ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೧ of ೭)


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ರಾಮಾಯಣ ಮತ್ತು ಮಹಾಭಾರತದಲ್ಲಿ ಒಬ್ಬ ಮಹಾ ವಿದ್ವಾಂಸ ಮತ್ತು ಸಂತ ಶೀ ಆಷ್ಟಾವಕ್ರನ ಉಲ್ಲೇಖವನ್ನು ಕಾಣಬಹುದು. ಜನಕರಾಜ ಮತ್ತು ಅಷ್ಟಾವಕ್ರರ ನಡುವಿನ ಸಂಭಾಷಣೆಯು ಅಷ್ಟಾವಕ್ರ ಗೀತೆ ಅಥವಾ ಅಷ್ಟಾವಕ್ರ ಸಂಹಿತೆ ಎಂದು ಕರೆಸಿಕೊಂಡಿದೆ. ಇದು 20 ಅಧ್ಯಾಯಗಳಲ್ಲಿ 285 ಶ್ಲೋಕಗಳನ್ನು ಒಳಗೊಂಡಿದ್ದು, ಬ್ರಹ್ಮನ್, ಆತ್ಮನ್ ಮತ್ತು ಅದ್ವೈತ ವೇದಾಂತದ ಸಾರವನ್ನು ಹೇಳುತ್ತಿದೆ.

ಇಲ್ಲಿ ಹೇಳಿರುವ ಜನಕರಾಜ, ರಾಮಾಯಣದಲ್ಲಿ ಬರುವ ಸೀತೆಯ ತಂದೆ ಅಹುದೋ ಅಲ್ಲವೋ ತಿಳಿಯದು.

ಸಂತ ಓಶೋ ಅವರು ಅಷ್ಟಾವಕ್ರರ ಬಗ್ಗೆ ಹೇಳುತ್ತಾ, ಅಷ್ಟಾವಕ್ರ ಒಬ್ಬ ಸಂದೇಶವಾಹಕ. ಎಂತಹ ಸಂದೇಶವಾಹಕ ಸಾಕ್ಷಿಪ್ರಜ್ಞೆಯ ಸಂದೇಶವಾಹಕ ಎನ್ನುತ್ತಾರೆ. ದುಃಖ ಇದ್ದರೆ ಅದನ್ನು ಗಮನಿಸಬೇಕು,ಸಂತೋಷ ಇದ್ದರೆ ಅದನ್ನೂ ಗಮನಿಸಬೇಕು. ಆದರೆ ದುಃಖದೊಂದಿಗೋ, ಸಂತೋಷದೊಂದಿಗೋ ನಮ್ಮನ್ನು ನಾವು ಗುರುತಿಸಿಕೊಳ್ಳಬಾರದು. ಅವೆರಡೂ ಬರಲಿ, ಅವೆರಡೂ ಹೋಗಲಿ. ರಾತ್ರಿ ಬಂತು ಅದನ್ನು ಗಮನಿಸೋಣ. ಬೆಳಕಾಯಿತು ಅದನ್ನೂ ಗಮನಿಸೋಣ. ನಾನು ರಾತ್ರಿಯಾದೆ ಎಂದು, ನಾನು ಬೆಳಗಾದೆ ಎಂದೋ ಯೋಚನೆ ಮಾಡಬಾರದಷ್ಟೆ.

ಅಷ್ಟಾವಕ್ರ ಗೀತೆಯನ್ನು ಕೇಳಿದ ಭಗವಾನ್ ಶ್ರೀ ರಮಣರು ಹೇಳುತ್ತಾರೆ :-
ಬ್ರಹ್ಮಜ್ಞಾನ ಎನ್ನುವುದು ಹೊರಗೆ ಇರುವಂತಹದ್ದಲ್ಲ. ಎಲ್ಲೋ ದೂರದಲ್ಲಿದೆ ಅದನ್ನು ಹೊಂದುವುದು ಸಾಧ್ಯವಿಲ್ಲ ಎನ್ನುವುದಾಗಲಿ ಅಥವಾ ಹತ್ತಿರದಲ್ಲೇ ಇದೆ ಅದು ಸಿಗಲು ಅಲ್ಪ ಸಮಯ ಸಾಕು ಎನ್ನುವುದೂ ಸರಿಯಲ್ಲಾ, ಏಕೆಂದರೆ ಅದು ಯಾವಾಗಲೂ ನಮ್ಮ ಬಳಿಯೇ ಇರುವಂತಾದ್ದು. ನಾನು ನನ್ನದು ಎನ್ನುವುದನ್ನು ಕಳೆದುಕೊಂಡು ಗುರುವಿನಲ್ಲಿ ಸಂಪೂರ್ಣ ಶರಣಾಗತಿಯನ್ನು ಕೋರಿದರೆ ಸಾಕು, ನಮ್ಮಲ್ಲೇ ಇರುವ ಬ್ರಹ್ಮಜ್ಞಾನದ ಅರಿವು ತಂತಾನೆ ಉಂಟಾಗುತ್ತದೆ

ಶ್ರೀ ರಾಮಕೃಷ್ಣ ಪರಮಹಂಸರು ಸಹಾ ನರೇಂದ್ರರಿಗೆ ಅಂದರೆ ಅವರು ಸ್ವಾಮಿ ವಿವೇಕಾನಂದ ಆಗುವ ಮೊದಲು, ಅಷ್ಟಾವಕ್ರ ಗೀತೆಯನ್ನು ಓದುವಂತೆ ತಿಳಿಸಿದ್ದರಂತೆ.

ಈ ಅಷ್ಟಾವಕ್ರ ಗೀತೆಯ ಆರು ಮತ್ತು ಎಂಟನೇ ಅಧ್ಯಾಯದ ಎಂಟು ಶ್ಶ್ಲೋಕ ಗಳು ಜ್ಞಾನ ,ಅಜ್ಮಾನ ಮತ್ತು ಆತ್ಮನಲ್ಲಿ ಧ್ಯಾನದ ಬಗ್ಗೆ ಹೇಳಿದ್ದು, ಅವುಗಳ ಭಾವಾರ್ಥ ಮತ್ತು ಕೊಂಚ ವಿವರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ವಿನಮ್ರ ಪ್ರಯತ್ನವನ್ನು ಮಾಡುತ್ತಿದ್ದೇನೆ.

ಮಹಾ ವಿದ್ವಾಂಸರುಗಳು, ಆತ್ಮಸಾಕ್ಷಾತ್ಕಾರ ಮಾಡಿಕೊಂಡಿರುವ ಮಹಾ ಮಹಾ ಮಹಿಮರು, ಇಂದಿನ ಮತ್ತು ಹಿಂದೆ ಆಗಿಹೋಗಿರುವ ಸಂತರು, ಜ್ಞಾನಿಗಳು ಅಷ್ಟಾವಕ್ರ ಗೀತೆಯ ಬಗ್ಗೆ ಸಾಕಷ್ಟು ಬರೆದಿದ್ದಾರೆ, ಉಪನ್ಯಾಸಗಳನ್ನೂ ನೀಡಿದ್ದಾರೆ. ನನ್ನ ಜ್ಞಾನವು ಇಂತಹವರ ಜ್ಞಾನಕ್ಕೆ ಯಾವುದೇ ರೀತಿಯಲ್ಲಿ ಹೋಲಿಕೆ ಆಗುವುದು ಸಾಧ್ಯವೇ ಇಲ್ಲಾ.

ಹಾಗಾದರೆ ಈ ಪ್ರಯತ್ನ ನಾನು ಮಾಡಿದ್ದಾದರೂ ಏಕೆ? ಈ ದಿನ (16/02/2020) ನನ್ನ ವೈವಾಹಿಕ ಜೀವನದ 52 ವರ್ಷಗಳನ್ನು ಪೂರೈಸಿದ್ದು, ಅದರ ನೆನಪಿಗೆ ಇದಕ್ಕಿಂತ ಉತ್ತಮವಾದ್ದು ಬೇರೆ ಇಲ್ಲವಾಗಿ ಇದನ್ನು ನಾನು ನನ್ನ ಆತ್ಮತೃಪ್ತಿಗಾಗಿ ಆರಿಸಿಕೊಂಡಿದ್ದೇನೆ.

ಈಗ 6 ನೆಯ ಅಧ್ಯಾಯದ ನಾಲ್ಕೂ ಶ್ಲೋಕಗಳು:

ಆಕಾಶವದನನ್ತೋಽಹಂ ಘಟವತ್ ಪ್ರಾಕೃತಂ ಜಗತ್ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-1॥

ಮಹೋದಧಿರಿವಾಹಂ ಸ ಪ್ರಪಂಚೋ ವೀಚಿಸಽನ್ನಿಭಃ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-2॥

ಅಹಂ ಸ ಶುಕ್ತಿಸಂಕಾಶೋ ರೂಪ್ಯವದ್ ವಿಶ್ವಕಲ್ಪನಾ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-3॥

ಅಹಂ ವಾ ಸರ್ವಭೂತೇಷು ಸರ್ವಭೂತಾನ್ಯಥೋ ಮಯಿ ।
ಇತಿ ಜ್ಞಾನಂ ತಥೈತಸ್ಯ ನ ತ್ಯಾಗೋ ನ ಗ್ರಹೋ ಲಯಃ ॥ 6-4॥

ಶ್ಲೋಕ 1 ರ ವಿವರಣೆ:

ನಾನು ಎನ್ನುವುದು ಆಕಾಶದಂತೆ ಮಿತಿ ಇಲ್ಲದ್ದು ಮತ್ತು ಪ್ರಪಂಚವು ಒಂದು ಘಟ ಅಂದರೆ ಮಣ್ಣಿನ ಮಡಿಕೆಯಷ್ಟು ಮಾತ್ರವೇ ಅವಕಾಶವಿರುವಷ್ಟು ಚಿಕ್ಕದು. ಇದನ್ನು ಅರಿಯುವುದೇ ಜ್ಞಾನ. ಈ ಜ್ಞಾನ ಬಂದರೆ ತ್ಯಜಿಸುವುದಾಗಲೀ, ವಶಪಡಿಸುಕೊಳ್ಳುವುದಾಗಲೀ, ಲಯ ಗೊಳಿಸುವುದಾಗಲೀ ಅಂತ್ಯಗೊಳಿಸುವುದಾಗಲೀ ಯಾವುದೂ ಇರುವುದಿಲ್ಲಾ.

ಇತಿ ಜ್ಞಾನಮ್ ಎಂದು ಆರಂಭವಾಗುವ ಈ ಶ್ಲೋಕದ ಎರಡನೆಯ ಸಾಲು ಮಿಕ್ಕ ಮೂರೂ ಶ್ಲೋಕಗಳಲ್ಲಿ ಪುನರಾವರ್ತನೆಯಾಗಿದೆ.
ಈ ಶ್ಲೋಕವು ಮಿತಿ ಇರುವ ಆಕಾಶ ಮತ್ತು ಮಿತಿಯೇ ಇಲ್ಲದ ಆಕಾಶದ ಬಗ್ಗೆ ಹೇಳುತ್ತಿದೆ. ಆತ್ಮ ಎನ್ನುವುದು ಮಿತಿಯಿಲ್ಲದ ಆಕಾಶ. “ನಾನು” ಎಂದು ಗುರುತಿಸಿಕೊಳ್ಳುವ ಅಹಂ ಅನ್ನು ನಮ್ಮ ಒಳಗಿನ ಆಕಾಶದಲ್ಲಿ ವಿಲೀನಗೊಳಿಸುವ ಮೂಲಕ ಏಕತ್ವವನ್ನು ಸಾಧಿಸಬೇಕು.
ನಮ್ಮ ಸುತ್ತ ಇರುವ ಶಾಶ್ವತವಾದ, ಏನೂ ಇಲ್ಲದೇ ಇರುವ, ಅಶರೀರವಾದ ಆಕಾಶವು, ರೂಪವಿಲ್ಲದ್ದು, ಕಣ್ಣಿಗೆ ಗೋಚರಿಸದ್ದು, ಮುಟ್ಟಲಾಗದ್ದು ಆದರೆ ಎಲ್ಲೆಡೆ ವ್ಯಾಪಿಸಿರುವಂತಾದ್ದು. ( ಇದು ಐನ್ ಸ್ಟಿನ್ ಹೇಳಿರುವ ಭೌತಿಕ ಆಕಾಶ ಅಲ್ಲಾ )
ಪ್ರಪಂಚದ ಎಲ್ಲಾ ಬದಲಾವಣೆ, ಮಾರ್ಪಾಡುಗಳು ಮತ್ತು ಭೌತಿಕ ಬ್ರಹ್ಮಾಂಡ ಉದ್ಭವಿಸುವುದೂ ಮತ್ತು ಮುಳುಗಿಹೋಗುವುದೂ ಈ ಆಕಾಶದಲ್ಲೇ. ಆದರೂ ಈ ಆಕಾಶ ಇವೆಲ್ಲದರಿಂದ ಸ್ವತಂತ್ರವಾಗಿದೆ. ಈ ಆಕಾಶವು ಎಲ್ಲ ವಸ್ತುಗಳಲ್ಲಿಯೂ ಇರುವುದೇ ಅಲ್ಲದೆ ಎಲ್ಲ ವಸ್ತುಗಳನ್ನೂ ಎತ್ತಿ ಹಿಡಿಯುತ್ತಾ ಆದರೆ ಇವೆಲ್ಲಕ್ಕೂ ಹೊರಗಿನ ಹೊದಿಕೆಯೂ ಆಗಿದ್ದು ನಾವು ಅದನ್ನು ತಡೆಯಲು, ಹಿಡಿದಿಟ್ಟುಕೊಳ್ಳಲು ಅಸಾಧ್ಯವಾಗಿದೆ.
ಶಾಶ್ವತವಾದ ಆತ್ಮನಂತೆ ಈ ಆಕಾಶವು ನಾವು ಮಾಡುವ ಯಾವುದೇ ಕಾರ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲಾ. ಆದರೆ, ಎಲ್ಲವನ್ನೂ ಅದರಂತೆ ಇರಲು ಅವಕಾಶ ನೀಡುತ್ತದೆ. ಮೌನವಾದ ಸಾಕ್ಷಿಯೇ “ಈ ಆಕಾಶ”. ಇದು ನಮ್ಮ ಹಾದಿಗೆ ಅಡ್ಡಬರುವುದಾಗಲಿ, ನಮ್ಮನ್ನು ನಿಯಂತ್ರಿಸುವುದಾಗಲಿ ನಮ್ಮ ಮೇಲೆ ಯಾವುದೇ ಒತ್ತಡವನ್ನು ಹೇರುವುದಾಗಲಿ ಮಾಡುವುದೇ ಇಲ್ಲಾ.
ನಾವು ಆಳವಾದ ಧ್ಯಾನದಲ್ಲಿ ಮುಳುಗಿದರೆ ನಮ್ಮ ಅಹಂ ಅನ್ನು “ಆ ಆಕಾಶದಲ್ಲಿ ” ವಿಲೀನಗೊಳಿಸಿ ಮನಸ್ಸು ಮತ್ತು ದೇಹಕ್ಕೆ ಮೀರಿದ ವಿಸ್ತಾರವಾದ ಅರಿವಿನ ಸ್ಥಿತಿಯ ಅನುಭವವನ್ನು ಪಡೆದುಕೊಳ್ಳಲು ಸಾಧ್ಯ.

ನಾವು ಈ ಆಕಾಶದ ಆರಂಭ ಅಂತ್ಯಗಳ ಗಡಿಯನ್ನಾಗಲೀ, ನಮ್ಮ ಸೀಮಿತ ಪ್ರಜ್ಞೆಯ ಆರಂಭ ಮತ್ತು ಅಂತ್ಯಗಳನ್ನಾಗಲೀ ಹೇಳಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲಾ ಎನ್ನುವುದೇ ಸರಿಯಾದ ಉತ್ತರ.
ನಾವು ಈ ಆಕಾಶದೊಂದಿಗೆ ಒಂದುಗೂಡಿಕೊಂಡಿದ್ದೇವೆ ಮತ್ತು ಅದಕ್ಕೆ ಬಹಳ ಹತ್ತಿರ ಇದ್ದೇವೆ, ಆದರೂ ಅದರಿಂದ ದೂರವಾಗಿಯೂ ಬೇರೆಯಾಗಿಯೂ ಇದ್ದೇವೆ. ಇದೇ ರೀತಿಯಲ್ಲಿ ಶಾಶ್ವತವಾದ ಆತ್ಮವು ನಮ್ಮೆಲ್ಲರಲ್ಲೂ ನೆಲಸಿದೆ. ಆದರೂ ನಾವು ಅದನ್ನು ಗ್ರಹಿಸುವುದಕ್ಕಾಗಲೀ, ಅದರೊಂದಿಗೆ ಸಂವಹನ ಹೋಂದಲು ಆಗುತ್ತಿಲ್ಲ. ಮನಸ್ಸು ಮತ್ತು ದೇಹದ ಸೀಮಿತ ಪ್ರಜ್ಞೆಯು ಈ ಬೇರ್ಪಡಿಕೆ, ಪ್ರತ್ಯೇಕತೆಗೆ ಕಾರಣವಾಗಿದೆ.

ಈ ಶ್ಲೋಕದಲ್ಲಿ ಹೇಳಿರುವ ಘಟ, ಮಣ್ಣ್ಣಿನ ಮಡಕೆ ವಾರಣಾಸಿಯಲ್ಲಿ ಒಬ್ಬ ಚಾಂಡಾಲನ ಮತ್ತು ಶ್ರೀ ಶಂಕರ ಭಗವತ್ಪಾದರ ಸಂಭಾಷಣೆಯನ್ನು ನೆನಪಿಗೆ ತರುತ್ತಿದೆ. ಈ ಶ್ಲೋಕದಲ್ಲಿ ಹೇಳಿರುವ ಘಟ, ಮಣ್ಣಿನ ಮಡಕೆ. ಚಾಂಡಾಲನ ಮತ್ತು ಶ್ರೀ ಶಂಕರ ಭಗವತ್ಪಾದರ ಸಂಭಾಷಣೆ ಬೇರೆ ಬೇರೆ ವಿಷಯಗಳಾಗಿದ್ದರೂ ಅಲ್ಲಿ, ಚಾಂಡಾಲ ಹೇಳುವ, ಚಿನ್ನದ ಪಾತ್ರೆಯಲ್ಲಿಯೂ ಮಣ್ಣಿನ ಪಾತ್ರಯಲ್ಲಿಯೂ ಪ್ರಕಾಶಿಸುವ ಸೂರ್ಯ ಒಂದೇ ಎನ್ನುವ ಮಾತು ಅಂದರೆ ಈ ಎರಡರಲ್ಲೂ ಇರುವ ‘ಆ ಆಕಾಶ’ ಒಂದೇ ಎಂದು ಸಹಾ ಅರ್ಥೈಸ ಬಹುದೇನೋ ಎನಿಸುತ್ತದೆ.

ಸೀಮಿತ ವಾದ ನಾನು ಅಥವಾ ಬಾಹ್ಯವಸ್ತುವಿನ ವಾಸ್ತವಿಕತೆ ಎನ್ನುವುದು ಈ ಶ್ಲೋಕದಲ್ಲಿ ಹೇಳಿರುವ ಘಟ ,ಮಣ್ಣಿನ ಮಡಿಕೆ. ದೇಹವು ಅಂಗಾಗಗಳಿಂದ ಮತ್ತು ಪ್ರಕೃತಿಯ ತತ್ವಗಳನ್ನು ಹೊಂದಿರುವ ಘಟ ಅಷ್ಟೇ ಅಲ್ಲಾ ಅದರಲ್ಲಿ ಆತ್ಮವು ಸಹಾ ಇದೆ. ಹಾಗೆಯೇ ಮನಸ್ಸು ಸಹಾ ಯೋಚನೆಗಳ, ನೆನಪುಗಳ, ಮತ್ತು ಭಾವನೆಗಳನ್ನು ಹೊಂದಿರುವ ಘಟ ಆಗಿದೆ. ಇವು ನಾಮ, ರೂಪ, ವೈವಿಧ್ಯತೆ, ಭ್ರಮೆ, ಬಂಧನ ಮತ್ತು ಎಲ್ಲಾ ಅಸ್ಥಿತ್ವವಾದದ ಸಮಸ್ಯೆಗಳಿಗೆ ಕಾರಣವಷ್ಟೇ ಅಲ್ಲದೆ ಈ ಸಮಸ್ಯೆಗಳ ಹೊಣೆಯೂ ಸಹಾ ಇವೆಲ್ಲವುಗಳ ಮೇಲಿದೆ.

ಶಾಶ್ವತವಾದ ಆತ್ಮವು ಸಹಾ ಒಂದು ಘಟವೇ ಆಗಿದ್ದರೂ ಇದು ದೇಹ ಮತ್ತು ಮನಸ್ಸಿನ ಘಟದಂತೆ ಸೀಮಿತವಾದದ್ದಲ್ಲ. ಇದು ಯಾವುದೇ ರೂಪವಿಲ್ಲದ, ಭೌತಿಕವಲ್ಲದ, ಸೂಕ್ಶ್ಮಾತಿ ಸೂಕ್ಷ್ಮದ್ದಾಗಿದೆ. ಶಾಶ್ವತವಾದ ಆತ್ಮ ಎನ್ನುವ ಘಟದಲ್ಲಿ ಅತಿ ಸಣ್ಣ ಪರಮಾಣುವಿನಿಂದ ಹಿಡಿದು ಬ್ರಹ್ಮಾಂಡವೇ ಅಡಗಿದೆ. ಬ್ರಹ್ಮಾಂಡ ಅಂದಮೇಲೆ, ಎಲ್ಲ ಲೋಕಗಳು, ಎಲ್ಲ ಜೀವ ಜಡ ರಾಶಿಗಳು ಎಂದು ಮತ್ತೆ ಹೇಳುವ ಅವಶ್ಯವಿಲ್ಲಾ. ಈ ಶಾಶ್ವತವಾದ ಆತ್ಮವು ನಿಜವಾಗಿಯೂ ಎಲ್ಲವನ್ನು ಒಳಗೊಂಡಿರುವ ಬ್ರಹ್ಮಾಂಡದ ಘಟ, ಮಡಕೆ ಎನ್ನಬಹುದೇನೋ. ದೇಹ ಎಂಬ ಪಿಂಡಾಂಡದಿಂದ ಹಿಡಿದು ಸಮಷ್ಟಿಯಾದ ಬ್ರಹ್ಮಾಂಡವು ಅದೇ ಆಗಿರುವ ಶಾಶ್ವತವಾದ ಆತ್ಮವು ಅನಂತವಾದ ಘಟ, ಮಡಕೆ ಎನ್ನಬಹುದೇ

ಯಾವುದೋ ಒಂದರ ಅಂತ್ಯ, ಸಮಾಪ್ತಿ, ಕಾಣದಾಗುವುದು ಆದರೆ ಅದನ್ನು ಲಯ ಎನ್ನಬಹುದು. ವಿರಾಮ, ಅಥವಾ ಮೌನವನ್ನು ಲಯ ಎನ್ನುತ್ತಾರೆ. ಸಂಗೀತದ ಏರಿಳಿತಗಳನ್ನೂ ಲಯ ಎಂದೇ ಹೇಳಲಾಗುತ್ತದೆ. ಶೃತಿ ಮತ್ತು ಲಯಗಳ ಸಂಯೋಜನೆ ಸಂಗೀತವು ಮಧುರವಾಗುವಂತೆ ಮಾಡುತ್ತದೆ. ಆಧ್ಯಾತ್ಮ ಸಾಧನೆಯಲ್ಲಿ ಲಯ ಎಂದರೆ ಮನಸ್ಸಿನ ಅತ್ಯಂತ ಪ್ರಶಾಂತ ಸ್ಥಿತಿ. ಆ ಸ್ಥಿತಿಯಲ್ಲಿ ಮನಸ್ಸು ಮೌನವಾಗುತ್ತದೆ, ಆತ್ಮನಲ್ಲಿ ಒಂದಾಗುತ್ತದೆ. ಅದನ್ನು ಅತ್ಯಂತ ಆಳವಾದ ಧ್ಯಾನ ಸ್ಥಿತಿ ಅಥವಾ ಸಮಾಧಿ ಸ್ಥಿತಿ ಎಂದು ಕರೆಯಬಹುದು.

ನಮ್ಮಲ್ಲಿ ಹಲವರು ಆಗಾಗ ಮೌನ ವ್ರತವನ್ನು ಹಿಡಿಯುತ್ತೇವೆ. ಮಾತಾಡುವುದಿಲ್ಲಾ ಅಷ್ಟೆ ಆದರೆ ಮನಸ್ಸು ಮೌನವಾಗುವುದಿಲ್ಲಾ. ಮನಸ್ಸು ಮೌನವಾಗಬೇಕು. ಅದು ಮೌನ ವ್ರತ.
ಕಾಲಚಕ್ರದ ಅಂತ್ಯದಲ್ಲಿ ಪ್ರಪಂಚವು ನಾಶವಾಗುವುದನ್ನು ಸಹಾ ಲಯ ಎಂದೇ ಹೇಳಲಾಗುತ್ತದೆ. ಯಾವುದಕ್ಕೆಲ್ಲಾ ಅಸ್ಥಿತ್ವ ಇದೆಯೋ ಅವೆಲ್ಲವೂ ಒಂದಲ್ಲ ಒಂದು ದಿನ ಅಂತ್ಯ ಕಾಣಲೇ ಬೇಕು. ಆದರೆ ಬ್ರಹ್ಮನ್ ಅಂದರೆ ಆತ್ಮ ಅದು ಶಾಶ್ವತ ಮತ್ತು ನಾಶಮಾಡಲು ಅಸಾಧ್ಯವಾದ್ದು. ಜಗದ್ಗುರು ಗೀತಾಚಾರ್ಯ ಎರಡನೇ ಅಧ್ಯಾಯದ ೨೩ ನೇ ಶ್ಲೊಕದಲ್ಲಿ ಇದನ್ನೇ ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃ ಎಂದು ಹೇಳಿರುವುದು.

ನಮ್ಮ ಶಾಂತಿ, ಆನಂದ ಮತ್ತು ಬಿಡುಗಡೆಗೆ ಅಡ್ಡಿಯಾಗಿರುವುದು “ನಾನು” ಎನ್ನುವ ಅಹಂನಿಂದ ಚಾಲನೆಗೊಳುತ್ತಿರುವ ಜೀವ. ಮಿತಿಗೆ ಒಳಪಟ್ಟಿರುವ ಈ ’ನಾನು’ ಎನ್ನುವುದನ್ನು ತ್ಯಜಿಸಬೇಕು, ಮತ್ತು ಲಯಗೊಳಿಸಬೇಕು. ಈ “ ನಾನು’ ಎನ್ನುವುದೇ ನಮ್ಮನ್ನು ಈ ಅಶಾಶ್ವತವಾದ ಪ್ರಪಂಚಕ್ಕೆ ಬಂಧಿಯನ್ನಾಗಿ ಮಾಡಿರುವುದು.
ಶಾಶ್ವತವಾದ ಆತ್ಮದಲ್ಲಿ ಎಲ್ಲವೂ ಇದೆ, ಎಲ್ಲದರಲ್ಲಿಯೂ ಆತ್ಮವೂ ಇದೆ. ಆದರೂ ಅದು ಸ್ವತಂತ್ರ, ಶುದ್ಧ ಮತ್ತು ಪರಿಫೂರ್ಣ. ಶಾಂತಿ ಮಂತ್ರ ಹೇಳುವಂತೆ,

ಓಂ ಪೂರ್ಣಮದಂ ಪೂರ್ಣ ಮಿದಂ ಪೂರ್ಣಾತ್ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ

ಬಾಹ್ಯ ವಸ್ತುವಿನೊಂದಿಗೆ “ನಾನು” ಎಂದು ಗುರುತಿಸಿಕೊಳ್ಳುವಿಕೆ, ಬಾಂಧವ್ಯ ಮತ್ತು ಬಂಧನವನ್ನು ತೊರೆಯಬೇಕು, ಉಚ್ಚಾಟಿಸಬೇಕು, ಮತ್ತು ಅಂತ್ಯಗೊಳಿಸಬೇಕೇ ಹೊರತು ” ನಾನು ” ಎಂದು ಗುರುತಿಸುವ, ಶಾಶ್ವತವಾಗಿ ಸ್ವತಂತ್ರವಾಗಿರುವ ಶಾಶ್ವತವಾದ ಆತ್ಮನಿಂದ ಅಲ್ಲಾ.

ಸೀಮಿತವಾದ, ಮಿತಿಯಿಂದ ಕೂಡಿದ ’ನಾನು’ ಎಂದು ಭಾವಿಸುವ ದೇಹ ಮತ್ತು ಮನಸ್ಸು ಮಾರ್ಪಾಡಿಗೆ, ಅಪೂರ್ಣತೆಗೆ ಮತ್ತು ಅಶುದ್ಧತೆಗೆ ಒಳಪಡುವುದರಿಂದ, ರೂಪಾಂತರ ಮತ್ತು ಲಯ ಆಗಲೇಬೇಕಾದ್ದು ಅವಶ್ಯವಾಗುತ್ತದೆ. ಇದನ್ನು ಅರಿಯುವುದೇ ಜ್ಞಾನ ಎಂದು ಜನಕರಾಜನಿಗೆ ಅಷ್ಟಾವಕ್ರರು ಹೇಳುತ್ತಾರೆ.

ಅಷ್ಟಾವಕ್ರ ಗೀತೆ ಅಧ್ಯಾಯ  6 ಮತ್ತು 8ನೆ  – 8 ಶ್ಲೋಕಗಳ ಕೊಂಡಿಗಳು:

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 8, ಶ್ಲೋಕ 1 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ: ಅಧ್ಯಾಯ 8 , ಶ್ಲೋಕ 2 ಮತ್ತು 3 ಕನ್ನಡ ವಿವರಣೆ

ಅಷ್ಟಾವಕ್ರ ಗೀತೆ, ಅಧ್ಯಾಯ 8, ಶ್ಲೋಕ 4 ಕನ್ನಡ ವಿವರಣೆ

ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

4 Comments on “ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 1 ರ ಕನ್ನಡ ವಿವರಣೆ (ಭಾಗ ೧ of ೭)

  1. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 4 ರ ಕನ್ನಡ ವಿವರಣೆ – Atmanandanatha

  2. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 3 ರ ಕನ್ನಡ ವಿವರಣೆ – Atmanandanatha

  3. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ – Atmanandanatha

  4. Pingback: ಅಷ್ಟಾವಕ್ರ ಗೀತೆ: ಅಧ್ಯಾಯ 6 ಶ್ಲೋಕ 2 ರ ಕನ್ನಡ ವಿವರಣೆ (ಭಾಗ ೨ of ೭) – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: