ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳು: ಎರಡನೇ ಅರ್ಥ- “ಭಾವಾರ್ಥ”


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಈ ಹಿಂದೆ ನಾವು ಪಂಚದಶೀ ಮಂತ್ರದ ಗಾಯತ್ರೀ ಅರ್ಥವನ್ನು ತಿಳಿದುಕೊಂಡಿದ್ದೇವೆ. ಇನ್ನು ಮುಂದಿನ ಅರ್ಥ ಭಾವಾರ್ಥ. ಭಾವಾರ್ಥ ಸೇರಿ ಮುಂದಿನ ಆರು ಅರ್ಥಗಳು ಯೋಗಿನಿ ಹೃದಯದಲ್ಲಿ ಲಭ್ಯವಿದ್ದು, ಶ್ರೀ ಭಾಸ್ಕರಮುಖಿಗಳು ಅಲ್ಲಿರುವ ಆರು ಅರ್ಥಗಳನ್ನೇ ತಮ್ಮ ವಾರಿವಾಸ್ಯ ರಹಸ್ಯದಲ್ಲೂ ದಾಖಲಿಸಿದ್ದಾರೆ.

ನಮೆಲ್ಲರಿಗೂ ತಿಳಿದಿರುವಂತೆ ಪಂಚದಶೀ ಮಂತ್ರದಲ್ಲಿ ಹದಿನೈದು ಅಕ್ಷರಗಳು ಇದ್ದು ಅವು ಮೂರು ಗುಂಪುಗಳಾಗಿ / ಕೂಟಗಳಾಗಿ. ಕಾದಿ ಸಂಪ್ರದಾಯದಂತೆ ಮೊದಲ ಕೂಟದಲ್ಲಿ ಐದು ಅಕ್ಷರಗಳು,ಎರಡನೇ ಕೂಟದಲ್ಲಿ ಆರು ಅಕ್ಷರಗಳು ಮತ್ತು ಮೂರನೇ ಕೂಟದಲ್ಲಿ ನಾಲ್ಕು ಅಕ್ಷರಗಳಿದ್ದು ಒಂದೊಂದು ಕೂಟದ ಕೊನೆಯ ಅಕ್ಷರವು ಹ್ರೀಂ ಎಂಬ ಅಕ್ಷರದಿಂದ ಕೊನೆಯಾಗುತ್ತದೆ. ಹ್ರೀಂ ಬೀಜಾಕ್ಷರವು ಮೂರು ಅಕ್ಷರಗಳ ಸಂಯುಕ್ತ ಬೀಜಾಕಷರವಾಗಿದ್ದು, “ಹ” ರೇಫ಼” ಮತ್ತು “ಈಂ” ಎಂಬ ಮೂರು ಅಕ್ಷರಗಳನ್ನು ಒಳಗೊಂಡಿದ್ದರೂ ಬೀಜಾಕ್ಷರ ಎಂದು ಎಣಿಕೆ ಮಾಡುವಾಗ ಒಂದೇ ಬೀಜಾಕ್ಷರವಾಗಿ ಎಣಿಕೆ ಮಾಡಲಾಗುತ್ತದೆ ಆದರೆ ಇದರ ಉಚ್ಛಾರಣೆಯ ರೀತಿಯನ್ನು ಗುರುಮುಖದಿಂದ ತಿಳಿಯಬೇಕು.

ಶ್ರೀ ಲಲಿತಾ ಸಹಸ್ರನಾಮದ ” ವಾಗ್ಭವಕೂಟೈಕ ಸ್ವರೂಪ ಮುಖಪಂಕಜಾ,” ” ಕಂಠಾಧಃ ಕಟಿಪರ್ಯಂತಮು ಮಧ್ಯಕೂಟ ಸ್ವರೂಪಿಣಿ” ” ಶಕ್ತಿಕೂಟೈಕತಾಪನ್ನ ಕಟ್ಯಧೋ ಭಾಗಧಾರಿಣೀ’ ಎಂಬ ಮೂರು ನಾಮಗಳು, ಪಂಚದಶೀ ಮಂತ್ರದ ಮೂರು ಕೂಟಗಳಾಗಿವೆ.

ಪಂಚದಶೀ ಮಂತ್ರದ ಮೊದಲನೇ ಕೂಟವು ಸೃಷ್ಟಿಯನ್ನೂ ಎರಡನೆಯ ಕೂಟವು ಸ್ಥಿತಿಯನ್ನೂ ಮೂರನೆಯ ಕೂಟವು ಸಂಹಾರವನ್ನು ಸೂಚಿಸುತ್ತದೆ.

ಹಾಗೆಯೇ ಈ ಕೂಟಗಳು ಒಂದೊಂದು ಕೂಟವೂ ಇನ್ನುಳಿದ ಎರಡು ಕೂಟಗಳನ್ನು ಸಹಾ ಸೂಚಿಸಿದ್ದು ಅದು

ಮೊದಲನೇ ಕೂಟವು  ಸೃಷ್ಠಿ – ಸೃಷ್ಟಿ , ಸೃಷ್ಟಿ – ಸ್ಥಿತಿ ಮತ್ತು ಸೃಷ್ಟಿ – ಸಂಹಾರವನ್ನೂ
ಎರಡನೆಯ ಕೂಟವು  ಸ್ಥಿತಿ – ಸೃಷ್ಟಿ , ಸ್ಥಿತಿ – ಸ್ಥಿತಿ . ಮತ್ತು ಸ್ಥಿತಿ – ಸಂಹಾರವನ್ನೂ
ಮೂರನೆಯ ಕೂಟವು ಸಂಹಾರ – ಸೃಷ್ಟಿ, ಸಂಹಾರ – ಸ್ಥಿತಿ ಮತ್ತು ಸಂಹಾರ – ಸಂಹಾರವನ್ನು ಸೂಚಿಸುತ್ತದೆ.

ಈಗ ಈ ಕೂಟಗಳ ಅಧಿಪತಿಗಳನ್ನು ತಿಳಿದುಕೊಳ್ಳೋಣ
ಮೊದಲನೇ ಕೂಟಕ್ಕೆ, ಬ್ರಹ್ಮ-ಭಾರತಿ, ಎರಡನೇ ಕೂಟಕ್ಕೆ ವಿಷ್ಣು -ಪೃಥ್ವಿ
ಮೂರನೇ ಕೂಟಕ್ಕೆ ರುದ್ರ ಮತ್ತು ಗೌರಿಯರನ್ನು ಅಧಿಪತಿಗಳು ಎಂದು ಹೇಳಲಾಗಿದೆ.

ಇಲ್ಲಿಯವರೆಗೂ ನಾವು ಕೂಟಗಳ ಬಗ್ಗೆ ತಿಳಿದುಕೊಂಡಿದ್ದು ಈಗ ಈ ಕೂಟದಲ್ಲಿರುವ ಅಕ್ಷರಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

 ಮೊದಲನೇ ಕೂಟದ ಅಕ್ಷರಗಳು :

ಮೊದಲನೇ ಅಕ್ಶರ, ಬ್ರಹ್ಮ ಸ್ವರೂಪ, ಎರಡನೇದು ಭಾರತಿ, ಮೂರನೆಯದು ವಿಷ್ಣು ನಾಲ್ಕನೆಯದು ಪೃಥ್ವಿ ಐದನೆಯ ಅಕ್ಷರ ಹ್ರೀಂ ನಲ್ಲಿನ ಮೂರು ಅಕ್ಷರಗಳಲ್ಲಿ ಮೊದಲನೆಯ “ಹ” – ರುದ್ರ, ಎರಡನೆಯ “ರೇಫ” ರುದ್ರಾಣಿ ಮತ್ತು ಮೂರನೆಯ “ಈ” ಇದು ಶಾಂತ ಮತ್ತು ಅಂಬಿಕಾ ಸ್ವರೂಪಗಳಾಗಿರುವ ಅಕ್ಷರಗಳು

ಈಗ ಎರಡನೇ ಕೂಟದ ಅಕ್ಷರಗಳು :

ಈ ಕೂಟದಲ್ಲಿ ಮೊದಲನೇ ಅಕ್ಷರ ಮತ್ತು ನಾಲ್ಕನೇ ಅಕ್ಷರ ಒಂದೇ ಆಗಿರುವುದರಿಂದ ಮತ್ತು ಮೂರನೆಯ ಕೂಟದಲ್ಲಿ ನಾಲ್ಕು ಅಕ್ಷರಗಳು ಮಾತ್ರ ಇರುವುದರಿಂದ ಈ ಕೂಟದ ನಾಲ್ಕನೆ ಅಕ್ಷರದ ಸ್ವರೂಪವನ್ನು ಮೂರನೇ ಕೂಟದಲ್ಲಿ ಹೇಳಲಾಗಿದೆ.
ಎರಡನೇ ಕೂಟದ ಮೊದಲನೇ ಅಕ್ಷರ ಬ್ರಹ್ಮ ಸ್ವರೂಪ, ಎರಡನೇ ಅಕ್ಷರ ಭಾರತಿ, ಮೂರನೆಯದು ವಿಷ್ಣು, ನಾಲ್ಕನೆಯ ಅಕ್ಷರದ ಸ್ವರೂಪ ಮೂರನೇ ಕೂಟದಲ್ಲಿ ಹೇಳಲಾಗಿದೆ ಐದನೆಯ ಅಕ್ಷರ ಪೃಥ್ವಿ ಆರನೆಯ ಅಕ್ಷರ ಹ್ರೀಂ ರುದ್ರ, ರುದ್ರಾಣಿ , ಶಾಂತಾ ಮತ್ತು ಅಂಬಿಕಾ ಸ್ವರೂಪಗಳು

ಈಗ ಮೂರನೆಯ ಕೂಟದ ಅಕ್ಷರಗಳು:

ಮೂರನೆಯ ಕೂಟದ ಮೊದಲ ಅಕ್ಷರ ಎರಡನೆಯ ಕೂಟದ ನಾಲ್ಕನೆ ಅಕ್ಷರವಾಗಿದ್ದು ಬ್ರಹ್ಮ ಸ್ವರೂಪ, ಎರಡನೇ ಅಕ್ಷರ ಭಾರತಿ, ಮೂರನೆಯ ಅಕ್ಷರ ವಿಷ್ಣು ನಾಲ್ಕನೆಯ ಅಕ್ಷರ ಪೃಥ್ವಿ ಐದನೆಯ ಅಕ್ಷರ ಹ್ರೀಂ ರುದ್ರ, ರುದ್ರಾಣಿ ಶಾಂತಾ ಮತ್ತು ಅಂಬಿಕಾ ಸ್ವರೂಪಗಳು
ಪಂಚದಶೀ ಮಂತ್ರದ ಭಾವಾರ್ಥದ ಸಾರಾಂಶವನ್ನು ನೋಡುವುದಾದರೆ, ಈ ಮಂತ್ರದ ಒಂದೊಂದು

ಕೂಟವೂ ಸಪ್ತದೇವತೆಗಳ, ಅಂದರೆ ಬ್ರಹ್ಮ, ಭಾರತಿ, ವಿಷ್ಣು , ಪೃಥ್ವಿ, ರುದ್ರ , ರುದ್ರಾಣಿ, ಶಾಂತಾ ಮತ್ತು ಅಂಬಿಕೆಯ ಸ್ವರೂಪಗಳಾಗಿವೆ. ( ಶಾಂತಾ ಮತ್ತು ಅಂಬಿಕೆಯರು ಸೇರಿ ಒಂದೇ ಸ್ವರೂಪವೆಂದು ಭಾವಿಸಲಾಗಿದೆ)

ಪಂಚದಶೀ ಮಂತ್ರದ ಅಕ್ಷರಗಳಿಗೆ ನೀಡಿರುವ ಆರ್ಥವನ್ನೇ ಪಂಚದಶೀ ಮಂತ್ರದ ಭಾವಾರ್ಥ ವೆಂದು ಭಾವಿಸಬೇಕು ಎಂದು ಭೈರವ ಭೈರವೀ ಸಂವಾದ ರೂಪದಲ್ಲಿರುವ ಯೋಗಿನೀ ಹೃದಯದಲ್ಲಿ ಮಂತ್ರ ಸಂಕೇತವನ್ನು ತಿಳಿಸುವ ಎರಡನೇ ಅಧ್ಯಾಯದ ಹದಿನಾರನೇ ಶ್ಲೋಕವು ” ಅಕ್ಷರಾರ್ಥೋಹಿ ಭಾವಾರ್ಥಃ ಕೇವಲಃ ಪರಮೇಶ್ವರೀ” ಎಂದು ಹೇಳಿದ್ದು, ಶ್ರೀ ಭಾಸ್ಕರಮಖಿಗಳು, ವಾರಿವಾಸ್ಯ ರಹಸ್ಯದ ಎರಡನೇ ಅದ್ಯಾಯದ 73 ನೇ ಶ್ಲೋಕದ ಕೊನೆಯ ಸಾಲನಲ್ಲಿ “ ತೇನಾಂಬಾಮನುಜಗತಾಮಭೇದ ಏವಾತ್ರ ಭಾವಾರ್ಥಃ” ಎಂದು ಹೇಳಿದ್ದಾರೆ. ಹಾಗಾಗಿ ಪಂಚದಶೀ ಮಂತ್ರವು ಸೃಷ್ಟಿ, ಸ್ಥಿತಿ ಸಂಹಾರ ಕ್ರಿಯೆಗಳ ಸಂಕೇತವೂ ಮತ್ತು ಸಪ್ತದೇವತೆಗಳ ಸ್ವರೂಪವೂ ಆಗಿರುವುದನ್ನು ನಾವೀಗ ತಿಳಿದುಕೊಂಡಿದ್ದೇವೆ.

ಶ್ರೀ ವಿದ್ಯಾ ಪಂಚದಶೀ ಮಂತ್ರದ 7 ಅರ್ಥಗಳ ಲಿಂಕನ್ನು ಸಹಾ ಇಲ್ಲಿ ಕೊಟ್ಟಿದ್ದೇನೆ:

ಮೊದಲನೇ ಅರ್ಥ – “ಗಾಯತ್ರಿ

ಎರಡನೇ ಅರ್ಥ- “ಭಾವಾರ್ಥ

ಮೂರನೇ ಅರ್ಥ- “ಸಂಪ್ರದಾಯಾರ್ಥ

ನಾಲ್ಕನೇ ಅರ್ಥ- “ನಿಗರ್ಭ ಅರ್ಥ

ಐದನೇ ಅರ್ಥ- “ಕೌಲಿಕಾರ್ಥ

ಆರನೇ ಅರ್ಥ – “ಸರ್ವರಹಸ್ಯಾರ್ಥ

ಏಳನೆಯ ಅರ್ಥ – ” ಮಹಾತತ್ವಾರ್ಥ”

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: