ಸೌಂದರ್ಯಲಹರೀ ಶ್ಲೋಕ 68 Soundarya Lahari Verse#68 explained


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಭುಜಾಶ್ಲೇಷಾನ್ ನಿತ್ಯಂ ಪುರದಮಯಿತುಃ ಕಂಟಕವತೀ
ತವ ಗ್ರೀವಾ ಧತ್ತೇ ಮುಖಕಮಲನಾಲಶ್ರಿಯಮಿಯಮ್ ।
ಸ್ವತಃ ಶ್ವೇತಾ ಕಾಲಾಗುರುಬಹುಲಜಮ್ಬಾಲಮಲಿನಾ
ಮೃಣಾಲೀಲಾಲಿತ್ಯಮ್ ವಹತಿ ಯದಧೋ ಹಾರಲತಿಕಾ ॥ 68॥

ಇದು ಸೌಂದರ್ಯ ಲಹರಿಯ 68 ನೆಯ ಶ್ಲೋಕ.

ಸೌಂದರ್ಯ ಲಹರಿಯ ಎಲ್ಲಾ ಶ್ಲೋಕಗಳಿಗೂ ಯಂತ್ರವನ್ನು ಹೇಳಲಾಗಿದ್ದು, ಹಾಗೆಯೇ ಆಯಾಯ ಶ್ಲೋಕಗಳನ್ನು ಮಂತ್ರದಂತೆ ಜಪಿಸುವುದರಿಂದ ಪ್ರಾಪಂಚಿಕ ಹಾಗೂ ಆಧ್ಯಾತ್ಮಿಕ ಪ್ರಯೋಜನಗಳ್ನ್ನೂ ಹೇಳಿದೆ.

ತಲೆಗೆಳಗು ಆಗಿರುವ ತ್ರಿಕೋಣವನ್ನು ಕುಂಕುಮದಲ್ಲಿ ರಚಿಸಿ, ಮಧ್ಯದಲ್ಲಿ ಹ್ರೀಂ ಬೀಜಾಕ್ಷರವನ್ನು ಬರೆದು, ತ್ರಿಕೋಣ ದ ಬಾಹುಗಳು ಒಂದಕ್ಕೊಂದು ಕೂಡಿಕೊಂಡಿರುವ ಕಡೆ ಹೊರಮುಖವಾಗಿರುವ ತ್ರಿಶೂಲವನ್ನು ಬರೆದರೆ ಅದ್ 68 ನೇ ಶ್ಲೋಕಕ್ಕೆ ಯಂತ್ರವಾಗುತ್ತದೆ. ಈ ಯಂತ್ರದ ಚಿತ್ರವನ್ನು ಸಹಾ ಇಲ್ಲಿ ನೀಡಲಾಗಿದೆ.

 

IMG_4354

ಈ ಯಂತ್ರವನ್ನು ರಚಿಸಿ ಗಂಧಾಕ್ಷತೆ,, ಪುಷ್ಪ, ಧೂಪ ದೀಪ ಗಳಿಂದ ಪೂಜಿಸಿ, ಜೇನುತುಪ್ಪದ ನೈವೇದ್ಯ ಮತ್ತು ತಾಂಬೂಲಗಳನ್ನು ಅರ್ಪಿಸಿ ಪ್ರತಿದಿನ 1000 ಜಪದಂತೆ 45 ದಿನಗಳು ಜಪಿಸುವುದರಿಂದ ಸಂಸ್ಕಾರಗಳು ಶುದ್ಧವಾಗುತ್ತವೆ ಮತ್ತು ಅಡ್ಡಿ ಆತಂಕಗಳು ಇಲ್ಲವಾಗುತ್ತವೆ.

ನಮ್ಮ ಮನಸ್ಸು, ಬುದ್ಧಿ ಅಥವಾ ಚಿತ್ತದಲ್ಲಿ ಮುದ್ರಿತವಾಗಿರುವ ಸಂಸ್ಕಾರಗಳು ನಮ್ಮ ಪ್ರಾಪಂಚಿಕ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಅಡ್ಡಿ ಆತಂಕಗಳನ್ನು ಉಂಟು ಮಾಡುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಮನುಷ್ಯ ಕಾಲವನ್ನೇ ಬೆನ್ನಟ್ಟಿ ಓಡುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿದಿನ ನಾಲ್ಕರಿಂದ ಐದು ಘಂಟೆಯ ಸಮಯವನ್ನು ಈ ಶ್ಲೋಕದ ಜಪಕ್ಕಾಗಿಯೇ ಮೀಸಲಿಡುವುದು ಸಾಧ್ಯವೇ ಇಲ್ಲವೇನೋ ಅನಿಸುತ್ತದೆ. ಪ್ರತಿದಿನ 30 ನಿಮಿಷ ಈ ಶ್ಲೋಕವನ್ನು ಒಂದು ವರ್ಷಕಾಲ ಜಪಿಸುವುದರಿಂದಲೂ ಫಲ ಸಿಗುತ್ತದೆ.

ಈ ಶ್ಲೋಕದ ವಾಕ್ಯಾರ್ಥವನ್ನು ತಿಳಿದುಕೊಳ್ಳೋಣ;

ದೇವಿಯ ಕಂಠವು ಶಿವನಿಂದ ಆಲಂಗಿತವಾಗಿದೆ. ಶಿವನನ್ನು ಮೂರು ಲೋಕಗಳನ್ನೂ ಲಯಗೊಳಿಸುವವನು ಎಂದು ಹೇಳಲಾಗಿದೆ. ದೇವಿಯ ಕಂಠವನ್ನು ಕಮಲದ ತೊಟ್ಟಿಗೆ ಹೋಲಿಸಲಾಗಿದೆ., ಕಂಠವು ಶಿವನ ಆಲಿಂಗನದಿಂದ ಅತ್ಯಂತ ಆಕರ್ಷಕವಾಗಿದೆ. ಕಂಠದ ಕೆಳಗೆ ಬಿಳಿಯ ಮುತ್ತಿನ ಸರವನ್ನು ದೇವಿಯು ಧರಿಸಿದ್ದು, ದೇವಿಯು ತಾನು ಲೇಪಿಸಿಕೊಂಡಿರುವ ಸುಗಂಧ ದ್ರವ್ಯ ಕಪ್ಪು ಅಗರು, ಮುತ್ತಿನ ಸರಕ್ಕೆ ಅಂಟಿಕೊಂಡು ಅದು ಕಪ್ಪಾಗಿ ಕಂಡು ಕಮಲದ ಹೂವಿನ ಬಳ್ಳಿಯಂತೆ ಕಾಣುತ್ತಾ ಮತ್ತಷ್ಟು ಅಂದವಾಗಿ ತೋರುತ್ತಿದೆ.

ದೇವಿಯನ್ನು ವರ್ಣಿಸಲು ಶಂಕರರ ಕಲ್ಪನೆಗೆ ಶಂಕರರೇ ಸಾಟಿ. ದೇವಿಯ ಮುಖ ಕಮಲದ ಹೂ ಆದರೆ, ಕಂಠ ಹೂವಿನ ತೂಟ್ಟು, ಕಂಠದ ಹಾರ ಹೂವಿನ ಬಳ್ಳಿ.

ದೇವಿಯ ಒಂದೊಂದು ಅಂಗಗಳನ್ನೂ ವ್ಯವಸ್ಥಿತವಾಗಿ ವೈಭವೀಕರಿಸುವ ಮೂಲಕ ಶಂಕರರು ದೇವಿಯ ದೈವೀ ಶಕ್ತಿಯನ್ನು ತನ್ನ ಆರಾಧನೆಯ ಮೂಲಕ ಜಾಗೃತಗೊಳಿಸುತ್ತಿದ್ದಾರೆ.

ದೇವಿಯ ಕಂಠವನ್ನು ಶಿವನು ಆಲಂಗಿಸಿಕೊಂಡಿರುವುದರಿಂದ ಕಂಠವು ಮತ್ತಷ್ಟು ಆಕರ್ಷಕವಾಗಿ, ಸುಂದರವಾಗಿ ಕಾಣುತ್ತಿದೆ ಎಂದು ಹೇಳಿರುವುದನ್ನು ಬಹಳ ಸೂಕ್ಷ್ಮವಾಗಿ, ಆಳವಾಗಿ ಅಭ್ಯಸಿಸಬೇಕಿದೆ.

ಪರಿಪೂರ್ಣ ಸುಂದರ ಎನ್ನುವುದು “ ಸತ್ಯ” ಆ ಸತ್ಯವು “ ಶಿವ” ಪರಿಪೂರ್ಣ ಎನ್ನುವುದು ಅದು ತಾನಾಗಿಯೇ ಸಂಪೂರ್ಣವಾಗಿರುವಂತಾದ್ದು, ಅದಕ್ಕೆ ಯಾವುದೇ ಹೊರಗಿನ ವಸ್ತುವಿನ ಅವಶ್ಯಕತೆ ಇಲ್ಲಾ. ಅಷ್ಟಲ್ಲದೆ ಈ ಪರಿಪೂರ್ಣ ಸುಂದರವಾಗಿರುವುದರ ಬಳಿ, ಆಕರ್ಷಕವಲ್ಲದ, ಸುಂದರವಾಗಿಲ್ಲದ ಮತ್ತೊಂದು ಇದ್ದರೆ, ಅದೂ ಸಹಾ ಆಕರ್ಷಕವಾಗಿ, ಸುಂದರವಾಗಿ ಕಾಣುತ್ತದೆ.

ಭಗವಾನ್ ಶಂಕರರು ದೇವಿಯ ಒಂದೊಂದು ಅಂಗವನ್ನೂ ಅಸದಳವಾಗಿ ವರ್ಣಿಸಿರುವ ಕಾರಣವನ್ನು ನಾವು ಸರಿಯಾದ ರೀತಿಯಲ್ಲಿ ಅರ್ಥೈಸಬೇಕು. ಈ ಮೂಲಕ ಅವರು ಒಂದು ಗಹನವಾದ ವಿಷಯವನ್ನು ನಮ್ಮ ಮುಂದೆ ಇಡುತ್ತಿದ್ದಾರೆ. ಸತ್ಯವೇ ಶಿವ, ಆ ಶಿವ ಎನ್ನುವುದು ಪರಿಪೂರ್ಣ ಸುಂದರ ಎನ್ನುತ್ತಿದ್ದಾರೆ.

ಯಾವುದು ಸತ್ಯ? ನಾನು ಎನ್ನುವುದು ಆತ್ಮ , ಆತ್ಮ ಎನ್ನುವುದು ಬ್ರಹ್ಮ -ಇದು ಸತ್ಯ. ಈ ಸತ್ಯವು ಸಂಪೂರ್ಣ ಸುಂದರವಾದ್ದು, ಪರಿಪೂರ್ಣ ಸುಂದರವಾದ್ದು ಎಂದು ಹೇಳಿದ್ದಾರೆ, ಶಂಕರರು. ಆ ಪರಿಪೂರ್ಣ ಸುಂದರವಾಗಿರುವವಳು, ನಿತ್ಯವೂ, ಸತ್ಯವೂ, ನಿತ್ಯಸತ್ಯವೂ ಆಗಿರುವವಳು ದೇವಿ ಎಂದು ಪ್ರತಿಪಾದಿಸಲು ದೇವಿಯ ಸೌಂದರ್ಯವನ್ನು ವರ್ಣಿಸಿದಾಗ ಅದು ಅವರ ಕವಿ ಹೃದಯದಿಂದ ಕಾವ್ಯಧಾರೆಯಾಗಿ ಹರಿದು ಬಂದಿದೆ.

ದೇವಿಯನ್ನು ತಾಯಿಯಾಗಿ ಕಂಡಂತಹ ಮಹಾ ಸನ್ಯಾಸಿ ಆ ತಾಯಿಯನ್ನು ವರ್ಣಿಸಲು ಶೃಂಗಾರರಸದ ಹೊಳೆಯನ್ನೇ ಹರಿಸಿದ್ದಾರೆ. ಆ ಪರಿಪೂರ್ಣ ಸೌಂದರ್ಯದ ವರ್ಣನೆ ಇಲ್ಲದೆ, ಯಾವುದು ಸತ್ಯವೋ ಯಾವುದು ಶಿವನೋ ಅದೇ ಪರಿಪೂರ್ಣ ಸೌಂದರ್ಯ, ಅದೇ ದೇವಿ, ಅದೇ ಪರಾಶಕ್ತಿ ಎಂದು ಹೇಳಲು ಅಸಾಧ್ಯ ಎಂಬುದು ನಮಗೆ ಅರ್ಥವಾದರೆ, ಶಂಕರರ ಈ ಶೃಂಗಾರ ಕಾವ್ಯದ ಹಿಂದೆ ಇದ್ದಿರಬಹುದಾದ ಉದ್ದೇಶ ಅರ್ಥವಾಗುತ್ತದೆ, ಹಾಗೂ ಒಬ್ಬ ಸನ್ಯಾಸಿ ಈ ಶೃಂಗಾರ ವರ್ಣನೆ ಮಾಡಿದ್ದು ಸರಿಯಲ್ಲಾ ಎಂದು ವಾದಿಸುವವರಿಗೆ ಸರಿಯಾದ ಉತ್ತರವೂ ಸಿಕ್ಕಂತೆ ಆಗುತ್ತದೆ ಎಂದು ಅತ್ಯಂತ ನಮ್ರತೆಯಿಂದ ನನ್ನ ಅನಿಸಿಕೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಇನ್ನ್ನೊಂದು ಮುಖ್ಯ ವಿಷಯ ಎಂದರೆ ಶಂಕರ ಭಗವತ್ಪಾದರ ಈ ಶೃಂಗಾರ ಆಧ್ಯಾತ್ಮಿಕ ಕಾವ್ಯದ ಬಗ್ಗೆ ಅಪಸ್ವರ ಎತ್ತುವವರು, ಶ್ರೀ ಶಂಕರರಿಗಿಂತ ಮೊದಲೇ ಜೀವಿಸಿದ್ದ, ಕಾಳಿಕಾ ದೇವಿಯ ಮಹಾ ಭಕ್ತನಾಗಿದ್ದ ಕಾಳಿದಾಸನ ಶ್ಯಾಮಲಾ ದಂಡಕದಲ್ಲಿರುವ ಶೃಂಗಾರ ಕಾವ್ಯ ರಸಧಾರೆಯ ಬಗ್ಗೆ ಏಕೆ ಅಪಸ್ವರ ಎತ್ತುತ್ತಿಲ್ಲಾ ಎಂಬುದು ಸಹಾ ಯೋಚಿಸಬೇಕಾದ ಸಂಗತಿ ಆಗಿದೆ.

ಪುರದಮಹಿತುಃ (पुरदमयितुः) ಎಂದು ಹೇಳಿರುವುದು ಶಿವನನ್ನು ಕುರಿತು. ಶಿವನು ಮೂರೂ ಹಂತದ ಅರಿವನ್ನು ಅಂದರೆ ಜಾಗ್ರಾತ್, ಸ್ವಪ್ನ ಸುಷುಪ್ತಿ ಇವುಗಳನ್ನು ನಾಶಮಾಡುವವನು, ಅಂದರೆ ಈ ಮೂರೂ ಹಂತಗಳನ್ನು ಮೀರಿದವನು, ಸದಾ ನಾಲ್ಕನೆಯ ಅವಸ್ಥೆಯಾದ ತುರೀಯಾವಸ್ಥೆಯಲ್ಲಿ ಅಂದರೆ ಬ್ರಹ್ಮಾಂಡ ದ ಪ್ರಜ್ಞೆಯಲ್ಲಿ ಸ್ಥಾಪಿತವಾಗಿರುವಂತಹವನು. ದೇವಿಯು ಸಹಾ ಸದಾ ಶಿವನ ಆಲಿಂಗನದಲ್ಲೇ ಇರುವುದರಿಂದ ದೇವಿಯೂ ಬ್ರಹ್ಮಾಂಡ ದ ಪ್ರಜ್ಞೆಯಲ್ಲಿ ಸ್ಥಾಪಿತವಾಗಿದ್ದಾಳೆ.

ಶಿವ ಮತ್ತು ಪರಾಶಕ್ತಿಯ ಆಲಿಂಗನದಿಂದ ಹೊರಹೊಮ್ಮುತ್ತಿರುವ ಪರಮಾನಂದವು ಸಂಪೂರ್ಣವೂ ಸದಾ ಕಾಲದಲ್ಲಿಯೂ ಇರುವಂತಾದ್ದು ಆಗಿದೆ.
ಈ ರೀತಿಯಾಗಿ ಶಿವ ಮತ್ತು ಶಕ್ತಿಯರನ್ನು ಕುರಿತು ಧ್ಯಾನಿಸುವುದರಿಂದ ಸಮಾಧಿ ಸ್ಥಿತಿ ತಲುಪಲು ಸಾಧ್ಯವಾಗುತ್ತದೆ.

ದೇವಿಯ ಕಂಠವನ್ನು ಧ್ಯಾನಿಸಿದರೆ ಆಳವಾಗಿ ನಮ್ಮಲ್ಲಿ ತಳಊರಿದ್ದು, ನಮ್ಮ ಪ್ರಾಪಂಚಿಕ ಮತ್ತು ಅಧ್ಯಾತ್ಮಿಕ ಪ್ರಗತಿಗೆ ಅಡಚಣೆ ಉಂಟು ಮಾಡುತ್ತಿರುವ ಸಂಸ್ಕಾರಗಳು ಶುದ್ಧವಾಗುತ್ತವೆ.

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: