ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಮೂರನೇ ಅನುವಾಕವು 17 ಮಂತ್ರಗಳಿಂದ ಕೂಡಿದೆ. ಈ ಎಲ್ಲಾ ಮಂತ್ರಗಳೂ ನಮಃ ಎಂದು ಆರಂಭವಾಗಿ ನಮೋ ಎಂದು ಕೊನೆಯಾಗುತ್ತವೆ. ಹಿಂದಿನ ಅನುವಾಕದ ಮಂತ್ರಗಳೂ ಸಹಾ ನಮೋ ಎಂತಲೇ ಕೊನೆಯಾಗಿವೆ. ರುದ್ರನ ಸರ್ವವ್ಯಾಪಿತ್ವದ ಬಗ್ಗೆ ಹೇಳಿರುವ 1 ನೇ ಮಂತ್ರ ಮೊದಲ್ಗೊಂಡು 8 ನೇ ಮಂತ್ರಗಳು ಕಳ್ಳರ ಬಗ್ಗೆ ಯೇ ಹೇಳಿವೆ ಏಕೆಂದರೆ ಆತ್ಮಗಳಲ್ಲಿ ಒಳ್ಳೆಯ ಆತ್ಮ ಅಥವಾ ಕೆಟ್ಟ ಆತ್ಮ ಎಂಬ ಭೇದ ಇಲ್ಲಾ. ಆತ್ಮವು ಎಲ್ಲರಲ್ಲಿಯೂ ಒಂದೇ ಆಗಿದೆ. ಒಬ್ಬ ವ್ಯಕ್ತಿಯ ಗುಣಮಟ್ಟ ಆತನ ಮನಸ್ಸು ಮತ್ತು ಕರ್ಮಗಳ ಮೂಲಕ ನಿರ್ಣಯಿಸಲಾಗುತ್ತದೆ. ಕರ್ಮವು ವ್ಯಕ್ತಿಯ ಮನಸ್ಸಿನಲ್ಲಿ ಮೂರು ಗುಣಗಳ ಮೂಲಕ ಪ್ರಕಟವಾಗುತ್ತದೆ. ಅಂತಿಮವಾಗಿ ಮನಸ್ಸು ಒಬ್ಬ ವ್ಯಕ್ತಿಯನ್ನು ಒಳ್ಲೆಯವನನ್ನಾಗಿ ಅಥವಾ ಕೆಟ್ಟವನನ್ನಾಗಿ ಮಾಡುತ್ತದೆ. ವ್ಯಕ್ತಿ ಒಳ್ಳೆಯವನಿರಲಿ, ಕೆಟ್ಟವನಿರಲಿ ಆತ್ಮ ಎಂದಿಗೂ ಪರಿಶುದ್ಧವೇ. ಎಲ್ಲರ ಆತ್ಮವೂ ರುದ್ರನೇ.
ನಮಃ ಸಹ’ಮಾನಾಯ ನಿವ್ಯಾಧಿನ’ ಆವ್ಯಾಧಿನೀ’ನಾಂ ಪತ’ಯೇ ನಮೋ ನಮಃ’ ಕಕುಭಾಯ’ ನಿಷಂಗಿಣೇ” ಸ್ತೇನಾನಾಂಪತ’ಯೇ ನಮೋ ನಮೋ’ ನಿಷಂಗಿಣ’ ಇಷುಧಿಮತೇ’ ತಸ್ಕ’ರಾಣಾಂ ಪತ’ಯೇ ನಮೋ ನಮೋ ವಂಚ’ತೇ ಪರಿವಂಚ’ತೇ ಸ್ತಾಯೂನಾಂ ಪತ’ಯೇ ನಮೋ ನಮೋ’ ನಿಚೇರವೇ’ ಪರಿಚರಾಯಾರ’ಣ್ಯಾನಾಂ ಪತ’ಯೇ ನಮೋ ನಮಃ’ ಸೃಕಾವಿಭ್ಯೋಜಿಘಾಗ್‍ಮ್’ಸದ್ಭ್ಯೋ ಮುಷ್ಣತಾಂ ಪತ’ಯೇ ನಮೋ ನಮೋ’உಸಿಮದ್ಭ್ಯೋ ನಕ್ತಂಚರ’ದ್ಭ್ಯಃ ಪ್ರಕೃಂತಾನಾಂ ಪತ’ಯೇನಮೋ ನಮ’ ಉಷ್ಣೀಷಿನೇ’ ಗಿರಿಚರಾಯ’ ‘ಕುಲುಂಚಾನಾಂ ಪತ’ಯೇ ನಮೋ ನಮ ಇಷು’ಮದ್ಭ್ಯೋ ಧನ್ವಾವಿಭ್ಯ’ಶ್ಚ ವೋನಮೋ ನಮ’ ಆತನ್-ವಾನೇಭ್ಯಃ’ ಪ್ರತಿದಧಾ’ನೇಭ್ಯಶ್ಚ ವೋ ನಮೋ ನಮ’ ಆಯಚ್ಛ’ದ್ಭ್ಯೋ ವಿಸೃಜದ್-ಭ್ಯ’ಶ್ಚ ವೋ ನಮೋನಮೋஉಸ್ಸ’ದ್ಭ್ಯೋ ವಿದ್ಯ’ದ್-ಭ್ಯಶ್ಚ ವೋ ನಮೋ ನಮ ಆಸೀ’ನೇಭ್ಯಃ ಶಯಾ’ನೇಭ್ಯಶ್ಚ ವೋ ನಮೋ ನಮಃ’ ಸ್ವಪದ್ಭ್ಯೋಜಾಗ್ರ’ದ್-ಭ್ಯಶ್ಚ ವೋ ನಮೋ ನಮಸ್ತಿಷ್ಠ’ದ್ಭ್ಯೋ ಧಾವ’ದ್-ಭ್ಯಶ್ಚ ವೋ ನಮೋ ನಮಃ’ ಸಭಾಭ್ಯಃ’ ಸಭಾಪ’ತಿಭ್ಯಶ್ಚ ವೋನಮೋ ನಮೋ ಅಶ್ವೇಭ್ಯೋஉಶ್ವ’ಪತಿಭ್ಯಶ್ಚ ವೋ ನಮಃ’
ನಮಃ ಸಹಮಾನಾಯ ನಿವ್ಯಾಧಿನ ಆವ್ಯಾಧಿನೀನಾಂ ಪತಯೇ ನಮೋ ನಮಃ
ಕೆಟ್ಟದ್ದನ್ನು ಕೂಡ ಕ್ಷಮಿಸಿ ಬಿಡುವ ರುದ್ರನಿಗೆ ನಮಸ್ಕಾರಗಳು. ಶತ್ರುಗಳನ್ನು ಸದೆಬಡಿಯುವ ಹಾಗೂ ದುಷ್ಟ ದೈವಗಳಿಗೆ ಮುಖ್ಯಸ್ಥನೂ ಆದ ರುದ್ರನೇ ನಿನಗೆ ನಮಸ್ಕಾರಗಳು.
ರುದ್ರನಿಗೆ ಶರಣಾಗತನಾದ ವ್ಯಕ್ತಿಯಿಂದ ಅರಿಯದೆ ಅಗುವ ತಪ್ಪುಗಳನ್ನು ಸಹಾ ರುದ್ರನು ಕ್ಷಮಿಸಿ ಬಿಡುತ್ತಾನೆ, ಹಾಗೆಂದ ಮಾತ್ರಕ್ಕೆ ತಪ್ಪುಮಾಡಲು ರುದ್ರನ ಅನುಮತಿ ಇದೆ ಎಂದು ಭಾವಿಸಿದರೆ ಶಿಕ್ಷೆ ಕಟ್ಟಿಟ್ಟದ್ದು. ರುದ್ರನು ತನ್ನ ಭಕ್ತರನ್ನು ಒಳಗಿನ ಮತ್ತು ಹೊರಗಿನ ಶತೃಗಳನ್ನು ಸದಾ ರಕ್ಶಿಸುತ್ತಾನೆ. ರೋಗ ರುಜಿನಗಳು, ಪ್ರಾಕೃತಿಕ ಪ್ರಕೋಪಗಳೂ ಸಹಾ ನಮ್ಮ ಶತೃಗಳೇ. ಹಲವಾರು ದೈವ ಗಳ ಮುನಿಸಿನಿಂದ ಪ್ರಾಕೃತಿಕ ಪ್ರಕೋಪಗಳು ಉಂಟಾಗುತ್ತವೆ. ಅಂತಹ ದೈವಗಳನ್ನೂ ರುದ್ರನೂ ನಾಶಗೊಳಿಸುತ್ತಾನೆ. ನಿನಗೆ ಶರಣಾಗಿದ್ದೇವೆ ನಮ್ಮನ್ನು ರಕ್ಷಿಸು. ರುದ್ರನೇ ನಿನಗೆ ನಮಸ್ಕಾರಗಳು.
ನಮಃ ಕಕುಭಾಯ ನಿಷಂಗಿಣೇ ಸ್ತೇನಾನಾಂ ಪತಯೇ ನಮಃ
ಕತ್ತಿಯನ್ನು ಹಿಡಿದಿರುವ ಓ ಸರ್ವೋಚ್ಛನೇ ಹಾಗೂ ಎಲ್ಲ ಕಳ್ಳರಿಗೆ ಮುಖ್ಯಸ್ಥನಾದ ರುದ್ರನೇ ನಿನಗೆ ನಮಸ್ಕಾರಗಳು.
ಸ್ತೇನಾ ಅಂದರೆ ಕಳ್ಳ. ಕಳ್ಳರನ್ನು ರಕ್ಷಿಸುವವನೂ ಕಳ್ಳರ ಮುಖ್ಯಸ್ಥನೂ, ತನ್ನ ಭಕ್ತರನ್ನು ಈ ಕಳ್ಳರ ಭಾದೆಯಿಂದ ತನ್ನ ಭಕ್ತರನ್ನು ರಕ್ಷಿಸುವವನೂ ರುದ್ರನೇ. ಈ ಮಂತ್ರ ’ಬ್ರಹ್ಮವು” ಒಂದೇ ಅದರಲ್ಲಿ ಕೆಟ್ಟದ್ದು ಬೇರೆ ಒಳ್ಳೆಯದು ಬೇರೆ ಎಂಬ ಬ್ರಹ್ಮ ಗಳು ಇಲ್ಲಾ ಎಂಬುದನ್ನು ಈ ಮಂತ್ರ ಸ್ಪಷ್ಟ ವಾಗಿ ಹೇಳುತ್ತಿದೆ.
ನಮೋ ನಿಷಂಗಿಣ ಇಷುಧಿಮತೆ ತಸ್ಕರಾಣಾಂ ಪತಯೇ ನಮಃ
ಯಾರ ಬಿಲ್ಲು , ಬಾಣವನ್ನು ಬಿಡಲು ಸಿದ್ಧವಾಗಿದೆಯೋ, ಯಾರು ಬತ್ತಳಿಕೆಯನ್ನು ಧರಿಸಿದ್ದಾರೋ ಮತ್ತು ಯಾರು ಡಕಾಯತರ ಅಧಿಪತಿಯೋ ಅಂತಹ ರುದ್ರನಿಗೆ ನಮಸ್ಕಾರಗಳು
ಶ್ರೀ ರುದ್ರದಲ್ಲಿ, ಬಿಲ್ಲು, ಬಾಣ ಬತ್ತಳಿಕೆ ಗಳ ಬಗ್ಗೆ ಹಲವು ಮಂತ್ರಗಳಿದ್ದರೂ ಪ್ರತಿಯೊಂದು ಮಂತ್ರವೂ ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ನೀಡುತ್ತವೆ. ಹಿಂದಿನ ಮಂತ್ರದಲ್ಲಿ ಸ್ತೇನಾ ಎಂದರೆ ಕಳ್ಳ ಎಂದಾದರೆ ಈ ಮಂತ್ರದಲ್ಲಿ ತಸ್ಕರ ಎಂದರೆ ಡಕಾಯಿತ ಎಂಬ ಅರ್ಥವಿದ್ದು, ಕಳ್ಳನಿಗೂ ಡಕಾಯಿತನಿಗೂ ಇರುವ ವ್ಯತ್ಯಾಸ ನಮಗೆ ತಿಳಿದಿದೆ. ಭಾರತದ ಅಪರಾಧ ಸಂಹಿತೆಯ 378 ಕಲಂ ಅಡಿ ಕಳ್ಳನಿಗೆ ಶಿಕ್ಷೆ- ಕಲಂ 402 ರಲ್ಲಿ ಡಕಾಯಿತಿಗೆ ಶಿಕ್ಷೆ. ಕಳ್ಳ ಮತ್ತು ಡಕಾಯಿತನ ಬಗ್ಗೆ ಕೂಡ ಅಪೌರುಷೇಯವಾದ ವೇದಗಳು ಅರಿತಿದ್ದವು ಎನ್ನಲು ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲಾ. ಕಳ್ಳರಿಗೆ ಡಕಾಯಿತರಿಗೆ ರುದ್ರನು ಅಧಿಪತಿಯಾಗಿದ್ದರೂ, ಇವರಿಂದ ತನ್ನ ಭಕ್ತರಿಗೆ ಒದಗುವ ಭಾದೆಯ ನಿವಾರಕನೂ ರುದ್ರನೇ ಆಗಿದ್ದಾನೆ.
ನಮ್ಮ ಮನಸ್ಸಿನ ಚಿತ್ತ ಭಂಗವಾಗುವುದನ್ನು ಡಕಾಯಿತ ಎನ್ನುವ ಪದವು ಸೂಚಿಸುತ್ತದೆ. ಚಿತ್ತ ಭಂಗವಾಗದಂತೆ ಭಕ್ತರನ್ನು ರುದ್ರನು ರಕ್ಷಿಸುತ್ತಾನೆ. ನಾವು ಆಧ್ಯಾತ್ಮಿಕ ಹಾದಿಯಲ್ಲಿ ಬಹಳ ದೂರ ಸವೆಸಿದ ನಂತರವೇ ನಮ್ಮ ಮನಸ್ಸು ಹೆಚ್ಚು ದುರ್ಬಲ ವಾಗುತ್ತದೆ, ಕಾರಣ, ರುದ್ರನದೇ ಆದ ’ಮಾಯೆ” ಯನ್ನು ಪ್ರತಿರೋಧಿಸುವುದು ಬಹಳ ಕಷ್ಟ ಆಗುತ್ತದೆ . ಅಂತಹ ಮಾಯೆಯನ್ನು ಪ್ರತಿರೋಧಿಸುವ ಶಕ್ತಿಯನ್ನು ರುದ್ರನು ನಮಗೆ ನೀಡುತ್ತಾನೆ ಎನ್ನುವುದು ಈ ಮಂತ್ರದ ರಹಸ್ಯಾರ್ಥ. ಅಂತಹ ರುದ್ರನಿಗೆ ನಮಸ್ಕಾರಗಳು.
ನಮೋ ವಂಚತೇ ಪರಿವಂಚತೇ ಸ್ತಾಯೂಣಾಂ ಪತಯೇ ನಮಃ
ಮೋಸ ಮಾಡುವವರ, ವಂಚನೆ ಮಾಡುವವರ ಅಧಿಪತಿ ಯಾದ ರುದ್ರನೇ ನಿನಗೆ ನಮಸ್ಕಾರಗಳು.
ಮುಂದಿನ ಹಲವು ಮಂತ್ರಗಳೂ ಸಹಾ ಕಳ್ಳರ ಬಗ್ಗೆ ದರೋಡೆ ಕೋರರ ಬಗ್ಗೆಯೇ ಪ್ರಸ್ತಾಪಿಸುತ್ತವೆ. ಧರ್ಮ ಮತ್ತು ಅಧರ್ಮಗಳ ನಡುವಣ ಸಮತೋಲನದಿಂದಲೇ ಜಗತ್ತು ನಡೆಯುತ್ತಿರುವುದು ಸಾರ್ವಕಾಲಿಕ ಸತ್ಯ. ಕಳ್ಳರು, ಕನ್ನಗಳ್ಳರು, ಡಕಾಯಿತರು, ದರೋಡೆಕೋರರು, ಮೋಸಗಾರರು, ವಂಚನೆ ಮಾಡುವವರು ಸಹಾ ತಾವು ತಮ್ಮ ಕಾರ್ಯದಲ್ಲಿ ತೊಡಗುವ ಮುನ್ನ ರುದ್ರನನ್ನು ಪ್ರಾರ್ಥಿಸುತ್ತಾರೆ. ಸಾತ್ವಿಕ ರಾಜಸಿಕ ಮತ್ತು ತಾಮಸ ಗುಣಗಳ ಅಸಮತೋಲನದಿಂದಲೇ ಕೆಟ್ಟದ್ದು ಮತ್ತು ಒಳ್ಳೆಯದರ ಹುಟ್ಟು ಆಗಿದ್ದು ಇವೆಲ್ಲವೂ ಅವನ ಮಾಯೆಯಿಂದ ನಿಯಂತ್ರಣ ವಾಗುತ್ತಿವೆ.
ನಮೋ ವಿಚೇರವೇ ಪರಿಚರಾಯಾರಣ್ಯಾನಾಂ ಪತಯೇ ನಮಃ
ಯಾರು ಕದಿಯುವುದಕ್ಕಾಗಿ, ಡಕಾಯತಿ ಮಾಡುವುದಕ್ಕಾಗಿಯೇ ತಿರುಗಾಡುತ್ತಿದ್ದಾನೋ, ಯಾರು ಅರಣ್ಯದಲ್ಲಿರುವ ಡಕಾಯಿತರ ಅಧಿಪತಿ ಆಗಿದ್ದಾನೋ ಅಂತಹ ರುದ್ರನಿಗೆ ನಮಸ್ಕಾರಗಳು.
ಈ ಮಂತ್ರವು ನಮ್ಮ ಮನಸ್ಸು ಎತ್ತೆಂದರೆ ಅತ್ತ ಅಲೆದಾಟ ಮಾಡುವ ಸ್ಥಿತಿಯ ಬಗ್ಗೆ ಹೇಳುತ್ತಿದೆ ಮತ್ತು ಹೀಗೆ ಅಲೆದಾಡುವ ಮನಸ್ಸು ಪಾಪ ಕಾರ್ಯಗಳಿಗೆ ನಮ್ಮನ್ನು ಪ್ರೇರೇಪಿಸುತ್ತದೆ ಎನ್ನುವ ಅರ್ಥವೂ ಈ ಮಂತ್ರದಲ್ಲಿ ಅಡಗಿದೆ. ರುದ್ರನು ಇಂತಹ ಅಲೆದಾಡುವ ಮನಸ್ಸಿನ ಅಧಿಪತಿ ಆಗಿರುವುದರಿಂದ ನಾವು ಅವನಲ್ಲಿ ಶರಣಾದರೆ, ಮನಸಿನ ಅಲೆದಾಟ ಇಲ್ಲವಾಗುತ್ತದೆ. ಓ ರುದ್ರನೇ ನಾವು ನಿನ್ನಲ್ಲಿ ಶರಣಾಗಿದ್ದೇವೆ ನಮ್ಮ ಮನಸ್ಸಿನ ಅಲೆದಾಟವನ್ನು ನಿಯಂತ್ರಿಸಿ ನಮ್ಮನ್ನು ಉದ್ಧರಿಸು- ನಿನಗೆ ನನ್ನ ನಮಸ್ಕಾರಗಳು.
ನಮಃ ಸೃಕಾವಿಭ್ಯೋ ಜಿಘೇಸದಭ್ಯೋ ಮುಷ್ಣಾತಾಂ ಪತಯೇ ನಮಃ
ಯಾರು ತಮ್ಮ ಅಯುಧಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುತ್ತಿದ್ದಾರೋ ಯಾರು , ಬೇರೆಯವರನ್ನು ಚಿತ್ರಹಿಂಸೆ ಮಾಡುತ್ತಾರೋ, ಯಾರು ಧಾನ್ಯಗಳನ್ನು ಕದಿಯುತ್ತಾರೋ ಅಂತಹವರ ಅಧಿಪತಿ ಯಾದ ರುದ್ರನೇ ನಿನಗೆ ನಮಸ್ಕಾರಗಳು.
ಈ ಮಂತ್ರವೂ ಸಹಾ ಮತ್ತೊಮ್ಮೆ, ಎಲ್ಲ ಒಳ್ಳೆಯದರಲ್ಲೂ ಕೆಟ್ಟದ್ದರಲ್ಲೂ ಬೆಳಗುವ ಆತ್ಮ ಒಂದೇ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ ಯಲ್ಲದೆ , ರುದ್ರನ ಸರ್ವವ್ಯಾಪಿತ್ವವನ್ನು ಎತ್ತಿ ಹಿಡಿಯುತ್ತಿದೆ. ರುದ್ರನು ನಮ್ಮೊಳಗಿನ ಆತ್ಮನಾಗಿದ್ದು ಕೊಂಡು ತಾನು ಯಾವುದನ್ನೂ ಮಾಡದೆ ನಾವು ಮಾಡುವ ಎಲ್ಲ ಒಳ್ಳೆಯ ಮತ್ತು ಕೆಟ್ಟ ಕೆಲಸಗಳಿಗೆ ಕೇವಲ ಸಾಕ್ಷಿಯಾಗಿರುತ್ತಾನೆ. ನಾವು ಮಾಡುವ ಎಲ್ಲ ಕೆಟ್ಟ ಅಥವಾ ಒಳ್ಳೆಯ ಕೆಲಸಗಳು ನಮ್ಮ ಕರ್ಮದ ಪ್ರಭಾವ ಅಷ್ಟೆ ಆಗಿರುತ್ತದೆ.
ನಮೋs ಸಿಮದ್ಭ್ಯೋ ತಕ್ತಂ ಚರಾದ್ಭ್ಯಃ ಪ್ರಕೃಂತಾನಾಂ ಪತಯೇ ನಮಃ
ಯಾರು ಜನರನ್ನು ಕೊಂದು ದರೋಡೆ ಮಾಡಲೋಸ್ಕರ ಕತ್ತಿಯನ್ನು ಹಿಡಿದು ರಾತ್ರಿಯಲ್ಲಿ ಅಲೆದಾಡುತ್ತಾ ಇರುತ್ತಾರೋ ಅಂತಹವರ ಅಧಿಪತಿ ಯಾದ ರುದ್ರನೇ ನಿನಗೆ ನಮಸ್ಕಾರಗಳು.
ಈ ಮಂತ್ರವು ರುದ್ರಗಣಗಳ ಪರಿಚಯ ಮಾಡಿಕೊಡುತ್ತಿದೆ. ಈ ರುದ್ರಗಣಗಳು ಕತ್ತಿಯನ್ನು ಹಿಡಿದು ರಾತ್ರಿಯಲ್ಲಿ ಅಲೆಯುತ್ತಾ ಪಾಪ ಕಾರ್ಯ ಮಾಡುವವರನ್ನು ಕೊಲ್ಲಲು ಸದಾ ಸಜ್ಜಾಗಿರುತ್ತದೆ ಅಂತಹ ರುದ್ರಗಣಗಳ ಅಧಿಪತಿ ಯಾದ ರುದ್ರನೇ ನಿನಗೆ ನಮಸ್ಕಾರಗಳು.
ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ
ಯಾರು ಶಿರದಲ್ಲಿ ರುಮಾಲನ್ನು ಧರಿಸಿರುವನೋ ಯಾರು ಬೆಟ್ಟಗಳಲ್ಲಿ ಸದಾ ಅಲೆದಾಡುತ್ತಿರುವನೋ, ಯಾರು ಜಮೀನುದಾರರ ಅಧಿಪತಿ ಯೋ ಅಂತಹ ರುದ್ರನೇ ನಿನಗೆ ನಮಸ್ಕಾರಗಳು.
ಅವನು ರುಮಾಲನ್ನು ಧರಿಸಿರುವುದು ಅವನ ಗುರುತನ್ನು ಮರೆಮಾಚಿಸಲಿಕ್ಕೆ. ಪರ್ವತಗಳಲ್ಲಿ ಯೋಗಿಗಳು ತಪಸ್ಸನ್ನು ಆಚರಿಸುತ್ತಾರೆ. ಅವರ ರಕ್ಷಣೆಗೆ ರುದ್ರನು ಪರ್ವತಗಳಲ್ಲಿ ಸಂಚರಿಸುತ್ತಾನೆ.
ಮೇಲಿನ ಮಂತ್ರಗಳು ಆಂದರೆ ಮೊದಲನೇ ಮಂತ್ರದಿಂದ ನಮ ಉಷ್ಣೀಷಿಣೇ ಗಿರಿಚರಾಯ ಕುಲುಂಚಾನಾಂ ಪತಯೇ ನಮಃ ಮಂತ್ರಗಳ ವರೆಗೆ ರಹಸ್ಯ ವಾದ ಅರ್ಥಗಳನ್ನು ಹೇಳಿದ್ದರೂ, ವೇದಗಳ ಕಾಲದಲ್ಲೂ, ಕಳ್ಳರು, ರಾತ್ರಿ ಕಳ್ಳರು, ಡಕಾಯಿತರು, ದರೋಡೆಕೋರರು, ಮೋಸ ವಂಚನೆ ಮಾಡುವವರು, ಕೊಲೆಗಡುಕರು ಇದ್ದರು ಎನ್ನುವುದು ತಿಳಿಯುತ್ತದೆ. ಆದರೆ ಅವರು ನಾಗರಿಕ ಸಮಾಜದಿಂದ ದೂರ ಉಳಿದಿದ್ದರು ಆದರೆ ಈಗ ಇಂತಹವರ ಸಂಖ್ಯೆ ಹೆಚ್ಚಿ ಅವರು ನಾಗರಿಕ ಸಮಾಜದ ಮಧ್ಯೆಯೇ ಇರುವುದಷ್ಟೇ ಅಲ್ಲದೆ, ನಮ್ಮನ್ನು ಆಳುವವರ ಮಧ್ಯೆಯೂ ಸೇರಿ ಹೋಗಿದ್ದು ಅಂಥವರನ್ನು ಶಿಕ್ಷಿಸಲು ರುದ್ರನು ತನ್ನ ಆಧುನಿಕ ಬಿಲ್ಲು ಬಾಣಗಳನ್ನು ಉಪಯೋಗಿಸುವಂತೆ ಬೇಡಿಕೊಂಡು, ಆ ರುದ್ರನಿಗೆ ನಮಸ್ಕಾರಗಳು.
ನಮ ಇಷುಮದ್ಭ್ಯೋ ಧನ್ವಾವಿಭ್ಯಷ್ಚ ವೋ ನಮಃ
ಯಾರು ಬಿಲ್ಲು ಮತ್ತು ಬಾಣಗಳನ್ನು ಹಿಡಿದಿರುವವರೋ ಅವರಿಗೆ ನಮಸ್ಕಾರಗಳು.
ಇಲ್ಲಿಯೂ ಸಹಾ ರುದ್ರಗಣಗಳ ಬಗ್ಗೆ ಪ್ರಸ್ತಾಪಿಸಲಾಗಿದೆ
ನಮ ಅತನ್ವಾನೇಭ್ಯಃ ಪ್ರತಿದಧಾನೇಭ್ಯಶ್ಚ ವೋ ನಮಃ
ಯಾರ್ಯಾರು ಬಿಲ್ಲಿನ ಎರಡೂ ತುದಿಗಳಿಗೆ ಹಗ್ಗವನ್ನು ಕಟ್ಟಿ ಆ ಬಿಲ್ಲಿಗೆ ಬಾಣವನ್ನು ಹೂಡುತ್ತಾರೋ ಅಂತಹವರಿಗೆ ಅಂದರೆ ರುದ್ರಗಣಗಳಿಗೆ ನಮಸ್ಕಾರಗಳು
ಈ ಮಂತ್ರವು ಶಿಲ್ಪ ಕಲಾವಿದರನ್ನು ಅಂದರೆ ಇಂದ್ರ ಮತ್ತು ಅವನ ಸಹಾಯಕರನ್ನು ಕುರಿತು ಹೇಳಲಾಗಿದೆ ಎಂದು ಸಹಾ ಒಂದು ಅಭಿಪ್ರಾಯವಿದೆ. ಇಂದ್ರನೂ ಸೇರಿದಂತೆ ಈ ಎಲ್ಲಾ ದೇವತೆಗಳು, ರುದ್ರಗಣಗಳೂ ಸಹಾ ರುದ್ರನ ನೇರ ನಿಯಂತ್ರಣ ದಲ್ಲಿವೆ.
ನಮ ಆಯಚ್ಚಭ್ಯೋ ವಿಸೃಜದ್ಭ್ಯಶ್ಚ ವೋ ನಮಃ
ಯಾರು ಬಿಲ್ಲನ್ನು ಬಗ್ಗಿಸಿ ಅದರಿಂದ ಬಾಣವನ್ನು ಬಿಡುತ್ತಾರೋ ಅವರಿಗೆ ನಮಸ್ಕಾರಗಳು
ಬಿಲ್ಲನ್ನು ಬಗ್ಗಿಸಿ ಬಾಣ ಬಿಡುವುವರನ್ನು ಶ್ರಮಿಕ ವರ್ಗಕ್ಕೆ ಅನ್ವಯಿಸಿ ಶ್ರಮಿಕ ವರ್ಗದವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳನ್ನು ಹೇಳಲಾಗಿದೆ.
ನಮೋ ಸದ್ಭ್ಯೋ ವಿಧ್ಯದ್ಬ್ಯಶ್ಚ ವೋ ನಮಃ
ಬಾಣಗಳಿಂದ ಗುರಿಗೆ ಹೊಡೆಯುತ್ತಿರುವವರಿಗೆ ಮತ್ತು ಗುರಿಯನ್ನು ಬೇಧಿಸುತ್ತಿರುವವರಿಗೆ ನಮಸ್ಕಾರಗಳು.
ಬಿಲ್ಲುಗಾರರಲ್ಲಿ ಎರಡು ವಿಧ, ಒಂದು ಬಗೆಯವರು ಗುರಿಗೆ ಬಾಣವನ್ನು ಬಿಡುವಂತಹವರಾದರೆ, ಮತ್ತೊಂದು ಬಗೆಯವರು ಗುರಿಯನ್ನು ಬೇಧಿಸಿ ಮುಂದೆ ಹೋಗುವಂತೆ ಬಾಣವನ್ನು ಬಿಡುವಂತಹವರು. ಈ ಯೋಧರ ರೂಪ ದಲ್ಲಿರುವ ರುದ್ರನಿಗೆ ನಮಸ್ಕಾರಗಳು
ನಮ ಆಸೀನೇಭ್ಯಃ ಶ್ಯನಾಭ್ಯಶ್ಚ ವೋ ನಮಃ / ಶ್ಯನೇಭ್ಯಶ್ಚ ವೋ ನಮಃ
ಆಸನದಲ್ಲಿ ನೇರವಾಗಿ ಕುಳಿತಿರುವವರಿಗೂ ಹಿಂದೆ ಒರಗಿಕೊಂಡು ಕುಳಿತಿರುವವರಿಗೂ ನಮಸ್ಕಾರಗಳು
ಅಂದಿನ ಕಾಯಕ ಯೋಗವನ್ನು ಮುಗಿಸಿ ಆಸನದಲ್ಲಿ ನೇರವಾಗಿಯೋ ಅಥವಾ ಒರಗಿಕೊಂಡೋ ವಿಶ್ರಾಂತಿ ಪಡೆಯುತ್ತಿರುವವರ ರೂಪದಲ್ಲಿ ತೋರುತ್ತಿರುವ ರುದ್ರನಿಗೆ ನಮಸ್ಕಾರಗಳು. ವೇದಕಾಲದ ಸಮಾಜದಲ್ಲಿ ಅವರವರ ಪಾಲಿಗೆ ಬಂದ ಕಾಯಕವನ್ನು ಮಾಡುವುದನ್ನು ಕಾಯಕ ಯೋಗ ಎಂದು ಕರೆಯಲಾಗಿದೆಯಲ್ಲದೆ, ಈ ಕಾಯಕ ಮಾಡುವವರಲ್ಲಿ ರುದ್ರನನ್ನೇ ಕಂಡು ನಮಸ್ಕರಿಸುವ ಸಂಸ್ಕಾರ ವಿತ್ತು ಎಂಬುದನ್ನು ಈ ಮಂತ್ರದ ಮೂಲಕ ಹೇಳಲಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಸಮಾಜದ ಪ್ರತಿಯೊಬ್ಬರೂ ಅವರವರ ಪಾಲಿಗೆ ಬಂದ ಕಾಯಕ ಗಳನ್ನು ಮಾಡಲೇ ಬೇಕಾದ್ದು ಅನಿವಾರ್ಯ ಮತ್ತು ಅವಶ್ಯಕ ಎಂಬ ಅರಿವು ವೇದ ಕಾಲದ ಸಮಾಜದಲ್ಲಿಯೇ ಇತ್ತು. ಇದು ಹೊಸದಾಗಿ ಇತ್ತೀಚಿಗೆ ಬಂದದ್ದೇನೂ ಅಲ್ಲ ಎನ್ನುವುದಕ್ಕೆ ಈ ಮಂತ್ರ ಪುರಾವೆ ಒದಗಿಸುತ್ತದೆ.
ನಮಃ ಸ್ವಪದ್ಭ್ಯೋ ಜಾಗ್ರದ್ಭ್ಯಶ್ಚ ವೋ ನಮಃ
ನಿದ್ರೆ ಮಾಡುತ್ತಿರುವವರಿಗೆ ಮತ್ತು ಜಾಗೃತಾವಸ್ಥೆ ಯಲ್ಲಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು.
ಭೂಮಿಯ ಒಂದು ಭಾಗದ ಜನ ನಿದ್ರೆ ಮಾಡುತ್ತಿದ್ದರೆ ಮತ್ತೊಂದು ಭಾಗದ ಜನ ಜಾಗೃತ ರಾಗಿರುತ್ತಾರೆ. ಅಂದರೆ ಭೂಮಿಯು ಗುಂಡಾಗಿದೆ ಅನ್ನುವ ತಿಳಿವಳಿಕೆ ವೇದ ಕಾಲದಲ್ಲೇ ಇತ್ತು ಎನ್ನಲು ಈ ಮಂತ್ರಕ್ಕಿಂತ ಬೇರೆ ಪುರಾವೆ ಬೇಕಿಲ್ಲಾ. ಇದು ಆಳವಾದ ತಪಸ್ಸಿನಲ್ಲಿ ಮಗ್ನರಾಗಿ ಸಮಾಧಿ ಸ್ಥಿತಿ ತಲುಪಿರುವ ಒಂದು ವರ್ಗವನ್ನೂ ಹಾಗೂ ತಮ್ಮ ಕರ್ಮ ಯೋಗ ದಲ್ಲಿ ಅಂದರೆ ಕಾಯಕ ಯೋಗದಲ್ಲಿ ನಿರತರಾಗಿರುವ ಮತ್ತೊಂದು ವರ್ಗವನ್ನು ಕುರಿತ ಮಂತ್ರ ಎಂತಲೂ ಭಾವಿಸ ಬಹುದು.
ನಮಸ್ತಿಷ್ಟದ್ಭ್ಯೋ ಧಾವದ್ಬ್ಯಶ್ಚ ವೋ ನಮಃ
ನಿಂತಿರುವವರ ಮತ್ತು ಓಡುತ್ತಿರುವವರ ರೂಪದಲ್ಲಿರುವ ರುದ್ರನಿಗೆ ನಮಸ್ಕಾರಗಳು
ಇಲ್ಲಿ ಜಡ ಮತ್ತು ಚೇತನಗಳ ಬಗ್ಗೆ ಹೇಳಿದ್ದು ರುದ್ರನು ಜಡರೂಪದಲ್ಲೂ ಚೇತನ ರೂಪದಲ್ಲೂ ಇದ್ದು ಅವನು ಸರ್ವವ್ಯಾಪಿ ಎಂದು ಮತ್ತೊಮ್ಮೆ ಹೇಳಲಾಗಿದೆ.
ನಮಃ ಸಭಾಭ್ಯಃ ಸಭಾಪತಿಭ್ಶಶ್ಚ ವೋ ನಮಃ
ಸಭೆಯಲ್ಲಿ ಭಾಗವಹಿಸಿರುವವರೂ ಸಬೆಯ ಅಧ್ಯಕ್ಷನೂ ಆದ ರುದ್ರನಿಗೆ ನಮಸ್ಕಾರಗಳು.
ಸಭೆಗಳು ಅಂದರೆ ಆಧ್ಯಾತ್ಮಿಕ, ಧಾರ್ಮಿಕ ಸಭೆಗಳು. ಇಂತಹ ಸಭೆಗಳಲ್ಲಿ ಭಾಗವಹಿಸುವವರಲ್ಲಿಯೂ ಪ್ರವಚನ ನೀಡುವವರಲ್ಲಿಯೂ ಇರುವವನು ಒಬ್ಬನೇ. ಅವನು ರುದ್ರ. ಗುರುವಿನ ರೂಪ ದಲ್ಲಿಯೂ ಶಿಷ್ಯನ ರೂಪದಲ್ಲಿಯೂ ತಾನೇ ಆಗಿರುವ ರುದ್ರನಿಗೆ ನಮಸ್ಕಾರಗಳು
ನಮೋ ಅಶ್ವೇಭ್ಯೋs ಶ್ವಪತಿಭ್ಯಶ್ಚ ವೋ ನಮಃ
ಅಶ್ವಗಳಿಗೂ ಅಶ್ವಗಳ ಅಧಿಪತಿಯಾದ ರುದ್ರನಿಗೂ ನಮಸ್ಕಾರಗಳು.
ವೇದಗಳಲ್ಲಿ ಅಶ್ವ ಎನ್ನುವ ಪದವನ್ನು ಬಹಳ ಆಳವಾದ ಅರ್ಥದಲ್ಲಿ ಉಪಯೋಗಿಸಲಾಗಿದೆ. ಇದು ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿ. ಈ ಮಹಾನ್ ಕ್ರಿಯಾತ್ಮಕ ಜೈವಿಕ ಶಕ್ತಿಯೂ ತಾನೇ ಆಗಿ, ಈ ಶಕ್ತಿಯ ಅಧಿಪತಿಯೂ ತಾನೇ ಆಗಿರುವ ರುದ್ರನೇ ನಿನಗೆ ನಮಸ್ಕಾರಗಳು.