ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 2


ಸೂರ್ಯಗ್ರಹಣ ಆಗುವುದು ಹೇಗೆ ಎಂದು ನಮ್ಮೆಲ್ಲರಿಗೂ ತಿಳಿದೇ ಇದೆ, ಹಾಗಾಗಿ ಅದರ ಬಗ್ಗೆ ವಿವರಣೆ ಬೇಕಿಲ್ಲವೆನಿಸುತ್ತದೆ. ಬಾಹ್ಯಾಕಾಶದಲ್ಲಿ ಘಟಿಸುವ, ಘಟಿಸಲೇ ಬೇಕಾದ ಪ್ರಕೃತಿ ಸೃಷ್ಟಿಸುವ ಚಂದ್ರ, ಭೂಮಿ ಮತ್ತು ಸೂರ್ಯನ ನಡುವೆಯ ನೆರಳು ಬೆಳಕಿನ ಆಟ ಸೂರ್ಯಗ್ರಹಣ. ಅಕಾಶಕಾಯಗಳ ಅದರಲ್ಲೂ ಸೂರ್ಯಮಂಡಲದಲ್ಲಿ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಪರಿಗಣಿಸಿರುವ ಸೂರ್ಯನನ್ನೂ ಸೇರಿ 7 ಆಕಾಶಕಾಯಗಳು ಮತ್ತು ಛಾಯಾ ಗ್ರಹಗಳೆಂದು ಗುರುತಿಸಲ್ಪಟ್ಟ ಬಾಹ್ಯಾಕಾಶದಲ್ಲಿನ ಎರಡು ಕೇಂದ್ರಗಳು (Two centers/ points) ಭೂಮಿಯ ಮೇಲೆ ನಡೆಯುವ ಎಲ್ಲಾ ವಿದ್ಯಮಾನಗಳ ಮತ್ತು ಎಲ್ಲಾ ಜೀವರಾಶಿ ಗಳ ಅದರಲ್ಲೂ ಮಾನವರ ದೈಹಿಕ, ಮಾನಸಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.  ಈ ಆಕಾಶಕಾಯಗಳ, ಪ್ರತಿಕ್ಷಣವೂ ಬದಲಾಗುತ್ತಿರುವ ಪರಸ್ಪರ ಸಂಬಂಧ ಮಾನವನ ಜೀವನದ ಮೇಲೆ ಮಾಡುವ ಪರಿಣಾಮಗಳನ್ನು ಅಧ್ಯಯನ ಮಾಡಿದ ಪರಾಶರ, ವರಾಹಮಿಹಿರ, ಗರ್ಗ, ಜೈಮಿನಿ, ಕಾಳಿದಾಸ ಮೊದಲಾದ ಜ್ಯೋತಿರ್ವಿಜ್ಞಾನಿಗಳು ತಮ್ಮ  ಜ್ಯೋತಿಷ್ಯ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.  ಹಾಗೆಯೇ ದಕ್ಷಿಣ ಭಾರತದಲ್ಲಿ ಸಿದ್ದರು ಎಂದು ಕರೆಯಲ್ಪಡುವ ವಿದ್ವಾಂಸರುಗಳು ತಮಿಳು ಭಾಷೆಯಲ್ಲಿ ರಚಿಸಿರುವ ತಾಳೆಗರಿ ಗ್ರಂಥಗಳೂ ಲಭ್ಯವಿದ್ದರೂ ಸಂಸ್ಕೃತ ಗ್ರಂಥಗಳಷ್ಟು ಮುದ್ರಣ ಭಾಗ್ಯವನ್ನು ಕಾಣದಿರುವುದು ದೌರ್ಭಾಗ್ಯ.  ಬೋಗರ್ (ಭೋಗರ್) ಎಂಬ ಹೆಸರಿನ ಸಿದ್ಧರ ಶಿಷ್ಯ ಪುಲಿಪ್ಪಾನಿ ಎಂಬ ಸಿದ್ದರು ಕೇವಲ 300 ಶ್ಲೋಕಗಳಲ್ಲ್ಲಿ ಜ್ಯೋತಿಷ್ಯ ಶಾಸ್ತ್ರದ ತಿರುಳನ್ನೇ ಹೇಳಿಬಿಟ್ಟಿದ್ದಾರೆ.

ಈ 9 ಗ್ರಹಗಳು ಮತ್ತು ಬಾಹ್ಯಾಕಾಶದಲ್ಲಿ ಅವುಗಳ ನಡುವಣ ಸಂಬಂಧ ಮಾನವನ ಮೇಲೆ ವೈಯಕ್ತಿಕ ಪರಿಣಾಮ ಬೀರುತ್ತವೆ ಎಂದು ಒಪ್ಪಿಕೊಂಡಿರುವ ನಾವು, ಇದೇ ಆಕಾಶಕಾಯಗಳ ನಡುವೆ ಅಪರೂಪವಾಗಿ ಸಂಭವಿಸುವ ವಿಶೇಷ ಸಂಬಂಧವೇ ಗ್ರಹಣಗಳು ಆಗಿದ್ದು, ಇದರಿಂದಲೂ ಮಾನವನ ಮೇಲೆ ವೈಯಕ್ತಿಕ ಪರಿಣಾಮ ಬೀರುತ್ತದೆ ಎಂದು ನಂಬಿದರೆ ತಪ್ಪಲ್ಲಾ ಮತ್ತು ಸಾಧ್ಯವೂ ಇರಬಹುದು ಆದರೆ ಈ ಬಗ್ಗೆ ಆಳವಾದ ಅದ್ಯಯನವಾಗಲೀ, ಸಂಶೋಧನೆಯಾಗಲೀ ಆಗಿಲ್ಲಾ ಎಂಬುದನ್ನು ಯಾರಾದರೂ ಒಪ್ಪಲೇಬೇಕು. ಹೀಗಿರುವಾಗ ಕೇವಲ ಹುಟ್ಟಿದ ನಕ್ಷತ್ರ ಮತ್ತು ಅದರಿಂದ ತಿಳಿಯುವ ರಾಶಿಯನ್ನು ಮಾತ್ರವೇ ಆಧರಿಸಿ ಆ ವ್ಯಕ್ತಿಯ ಮೇಲೆ ಗ್ರಹಣಗಳು ಬೀರುವ ಪರಿಣಾಮಗಳನ್ನು ಹೇಳುವುದು ಮತ್ತು ಅದನ್ನು ನಂಬಿ ನಾವು ಭಯಪಡುವುದು ಸರಿಯಲ್ಲಾ ಎಂದು ಹೇಳಹೊರಟಿರುವ ಒಂದು ಚಿಕ್ಕ ಪ್ರಯತ್ನ ಈ ಲೇಖನ.

ಇಲ್ಲಿ ಯಾರನ್ನೂ ಆಗೌರವಿಸುವ, ತೆಗಳುವ ಅಥವಾ ಹೊಗಳುವ ಉದ್ದಿಶ್ಯ ಖಂಡಿತವಾಗಿಯೂ ಇಲ್ಲಾ. ಕೇವಲ ಜನ್ಮ ನಕ್ಷತ್ರ ಮತ್ತು ರಾಶಿಯ ಆಧಾರದ ಮೇಲೆ ಸಾರಾಸಗಟಾಗಿ ಗ್ರಹಣದ ಫಲಗಳನ್ನು ನಿರ್ಣಯಿಸಿ ಜನರನ್ನು ಭಯಬೀತರಾಗಿಸುವುದನ್ನು ಬಿಟ್ಟು, ವ್ಯಕ್ತಿಯ ಜನ್ಮ ಕುಂಡಲಿಯ ವಿವರಗಳನ್ನು ಆಧರಿಸಿ ಆ ವ್ಯಕ್ತಿಗೆ ಗ್ರಹಣಗಳಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನಕ್ಕೆ ಈ ಲೇಖನ ಕಾರಣವಾದರೆ ನನ್ನ ಈ ಪ್ರಯತ್ನ ಸಾರ್ಥಕವೆನಿಸುತ್ತದೆ.

೨೬ ಡಿಸೇಂಬರ್ ೨೦೧೯ ರ ಸೂರ್ಯಗ್ರಹಣ ಘಟಿಸುವ ಸಮಯ, ಮಧ್ಯಕಾಲ, ಮತ್ತು ಅಂತ್ಯವಾಗುವ ಸಮಯದ ಗ್ರಹಗತಿಗಳನ್ನು ಗಮನಿಸೋಣ.  ಗ್ರಹಣವು ಮೂಲಾ ನಕ್ಷತ್ರ ೩ ನೇ ಪಾದ ದಲ್ಲಿ ಆರಂಭವಾಗಿ ೪ ನೇ ಪಾದದಲ್ಲಿ ಅಂತ್ಯ.  ಧನುಸ್  ಲಗ್ನ ೨೯-೪೩ ಗ್ರಹಣ ಆರಂಭ ಆದರೆ, ಗ್ರಹಣದ ಮಧ್ಯವು ಮಕರ  ಲಗ್ನ ೨೧-೧್., ಗ್ರಹಣದ ಅಂತ್ಯ ಕುಂಭ ಲಗ್ನ  ೨೦-೩೧.

ಗ್ರಹಣದ ಆರಂಭ ಕಾಲದಲ್ಲಿ ಧನುಸ್  ರಾಶಿಯಲ್ಲಿ  ಶನಿ ೨೬-೩೫, ಕೇತು ೧೪-೨೫, ಗುರು ೧೧-೧೨, ಚಂದ್ರ ೮-೩೨, ರವಿ ೯-೫೨, ಬುಧ ೦೧-೦೩. ಮಕರದಲ್ಲಿ ಶುಕ್ರ ೧೩-೦೨, ವೃಶ್ಚಿಕದಲ್ಲಿ ಕುಜ ೦-೧೭ ಮಿಥುನದಲ್ಲಿ ರಾಹು ೧೪-೨೫.

ಗ್ರಹಣದ ಅಂತ್ಯದ ವೇಳೆಗೆ ರವಿ ೧೦-೦೦ ಚಂದ್ರ ೧೦-೧೪.ಇನ್ನುಳಿದ ಗ್ರಹಗಳ ಚಲನೆಯಲ್ಲಿ  ಗಣನೀಯ ಬದಲಾವಣೆ ಇಲ್ಲಾ.

ಗುರುವಾರ, ಗುರುವಿನ ಸ್ವಕ್ಷೇತ್ರದಲ್ಲಿ, ಗುರುವಿನ ಲಗ್ನವಾದ ಧನುಸ್ ಲಗ್ನದಲ್ಲಿ ಅದೂ ಸಹಾ ಕೇತು ಗ್ರಸ್ತ ಗ್ರಹಣ ಆಗುತ್ತಿದೆ. ಗುರು ಮತ್ತು ಕೇತು ಧರ್ಮ ಮತ್ತು  ಜ್ಞಾನವನ್ನು ಪ್ರತಿನಿಧಿಸುತ್ತಾರೆ, ಅಂದರೆ ಅನ್ಯಾಯ, ಅಧರ್ಮಗಳನ್ನು ವಿರೋಧಿಸುತ್ತಾರೆ ಮತ್ತು ಅವುಗಳನ್ನು ನಾಶಮಾಡುತ್ತಾರೆ. ಗುರು ಮತ್ತು ರಾಹು ಸಂಬಂಧ  ಶುಭವಲ್ಲವಾದರೂ ಗುರು ಮತ್ತು ಕೇತು ಸಂಬಂಧ  ಶುಭವೇ ಆಗಿದೆ.  ಗ್ರಹಣ ದಿವಸ ಮತ್ತು ಆರಂಭದ ಕಾಲದಲ್ಲಿ ಗುರು ಗ್ರಹವು ಅತ್ಯಂತ ಪ್ರಬಲ ಗ್ರಹವಾಗಿದೆ, ಕಾರಣ, ಅದೇ ವಾರ, ಅದೇ ಲಗ್ನ ಮತ್ತು ಅದೇ ರಾಶಿ.  ಗುರು ಅಸ್ತಂಗತನಾಗಿದ್ದಾನೆ ಹಾಗಾಗಿ ಬಲಯುತವಾಗಿಲ್ಲಾ ಎಂದು ಹೇಳುವ ಹಾಗಿಲ್ಲಾ, ಏಕೆಂದರೆ ರವಿ  ಸ್ಥಿತ ರಾಶ್ಯಾಧಿಪತಿಗೆ ಅಸ್ತಂಗತದಿಂದ ಬಲ ಕ್ಷೀಣಿಸುವುದಿಲ್ಲಾ.

ಮಕರದಲ್ಲಿ ಶುಭಗ್ರಹ ಶುಕ್ರ ಮತ್ತು ವೃಶ್ಚಿಕದಲ್ಲಿ ರಾಶ್ಯಾಧಿಪತಿ ಮಂಗಳನೇ ಸ್ಥಿತನಾಗಿರುವುದರಿಂದ ಇದು ಶುಭಕರ್ತರೀ ಯೋಗವೆಂದೇ ಪರಿಗಣಿಸಬೇಕು ಹಾಗಾಗಿ ಗ್ರಹಣವಾಗುವ ರಾಶಿಯೂ ಬಲಯುತವಾಗಿದೆ.  ಧನುಸ್ ರಾಶಿಯಲ್ಲಿ ೬ ಗ್ರಹಗಳಿದ್ದರೂ, ಗ್ರಹಗಳ ಅವಸ್ಥೆಯನ್ನು ನೋಡುವುದಾದರೆ ರವಿ ಮತ್ತು ಗುರು ಯೌವನಾವಸ್ಥೆಯಲ್ಲಿದ್ದು ಅತ್ಯಂತ ಬಲಶಾಲಿಗಳಾಗಿದ್ದು, ಶನಿಯು ಮೃತಾವಸ್ಥೆಯಲ್ಲಿಯೂ, ಬುಧನು ಬಾಲ್ಯಾವಸ್ಥೆಯಲ್ಲಿಯೂ ಅತ್ಯಂತ ಬಲಹೀನವಾಗಿದ್ದರೆ, ಕೇತುವು ಅಪಕ್ವವಯಸ್ಸಿನ ಅವಸ್ಥೆಯಲ್ಲಿದ್ದು ಅಷ್ಟೇನೂ ಬಲಶಾಲಿಯಲ್ಲ. ಚಂದ್ರನು ಕ್ಷೀಣಾವಸ್ಥೆಯಲ್ಲಿಯೂ, ಅತ್ಯಂತ ಕಡಿಮೆ ಷಡ್ಬಲವನ್ನು ಹೊಂದಿದ್ದರೂ ಯೌವನಾವಸ್ಥೆಯಲ್ಲಿರುವುದು ವಿಶೇಷವೇ ಆಗಿದೆ.

ಇನ್ನು ಷಡ್ಬಲವನ್ನು ನೋಡುವುದಾದರೆ, ಗ್ರಹಣಕಾಲಕ್ಕೆ ರವಿ ಮತ್ತು ಗುರು ಇವರ ಷಡ್ಬಲವು ಸರಾಸರಿಗಿಂತ ಹೆಚ್ಚೇ ಇದ್ದು ಗ್ರಹಣ ಅಂತ್ಯವಾಗುವ ಹೊತ್ತಿಗೆ ರವಿಯ ಷಡ್ಬಲ ಮತ್ತಷ್ಟು ಹೆಚ್ಚೇ ಆಗುತ್ತದೆ.  ಗ್ರಹಣ ಆರಂಭ ಕಾಲದಲ್ಲಿ ನವಾಂಶ ಲಗ್ನವೂ ಧನುಸ್ ಲಗ್ನವೇ ಆಗಿ ಗುರು ಗ್ರಹವು ನವಾಂಶದಲ್ಲಿ ಉಚ್ಚಸ್ಥಾನದಲ್ಲಿರುವುದು ಗುರುಗ್ರಹದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.  ಗ್ರಹಣ ಆರಂಭದಲ್ಲಿ ಶನಿ ಗ್ರಹದ ಷಡ್ಬಲ ರವಿ ಗಿಂತ ಕೊಂಚ ಹೆಚ್ಚಿದ್ದು ಅಂತ್ಯದ ವೇಳೆಗೆ  ಶನಿಗ್ರಹದ ಷಡ್ಬಲ ರವಿಗಿಂತ ಸಾಕಷ್ಟು ಕಡಿಮೆಯಾಗುವುದು ಗಮನಿಸಬೇಕಾದ ಅಂಶ. ಇವೆಲ್ಲವನ್ನೂ ಕ್ರೋಢೀಕರಿಸಿದಾಗ ಸಿಗುವ ತೀರ್ಮಾನ ಎಂದರೆ ಗ್ರಹಣಕ್ಕೆ ಒಳಗಾಗುವ ರವಿ, ಮತ್ತು ಗ್ರಹಣ ಆಗುವ ರಾಶ್ಯಾಧಿಪತಿ ಗುರು ಅತ್ಯಂತ ಬಲಶಾಲಿಗಳಾಗಿರುವುದು.

ಇವೆಲ್ಲದರ ಪರಿಣಾಮವನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ “ದುಷ್ಟ ನಿಗ್ರಹ ಮತ್ತು ಶಿಷ್ಟ ಪರಿಪಾಲನೆ”.  ಇದು ಸತ್ಯವಾಗುವುದನ್ನು ನಾವೆಲ್ಲರೂ ಮುಂದಿನ ದಿನಗಳಲ್ಲಿ ಖಂಡಿತವಾಗಿ ನೋಡುತ್ತೇವೆ.  ಗುರು ಗ್ರಹವು ಧನುಸ್ ರಾಶಿಯನ್ನು ಪ್ರವೇಶ ಮಾಡಿದ ಸಮಯವನ್ನು ಪರಿಗಣಿಸಿದರೂ ಅದು ಸಹಾ  “ದುಷ್ಟ ನಿಗ್ರಹ ಮತ್ತು ಶಿಷ್ಟ ಪರಿಪಾಲನೆ” ಯೇ ಆಗಿದೆ ಎಂಬುದನ್ನು ಹಿಂದೊಮ್ಮೆ ಹೇಳಿದ ನೆನಪು ನನಗಿದೆ.

ಭಾರತ ದೇಶದ ರಾಜಕೀಯ, ಆರ್ಥಿಕ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಈ ಸೂರ್ಯಗ್ರಹಣದ ಪರಿಣಾಮವನ್ನು ಹೇಳದೆ ಈ ಲೇಖನ ಪೂರ್ಣವಾಗದು. ಭಾರತದ ಸ್ವಾತಂತ್ರದ ಕುಂಡಲಿಯ ಬಗ್ಗೆ ಹೆಚ್ಚು ವಿವರಣೆ ನೀಡದೆ, ಗ್ರಹಣದ ಪರಿಣಾಮವನ್ನು ಮಾತ್ರ ಹೇಳಬೇಕು ಎನಿಸಿದರೂ, ಸ್ವಾತಂತ್ಯದ  ಕುಂಡಲಿಯಲ್ಲಿ  ಲಗ್ನಸ್ಥಿತ ರಾಹು ಮತ್ತು ಪ್ರಬಲ ಕಾಳಸರ್ಪ ದೋಷವನ್ನು ಹೇಳಲೇಬೇಕು.  ಇವೆರಡೂ ಸಹಾ ನಾವು ಯಾವುದನ್ನು ಅನಿವಾರ್ಯವಾಗಿ ಪೋಷಿಸುತ್ತಲೇ ಇದ್ದೇವೆ ಎಂಬ ಸುಳಿವು ನೀಡುತ್ತದೆ.

ಅಷ್ಟಮಾಧಿಪತಿಯಾದ ಗುರುವು ಆರನೇ ಭಾವದಲ್ಲಿ ಕುಳಿತು  ಬೇರೆ ಯಾವುದೇ ಗ್ರಹಗಳ ಪ್ರಭಾವ ಕ್ಕೊಳಗಾಗದೆ ಸ್ಪಷ್ಟವಾದ  ವಿಪರೀತ ರಾಜಯೋಗವನ್ನು  ಉಂಟುಮಾಡಿರುವುದು ನಮ್ಮ ಹಿರಿಯರು ಮಾಡಿರುವ ಪುಣ್ಯವಲ್ಲದೆ ಮತ್ತೇನೂ ಅಲ್ಲಾ.

ಗ್ರಹಣವು ಸ್ವಾತಂತ್ರ್ಯ ಕುಂಡಲಿಯ ಲಗ್ನದ  ೮ ನೇ ರಾಶಿಯಲ್ಲೂ, ಚಂದ್ರ ಮತ್ತು ಸೂರ್ಯ ಸ್ಥಿತ ರಾಶಿಯಿಂದ ೬ ನೇ ರಾಶಿಯಲ್ಲೂ ಸಂಭವಿಸುತ್ತಿದೆ.

ದೇಶದ ಒಳಗಿನ ಮತ್ತು ಹೊರಗಿನ ಶತೃಗಳ  ದಮನದ ಸೂಚನೆ ಇದು. ಗ್ರಹಣಕಾಲದಲ್ಲಿ ಅಷ್ಟಮಾಧಿಪತಿ ಅಷ್ಟಮದಲ್ಲೇ ಇದ್ದು ಬಲಯುತವಾಗಿದ್ದರೂ ಸ್ವಾತಂತ್ರ್ಯ ಕುಂಡಲಿಯ ಮೂರನೇ ರಾಶಿಯಲ್ಲಿನ ಐದು ಗ್ರಹಗಳ ಪೈಕಿ ನಾಲ್ಕು ಗ್ರಹಗಳು ಅಷ್ಟಮದಲ್ಲಿ ಗುರುವಿನೊಂದಿಗೆ ಇರುವುದು, ಆಂತರಿಕ ಕ್ಷೋಭೆಯನ್ನು ಸೂಚಿಸುತ್ತಿದೆ (ಪ್ರಸ್ತುತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳುತ್ತಿಲ್ಲಾ)  ಮಂಗಳ ಗ್ರಹವು, ಗ್ರಹಣವಾಗುತ್ತಿರುವ ರಾಶಿಯಿಂದ ೧೨ ನೇ ಸ್ಥಾನದಲ್ಲಿ ಸ್ವಸ್ಥಾನದಲ್ಲಿದ್ದರೂ ಸಹಾ ಅಗ್ನಿಯಿಂದ ಆಸ್ತಿ ಪಾಸ್ತಿಗಳ ಹಾನಿಯನ್ನು ಸೂಚಿಸುತ್ತದೆ. ಸ್ವಸ್ಥಾನವಾದ್ದರಿಂದ ಹಾನಿಯ ಪ್ರಮಾಣ ಕಡಿಮೆ ಎಂದು ಹೇಳಬಹುದು. ಅಷ್ಟಮಾಧಿಪತಿಯೇ ಲಾಭಾಧಿಪತಿಯೂ ಆಗಿರುವುದರಿಂದ ಮತ್ತು ಧನಸ್ಥಾನವಾದ ಮಿಥುನ ರಾಶಿಯನ್ನು ಮಿಥುನ ರಾಶ್ಯಾಧಿಪತಿಯೊಂದಿಗೆ ಗ್ರಹಣ ಕಾಲದಲ್ಲಿ ವೀಕ್ಷಿಸುತ್ತಿರುವುದರಿಂದ, ಗುರು ಗ್ರಹವು ಮಕರ ರಾಶಿಯನ್ನು ಪ್ರವೇಶಿಸಿದ ನಂತರ ಅಂದರೆ ೩೦ ಮಾರ್ಚ್ ೨೦೨೦ ರ ನಂತರ ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಿಸುವುದರಲ್ಲಿ ಸಂದೇಹವಿಲ್ಲಾ.  ಆದರೆ ಇಂದಿನಿಂದ ಆರಂಭಿಸಿ ೧೫ ಮೇ ೨೦೨೦ ರವರೆಗೆ ಅಂದರೆ ಗುರು ಮತ್ತು ಶನಿಗ್ರಹವು ವಕ್ರಗತಿಯನ್ನು ಆರಂಭಿಸುವ ಮೊದಲು ಆರ್ಥಿಕ ನೀತಿಯ ಬಗ್ಗೆ ಹಣಕಾಸು ಸಚಿವರು ತೆಗೆದುಕೊಳ್ಳಬಹುದಾದ ನಿರ್ಧಾರಗಳು ಪ್ರಮುಖ ಪಾತ್ರ  ವಹಿಸಲಿವೆ. ಗ್ರಹಗತಿಗಳ ರೀತ್ಯಾ ಹಣಕಾಸು ಸಚಿವರು ಸೂಕ್ತ ನಿರ್ಧಾರಗಳನ್ನೇ ತೆಗೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ಇದೆ.

ಈ ಲೇಖನದ ಮೊದಲಭಾಗದಲ್ಲಿ ಹೇಳಿದಂತೆ ಸೂರ್ಯಗ್ರಹಣವು ನಮ್ಮನ್ನು, ನಮ್ಮ ದೇಶವನ್ನೂ ಮುಂದಿನ ಹಂತಕ್ಕೆ ದೂಡಿಬಿಡುತ್ತಿದೆ. ಹೊಸ ಹೊಸ ಆಯಾಮಗಳು, ಅವಕಾಶಗಳು ತೆರೆದುಕೊಳ್ಳಲಿವೆ.

ಗ್ರಹಣ ಕಾಲದ ಗುರುವು ಸ್ವಾತಂತ್ರ್ಯದ ಕುಂಡಲಿಯ ೪ ನೇ ರಾಶಿಯನ್ನು ವೀಕ್ಷಿಸುತ್ತಿದ್ದು ರಾಷ್ಟ್ರದ ಗೃಹ ಮಂತ್ರಿಗಳು ವಿರೋಧವನ್ನು ಎದುರಿಸಿದರೂ ೪ ನೇ ಭಾವಾಧಿಪತಿ ರವಿ ಆದ ಕಾರಣ ಅವೆಲ್ಲವನ್ನೂ ಎದುರಿಸಿ ನಿಲ್ಲಲು ಸಾಧ್ಯವಿದೆ.

ನಾಲ್ಕನೇ ಭಾವಾಧಿಪತಿ ರವಿಯು ಮೂರನೇ ಸ್ಥಾನದಲ್ಲಿ ಲಗ್ನಾಧಿಪತಿ, ಧನಾಧಿಪತಿ, ಐದನೆಯ ಭಾವಾಧಿಪತಿ, ಮೂರನೆಯ ಭಾವಾಧಿಪತಿ ಮತ್ತು ಧರ್ಮ ಕರ್ಮಾಧಿಪತಿಗಳ ಸಂಯೋಗದಲ್ಲಿರುವುದರಿಂದ ಬಲಹೀನ ಗೃಹಮಂತ್ರಿಗಳನ್ನು ನಮ್ಮ  ರಾಷ್ಟ್ರ ಕಂಡೇ  ಇಲ್ಲಾ ಎಂಬುದು ನಮಗೆಲ್ಲಾ ತಿಳಿದಿದೆ.

ಮುಂದುವರೆಯುತ್ತದೆ – ಭಾಗ 3

ಹಿಂದಿನ ಕೊಂಡಿಗಳು:

ಭಾಗ 1 – ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ

ಭಾಗ 3 – ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 3

ಸಕಾರಾತ್ಮಕ ಉಪಯೋಗ – ಡಿಸೆಂಬರ್ 26, ಗ್ರಹಣ- ಸಕಾರಾತ್ಮಕ ಉಪಯೋಗ

3 Comments on “ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 2

  1. Pingback: ಡಿಸೆಂಬರ್ 26, ಸೂರ್ಯಗ್ರಹಣ-ಒಂದು ವಿಶ್ಲೇಷಣೆ – Atmanandanatha

  2. Pingback: ಡಿಸೆಂಬರ್ 26, ಸೂರ್ಯಗ್ರಹಣ -ಒಂದು ವಿಶ್ಲೇಷಣೆ- ಭಾಗ 3 – Atmanandanatha

  3. Pingback: ಡಿಸೆಂಬರ್ 26, ಗ್ರಹಣ- ಸಕಾರಾತ್ಮಕ ಉಪಯೋಗ – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: