ಶ್ರೀ ದುರ್ಗಾ ಸಪ್ತಶತೀ/ ದೇವೀ ಮಹಾತ್ಮ್ಯೆ/ ಚಂಡೀ ಪಾಠ – ಪಾರಾಯಣ ವಿಧಿ


ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ನವಾರ್ಣ ಮಂತ್ರ ದೀಕ್ಷೆಯನ್ನು ಪಡೆದು ದುರ್ಗಾ ಸಪ್ತಶತಿ ಪಾರಾಯಣ ಮಾಡುತ್ತಿರುವ ಈ ಬ್ಲಾಗಿನ ಓದುಗರೊಬ್ಬರು, ಪಾರಾಯಣದ ಅಂಗಗಳು, ಓದುವ ಕ್ರಮ ಈ ಬಗ್ಗೆ ಹಲವು ಸಂದೇಹಗಳನ್ನು ವ್ಯಕ್ತಪಡಿಸಿ, ಆ ಸಂದೇಹಗಳನ್ನು ಪರಿಹರಿಸುವಂತೆ ಕೋರಿದ್ದಾರೆ. ಅದರ ಫಲವೇ ಈ ಲೇಖನ. ಇದು ಇಂತಹ ಸಂದೇಹಗಳು ಇರುವ ಎಲ್ಲರಿಗೂ ಉಪಯೋಗವಾದರೆ ಅದು ನಾನು ಗುರುಮಂಡಲಕ್ಕೆ ಮತ್ತು ಗುರುಮಂಡಲ ರೂಪಿಣೀ ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಪಾದಾರವಿಂದಗಳಲ್ಲಿ ಸಲ್ಲಿಸುವ ಪೂಜೆಯೇ ಆಗುತ್ತದೆ.
ನನ್ನ ವಿನಮ್ರ ಅನುಭವದ ಪ್ರಕಾರ ಸಾಧಕರಲ್ಲಿ ದುರ್ಗಾ ಸಪ್ತಶತೀ ಪಾರಾಯಣದ ಕುರಿತು ಆರಂಭದಲ್ಲಿ ಈ ಸಂದೇಹಗಳು ಸರ್ವೇ ಸಾಮಾನ್ಯ. ಅವು ನಾವು ಪಾರಾಯಣದಲ್ಲಿ ಮುಂದುವರೆದಂತೆಲ್ಲ ಬಗೆಹರೆಯುತ್ತವೆ.
ನಾನು ಈಗ ಹೇಳುತ್ತಿರುವ ವಿಷಯಗಳು ಕೇವಲ ನವಾರ್ಣ ಮಂತ್ರದಿಂದ ದೀಕ್ಷಿತರಾದವರಿಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಆ ಮಂತ್ರದ ದೀಕ್ಷೆ ಹೊಂದಿರುವವರು ಮಾತ್ರ ಸಪ್ತಶತೀ ಪಾರಾಯಣ ಮಾಡಲು ಅರ್ಹತೆ ಹೊಂದುತ್ತಾರೆ. ಯಾರು ದೀಕ್ಷಿತರಲ್ಲವೊ, ಅವರು ಈ ಬಗ್ಗೆ ತಿಳಿದುಕೊಳ್ಳಬಹುದು, ಅದರೆ ಪಾರಾಯಣ ಮಾಡುವ ಪ್ರಯತ್ನ ಖಂಡಿತವಾಗಿ ಮಾಡಬಾರದು. ಗುರುವಿನ ಉಪದೇಶವಿಲ್ಲದೆ ಯಾರೂ ಸಹ ಮಂತ್ರ, ಮಣಿ ಹಾಗೂ ಔಷಧ ಇವುಗಳ ಪ್ರಯೋಗಕ್ಕೆ ಮುಂದಾಗಬಾರದು.

೧. ದುರ್ಗಾ ಸಪ್ತಶತಿಯ ಹಲವಾರು ಮುದ್ರಣಗಳು ಹಲವಾರು ಪ್ರಕಾಶಕರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಗೀತಾ ಪ್ರೆಸ್, ಗೋರಖಪುರ ಇವರ ಪುಸ್ತಕವು ಮೂಲ ಕೃತಿಗೆ ಹೊಲುತ್ತದೆ. ಈ ಪುಸ್ತಕವು ಎಲ್ಲಾ ಭಾಷೆಗಳಲ್ಲಿ ಲಭ್ಯವಿದ್ದು, ಸಂಸ್ಕೃತ ಅವತರಿಣೆಕೆಯನ್ನು ಉಪಯೋಗಿಸಿದರೆ, ಉಚ್ಛಾರಣೆಯಲ್ಲಿ ಬರಬಹುದಾದ ದೋಷವನ್ನು ತಡೆಯಬಹುದು. ಇಲ್ಲವೇ, ಪಾರಾಯಣದ ಮೊದಲು ಸರಿಯಾದ ಉಚ್ಛಾರಣೆಯನ್ನು ಕಲಿತುಕೊಳ್ಳಬೇಕು.

೨.ಆಚಮ್ಯ, ಪ್ರಾಣಾಯಾಮ, ಪವಿತ್ರ ಧಾರಣೆ, ಆ ದಿನಕ್ಕೆ ಪಾರಾಯಣ ಮಾಡುವ ಅರ್ಹತೆ ಪಡೆಯಲು ಪ್ರಾಯಶ್ಚಿತ್ತ ಸಂಕಲ್ಪ ( ಪ್ರಾಯಶ್ಚಿತ್ತ ಸಂಕಲ್ಪವು ಲಭ್ಯವಿಲ್ಲದಿದ್ದಲ್ಲಿ ಕೈಯಲ್ಲಿ ತಾಂಬೂಲ ಹಾಗೂ ದಕ್ಷಿಣೆಯನ್ನು ಹಿಡಿದು, ಮಾನಸಿಕವಾಗಿ ಇಷ್ಟದೇವತೆಯನ್ನು ಪ್ರಾರ್ಥಿಸಿ ನಾವು ತಿಳಿದೋ ತಿಳಿಯದೆ ಮಾಡಿರುವ ಪಾಪಕರ್ಮಗಳನ್ನು ಮನ್ನಿಸುವಂತೆ ಪ್ರಾರ್ಥಿಸಿ ಪಾರಾಯಣ ಮಾಡುವ ಅರ್ಹತೆಯನ್ನು ಅನುಗ್ರಹಿಸುವಂತೆ ಪ್ರಾರ್ಥಿಸಬೇಕು. ಆನಂತರ ಈ ತಾಂಬೂಲ ಹಾಗೂ ದಕ್ಷಿಣೆಯನ್ನು ಅರ್ಹ ಬ್ರಾಹ್ಮಣರಿಗೆ ನೀಡಬೇಕು.) ನಂತರ ಎಂದಿನಂತೆ ದೇಶಕಾಲ ಸಂಕೀರ್ತನೆಯೊಂದಿಗೆ ಸಂಕಲ್ಪ ( ನಮಗೆ ಪಾರಾಯಣದಿಂದ ಏನಾದರೂ ಬಗೆಹರೆಯಬೇಕಾದರೆ ಅದನ್ನು ಸಂಕಲ್ಪದೊಂದಿಗೆ ಸೇರಿಸಬಹುದು, ಇಲ್ಲವಾದಲ್ಲಿ “ ಧರ್ಮಾರ್ಥ ಕಾಮ ಮೋಕ್ಷ ಚತುರ್ವಿಧ ಪುರುಷಾರ್ಥ ಸಿಧ್ಯರ್ಥೇ ” ಎಂದು ಹೇಳಿಕೊಳ್ಳುವುದು)

೩.ಗಣಪತಿ ಸ್ಮರಣೆ, ಗುರು, ಪರಮಗುರು, ಪರಮೇಷ್ಠಿ ಗುರು ಸ್ಮರಣೆ, ಆಸನ ಪೂಜೆ, ಬಾಹ್ಯ ಭೂತ ಶುದ್ಧಿ, ಸ್ಥಳ ಶುದ್ಧಿ, ದ್ವಾರದೇವತಾ ಪೂಜಾ, ವಿಘ್ನೋತ್ಸಾರಣ, ಭೂಶುದ್ಧಿ, ಭೂತಶುದ್ಧಿ, ಪ್ರಾಣಪ್ರತಿಷ್ಠಾ, ಗರ್ಭದಾನಾದಿ ಪಂಚದಶ ಸಂಸ್ಕಾರ, ಮಾತೃಕಾ ನ್ಯಾಸ, ದೀಪ ಸ್ಥಾಪನಾ, ಶಾಪೋದ್ಧಾರ ಮಂತ್ರ (ಏಳು ಬಾರಿ) ಉತ್ಕೀಲನಾ ಮಂತ್ರ ( ಇಪ್ಪತ್ತೊಂದು ಬಾರಿ)
ಮೇಲೆ ಹೇಳಿರುವ ಎಲ್ಲವೂ ಗೀತಾ ಪ್ರೆಸ್ ಪುಸ್ತಕದಲ್ಲಿ ವಿವರವಾಗಿ ತಿಳಿಸಲಾಗಿದೆ.

ಈಗ ಕೆಳಗೆ ತಿಳಿಸಿರುವ ಕ್ರಮಾನುಸಾರದಂತೆ ಪಾರಾಯಣವನ್ನು ಮಾಡಬೇಕು.
ಕವಚ
ಅರ್ಗಲಾ ಸ್ತೋತ್ರ
ಕೀಲಕಾ
ರಾತ್ರೀ ಸೂಕ್ತ
ನವಾಕ್ಷರೀ, ಇದನ್ನು ನವಾರ್ಣ ಮಂತ್ರವೆಂದು ಸಹ ಕರೆಯಲಾಗುವುದು. ಗುರುವಿನ ಉಪದೇಶಾನುಸಾರ ನವಾರ್ಣ ಮಂತ್ರದ ವಿಧಿಸಹಿತ ಜಪ.
ಸಪ್ತಶತೀ ನ್ಯಾಸದೊಂದಿಗೆ ಪ್ರಾರಂಭಿಸಿ ಸಪ್ತಶತಿ ಪಾರಾಯಣ.
ನವಾಕ್ಷರೀ, ಇದನ್ನು ನವಾರ್ಣ ಮಂತ್ರವೆಂದು ಸಹ ಕರೆಯಲಾಗುವುದು. ಗುರುವಿನ ಉಪದೇಶಾನುಸಾರ ನವಾರ್ಣ ಮಂತ್ರದ ವಿಧಿಸಹಿತ ಜಪ.
ದುರ್ಗಾ ಸಪ್ತಶತಿಯ ಕೇವಲ ಷಡಂಗ ನ್ಯಾಸ ಹಾಗೂ ಧ್ಯಾನ ಶ್ಲೋಕ (ವಿದ್ಯುದ್ಧಾಮ ಸಮಪ್ರಭಾಂ)
ದೇವೀ ಸೂಕ್ತ
ಕ್ಷಮಾ ಪ್ರಾರ್ಥನಾ

ಮತ್ತಷ್ಟು ಮುಖ್ಯವಾದ ಸೂಚನೆಗಳು –
೧. ರಾತ್ರೀ ಸೂಕ್ತ ಹಾಗೂ ದೇವೀ ಸೂಕ್ತಗಳು ವೈದಿಕ ಹಾಗೂ ತಾಂತ್ರಿಕ ಆವೃತ್ತಿಗಳನ್ನು ಹೊಂದಿವೆ. ವೇದ ಮಂತ್ರಗಳನ್ನು ಪಠಿಸಿ ಅಭ್ಯಾಸವುಳ್ಳವರಾಗಿದ್ದರೆ ಅವರು ಎರಡೂ ಆವೃತ್ತಿಗಳನ್ನು ಹೇಳಿಕೊಳ್ಳಬಹುದು. ವೇದಮಂತ್ರಗಳ ಉಚ್ಛಾರಣೆ ಹಾಗೂ ಸ್ವರಗಳ ಬಗ್ಗೆ ಸಂಶಯವಿದ್ದಲ್ಲಿ ತಾಂತ್ರಿಕ ಆವೃತ್ತಿಯನ್ನು ಮಾತ್ರ ಪಠಿಸಬಹುದು. ಯಾವುದೇ ತೊಂದರೆ ಇಲ್ಲ.
೨. ಪ್ರತಿ ಅಧ್ಯಾಯದ ನಂತರ ೧೦೮ ಸಂಖ್ಯೆಗೆ ಕಡಿಮೆ ಇಲ್ಲದಂತೆ ನವಾರ್ಣ ಮಂತ್ರ ಜಪವನ್ನು ಮಾಡುವುದು. ೧೦೦೮ ಜಪ ಮಾಡಿದರೆ ಇನ್ನೂ ಒಳ್ಳೆಯದೇ. ಆದರೆ ಮೇಲೆ ತಿಳಿಸಿರುವ ಹಾಗೆ ಪ್ರತಿ ಅಧ್ಯಾಯದ ನಂತರ ನವಾರ್ಣ ಮಂತ್ರದ ಜಪ ಮಾಡದಿದ್ದಲ್ಲಿ ಪಾರಾಯಣದಿಂದ ಯಾವುದೇ ರೀತಿಯ ಪ್ರಯೋಜನ ಇಲ್ಲ.

೩. ದೇವೀ ಸೂಕ್ತದ ನಂತರ ಹಾಗೂ ಕ್ಷಮಾ ಪ್ರಾರ್ಥನೆಯ ಮೊದಲು ಬೇಕಾದರೆ ರಹಸ್ಯತ್ರಯ ಗಳನ್ನು ಪಠಿಸಬಹುದು (ಪ್ರಾಧಾನಿಕರಹಸ್ಯ, ವೈಕೃತಿಕ ರಹಸ್ಯ ಹಾಗೂ ಮೂರ್ತಿ ರಹಸ್ಯ). ಇವು ಐಚ್ಛಿಕ. ಮಾಡಲೇಬೇಕು ಎಂಬ ನಿಬಂಧನೆ ಇಲ್ಲ.

೪. ಚಂಡೀ ಉಪಾಸಕರ ಪೈಕಿ, ಅತ್ಯಂತ ಶ್ರೇಷ್ಠರಲ್ಲಿ ಒಬ್ಬರಾದ ವಿದೇಹ ಮುಕ್ತರಾದ ಶ್ರೀ ಗುಂಜೂರು ರಾಮಚಂದ್ರ ಶಾಸ್ತ್ರಿಗಳವರು (ಪುಷ್ಯ), ಪ್ರತಿ ಅಧ್ಯಾಯ ಹಾಗೂ ನವಾರ್ಣ ಮಂತ್ರ ಜಪದ ನಂತರ ಕೆಲವು ದೇವೀ ಸ್ತೋತ್ರಗಳನ್ನು ಪಠಿಸುವಂತೆ ಸೂಚಿಸುತ್ತಾರೆ. ನನ್ನ ವೈಯಕ್ತಿಕ ಅನುಭವದ ಪ್ರಕಾರ ಅ ಸ್ತೋತ್ರಗಳನ್ನು ಪಠಿಸುವುದರಿಂದ ಆಗುವ ಪರಿಣಾಮ ನಿಜಕ್ಕೂ ಅದ್ಭುತ. ನಾನು ಈಗ ಸ್ತೋತ್ರಗಳವಿವರವನ್ನು ಕೆಳಗೆ ನೀಡುತ್ತಿದ್ದೇನೆ.

a) ಮೊದಲನೇ ಅಧ್ಯಾಯದ ನಂತರ “ಘೋರಚಂಡೀ ಮಹಾಚಂಡೀ” ಇಂದ ಆರಂಭವಾಗುವ ರುದ್ರ ಚಂಡೀ ಸ್ತೋತ್ರ
b) ಎರಡನೇ ಅಧ್ಯಾಯದ ನಂತರ “ಅಂಗಂ ಹರೇ” ಇಂದ ಆರಂಭವಾಗುವ ಕನಕಧಾರಾ ಸ್ತೋತ್ರ
c) ಮೂರನೇ ಅಧ್ಯಾಯದ ನಂತರ “ನಮಸ್ತೇಸ್ತು ಮಹಾಮಾಯೇ” ಇಂದ ಆರಂಭವಾಗುವ ಮಹಾಲಕ್ಷ್ಮೀ ಅಷ್ಟಕ
d) ನಾಲ್ಕನೇ ಅಧ್ಯಾಯದ ನಂತರ “ತ್ವಮೇವ ಸರ್ವಜನನೀ” ಇಂದ ಆರಂಭವಾಗುವ ದುರ್ಗಾ ಸ್ತೋತ್ರ
e) ಐದನೇ ಅಧ್ಯಾಯದ ನಂತರ “ಘೋರರೂಪೇ ಮಹಾರಾವೇ” ಇಂದ ಆರಂಭವಾಗುವ ನೀಳಾ ಸರಸ್ವತೀ ಸ್ತೋತ್ರ
f) ಆರನೇ ಅಧ್ಯಾಯದ ನಂತರ “ಶ್ರೀಮದ್ ಗೀರ್ವಾಣ ಚಕ್ರ ಸ್ಫುಟ ಮಕುಟ” ಇಂದ ಆರಂಭವಾಗುವ ಪದ್ಮಾವತೀ ಸ್ತೋತ್ರ
g) ಏಳನೇ ಅಧ್ಯಾಯದ ನಂತರ “ಯಾ ದೇವೀ ಖಡ್ಗಹಸ್ತ ಸಕಲಜನ ಪದವ್ಯಾಪಿಣೀ” ಇಂದ ಆರಂಭವಾಗುವ ಚಂಡಿಕಾ ಸ್ತೋತ್ರ
h) ಎಂಟನೇ ಅಧ್ಯಾಯದ ನಂತರ “ಮಾತರ್ದೇವೀ ನಮಸ್ತೇಸ್ತು ಬ್ರಹ್ಮರೂಪಧರೇನಘೇ” ಇಂದ ಆರಂಭವಾಗುವ ಅಷ್ಟಮಾತೃಕಾ ಶಾಂತಿ ಸ್ತೋತ್ರ
i) ಒಂಬತ್ತನೇ ಅಧ್ಯಾಯದ ನಂತರ ಕರ್ಪೂರ ಸ್ತೋತ್ರ. ಇದು “ಘೋರರೂಪ ಮಹಾರಾವೇ “ ಸ್ತೋತ್ರ ಎರಡೂ ಒಂದೇ
j) ಹತ್ತನೇ ಅಧ್ಯಾಯದ ನಂತರ “ನಮೋಸ್ತುತೇ ಸರಸ್ವತೀ ತ್ರಿಶೂಲ ಚಕ್ರ ಧಾರಿಣಿ” ಇಂದ ಆರಂಭವಾಗುವ ಭಗವತ್ಯಷ್ಟಕ
k) ಹನ್ನೊಂದನೇ ಅಧ್ಯಾಯದ ನಂತರ “ನಮಸ್ತೇ ರುದ್ರ ರೂಪಿಣ್ಯೈ ನಮಸ್ತೇ ಮಧು ಮರ್ಧಿನಿ ” ಇಂದ ಆರಂಭವಾಗುವ ಸಿದ್ಧಕುಂಜಿಕಾ ಸ್ತೋತ್ರ
l) ಹನ್ನೆರಡನೇ ಅಧ್ಯಾಯದ ನಂತರ “ನಮಸ್ತೇ ಶಿವೇಸಾನುಕಂಪೆ” ಇಂದ ಆರಂಭವಾಗುವ ದುರ್ಗಾ ಆಪದುದ್ಧರಣ ಸ್ತೋತ್ರ
m) ಹದಿಮೂರನೇ ಅಧ್ಯಾಯದ ನಂತರ “ಶಿವರೂಪಧರೇ ದೇವೀ ಗುಹ್ಯಕಾಳೀ ನಮೋಸ್ತುತೇ” ಇಂದ ಆರಂಭವಾಗುವ ಶಿವಾ ಸ್ತುತಿ.

೫. ಮುಖ್ಯ ಟಿಪ್ಪಣಿ
ಮೇಲೆ ತಿಳಿಸಿರುವ ಎಲ್ಲಾ ಸ್ತೋತ್ರಗಳನ್ನು ಆಯಾ ಅಧ್ಯಾಯದ ಕೊನೆಯಲ್ಲಿ ಪಠಿಸಿದರೆ ತುಂಬಾ ಒಳ್ಳೆಯದು. ಆಗದಿದ್ದಲ್ಲಿ ಹನ್ನೊಂದನೆಯ ಅಧ್ಯಾಯದ ನಂತರ ಸಿದ್ಧಕುಂಜಿಕಾ ಸ್ತೋತ್ರವನ್ನು ಪಠಿಸಲೇಬೇಕು. “ ಯಸ್ತು ಕುಂಜಿಕಯಾ ದೇವೀ ಹೀನಾಂ ಸಪ್ತಶತೀ ಪಠೇತ್ ನ ತಸ್ಯ ಜಾಯತೇ ಸಿದ್ಧಿರರಣ್ಯೇ ರೋಧನಂ ಯಥಾ “ ಇದರ ಅರ್ಥ, ಸಿದ್ಧಕುಂಜಿಕಾ ಸ್ತೋತ್ರ ಪಠಿಸದೆ ಮಾಡಿದ ಸಪ್ತಶತಿ ಪಾರಾಯಣವು ಅರಣ್ಯದಲ್ಲಿ ಮಾಡಿದ ರೋದನದಂತೆ.
೬.ಪಾರಾಯಣವನ್ನು ಒಂದೇ ಬಾರಿಗೆ ಮುಗಿಸುವುದು ಒಳ್ಳೆಯದು. ಅದಾಗದಿದ್ದಲ್ಲಿ ಪಾರಾಯಣವನ್ನು ಕೆಳಗೆ ತಿಳಿಸಿರುವಂತೆ ವಿಭಜಿಸಿ ಕೆಲವು ದಿನಗಳಲ್ಲಿ ಮುಗಿಸಬಹುದು.
ಮೂರು ದಿನದ ಪಾರಾಯಣಕ್ಕಾಗಿ
ಮೊದಲನೇ ದಿನ – ಅಧ್ಯಾಯ ೧
ಎರಡನೇ ದಿನ – ೨,೩, ಹಾಗೂ ೪ನೇ ಅಧ್ಯಾಯಗಳು.
ಮೂರನೇ ದಿನ – ೫ ರಿಂದ ೧೩ ಅಧ್ಯಾಯಗಳವರೆಗೆ.
ನವರಾತ್ರಿಗಳಂದು ಮೇಲೆ ತಿಳಿಸಿರುವಂತೆ ೯ ದಿನಗಳ ವರೆಗೆ ಮೂರು ಬಾರಿ ಪಾರಾಯಣ ಮಾಡಬಹುದು.
ಏಳು ದಿನಗಳ ಪಾರಾಯಣಕ್ಕಾಗಿ
ಮೊದಲನೇ ದಿನ – ಅಧ್ಯಾಯ ೧
ಎರಡನೇ ದಿನ – ೨ ಹಾಗೂ ೩ನೇ ಅಧ್ಯಾಯಗಳು.
ಮೂರನೇ ದಿನ – ೪ನೇ ಅಧ್ಯಾಯ.
ನಾಲ್ಕನೇ ದಿನ – ೫ ರಿಂದ ೮ನೇ ಅಧ್ಯಾಯದ ವರೆಗೆ.
ಐದನೇ ದಿನ – ೯ ಮತ್ತು ೧೦ನೇ ಅಧ್ಯಾಯಗಳು.
ಆರನೇ ದಿನ – ೧೧ ನೇ ಅಧ್ಯಾಯ.
ಏಳನೇ ದಿನ – ೧೨ ಹಾಗೂ ೧೩ ನೇ ಅಧ್ಯಾಯಗಳು.
ನಾವು ಮೂರು ದಿನ ಅಥವಾ ಏಳು ದಿನಗಳ ಪಾರಾಯಣ ಯಾವುದನ್ನೇ ಮಾಡಿದರೂ ಪ್ರತಿ ದಿನವೂ ಪೂರ್ವಾಂಗ ಹಾಗೂ ಉತ್ತರಾಂಗ ಇವುಗಳನ್ನು ಮಾಡುವುದು ಕಡ್ಡಾಯ. ಪೂರ್ವಾಂಗ ಮತ್ತು ಉತ್ತರಾಂಗ ಇವೆರಡನ್ನು ಈ ಕೆಳಗೆ ತಿಳಿಸಲಾಗಿದೆ.
ಪೂರ್ವಾಂಗ

ಕವಚ
ಅರ್ಗಲಾ ಸ್ತೋತ್ರ
ಕೀಲಕಾ
ರಾತ್ರಿ ಸೂಕ್ತ
ನವಾರ್ಣ ಮಂತ್ರ
ಸಪ್ತಶತಿ ನ್ಯಾಸ

ಉತ್ತರಾಂಗ
ನವಾರ್ಣ ಮಂತ್ರ ಜಪ.
ದುರ್ಗಾ ಸಪ್ತಶತಿಯ ಕೇವಲ ಷಡಂಗ ನ್ಯಾಸ ಹಾಗೂ ಧ್ಯಾನ ಶ್ಲೋಕ (ವಿದ್ಯುದ್ಧಾಮ ಸಮಪ್ರಭಾಂ)
ದೇವೀ ಸೂಕ್ತ
ಕ್ಷಮಾ ಪ್ರಾರ್ಥನಾ

ನಮ್ಮ ಜೀವನದಗತಿಯನ್ನು ಬದಲಿಸುವ ಇಂತಹ ಆಚರಣೆಗಳನ್ನು ಮಾಡುವುದಕ್ಕೆ ನಮಗೆ ಸಮಯವೇ ಸಿಗುವುದಿಲ್ಲ. ಅದಕ್ಕಾಗಿ ನಾವು ಪರ್ಯಾಯ ಆಚರಣೆಗಳನ್ನು ಹಾಗೂ ಮಾರ್ಗಗಳನ್ನು ಹುಡುಕುತ್ತೇವೆ. ಆ ಪರ್ಯಾಯ ಮಾರ್ಗಗಳು ನಮಗೆ ಆಚರಣೆಯನ್ನು ಮುಗಿಸಿದ ಸಮಾಧಾನ ತಂದರೂ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತೇವೆ.
ಸಪ್ತಶತಿ ಪಾರಾಯಣದ ಬದಲು ಸಪ್ತಶ್ಲೋಕಿಯನ್ನು ಪಠಿಸುವುದು ಈ ಪರ್ಯಾಯ ಮಾರ್ಗದ ಉದಾಹರಣೆ. ಕೇವಲ ಮಧ್ಯಮ ಚರಿತ್ರೆಯನ್ನು ಪಠಿಸುವುದು ಇನ್ನೊಂದು ಪರ್ಯಾಯ ಮಾರ್ಗ. ಪಾರಾಯಣವನ್ನು ಮೂರು ಅಥವಾ ಏಳು ದಿನಗಳಲ್ಲಿ ವಿಭಜಿಸಿ ಪ್ರತಿದಿನ ಪೂರ್ವಾಂಗ ಉತ್ತರಾಂಗ ಗಳಿಲ್ಲದೆ ಪಾರಾಯಣ ಮಾಡುವುದು.
೭. ಯಾರು ಶ್ರೀವಿದ್ಯಾ ಮಂತ್ರಗಳಿಂದ ದೀಕ್ಷಿತರಾಗಿರುವರೋ ಅವರೂ ನವಾರ್ಣ ಮಂತ್ರದೊಂದಿಗೆ ಶ್ರೀವಿದ್ಯಾ ಮಂತ್ರಗಳನ್ನು ದುರ್ಗಾ ಸಪ್ತಶತಿಯ ಪ್ರತಿ ಶ್ಲೋಕದೊಂದಿಗೆ ಸಂಪುಟೀಕರಿಸಿ ಪಾರಾಯಣ ಮಾಡಬಹುದು. ಹೀಗೆ ಮಾಡುವುದರಿಂದ ಆಗುವ ಅನುಭವ ಅತ್ಯದ್ಭುತ. ಅದನ್ನು ಅನುಭವಿಸಿಯೇ ತಿಳಿಯಬೇಕು.
೮. ಭೂರ್ಭುವಸ್ಸುವಃ ಮತ್ತು ನವಾರ್ಣ ಮಂತ್ರದಿಂದ ಸಪ್ತಶತಿಯ ಪ್ರತಿ ಶ್ಲೋಕವನ್ನು ಸಂಪುಟೀಕರಿಸಿ ಮಾಡುವ ಪಾರಾಯಣವು ಎಲ್ಲಾ ಪಾಪಗಳನ್ನು ತೊಡೆದು ಹಾಕಲು ಇರುವ ಸುಲಭ ಉಪಾಯ.
೯. ಸಪ್ತಶತಿಯ ೪ನೇ ಅಧ್ಯಾಯದ ೫ನೇ ಶ್ಲೋಕವಾದ “ ಯಾ ಶ್ರೀಃ ಸ್ವಯಂ ಸುಕೃತಿನಾಮ್…….. “ ಇಂದ ಸಂಪುಟೀಕರಿಸಿ ಮಾಡಿದ ಪಾರಾಯಣವು ಎಲ್ಲಾ ರೀತಿಯ ಕಷ್ಟ, ನಷ್ಟಗಳು ಮತ್ತು ವಿಪತ್ತಿನಿಂದ ಹೊರಬರಲು ಸಹಕಾರಿಯಾಗಿದೆ.
೧೦. ಸಪ್ತಶತಿಯ ೧೧ನೇ ಅಧ್ಯಾಯದ ೧೨ನೇ ಶ್ಲೋಕವಾದ “ ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ ……. “ ಇಂದ ಸಂಪುಟೀಕರಿಸಿ ಮಾಡಿದ ಪಾರಾಯಣವು ದೇಶದ ಭದ್ರತೆ ಹಾಗೂ ದೇಶವನ್ನು ಆಳುವವರ ಸುರಕ್ಷತೆಯ ವಿಷಯವಾಗಿ ಸಹಕಾರಿಯಾಗಿದೆ.
೧೧. ಸಪ್ತಶತಿಯ ೧೧ನೇ ಅಧ್ಯಾಯದ ೨೯ನೇ ಶ್ಲೋಕವಾದ “ ರೋಗಾನಶೇಷಾ ನಪಹಂಸಿ ……. “ ಇಂದ ಸಂಪುಟೀಕರಿಸಿ ಮಾಡಿದ ಪಾರಾಯಣವು ಎಲ್ಲಾ ರೀತಿಯ ರೋಗ ರುಜಿನಗಳಿಂದ ಹೊರಬರಲು ಸಹಕಾರಿಯಾಗಿದೆ.
೧೨. ಸಪ್ತಶತಿಯ ೧೧ನೇ ಅಧ್ಯಾಯದ ೧೦ನೇ ಶ್ಲೋಕವಾದ “ ಸರ್ವಮಂಗಳ ಮಾಂಗಲ್ಯೇ……. “ ಇಂದ ಸಂಪುಟೀಕರಿಸಿ ಮಾಡಿದ ಪಾರಾಯಣವು ವಿವಾಹ ವಿಳಂಬವನ್ನು ಮತ್ತು ವಿವಾಹ ಸಂಬಂಧಿ ಪ್ರಯತ್ನಗಳು ಫಲಕಾರಿಯಾಗಲು ಸಹಕಾರಿಯಾಗಿದೆ.
ಇದಲ್ಲದೆ ಇನ್ನೂ ಅನೇಕ ಶ್ಲೋಕಗಳನ್ನು ನಾವು ಸಂಪುಟೀಕರಣ ಮಾಡಿ ಪಾರಾಯಣ ಮಾಡಬಹುದಾಗಿದೆ.

೧೩. ಇವುಗಳನ್ನು ಮಾಡಿ.
i) ನಿಮಗೆ ಸರಿಹೊಂದುವ ಯಾವುದಾದರೂ ಆಸನದಲ್ಲಿ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಿ. ಪಾರಾಯಣವು ಮುಗಿಯುವವರೆಗೂ ಏಳದಂತೆ ನಿರ್ಧಾರ ಕೈಗೊಳ್ಳಿ.
ii) ಪಾರಾಯಣ ಪುಸ್ತಕವನ್ನು ಪೂಜಾ ಕೊಠಡಿಯಲ್ಲಿ ರೇಷ್ಮೆ ಬಟ್ಟೆಯಲ್ಲಿ ಸುತ್ತಿಡಿ
iii) ಪುಸ್ತಕವನ್ನು ವ್ಯಾಸಪೀಠದ ಮೇಲಿಡಿ. ಅದು ಲಭ್ಯವಿಲ್ಲದ್ದಲ್ಲಿ ಯಾವುದಾದರು ಮರದ ಹಲಗೆಯ ಮೇಲಿಡಿ.
iv) ಪಾರಾಯಣ ಮುಗಿದ ಮೇಲೆ ಗುರುಗಳು, ಆಚಾರ್ಯರು ಮತ್ತು ಹಿರಿಯರಿಗೆ ತಾಂಬೂಲ ಹಾಗೂ ದಕ್ಷಿಣೆಯನ್ನು ಸಮರ್ಪಿಸಿ.
v) ಪಾರಾಯಣ ಸಮಯದಲ್ಲಿ ಶ್ವೇತ ವಸ್ತ್ರವನ್ನು ಧರಿಸಿ.
vi) ಪಾರಾಯಣಕ್ಕೆ ಮೊದಲು ಹಾಗೂ ನಂತರ ತಂದೆ ತಾಯಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಪಾರಾಯಣ ಸಮಯದಲ್ಲಿ ಅವರು ಇಲ್ಲದಿದ್ದರೆ, ಮನಸ್ಸಿನಲ್ಲೆ ಅವರನ್ನು ಧ್ಯಾನಿಸಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಿ.
vii) ಪಾರಾಯಣವನ್ನು ಮಧ್ಯಮ ಸ್ವರದಲ್ಲಿ ಮಾಡಬೇಕು. (ಅತೀ ಜೋರಾಗಿ ಅಥವಾ ಪಿಸುಗುಟ್ಟುವಂತೆ ಪಾರಾಯಣ ಮಾಡಬಾರದು. ಹತ್ತಿರದಲ್ಲಿರುವವರಿಗೆ ಕೇಳಿಸುವಂತೆ ಮಾಡಬೇಕು. ಮಂತ್ರಜಪವು ಮಾನಸಿಕವಾಗಿರಲಿ)
viii) ಪಾರಾಯಣ ಸಮಯದಲ್ಲಿ ಕೋಪಿಸಿಕೊಳ್ಳಬಾರದು.
ix) ಪೂಜಾ ಕೊಠಡಿಯು ಪಾರಾಯಣ ಮಾಡಲು ಪ್ರಶಸ್ತವಾದ ಸ್ಥಳ. ಅದು ಇಲ್ಲದಿದ್ದಲ್ಲಿ ಮನೆಯ ಮಧ್ಯಭಾಗದಲ್ಲಿ ಕುಳಿತು ಪಾರಾಯಣ ಮಾಡಬೇಕು.

೧೪. ಇವುಗಳನ್ನು ಮಾಡಬೇಡಿ
a) ಪಾರಾಯಣವು ಮುಗಿಯುವವರೆಗೂ ಎನನ್ನೂ ತಿನ್ನಬಾರದು ಅಥವಾ ಕುಡಿಯಬಾರದು, ನೀರನ್ನೂ ಸಹಿತ.
b) ಪಾರಾಯಣ ಸಮಯದಲ್ಲಿ ದೇಹದ ಅಂಗಗಳನ್ನು ಮುಟ್ಟಬಾರದು. ಉದಾಹರಣೆಗೆ ಕೈ ಕಾಲು ಗಳನ್ನು ಮುಟ್ಟುವುದು, ತಲೆ ಕೆರೆದುಕೊಳ್ಳುವುದು ಇತ್ಯಾದಿ
c) ರಾಜಸಿಕ ಮತ್ತು ತಾಮಸಿಕ ಆಹಾರ ವರ್ಜ್ಯ. ಸಾತ್ವಿಕ ಆಹಾರ ಸೇವನೆಯನ್ನು ಮಾಡಬೇಕು.
d) ಮನೆಯ ಒಳಗೆ ಅಥವಾ ಹೊರಗೆ ಜಗಳಗಳು ನಡೆಯದಂತೆ ನೋಡಿಕೊಳ್ಳಬೇಕು.

೧೫. ದುರ್ಗಾ ಸಪ್ತಶತಿ ಪಾರಾಯಣವು ಕಲಿಯುಗದಲ್ಲಿ ಕಾಮಧೇನು ಮತ್ತು ಕಲ್ಪವೃಕ್ಷವಿದ್ದಂತೆ.ದುರ್ಗಾ ಸಪ್ತಶತಿ ಪಾರಾಯಣದಿಂದ ಬಗೆಹರಿಸಲಾಗದ ಸಮಸ್ಯೆಗಳೇ ಇಲ್ಲವೆಂದರೆ ತಪ್ಪಾಗಲಾರದು. ಅದೇ ರೀತಿ ಪಾರಾಯಣವು ಸಾಧಕನಿಗೆ ಬೇಕಾದ ಎಲ್ಲವನ್ನೂ, ಅದೂ ಲೌಕಿಕ ಸುಖ ಸಂಪತ್ತುಗಳಾಗಲೀ ಅಥವಾ ಆಧ್ಯಾತ್ಮಿಕ ಜ್ಞಾನವಾಗಲೀ ಎರಡನ್ನೂ ಅನುಗ್ರಹಿಸುತ್ತದೆ.

ಲೋಕಾ ಸಮಸ್ತಾ ಸುಖಿನೋ ಭವಂತು. ಸಮಸ್ತ ಸನ್ಮಂಗಳಾನಿ ಭವಂತು
ಓಂ ಶಾಂತಿಃ ಶಾಂತಿಃ ಶಾಂತಿಃ

8 Comments on “ಶ್ರೀ ದುರ್ಗಾ ಸಪ್ತಶತೀ/ ದೇವೀ ಮಹಾತ್ಮ್ಯೆ/ ಚಂಡೀ ಪಾಠ – ಪಾರಾಯಣ ವಿಧಿ

 1. ನಮಸ್ಕಾರ
  ಬಹಳ ಅದ್ಭುತವಾಗಿ ವಿವರಣೆ ನೀಡಿದ್ದೀರ. ಅನಂತ ಧನ್ಯವಾದಗಳು.

  ದೀಕ್ಷೆಯನ್ನು ಪಡೆಯುವ ಬಗೆ ಹೇಗೆ ? ಯಾರಿಂದ ಪಡೆಯತಕ್ಕದ್ದು, ಅವರ ಸಂಪರ್ಕ ತಿಳಿಸಿ

  ಸಾದರ ನಮನಗಳೊಂದಿಗೆ
  ಹ. ರಾ. ಚಂದ್ರಶೇಖರ್

  Like

 2. ಆಚಾರ್ಯರೇ ನನಗೆ ದುರ್ಗಾ ಸಪ್ತಶತಿ ಪಾರಾಯಣ ಮಾಡಬೇಕೆಂಬ ಆಸೆ. ಆದರೆ ನವರ್ಣ ಮಂತ್ರೋಪದೇಶ ಎಲ್ಲಿ ಹೇಗೆ ಪಡೆಯೋದು?

  Like

  • ಗುರುಗಳೇ ನನಗೂ ದುರ್ಗಾ ಸಪ್ತಶತಿ ಪಾರಾಯಣ ಆರಂಭಿಸಬೇಕು ಎಂಬ ಪ್ರಬಲ ಇಚ್ಛೆ ಇದೆ. ಹಿಂದೆ ಶಿರಸಿಯ ಗುರುಗಳೊಬ್ಬರು ಸಪ್ತಶತಿಯ ಪುಸ್ತಕ ಕಳಿಸಿಕೊಟ್ಟಿದ್ದರು. ಹೇಗೆ ಮುಂದುವರೆಯಬೇಕು ತಿಳಿಸಿ.

   Like

 3. ಸಪ್ತ ಶತಿಯ ವಿವರಣೆ ಅರ್ಥ ಎಲ್ಲಿ ಸಿಗುತ್ತದೆ. ಇದನ್ನು ಭೋದಿಸಿರುವವರು ಯಾರು.ತಿಳಿಸುವಿರಾ

  Like

 4. ಆಚಾರ್ಯರೇ ನನಗೆ ದುರ್ಗಾ ಸಪ್ತಶತಿ ಪಾರಾಯಣ ಮಾಡಬೇಕೆಂಬ ಆಸೆ. ಆದರೆ ನವರ್ಣ ಮಂತ್ರೋಪದೇಶ ಎಲ್ಲಿ ಹೇಗೆ ಪಡೆಯೋದು ದಯವಿಟ್ಟು ತಿಳಿಸಬೇಕಾಗಿ ವಿನಂತಿ

  ನಿಂಗಪ್ಪಾ
  ಬೆಂಗಳೂರು
  9448457508

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: