ಮಹಾಮಾರಿಯನ್ನು ತೊಲಗಿಸಲು ಶ್ರೀ ದುರ್ಗಾಸಪ್ತಶತಿಯ ಮತ್ತೊಂದು ಶ್ಲೋಕ-ಶಂಖ ಜಾಗಟೆ ಗಳ ಹಿಮ್ಮೇಳದೊಂದಿಗೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಅಥರ್ವಣ ವೇದದ ಮಂತ್ರಗಳಲ್ಲಿ ಕ್ರಿಮಿನಾಶಕ ಸೂಕ್ತಗಳು ಇರುವುದನ್ನು ಈ ಹಿಂದೆ ಪ್ರಸ್ತಾಪಿಸಿದ್ದೆ. ಸಾಮಾಜಿಕ ತಾಣದಲ್ಲಿ ಒಬ್ಬ ವೇದ ವಿದ್ವಾಂಸರು ಪೋಸ್ಟ್ ಹಾಕಿ,

“ಈ ಕ್ರಿಮಿನಾಶಕ ಸೂಕ್ತಗಳನ್ನು ಕೇವಲ ಪಠಿಸಿದರೆ ಸಾಲದು ಕ್ರಿಮಿಗಳ ಬಗ್ಗೆ ಸಾಕಷ್ಟು ಮಾಹಿತಿ ವೇದದಲ್ಲಿದೆ. ಅದು ವೇದೋಕ್ತ ಜೀವಶಾಸ್ತ್ರದಂತೆ ಮಾತ್ರ ವಿಶ್ಲೇಷಣೀಯ. ಮಂತ್ರ ಹೇಳಿದ ಕೂಡಲೇ ಕ್ರಿಮಿ ಸಾಯಲ್ಲ. ಅಗ್ನಿಮುಖ ಪ್ರಕ್ರಿಯೆ ಇಲ್ಲದ ದ್ರವ್ಯ ಸುಡುವುದು ಅಗ್ನಿಹೋತ್ರವಾಗುವುದಿಲ್ಲ. ಅದೊಂದು ಗಹನವಾದ ಪುರಾತನ ವೇದ ವಿಜ್ಞಾನ ಪ್ರಕ್ರಿಯೆ. ಹೇಗೇಗೋ ಮಾಡುವುದಲ್ಲ”

ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಮತ್ತು ನಮಸ್ಕಾರಗಳನ್ನು ತಿಳಿಸುತ್ತಾ, ಅವರು ಮತ್ತು ಅವರಂತಹ ವೇದ ವಿದ್ವಾಂಸರುಗಳು ಇಂತಹ ಅಗ್ನಿಮುಖ ಕ್ರಿಯೆಯಿಂದ ಈ ಕ್ರಿಮಿಗಳನ್ನು ಸುಡುವುದರ ಮೂಲಕ ಲೋಕಕಲ್ಯಾಣ ಕಾರ್ಯದಲ್ಲಿ ತೊಡಗಬೇಕು ಎಂದು ಅತ್ಯಂತ ಭಕ್ತಿಪೂರ್ವಕವಾಗಿ ಪ್ರಾರ್ಥಿಸುತ್ತಿದ್ದೇನೆ.
ಅಷ್ಟೇ ಅಲ್ಲದೆ ಈ ಕ್ರಿಮಿನಾಶಕ ಸೂಕ್ತಗಳನ್ನು ವೇದ ವಿದ್ವಾಂಸರು ಪಠಿಸಿರುವ ಆಡಿಯೋ ಮತ್ತು ವಿಡಿಯೋಗಳು ಸಹಾ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುತ್ತಿದೆ ಎಂದು ಸಹಾ ಅವರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ.

ನಮಗೆ ತಿಳಿದಿರುವಂತೆ ಪುರಾಣೋಕ್ತ ಮಂತ್ರಗಳ ಪಠನೆಗೆ ಇಂತಹ ನಿರ್ಬಂಧಗಳು, ಆಕ್ಷೇಪಣೆಗಳು ಇರಲಾರವು ಎಂಬುದನ್ನು ಅರಿತೇ ಶ್ರೀ ದುರ್ಗಾ ಸಪ್ತಶತಿಯ ಹನ್ನೊಂದನೆಯ ಅಧ್ಯಾಯದ ಮೂರನೇ ಶ್ಲೋಕ ಮತ್ತು ದೇವೀ ಅರ್ಗಲಾ ಸ್ತೋತ್ರದ ಎರಡನೇ ಶ್ಲೋಕವನ್ನು ಪಠಿಸುವುದರಿಂದ / ಶ್ರವಣ ಮಾಡುವುದರಿಂದಲೂ ಇಂತಹ ವಿಶ್ವವ್ಯಾಪೀ ಪಿಡುಗುಗಳ ವಿರುದ್ಧ ಹೋರಾಡಲು ಸಾಧ್ಯ ಎಂದು ತಿಳಿಸಿದ್ದೆ. ಮತ್ತು ಈ ಪಠನದ ಯೂಟ್ಯೂಬ್ ಕೊಂಡಿಯನ್ನೂ ನೀಡಿದ್ದೆ.

ಇಂತಹ ಎಲ್ಲ ವಿಧದ ಪಿಡುಗುಗಳನ್ನು ಮಹಾ ಮೇಧಾವಿಗಳಾದ ನಮ್ಮ ಹಿರಿಯರು “ಮಹಾಮಾರೀ” ಎಂಬ ಹೆಸರಿನಿಂದ ಗುರುತಿಸಿದ್ದಾರೆ.

“ಮಹಾಮಾರೀ” ಶಬ್ಧವು ನನಗೆ ತಿಳಿದಂತೆ ಶ್ರೀ ದುರ್ಗಾ ಸಪ್ತಶತಿಯ ಅದರಲ್ಲೂ ಹನ್ನೆರಡನೆಯ ಅಧ್ಯಾಯದಲ್ಲಿನ , ಎಂಟು, ಮೂವತ್ತೆಂಟು ಮತ್ತು ಮೂವತ್ತೊಂಬತ್ತನೆಯ ಶ್ಲೋಕಗಳಲ್ಲಿ ಹೇಳಲಾಗಿದೆ. ಈ ಶ್ಲೋಕಗಳ ಪೈಕಿ ಎಂಟನೇ ಶ್ಲೋಕದ ಪಠಣ ಅಥವಾ ಶ್ರವಣ ಈ ಮಹಾಮಾರಿಯನ್ನು ತಡೆಗಟ್ಟುವಲ್ಲಿ, ಹೊಡೆದೋಡಿಸುವಲ್ಲಿ ಪರಿಣಾಮಕಾರಿಯಾಗುತ್ತದೆ ಎಂಬ ನನ್ನ ನಂಬಿಕೆಯನ್ನು, ಅಭಿಪ್ರಾಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಉಪಸರ್ಗಾನಶೇಷಾಂಸ್ತು ಮಹಾಮಾರೀಸಮುದ್ಭವಾನ್ ।
ತಥಾ ತ್ರಿವಿಧಮುತ್ಪಾತಂ ಮಾಹಾತ್ಮ್ಯಂ ಶಮಯೇನ್ಮಮ ॥ 8॥

ಇದು ಎಂಟನೆಯ ಶ್ಲೋಕ

ಉಪಸರ್ಗ ಎಂಬ ಪದಕ್ಕೆ ಹಲವಾರು ಅರ್ಥಗಳು ಇದ್ದು ಈ ಸಂದರ್ಭಕ್ಕೆ, ತೊಂದರೆ , ದುರಾದೃಷ್ಟ, ಸಾವಿನ ಮುನ್ಸೂಚನೆ, ರೋಗದಿಂದ ಉಂಟಾಗಿರುವ ಬದಲಾವಣೆ, ರೋಗ ಚೇಷ್ಟೆ, ಉಲ್ಬಣತೆ ಈ ಎಲ್ಲ ಅರ್ಥಗಳೂ ಅನ್ವಯವಾಗುತ್ತವೆ.

ಹಾಗಾಗಿ ಮಹಾಮಾರಿಯಿಂದ ಉಂಟಾಗುವ ಮತ್ತು ಮೂರು ವಿಧಗಳಿಂದ ಉತ್ಪತ್ತಿಯಾಗಿರುವ ತೊಂದರೆ, ರೋಗ ಇವೆಲ್ಲವೂ ನನ್ನ ಮಹಾತ್ಮೆಯ ಪಠಣದಿಂದ ಶಮನವಾಗುತ್ತದೆ ಎಂಬುದಾಗಿ ದೇವಿಯೇ ಹೇಳಿದ್ದಾಳೆ. ಮೂರು ವಿಧಗಳಿಂದ ಎನ್ನುವುದನ್ನು, ಆದಿಭೌತಿಕ, ಆದಿದೈವಿಕ ಮತ್ತು ಆಧ್ಯಾತ್ಮಿಕ ತಾಪ ತ್ರಯಗಳು ಎಂದೇ ಅರ್ಥೈಸಬೇಕಿದೆ.

ಹಾಗಾದರೆ ದೇವಿಯ ಈ ವಾಕ್ಕು, ಶ್ರೀ ದುರ್ಗಾ ಸಪ್ತಶತಿಯ ಪಾರಾಯಣ ಮಾಡಿದರೆ ಮಾತ್ರವೇ ಸಿದ್ಧಿಸುತ್ತದೆ ಎಂದು ಭಾವಿಸಬೇಕಿಲ್ಲಾ. ಮಾಹಾತ್ಮೆಯ ಪಠಣ / ಶ್ರವಣ ನಿಜವಾಗಿಯೂ ಕಾಮಧೇನು ಕಲ್ಪವೃಕ್ಷವೇ ಸರಿ. ಆದರೆ ಈ ಸಂಕಟದ ಸಮಯದಲ್ಲಿ ದೇವಿಯನ್ನು ಆಕೆಯ ಮಹಿಮೆ, ಮಹಾತ್ಮೆಯನ್ನು ಮನಸ್ಸಿನಲ್ಲಿ ಸ್ಮರಿಸಿ ಈ ಶ್ಲೋಕವನ್ನು ಪಠಿಸಿದರೆ / ಶ್ರವಣ ಮಾಡಿದರೆ ಈ ಮಹಾಮಾರಿಯನ್ನು ತೊಲಗಿಸಲು ಸಾಧ್ಯ

ಉಪಸರ್ಗಾನಶೇಷಾಂಸ್ತು ಮಹಾಮಾರೀಸಮುದ್ಭವಾನ್ ।
ತಥಾ ತ್ರಿವಿಧಮುತ್ಪಾತಂ ಮಾಹಾತ್ಮ್ಯಂ ಶಮಯೇನ್ಮಮ ॥ 8॥

ಈ ಶ್ಲೋಕವನ್ನು ಪಠಿಸಿರುವ ಯೂಟ್ಯೂಬ್ ವಿಡಿಯೋ ಕೊಂಡಿ ಮತ್ತು ಇದೇ ಶ್ಲೋಕವನ್ನು ಶಂಖ, ಜಾಗಟೆಗಳ ಹಿಮ್ಮೇಳದಲ್ಲಿ ಪಠಿಸಿರುವ ಯೂಟ್ಯೂಬ್ ವಿಡಿಯೋ ಕೊಂಡಿಯನ್ನೂ ಇಲ್ಲಿ ನೀಡಲಾಗಿದೆ.

ಇದು ಎಲ್ಲರಿಗೆ ಉಪಯೋಗವಾಗಿ, ಮಹಾಮಾರೀ ವಿಶ್ವದಿಂದ ತೊಲಗಿಹೋಗಲಿ ಎಂದು ಗುರುಮಂಡಲ ಮತ್ತು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರಸುಂದರಿಯನ್ನು ಶ್ರದ್ಧಾಭಕ್ತಿಗಳಿಂದ ಪ್ರಾರ್ಥಿಸುತ್ತಾ,

ಲೋಕಾ ಸಮಸ್ತಾ ಸುಖಿನೋ ಭವಂತು

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: