ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ
ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀ ಸೂಕ್ತವು ದೇವಿಯನ್ನು ಅದರಲ್ಲೂ ಮಹಾಲಕ್ಷ್ಮಿಯ ಆರಾಧನೆಯಲ್ಲಿ ಬಳಸುವ ಋಗ್ವೇದದ ಖಿಲ ಸೂಕ್ತ ಗಳಲ್ಲಿ ಒಂದು.
ಪುರುಷ ಸೂಕ್ತವು ನಾಲ್ಕೂ ವೇದಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳೊಂದಿಗೆ ಇದೆ. ಋಗ್ವೇದದ ಪುರುಷಸೂಕ್ತ ದಲ್ಲಿ ೧೬ ಮಂತ್ರಗಳಿದ್ದು ಈ ಮಂತ್ರಗಳನ್ನು ಶ್ರೀ ಸೂಕ್ತದ ೧೫ ಮಂತ್ರಗಳೊಂದಿಗೆ ಸಂಪುಟೀಕರಿಸಿ ಪಾರಾಯಣ ಮಾಡುವ ಕ್ರಮವು ಇದೆ.
ಶ್ರೀ ಸೂಕ್ತದ ಪ್ರಯೋಗವು ಹಲವಾರು ರೀತಿಯಲ್ಲಿದ್ದು, ತಿಥಿ ನಿತ್ಯಾ ದೇವಿಯರ ಪೂಜೆಯಲ್ಲಿಯೂ ಸಹಾ ಒಂದೊಂದು ತಿಥಿ ನಿತ್ಯಾ ದೇವತೆಯೊಂದಿಗೆ ಒಂದೊಂದು ಶ್ರೀ ಸೂಕ್ತದ ಮಂತ್ರವನ್ನು ಹೇಳುವ ಕ್ರಮವನ್ನೂ ನಾನು ನೋಡಿದ್ದೇನೆ. ಹಾಗೆಯೇ ಶ್ರೀ ಸೂಕ್ತದ ಒಂದೊಂದು ಮಂತ್ರದ ಒಟ್ಟಿಗೆ ಋಗ್ವೇದದಲ್ಲಿರುವ ಶ್ರೀ ಮಹಾಲಕ್ಷ್ಮೀ ಮಂತ್ರ ಮತ್ತು ಶ್ರೀ ದುರ್ಗಾ ಸಪ್ತಶತಿಯ ಆಯ್ದ ೧೫ ಶ್ಲೋಕಗಳನ್ನು ಸೇರಿಸಿ ಪಾರಾಯಣ ಮಾಡುವ ಕ್ರಮವೂ ಇದೆ.
ಇಲ್ಲಿ ಋಗ್ವೇದದ ಪುರುಷ ಸೂಕ್ತದೊಂದಿಗೆ ಶ್ರೀ ಸೂಕ್ತವನ್ನು ಸಂಪುಟೀಕರಿಸಿ ಪಾರಾಯಣ ಮಾಡಲಾಗಿದೆ. ಹೀಗೆ ಪಾರಾಯಣ ಮಾಡುವಾಗ ಪುರುಷ ಸೂಕ್ತದ ಒಂದೊಂದು ಮಂತ್ರದ ಮೊದಲು ಮತ್ತು ಕಡೆಯಲ್ಲಿ ಓಂ ಪ್ರಣವವನ್ನು ಸೇರಿಸಲಾಗಿದೆ. ಹಾಗೆಯೇ ಶ್ರೀ ಸೂಕ್ತದ ಒಂದೊಂದು ಮಂತ್ರದ ಮೊದಲು ಓಂ ಶ್ರೀಂ ಮತ್ತು ಕಡೆಯಲ್ಲಿ ಶ್ರೀಂ ಓಂ ಎಂದು ಸಂಪುಟೀಕರಿಸಲಾಗಿದೆ. ಈ ರೀತಿಯ ಪಾರಾಯಣವು ಶಿವ ಶಕ್ತಿಗಳ ಆರಾಧನೆಯಾಗಿದ್ದು ಅತ್ಯಂತ ಶೀಘ್ರ ಫಲವನ್ನು ನೀಡುವುದಾಗಿ ಹೇಳಲಾಗಿದೆ. ಈ ರೀತಿಯ ಪಾರಾಯಣ ಕ್ರಮ ಕೇರಳ ರಾಜ್ಯದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು