ನಾರದೀಯ ಮಹಾಪುರಾಣದ ಲಲಿತಾ ಸಹಸ್ರನಾಮ ಪೀಠಿಕೆ


ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ನಮಗೆಲ್ಲಾ ಬ್ರಹ್ಮಾಂಡ ಪುರಾಣದ ಶ್ರೀ ಲಲಿತಾ ಸಹಸ್ರನಾಮ ಪರಿಚಯ ಇದೆ. ನಾರದೀಯ ಮಹಾ ಪುರಾಣದಲ್ಲಿಯೂ ಸಹಾ ಸನತ್ಕುಮಾರರು ನಾರದರಿಗೆ ಹೇಳಿದ ಶ್ರೀ ಲಲಿತಾ ಸಹಸ್ರನಾಮ ಇದೆ. ಇದರ ವಿಶೇಷತೆ ಎಂದರೆ, ಗುರುವಂದನೆಯಿಂದ ಆರಂಭವಾಗಿ, ಲಲಿತಾ ಕವಚ ಆದನಂತರ ಸಹಸ್ರನಾಮ ಮತ್ತು ಫಲ ಶೃತಿಯಲ್ಲಿ ಮುಕ್ತಾಯವಾಗುತ್ತದೆ.
ನಾರದೀಯ ಮಹಾ ಪುರಾಣದ ೮೪ ರಿಂದ ೮೯ ಅಧ್ಯಾಯದವರೆಗೂ ಮಂತ್ರ ಪ್ರಕರಣವಿದ್ದು ದೇವಿಯ ಮಂತ್ರಗಳನ್ನು ಸಹಾ ಇಲ್ಲಿ ಹೇಳಲಾಗಿದೆ. ಇನ್ನೊಂದು ವಿಶೇಷತೆ ಎಂದರೆ ೯೨ ರಿಂದ ೧೦೯ ನೆಯ ಅಧ್ಯಾಯದವರೆಗೆ, ಎಲ್ಲಾ ೧೮ ಮಹಾಪುರಾಣಗಳಲ್ಲಿರುವ ವಿಷಯಾನುಕ್ರಮಣವನ್ನು ನೀಡಲಾಗಿದ್ದು, ಈ ಅಧ್ಯಾಯಗಳನ್ನು ಓದಿದರೆ ಯಾವ್ಯಾವ ಮಹಾಪುರಾಣಗಳಲ್ಲಿ ಯಾವ್ಯಾವ ಅಧ್ಯಾಯಗಳಲ್ಲಿ ಯಾವ ಯಾವ ವಿಷಯಗಳು ಅಡಕವಾಗಿವೆ ಎಂದು ತಿಳಿಯುವುದರಿಂದ ನಮಗೆ ಬೇಕಾದ ಪುರಾಣದ ಬೇಕಾದ ಭಾಗವನ್ನು ಆರಿಸಿಕೊಳ್ಳಲು ಸುಲಭವಾಗಿದೆ.
ಮಾರ್ಕಂಡೇಯ ಪುರಾಣದ ವಿಷಯಾನುಕ್ರಮಣಿಕೆಯಲ್ಲಿ ದೇವೀ ಮಹಾತ್ಮೆಯ ಉಲ್ಲೇಖ ಇಲ್ಲದಿರುವುದು, ಬ್ರಹ್ಮಾಂಡ ಪುರಾಣದ ವಿಷಯಾನುಕ್ರಮಣಿಕೆಯಲ್ಲಿ ಲಲಿತೋಪಾಖ್ಯಾನ ಇಲ್ಲದೇ ಇರುವುದನ್ನು ಗಮನಿಸಿದರೆ, ನಾರದೀಯ ಮಹಾ ಪುರಾಣ ಬರೆದ ನಂತರ ಮಾರ್ಕಂಡೇಯ ಪುರಾಣಕ್ಕ್ಕೆ ದೇವೀ ಮಾಹಾತ್ಮೆ ಸೇರಿರುವ ಸಾಧ್ಯತೆ, ಹಾಗೆಯೇ ಬ್ರಹ್ಮಾಂಡ ಪುರಾಣಕ್ಕೆ ಲಲಿತೋಪಾಖ್ಯಾನ ಸೇರ್ಪಡೆಯಾಗಿರುವ ಸಾಧ್ಯತೆಗಳಿದ್ದು, ಈ ಅಭಿಪ್ರಾಯವನ್ನು ಒಪ್ಪಿಕೊಂಡರೆ, ನಾರದೀಯ ಪುರಾಣದ ಲಲಿತಾ ಸಹಸ್ರನಾಮವು ಬ್ರಹ್ಮಾಂಡ ಪುರಾಣದ ಲಲಿತಾ ಸಹಸ್ರನಾಮಕ್ಕೂ ಮೊದಲಿನದು ಎನಿಸುತ್ತದೆ.
ನಾರದೀಯ ಮಹಾ ಪುರಾಣದ ಲಲಿತಾ ಸಹಸ್ರನಾಮದ ೪೩ ಮತ್ತು ೪೪ ನೆಯ ಸ್ತೋತ್ರವು, ಈ ಸಹಸ್ರನಾಮವನ್ನು ಮಂತ್ರವೆಂದೇ ಹೇಳಿದೆ ಮತ್ತು ಮಂತ್ರದಂತೆಯೇ ಭಾವಿಸುವಂತೆಯೂ ಹೇಳಿದೆ. ಬ್ರಹ್ಮಾಂಡ ಪುರಾಣದ ಸಹಸ್ರನಾಮವೂ ಸಹಾ ಮಂತ್ರವೇ ಆಗಿರುವುದು ನಮಗೆಲ್ಲಾ ತಿಳಿದೇ ಇದೆ

ನಾರದೀಯ ಮಹಾ ಪುರಾಣದ ಬಗ್ಗೆ ಚಿಕ್ಕ ವಿವರಣೆ ಬೇಕೆನಿಸುತ್ತದೆ. ಎಲ್ಲಾ ಪುರಾಣಗಳಂತೆ ಇಲ್ಲಿಯೂ ಸಹಾ ಪೂರ್ವಭಾಗ ಮತ್ತು ಉತ್ತರ ಭಾಗಗಳು ಇವೆ. ಪೂರ್ವ ಭಾಗದಲ್ಲಿ ನಾಲ್ಕು ಪಾದಗಳು ಇದ್ದು ಒಟ್ಟು ೧೨೫ ಅಧ್ಯಾಯಗಳಿದ್ದರೆ ಉತ್ತರ ಭಾಗದಲ್ಲಿ ೮೨ ಅಧ್ಯಾಯಗಳಿವೆ. ಪೂರ್ವಭಾಗದ ಮೊದಲನೆ ಪಾದದ ೪೧ ಅಧ್ಯಾಯಗಳು ಬೃಹನ್ನಾರದೀಯ ಪುರಾಣ ಎಂದು ಕರೆಸಿಕೊಂಡಿರುವುದೇ ಅಲ್ಲದೆ, ನಾರದೀಯ ಪುರಾಣದಲ್ಲಿ ಸನಕ ಮುನಿಗಳು ನಾರದರಿಗೆ ಹೇಳಿದ್ದು ಎಂದು ಉಲ್ಲೇಖವಾಗಿದ್ದರೆ, ಅದೇ ಅಧ್ಯಾಯಗಳು ಬೃಹನ್ನಾರದೀಯ ಪುರಾಣಲ್ಲಿ ನಾರದರು ಸನಕ ಮುನಿಗಳಿಗೆ ಹೇಳಿದ್ದು ಎಂದು ಉಲ್ಲೇಖವಿದೆ. ಪುರಾಣಗಳನ್ನು ಯಾರು ಯಾರಿಗೆ ಯಾವಾಗ ಹೇಳಿದರು ಎಂಬುದರ ಬಗ್ಗೆಯೇ ಸಂಶೋಧನೆ ಮಾಡಲು ಸಮಯ ವ್ಯಯಮಾಡುವದಕ್ಕೆ ಬದಲಾಗಿ ಅಲ್ಲಿರುವ ವಿಷಯಕ್ಕೆ ಮಾತ್ರ ಮಹತ್ವ ಕೊಡಬೇಕು ಎನ್ನುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ ಆಗಬಹುದು.

ಬ್ರಹ್ಮಾಂಡ ಪುರಾಣದ ಲಲಿತಾ ಸಹಸ್ರನಾಮಕ್ಕೂ ನಾರದೀಯ ಮಹಾಪುರಾಣದ ಲಲಿತಾ ಸಹಸ್ರನಾಮಕ್ಕೂ ಹಲವು ನಾಮಗಳು ಒಂದೇ ಇರುವುದನ್ನು ಬಿಟ್ಟರೆ ಯಾವುದೇ ಸಾಮ್ಯವಿಲ್ಲವಾದರೂ ಷಟ್ ಚಕ್ರದ ಬಗ್ಗೆ ಇರುವ ನಾಮಗಳು ಎರಡೂ ಸಹಸ್ರನಾಮಗಳಲ್ಲಿ ವಿಶುದ್ಧ ಚಕ್ರದಲ್ಲೇ ಆರಂಭ ಗೊಂಡು, ಅನಾಹತ, ಮಣಿಪೂರ, ಸ್ವಾಧಿಷ್ಠಾನ, ಮೂಲಾಧಾರ ಮತ್ತು ಆಜ್ಞಾ ಚಕ್ರದ ಕ್ರಮದಲ್ಲಿಯೇ ಸಾಗುತ್ತವೆ. ಬ್ರಹ್ಮಾಂಡ ಪುರಾಣದ ಸಹಸ್ರನಾಮ, ಸಹಸ್ರಾರ ಚಕ್ರವನ್ನೂ ಹೇಳಿದ್ದು, ನಾರದೀಯ ಪುರಾಣ ಆಜ್ಞಾ ಚಕ್ರಕ್ಕೆ ಕೊನೆಯಾಗುತ್ತದೆ. ಶ್ರೀ ವಿದ್ಯಾ ಉಪಾಸಕರು ಅವರವರ ಗುರುಗಳಿಂದ ಈ ಬಗ್ಗೆ ಹೆಚ್ಚು ವಿವರ ಪಡೆದುಕೊಳ್ಳಬಹುದು.

ಭಾಗವತ ಪುರಾಣದಲ್ಲಿಯೂ ಶಿವನು ದೇವಿಗೆ ಹೇಳಿರುವ ಒಂದು ಲಲಿತಾ ಸಹಸ್ರನಾಮ ಇದೆ. ವಾಮಕೇಶ್ವರ ತಂತ್ರದಲ್ಲಿ ಷೋಡಶೀ ಸಹಸ್ರನಾಮ ಹಾಗೂ ಮಹಾತ್ರಿಪುರಸುಂದರೀ ಸಹಸ್ರನಾಮಗಳಿದ್ದರೆ, ರುದ್ರಯಾಮಾಳದಲ್ಲಿ ಮಹಾರಾಜ್ಞೀ ರಾಜರಾಜೇಶ್ವರೀ, ಶಿವಕಾಮ ಸುಂದರೀ ಸಹಸ್ರನಾಮಗಳಿವೆ. ಮಹಾಷೋಡಶೀ ಮಂತ್ರದ ಧ್ಯಾನಶ್ಲೋಕವೇ, ಶಿವಕಾಮಸುಂದರೀ ಸಹಸ್ರನಾಮದ ಧ್ಯಾನ ಶ್ಲೋಕವೂ ಆಗಿರುವುದರಿಂದ, ಷೋಡಶೀ ಮತ್ತು ಮಹಾಷೋಡಶೀ ಉಪಾಸಕರಿಗೆ ಶಿವಕಾಮಸುಂದರೀ ಸಹಸ್ರನಾಮ ಅತ್ಯಂತ ಸೂಕ್ತ ಎನಿಸುತ್ತದೆ.

ಈ ಎಲ್ಲಾ ಸಹಸ್ರನಾಮಗಳನ್ನು ಬ್ಲಾಗ್ ನಲ್ಲಿ ಆದಷ್ಟು ಬೇಗ ಬರೆಯಲು ಪ್ರಯತ್ನಿಸುತ್ತೇನೆ.

ನಾರದೀಯ ಪುರಾಣದ ಲಲಿತಾ ಸಹಸ್ರನಾಮವನ್ನು ಕನ್ನಡದಲ್ಲಿ ಇಲ್ಲಿ ಲಗತ್ತಿಸಲಾಗಿದೆ.

Naradeeya purana Lalita Sahasranama Kannada

ಸರ್ವೇ ಜನಾಃ ಸುಖಿನೋ ಭವಂತು ಸಮಸ್ತ ಸನ್ಮಂಗಳಾನಿ ಭವಂತು

ಓಂ ಶಾಂತಿಃ ಶಾಂತಿಃ ಶಾಂತಿಃ

ನಾರದೀಯ ಪುರಾಣದ ಲಲಿತಾ ಸಹಸ್ರನಾಮವನ್ನು ಹೇಳಿರುವ ಯೂಟ್ಯೂಬ್ ಕೊಂಡಿಯನ್ನು ಸಹಾ ಇಲ್ಲಿ ಕೊಡಲಾಗಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: