ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ನನ್ನ ಪರಮೇಷ್ಠಿ ಗುರುಗಳಾದ ಶ್ರೀ ಚಿದಾನಂದ ನಾಥರು ಶೃಂಗೇರೀ ಶಾರದಾ ಪೀಠದ ಅಂದಿನ ಪೀಠಾಧಿಪತಿಗಳಾಗಿದ್ದ ಜಗದ್ಗುರು ಮೂರನೇ ಚಂದ್ರಶೇಖರ ಭಾರತೀ ಸ್ವಾಮಿಗಳ ಆಶೀರ್ವಾದ ಪಡೆಯಲು ಅವರನ್ನು ಭೇಟಿಯಾದಾಗ ಶ್ರೀಗಳು ಚಿದಾನಂದನಾಥರಿಗೆ ಶ್ರೀ ಉಚ್ಛಿಷ್ಠ ಮಹಾಗಣಪತಿಯ ಸಹಸ್ರನಾಮವನ್ನು ಹೇಳುವಂತೆ ಅಪ್ಪಣೆ ಮಾಡುತ್ತಾರೆ. ಈ ಸಹಸ್ರನಾಮವನ್ನು ಅತ್ಯಂತ ಗೌಪ್ಯವಾಗಿ ಕಾಪಾಡಿಕೊಳ್ಳುವಂತೆ ಅವರ ಶ್ರೀ ವಿದ್ಯಾ ಗುರು ಶ್ರೀ ಗುಹಾನಂದನಾಥರಿಂದ ಆದೇಶಹೊಂದಿದ್ದ ನನ್ನ ಪರಮೇಷ್ಠಿ ಗುರುಗಳು ಆ ವಿಷಯವನ್ನು ಜಗದ್ಗುರುಗಳ ಮುಂದೆ ಅತ್ಯಂತ ವಿನಯದಿಂದ ಬಿನ್ನವಿಸುತ್ತಾರೆ. ಆಗ ಜಗದ್ಗುರುಗಳು, ಶ್ರೀ ಗುಹಾನಂದನಾಥರಿಗೂ, ತಮಗೂ, ಮತ್ತು ಶ್ರೀ ಚಿದಾನಂದನಾಥರಿಗೂ ಯಾವುದೇ ವ್ಯತ್ಯಾಸ ಅಥವಾ ಭೇದವಿಲ್ಲ ಎಂಬುದನ್ನು ತಿಳಿಸಿ, ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕದ ಬಗ್ಗೆ ಶ್ರೀ ಚಿದಾನಂದನಾಥರ ಗಮನ ಸೆಳೆಯುತ್ತಾರೆ.
ಇಂತಹ ಒಂದು ಅಪೂರ್ವ ಘಟನೆಯ ಬಗ್ಗೆ ಓದಿದ್ದು ನನ್ನ ನೆನಪಿಗೆ ಬಂದದ್ದಕ್ಕಾಗಿಯೇ, ನಾನು ಮನೀಷಾ ಪಂಚಕದ ಬಗ್ಗೆ ವಿಷಯ ಸಂಗ್ರಹಿಸಿ ಇಲ್ಲಿ ಪ್ರಸ್ತುತ ಪಡಿಸಲು ಕಾರಣವಾಯಿತು.. ಈ ನೆನಪನ್ನು ನನಗೆ ತಂದುಕೊಟ್ಟಿದ್ದು, ಆ ಮೂಲಕ ನಾನು ಮನೀಷಾ ಪಂಚಕದ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಮತ್ತು ತಿಳಿದದ್ದನ್ನು ಹಂಚಿಕೊಳ್ಳಬೇಕು ಎಂಬ ಇಚ್ಚೆ ನನಗೆ ಆಗಿದ್ದು, ಇದೆಲ್ಲವೂ ನನ್ನ ಗುರುಗಳ ಆದೇಶದಿಂದಲೇ ಎಂದು ನಾನು ಭಾವಿಸಿದ್ದೇನೆ. ಮನೀಷಾ ಪಂಚಕದಲ್ಲಿ ಶ್ರೀ ಭಗವತ್ಪಾದರು ಹೇಳಿರುವ ವಿಷಯಗಳು ಅತ್ಯಂತ ಗಹನವಾದ ವಿಷಯಗಳಾಗಿದ್ದು ಅವನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಅದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಯೋಗ್ಯತೆ, ಅರ್ಹತೆ ನನಗಿಲ್ಲವಾದರೂ, ಗುರುಗಳ ಆದೇಶವನ್ನು ಕಾಯಾ ವಾಚಾ ಮನಸಾ ಪಾಲಿಸುವ ಪ್ರಯತ್ನವನ್ನು ಮಾತ್ರ ಮಾಡಿದ್ದೇನೆ. ಇದರ ತಪ್ಪು ಒಪ್ಪುಗಳೆಲ್ಲವನ್ನೂ ಗುರುಗಳ, ಗುರುಮಂಡಲದ ಪಾದಕಮಲಗಳಿಗೆ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಅರ್ಪಿಸುತ್ತಿದ್ದೇನೆ. ಮನೀಷಾ ಪಂಚಕವನ್ನು ಅರ್ಥಮಾಡಿಕೊಳ್ಳಲು ವಿಷಯ ಸಂಗ್ರಹಣೆಗೆ ಹೊರಟ ನನಗೆ ನನ್ನ ಗುರುಗಳು ಈ ಕಳೆದ ಹತ್ತು ಹನ್ನೆರಡು ದಿನಗಳಲ್ಲಿ ಹೇಗೆ ಮಾರ್ಗದರ್ಶನ ನೀಡಿದರು ಮತ್ತು ನಾನು ಅರ್ಥಮಾಡಿಕೊಂಡದ್ದು ತಪ್ಪಾದಾಗ ಅದನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಹೇಗೆ ಹಾದಿ ತೋರಿಸಿದರು ಎನ್ನುವುದನ್ನು ನೆನೆಸಿಕೊಂಡರೆ ಮೈ ರೋಮಾಂಚನ ವಾಗುತ್ತದೆ.
ಶ್ರೀ ಭಗವತ್ಪಾದರ ಜೀವನದಲ್ಲಿ ಬಂದು ಹೋದ ಒಂದು ಅನಿರೀಕ್ಷಿತ ಘಟನೆಯ ಫಲವೇ ಮನೀಷಾ ಪಂಚಕದ ರಚನೆಗೆ ಕಾರಣವಾಯಿತಷ್ಟೇ ಅಲ್ಲದೆ, ವರ್ಣ, ಜಾತಿ, ಧರ್ಮ, ಕುಲ, ಮೇಲು,ಕೀಳು ಎಂಬ ಅನಿಷ್ಟ ರೋಗದಿಂದ ಕಣ್ಮುಚ್ಚಿ ಹೋಗಿರುವ ನಮ್ಮ ಕಣ್ಣುಗಳನ್ನು ಸಹಾ ತೆರೆಸಿದೆ ಮತ್ತು ತೆರೆಸುತ್ತಿದೆ.
ಭಗವತ್ಪಾದರು ವಾರಣಾಸಿಯ ಗಂಗಾ ನದಿಯಲ್ಲಿ ಸ್ನಾನ ಮುಗಿಸಿ ತಮ್ಮ ಶಿಷ್ಯರೊಂದಿಗೆ ತಮ್ಮ ಕುಟೀರಕ್ಕೆ ವಾಪಸಾಗುತ್ತಿರುವಾಗ ಇವರ ಮುಂದೆ, ಹಾದಿಯ ಮಧ್ಯದಲ್ಲಿ ಸ್ಮಶಾನ ಕಾಯುವ ವೃತ್ತಿ ಯನ್ನು ಮಾಡುತ್ತಿರುವ ವ್ಯಕ್ತಿ ಅಡ್ಡಬರುತ್ತಾನೆ. ಭಗವತ್ಪಾದರ ಶಿಷ್ಯರು ಮತ್ತು ಭಗವತ್ಪಾದರು ಈ ವ್ಯಕ್ತಿಯನ್ನು ಪಕ್ಕಕ್ಕೆ ಸರಿ, ದೂರ ಹೋಗು ಎಂದು ಗದರಿಸುತ್ತಾರೆ. ಸ್ಮಶಾನ ಕಾಯುವ ವ್ಯಕ್ತಿಯನ್ನು ಎಲ್ಲಕಡೆ, ಮನೀಷಾ ಪಂಚಕದ ಮೊದಲನೇ ಶ್ಲೋಕವೂ ಸೇರಿದಂತೆ ಚಾಂಡಾಲ ಎಂದೇ ಸಂಭೋದಿಸಲಾಗಿದೆ.
ಪಕ್ಕಕ್ಕೆ ಸರಿ, ದೂರ ಹೋಗು ಎಂಬುದನ್ನು ಕೇಳಿದ ಆ ಸ್ಮಶಾನ ಕಾಯುವ ವ್ಯಕ್ತಿ ಭಗವತ್ಪಾದರನ್ನು ಅಪಹಾಸ್ಯ ಮಾಡಿ ಅವರನ್ನೇ ಹಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆತನು ಕೇಳಿದ ಪ್ರಶ್ನೆಗಳು ಇಲ್ಲಿ ಮೊದಲ ಭಾಗದ 2 ಶ್ಲೋಕಗಳಾದರೆ ಅದಕ್ಕೆ ಭಗವತ್ಪಾದರು ನೀಡಿದ ಉತ್ತರವೇ ಎರಡನೇ ಭಾಗದ ಐದು ಶ್ಲೋಕಗಳು ಮನೀಷಾ ಪಂಚಕ ಎನಿಸಿಕೊಂಡಿವೆ. ಮನೀಷಾ ಎನ್ನುವ ಪದಕ್ಕೆ ಹಲವಾರು ಅರ್ಥಗಳಿದ್ದರೂ ವಿವೇಕ ಎನ್ನುವ ಅರ್ಥ ಬಹಳ ಸೂಕ್ತ ಎನಿಸುತ್ತದೆ. ಪಂಚಕ ಎಂದರೆ ಐದು ಅಂಕೆಗೆ ಸಂಬಂಧಿಸಿದ್ದು, ಐದು ಆಗಿರವುದು. ಮನೀಷಾ ಪಂಚಕ ಎಂದರೆ ವಿವೇಕವನ್ನು ಹೇಳುವ ಐದು ಸೂಕ್ತಗಳು ಎಂದು ಹೇಳಬಹುದು ಎನಿಸುತ್ತದೆ.
ಚಿನ್ಮಯಾನಂದ ಮಿಷನ್ ನ ಸ್ವಾಮಿ ತೇಜೋಮಯಾನಂದರು ಮನೀಷಾ ಪಂಚಕವನ್ನು “ Conviction of the wise” ಅಂದರೆ ವಿವೇಕವಂತನ ಅಚಲವಾದ ನಂಬಿಕೆ ಎಂದು ಕರೆದಿದ್ದಾರೆ.
ಈ ಸ್ಮಶಾನ ಕಾಯುವ ವ್ಯಕ್ತಿಯ ಪ್ರಶ್ನೆಗಳು ಭಗವತ್ಪಾದರನ್ನು ಚುಚ್ಚುವ ವಿಡಂಬನೆ ಯಾಗಿತ್ತು ಎನ್ನುತ್ತಾರೆ ಸ್ವಾಮಿ ತೇಜೋಮಯಾನಂದರು. ಆ ವ್ಯಕ್ತಿಯು ಭಗವತ್ಪಾದರನ್ನು ಬಡಿದೆಬ್ಬಿಸುವ ಒಂದು ಸಿಡಿಗುಂಡನ್ನೇ ಸಿಡಿಸಿದ್ದ. ಎಂಟನೇ ಶತಮಾನದ ಮಧ್ಯಭಾಗದಲ್ಲಿ ಸಮಾಜವು ಜಾತಿಗಳ ಹೆಸರಿನಲ್ಲಿ ಒಡೆದು ಹೋಗಿತ್ತು, ಅಸಹಿಷ್ಣತೆ ತಾಂಡವವಾಡುವ ಮೂಲಕ ಭಾರತದ ಪರಂಪರೆಯನ್ನು ಕಾಂತಿಹೀನಗೊಳಿಸುವ ಭೀತಿಯನ್ನುಂಟುಮಾಡಿತ್ತು. ಆ ದಿನಗಳು ಭಾರತದ ಇತಿಹಾಸದ ದುಃಖಪೂರಿತ ಪುಟಗಳಲ್ಲಿ ಸೇರಿಹೋದ ದಿವಸಗಳು ಎನ್ನುತ್ತಾರೆ ಅವರು.
ಈ ಅಸಮಾನತೆ ಮತ್ತಷ್ಟು ಅತಿಯಾಗಿ ಭರತಭೂಮಿಯನ್ನು ವ್ಯಾಪಿಸಿದಾಗ ಆಯಾಯ ಪ್ರಾಂತಗಳ ಮಟ್ಟಿಗೆ ಅಸಮಾನತೆಯ ವಿರುದ್ಧ ಕ್ರಾಂತಿಗಳೇ ಆರಂಭವಾದುವು. ಅಂತಹ ಒಂದು ಕ್ರಾಂತಿ ಈಗ ಕರ್ನಾಟಕದ ಭಾಗವಾಗಿರುವ ಬಸವಕಲ್ಯಾಣದಲ್ಲೂ 12 ನೆಯ ಶತಮಾನದಲ್ಲಿ ಆಗಿದ್ದು ನಮಗೆಲ್ಲಾ ತಿಳಿದೇ ಇದೆ.
ಶ್ರೀ ಬಸವಣ್ಣನವರು ತಮ್ಮ ಒಂದು ವಚನದಲ್ಲಿ “ಚಾಂಡಾಲ ವಾಟಿಕಾಯಾಂ ವಾ ಶಿವಭಕ್ತಃ ಸ್ಥಿತೋಃ ಯದಿ ತಚ್ಛ್ಪ್ರೇಣಿಃ ಶಿವಲೋಕಃ ಸ್ವಾತ್ ಸದ್ಗೃಹಂ ಶಿವಮಂದಿರಂ” ಎನ್ನುವ ಶ್ಲೋಕವನ್ನು ಉಲ್ಲೇಖಿಸುತ್ತಾರೆ. ಚಾಂಡಾಲರು ಎಂದು ನಾವು ಕರೆಯುವವರು ವಾಸಿಸುವ ಸ್ಥಳದಲ್ಲಿ ಒಬ್ಬ ಶಿವಭಕ್ತ ಇದ್ದರೆ ಅದು ಶಿವಲೋಕವೇ ಆಗುತ್ತದೆ ಮತ್ತು ಆ ಮನೆಯೇ ಶಿವಮಂದಿರ ಎನ್ನುವುದು ಇದರ ಭಾವಾರ್ಥ.
ಹಾಗೆಯೇ ತಮ್ಮ ಇನ್ನೊಂದು ವಚನದಲ್ಲಿ,
ವ್ಯಾಸ ಬೋಯಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ, ಮಂಡೋದರಿ ಕಪ್ಪೆಯ ಮಗಳು, ಅಗಸ್ತ್ಯ ಕಬ್ಬಿಲ, ದೂರ್ವಾಸ ಮುಚ್ಚಿಗ, ಕಶ್ಯಪ ಕಮ್ಮಾರ, ಕೌಂಡಿನ್ಯ ಋಷಿ ನಾವಿದ, ಆದರೇನು ಅವರೆಲ್ಲರೂ ಪೂಜನೀಯರೇ ಆಗಿದ್ದಾರೆ ಎಂದು ಹೇಳುತ್ತಾ, ಜಾತಿ, ವೃತ್ತಿ, ವರ್ಣ ಇವು ಯಾವುವೂ ಮಾನವರಲ್ಲಿ ಅಸಮಾನತೆ ತರುವಂತಹುವಲ್ಲಾ ಎಂದು ಪ್ರತಿಪಾದಿಸಿದ್ದಾರೆ. ಇವೆಲ್ಲವೂ ಪುಸ್ತಕದಲ್ಲಿ, ಉಪನ್ಯಾಸಗಳಿಗೆ ಸೀಮಿತವಾಗಿ ಆಚರಣೆಯಲ್ಲಿ ಬರದೇ ಇರುವುದು ನಮ್ಮ ದೌರ್ಭಾಗ್ಯವಲ್ಲದೆ ಬೇರೇನೂ ಅಲ್ಲಾ. ಉತ್ತಮ ಕುಲ ಎಂದು ನಾವು ಭಾವಿಸುವ ಕುಲದಲ್ಲಿ ಹುಟ್ಟಿ ಅಧಮ ನಡತೆಯುಳ್ಳವರನ್ನೂ, ಕೀಳು ಕುಲ ಎಂದು ನಾವು ಭಾವಿಸುವ ಕುಲದಲ್ಲಿ ಹುಟ್ಟಿ ಅತ್ಯುತ್ತಮ ನಡತೆಯನ್ನು ರೂಪಿಸಿಕೊಂಡಿರುವವರನ್ನೂ ನಾವು ಈ ಸಮಾಜದಲ್ಲಿ ಕಾಣುತ್ತಿದ್ದರೂ, ಎಲ್ಲಾ ಅಣು ರೇಣು ತೃಣ ಕಾಷ್ಟಗಳಲ್ಲಿ ಬೆಳಗುತ್ತಿರುವ ಆತ್ಮ ಒಂದೇ ಎಂದು ತಿಳಿದಿದ್ದರೂ ಅದನ್ನು ವಾಸ್ತವವಾಗಿ ನಿಜಜೀವನದಲ್ಲಿ ರೂಢಿಸಿಕೊಳ್ಳಲು ಏಕೆ ಆಗುತ್ತಿಲ್ಲಾ ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲಾ.
ಈಗಂತೂ ಪ್ರಜಾಪ್ರಭುತ್ವದ ಬುಡವನ್ನೇ ಅಲುಗಾಡಿಸುತ್ತಿರುವ, ಧರ್ಮ ಧರ್ಮಗಳ ನಡುವಿನ ತಿಕ್ಕಾಟ, ಜಾತಿಯಾಧಾರಿತ ರಾಜಕಾರಣ ಇವುಗಳನ್ನು ನೋಡಿ ಶಂಕರ ಭಗವತ್ಪಾದರು ಏನೆನ್ನುತ್ತಿದ್ದರೋ, ಬಸವಣ್ಣನವರು ಏನೆನ್ನುತ್ತಿದ್ದರೋ ಊಹಿಸಲೂ ಅಸಾಧ್ಯ ಆಗಿದೆ.
ವಾರಣಾಸಿಯಲ್ಲಿ ಶ್ರೀ ಶಂಕರ ಭಗವತ್ಪಾದರ ಹಾದಿಗೆ ಅಡ್ಡಲಾಗಿ ಬಂದ ಚಾಂಡಾಲ ( ಈ ಪದ ವನ್ನು ಉಪಯೋಗಿಸಲು ನನ್ನ ಮನಸಿಗೆ ಕಸಿವಿಸಿ ಯಾಗುತ್ತಿದೆ ಆದರೂ ಈ ಸಂದರ್ಭದಲ್ಲಿ ಈ ಪದವನ್ನು ಉಪಯೋಗಿಸಲೇ ಬೇಕಾದ ಅನಿವಾರ್ಯತೆ ಇದೆ) ಶಂಕರರನ್ನು ಪ್ರಶ್ನೆ ಮಾಡುತ್ತಾನೆ;
ಅನ್ನಮಯಾದನ್ನಮಯಮಥ್ವಾ ಚೈತನ್ಯೇವ ಚೈತನ್ಯಾತ್
ಯತಿವರ ದೂರೀಕರ್ತುಮ್ ವಾಚ್ಛಸಿ ಕಿಂ ಬ್ರೂಹಿ ಗಚ್ಛೇತಿ ೧
ಅನ್ನಮಯವಾದ ಈ ಶರೀರವನ್ನು ದೂರ ಹೋಗು ಅಥ್ವಾ ಪಕ್ಕಕ್ಕೆ ಸರಿ ಎನ್ನುತ್ತಿದ್ದೀರೋ ಅಥ್ವಾ ಈ ಅನ್ನಮಯ ಶರೀರದಲ್ಲಿರುವ ಚೈತನ್ಯವನ್ನು ದೂರ ಹೋಗು ಅಥವಾ ಪಕ್ಕಕ್ಕೆ ಸರಿ ಎಂದು ತಾವು ಯತಿವರ್ಯರು ಹೇಳುತ್ತಿದ್ದೀರೂ ದಯಮಾಡಿ ತಿಳಿಸಿ.
ಇಲ್ಲಿ ಕೊಂಚ ವಿವರಣೆ ಬೇಕೆನಿಸುತ್ತದೆ.
ದೂರ ಸರಿಯಬೇಕಾದ್ದು ಬೌತಿಕ ಶರೀರ ಎಂದು ಭಾವಿಸಿದರೆ, ಒಂದು ವಸ್ತುವಿನ ದ್ರವ್ಯರಾಶಿ ಯನ್ನು ಮತ್ತೊಂದು ವಸ್ತುವಿನ ದ್ರವ್ಯರಾಶಿಯಿಂದ ಬೇರ್ಪಡಿಸುವುದು.(Separating the mass of one physical object by the mass of the other physical object) ವಸ್ತು ಎನ್ನುವುದೇ ಸತ್ಯವಲ್ಲ, ಎಂದು ತತ್ವಜ್ನಾನಿಗಳು ಹೇಳುವಾಗ, ಈ ಸತ್ಯವಲ್ಲದ್ದಕ್ಕೆ ಏಕೆ ಈ ಪ್ರಾಮುಖ್ಯತೆ? ದೂರ ಸರಿ, ಪಕ್ಕಕ್ಕೆ ಸರಿ ಎನ್ನುವುದು ಚೈತನ್ಯಕ್ಕೆ ಎನ್ನುವುದಾದರೆ, ಇದಕ್ಕಿಂತ ಅಸಂಬದ್ಧವಾದ್ದು ಇನ್ನೊಂದು ಇರಲು ಸಾಧ್ಯವಿಲ್ಲಾ. ಚೈತನ್ಯ ಎನ್ನುವುದು ಅನಂತವಾದ್ದು, ಮಿತಿಯಿಲ್ಲದ್ದು, ಕಾಲ ದೇಶಗಳನ್ನು ಮೀರಿದ್ದು.
ದೇಹ, ಜ್ನಾನೇಂದ್ರಿಯಗಳು, ಮನಸ್ಸು, ಬುದ್ಧಿ ಇವು ನಿಜವಾದ ಚಾಂಡಾಲರು. ಇವು ನಂಬಿಕೆಗೆ ಅನರ್ಹವಾದವುಗಳು. ನಮಗೆ ನಿಜವಾದ ಆತ್ಮಜ್ನಾನ ದೊರೆಯಬೇಕಾದರೆ ಈ ಚಂಡಾಲರನ್ನು ನಾವು ದೂರ ಸರಿಸಬೇಕು.
ಚಾಂಡಾಲನು ಕೇಳಿದ ಈ ಮೊದಲ ಪ್ರಶ್ನೆ ನೇರವಾಗಿಯೂ ಒರಟಾಗಿಯೂ ಇದ್ದು ಇನ್ನು ಮುಂದಿನ ಪ್ರಶ್ನೆ ಶಿಷ್ಟಾಚಾರದಿಂದ ಕೂಡಿದ್ದರೂ ಆ ಕಾಲದ ಸಮಾಜದಲ್ಲಿನ ಅಸಮಾನತೆಯನ್ನು ಸ್ಪಷ್ಟವಾಗಿ ಹೇಳುತ್ತದೆ.
ಅಸಮಾನತೆ ಎನ್ನುವುದು ಮನಸಿನ ಕಲ್ಮಶ. ಅದನ್ನು ತೊಳೆಯುವ ಕಾರ್ಯ ಇನ್ನೂ ಆಗಿಲ್ಲಾ. ಕಾನೂನಿನ ಭೀತಿಯಿಂದ ತೋರುವ ಸಮಾನತೆ ಕೇವಲ ತೋರಿಕೆಯದ್ದೇ ಹೊರತು ಕಾಯಾ ವಾಚಾ ಮನಸಾ ಅಂತೂ ಅಲ್ಲವೇ ಅಲ್ಲಾ. ಬ್ರಹ್ಮಜ್ನಾನವನ್ನೇ ನೀಡಬೇಕಾದ ಅಂದರೆ ಬ್ರಹ್ಮಾಂಡದ ನಿಜ ಸ್ವರೂಪವನ್ನು ಸಮಾಜಕ್ಕೆ ತೋರಬೇಕಾದ ಮಠ ಮಾನ್ಯಗಳೂ ಅದನ್ನೇ ಮಾಡುತ್ತಿವೆ. ಇನ್ನೊಂದು ಕಡೆ ಸಮಾನತೆಯ ಹೆಸರಿನಲ್ಲಿ ಜಾತಿಗೊಂದರಂತೆ ಮಠ ಮಾನ್ಯಗಳು ಹುಟ್ಟಿಕೊಂಡು ಸಮಾನತೆಯ ಅಥವಾ ಎಲ್ಲವೂ ಎಲ್ಲರೂ ಒಂದೇ ಎಂಬ ಪ್ರಕೃತಿಯ ನಿಯಮಕ್ಕೇ ಘಾತಿಯನ್ನುಂಟು ಮಾಡುತ್ತಿವೆ ಎಂದು ಹೇಳಲು ಅತ್ಯಂತ ದುಃಖ ವಾಗುತ್ತಿದೆ.
ನಮಗೆ ಈಗ ಅತ್ಯವಶ್ಯವಾಗಿ ಬೇಕಾಗಿರುವುದು, ಸಾಮಾಜಿಕ ಕೇಂದ್ರಗಳು ಮತ್ತು ಆಧ್ಯಾತ್ಮಿಕ ಕೇಂದ್ರಗಳೇ ಹೊರತು ಧಾರ್ಮಿಕ ಕೇಂದ್ರಗಳಲ್ಲಾ ಎಂಬ ನನ್ನ ಈ ಮಾತು ಇಂದಿನ ಸಮಾಜಕ್ಕೆ ಕಹಿ ಎನಿಸಬಹುದಾದರೂ ಅದು ಸತ್ಯ. ಈ ಸತ್ಯವನ್ನು ಆದಷ್ಟು ಪ್ರಿಯವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಇನ್ನು ಚಾಂಡಾಲನ ಎರಡನೇ ಪ್ರಶ್ನೆಯನ್ನು ನೋಡೋಣ:
ಕಿಂ ಗಂಗಾಬುನಿ ಬಿಂಬಿತೇsಮ್ಬರಮಣ್ಯೌ ಚಾಂಡಾಲವಿಥೀಪಯಃ
ಪೂರೇ ವಾsನ್ತರಮಸ್ತಿ ಕಾಂಚನಘಟೀಮೃತ್ಕುಂಭಯೋರ್ವಾsಮ್ಬರೇ
ಪ್ರತ್ಯಗ್ವಸ್ತುನಿ ನಿಸ್ತರಂಗ ಸಹಜಾನಂದಾವಬೋಧಾಂಬುಧೌ
ವಿಪ್ರೋsಯಂ ಶ್ವಪಚೋsಯಮಿತ್ಯಾಪಿ ಮಹಾನ್ಕೋsಯಂ ವಿಭೇದಭ್ರಮಃ ೨
ಕಿಂ ಗಂಗಾಬುನಿ ಬಿಂಬಿತೇsಮ್ಬರಮಣ್ಯೌ ಚಾಂಡಾಲವಿಥೀಪಯಃ
ಆಕಾಶದ ರತ್ನ ವಾದ ಸೂರ್ಯನನ್ನು ಗಂಗಾನದಿಯ ಜಲ ಹೇಗೆ ಪ್ರತಿಬಿಂಬಿಸುತ್ತಿದೆಯೋ ಅದೇ ಸೂರ್ಯನನ್ನು ಚಂಡಾಲನ ಗುಡಿಸಿಲಿನ ಹೊರಗಡೆಯ ಹಳ್ಳದಲ್ಲಿನ ನೀರಿನಲ್ಲಿಯೂ ಪ್ರತಿಬಿಂಬಿಸುತ್ತಿದೆ.
ಪೂರೇ ವಾsನ್ತರಮಸ್ತಿ ಕಾಂಚನಘಟೀಮೃತ್ಕುಂಭಯೋರ್ವಾsಮ್ಬರೇ
ಸೂರ್ಯನ ಬೆಳಕು ಮಣ್ಣಿನ ಮಡಕೆಯಲ್ಲಿಯೂ ಪ್ರಕಾಶಿಸುತ್ತದೆ, ಚಿನ್ನದ ಬಿಂದಿಗೆಯಲ್ಲಿಯೂ ಪ್ರಕಾಶಿಸುತ್ತದೆ. ಆ ಪ್ರಕಾಶವು ಬೇರೆ ಬೇರೆ ಆಗಿದೆಯೇನು?
ಪ್ರತ್ಯಗ್ವಸ್ತುನಿ ನಿಸ್ತರಂಗ ಸಹಜಾನಂದಾವಬೋಧಾಂಬುಧೌ
ಯಾರು ತನ್ನೊಳಗಿನ ಆತ್ಮ ಎಂಬ ಸ್ವಾಭಾವಿಕ ಪ್ರಜ್ನೆಯ ಆತ್ಮಾನಂದವೆಂಬ ಸಾಗರದಲ್ಲಿ ಮುಳುಗಿಹೋಗಿ ಯೋಚನೆಯೇ ಇಲ್ಲದವನಾಗಿದ್ದಾನೋ, ಅಂದರೆ ಶೂನ್ಯ ಸ್ಥಿತಿಯನ್ನು ತಲುಪಿದ್ದಾನೋ,
ವಿಪ್ರೋsಯಂ ಶ್ವಪಚೋsಯಮಿತ್ಯಾಪಿ ಮಹಾನ್ಕೋsಯಂ ವಿಭೇದಭ್ರಮಃ
ಅಂತಹವನು, ಇವನು ಬ್ರಾಹ್ಮಣ, ಇವನು ಚಾಂಡಾಲ, ಎನ್ನುವ ಭ್ರಮೆಯ ಬೇಧಭಾವ ಮಾಡುವಷ್ಟು ಸಣ್ಣತನವನ್ನು ತೋರಿಸಲು ಸಾಧ್ಯವೇ? ಇದು ಚಾಂಡಾಲನ ಎರಡನೇ ಪ್ರಶ್ನೆ.
ಚಾಂಡಾಲನ ಈ ಎರಡು ಪ್ರಶ್ನೆಗಳಿಗೆ ಶ್ರೀ ಶಂಕರ ಭಗವತ್ಪಾದರು ನೀಡುವ ಉತ್ತರವೇ ಮನೀಷಾ ಪಂಚಕ.
ಮನೀಷಾ ಪಂಚಕಂ
ಜಾಗ್ರತ್ಸ್ವಪ್ನಸುಷುಪ್ತಿಷು ಸ್ಪುಟತರಾ ಯಾ ಸಂವಿದುಜ್ಜೃಂಭತೇ
ಯಾ ಬ್ರಹ್ಮಾದಿಪಿಪೀಲಿಕಾನ್ತತನುಷು ಪ್ರೋತಾ ಜಗತ್ಸಾಕ್ಷಿಣಿ
ಸೈವಾಹಂ ನ ಚ ದೃಶ್ಯವಸ್ತಿವತಿ ದೃಢಪ್ರಜ್ನಾಪಿ ಯಸ್ಯಾತಿ ಚೇ
ಚ್ಚಂಡಾಲೋsಸ್ತು ಸತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ ೧
ಜಾಗ್ರತಾವಸ್ಥೆಯಲ್ಲಿ, ಸ್ವಪ್ನಾವಸ್ಥೆಯಲ್ಲಿ ಮತ್ತು ಸುಷುಪ್ತಾವಸ್ಥೆಯಲ್ಲಿ ಅಂದರೆ ಆಳವಾದ ನಿದ್ರಾವಸ್ಥೆಯಲ್ಲಿ ಯಾವುದು ಬೆಳಗುತ್ತಿದ್ದೆಯೋ, ಯಾವುದರಿಂದ ನಾವು ವಿಷಯಗಳನ್ನು ತಿಳಿದುಕೊಂಡು ಅರ್ಥಮಾಡಿಕೊಳ್ಳುತ್ತಿದ್ದೇವೆಯೋ.
ಯಾ ಬ್ರಹ್ಮಾದಿಪಿಪೀಲಿಕಾನ್ತತನುಷು ಪ್ರೋತಾ ಜಗತ್ಸಾಕ್ಷಿಣಿ
ಸೃಷ್ಟಿಕರ್ತನಿಂದ ಮೊದಲ್ಗೊಂಡು ಚಿಕ್ಕ ಇರುವೆಯವರೆಗೂ ಯಾವ ಕಾಂತಿಕಣ ಇದೆಯೋ, ಬ್ರಹ್ಮಾಂಡದ ಎಲ್ಲಾ ನಾಟಕಕ್ಕೆ ಸಾಕ್ಷಿಯಾಗಿರುವಂತಾದ್ದು ಯಾವುದೋ
ಸೈವಾಹಂ ನ ಚ ದೃಶ್ಯವಸ್ತಿವತಿ ದೃಢಪ್ರಜ್ನಾಪಿ ಯಸ್ಯಾತಿ ಚೇ
“ಅದು” .ಮತ್ತು “ಅದು” ಮಾತ್ರವೇ ’ನಾನು” ಎಂಬ ಪ್ರಜ್ನೆಯೇ ಹೊರತು ಕಣ್ಣಿಗೆ ಕಾಣುವ ವಸ್ತುಗಳು “ಅದು” ಅಲ್ಲಾ
ಚ್ಚಂಡಾಲೋsಸ್ತು ಸತು ದ್ವಿಜೋsಸ್ತು ಗುರುರಿತ್ಯೇಷಾ ಮನೀಷಾ ಮಮ.
ಆ “ನಾನು” ಎಂಬ ಬ್ರಹ್ಮ ಪ್ರಜ್ನೆಯನ್ನು ಅರಿತವನು ಚಾಂಡಾಲನಾಗಿರಲಿ, ಬ್ರಾಹ್ಮಣನಾಗಿರಲಿ, ಅಂತಹವನು ನಿಶ್ಚಯವಾಗಿ ಗುರು ಆಗಲು ಅರ್ಹನು ಮತ್ತು ಯೋಗ್ಯನು. ಇದು ನನ್ನ ಸ್ಥಿರವಾದ ನಂಬಿಕೆ. ಮನೀಷಾ ಮಮ.
ಇದು ಭಗವತ್ಪಾದ ಶಂಕರರ ಮನೀಷಾ ಪಂಚಕದ ಮೊದಲನೇ ಶ್ಲೋಕ.
ಈ ಶ್ಲೋಕಕ್ಕೆ ಮತ್ತಷ್ಟು ವಿವರಣೆ ಕೊಡುವ ಪ್ರಯತ್ನ ಮಾಡೋಣ.
ಐತ್ರೇಯ ಉಪನಿಷದ್ ನ ಮೂರನೇ ಅಧ್ಯಾಯದ ಮೂರನೇ ಶ್ಲೋಕ ಹೀಗಿದೆ;
ಏಶಾ ಬ್ರಹ್ಮೈಷ ಇಂದ್ರ ಏಶಾ ಪ್ರಜಾಪತಿರೇತೇ ಸರ್ವೇ ದೇವಾ ಇಮಾನಿ ಚ
ಪಂಚಮಹಾಭೂತಾನಿ ಪೃಥಿವೀ ವಾಯುರಾಕಾಶ ಆಪೋ
ಜ್ಯೋತಿಂಷಿತ್ಯೇತಾನೀಮಾನಿ ಚ ಕ್ಷುದ್ರಮಿಶ್ರಾಣಿವ
ಬೀಜಾನೀತರಾಣಿ ಚೇತರಾಣಿ ಚಾಂಡಜಾನಿ ಚ ಜಾರುಜಾನೀ ಚ
ಸ್ವೇದಾಜಾನಿ ಚೋದ್ಭಿಜ್ಜಾನಿ
ಚಾಶ್ವಾ ಗಾವಃ ಪುರುಷ ಹಸ್ತಿನೋ ಯತ್ಕಿಂಚೇದಂ ಪ್ರಾಣಿ ಜಂಗಮಂ ಚ ಪತತ್ರಿ
ಚ ಯಚ್ಚ ಸ್ಥಾವರಂ ಸರ್ವಂ ತತ್ಪ್ರಜ್ನಾನೇತ್ರಂ ಪ್ರಜ್ನಾನೇ ಪ್ರತಿಷ್ಠಿತಂ
ಪ್ರಜ್ನಾನೇತ್ರೋ ಲೋಕಃ ಪ್ರಜ್ನಾ ಪ್ರತಿಷ್ಠಾ ಪ್ರಜ್ನಾನಂ ಬ್ರಹ್ಮ
ಈ ಶ್ಲೋಕ ದ ಅರ್ಥ ಹೀಗಿದೆ:
ಅವನೇ ಬ್ರಹ್ಮ, ಅವನೇ ಇಂದ್ರ, ಅವನೇ ಪ್ರಜಾಪತಿ, ಅವನೇ ಈ ಎಲ್ಲಾ ದೇವತೆಗಳು. ಅವನೇ ಪಂಚ ಮಹಾಭೂತಗಳಾದ ಭೂಮಿ, ವಾಯು, ಆಕಾಶ, ಜಲ ಮತ್ತು ಅಗ್ನಿ. ಮೊಟ್ಟೆಯಿಂದ ಹುಟ್ಟುವ, ಗರ್ಭದಿಂದ ಜನಿಸುವ, ಮೊಳಕೆಯಿಂದ ಹುಟ್ಟುವ ಎಲ್ಲಕ್ಕೂ ಅವನೇ ಮೂಲ. ಅವನೇ ಕುದುರೆಗಳು, ಹಸುಗಳು, ಮನುಷ್ಯರು, ಅನೆಗಳು. ಇಲ್ಲಿ ಯಾವ್ಯಾವುದು ಉಸಿರಾಡುತ್ತದೆಯೋ, ಅವು ನೆಲದಮೇಲೆ ನಡೆಯಲಿ, ರೆಕ್ಕೆಗಳಿಂದ ಹಾರಲಿ ಅಥವಾ ಚಲನೆಯೇ ಇಲ್ಲದಿರಲಿ ಅವೆಲ್ಲಕ್ಕೂ ಪ್ರಜ್ನೆಯಿಂದಲೇ ಮಾರ್ಗದರ್ಶನ, ಮತ್ತು ಬೆಂಬಲ. ಬ್ರಹ್ಮಾಂಡದ ಆಧಾರವೇ, ಮೂಲತತ್ವವೇ ಪ್ರಜ್ನೆ. ಹಾಗಾಗಿ ಈ ಪ್ರಜ್ನೆಯೇ ಬ್ರಹ್ಮ. ಪ್ರಜ್ನಾನಂ ಬ್ರಹ್ಮ.
“ಪ್ರಜ್ನಾನಂ ಬ್ರಹ್ಮ” ಎನ್ನುವುದು ಮೊದಲನೇ ಮಹಾವಾಕ್ಯ.
ಪ್ರಜ್ನೆ ಎನ್ನುವ ಬಗ್ಗೆ ವಿವರಣೆ ಕೊಟ್ಟಷ್ಟೂ ಅದು ಕಬ್ಬಿಣದ ಕಡಲೆಯಾಗುತ್ತಾ ಹೋಗುತ್ತದೆ, ಹಾಗಾಗಿ ಅದನ್ನು ಅನುಭವಿಸುವ ಪ್ರಯತ್ನ ಪಟ್ಟರೆ ಅದು ಬೆಲ್ಲದಷ್ಟು ಸಿಹಿ ಮತ್ತು ಬೆಣ್ಣೆಯಷ್ಟು ಮೃದು. ಆ ದಿಕ್ಕಿನಲ್ಲಿ ನಮ್ಮ ಪ್ರಯತ್ನ ಸಾಗಬೇಕಿದೆ.
ಮನೀಷಾ ಪಂಚಕದ ಮುಂದಿನ ಮೂರು ಶ್ಲೋಕಗಳು ಕ್ರಮವಾಗಿ, ಅಹಂ ಬ್ರಹ್ಮಾಸ್ಮಿ, ತತ್ವಮಸಿ, ಅಯಮಾತ್ಮ ಬ್ರಹ್ಮ ಎನ್ನುವ ಇನ್ನು ಮೂರು ಮಹಾವಾಕ್ಯಗಳನ್ನು ನಮಗೆ ಪರಿಚಯಿಸಿದರೆ ಕೊನೆಯ ಶ್ಲೋಕ “ಮೋಕ್ಷಸ್ಯ ಆನಂದ” ಎನ್ನುವದನ್ನು ಹೇಳುತ್ತದೆ.
ಶ್ರೀ ಶಂಕರ ಭಗವತ್ಪಾದರು ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠಗಳು ನಾಲ್ಕು ಮಹಾವಾಕ್ಯಗಳನ್ನು ಪ್ರತಿನಿಧಿಸುತ್ತವೆ.
ಪೂರ್ವಾಮ್ನಾಯದ ಪುರಿಯ ಗೋವರ್ಧನ ಪೀಠವು ಪ್ರಜ್ನಾನಂ ಬ್ರಹ್ಮ ಎಂಬ ಮಹಾವಾಕ್ಯವನ್ನು ಪ್ರತಿನಿಧಿಸಿದರೆ, ಅಹಂ ಬ್ರಹ್ಮಾಸ್ಮಿಯನ್ನು ಶೃಂಗೇರಿಯ ಶಾರದಾ ಪೀಠವೂ, ತತ್ವಮಸಿಯನ್ನು ದ್ವಾರಕೆಯ ಕಾಳಿಕಾ ಪೀಠವೂ ಮತ್ತು ಅಯಮಾತ್ಮ ಬ್ರಹ್ಮ ಮಹಾವಾಕ್ಯವನ್ನು ಬದರಿಕಾಶ್ರಮದ ಜ್ಯೋತಿರ್ ಮಠವೂ ಪ್ರತಿನಿಧಿಸುತ್ತವೆ.
ಈ ನಾಲ್ಕು ಮಹಾವಾಕ್ಯಗಳಲ್ಲದೆ, ವಿವೇಕ ಚೂಡಾಮಣಿಯ ’ಬ್ರಹ್ಮ ಸತ್ಯ ಜಗನ್ ಮಿಥ್ಯ” ಈಶೋಪನಿಷತ್ತಿನ “ ಸೋಹಂ” ಮತ್ತು ಛಾಂದೋಗ್ಯ ಉಪನಿಷತ್ತಿನ ’ ಏಕಮೇವಾsದ್ವಿತೀಯಂ ಬ್ರಹ್ಮ’ ಮತ್ತು “ ಸರ್ವಂ ಖಲ್ವಿದಂ ಬ್ರಹ್ಮ” ಈ ನಾಲ್ಕು ವಾಕ್ಯಗಳನ್ನೂ ಮಹಾವಾಕ್ಯಗಳೆಂದೇ ಕರೆಯಲಾಗಿದೆ.
ಮುಂದುವರೆಯುತ್ತದೆ……………..
ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 2
ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 3
ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಕೊನೆಯ ಭಾಗ (4)
Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಮಮ- ಕೊನೆಯ ಭಾಗ(4) – Atmanandanatha
Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ- ಭಾಗ 3 – Atmanandanatha
Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ ಭಾಗ 2 – Atmanandanatha