ಶನಿಗ್ರಹದ ಮಕರರಾಶಿ ಪ್ರವೇಶ – ಜನ್ಮಕುಂಡಲಿ #1


ಶ್ರೀ ಗುರುಭ್ಯೋ ನಮಃ

ನಾನು ಬ್ಲಾಗ್ ಓದುಗರಿಗೆ ತಮ್ಮ ಜಾತಕದ ವಿವರಗಳನ್ನು ಕಳಿಸುವಂತೆ ಕೇಳಿ ಅವುಗಳಲ್ಲಿ ಐದು ಜಾತಕಗಳನ್ನು ಶನಿಗ್ರಹದ ಮಕರ ರಾಶಿ ಪ್ರವೇಶದ ಹಿನ್ನೆಲೆಯಲ್ಲಿ ಪರಿಶೀಲಿಸುವುದಾಗಿ ಹೇಳಿದ್ದೆ. ನನ್ನ ಬಳಿ ಸಾವಿರಾರು ಜಾತಕಗಳ ವಿವರವಿದ್ದರೂ ಅವನ್ನು ಪರಿಶೀಲನೆ ಮಾಡುವಾಗ ನಾನು ಹಿಂದೆ ಮಾಡಿದ ಭವಿಷ್ಯ ನಿರೂಪಣೆ ಪೂರ್ವಾಗ್ರಹವಾಗಬಾರದು, ಹಾಗಾಗಿ ನನಗೆ ಪರಿಚಯವೇ ಇಲ್ಲದ ಜಾತಕಗಳ ಪರಿಶೀಲನೆ ಮಾಡುವುದು ನನ್ನ ಉದ್ದೇಶವಾಗಿದೆ.
ಈ ಸರಣಿಯಲ್ಲಿ ಇದು ಮೊದಲನೆಯ ಜಾತಕ. ಜಾತಕನು ದಿ||8-12-1982 ರಂದು ಮಲೇಷ್ಯಾದ ಕೌಲಾಲಂಪೂರಿನಲ್ಲಿ ಮಧ್ಯಾಹ್ನ 2-30 ಕ್ಕೆ ಜನನವಾಗಿದ್ದು, ಗ್ರಹಗತಿಗಳು ಹೀಗಿದೆ:-
ಲಗ್ನ; ಮೀನ; ೧೨-೫೭, ರಾಹು ಮಿಥುನ- ೧೧-೩೦ ಚಂದ್ರ -ಸಿಂಹ, ಶನಿ ತುಲಾ-೭-೧೭, ಗುರು ವೃಶ್ಚಿಕ ೩-೨೯, ರವಿ, ವೃಶ್ಚಿಕ ೨೨-೧೩, ಕೇತು, ಬುಧ, ಶುಕ್ರ – ಧನುಸ್, ೧೧-೩೦, ೨-೨೪, ೦-೩೮ ಕುಜ ಮಕರ ೪-೫೦.

ಶನಿಗ್ರಹವು ರಾಶಿಯಿಂದ ೬ ರಲ್ಲಿ, ಲಗ್ನದಿಂದ ೧೧ ಕ್ಕೆ ಪ್ರವೇಶ ಮಾಡುತ್ತಿದ್ದು, ಪ್ರಗತಿಯನ್ನು ಸೂಚಿಸುತ್ತದೆ. ಶನಿ ಗ್ರಹವು ಜನ್ಮ ಕುಂಡಲಿಯಲ್ಲಿ ಉಚ್ಚನಾಗಿದ್ದು, ಈಗ ಸ್ವಂತ ರಾಶಿ ಮಕರಕ್ಕೆ ಪ್ರವೇಶ ಶುಭ ಫಲ ನೀಡಬೇಕು, ಆದರೆ ಮಕರದಲ್ಲಿ ಅಷ್ಟಕವರ್ಗ ಬಿಂದುಗಳು ೨ ಮಾತ್ರ ಇದ್ದು ಮಾನಸಿಕ ಚಿಂತೆಗೆ ಕಾರಣವಾಗುತ್ತದೆ. ಮಕರದಲ್ಲಿ ಸರ್ವಾಷ್ಟಕ ವರ್ಗ ಬಿಂದುಗಳು ೨೮ ಇರುವುದು ಸ್ವಲ್ಪ ಸಮಾಧಾನಕಾರವಾಗಿದೆ.
ಗುರುಗ್ರಹವು ನವಂಬರ್ ೨೦೧೯ ರಿಂದ ರಾಶಿಯಿಂದ ೫ ರಲ್ಲೂ, ಲಗ್ನದಿಂದ ೧೦ ರಲ್ಲೂ ಚಲಿಸುತ್ತಿದ್ದು ಇರಬಹುದಾದ ಅಡೆತಡೆಗಳ ನಿವಾರಣೆ ಸ್ವಲ್ಪ ಮಟ್ಟಿಗಾದರೂ ಆಗಿರುವ ಸಾಧ್ಯತೆಗಳಿವೆ. ಸದ್ಯ ರಾಹುದೆಶೆ ನಡೆಯುತ್ತಿದ್ದು, ರಾಹುದೆಶೆ ಆರಂಭವಾಗುವಾಗ ರಾಹು ಎರಡನೇ ಭಾವದಲ್ಲಿದ್ದ ಕಾರಣ ಈಗ ಇನ್ನೂ ಒಂದು ವರ್ಷಕಾಲ ೧೨ ನೆಯ ಭಾವದ ಫಲವನ್ನು ಕೊಡುತ್ತಿದ್ದು, ಆಸ್ತಿ ಪಾಸ್ತಿಯ ನಷ್ಟ, ವಾಹನಗಳ ನಷ್ಟ, ಆರೋಗ್ಯದಲ್ಲಿ ಏರುಪೇರನ್ನು ಸೂಚಿಸುತ್ತ್ತಿದೆ. ಕಡೆಯ ಒಂದೂವರೆ ವರ್ಷ ಲಗ್ನ ಭಾವದ ಫಲ ನೀಡುವುದರಿಂದ ಆ ಕಾಲವನ್ನು ಜಾತಕನು ಉಪಯೋಗಿಸಿಕೊಂಡು ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸಬೇಕು. ಕಳೆದ ಹತ್ತು ವರ್ಷಗಳಿಂದ ತೊಂದರೆಯನ್ನು ಅನುಭವಿಸುತ್ತಿರುವುದಾಗಿ ಜಾತಕನು ತಿಳಿಸಿದ್ದು ರಾಹು ಗ್ರಹವು ೨೦೧೯ ರ ಮಾರ್ಚ್ ತಿಂಗಳಿಂದ ಮಿಥುನದಲ್ಲಿ ಅಂದರೆ ಜನನಕಾಲದಲ್ಲಿ ಇದ್ದ ಸ್ಥಾನದಲ್ಲಿ ಇರುವುದರಿಂದ ಮತ್ತು ಇದು ೪ ನೇ ದೆಶೆ ಆಗಿರುವುದರಿಂದ ಈ ಕಳೆದ ಒಂಭತ್ತು ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಿರಬೇಕು. ಏನೇ ಆದರೂ ರಾಹು ಮತ್ತು ಕೇತು ಗ್ರಹಗಳು ನೀಡಬಹುದಾದ ಫಲಗಳನ್ನು ಇದಮಿತ್ಥಮ್ ಎಂದು ಹೇಳಲು ಅಸಾಧ್ಯ. ಈ ಗ್ರಹಗಳ ಫಲಗಳು ವಿಚಿತ್ರವಾಗಿಯೂ ಆಶ್ಚರ್ಯ ಕರವಾಗಿಯೂ ಇರುವುದನ್ನು ಶಾಸ್ತ್ರಬಲ್ಲ ಎಲ್ಲರೂ ಒಪ್ಪುತ್ತಾರೆ.
ಜನ್ಮ ಕುಂಡಲಿಯಲ್ಲಿ ಭಾಗ್ಯಸ್ಥಿತ ಗುರುವು ರವಿಯುತನಾಗಿ, ಅಸ್ತಂಗತವೂ ಆಗದೆ, ಲಗ್ನವನ್ನು ವೀಕ್ಷಿಸುತ್ತಿರುವುದು ಈ ಜಾತಕದ ಒಂದು ಅತ್ಯುತ್ತಮ ಯೋಗ. ಲಗ್ನ ಮತ್ತು ರಾಶಿಗಳಿಗೆ ಇಕ್ಕೆಲಗಳಲ್ಲಿ ಯಾವುದೇ ಗ್ರಹವಿಲ್ಲದೆ ಲಗ್ನ ಮತ್ತು ಚಂದ್ರ ಎರಡೂ ಬಲಯುತವಾಗದಿರುವುದು ಈ ಜಾತಕದ ಪ್ರಮುಖ ಕೊರತೆ. ಕೇಮದ್ರುಮವೆಂಬ ದಾರಿದ್ರ್ಯ ಯೋಗವು ಭಂಗವಾಗಿದ್ದರೂ, ಲಗ್ನಕ್ಕೆ ಗುರುವಿನ ದೃಷ್ಟಿಯೊಂದೇ ಬಲ ನೀಡುತ್ತಿದೆ.
ಶನಿ ತನ್ನ ಮಕರ ರಾಶಿಯ ಸಂಚಾರ ಕಾಲದಲ್ಲಿ ಜನ್ಮಕುಂಡಲಿಯ ಮಂಗಳನ ಮೇಲೆ ಸಂಚರಿಸುತ್ತಿದ್ದಾನೆ. ಮಂಗಳನು ಜನ್ಮ ಕುಂಡಲಿಯಲ್ಲಿ ಉಚ್ಚನೂ ಮತ್ತು ಮೀನ ಲಗ್ನಕ್ಕೆ ಯೋಗಕಾರಕ ಗ್ರಹವೂ ಅಹುದು. ಆದರೆ ಈ ಸಂಚಾರ ಧನ ಮತ್ತು ಭಾಗ್ಯಾಧಿಪತಿಯಾದ ಮಂಗಳನ ಮೇಲೆ ಆಗುತ್ತಿರುವುದರಿಂದ, ಇದು ಜಾತಕನಿಗೆ ಧೈರ್ಯ ಸ್ಥೈರ್ಯಗಳನ್ನು ನೀಡಿದರೂ, ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲವಾಗುವ ಸಾಧ್ಯತೆಗಳಿದ್ದರೂ, ಹಣಕಾಸಿನ ನಷ್ಟ, ತನಗೆ ಮತ್ತು ಹತ್ತಿರದ ಬಂಧುಗಳಿಗೆ ಆರೋಗ್ಯ ನಷ್ಟ, ಬಂಧುಗಳಲ್ಲಿ ಅವಿಶ್ವಾಸ ಇವೆಲ್ಲವನ್ನೂ ಹೇಳಬಹುದಾಗಿದೆ. ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆ, ಪ್ರಯಾಣದಲ್ಲಿ, ವಾಹನ ಚಾಲನೆಯಲ್ಲಿ ಎಚ್ಚರಿಕೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶಾಂತಿಯಿಂದ ಇರಬೇಕಾದ್ದು ಆತೀ ಮುಖ್ಯವಾಗುತ್ತದೆ.

ಶನಿಗ್ರಹದ ಮಕರ ರಾಶಿಯ ಸಂಚಾರ ಕಾಲದಲ್ಲಿ ಗುರುವಿನ ಸಂಯೋಗವು, ದಿ ೩೦-೩-೨೦೨೦ ರಿಂದ ೩೦-೬-೨೦೨೦, ೨೦-೧೧-೨೦೨೦ ರಿಂದ ೬-೪-೨೦೨೧ ಮತ್ತು ೧೪-೯-೨೦೧೧ ರಿಂದ ೨೧-೧೧-೨೦೧೧ ರವರೆಗೆ ಆಗುತ್ತಿದ್ದು, ಮಕರದಲ್ಲಿ ಗುರುವಿಗೆ ೬ ಅಷ್ಟಕವರ್ಗ ಬಿಂದುಗಳಿರುವುದು ಶುಭ ಫಲಗಳನ್ನು ಸೂಚಿಸುವುದರಿಂದ ಜಾತಕನು ಈ ಸಮಯವನ್ನು ಸದುಪಯೋಗ ಪಡಿಸಿಕೊಂಡು ಸಿಗಬಹುದಾದ ಎಲ್ಲ ಅವಕಾಶ ಗಳನ್ನೂ ಉಪಯೋಗಿಸಿಕೊಳ್ಳ ಬೇಕು.

ನಿಜ, ಗುರು ಮಕರದಲ್ಲಿ ನೀಚವಾದರೂ, ಬೇರೆ ಬೇರೆ ಗ್ರಹಗಳ ಸಂಚಾರದಿಂದ ನೀಚ ಭಂಗವೂ ಆಗುತ್ತಿರುತ್ತದೆ.

ಇನ್ನು ಶನಿಗ್ರಹಕ್ಕೆ ಗೋಚರ ವೇಧೆಯನ್ನು ನಿಧಾನಗತಿಯ ಗ್ರಹಗಳನ್ನು ಅಂದರೆ ಗುರು, ರಾಹು ಮತ್ತು ಕೇತುಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಪರಿಶೀಲಿಸಿದರೆ ೨೩-೯-೨೦೨೦ ರವರೆಗೆ ಕೇತುವಿನಿಂದ ಮಾತ್ರ ವೇಧೆ ಇದ್ದು ಶನಿಗ್ರಹದ ಶುಭಫಲಗಳು ಮತ್ತಷ್ಟು ಕಡಿಮೆ ಆಗುತ್ತದೆ. ಶನಿಗ್ರಹವು ಜನ್ಮಕುಂಡಲಿಯಲ್ಲಿ ಸ್ವಾತಿ ನಕ್ಷತ್ರದಲ್ಲಿರುವ ಕಾರಣ ಅಲ್ಲಿಂದ ೯ ನೇ ನಕ್ಷತ್ರದಲ್ಲಿ ಗುರು ಸಂಚಾರವಿಲ್ಲದಿರುವುದರಿಂದ ಶನಿಗ್ರಹದ ಶುಭ ಫಲಗಳಿಗೆ ಗುರುವಿನಿಂದ ವಿಪರೀತ ವೇಧೆ ಇರುವುದಿಲ್ಲಾ.
ಶನಿಯು ಮಕರ ರಾಶಿ ಪ್ರವೇಶ ಕಾಲದಲ್ಲಿ ಚಂದ್ರನು ಜನ್ಮ ರಾಶಿಯಿಂದ ೬ ನೇ ರಾಶಿಯಲ್ಲಿ ಸಂಚರಿಸುವುದರಿಂದ ಶನಿಗ್ರಹವು ಸ್ವರ್ಣಮೂರ್ತಿಯಾಗಿದ್ದು, ಸ್ವರ್ಣಮೂರ್ತಿಯಾಗುವ ಪಾಪಗ್ರಹಗಳು ಕೇವಲ ಕಾಲು ಭಾಗ ಮಾತ್ರ ಶುಭ ಫಲಗಳನ್ನು ನೀಡುತ್ತವೆ.
ಶನಿಯು ಮಕರ ರಾಶಿಯ ಸಂಚಾರ ಕಾಲದಲ್ಲಿ ಜಾತಕನ ಜನ್ಮ ಲಗ್ನ, ಪಂಚಮ ಭಾವ ಅಷ್ಟಮ ಭಾವಗಳನ್ನು ವೀಕ್ಷಿಸುವುದರಿಂದ, ಹಣಕಾಸಿನ ನಷ್ಟ, ಗೌರವದ ನಷ್ಟ, ಅನಾವಶ್ಯಕ ಕೋರ್ಟು ಕಚೇರಿ ವ್ಯವಹಾರವನ್ನು ಸೂಚಿಸುತ್ತದೆ.

ಶನಿಗ್ರಹದ ೩-೬-೧೧ ನೆಯ ಸಂಚಾರ ಅತ್ಯುತ್ತಮವೆಂದು ಹೇಳಲಾಗಿದ್ದರೂ, ಜನ್ಮರಾಶಿಯಿಂದ ೬ ರಲ್ಲಿ ಸಂಚರಿಸುವ ಅದರಲ್ಲೂ ಸ್ವಂತ ರಾಶಿಯಲ್ಲಿ ಸಂಚರಿಸುವ ಶನಿಗ್ರಹವು ಉತ್ತಮ ಶುಭ ಫಲಗಳನ್ನು ನೀಡಲು ಸಾಧ್ಯವಾಗದೇ ಹೋಗಬಹುದು ಎನ್ನಲು ಈ ಜನ್ಮ ಕುಂಡಲಿ ಒಂದು ಉತ್ತಮ ಉದಾಹರಣೆ ಆಗುತ್ತದೆ.

ಕೇವಲ ರಾಶಿಯನ್ನು ಆಧರಿಸಿ ಹೇಳುವ ಜ್ಯೋತಿಷ್ಯ ಫಲಗಳು, ಜ್ಯೋತಿಷ್ಯ ಶಾಸ್ತ್ರಕ್ಕೇ ಮಾಡುವ ಅಪಚಾರ ಎಂಬುದನ್ನು ಸಾಮಾನ್ಯ ಜನತೆಗೆ ತಿಳಿಹೇಳುವ ಒಂದು ವಿನಮ್ರ ಪ್ರಯತ್ನ ನನ್ನದು. ನನ್ನ ಕರೆಗೆ ಓಗೊಟ್ಟು ನನ್ನ ಬ್ಲಾಗ್ನ ಹಲವಾರು ಓದುಗರು ತಮ್ಮ ಜನ್ಮವಿವರಗಳನ್ನು ನೀಡಿದ್ದಾರೆ. ಅದರಲ್ಲಿ ಕಡೆಯ ಪಕ್ಷ ಇನ್ನು ನಾಲ್ಕು ಜನ್ಮಕುಂಡಲಿಯನ್ನಾದರೂ ನಾನು ಶನಿಗ್ರಹದ ಮಕರ ರಾಶಿಯ ಪ್ರವೇಶವನ್ನು ಮಾತ್ರ ಗುರಿಯಾಗಿಸಿಕೊಂಡು ವಿಶ್ಲೇಷಣೆ ಮಾಡುವ ಪ್ರಯತ್ನ ಪಡುತ್ತೇನೆ.

ಮತ್ತೊಮ್ಮೆ ಈ ಪ್ರಸ್ತುತ ಕುಂಡಲಿಯನ್ನು ನೋಡುವುದಾದರೆ, ನಾನು ಈ ಜಾತಕನಿಗೆ ನಿರಾಸೆ ಮಾಡುತ್ತಿಲ್ಲಾ.

ಹಾಗೆ ನಿರಾಸೆ ಮಾಡಲೂಬಾರದು. ಒಬ್ಬ ದೈವಜ್ಞ , ಜ್ಯೋತಿಷಿ, ಜಾತಕವನ್ನು ಪರಿಶೀಲಿಸಿ ಅಲ್ಲಿ ಕಾಣುವ ತೊಂದರೆ ತಾಪತ್ರಯಗಳನ್ನು ಹೇಗೆ ಎದುರಿಸಬೇಕು, ಹೇಗೆ ಕಡಿಮೆಮಾಡಿಕೊಳ್ಳಲು ಸಾಧ್ಯ ಎಂಬ ಬಗ್ಗೆ ತಿಳಿವಳಿಕೆ ಕೊಡಬೇಕೇ ಹೊರತು ಭಯಭೀತರನ್ನಾಗಿಸುವುದೋ ಅಥವಾ ಈಗಾಗಲೇ ಕಷ್ಟ ಕಾರ್ಪಣ್ಯಗಳಲ್ಲಿ ಮುಳುಗಿ ಹೋಗಿರುವ ವ್ಯಕ್ತಿಗೆ ಅಸಾಧ್ಯವೆನಿಸುವ ಖರ್ಚನ್ನು ಮಾಡಿಸುವ ಪರಿಹಾರಗಳನ್ನು ಸೂಚಿಸುವುದೋ ಆಗಬಾರದು, ಅದು ಸಮಾಜಕ್ಕೆ ಮಾಡುವ ದ್ರೋಹ, ಶಾಸ್ತ್ರಕ್ಕೆ ಮಾಡುವ ಅಪಚಾರ. ಪ್ರಾತಃ ಸ್ಮರಣೀಯರೂ, ಶ್ರೀ ವಿದ್ಯಾ ಉಪಾಸಕರೂ, ಮಹಾ ಜ್ಯೋತಿಷ್ಯ ವಿದ್ವಾಂಸರೂ ಆಗಿದ್ದ ಕೀರ್ತಿ ಶೇಷ ಶ್ರೀ ಗುಂಜೂರು ರಾಮಚಂದ್ರಶಾಸ್ತ್ರಿಗಳನ್ನು ಇಲ್ಲಿ ನೆನೆಯಲೇ ಬೇಕು. ಅವರಲ್ಲಿ ಜ್ಯೋತಿಷ್ಯ ಸಲಹೆ ಕೇಳಿ ಬರುವವರು ಸಾಲ ಮಾಡಿ ಮಾಡುವ ಯಾವುದೇ ಶಾಂತಿಕರ್ಮಗಳನ್ನಾಗಲೀ, ಪರಿಹಾರ ಕ್ರಿಯೆಗಳನ್ನಾಗಲೀ ಅವರು ಬೇಡವೆಂದೇ ಹೇಳುತ್ತಿದ್ದರು. ಅಂತಹವರ ಕೈಲಾಗುವ ಯಾವುದೇ ಖರ್ಚು ವೆಚ್ಚವಿಲ್ಲದ ಪರಿಹಾರಗಳನ್ನು ಮಾಡಿಸಿ, ಅವರ ಪರಿಸ್ಥಿತಿ ಸುಧಾರಿಸುವಂತೆ ಮಾಡುತ್ತಿದ್ದುದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ಎಂತಹ ಕೆಟ್ಟಜಾತಕವಾದರೂ ಅದರಲ್ಲಿ ಎಲ್ಲೋ ಒಂದು ಕಡೆ ಬೆಳಕು ಕಾಣಿಸುತ್ತದೆ. ಆ ಬೆಳಕನ್ನು ಜಾತಕನಿಗೆ ತೋರಿಸಬೇಕು. ಕಷ್ಟ ಕಾರ್ಪಣ್ಯಗಳನ್ನು ಎದುರಿಸುವ ಸ್ಥೈರ್ಯ ತುಂಬಬೇಕು.
ಈ ಜಾತಕನಿಗೆ, ಗುರುದೆಶೆ ಆರಂಭವಾದ ನಂತರ ಅಂದರೆ ೩೦-೬-೨೦೨೨ ರ ನಂತರ ೧೬ ವರ್ಷಗಳ ಕಾಲ ಅತ್ಯಂತ ಉತ್ತಮವಾದ ಭವಿಷ್ಯ ಇರುವುದು ಶತಸ್ಸಿದ್ಧ. ಅಲ್ಲಿಯವರೆಗೆ ತಾನು ಮುಂದಿನ ಭವಿಷ್ಯಕ್ಕೆ ತಳಪಾಯ ಹಾಕಿಕೊಳ್ಳುವ ಕಾರ್ಯವನ್ನು ಈ ಜಾತಕನು ಮಾಡಬೇಕು. ಒಂದು ಸಣ್ಣ ಅವಕಾಶವನ್ನೂ ಕಳೆದುಕೊಳ್ಳಬಾರದು. ಆರೋಗ್ಯದ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮನಸ್ಸಿನ ಶಾಂತಿಯನ್ನು ಕಾಯ್ದುಕೊಳ್ಳಬೇಕು. ಈ ಜಾತಕನಿಗೆ ನವಾರ್ಣ ಮಂತ್ರ ಉಪದೇಶವಾಗಿದ್ದು, ಕಳೆದ ನವರಾತ್ರಿಯಿಂದ ದುರ್ಗಾ ಸಪ್ತಶತೀ ಪಾರಾಯಣ ಮಾಡುತ್ತಿರುವುದಾಗಿ ಹೇಳಿದ್ದಾರೆ. ತಮ್ಮ ಕಷ್ಟ ಸುಖಗಳನ್ನು ತಮ್ಮ ಗುರುಗಳ ಬಳಿ ನಿವೇದಿಸುವುದೇ ಎಲ್ಲಕ್ಕಿಂತ ಉತ್ತಮ ಪರಿಹಾರ ಎಂದು ಅವರಿಗೆ ತಿಳಿಸಬಯಸುತ್ತೇನೆ.

ಗುರುಮಂಡಲದ, ಗುರುಮಂಡಲ ರೂಪಿಣಿ ಶ್ರೀ ಲಲಿತಾಮಹಾತ್ರಿಪುರ ಸುಂದರಿಯ ಪಾದ ಪದ್ಮಗಳಿಗೆ ನಮಿಸುತ್ತಾ ಲೋಕಾ ಸಮಸ್ತಾ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: