ಕೋವಿಡ್- 19 ರ ಭಯ ಮತ್ತು ತಲ್ಲಣಕ್ಕೆ ಪರಿಹಾರ – ದುರ್ಗಾ ಸಪ್ತಶತಿಯ ಎರಡು ಶ್ಲೋಕಗಳು


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಪ್ರತಿದಿವಸ ನಾವಿರುವ ಪ್ರಪಂಚದಲ್ಲಿ ಒಂದು ಲಕ್ಷ ಜನ ಸಾಯುತ್ತಾರೆ ಮತ್ತು ಎರಡು ಲಕ್ಷಕ್ಕೂ ಹೆಚ್ಚು ಮಕ್ಕಳು ಹುಟ್ಟುತ್ತವೆ ಎನ್ನುತ್ತದೆ ನಮಗೆ ಲಭ್ಯವಿರುವ ಅಂಕಿಅಂಶಗಳು. ಈ ಅಂಕಿ ಅಂಶಗಳನ್ನು ಗಮನಿಸಿದರೆ ಕೊರೋನಾ ವೈರಸ್ ನಿಂದ ಆಗಿರುವ ಸಾವುಗಳು ನಗಣ್ಯವೆನಿಸುತ್ತದೆ ಆದರೂ ನಮ್ಮನ್ನು ತಲ್ಲಣ ಗೊಳ್ಳಲು ಮತ್ತು ಭಯಭೀತರಾಗಲು ಕಾರಣ ಎಂದರೆ, ಈ ವೈರಸ್ ಗೆ ಯಾವುದೇ ಲಸಿಕೆಯಾಗಲೀ ಅಥವಾ ಸರಿಯಾದ ಚಿಕಿತ್ಸೆಯಾಗಲೀ ಇನ್ನೂ ಲಭ್ಯವಿಲ್ಲದೇ ಇರುವುದೇ ಆಗಿದೆ.
ನನ್ನ ವಿನಮ್ರ ಅನುಭವದಲ್ಲಿ ಯಾವ ಯಾವ ಗ್ರಹಗಳ ಸಂಬಂಧದಿಂದ ಇಂತಹ ವಿಶ್ವವ್ಯಾಪಿ ಪಿಡುಗು ಹಬ್ಬುತ್ತದೆ ಎಂಬ ಬಗ್ಗೆ ನಮ್ಮ ಪ್ರಾಚೀನ ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖ ಕಾಣುತ್ತಿಲ್ಲಾ. ನನ್ನ ಸ್ನೇಹಿತರ ಮತ್ತು ಬಂಧುಗಳ ವಲಯದಲ್ಲಿ ಕೇಳಿಬರುತ್ತಿರುವ ಮಾಹಿತಿ ಎಂದರೆ ರಾಹು ಗ್ರಹವು ಆರಿದ್ರಾ ನಕ್ಷತ್ರದಲ್ಲಿ ಸಂಚರಿಸುತ್ತಿರುವುದರಿಂದ ಇಂತಹ ವೈರಸ್ ವಿಶ್ವವನ್ನು ವಿಶ್ವದೆಲ್ಲೆಡೆ ವ್ಯಾಪಿಸಿದೆ ಎಂಬ ಅಭಿಪ್ರಾಯಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವುದನ್ನು ನನ್ನ ಗಮನಕ್ಕೆ ತಂದು ಈ ಬಗ್ಗೆ ನನ್ನ ಅಭಿಪ್ರಾಯವನ್ನು ಸಹಾ ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಬೇಕೆಂದು ಒತ್ತಾಯ ಮಾಡಿದುದರ ಫಲ ಈ ಲೇಖನ.

ಸಾಮಾನ್ಯವಾಗಿ ನಾನು ಸಾಮಾಜಿಕ ತಾಣಗಳಲ್ಲಿನ ಅಭಿಪ್ರಾಯಗಳ ಬಗ್ಗೆ ಮೌನ ವಹಿಸುತ್ತೇನೆ, ಕಾರಣ ಪ್ರತಿಯೊಬ್ಬರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಇದೆ ಅವನ್ನು ನಾವು ಒಪ್ಪುವುದು,ಬಿಡುವುದು ನಮಗೆ ಸೇರಿದ್ದಾದರೂ ಅದನ್ನು ಗೌರವಿಸುವ ಜವಾಬ್ದಾರಿ ನಾಗರಿಕ ಸಮಾಜಕ್ಕೆ ಇರಬೇಕು ಎಂದು ನಂಬಿರುವವರಲ್ಲಿ ನಾನೂ ಒಬ್ಬ.

೧. ಮೊಟ್ಟಮೊದಲೆಯನದಾಗಿ, ಇಂತಹ ವಿಶ್ವವ್ಯಾಪಿ ಘಟನೆಗಳ ಕಾರಣವನ್ನು ಒಂದು ಗ್ರಹವನ್ನು ಆಧರಿಸಿ ನಿರ್ಧರಿಸಲು ಅಸಾಧ್ಯ . ಅಷ್ಟೇ ಏಕೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಆಗುವ ಘಟನೆಗಳಿಗೆ ಸಹಾ ಒಂದೇ ಗ್ರಹದ ಕಾರಣ ಎಂದು ಹೇಳಲಾಗದು. ರಾಹು ಗ್ರಹವು ೧೮ ವರ್ಷಗಳಿಗೆ ಒಮ್ಮೆ ಆರಿದ್ರಾ ನಕ್ಷತ್ರದಲ್ಲಿ ಸಂಚಾರವಾಗುತ್ತದೆ, ೨೭ ಫೆಬ್ರುವರಿ ೨೦೦೧ ರಿಂದ ೩ ಅಕ್ಟೊಬರ್ ೨೦೦೧ ರವರೆಗೆ ಹಾಗೂ ೧೫ ಜೂನ್ ೧೯೮೨ ರಿಂದ ೧೬ ಮಾರ್ಚ್ ೧೯೮೩ ರವರೆಗೆ ಆರಿದ್ರಾ ನಕ್ಷತ್ರದಲ್ಲಿ ರಾಹು ಸಂಚಾರ ವಾಗಿದ್ದು ಆ ಸಮಯದಲ್ಲಿ ಇಂತಹ ಪಿಡುಗು ವಿಶ್ವವನ್ನು ವ್ಯಾಪಿಸಿದ್ದ ಬಗ್ಗೆ ನನಗೆ ನೆನಪಿಲ್ಲಾ.
ರಾಹು ಗ್ರಹದ ಸರಾಸರಿ ಸಂಚಾರ ವೇಗವನ್ನು ಅನುಸರಿಸಿದರೆ ೧೨ ಸೆಪ್ಟೆಂಬರ ೨೦೧೯ ರಿಂದ ಆರ್ದ್ರಾ ನಕ್ಷತ್ರದಲ್ಲಿ ಸಂಚಾರವಾಗುತ್ತಿದೆ ನೈಜ ಸಂಚಾರವನ್ನು ಪರಿಗಣಿಸಿದರೆ ೨೮ ಸೆಪ್ಟೆಂಬರ್ ೨೦೧೯ ರಿಂದ ೨೨ ಏಪ್ರಿಲ್ ೨೦೨೦ ರ ವರೆಗೆ ಆರ್ದ್ರಾ ನಕ್ಷತ್ರ ಸಂಚಾರವಿರುತ್ತದೆ.

ಒಂದು ಗ್ರಹವು ತನ್ನ ಸ್ವಂತ ರಾಶಿ ಯಲ್ಲಿ, ಉಚ್ಛ ರಾಶಿಯಲ್ಲಿ, ಮೂಲತ್ರಿಕೋಣ ರಾಶಿಯಲ್ಲಿ ಮತ್ತು ತನ್ನದೇ ನಕ್ಷತ್ರ ಸಂಚಾರ ಕಾಲದಲ್ಲಿ ಕೆಟ್ಟಪರಿಣಾಮಗಳನ್ನು ಸಾಮಾನ್ಯ ವಾಗಿ ಬೀರುವುದಿಲ್ಲಾ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ಸಾಮಾನ್ಯ ನಿಯಮವಾಗಿದೆ. ಅಷ್ಟೇ ಅಲ್ಲದೆ ಗುರು ಗ್ರಹದ ವೀಕ್ಷಣೆಗೆ ಒಳಪಡುವ ಯಾವುದೇ ಗ್ರಹವು ಕೆಟ್ಟಪರಿಣಾಮ ಬೀರುವುದಿಲ್ಲಾ ಎನ್ನುವುದೂ ಸಹಾ ಜ್ಯೋತಿಷ್ಯ ಶಾಸ್ತ್ರದ ಸಾಮಾನ್ಯ ನಿಯಮವಾಗಿದೆ. ಹೀಗಿರುವಾಗ ಗುರು ಗ್ರಹವು ತನ್ನ ಸ್ವಂತ ರಾಶಿಯಲ್ಲಿ ಸಂಚರಿಸುತ್ತಾ ರಾಹು ವನ್ನು ವೀಕ್ಷಿಸುತ್ತಿದ್ದು ರಾಹು ಗ್ರಹವು ನೀಡಬಹುದಾದ ಕೆಟ್ಟ ಪರಿಣಾಮಗಳನ್ನು ಸಹಾ ತಡೆಹಿಡಿಯಲು ಶಕ್ತವಾಗಿದೆ ಎಂದು ಹೇಳಲೇ ಬೇಕಾಗಿದೆ.
ನನ್ನ ವಿನಮ್ರ ಅನುಭವದಿಂದ ಹೇಳಬೇಕಾದರೆ ಧನುಸ್ ಮತ್ತು ಮೀನ ರಾಶಿಗಳಲ್ಲಿ ಗುರು ಮತ್ತು ಕೇತು ಸಂಯೋಗ ಅತ್ಯಂತ ಶುಭದಾಯಕವೆಂದೇ ಹೇಳಬೇಕಿದೆ. ಗುರುಗ್ರಹದಿಂದ ದೊರಕುವ ಜ್ಞಾನ ಮತ್ತು ವಿವೇಕವನ್ನು ಕೇತುವಿ ನ ಪ್ರಕೃತಿಯು ಉಪಯೋಗಿಸಿಕೊಳ್ಳುತ್ತದೆ. ಗುರು ಕೇತು ಗಳ ಜತೆಯಲ್ಲಿ ಇರುವ ಮಂಗಳಗ್ರಹವು ಆಕ್ರಮಣಕಾರಿ ಪ್ರವೃತ್ತಿಯನ್ನು ತೋರಿದರೂ ಅದರಿಂದ ವೈರಸ್ ಪಿಡುಗಿನ ಮೇಲೆ ಯಾವುದೇ ಪರಿಣಾಮಗಳನ್ನು ಹೇಳಲು ಸಾಧ್ಯವಿಲ್ಲಾ ಹಾಗೂ ಇನ್ನೊಂದೆರಡು ದಿವಸಗಳಲ್ಲಿ ಮಂಗಳ ಗ್ರಹವು ಮಕರವನ್ನು ಪ್ರವೇಶಿಸಿ ಶನಿಗ್ರಹವನ್ನು ಕೂಡಿಕೊಳ್ಳುತ್ತದೆ. ಸಾಮಾನ್ಯವಾಗಿ ಶನಿ ಮಂಗಳ ಸಂಯೋಗ ಶುಭಕರವಲ್ಲವಾದರೂ ಶನಿಗ್ರಹಕ್ಕೆ ಸ್ವಂತ ರಾಶಿಯೂ ಮಂಗಳ ಗ್ರಹಕ್ಕೆ ಉಚ್ಛ ರಾಶಿಯೂ ಆದ ಮಕರದಲ್ಲಿ ವಿಶೇಷ ವಾಗಿ ಅತ್ಯಂತ ಶುಭಕರ ಸಂಯೋಗವಾಗಿದೆ.
ಮಕರ ರಾಶಿಯು ಭಾರತದ ಜನ್ಮ ಕುಂಡಲಿಯ ಲಗ್ನಕ್ಕೆ ಭಾಗ್ಯಸ್ಥಾನವೂ, ಚಂದ್ರ ಲಗ್ನಕ್ಕೆ ಸಪ್ತಮ ಸ್ಥಾನವೂ ಮತ್ತು ಪ್ರಧಾನ ಮಂತ್ರಿಗಳ ಜನ್ಮ ಲಗ್ನ ಮತ್ತು ರಾಶಿಗೆ ಪರಾಕ್ರಮ ಸ್ಥಾನವೂ ಆಗಿದ್ದು ಇನ್ನು ಹಲವೇ ದಿನಗಳಲ್ಲಿ ಗುರುಗ್ರಹವೂ ಸಹಾ ಮಕರವನ್ನು ಪ್ರವೇಶಿಸುವುದರಿಂದ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳನ್ನು ಭಾರತದ ಮಟ್ಟಿಗೆ ನಿರೀಕ್ಷಿಸಬಹುದಾಗಿದೆ.
ನಾಗರಿಕತೆ ಆರಂಭ ಆದಾಗಿನಿಂದ ಇಂತಹ ಹಲವಾರು ವಿಶ್ವವ್ಯಾಪಿ ಪಿಡುಗುಗಳನ್ನು ನಾವು ಎದುರಿಸಿದ್ದೇವೆ ಇದರಿಂದ ವೈಯಕ್ತಿಕ ಆರೋಗ್ಯ ವನ್ನು ಕಾಪಾಡಿಕೊಳ್ಳಲು ಶುದ್ಧತೆಯನ್ನು ಕಾಪಾಡಿಕೊಳ್ಳುವ ಪಾಠವನ್ನು ಕಲಿತು ಕೊಂಡಿದ್ದೇವೆ. ಇದಕ್ಕೆ ಮಡಿ ಎಂಬ ಹೆಸರಿಟ್ಟು ಅದನ್ನು ಅನುಸರಿಸಲೇ ಬೇಕಾದ ಅವಶ್ಯಕತೆಯನ್ನು ನಿರ್ಮಾಣ ಮಾಡಿದ್ದೇವೆ. ನಂತರದ ಕಾಲಮಾನದಲ್ಲಿ ಆಧುನಿಕತೆಯ ಹೆಸರಿನಲ್ಲಿ ಇದು ಕೊಂಚ ಮಟ್ಟಿಗೆ ಕಡಿಮೆಯಾಗಿದ್ದರೂ ನಶಿಸಿ ಹೋಗಿಲ್ಲಾ, ಹೋಗುವುದೂ ಇಲ್ಲಾ.

ಮನಸ್ಸಿಗೆ ಅತ್ಯಂತ ನೋವಾಗುವ ಸಂಗತಿ ಎಂದರೆ ಪ್ರಗತಿಯ ಹೆಸರಿನಲ್ಲಿ, ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ಆಗಿರುವ ದಾಳಿಯಿಂದ ಪ್ರಾಣಕ್ಕೆ ಆಧಾರವಾಗಿರುವ ಗಾಳಿಯನ್ನೇ ಅಶುದ್ಧ ಗೊಳಿಸಿದ್ದೇವೆ, ಇದರಿಂದ ಆಗುತ್ತಿರುವ ಸಾವಿನ ಸಂಖ್ಯೆ ವಾರ್ಷಿಕ ೧೨ ರಿಂದ ೧೫ ಲಕ್ಷ ಆಗಿದ್ದರೂ ಇದರ ಬಗ್ಗೆ ನಮಗೆ ತಲ್ಲಣವಾಗಲೀ ಭೀತಿಯಾಗಲೀ ಆಗುತ್ತಿಲ್ಲಾ.

ಇದನ್ನು ಇಲ್ಲಿ ಉಲ್ಲೇಖಿಸಲು ಕಾರಣ ವೆಂದರೆ, ಈ ಕರೋನಾ ವೈರಸ್ ಹರಡಿರುವ ಬಗ್ಗೆ ನಮಗೆ ತಲ್ಲಣ ಮತ್ತು ಭೀತಿ ಉಂಟಾಗಿರುವುದು ಅದರಿಂದ ಆಗಿರುವ ಮಾನವರ ಜೀವದ ಹಾನಿಯಿಂದ ಮಾತ್ರವಲ್ಲಾ, ಅದರಿಂದ ಉದ್ಭವವಾಗಿರುವ ಸಾಮಾಜಿಕ ಆರ್ಥಿಕ ಹಿನ್ನಡೆಯಿಂದ ಎಂದೇ ಹೇಳಿದರೆ ತಪ್ಪ್ಪಲ್ಲ. ಇನ್ನು ಹಲವೇ ದಿನಗಳಲ್ಲಿ ಈ ವೈರಸ್ ಗೆ ಲಸಿಕೆ ಮತ್ತು ಚಿಕಿತ್ಸೆಯು ಸಹಾ ದೊರಕುತ್ತದೆ ಎಂಬ ನಂಬಿಕೆ ನಮ್ಮೆಲ್ಲರಿಗೂ ಇದೆ. ಈ ಹಿಂದೆ ಜೀವ ಕೊಂಡೊಯ್ಯುವ ರೋಗವೆಂದೇ ಪರಿಗಣಿಸಿದ್ದ Influenza ಈಗ ಸಾಮಾನ್ಯವಾಗಿ ಎಲ್ಲರಿಗು ಬರುವ ಫ್ಲೂ ಆಗಿಬಿಟ್ಟಿದೆ.

ಇಂತಹ ಹಲವಾರು ಪಿಡುಗುಗಳ ದಾಳಿಯನ್ನು ಎದುರಿಸಿರುವ ಇತಿಹಾಸವೇ ನಮ್ಮ ಮುಂದೆ ಇದೆ.
ನನ್ನ ಬ್ಲಾಗ್ ನ ಒಂದು ಲೇಖನದಲ್ಲಿ ಋಗ್ವೇದ ಮತ್ತು ರುದ್ರ ನಮಕದಲ್ಲಿ ಉಲ್ಲೇಖಿಸಿರುವ ‘ಯಾತುಧಾನ’ ಎಂಬ ರಾಕ್ಷಸನ ಬಗ್ಗೆ ಹೇಳಿದ್ದೆ ಈ ರಾಕ್ಷಸನ ಗುಣವಿಶೇಷಗಳು ವೈರಸ್ ಗಳ ಗುಣವಿಶೇಷ ಗಳಿಗೆ ಹೊಂದಾಣಿಕೆಯಾಗುವುದರ ಬಗ್ಗೆಯೂ ತಿಳಿಸಿದ್ದೆ. ಹಾಗೆಯೇ ಕೊರೋನಾ ಅಂತಹ ಪಿಡುಗುಗಳನ್ನು ನಮ್ಮ ಪೂರ್ವಜರು ದೇವಿಗೆ ಬರುವ ಕೋಪದ ಫಲ ಎಂದು ಭಾವಿಸಿದ್ದರು. ಇದು ಮೂಢನಂಬಿಕೆ ಎನ್ನುವ ನಾವು ತಿಳಿವಳಿಕೆ ಇಲ್ಲದವರು ಅಂದರೆ ತಪ್ಪಲ್ಲ. ಅವರು ಪ್ರಕೃತಿಯನ್ನು ದೇವತೆ ಎಂದು ಸಂಪೂರ್ಣವಾಗಿ ನಂಬಿದ್ದರು ಮತ್ತು ಪ್ರಕೃತಿ ಮುನಿದಾಗ ಇಂತಹ ಪಿಡುಗುಗಳು ವ್ಯಾಪಿಸುತ್ತವೆ ಎಂಬ ಅರಿವು ಅವರಿಗೆ ಇತ್ತು.
ಶ್ರೀ ದುರ್ಗಾ ಸಪ್ತಶತಿಯು ಪ್ರಕೃತಿಯನ್ನು, ಮಾತೃ ಸ್ವರೂಪವನ್ನು ವಿಶ್ವೇಶ್ವರೀ ಎಂದರೆ ಪ್ರಪಂಚಕ್ಕೆ ರಾಣಿ ಎಂದು ಸಂಭೋದಿಸಿದೆ. ಇಂತಹ ವಿಶ್ವವ್ಯಾಪಿ ಪಿಡುಗುಗಳು ತಲೆದೋರಿದಾಗ

ದೇವೀ ಪ್ರಪನ್ನಾರ್ತಿ ಹರೇ ಪ್ರಸೀದ
ಪ್ರಸೀದ ಮಾತಾರ್ಜಗತೋs ಖಿಲಸ್ಯ
ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಮ್
ತ್ರಯೀಶ್ವರೀ ದೇವಿ ಚರಾಚರಸ್ಯ

ಈ ಶ್ಲೋಕದ ಪಠಣ ಇಂತಹ ಪಿಡುಗುಗಳನ್ನು ದೂರ ಸರಿಸುತ್ತದೆ

ಇಂತಹ ಪಿಡುಗುಗಳನ್ನು ಮಹಾ ಮಾರೀ ಎಂಬ ಹೆಸರಿನಿಂದ ಕರೆಯಲಾಗಿದೆ
ಮಾರೀ ಎಂದರೆ ಮಾರಕ ರೋಗಗಳು ಹರಡುವುದು, ಸಾವು, ಸಾಯಿಸುವುದು ಮುಂತಾದ ಅರ್ಥಗಳಿವೆ. ಮಹಾ ಎಂದರೆ ಅಗಾಧವಾದ್ದು ಎಂಬ ಅರ್ಥ ಬರುತ್ತದೆ. ಇಂತಹ ಮಹಾ ಮಾರಿಯನ್ನು ನಾಶಗೊಳಿಸಲು

ಜಯಂತೀ ಮಂಗಳಾ ಕಾಲೀ ಭದ್ರಕಾಳೀ ಕಪಾಲಿನೀ
ದುರ್ಗಾ ಕ್ಷಮಾ ಶಿವಾ ಧಾತ್ರೇ ಸ್ವಾಹಾ ಸ್ವಧಾ ನಮೋಸ್ತುತೇ

ಈ ಶ್ಲೋಕವನ್ನು ಪಠಿಸುವುದರಿಂದ ಇಂತಹ ಪಿಡುಗುಗಳ ಭಯದಿಂದ ತಲ್ಲಣ ಗೊಳ್ಳುವುದು ಕಡಿಮೆಯಾಗುತ್ತದೆ
ಈ ಎರಡೂ ಶ್ಲೋಕಗಳನ್ನು ಒಟ್ಟಿಗೆ ಹಲವಾರು ಬಾರಿ ಪಠಿಸುವುದರಿಂದ ಈ ಪಿಡುಗು ನಮ್ಮನ್ನು ಕಾಡುವುದಿಲ್ಲಾ.
ಇದಲ್ಲದೆ ಅಥರ್ವಣ ವೇದದ ಎರಡನೇ ಕಾಂಡದ ೩೧ ನೇ ಸೂಕ್ತದ ಐದು ಮಂತ್ರಗಳು ಕ್ರಿಮಿರೋಗನಾಶಕ ಗಳು ಎಂದು ಹೇಳಿದ್ದರೆ ೩೨ ನೇ ಸೂಕ್ತದ ಆರು ಮಂತ್ರಗಳು ಕ್ರಿಮಿನಾಶಕ ಮಂತ್ರಗಳಾಗಿವೆ. ಕ್ರಿಮಿ ಅಂದರೆ ವೈರಸ್ ಬ್ಯಾಕ್ಟೀರಿಯಾ ಅಲ್ಲದೆ ಬೇರೇನೂ ಆಗಲು ಸಾಧ್ಯವಿಲ್ಲಾ ಈ ಕ್ರಿಮಿಗಳ ಪರಿಚಯ ನಮಗೆ ವೇದಗಳ ಕಾಲದಲ್ಲೇ ಇತ್ತು ಎಂದರೆ ನಂಬಲೇ ಬೇಕಲ್ಲವೇ. ಈ ಸೂಕ್ತಗಳನ್ನೂ ಅದರ ವಿವರಣೆಯೊಂದಿಗೆ ಮುಂದೆ ಬರೆಯುತ್ತೇನೆ,

ಸಾಮಾನ್ಯರಿಗೆ ವೇದ ಮಂತ್ರಗಳನ್ನು ಸರಿಯಾಗಿ ಉಚ್ಚರಿಸಲು ಅಸಾಧ್ಯವಾದರೆ ಅಂತಹವರಿಗೆ ಮಾರ್ಕಂಡೇಯ ಪುರಾಣದ ಶ್ರೀ ದುರ್ಗಾ ಸಪ್ತಶತಿಯ ಶ್ಲೋಕಗಳು ಸಹಾ ವೇದ ಮಂತ್ರಗಳಷ್ಟೇ ಪರಿಣಾಮ ಕಾರಿಯಾಗಿವೆ. ಇದರ ಬಗ್ಗೆ ಯಾವುದೇ ಸಂದೇಹ ಬೇಡ.

ವೇದಭೂಮಿ ನಾವಿರುವ ಭೂಭಾಗ. ಈ ಭೂಭಾಗದಲ್ಲಿ ಹಲವು ಅಪಸವ್ಯಗಳು ಆಗದೇ ಇದ್ದಿದ್ದರೆ ಇಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯ ಬಾಯಿಯಿಂದಲೋ ವೇದ ಘೋಷ ಮೊಳಗುತ್ತಿತ್ತು.
ಈ ಲೇಖನದ ಕೊನೆಯಲ್ಲಿ ಶ್ರೀ ದುರ್ಗಾ ಸಪ್ತಶತಿಯ ಎರಡು ಶ್ಲೋಕಗಳನ್ನು ೧೦೮ ಬಾರಿ ಪಠಿಸಿರುವ ಯೂ ಟ್ಯೂ ಬ್ ವಿಡಿಯೋ ಕೊಂಡಿಯನ್ನು ನೀಡಿದೆ. ಇದನ್ನು ಪ್ರತಿದಿನ ಶ್ರದ್ಧೆ ಯಿಂದ ಕೇಳುವುದು ಸಹಾ ಪಠಣ ಮಾಡಿದಷ್ಟೇ ಫಲವನ್ನು ನೀಡುತ್ತದೆ

ಹೇಗಿದ್ದರೂ ನಾವೆಲ್ಲಾ ಒಂದು ರೀತಿಯಲ್ಲಿ ಗೃಹ ಬಂಧನದಲ್ಲೇ ಇರುವುದರಿಂದ ನಮಗೆ ಈ ಶ್ಲೋಕಗಳನ್ನು ಹೇಳಿಕೊಳ್ಳಲು ಅಥವಾ ಶ್ರದ್ಧೆಯಿಂದ ಕೇಳಲು ಸಾಕಷ್ಟು ಸಮಯವೂ ಇದೆ

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: