ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ಶ್ರೀ ಲಲಿತಾ ಸಹಸ್ರನಾಮದಲ್ಲಿ 355 ನೆಯ ನಾಮ “ ಸಂಹೃತಾ ಶೇಷಪಾಷಂಡಾ” ಎಂದು ಹಲವು ಪಾಠಗಳಲ್ಲಿ ಇದ್ದರೆ, ಇನ್ನು ಹಲವು ಪಾಠಗಳಲ್ಲಿ “ ಸಂಹೃತಾ ಶೇಷಪಾಖಂಡಾ” ಎಂತಲೂ ಇದೆ. ಹೀಗಾಗಿ ಯಾವುದು ಸರಿ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ.
ಲಲಿತಾ ಸಹಸ್ರನಾಮದಲ್ಲಿ ಬರಬಹುದಾದ ಎಲ್ಲಾ ಸಂದೇಹಗಳಿಗೆ ಸರಿಯಾದ ಉತ್ತರ ಸಿಗುವ ಒಂದೇ ತಾಣ ಎಂದರೆ ಶ್ರೀ ಭಾಸ್ಕರಮಖಿಗಳ “ಸೌಭಾಗ್ಯ ಭಾಸ್ಕರ” ಹಾಗೆಯೇ ದುರ್ಗಾ ಸಪ್ತಶತಿಯ ಬಗ್ಗೆಯ ಸಂದೇಹಗಳಿಗೆ “ಗುಪ್ತವತೀ”. ಹೀಗರುವಾಗ ಸಂದೇಹ ನಿವಾರಣೆ ಬಹು ಸುಲಭ.
ಸಂಹೃತಾ ಶೇಷಪಾಷಂಡಾ ಎನ್ನುವ ನಾಮದ ವಿವರಣೆ ನೀಡುತ್ತಾ, “ ಲಲಿತಾ ಮಹಾತ್ರಿಪುರ ಸುಂದರಿಯು ಪಾಷಂಡರನ್ನು ಸಂಹೃತ ಗೊಳಿಸುವವಳು, , “ಪಾಷಂಡಾ” ಎನ್ನುವದನ್ನು ವಿವರಿಸಲು. ಲಿಂಗ ಪುರಾಣ ಮತ್ತು ಬ್ರಹ್ಮವೈವರ್ತ ಪುರಾಣಗಳನ್ನು ಉಲ್ಲೇಖಿಸಿ, ಯಾರು ಪುರಾಣಗಳು, ನ್ಯಾಯಶಾಸ್ತ್ರ, ಮಿಮಾಂಸೆ, ದರ್ಮಶಾಸ್ತ್ರಗಳು, ಶಿಕ್ಷಾ ಇಂದ ಜ್ಯೋತಿಷದವರೆಗೆ ಐದು ಅಂಗಗಳು, ನಾಲ್ಕು ವೇದಗಳು, ಇವುಗಳಿಗೆ ವಿರೋಧವಾದದ್ದನ್ನು ಆಚರಿಸುತ್ತಾರೋ ಅವರು ಪಾಷಂಡರು ಎಂದು ವಿವರಿಸಿದ್ದಾರೆ. ಸಂಹೃತ ಗೊಳಿಸುವವಳು ಅಂದರೆ ಕೊಲ್ಲುವವಳು ಎಂಬ ಅರ್ಥವಲ್ಲಾ. ಇಂತಹ ಪಾಷಂಡರನ್ನು ನಿರ್ಬಂದಿಸುವವಳು, ವಶಕ್ಕೆ ತೆಗೆದು ಕೊಳ್ಳುವವಳು ಎಂಬ ಅರ್ಥವನ್ನು ನೀಡಿದ್ದಾರೆ.
ಹಾಗೆಯೇ ಪಾಖಂಡಾ ಎಂದರೂ ಇದೇ ಅರ್ಥ ಬರುವದರಿಂದ ಪಾರಾಯಣ ಮಾಡುವವರು ಪಾಷಂಡಾ ಅಥವಾ ಪಾಖಂಡಾ ಇವೆರಡರಲ್ಲಿ ಯಾವುದನ್ನು ಹೇಳಿದರೂ ಸರಿಯೇ ಎಂದು ಅಪ್ಪಣೆ ಮಾಡಿದ್ದಾರೆ. ಇವೆರಡರಲ್ಲಿ ಯಾವುದನ್ನು ಹೇಳಿದರೂ ಛಂದಸ್ಸು ಸಹಾ ವ್ಯತ್ಯಾಸ ಆಗುವುದಿಲ್ಲಾ.
ಸರಿ ಈ ಪಾಖಂಡರನ್ನು / ಪಾಷಂಡರನ್ನು ನಿರ್ಬಂಧಿಸಿ, ವಶಕ್ಕೆ ಪಡೆದುಕೊಂಡು ತಾಯಿ ಏನು ಮಾಡುತ್ತಾಳೆ ಎನ್ನುವುದನ್ನು ಮುಂದಿನ ನಾಮ ತಿಳಿಸುತ್ತದೆ. ಅದು ” ಸದಾಚಾರ ಪ್ರವರ್ತಿಕಾ ” ಈ ಪಾಖಂಡರು / ಪಾಷಂಡರು ಸದಾಚಾರವನ್ನು ಪಾಲಿಸುವಂತೆ ಮಾಡುತ್ತಾಳೆ.
ಸದಾಚಾರ ಎಂದರೆ ಏನು ಎಂಬುದನ್ನು ದೇವಿಯೇ ಕೂರ್ಮಪುರಾಣದಲ್ಲಿ ಹೀಗೆ ಹೇಳಿದ್ದಾಳೆ. ಬ್ರಹ್ಮನ ಅನುಜ್ಞೆಯಂತೆ ವ್ಯಾಸರು ಪ್ರಸಿದ್ಧಿ ಪಡಿಸಿದ ೧೮ ಪುರಾಣಗಳು ಧರ್ಮವನ್ನು ಸ್ಥಾಪಿಸಿದೆ. ಇಲ್ಲಿ ಹೇಳಿರುವ ಧರ್ಮ ಎನ್ನುವ ಪದ ಇಂಗ್ಲಿಷ್ ಭಾಷೆಯ ರಿಲಿಜಿಯನ್ ಅಲ್ಲಾ ಇದು ಮಾನವರ ನೈತಿಕತೆ. ನಂತರ ವ್ಯಾಸರ ಶಿಷ್ಯರು ಉಪ ಪುರಾಣಗಳನ್ನು ಪ್ರಸಿದ್ಧಿ ಪಡಿಸಿದ್ದಾರೆ. ಎಲ್ಲಾ ಯುಗಗಳಲ್ಲಿಯೂ ಧರ್ಮವನ್ನು ಅರಿತ ಜ್ನಾನಿಗಳು, ಜ್ನಾನದ ಮೂಲವಾದ ಪುರಾಣಗಳನ್ನು, ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ, ತರ್ಕ ಮತ್ತು ನಾಲ್ಕು ವೇದಗಳನ್ನು ಪ್ರಸಿದ್ಧಿಪಡಿಸಿದ್ದಾರೆ. ಧರ್ಮ ಎನ್ನುವುದು ಬೇರೆಲ್ಲೂ ಲಭ್ಯವಿಲ್ಲಾ ಇವೆಲ್ಲವೂ ನನ್ನ ಅನುಜ್ನೆಯಂತೆ ಮನು, ವ್ಯಾಸ ಮುಂತಾದವರಿಂದ ಸ್ಥಾಪಿಸಲ್ಪಟ್ಟು ಬ್ರಹ್ಮಾಂಡವು ಲಯವಾಗುವವರೆಗೂ ಇರುತ್ತದೆ.
ಪಾಖಂಡರು / ಪಾಷಂಡರನ್ನು ಸದಾಚಾರ ಪ್ರವೃತ್ತರನ್ನಾಗಿ ಮಾಡಿದ ನಂತರ ಮುಂದಿನ ನಾಮ ” ತಾಪತ್ರಯಾಗ್ನಿ ಸಂತಪ್ತ ಸಮಾಹ್ಲಾದನ ಚಂದ್ರಿಕಾ. ಆದಿ ಭೌತಿಕ, ಆದಿ ದೈವಿಕ ಮತ್ತು ಆಧ್ಯಾತ್ಮಿಕ ಎಂಬ ಮೂರು ತಾಪಗಳ ಅಗ್ನಿಯಲ್ಲಿ ದಹಿಸಿಹೋಗುತ್ತಿರುವವರನ್ನು ಸಂಸಾರವೆಂಬ ಅಗ್ನಿಯಿಂದ ಪಾರುಮಾಡುತ್ತಾಳೆ.
ಈ ಮೂರೂ ನಾಮಗಳನ್ನು ಕ್ರೋಢೀಕರಿಸದರೆ, ಪಾಷಂಡಿಗಳು / ಪಾಖಂಡಿಗಳು ತಾಯಿಯ ಕರುಣೆಯಿಂದ ಸದಾಚಾರ ಪ್ರವೃತ್ತರಾಗಿ ಸಂಸಾರವೆಂಬ ತಾಪತ್ರಯಾಗ್ನಿಯಿಂದ ಪಾರಾಗುತ್ತಾರೆ.
ಈ ಎಲ್ಲಾ ಪಾಷಂಡಿಗಳನ್ನು / ಪಾಖಂಡಿಗಳನ್ನು ಸದಾಚಾರ ಪ್ರವೃತ್ತರಾಗಿಸು ಎಂದು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯನ್ನು ಶ್ರದ್ಧಾ ಭಕ್ತಿಗಳಿಂದ ಪ್ರಾರ್ಥಿಸಿ, ದೇವಿಯ ಈ ಮೂರು ಪವಿತ್ರ ನಾಮಗಳ ವಿವರಣೆಯನ್ನು ಸಂಪನ್ನ ಗೊಳಿಸೋಣ.
ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ
Pingback: ಲಲಿತಾ ಸಹಸ್ರನಾಮದ 355 ನೇ ನಾಮ- ಸಂಹೃತಾಶೇಷ ಪಾಷಂಡಾ – Atmanandanatha