ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ- ಭಾಗ 3


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಈಗ ಮನೀಷಾ ಪಂಚಕದ ನಾಲ್ಕನೇ ಶ್ಲೋಕಕ್ಕೆ ಹೋಗೋಣ.

 ಯಾ ತಿರ್ಯಂನರದೇವತಾಭಿರಹಮಿತ್ಯನ್ತಃ ಸ್ಫುಟಾ ಗೃಹ್ಯತೇ

ಯದ್ಭಾಸಾå ಹೃದಯಕ್ಷದೇಹವಿಷಯಾ ಭಾನ್ತಿ ಸ್ವತೋsಚೇತನಾಃ

ತಾಂ ಭಾಸ್ಯೈ ಪಿಹಿತಾರ್ಕಮಣ್ಡಲನಿಭಾಂ ಸ್ಫೂರ್ತಿಂ ಸದಾ ಭಾವಯ-

ನ್ಯೋಗಿ ನಿವೃತಮನಸೋ ಹಿ ಗುರುರಿತ್ಯೇಷಾ ಮನೀಷಾ ಮಮ          ೪

ಯಾವ ಶುದ್ಧ ಪ್ರಜ್ನೆಯಿಂದ  ಪ್ರಾಣಿಗಳು, ಮನುಷ್ಯರು, ದೇವತೆಗಳು ಗುರುತಿಸಲ್ಪಡುತ್ತಿದ್ದಾರೋ, ತನ್ನಂತಾನೇ ಗುರುತಿಸಿಕೊಳ್ಳಲಾರದ ಮನಸ್ಸು, ಇಂದ್ರಿಯಗಳು, ಯಾವುದರ ಬೆಳಕಿನಿಂದ ಬೆಳಗುತ್ತಿವೆಯೋ, ಯಾವ ಬೆಳಕು ಮೋಡವನ್ನು ಮುಚ್ಚಿದ ಸೂರ್ಯನಂತೆ ಇದ್ದು, ಮೋಡ ಸರಿದ ನಂತರ ಪೂರ್ತಿಯಾಗಿ ಪ್ರಕಾಶಿಸುತ್ತಿದೆಯೋ, ಅದು “ ನಾನು ’ ಎನ್ನುವ ಶುದ್ಧ ಪ್ರಜ್ನೆ ಅದು ಬ್ರಹ್ಮನ್. ಈ ’ ನಾನು” ಎಂಬುದನ್ನು ಯಾವ ಯೋಗಿಯು ಸದಾ ವೀಕ್ಷಿಸುತ್ತಾನೋ, ಧ್ಯಾನಿಸುತ್ತಾನೋ ಅಂತಹವನು ಜ್ನಾನಿ. ಅಂತಹವನು ಗುರು ಆಗಲು ಅರ್ಹನು. ಅಂತಹ ಗುರುವೇ ’ಬ್ರಹ್ಮನ್” ಇದು ನನ್ನ ನಿರ್ಣಾಯಕ ಅಭಿಪ್ರಾಯ- ಮನೀಷಾ ಮಮ.

’ನಾನು” ಎನ್ನುವ ಶುದ್ಧ ಪ್ರಜ್ನೆಯ ಅಥವಾ ಆತ್ಮನ  ಬೆಳಕಿನಿಂದ ನಾವು ಬೆಳಗುತ್ತಿದ್ದರೂ ಅಜ್ನಾನವೆಂಬ ಮೋಡ ನಮ್ಮನ್ನಾವರಿಸಿ ಆ ಬೆಳಗನ್ನು ನಾವು ಪೂರ್ಣವಾಗಿ ಕಾಣಲಾಗುತ್ತಿಲ್ಲ ಎನ್ನಲು ಮೋಡ ಮತ್ತು ಸೂರ್ಯನ ರೂಪಕೋಕ್ತಿಯನ್ನು ಭಗವಾನ್ ಶಂಕರರು ಉಪಯೋಗಿಸಿಕೊಂಡಿದ್ದಾರೆ.

ಈ ಶ್ಲೋಕವು ನಾಲ್ಕನೇ ಮಹಾವಾಕ್ಯ “ ಅಯಂ ಆತ್ಮಾ ಬ್ರಹ್ಮ” ಎಂಬುದನ್ನು ಪ್ರತಿಪಾದಿಸುತ್ತಿದೆ.

ಈ ಮಹಾವಾಕ್ಯವು ಮಾಂಡೂಕ್ಯ ಉಪನಿಷತ್ತಿನ ಎರಡನೇ ಶ್ಲೋಕದಲ್ಲಿ ಇದೆ. ಅಥರ್ವಣ ವೇದಕ್ಕೆ ಸೇರಿದ ಮಾಂಡೂಕ್ಯ ಉಪನಿಷತ್ ಕೇವಲ ಹನ್ನೆರಡು ಶ್ಲೋಕಗಳನ್ನು ಮಾತ್ರವೇ ಒಳಗೊಂಡಿದ್ದು ಅತ್ಯಂತ ಚಿಕ್ಕ ಉಪನಿಷತ್ ಎಂದೇ ತಿಳಿಯಲಾಗಿದೆ.

ಮಾಂಡೂಕ್ಯ ಉಪನಿಷತ್ತಿನ ಈ ಹನ್ನೆರಡೂ ಶ್ಲೋಕಗಳ ಭಾವಾರ್ಥವನ್ನು ಹೇಳದೆ ಮನೀಷಾ ಪಂಚಕಕ್ಕೆ ನೀಡುವ ವಿವರಣೆ ಅಪೂರ್ಣ ಎಂದೇ ನನ್ನ ಅನಿಸಿಕೆ.

ಓಮಿತ್ಯೇ ತದ್ ಅಕ್ಷರಂ ಇದಂ ಸರ್ವಂ ತಸ್ಯೋಪವ್ಯಾಖ್ಯಾನಂ

ಭೂತಂ ಭವದ್ ಭವಿಷ್ಯದ್ಯಿತಿ ಸರ್ವಮೋಂಕಾರ ಏವ

ಯಚ್ಚಾನ್ಯತ್ ತ್ರಿಕಾಲಾತೀತಂ ತದ್ಪ್ಯೋಂಕಾರ ಏವ.          ೧

ಬ್ರಹ್ಮಾಂಡದಲ್ಲಿ ಕಾಣುವ ಎಲ್ಲವೂ ಈ, “ಓಂ” ಎಂಬ ಅವಿನಾಶಿಯಾದ ಅಕ್ಷರವೇ  ಆಗಿದೆ. ಓಂ ಎಂಬ ಶಬ್ಧವೇ ಆಗಿದೆ.ಏನಾಗಿದೆ, ಏನಾಗುತ್ತಿದೆ ಏನಾಗಬಹುದು ಎನ್ನುವ ಎಲ್ಲವೂ ಈ, “ಓಂ” ಎಂಬ ಸತ್ಯವೇ ಆಗಿದೆ. ಭೂತ ವರ್ತಮಾನ ಭವಿಷ್ಯತ್ ಕಾಲವೂ ಸೇರಿದಂತೆ  ಈ ಎಲ್ಲ್ಲ ಕಾಲಗಳನ್ನೂ  ಮೀರಿ, ಅದರಿಂದ ಆಚೆಗೂ ಇರುವ ಸತ್ಯವೂ “ಓಂ” ಶಬ್ಧವೇ  ಆಗಿದೆ.

ಸರ್ವಂ ಹ್ಯೇತದ್ ಬ್ರಹ್ಮಾಯಮಾತ್ಮಾ ಬ್ರಹ್ಮ

ಸೋsಯಮಾತ್ಮಾ ಚತುಷ್ಪಾತ್                                     ೨

ಇವೆಲ್ಲವೂ ಸತ್ಯವಾಗಿಯೂ ಬ್ರಹ್ಮವೇ. ಆತ್ಮವು ಸಹಾ ಬ್ರಹ್ಮವೇ. ಈ ಆತ್ಮನು ಚತುಶ್ಪಾತ್ ಅಂದರೆ ನಾಲ್ಕು ಪಾದಗಳನ್ನು ಉಳ್ಳವನು ಎಂದು ಅರ್ಥಮಾಡಿಕೊಳ್ಳದೆ, ಈ ಅತ್ಮನನ್ನು ನಾಲ್ಕು ಹಂತಗಳಲ್ಲಿ ಅರಿಯಬೇಕು ಎಂದು ಅರ್ಥ ಮಾಡಿಕೊಳ್ಳಬೇಕು.

ಜಾಗರಿತಸ್ಥಾನೋ ಬಹಿಷ್ಪ್ರಜ್ನಃ ಸಪ್ತಾಂಗ

ಏಕೋನವಿಂಶತಿಮುಖಃ ಸ್ಥೂಲಭುಗ್ವೈಶ್ವಾನರಃ

ಪ್ರಥಮಃ ಪಾದಃ                                                     ೩

ವೈಶ್ವಾನರ ಎನ್ನುವುದು ಮೊದಲ ಹಂತ. ಜಾಗೃತಾವಸ್ಥೆ ಇದರ ಕ್ಷೇತ್ರ.

ಇದರ ಪ್ರಜ್ನೆಯು ಬಹಿರ್ಮುಖವಾಗಿರುವಂತಾದ್ದು ಅಂದರೆ ಬಹಿರ್ಮುಖ ಪ್ರಜ್ನೆ . ಇದಕ್ಕೆ ಏಳು ಕಾಲುಗಳು,ಹತ್ತೊಂಬತ್ತು ಬಾಯಿಗಳಿದ್ದು ಇದು ಭೌತಿಕ ವಸ್ತುಗಳಿಂದ ಆನಂದ ವನ್ನು, ಸಂತೋಷವನ್ನು ಪಡೆಯುತ್ತದೆ.

ಅಗ್ನಿ, ಕಣ್ಣುಗಳು, ದಿಕ್ಕುಗಳು, ವಾಕ್ಕು,ವಾಯು, ಹೃದಯ ಮತ್ತು ಪಾದಗಳು ಇವು ಏಳು ಅಂಗಗಳಾದರೆ,  ಕಿವಿ, ಚರ್ಮ, ಕಣ್ಣು, ನಾಲಿಗೆ,ಮೂಗು ಎಂಬ ಐದು ಜ್ನಾನೇಂದ್ರಿಯಗಳು, ವಾಕ್ ಪಾಣಿ ಪಾದ ಉಪಸ್ಥ ಪಾಯು ಎಂಬ ಐದು ಕರ್ಮೇಂದಿಯಗಳು, ಪ್ರಾಣ, ಅಪಾನ,ವ್ಯಾನ, ಉದಾನ, ಸಮಾನ ಗಳೆಂಬ ಐದು ಪ್ರಾಣಗಳು, ಮನಸು, ಬುದ್ಧಿ, ಚಿತ್ತ ಮತ್ತು ಅಹಂಕಾರ ಎಂಬ ನಾಲ್ಕು ಅಂತಃಕರಣಗಳು.

ಅಥವಾ ಅಂತಃಕರಣ ಚತುಷ್ಟಯಗಳು. ಇವು ಹತ್ತೊಂಬತ್ತು ಬಾಯಿಗಳು.

ವೈಶ್ವಾನರ ಎನ್ನುವ ಈ ಜಾಗೃತಾವಸ್ಥೆಯ ಪ್ರಜ್ನೆಯನ್ನು ವಿರಾಟ್ ಪುರುಷನಿಗೆ ಹೋಲಿಸಿದರೆ, ಈ ವಿರಾಟ ಪುರುಷನ ತಲೆ ಅಗ್ನಿ, ಸೂರ್ಯ ಚಂದ್ರರು ಕಣ್ಣುಗಳು,ಆಷ್ಟ ಅಥವಾ ದಶ ದಿಕ್ಕುಗಳು ಈ ವಿರಾಟ್ ಪುರುಷನ ಕಿವಿಗಳು, ವೇದಗಳು ಈ ಪುರುಷನ ವಾಕ್ಕು, ವಾಯುವು ಪ್ರಾಣ, ಬ್ರಹ್ಮಾಂಡವೇ ಈ ಪುರುಷನ ಹೃದಯ, ಪಾದಗಳು ಈ ಭೂಮಿ. ಜಾಗೃತಾವಸ್ಥೆಯ ದೃಷ್ಟಿಕೋನದಲ್ಲಿ ಇದು ವಿಶ್ವವ್ಯಾಪಿಯಾದ ಆತ್ಮ. ಅದು ವೈಶ್ವಾನರ. ಇದು ವಿರಾಟ್. ಈ ವಿರಾಟ್ ಪುರುಷನನ್ನು ಕುರಿತೇ ಪುರುಷ ಸೂಕ್ತವನ್ನು ಹೇಳಿರುವುದು.ನಾವು ಇದನ್ನು ಬ್ರಾಹ್ಮಣ ತಲೆ, ಕ್ಷತ್ರಿಯ ಬಾಹುಗಳು, ಹೊಟ್ಟೆ ವೈಶ್ಯ, ಎಲ್ಲಕ್ಕೂ ಕಡೆಯಾದ ಕಾಲು ಶೂದ್ರ ಎಂದು ನಮಗೆ ಹೇಗೆ ಬೇಕೋ ಹಾಗೆ ಅರ್ಥೈಸಿ ಇಡೀ ಸಮಾಜದಲ್ಲಿ ಅಸಮಾನತೆಯನ್ನು ತರುವಲ್ಲಿ ಯಶಸ್ವಿಯಾಗಿದ್ದೇವೆ. ಇದಕ್ಕಿಂತ ದುಃಖಕರವಾದ ಸಂಗತಿ ಮತ್ತೊಂದು ಇರಲಾರದು.

ಜಾಗ್ರತಾವಸ್ಥೆಯ ಈ ವಿರಾಟ್ ಪುರುಷನ ಏಳು ಅಂಗಗಳೇನೋ ಸರಿ ಆದರೆ ಈ ಹತ್ತೊಂಬತ್ತು ಬಾಯಿಗಳು ಏಕೆ ಎನ್ನುವ ಪ್ರಶ್ನೆ ಏಳುವುದು ಸಹಜ.

ಬಾಯಿಯಿಂದ ಆಗುವ ಕೆಲಸಗಳು ಎರಡು, ಒಂದು ಮಾತಾಡುವುದು ಅಂದರೆ ವಾಕ್. ಇದನ್ನು ಈ ಹಿಂದೆ ಹೇಳಿದ ಏಳು ಅಂಗಗಳಲ್ಲಿ ಸೇರಿಸಲಾಗಿದೆ. ಎರಡನೆಯದು ಆಹಾರದ ಭಕ್ಷಣೆ, ಆ ಆಹಾರವನ್ನು ದೇಹವು ಸ್ವೀಕರಿಸಿ, ಆ ಆಹಾರ ಹೇಗಿದೆಯೋ ಹಾಗೆ ನಮ್ಮೊಳಗೆ ಜೀರ್ಣಿಸಿಕೊಳ್ಳುತ್ತೇವೆ. ಸರಿಯಾಗಿ ಯೋಚಿಸಿದರೆ, ಅರ್ಥ ಮಾಡಿಕೊಂಡರೆ ಮೇಲೆ ಹೇಳಿರುವ ಐದು ಜ್ನಾನೇಂದಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣಗಳು ಮತ್ತು ಅಂತಃಕರಣ ಚತುಷ್ಟಯಗಳಾದ ಮನಸ್ಸು ಬುದ್ಧಿ ಚಿತ್ತ ಅಹಂಕಾರ ಈ ಹತ್ತೊಂಬತ್ತು ಸಹಾ ಬಾಯಿಗಳೇ.  ಈ ಹತ್ತೊಂಬತ್ತು ಬಾಯಿಗಳಿಂದ ನಾವು ಗ್ರಹಿಸುವುದೆಲ್ಲವೂ ಆಯಾಯ ಬಾಯಿಗೆ ಆಹಾರಗಳೇ. ಕಣ್ಣಿನ ಮೂಲಕ ಪಡೆಯುವ ನೋಡುವಂತಹ ಆಹಾರ, ಕಿವಿಯಿಂದ ಕೇಳುವಂತಹ ಆಹಾರ ಹೀಗೆ ಹತ್ತೊಂಬತ್ತು ಬಾಯಿಗಳಿಂದಲೂ ಸದಾ ಆಹಾರ ಒದಗುತ್ತಲೇ ಇರುತ್ತದೆ. ಇವನ್ನು ಸ್ವೀಕರಿಸಿ ಅದು ಹೇಗಿದೆಯೋ ಹಾಗೆಯೇ ಜೀರ್ಣಿಸಿಕೊಳ್ಳುವುದೂ ಆಗಿಬಿಡುತ್ತದೆ, ಜಾಗೃತಾವಸ್ಥೆ ಯಲ್ಲಿರುವ ವೈಶ್ವಾನರ ಎಂಬ ಪ್ರಜ್ನೆಯ ಹಂತದಲ್ಲಿ.  ಇದನ್ನು ಇನ್ನು ಸ್ವಲ್ಪ ವಿವರಿಸಬೇಕೆಂದರೆ, ಆಹಾರ ಶುದ್ಧೌ ಸತ್ವ ಶುದ್ಧಿಃ ಎನ್ನುತ್ತದೆ ಛಾಂದೋಗ್ಯ ಉಪನಿಷತ್. .ಶುದ್ಧ ವಾದ ಆಹಾರದಿಂದ ಶುದ್ಧವಾದ ಸತ್ವವು ಒದಗುತ್ತದೆ ಎಂದು ಅರ್ಥ. ಹಾಗೆಂದರೆ ಹಾಲು, ಹಣ್ಣು, ಇಂತಹ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುತ್ತಾ, ಇನ್ನಿತರ ಬಾಯಿಗಳಾದ ಕಣ್ಣಿನಿಂದ ಅಸಹ್ಯವಾದುದನ್ನು ನೋಡುತ್ತಾ, ಕಿವಿಯಿಂದ ಕೆಟ್ಟದ್ದನ್ನು ನೋಡುತ್ತಾ, ಮನಸ್ಸಿನಿಂದ ಕೆಟ್ಟಯೋಚನೆಗಳನ್ನು ಮಾಡುತ್ತಾ ಹೀಗೆ ಎಲ್ಲಾ ಹತ್ತೊಂಬತ್ತು ಬಾಯಿಗಳಿಂದ ಕೆಟ್ಟ ಆಹಾರವನ್ನೇ ಸೇವಿಸುತ್ತಾ ಇದ್ದರೆ ಸತ್ವ ಶುದ್ಧಿ ಹೇಗೆ ಸಾಧ್ಯ? ಜಾಗೃತಾವಸ್ಥೆಯಲ್ಲಿರುವ ವೈಶ್ವಾನರ ಎಂಬ ಪ್ರಜ್ನೆಯ ಅಂಗಗಳು ಮತ್ತು ಬಾಯಿಗಳು ಅರ್ಥವಾಗಿದೆ ಎಂದು ಭಾವಿಸುತ್ತೇನೆ.

ಮುಂದುವರೆಯುವುದು……

ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 1

ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಭಾಗ 2

ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ – ಕೊನೆಯ ಭಾಗ (4)

3 Comments on “ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ- ಭಾಗ 3

  1. Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಮಮ- ಕೊನೆಯ ಭಾಗ(4) – Atmanandanatha

  2. Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ ಭಾಗ 2 – Atmanandanatha

  3. Pingback: ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕ- ಭಾಗ 1 – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: