ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಆರನೇ ಅರ್ಥ – “ಸರ್ವರಹಸ್ಯಾರ್ಥ”


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ವಾರಿವಾಸ್ಯ ರಹಸ್ಯದ ಎರಡನೇ ಅಧ್ಯಾಯದ 103 ರಿಂದ 107 ರ ವರೆಗನ ಶ್ಲೋಕಗಳು ಹಾಗೂ ಯೋಗಿನೀ ಹೃದಯದ ಎರಡನೇ ಭಾಗವಾದ ಮಂತ್ರಸಂಕೇತದ 69 ರಿಂದ 72 ನೇ ಶ್ಲೋಕಗಳು ಶ್ರೀ ವಿದ್ಯಾ ಪಂಚದಶೀ ಮಂತ್ರದ ಸರ್ವರಹಸ್ಯಾರ್ಥವನ್ನು ನೀಡುತ್ತವೆ.

ತಥಾ ಸರ್ವರಹಸ್ಯಾರ್ಥಂ ಕಥಯಾಮಿ ತವಾನಘೇ।
ಮೂಲಾಧಾರೇ ತಡಿದ್ರೂಪೇ ವಾಗ್ಭವಾಕಾರತಾಂ ಗತೇ ॥ 69॥
ಅಷ್ಟಾತ್ರಿಂಶತ್ಕಲಾಯುಕ್ತಪಂಚಾಶದ್ವರ್ಣವಿಗ್ರಹಾ।
ವಿದ್ಯಾ ಕುಂಡಲಿನೀರೂಪಾ ಮಣ್ದಲತ್ರಯಭೇದಿನೀ ॥ 70॥
ತಡಿತ್ಕೋಟಿನಿಭಪ್ರಖ್ಯಾ ಬಿಸತನ್ತುನಿಭಾಕೃತಿಃ।
ವ್ಯೋಮೇನ್ದುಮಂಡಲಾಸಕ್ತಾ ಸುಧಾಸ್ತ್ರೋತಃಸ್ವರೂಪಿಣೀ ॥ 71॥
ಸದಾ ವ್ಯಾಪ್ತಜಗತ್ ಕೃತ್ಸ್ನಾ ಸದಾನನ್ದಸ್ವರೂಪಿಣೀ।
ಏಷಾ ಸ್ವಾತ್ಮೇತಿ ಬುದ್ಧಿಸ್ತು ರಹಸ್ಯಾರ್ಥೋ ಮಹೇಶ್ವರಿ ॥ 72॥

ವಾಗ್ಭವಾಕಾರ ಎಂದರೆ ಏ ಕಾರ ( ऎ ) ಏಕಾರವು ತ್ರಿಕೋಣ ಸ್ವರೂಪವಾಗಿದ್ದು ಈ ತ್ರಿಕೋಣವು ಮೂಲಾಧಾರದಲ್ಲಿದ್ದು, ಅಲ್ಲಿ ಕುಂಡಲಿನೀ ಶಕ್ತಿಯು ವಿದ್ಯುತ್ ಕಾಂತಿಗೆ ಸಮಾನವಾದ 38 ಕಲೆಗಳಿಂದ ಕೂಡಿದೆ.

ಅ ಕಾರದಿಂದ ಆಃ ವರೆಗೆ ಚಂದ್ರ ಕಲೆಗಳು 16
ಕ ಕಾರ ದಿಂದ ಭ ಕಾರದವರೆಗೆ 2 ಅಕ್ಷರಗಳಿಗೆ ಒಂದರಂತೆ ಸೂರ್ಯ ಕಲೆಗಳು 12
ಯ ಕಾರದಿಂದ ಕ್ಷ ಕಾರದವರೆಗೆ ಅಗ್ನಿಕಲೆಗಳು 10
ಒಟ್ಟು 38 ಕಲೆಗಳು.

ಮಂತ್ರದಲ್ಲಿ ಮೊದಲ ಕೂಟವು ಅಗ್ನಿಕೂಟ
ಎರಡನೆಯ ಕೂಟ ಸೂರ್ಯ ಕೂಟ
ಮೂರನೆಯ ಕೂಟ ಚಂದ್ರ ಕೂಟ.

ಮಂತ್ರವು ಕುಂಡಲಿನೀ ರೂಪವಾಗಿದ್ದು, ಮೂಲಾಧಾರದಲ್ಲಿ ಕುಂಡಲಿನಿಯು ಸ್ವಯಂ ಭೂಲಿಂಗಕ್ಕೆ ಮೂರುವರೆ ಸುತ್ತು ಸುತ್ತಿಕೊಂಡು ಅಧೋಮುಖವಾಗಿ ನಿದ್ರಿಸುತ್ತಿರುತ್ತದೆ.

ಸಾಧಕನ ಪ್ರಯತ್ನದಿಂದ ಕುಂಡಲಿನಿಯು ಜಾಗೃತಗೊಂಡು, ಊರ್ಧ್ವಮುಖವಾಗಿ, ಸುಷುಮ್ನಾ ನಾಡಿಯ ಮೂಲಕ ಚಲಿಸಿ, ಬ್ರಹ್ಮ, ವಿಷ್ಣು ರುದ್ರಗ್ರಂಥಿಗಳನ್ನು ಭೇದಿಸಿ, ಕೋಟಿ ಸೂರ್ಯ ಪ್ರಕಾಶಮಾನವಾಗಿ, ಶಿರಸ್ಸಿನಿಂದ ಎರಡು ಅಂಗುಲ ಮೇಲೆ ಇರುವ ಸಹಸ್ರಾರವನ್ನು ಸೇರಿಕೊಳ್ಳುತ್ತದೆ. ಸಹಸ್ರಾರವೂ ಸಹಾ ಅಧೋಮುಖವಾಗಿದ್ದು, ಸರಿಯಾದ ಸಾಧನೆಯಿಂದ ಅದು ಊರ್ಧ್ವಮುಖ ವಾಗುತ್ತದೆ ಎನ್ನುವುದು ಅನುಭವಿಗಳ ಅಭಿಪ್ರಾಯ.

ಸಹಸ್ರಾರದಲ್ಲಿ ’ಚಿತ್” ಎನ್ನುವ ಚಂದ್ರಮಂಡಲ ಇದೆ. ಕುಂಡಲಿನೀ ಯಾವಾಗ ಸಹಸ್ರಾರವನ್ನು ಸೇರಿತೋ ಆಗಲೇ ಅಲ್ಲಿಂದ ಸುಧಾಧಾರೆಯು ಸುರಿಯುತ್ತದೆ. ಆಗ ಕುಂಡಲಿನೀ ಆ ಪ್ರವಾಹ ರೂಪಿಣಿಯಾಗಿ ಅಮೃತಬಿಂದು ರೂಪವಾದ ಮಾತೃಕಾಕ್ಷರಗಳು ಆಜ್ಞಾಚಕ್ರದಿಂದ ಮೂಲಾಧಾರದವರೆಗೂ ಇರುವ ದಳಗಳನ್ನು ಅಕ್ಷರರೂಪದಲ್ಲಿ ಸವರುತ್ತಾ ಬ್ರಹ್ಮಾನಂದವನ್ನು ಅನುಭವಿಸುತ್ತಾ, ಮೂಲಾಧಾರವನ್ನು ಸೇರಿ ಅಲ್ಲಿ ನಿದ್ರಿಸುತ್ತದೆ.

ಶಕ್ತಿಯಿಂದ ಕೂಡಿದ ಕುಂಡಲಿನಿಯೇ ಸಾಧಕನ ಆತ್ಮ.

ಕುಂಡಲಿನೀ, ಶ್ರೀ ವಿದ್ಯೆ ಮತ್ತು ಜಗನ್ಮಾತೆ ಇವು ಮೂರೂ ಒಂದೇ ಆಗಿದ್ದು, ಸಾಧಕನ “ನಾನು” ಎಂಬ ’ಬ್ರಹ್ಮನ್” ಅಥವಾ “ ಆತ್ಮ” ತನ್ನನ್ನು ತಾನು ಕುಂಡಲಿನಿಯೊಂದಿಗೆ ಒಂದಾಗಿ ಭಾವಿಸುವುದೇ ಶ್ರೀ ವಿದ್ಯೆಯ ರಹಸ್ಯಾರ್ಥ.

ಈ ವಿವರಣೆಯನ್ನು ಮುಗಿಸುವ ಮೊದಲು ಹಲವು ಮುಖ್ಯ ವಿಷಯಗಳನ್ನು ನಿಮ್ಮಲ್ಲಿ ಹಂಚಿಕೊಳ್ಳಬೇಕು.

1.ಮಂತ್ರದ ಮೂರನೆಯ ಕೂಟ ಚಂದ್ರ ಕೂಟ, ಹಾಗೆಯೇ ಮಾತೃಕೆಗಳಲ್ಲಿ 16 ಸ್ವರಗಳು ಚಂದ್ರ ಕಲೆಗಳು ಅಂದರೆ ಅಮಾವಾಸ್ಯೆಯಿಂದ ಪೌರ್ನಮಿಯವರೆಗಿನ 15 ಬಗೆಯ ಚಂದ್ರನ ಆಕೃತಿಗಳು , 16 ನೇಯದು ಸಾಮಾನ್ಯ ಕಣ್ಣಿಗೆ ಕಾಣದ ಆದರೆ ಎರಡು ರಾತ್ರಿಗಳ ನಡುವಿನ ಸಂಧಿಕಾಲದ ಚಂದ್ರನ ಆಕೃತಿ.

2. ಮಂತ್ರದ ಮೂರನೇ ಕೂಟ ಮತ್ತು ಮಾತೃಕೆಗಳ ಪೈಕಿ ಸ್ವರಗಳು ಚಂದ್ರಕಲೆಗಳು ಅಂದರೆ ಇವು ಮನಸ್ಸಿಗೆ ಸಂಬಂಧಿಸಿದವು ಆಗಿವೆ. “ ಚಂದ್ರಮಾ ಮನಸೋ ಜಾತಃ”

3. ನಾವು, ಮನಸು, ಬುದ್ಧಿ ಮತ್ತು ಚಿತ್ತಗಳ ಬಗ್ಗೆ ಬಹಳಷ್ಟು ಸಂಭಾಷಣೆಯನ್ನು ನಡೆಸಿದ್ದೇವೆ. ಎಲ್ಲಾ ಸಂಸ್ಕಾರಗಳೂ ಚಿತ್ತದಲ್ಲಿ ಮುದ್ರಿತವಾಗಿವೆ ಎಂದೂ ತಿಳಿದುಕೊಂಡಿದ್ದೇವೆ. ಚಿತ್ತ ಶುದ್ಧವಾಗಬೇಕು ಅಂದರೆ ಅಲ್ಲಿರುವ ಎಲ್ಲಾ ಮುದ್ರಿತ ಸಂಸ್ಕಾರಗಳೂ ಇಲ್ಲದಾಗುವುದು ಎಂದೂ ತಿಳಿದಿದ್ದೇವೆ.

4. ಈ ಚಿತ್ತ ಇರುವುದಾದರೂ ಎಲ್ಲಿ? ಅದನ್ನು ಗುರುತಿಸುವುದು ಹೇಗೆ ? ಎಂಬ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಅದರ ಸ್ಥಾನವನ್ನು ಗುರುತಿಸದೆ, ಅಥವಾ ಅದರ ಅನುಭವವನ್ನಾದರೂ ಹೊಂದದೆ ಅದನ್ನು ಶುದ್ಧ ಮಾಡುವುದಾದರೂ ಹೇಗೆ?

5. ಈ ಎಲ್ಲ ಪ್ರಶ್ನೆಗಳಿಗೆ ಶ್ರೀ ವಿದ್ಯೆಯ ಸರ್ವರಹಸ್ಯಾರ್ಥ ಉತ್ತರವನ್ನು ನೀಡಿದೆ. ಈ ಚಿತ್ ಎನ್ನುವುದರ ಸ್ಥಾನ ಚಂದ್ರ ಮಂಡಲ ಎಂದು ನಮಗೆ ಈಗ ತಿಳಿದಿದೆ. ಈ ಚಂದ್ರ ಮಂಡಲ ಇರುವುದು ಎಲ್ಲಿ? ಅದು ಸಹಸ್ರಾರದಲ್ಲಿ? ಅದು ಇರುವುದು ಶಿರಸ್ಸಿನಿಂದ ಎರಡು ಅಂಗುಲ ಮೇಲ್ಗಡೆ. ಅಲ್ಲಿ ಅಮೃತ ಧಾರೆ, ಸುಧಾ ಧಾರೆಯಾದರೆ ಚಿತ್ತದಲ್ಲಿ ಮುದ್ರಿತವಾಗಿರುವ ಎಲ್ಲವು ಅಳಿಸಿ ಹೋಗಿ ಶುದ್ಧ ವಾಗುತ್ತದೆ. ಇದು ಆಗಬೇಕಾದರೆ ಸಾಧನೆ ಬೇಕು, ಗುರುಮಂಡಲದ ಅನುಗ್ರಹ ಬೇಕು. ಅದು ನಮ್ಮೆಲ್ಲರಿಗೂ ದೊರಕಲಿ ಎಂದು ಪ್ರಾರ್ಥಿಸೋಣ.

6. ನಾವು ಯಾವುದೇ ಭಾಷೆಯಲ್ಲಿ ಮಾತಾಡಲೀ, ಆ ಪದಗಳು ಅಕ್ಷರಗಳಿಂದಲೇ ಆಗಿವೆ. ಈ ಅಕ್ಷರಗಳೆಲ್ಲವೂ ಮಾತೃಕಾ ದೇವತೆಗಳು. ತಾಯಿ, ಜಗನ್ಮಾತೆ ಮಾತೃಕಾ ರೂಪಿಣಿ. ನಾವು ದಿನನಿತ್ಯ ಬಳಸುವ ಪದಗಳು, ಜಗನ್ಮಾತೆಯ ಸ್ವರೂಪವೇ ಆಗಿದೆ. ಇದು ನಮ್ಮ ನೆನಪಿನಲ್ಲಿ ಸದಾ ಇದ್ದರೆ ಎಂತಹ ಪರಿಸ್ಥಿತಿಯಲ್ಲಿಯೂ ನಮ್ಮಿಂದ ಕೆಟ್ಟ ಪದಗಳು ಹೊರಡುವುದೇ ಇಲ್ಲಾ.

ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ:

ಮೊದಲನೇ ಅರ್ಥ – “ಗಾಯತ್ರಿ

ಎರಡನೇ ಅರ್ಥ- “ಭಾವಾರ್ಥ

ಮೂರನೇ ಅರ್ಥ- “ಸಂಪ್ರದಾಯಾರ್ಥ

ನಾಲ್ಕನೇ ಅರ್ಥ- “ನಿಗರ್ಭ ಅರ್ಥ

ಐದನೇ ಅರ್ಥ- “ಕೌಲಿಕಾರ್ಥ

ಆರನೇ ಅರ್ಥ – “ಸರ್ವರಹಸ್ಯಾರ್ಥ

ಏಳನೆಯ ಅರ್ಥ – ” ಮಹಾತತ್ವಾರ್ಥ”

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.

ಓಂ ಶಾಂತಿಃ ಶಾಂತಿಃ ಶಾಂತಿಃ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: