ಜೀವನ್ಮುಕ್ತಿ ವಿವೇಕ ಎನ್ನುವ ಅದ್ವೈತ ವೇದಾಂತದ ಸಂಸ್ಕೃತ ಗ್ರಂಥದ ಕರ್ತೃ ಶ್ರೀ ಸ್ವಾಮಿ ವಿದ್ಯಾರಣ್ಯರು. ಮಾಧವಾಚಾರ್ಯ ಇವರ ಪೂರ್ವಾಶ್ರಮದ ಹೆಸರು. ವಿಜಯನಗರ ಸಾಮ್ರಾಜ್ಯ ಯಾರಿಗೆ ತಿಳಿದಿಲ್ಲಾ? ಈ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರೂ, ಕ್ರಿ ಶ. ೧೩೭೭ ರಿಂದ ೧೩೮೬ ರ ರವರೆಗೆ ಶ್ರೀ ದಕ್ಷಿಣಾಮ್ನಾಯ ಶ್ರೀ ಶೃಂಗೇರೀ ಶಾರದಾ ಪೀಠದ ೧೨ ನೆಯ ಜಗದ್ಗುರುಗಳಾಗಿದ್ದವರು ಶ್ರೀ ವಿದ್ಯಾರಣ್ಯರು. ಮಾಧವಾಚಾರ್ಯರು ಕ್ರಿ. ಶ. ೧೨೯೬ ರಲ್ಲಿ ಏಕಶಿಲಾ ನಗರದಲ್ಲಿ ಅಂದರೆ ಈಗಿನ ವಾರಂಗಲ್ ನಲ್ಲಿ ಜನಿಸಿ ನೂರು ವರ್ಷಗಳಿಗೂ ಹೆಚ್ಚುಕಾಲ ಜೀವಿಸಿದ್ದರು ಎಂದು ಹೇಳಲಾಗಿದೆ. ಇಂತಹ ಮಹಾನುಭಾವರುಗಳ ಜನನ ಮತ್ತು ಜೀವನ್ಮುಕ್ತಿಯ ಕಾಲದ ಬಗ್ಗೆ ಹಲವು ಅಭಿಪ್ರಾಯಗಳು ಇರುವುದು ಸಹಜವೇ ಆಗಿದ್ದು, ನಾವು ಇವುಗಳ ವಿವರದ ಬಗ್ಗೆ ಹೆಚ್ಚು ಚಿಂತಿಸದೆ ಆ ಮಹಾನುಭಾವರುಗಳು ನಮಗೆ ಬಿಟ್ಟುಹೋಗಿರುವ ಅಪಾರ ಜ್ಞಾನ ಸಂಪತ್ತಿನಲ್ಲಿ ಸ್ವಲ್ಪವನ್ನಾದರೂ ನಮ್ಮದಾಗಿಸಿಕೊಳ್ಳಲು ಪ್ರಯತ್ನಿಸಬೇಕು.
ಈ ದಿಸೆಯೆಲ್ಲಿ ಜೀವನ್ಮುಕ್ತಿ ವಿವೇಕದ ಆಯ್ದ ಭಾಗಗಳನ್ನು ಸರಣಿಯಾಗಿ ಹಲವು ಭಾಗಗಳಲ್ಲಿ ನಿಮ್ಮ ಮುಂದೆ ಇಡುವ ನನ್ನ ವಿನಮ್ರ ಪ್ರಯತ್ನವೇ ಇದಾಗಿದೆ. ಇದರಿಂದ ಈ ಗ್ರಂಥದ ಪೂರ್ಣ ಪಾಠವನ್ನು ಓದಲು ಸಾಧ್ಯವಾಗದ ಆಸಕ್ತ ಆಸ್ತಿಕರಿಗೆ ಅಲ್ಪ ಪ್ರಯೋಜನವಾದರೂ ನನ್ನ ಪ್ರಯತ್ನ ಸಾರ್ಥಕ ಮತ್ತು ನಾನು ಧನ್ಯ.
ಜೀವನ್ಮುಕ್ತಿ ವಿವೇಕದ ಮೂಲಗ್ರಂಥದಲ್ಲಿ ಇರುವಂತೆಯೇ ಪ್ರಶ್ನೆಯಿಂದ ಈ ಸರಣಿಯನ್ನು ಆರಂಭಿಸೋಣ .
ಪ್ರಶ್ನೆ:- ಮುಕ್ತಿ ಅಂದರೆ ಏನು? ಮುಕ್ತಿ ಸಿಕ್ಕಿದೆ ಎನ್ನಲು ಸಾಕ್ಷ್ಯ ಯಾವುದು? ಮುಕ್ತಿಯ ಸಂಪಾದನೆ ಹೇಗೆ? ಮುಕ್ತಿಯನ್ನು ಹೊಂದುವುದರ ಉದ್ದೇಶವಾದರೂ ಏನು?
ಉತ್ತರ:- ಮನಸ್ಸು ತನ್ನ ಕ್ರಿಯೆಗಳೇ ಎಲ್ಲಾ ನೋವು ನಲಿವುಗಳಿಗೆ ಕಾರಣ ಎಂದು ಕೊಳ್ಳುವುದು ಅಲ್ಲದೆ ಆ ಕ್ರಿಯೆಯ ಫಲವಾದ ನೋವು ನಲಿವುಗಳನ್ನು ತಾನೇ ಅನುಭವಿಸುತ್ತಿದ್ದೇನೆ ಎಂದುಕೊಳ್ಳುವುದು ಬಂಧನ. ಇದರಿಂದ ನಮ್ಮ ನಿಜವಾದ ಸ್ವರೂಪವೇ ಆಗಿರುವ ಆ ಆನಂದದ ಸವಿ ನಮಗೆ ಸಿಗುವುದಿಲ್ಲಾ. ಈ ಬಂಧನವನ್ನು ಕಳಚಿಕೊಳ್ಳುವುದೇ ಮುಕ್ತಿ.
ಪ್ರಶ್ನೆ:- ಪ್ರಶ್ನೆಗೆ ಸಮಂಜಸವಾದ ಉತ್ತರ ಸಿಕ್ಕಿಲ್ಲಾ. ಈ ಬಂಧನ ಎನ್ನುವುದು ಮನಸ್ಸಿನಿಂದಲೇ ಅಥವಾ ಬಂಧನಕ್ಕೆ ಸಾಕ್ಷಿಯಾಗುವುದರಿಂದಲೇ ? ಇದು ಸಾಕ್ಷಿ ಎನ್ನುವುದಾದರೆ, ಸತ್ಯದ ಅರಿವಿನಿಂದ ಅದನ್ನು ತೆಗೆದುಹಾಕಬಹುದು. ಇದು ಮನಸ್ಸು ಎನ್ನುವುದಾದರೆ, ಹರಿಯುವಿಕೆಯ ಗುಣವನ್ನು ನೀರಿನಿಂದ ಹೇಗೆ ತೆಗೆಯಲು ಸಾಧ್ಯವಿಲ್ಲವೋ, ಬಿಸಿಯ ಗುಣವನ್ನು ಬೆಂಕಿಯಿಂದ ಹೇಗೆ ತೆಗೆಯಲು ಸಾಧ್ಯವಿಲ್ಲವೋ ಹಾಗೆಯೇ ಮನಸ್ಸಿನಿಂದ ಈ ಬಂಧನವನ್ನು ತೆಗೆಯಲು ಸಾಧ್ಯವಿಲ್ಲಾ.
ನನ್ನ ಮನವಿ: – ಆಸಕ್ತರು ತಮ್ಮ ಅನಿಸಿಕೆ / ಅಭಿಪ್ರಾಯ / ಸೂಚನೆಗಳನ್ನು ಇಲ್ಲಿ ನೀಡಿದರೆ, ಈ ಸರಣಿಯು ಮತ್ತಷ್ಟು ಉತ್ತಮಗೊಳ್ಳಲು ಸಹಕಾರಿಯಾಗುತ್ತದೆ. ತಮ್ಮ ಅನಿಸಿಕೆ / ಅಭಿಪ್ರಾಯ / ಸೂಚನೆಗಳನ್ನು atmanandanatha@gmail.com ಮೂಲಕವೂ ನೀಡಬಹುದಾಗಿದೆ.
ಮುಂದುವರೆಯುತ್ತದೆ………………….
ಮುಂದಿನ ಭಾಗದ ಕೊಂಡಿ: ಭಾಗ 2
Pingback: “ಜೀವನ್ಮುಕ್ತಿ ವಿವೇಕ” ಸರಣಿ : ಭಾಗ 2 – Atmanandanatha