರ್ಥ. ನಾವು ಶ್ರೀ ಪುರಂದರದಾಸರ ಜಗದೋದ್ಧಾರನಾ ಆಡಿಸದಳೆಶೋದೆ ಕೀರ್ತನೆ ಯನ್ನು ಕೇಳಿದ್ದೇವೆ. ಈ ಕೀರ್ತನೆಯಲ್ಲಿ ಅಣೋರಣೀಯನಾ ಮಹಿತೋ ಮಹೀಮನಾ ಎನ್ನುವ ಸಾಲುಗಳು ಬರ್ತವೆ. ಈ ಸಾಲುಗಳನ್ನು ಶ್ರೀ ಪುರಂದರದಾಸರು ಕಠೋಪನಿಷತ್ತಿನ ವಾಕ್ಯ “ ಅಣೋರಣೀಯಾನ್ಮಹತೋ ಮಹೀಯಾನಾತ್ಮ ದಿಂದ ಪಡೆದುಕೊಂಡಿರುವುದು ಎಂದು ನನಗೆ ಈಗಷ್ಟೆ ತಿಳಿದಿದ್ದು.
ನಾನು ಶ್ರೀ ರುದ್ರದ ಮೊದಲನೇ ಅನುವಾಕದ ಬಗ್ಗೆ ಹೇಳುವಾಗಲೇ, ನಾನು ಇಲ್ಲಿ ಹೇಳಿರುವುದು ಹಲವಾರು ಮೂಲಗಳಿಂದ ಸಂಗ್ರಹಿಸಿ ನನಗೆ ಅರ್ಥವಾದಂತೆ ಹೇಳಲು ಪ್ರಯತ್ನ ಪಟ್ಟಿದ್ದೇನೆ ಎಂದು ಯಾವ ಹಮ್ಮು ಬಿಮ್ಮುಗಳಿಲ್ಲದೆ, ಯಾವುದೇ ಸಂಕೋಚವಿಲ್ಲದೆ ಒಪ್ಪಿಕೊಂಡಿದ್ದೇನೆ ಎಂಬುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಲು ಬಯಸುತ್ತೇನೆ. ಶ್ರೀ ಅಭಿನವ ಶಂಕರರ ಸಂಸ್ಕೃತ ರುದ್ರಭಾಷ್ಯ ನನ್ನ ನೆರವಿಗೆ ಬಂದಿದೆ. ಈ ಅಭಿನವ ಶಂಕರರು ಯಾರು ಎಂಬ ಬಗ್ಗೆ ಖಚಿತವಾಗಿ ಹೇಳಲಾಗುತ್ತಿಲ್ಲಾ ಎಂಬುದನ್ನು ಈ ಗ್ರಂಥವನ್ನು 1913 ರಲ್ಲಿ ಮುದ್ರಣ ಮಾಡಿರುವ ಶ್ರೀರಂಗಂ ನ ಶ್ರೀ ವಾಣೀವಿಲಾಸ ಪ್ರೆಸ್ ಅವರು ತಮ್ಮ ಮುನ್ನುಡಿಯಲ್ಲಿ ತಿಳಿಸಿದ್ದಾರಲ್ಲದೆ ಶ್ರೀ ವಿದ್ಯಾರಣ್ಯರೂ ಸಹಾ ಶ್ರೀ ರುದ್ರ ಕ್ಕೆ ಭಾಷ್ಯ ಬರೆದಿದ್ದಾರೆ ಎಂಬುದರ ಮಾಹಿತಿ ಯನ್ನೂ ನೀಡಿದ್ದಾರೆ.
ವಿಷಯಾಂತರವಾಯಿತು, ಕಠೋಪನಿಷತ್ ಮತ್ತು ಶ್ರೀ ಪುರಂದರ ದಾಸರ ಕೀರ್ತನೆ ಯಲ್ಲಿ ಸಾಮ್ಯತೆ ಈ ವಿಷಯಾಂತರಕ್ಕೆ ಕಾರಣವಾಯಿತು.
ರುದ್ರನು ಚಿಕ್ಕದರಲ್ಲಿ ಅತೀ ಚಿಕ್ಕವನು ಮತ್ತು ದೊಡ್ಡದರಲ್ಲಿ ಹೆಚ್ಚು ದೊಡ್ಡವನು. ಈ ಬ್ರಹ್ಮಾಂಡದಲ್ಲಿ ರುದ್ರನಿಗಿಂತ ಚಿಕ್ಕದು ಯಾವುದೂ ಇಲ್ಲಾ ಅಂತೆಯೇ ರುದ್ರನಿಗಿಂತ ದೊಡ್ಡದು, ಬೃಹತ್ತಾದ್ದು ಯಾವುದೂ ಇಲ್ಲಾ. ಇದು ಅಣೋರಣೀಯಾನ್ಮಹತೋ ಮಹೀಯಾನಾತ್ಮ ಎಂಬ ಕಠೋಪನಿಶದ್ ವಾಕ್ಯದ ಅರ್ಥ.
ವರ್ಷಿಯಾಯ ಅಂದರೆ ಮಳೆಯನ್ನು ಸುರಿಸುವವನು. ಯಾವ ಮಳೆ? ಅದು ಅವನ ವಿವಿಧ ಶಕ್ತಿಗಳನ್ನು ನಮ್ಮ ಮೇಲೆ ಸಿಂಪಡಿಸುವ, ಸುರಿಸುವ ಮಳೆ. ರುದ್ರನು ಎಲ್ಲಾ ಶಕ್ತಿಗಳ ಮೂಲ ಅವನ ಗಣಗಳು ಈ ಶಕ್ತಿ ಗಳ ಪ್ರತಿನಿಧಿಗಳು. ಈ ಶಕ್ತಿಗಳೇ ಬ್ರಹ್ಮಾಂಡದ ಆಧಾರ. ಅಣುವಿನಲ್ಲಿಯ ಅಣುವೂ ಮಹತ್ತಿನಲ್ಲಿಯ ಮಹತ್ತೂ ಆಗಿರುವ ರುದ್ರನೇ ನಿನಗೆ ನಮಸ್ಕಾರಗಳು. ನಿನ್ನ ಶಕ್ತಿಯನ್ನು ಸದಾ ನಮಗೆ ನೀಡುತ್ತಿರುವ ರುದ್ರನೇ ನಿನಗೆ ನಮಸ್ಕಾರಗಳು.
ನಮೋ ವೃದ್ಧಾಯ ಚ ಸಂವೃಧ್ವನೇ ಚ
ವೃದ್ಧನ ರೂಪದಲ್ಲಿ ತೋರುತ್ತಿರುವ ರುದ್ರನೇ ನಿನಗೆ ನಮಸ್ಕಾರಗಳು. ವೃದ್ಧಿಯಾಗಿಯೂ ಸಮೃದ್ಧಿಯಾಗಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ವೃದ್ಧ ಅಂದರೆ ವಯಸ್ಸಾದವನು ಅಂತ ಅಲ್ಲಾ. ಅವನು ಆದಿ. ಬ್ರಹ್ಮಾಂಡದ ಸೃಷ್ಟಿಗೆ ಮೊದಲೇ ಇದ್ದವನು. ಸಂವೃದ್ಧ ಎಂದರೆ ಅವನ ಜ್ನಾನದಿಂದ ಅವನ ಕೀರ್ತಿ ಹೆಚ್ಚಾಗಿರುವವನು. ಜ್ನಾನದ ಮೂಲವೇ ತಾನಾಗಿರುವವನು.
ಪರಸ್ತಸ್ಮಾತ್ತು ಭಾವೋsನ್ಯೋsವ್ತ್ಯಕ್ತೋsವ್ಯಕ್ತಾತ್ ಸನಾತನಃ
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ
ಅವ್ಯಕ್ತೋsಕ್ಷರ ಇತ್ಯುಕ್ತಸ್ತಮಾಹುಃ ಪರಮಾಂ ಗತಿಮ್
ಯಂ ಪ್ರಾಪ್ಯ ನ ನಿವರ್ತಂತೇ ತದ್ಧಾಮ ಪರಮಂ ಮಮ
ಇವು ಶ್ರೀ ಕೃಷ್ಣನ ಮಾತುಗಳು – ಭಗವದ್ಗೀತೆಯ ಅಧ್ಯಾಯ 8ರಲ್ಲಿನ 20 ಮತ್ತು 21 ನೆಯ ಶ್ಲೋಕಗಳು.
ಅವ್ಯಕ್ತಕ್ಕಿಂತಲೂ ಸಹ ಅತ್ಯುತ್ತಮವಾದ ಬೇರೊಂದು ವಿಲಕ್ಷಣವಾದ ಯಾವ ಸನಾತನ ಅವ್ಯಕ್ತ ಭಾವ ಇದೆಯೋ ಆ ಸಚ್ಚಿದಾನಂದ ಘನ ಪೂರ್ಣ ಬ್ರಹ್ಮ ಪರಮಾತ್ಮನು, ಎಲ್ಲಾ ಪ್ರಾಣಿಗಳು ನಾಶವಾಗಿ ಹೋದರೂ ಸಹ ಅವನು ನಾಶವಾಗುವುದಿಲ್ಲಾ.
ಯಾವುದನ್ನು ಅವ್ಯಕ್ತ, ಅಕ್ಷರ ಎಂದು ಹೇಳಲಾಗಿದೆಯೋ ಆ ಅಕ್ಷರ ವೆಂಬ ಅವ್ಯಕ್ತ ಭಾವವನ್ನು ಪರಮ ಗತಿ ಎಂದು ಹೇಳುತ್ತಾರೆ, ಹಾಗೂ ಯಾವ ಆ ಸನಾತನ ಅವ್ಯಕ್ತಭಾವವನ್ನು ಪಡೆದುಕೊಂಡವನು ಹಿಂದಕ್ಕೆ ಬರುವುದಿಲ್ಲವೋ ಅಂತಹ ಅದೇ ನನ್ನ ಪರಮ ಧಾಮ ಅರ್ಥಾತ್ ಸರ್ವೋಚ್ಛ ಸ್ಥಾನ.
ಶಕ್ತಿಯು ಶಿವನನ್ನು ಅನೇಕ ಪ್ರಶ್ನೆಗಳನ್ನು ಕೇಳುತ್ತಾಳೆ. ಈ ಪ್ರಶ್ನೆಗಳು ಮತ್ತು ಶಿವನ ಉತ್ತರಗಳೇ ತಂತ್ರ ಶಾಸ್ತ್ರಗಳು.
ಶಕ್ತಿಯು ಶಿವನ ಪಕ್ಕದಲ್ಲಿ ಕುಳಿತು ಕೇಳುವ ಪ್ರಶ್ನೆಗಳು. ಇವು ಆರಂಭಿಕ ಅಥವಾ ಪೀಠಿಕಾ ರೂಪದ ಪ್ರಶ್ನೆಗಳು. ಶಿವನ ತೊಡೆಯ ಮೇಲೆ ಆಸೀನಳಾಗಿ ಕೇಳುವ ಪ್ರಶ್ನೆಗಳು ಶಿವನನ್ನೇ ತಾನು ಹೊಂದುವ ಅಥವಾ ತಲುಪುವ ಪ್ರಶ್ನೆಗಳು. ಈ ಪ್ರಶ್ನೆಗಳಿಗೆ ಸಿಕ್ಕ ಉತ್ತರಗಳಿಂದ ತಾನೇ ಶಿವನಲ್ಲಿ ವಿಲೀನವಾಗಿ ತಾನೇ ಶಿವನಾಗಿಬಿಡುತ್ತಾಳೆ. ಇದು ಅರ್ಧನಾರೀಶ್ವರ ರೂಪ. ಈ ರೂಪವು ಲಿಂಗ ರೂಪವನ್ನು ಪಡೆದುಕೊಳ್ಳುವ ಹಾದಿ ತೋರಿಸುತ್ತದೆ. ಆ ಹಾದಿಯನ್ನು ಹಿಡಿದು ಲಿಂಗರೂಪವಾಗುವುದೇ ಅಂತಿಮ ವಾಸ್ತವತೆ, ಸತ್ಯತೆ.
ಶಕ್ತಿಯು ಶಿವನ ಪಕ್ಕದಲ್ಲಿ ಕುಳಿತಾಗ ಶಿವನಿಗೂ ತನಗೂ ಮಧ್ಯೆ ಅಂತರ ಇರುತ್ತದೆ. ಇದು ಆದ್ಯಾತ್ಮದ ಪ್ರಾಥಮಿಕ ಹಂತ. ಇಲ್ಲಿ ಸಿಕ್ಕ ಅದ್ವೈತ ಜ್ನಾನದಿಂದ ಶಕ್ತಿಯು ಶಿವನಿಗೆ ಹತ್ತಿರವಾಗಿ ತೊಡೆಯನ್ನು ಏರುತ್ತಾಳೆ. ಅಲ್ಲಿಂದ ನೇರವಾಗಿ ಶಿವನೊಂದಿಗೆ ಒಂದಾಗಿ ಹೋಗುತ್ತಾಳೆ. ಜೀವಾತ್ಮನು ಈ ಸ್ಥಿತಿಯನ್ನು ತಲುಪಿದಾಗ ವೈಯಕ್ತಿಕ ಪ್ರಜ್ನೆಯು ದ್ವೈತ ಭಾವವನ್ನು ಕಳೆದುಕೊಳ್ಳುತ್ತದೆ ನಂತರ ನಾನು – ಅದು ಆಗಿ ಪರಿವರ್ತನ ಆಗಿಬಿಡುತ್ತದೆ. ತತ್ವಮಸಿ – ನೀನು ಅದು.
ಶಕ್ತಿಯು ಶಿವನನ್ನು ಪ್ರಶ್ನೆ ಮಾಡುವುದು, ಅವನಲ್ಲೇ ಸೇರಿಹೋಗಿ ಒಂದಾಗುವುದು- ಇದೇ ಹನ್ನೆರಡನೇ ಶತಮಾನದ ಮಹಾಶಿವಶರಣೆ ಅಕ್ಕಮಹಾದೇವಿಯ ’ ಶರಣ ಸತಿ ಲಿಂಗ ಪತಿ’ ಎಂಬ ತತ್ವ.
ನಮೋ ಅಗ್ರಿಯಾಯ ಚ ಪ್ರಥಮಾಯ ಚ
ಅಗ್ರಗಣ್ಯನೂ ಮತ್ತು ಎಲ್ಲದರ ಮುಖ್ಯಸ್ಥನೂ ಪ್ರಥಮನೂ ಆದ ರುದ್ರನೇ ನಿನಗೇ ನಮಸ್ಕಾರಗಳು.
ಅಗ್ರಗಣ್ಯ ಎಂದರೆ ಬ್ರಹ್ಮ, ವಿಷ್ಣು ರುದ್ರರನ್ನು ಹೊರತು ಪಡಿಸಿ ಮೊದಲು ಹುಟ್ಟಿದ ಜೀವಾತ್ಮ. ವೇದಾಂತ ಪರಿಭಾಷಾ ಎಂಬ 17 ನೇ ಶತಮಾನದ ಗ್ರಂಥ ಈ ಅಗ್ರಗಣ್ಯ ಎಂಬುದನ್ನು ಅಂದರೆ ಮೊದಲು ಹುಟ್ಟಿದ, ಜೀವ ಪಡೆದ ಜೀವಾತ್ಮ ನನ್ನು ಹಿರಣ್ಯಗರ್ಭ ಎಂದು ಕರೆದು ಅದನ್ನು ವಿವರಿಸಿದೆಯಂತೆ. ಈ ಹಿರಣ್ಯಗರ್ಭ ದಿಂದ ಎಲ್ಲ ಜೀವಿಗಳ ಉತ್ಪತ್ತಿಯಾಯಿತು. ಹಾಗಾಗಿ ಈ ಹಿರಣ್ಯಗರ್ಭದ ಜೀವಿಯ ಸೂಕ್ಷ್ಮ ಶರೀರವು ’ಮಹತ್” ಎಂದು ಕರೆಯಲ್ಪಟ್ಟರೆ, ಈ ಹಿರಣ್ಯ ಗರ್ಭದಿಂದ ಜನಿಸಿದ ಜೀವಿಗಳ ಸೂಕ್ಷ್ಮ ಶರೀರವನ್ನು ’ಅಹಂಕಾರ’ ಎಂದು ಕರೆಯಲಾಗಿದೆ.
ನಮ್ಮ ಮನೆಗಳಲ್ಲಿ ಯಾವುದಾದರೂ ಹೋಮ ಹವನಗಳನ್ನು ವೈದಿಕರಿಂದ ಮಾಡಿಸಿ ಕಡೆಗೆ ಅವರಿಗೆ ದಕ್ಷಿಣೆ ನೀಡುವಾಗ ’
ಹಿರಣ್ಯ ಗರ್ಭ ಗರ್ಭಸ್ಥಂ ಹೇಮಬೀಜಂ ವಿಭಾವಸು
ಅನಂತ ಪುಣ್ಯ ಫಲದಂ ಅಗಶಾಂತಿಂ ಪ್ರಯಚ್ಛಮೇ
ಆಚಾರ್ಯಯೇ ತುಭ್ಯಮಹಂ ಸಂಪ್ರಪತೇ ನಮಮ ನಮಮ
ಎಂದು ಅವರೇ ಹೇಳಿ ನಮ್ಮಿಂದ ದಕ್ಷಿಣೆ ಪಡೆದು ಅಕ್ಷತೆಗಳಿಂದ ನಮಗೆ ಆಶೀರ್ವಾದವನ್ನೂ ಮಾಡುತ್ತಾರೆ.
ನಿಜವಾಗಲೂ ಆಗಬೇಕಾದ್ದು ಏನು ಅಂದರೆ ಈ ಮಂತ್ರವನ್ನು ನಾವು ಹೇಳುತ್ತಾ ವೈದಿಕರಿಗೆ ದಕ್ಷಿಣೆಯನ್ನು ಕೊಟ್ಟು ಆಶೀರ್ವಾದ ಪಡೆಯಬೇಕು.
’ಹಿರಣ್ಯಗರ್ಭದಿಂದ ಹುಟ್ಟಿರುವ ನಾನು ಈ ಬಂಗಾರದ ಬೀಜವನ್ನು ಆಚಾರ್ಯರಾದ ನಿಮಗೆ ಅತ್ಯಂತ ನಮ್ರತೆಯಿಂದ ಸಮರ್ಪಿಸುತ್ತಿದ್ದೇನೆ. ನನ್ನ ಎಲ್ಲ ಪಾಪಗಳನ್ನೂ ದಮನಗೊಳಿಸಿ ಅನಂತವಾದ ಪುಣ್ಯವು ಪ್ರಾಪ್ತಿಯಾಗುವಂತೆ ಆಶೀರ್ವದಿಸಿರಿ.
ಈಗ ನಮಗೆ ಅರ್ಥ ಆಗಿದೆ ಹಿರಣ್ಯಗರ್ಭ ಅಂದರೆ ಏನು ಎಂದು. ನಾವೆಲ್ಲರೂ ಹಿರಣ್ಯ ಗರ್ಭದಿಂದ ಬಂದವರೇ.
ನಮೋ ಆಶವೇ ಚ ವೀಜಿರಾಯ ಚ
ಎಲ್ಲೆಡೆ ವ್ಯಾಪಿಸಿರುವ ಮತ್ತು ವೇಗವಾಗಿ ಚಲಿಸುವ ರುದ್ರನೇ ನಿನಗೆ ನಮಸ್ಕಾರಗಳು. ರುದ್ರ ಸರ್ವವ್ಯಾಪಿ ಎನ್ನುವದನ್ನು ಪದೇ ಪದೇ ಶ್ರೀ ರುದ್ರವು ಹೇಳುತ್ತಲೇ ಇದೆ.
ಬ್ರಹ್ಮನ್ ಎಂಬ ಪರವಸ್ತು ಚಲನೆಯೇ ಇಲ್ಲದ್ದು ಆದರೂ ಅದು ಮನಸ್ಸಿಗಿಂತಲೂ ವೇಗವಾಗಿ ಚಲಿಸಬಲ್ಲುದು ಎಂದು ಈಶೋಪನಿಷತ್ತಿನಲ್ಲಿ ಹೇಳಲಾಗಿದೆಯಂತೆ. ಹಾಗಾಗಿ ಈ ವೇಗವನ್ನು ವಿವರಿಸಲು ಅಸಾಧ್ಯ ಏಕೆಂದರೆ, ಅದು ಕಾಲ ಮತ್ತು ದೇಶಗಳನ್ನು ಮೀರಿದ್ದು. (Beyond time & space) ಆದರೂ ಮಾಯೆಯ ಪ್ರಭಾವಕ್ಕೊಳಪಟ್ಟು ದೇಶಕಾಲಗಳಿಗೆ ಒಳಪಟ್ಟಂತೆ ತೋರುತ್ತದೆ.
ಸುಲಭವಾಗಿ ಹೇಳಬೇಕೆಂದರೆ ಬ್ರಹ್ಮನ್ ಎಂಬ ಪರವಸ್ತು ಸಗುಣ ( ಗುಣಲಕ್ಷಣ ಹೊಂದಿರುವ) ಮತ್ತು ನಿರ್ಗುಣ ( ಗುಣಲಕ್ಷಣ ಗಳಿಲ್ಲದ) ಎರಡು ಅಂಶಗಳಿಂದ ಕೂಡಿರುವಂತಹದು. .

ನಮಃ ಶೀಘ್ರಿಯಾಯ ಚ ಶೀಭ್ಯಾಯ ಚ ವೇಗವಾಗಿ ಹರಿಯುವ ನೀರಿನ ರೂಪದಲ್ಲಿರುವ ರುದ್ರನೇ ಮತ್ತು ನೀರಿನಲ್ಲಿಯೇ ಇರುವ ರುದ್ರನೇ ನಿನಗೆ ನಮಸ್ಕಾರಗಳು
ರುದ್ರನು ನದಿಗಳಲ್ಲಿ ಹರಿಯುವ ನೀರಿನಲ್ಲಿಯೂ ನೀರಿಗೆ ಅಧಿಪತಿಯೂ ಆಗಿದ್ದಾನೆ.

ನಮಃ ಊರ್ಮ್ಯಾಯ ಚ ವಸ್ವನ್ಯಾಯ ಚ
ನೀರಿನ ಅಲೆಗಳ ರೂಪದಲ್ಲಿರುವ ಮತ್ತು ಶಾಂತ ವಾಗಿರುವ ನೀರಿನ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು.
ಬಿಸಿ, ಚಳಿ, ಆಸೆ, ಭ್ರಮೆ, ಹಸಿವು ಮತ್ತು ದಾಹ ಇವು ನಮ್ಮ ಅಸ್ಥಿತ್ವದ ಅರು ಆಲೆಗಳು.
ಹಸಿವು, ದಾಹ, ಕ್ಷಯಿಸುವುದು ( decay), ಸಾವು, ದುಃಖ ಮತ್ತು ಭ್ರಮೆ ಇವು ಕೂಡಾ ನಮ್ಮ ಅಸ್ಥಿತ್ವದ ಆರು ಅಲೆಗಳು ಎಂಬ ಇನ್ನೊಂದು ನಿರೂಪಣೆಯೂ ಇದೆ.
ರುದ್ರನು ನಮ್ಮ ಅಸ್ಥಿತ್ವದ ಈ ಆರು ಅಲೆಗಳಲ್ಲೂ ಇದ್ದಾನೆ. ಶಾಂತವಾಗಿರುವ ನೀರು ಅಂದರೆ ಶುದ್ಧ ವಾಗಿರುವ ಮನಸ್ಸು. ಅವನ ಅನುಗ್ರಹದಿಂದ ಮನಸ್ಸು ಶುದ್ಧವಾದರೆ, ಈ ಎಲ್ಲಾ ಆರು ಅಲೆಗಳನ್ನು ಜಯಿಸುವುದು, ಗೆಲ್ಲುವುದು ಸಾಧ್ಯ. ಒಬ್ಬ ಪರಿಪೂರ್ಣ ಯೋಗಿ ಈ ಗುಣಗಳನ್ನು ಹೊಂದಿರುತ್ತಾನೆ ಎಕೆಂದರೆ ಅತನು ನಿರಂತರವಾಗಿ, ಶಾಶ್ವತವಾಗಿ, ಚಿರಂತನವಾಗಿ ಬ್ರಹ್ಮನ್ ಒಂದಿಗೆ ಸಂಪರ್ಕದಲ್ಲಿರುತ್ತಾನೆ.

ನಮಃ ಸ್ತ್ರೋತಸ್ಯಾಯ ಚ ದ್ವೀಪ್ಯಾಯ ಚ ಹೊಳೆಯ ರೂಪದಲ್ಲಿಯೂ ಏಕಾಂತವಾಗಿ ದ್ವೀಪದಲ್ಲಿಯೂ ಇರುವ ರುದ್ರನೇ ನಿನಗೆ ನಮಸ್ಕಾರಗಳು.
ಹೊಳೆ ಎಂದರೆ ಸತತವಾಗಿ ಹರಿಯುತ್ತಿರುವ ಜ್ನಾನ. ಈ ಜ್ನಾನವು ಜೀವಿಯನ್ನು ಏಕಾಂತದೆಡೆಗೆ ಕೊಂಡೊಯ್ದು ರುದ್ರನನ್ನು ಕುರಿತು ಧ್ಯಾನ ಮತ್ತು ತಪಸ್ಸನ್ನು ಮಾಡುವಂತಾಗಿ ರುದ್ರನನ್ನೇ ತಲುಪುತ್ತಾನೆ, ಹೊಂದುತ್ತಾನೆ.
ಇಲ್ಲಿಗೆ ಐದನೆಯ ಅನುವಾಕ ಸಂಪನ್ನವಾಗುತ್ತಿದೆ.

ಲೋಕಾ ಸಮಸ್ತಾ ಸುಖಿನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಓಂ ಶಾಂತಿಃ ಓಂ ಶಾಂತಿಃ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: