ಬೃಹತ್ ಸಂಹಿತೆಯಿಂದ ಆಯ್ದ ಶ್ಲೋಕಗಳು, ಭಾವಾರ್ಥ ದೊಂದಿಗೆ
ಅಪ್ಯರ್ಣವಶ್ಯ ಪುರುಷಃ ಪ್ರತರನ್ ಕದಾಚಿ ದಾಸಾದಯೇದನಿಲ ವೇಗವಶೇನ ಪಾರಂ
ನ ತ್ವಸ್ಯ ಕಾಲಪುರುಷಾಖ್ಯಾ ಮಹಾರ್ಣವಸ್ಯ ಗಚ್ಛೇತ್ಕದಾಚಿದನೃಷಿರ್ಮನಸಾಪಿ ಪಾರಮ್
ಸಮುದ್ರದಲ್ಲಿ ಈಜುವಾಗ ಆಯಾಸವಾದಾಗ ಸಂಯೋಗವಶಾತ್ ವ್ಯಕ್ತಿಯು ಗಾಳಿಯ ಆಸರೆಯಿಂದ ತೆರೆಗಳ ಸಹಾಯದಿಂದ ದಡವನ್ನು ತಲುಪಬಹುದು. ಆದರೆ ಜ್ಯೋತಿಷ್ಯ ಶಾಸ್ತ್ರವು ಎಷ್ಟೊಂದು ವಿಶಾಲ ಮತ್ತು ಆಳ ಎಂದರೆ ಸಾಮಾನ್ಯ ಮಾನವರು ಮನಸ್ಸಿನಲ್ಲೂ ಕೂಡ ಅದನ್ನು ಪಾರುಗೊಳ್ಳಲಾರರು.
ಈ ಶ್ಲೋಕದ ಮೂಲಕ ಜ್ಯೋತಿಷ್ಯ ಶಾಸ್ತ್ರದ ಅಗಾಧತೆಯ ಪರಿಚಯ ಮಾಡಿಕೊಡಲಾಗಿದೆ.
ಜಗತಿ ಪ್ರಸಾರಿತಮಿವಾಲಿಖಿತಮಿವ ಮತೌ ನಿಷಿಕ್ತಮಿವ ಹೃದಯೆ
ಶಾಸ್ತ್ರಂ ಯಸ್ಯ ಸಭಗಣಂ ನಾದೇಶಾ ನಿಷ್ಫಲಾಸ್ತಸ್ಯ
ತೊಳೆದು ಹಾಕಿದ ಶುಭ್ರವಸ್ತ್ರದಂತೆ, ಹರಡಿದ ಬೆಳದಿಂಗಳಂತೆ ಬುದ್ಧಿಯ ಪಟಲದಲ್ಲಿ ಅಂಕಿತವಾದಂತೆ ಹೃದಯದಲ್ಲಿ ಸಿಂಚನವಾದಂತೆ ಶಾಸ್ತ್ರಗಳ ಅರ್ಥವು ಯಾರಿಗೆ ಸ್ಪಷ್ಟವಾಗಿ ತಿಳಿಯಲ್ಪಟ್ಟಿದೆಯೋ ಅವರ ವಾಣಿ ಎಂದಿಗೂ ನಿಷ್ಫಲವಾಗುವುದಿಲ್ಲಾ.
ಸಂಹಿತಾಪಾರಗಶ್ಚ ದೈವಚಿಂತಕೋ ಭವತಿ
ಸಂಹಿತೆಯ ಎಲ್ಲ ವಿಷಯಗಳನ್ನು ಯಾರು ತಿಳಿದಿರುತ್ತಾರೋ ಅಂತಹವರು ಮಾತ್ರ ದೈವಜ್ಞ ರಾಗುತ್ತಾರೆ.
ಕುಹಕಾವೇಶ ಪಿಹಿತೈಃ ಕರ್ಣೋಪ ಶ್ರುತಿ ಹೇ ತುಭಿಃ
ಕೃತಾದೇಶೋ ನ ಸರ್ವತ್ರ ಪ್ರಷ್ಟವ್ಯೋ ನ ಸ ದೈವವಿತ್
ಕೈಚಳಕಗಳ ಸಹಾಯದಿಂದ ವಿಶಿಷ್ಟ ಹಾವಭಾವಗಳನ್ನು ಪ್ರದರ್ಶಿಸುತ್ತಾ ಪ್ರಶ್ನಕರ್ತನನ್ನು ಪ್ರಭಾವಿತಗೊಳಿಸುವವರು ಪಾಪಿಗಳಾಗಿರುತ್ತಾರೆ. ಅಂಥವರ ಹತ್ತಿರ ದೈವಚಿಂತನೆ ಮಾಡಬಾರದು. ಅಂಥವರು ದೈವಜ್ಞರಾಗಲಾರರು
ಸಂಪತ್ಯಾ ಯೋಜಿತಾದೇಶ ಸ್ತದ್ವಿಚ್ಛಿನ್ನ ಕಥಾಪ್ರಿಯಃ
ಮತ್ತಃ ಶಾಸ್ತ್ರೈಕದೇಶೇನ ತ್ಯಾಜ್ಯಸ್ತಾದ್ಯಂ ಮಹಿಷಿತಾ
ಯಾರು ಧನದ ಅಪೇಕ್ಷೆಯಿಂದ ಅವರವರ ಮನೋನುಕೂಲ ಭವಿಷ್ಯವನ್ನು ಹೇಳುತ್ತಾರೆಯೋ ಅಥವಾ ಕಾರ್ಯಸಿದ್ಧಿಯ ನಂತರ ನಾನು ಮೊದಲೇ ಹೇಳಿರಲಿಲ್ಲವೇ ಎಂದು ಅದರ ಶ್ರೇಯಸ್ಸನ್ನು ತಾನೇ ಪಡೆದುಕೊಳ್ಳಲು ಯತ್ನಿಸುತ್ತಾನೋ ಮತ್ತು ಅರೆ ಬರೆ ಶಾಸ್ತ್ರ ಕಲಿತು ಅದನ್ನೇ ಪ್ರತಿಪಾದಿಸುತ್ತಾನೋ ಅಂಥ ದೈವಜ್ಞನನ್ನು ರಾಜನಾದವನು ತ್ಯಜಿಸಬೇಕು.
ನ ತತ್ಸಹಸ್ರಂ ಕರಿಣಾಂ ವಾಜಿನಾಂ ಚ ಚತುರ್ಗುಣಂ
ಕರೋತಿ ದೇಶಕಾಲಜ್ಞೊ ಯಥೈಕೊ ದೈವ ಚಿಂತಕಃ
ಆಪತ್ಕಾಲದಲ್ಲಿ ಒಂದು ಸಾವಿರ ಆನೆ ಮತ್ತು ನಾಲ್ಕು ಸಾವಿರ ಕುದುರೆಗಳ ಸೈನ್ಯವು ಕೂಡ ಅಸಮರ್ಥವಾದಾಗ ದೇಶ ಮತ್ತು ಕಾಲಗಳನ್ನು ಅರಿತ ಯೋಗ್ಯ ದೈವಜ್ಞನು ಸಂಕಟ ಕಾಲದಲ್ಲಿ ಅಷ್ಟೇ ಪ್ರಮಾಣದ ಸಹಾಯವನ್ನು ಏಕಾಂಗಿಯಾಗಿ ಮಾಡುತ್ತಾನೆ
ನ ತಥೇಚ್ಛತಿ ಭೂಪತೆಃ ಪಿತಾ ಜನನಿ ವಾ ಸ್ವಜನೋ ತವಾ ಸುಹೃತ್
ಸ್ವಯಶೋಭಿ ವೃದ್ಧಯೆ ಯಥಾ ಹಿತಮಾಪ್ತಃ ಸಬಲಸ್ಯ ದೈವವಿತ್
ರಾಜನೀತಿಯಲ್ಲಿ, ಧನ ಸಂಪತ್ತಿನ ಪ್ರಸಂಗಗಳಲ್ಲಿ ವಾದ ವಿವಾದಗಳ ಪರಿಸ್ಥಿತಿಯಲ್ಲಿ ತಂದೆ ತಾಯಿ ಮಿತ್ರರು ಸಂಬಂಧಿಗಳು ಕೂಡಾ ರಾಜನನ್ನು ಆಶ್ರಯಿಸಲಾರರು. ಅವರು ಓರ್ವ ಯೋಗ್ಯ ಚಾರಿತ್ರ್ಯವುಳ್ಳ ಜ್ಯೋತಿಷಿಯನ್ನು ಅವಲಂಬಿಸುತ್ತಾರೆ, ಏಕೆಂದರೆ ಅವನು ಯಾವುದೇ ಫಲಾಪೇಕ್ಷೆ ಉಳ್ಳವನಾಗಿರುವುದಿಲ್ಲಾ. ಕಾರಣ ತಮ್ಮ ಯಶೋಭಿವೃದ್ಧಿಯ ಆಕಾಂಕ್ಷಿಗಳು ಜ್ಯೋತಿಷಿಗಳನ್ನು ಸಬಲ, ಸಹಾಯಕ ಆಪ್ತನನ್ನಾಗಿ ಮಾಡಿಕೊಳ್ಳಬೇಕು.
Pingback: ಡಿಸೆಂಬರ್ 26, ಸೂರ್ಯಗ್ರಹಣ-ಒಂದು ವಿಶ್ಲೇಷಣೆ – Atmanandanatha