ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 3


ಈ ಲೇಖನಮಾಲೆಯನ್ನು ಸಂಪೂರ್ಣಗೊಳಿಸುವ ಮೊದಲು ವೈಯಕ್ತಿಕವಾಗಿ ಯಾವ ಯಾವ ರಾಶಿಯವರಿಗೆ  ಗ್ರಹಣದ ಪರಿಣಾಮ ಗಳೇನು ಎಂಬುದನ್ನು ಹೇಳಲು, ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳು ಅವಶ್ಯವಿದೆ.  ಆದಾಗ್ಯೂ, ನನ್ನ ವಿನಮ್ರ ಅನುಭವದಲ್ಲಿ ನಾನು ಕಂಡುಕೊಂಡಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

೧. ವೈಯಕ್ತಿಕವಾಗಿ ಕೇವಲ ರಾಶಿಯನ್ನು ಗಣನೆಗೆ ತೆಗೆದುಕೊಳ್ಳದೆ ಜನ್ಮಲಗ್ನವನ್ನೂ  ಗಣನೆಗೆ ತೆಗೆದುಕೊಳ್ಳಬೇಕು

೨.  ಜನ್ಮಕುಂಡಲಿಯಲ್ಲಿ ಗುರು ಮತ್ತು ರವಿಗಳು ಇರುವ ರಾಶಿಯನ್ನೂ ಗಣನೆಗೆ ತೆಗೆದುಕೊಳ್ಳಬೇಕು

ಮೊಟ್ಟ ಮೊದಲನೆಯದಾಗಿ ಗ್ರಹಣ ಸಂಭವಿಸುವ ನಕ್ಷತ್ರ ಮತ್ತು ರಾಶಿಯವರಿಗೆ ಅಶುಭ ಎಂಬುದು ಸಾಮಾನ್ಯ ನಂಬಿಕೆ. ಆದರೆ ಗ್ರಹಣದ ಸ್ಫುಟವು , ಜನ್ಮ ನಕ್ಷತ್ರದ ಅಥವಾ ಜನ್ಮ ಲಗ್ನದ ಸ್ಫುಟದ ಮೇಲೆ ಆದಾಗ ಮಾತ್ರ ಅದು  ಅಶುಭ ಫಲವನ್ನು ಕೊಡುತ್ತದೆಯೇ ಹೊರತು ಇಡೀ ನಕ್ಷತ್ರ, ರಾಶಿ ಅಥವಾ ಲಗ್ನದಲ್ಲಿ ಜನಿಸಿದ ಎಲ್ಲರಿಗೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕಿದೆ.  ಡಿಸಂಬರ್ ೨೬ , ೨೦೧೯ ರ ಸೂರ್ಯ ಗ್ರಹಣವು ಧನುಸ್ ರಾಶಿಯಲ್ಲಿ ೯-೫೨ ಸ್ಪುಟದಿಂದ ಆರಂಭ ಆಗಿ ೧೦-೦೦ ಸ್ಫುಟದಲ್ಲಿ ಅಂತ್ಯವಾಗುತ್ತದೆ. ಅಂದರೆ ಮೂಲಾ ನಕ್ಷತ್ರದ ಈ ಸ್ಫುಟದಲ್ಲಿ ಜನಿಸಿದವರಿಗೆ ಅಥವಾ ಜನ್ಮ ಲಗ್ನವು ಈ ಸ್ಪುಟದಲ್ಲಿ ಇರುವವರಿಗೆ ಮಾತ್ರವೇ ಅಶುಭ ಹೊರತು ಧನುಸ್ ರಾಶಿ ಮತ್ತು ಜನ್ಮಲಗ್ನದ ಎಲ್ಲರಿಗೂ, ಮೂಲಾ ನಕ್ಷತ್ರದಲ್ಲಿ ಜನಿಸಿದ ಎಲ್ಲರಿಗೂ ಅಶುಭ ಎಂದು ಹೇಳುವುದು ಸಮಂಜಸ ಆಗಲಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೆಯೇ  ಗ್ರಹಣ ಆಗುವ ಹಿಂದಿನ ಮತ್ತು ಮುಂದಿನ ನಕ್ಷತ್ರದವರೆಗೂ ಅಶುಭ ಅಂದರೆ ಜ್ಯೇಷ್ಠಾ ನಕ್ಷತ್ರ ಮತ್ತು  ಪೂರ್ವಾಷಾಢ ನಕ್ಷತ್ರಗಳ 3 ಮತ್ತು 4 ನೇ ಪಾದದಲ್ಲಿ ಜನಿಸಿದವರಿಗೆ ಮಾತ್ರ ಅಶುಭ. ಹಾಗೆಯೇ ಜನ್ಮ ಲಗ್ನವು   ಜ್ಯೇಷ್ಠಾ ನಕ್ಷತ್ರ ಮತ್ತು  ಪೂರ್ವಾಷಾಢ ನಕ್ಷತ್ರಗಳ 3 ಮತ್ತು 4 ನೇ ಪಾದದಲ್ಲಿ ಉದಯಿಸಿದರೆ ಮಾತ್ರ ಅಶುಭ.

ಅನುಜನ್ಮ ಮತ್ತು ತ್ರಿಜನ್ಮ ನಕ್ಷತ್ರಗಳಲ್ಲಿ ಜನಿಸಿದವರಿಗೂ ಅಶುಭ ಎಂದು ಹೇಳುವಾಗ ಅಶ್ವಿನಿ ಮತ್ತು ಮಖಾ ನಕ್ಷತ್ರಗಳ 3 ಮತ್ತು 4 ನೇ ಪಾದದಲ್ಲಿ ಜನಿಸಿದವರಿಗೆ ಮತ್ತು  ಜನ್ಮಲಗ್ನವು ಅಶ್ವಿನಿ ಮತ್ತು ಮಖಾ ನಕ್ಷತ್ರಗಳ 3 ಮತ್ತು 4 ನೇ ಪಾದದಲ್ಲಿ ಉದಯವಾಗಿದ್ದರೆ ಮಾತ್ರ ಅಶುಭವಾಗುತ್ತದೆ. ಇನ್ನೂ ಆಳವಾಗಿ ಅಭ್ಯಸಿಸಿದಾಗ ಗ್ರಹಣದ ಅಂತ್ಯವು ೧೦ ನೇ ಸ್ಫುಟದಲ್ಲಿ ಆಗುತ್ತಿದ್ದು ಈ ಸ್ಫುಟವು ಮೂಲಾ ನಕ್ಷತ್ರದ 3 ಮತ್ತು 4 ಪಾದದ ಸಂಧಿ ಯಾಗಿರುವುದರಿಂದ 4 ನೇ ಪಾದದವರಿಗೆ ಅಶುಭ ಎನ್ನುವುದು ಎಷ್ಟು ಸರಿ ಎನ್ನುವ ಬಗ್ಗೆ ಇನ್ನಷ್ಟು ಸಂಶೋಧನೆ ಬೇಕು.

ಈ ಹಿಂದಿನ ಲೇಖನದಲ್ಲಿ ಹೇಳಿದಂತೆ ಗ್ರಹಣವು ಅಗ್ನಿರಾಶಿಯಲ್ಲಿ ಆಗುತ್ತಿದ್ದು, ಅಗ್ನಿ ರಾಶಿಗಳಾದ ಮೇಷ ಮತ್ತು ಸಿಂಹ ರಾಶಿ ಅಥವಾ ಲಗ್ನದಲ್ಲಿ ಜನಿಸಿದವರಿಗೆ ಈ ಗ್ರಹಣ ಶುಭವನ್ನೇ ತರುವುದರಿಂದ ಮಖಾ ನಕ್ಷತ್ರವು ಸಿಂಹ ರಾಶಿಯಲ್ಲಿರುವುದರಿಂದ ಮಖಾ ನಕ್ಷತ್ರವು ತ್ರಿಜನ್ಮ ರಾಶಿಯಾದರೂ ಗ್ರಹಣವು ಮಖಾ ನಕ್ಷತ್ರದವರಿಗೆ ಶುಭ ಫಲವನ್ನೇ ಕೊಡುತ್ತದೆ.

ಜನನ ಕಾಲದಲ್ಲಿ ಸೂರ್ಯನ ಸ್ಫುಟವು ಧನುಸ್ ರಾಶಿಯಲ್ಲಿ ೯-೫೨ ಸ್ಪುಟದಿಂದ  ೧೦-೦೦ ಸ್ಫುಟದ ವರೆಗೆ ಇದ್ದಲ್ಲಿ ಅಂತಹವರಿಗೆ ಈ ಗ್ರಹಣ ಅಶುಭವನ್ನು ತರುತ್ತದೆ . ಇಂತಹವರು ತಮ್ಮ ಆರೋಗ್ಯದ ಬಗ್ಗೆ ಮತ್ತು ತಮ್ಮ ತಾಯಿ ತಂದೆಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಸೂರ್ಯ ಮಂತ್ರ ಪಠನೆ, ಆದಿತ್ಯ ಹೃದಯದ ಪಠನೆಯಿಂದ  ಅಶುಭ ನಿವಾರಣೆ ಸಾಧ್ಯ.  ಪಠನೆ ಮಾಡಲು ತಿಳಿಯದವರು ಅಥವಾ ಹೇಳುವಾಗ ತಪ್ಪಾಗಬಹುದು ಎಂಬ ಅನುಮಾನ ಇರುವವರು, ಈ ಮಂತ್ರ ಮತ್ತು ಆದಿತ್ಯ ಹೃದಯವನ್ನು ಶ್ರದ್ಧಾ ಭಕ್ತಿಯಿಂದ ಆಲಿಸಿದರೂ ಪ್ರಯೋಜನಕಾರಿ ಆಗುತ್ತದೆ.

ಧನುಸ್ ರಾಶಿ ಅದರಲ್ಲೂ ಮೂಲಾ ನಕ್ಷತ್ರದಲ್ಲಿ  ಜನಿಸಿದವರು ಹಾಗೂ ಜನ್ಮ ಲಗ್ನವು ಧನುಸ್ ರಾಶಿಯಲ್ಲಿ ಅದರಲ್ಲೂ ಮೂಲಾ ನಕ್ಷತ್ರದಲ್ಲಿ ಉದಯವಾಗಿದ್ದರೆ , ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಇರಲಿ. ವಾಹನ ಚಲಿಸುವಾಗ, ಮಹಡಿ ಮೆಟ್ಟಲುಗಳನ್ನು ಹತ್ತುವಾಗ, ಇಳಿಯುವಾಗ, ಜಾಗರೂಕತೆ ಇರಲಿ. ಗುರು ಧನುಸ್ ರಾಶಿಯಲ್ಲೇ ಇರುವುದರಿಂದ ನಿಮಗೆ ಒಂದು ಶುಭ ಸಮಾಚಾರವೂ ಇದೆ. ನೀವು ಬಹಳ ದಿವಸಗಳಿಂದ ಯಾವುದೋ ಕಾರ್ಯ ಪೂರೈಕೆಗಾಗಿ ಪ್ರಯತ್ನ ಪಡುತ್ತಿದ್ದರೆ, ಈಗ ಅದರ ಬಗ್ಗೆ ಮತ್ತಷ್ಟು ಪ್ರಯತ್ನವನ್ನು ಹಾಕಿರಿ. ಆ  ಕಾರ್ಯ ಸಿದ್ಧಿಯಾಗುತ್ತದೆ..

ಜನನ ಕಾಲದಲ್ಲಿ ಗುರು ಅಥವಾ ರವಿ ಧನುಸ್ ರಾಶಿಯಲ್ಲಿ ಅದರಲ್ಲೂ ಮೂಲಾ ನಕ್ಷತ್ರದಲ್ಲಿ ಇದ್ದರೆ ಅಂತಹವರಿಗೂ ಈ ಮೇಲೆ ಹೇಳಿದ ಫಲಗಳೇ ಅನ್ವಯಿಸುತ್ತದೆ.

ಈ ಹಿಂದೆ ಹೇಳಿದಂತೆ ಗ್ರಹಣ ಕಾಲದಲ್ಲಿ ಆರು ಗ್ರಹಗಳು ಒಟ್ಟಿಗೇ ಇರುವುದು ಮತ್ತು ಅವುಗಳಲ್ಲಿ ಶುಭಗ್ರಹಗಳು ಹೆಚ್ಚು ಬಲವಾಗಿರುವುದು ಹಾಗೂ ಗ್ರಹಣದ ರಾಶಿಯ ಮೇಲೆ ಅಥವಾ ಆ ರಾಶಿಯಲ್ಲಿರುವ ಗ್ರಹಗಳ ಮೇಲೆ ರಾಹು ಗ್ರಹದ ಹೊರತಾಗಿ ಯಾವುದೇ ಗ್ರಹದ ದೃಷ್ಟಿ ಇಲ್ಲದೆ ಇರುವುದು ಶುಭದಾಯಕವೇ ಹೊರತು ಅಶುಭವಲ್ಲಾ .

ಮುಂದೆ ಹೇಳುವ ಫಲಗಳು ಆಯಾಯ ರಾಶಿಯಲ್ಲಿ ಜನಿಸಿದವರಿಗೆ , ಆಯಾಯ ಲಗ್ನದಲ್ಲಿ ಜನಿಸಿದವರಿಗೆ ಹಾಗೂ ಜನನ ಕಾಲದಲ್ಲಿ ರವಿ ಅಥವಾ ಗುರು ಇರುವ ರಾಶಿಯವರಿಗೆ ಅನ್ವಯಿಸಿಕೊಳ್ಳಬೇಕು.

ಮೇಷ :- ಗ್ರಹಣವು ೯ ನೇ ರಾಶಿಯಲ್ಲಿ ಆಗುತ್ತಿದ್ದು ಆರ್ಥಿಕ ಅಭಿವೃದ್ಧಿ, ದೂರ ಪ್ರಯಾಣಗಳಿಂದ ಆರ್ಥಿಕ ಲಾಭ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ವೃಷಭ : ಗ್ರಹಣವು ೮ ನೇ ರಾಶಿಯಲ್ಲಿ ಆಗುತ್ತಿದ್ದು ಷೇರು ವಹಿವಾಟಿನಿಂದ ಲಾಭ, ಅನಿರೀಕ್ಷಿತ ಮೂಲಗಳಿಂದ ಧನಲಾಭ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ, ಪಿತ್ರಾರ್ಜಿತ ಆಸ್ತಿಯ ಬಗ್ಗೆ ತಕರಾರುಗಳಿದ್ದಲ್ಲಿ ಪರಿಹಾರ. ಹಣ ಕಳವಾಗುವ ಸಾಧ್ಯತೆಗಳಿದ್ದು ಎಚ್ಚರ ಇರಲಿ.

ಮಿಥುನ :- ಗ್ರಹಣವು ೭ ನೇ ರಾಶಿಯಲ್ಲಿ ಆಗುತ್ತಿದ್ದು ವ್ಯಾಪಾರ ಉದ್ಯೋಗಗಳಲ್ಲಿ ಪಾಲುದಾರರಿಂದ, ಸಹೋದ್ಯೋಗಿಗಳಿಂದ ಸಂಪೂರ್ಣ ಸಹಕಾರ. ಹೊಸ ಹೊಸ ಪರಿಚಯಗಳಿಂದ ಲಾಭ. ಸಾಲ ಮಾಡುವುದು ಮತ್ತು ಬೇರೆಯವರ ಸಾಲಕ್ಕೆ  ಗ್ಯಾರಂಟಿ ಕೊಡುವುದು ಬೇಡ.

ಕರ್ಕಾಟಕ :-  ಗ್ರಹಣವು ೬ ನೇ ರಾಶಿಯಲ್ಲಿ ಆಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ, ವ್ಯಾಪಾರ ಉದ್ಯೋಗದಲ್ಲಿ ಮುನ್ನಡೆ. ಉದ್ಯೋಗ ಕ್ಷೇತ್ರದಲ್ಲಿ ಅದರಲ್ಲೂ ಸರ್ಕಾರಿ ಉದ್ಯೋಗದಲ್ಲಿದ್ದರೆ, ತಪ್ಪು ಮಾಡುವ ಸಾಧ್ಯತೆಗಳಿದ್ದು ಅದರಿಂದ ಶಿಕ್ಷೆ ಅನುಭವಿಸುವ ಪರಿಸ್ಥಿತಿ.

ಸಿಂಹ :- ಗ್ರಹಣವು ೫ ನೇ ರಾಶಿಯಲ್ಲಿ ಆಗುತ್ತಿದ್ದು, ಮಕ್ಕಳ ವಿದ್ಯಾಭ್ಯಾಸವು ಅತ್ಯಂತ ಉನ್ನತ ಮಟ್ಟದಲ್ಲಿ ಸಾಗುತ್ತದೆ. ಮಕ್ಕಳ ಆರೋಗ್ಯ ಮತ್ತು ಅವರ ಸ್ನೇಹಿತರ ಬಗ್ಗೆ ಗಮನವಿರಲಿ.

ಕನ್ಯಾ:- ಗ್ರಹಣವು ೪ ನೇ ರಾಶಿಯಲ್ಲಿ ಆಗುತ್ತಿದ್ದು,ಮನೆಯಲ್ಲಿ ಶಾಂತಿ, ಸಮೃದ್ಧಿ, ಚಿಂತೆಗಳಿಂದ ಮುಕ್ತಿ, ತಾಯಿ ತಂದೆಯರ ಆರೋಗ್ಯದ ಬಗ್ಗೆ ಎಚ್ಚರ ಇರಲಿ.

ತುಲಾ :-  ಗ್ರಹಣವು ೩ ನೇ ರಾಶಿಯಲ್ಲಿ ಆಗುತ್ತಿದ್ದು  ಬಂಧುಗಳ ಮತ್ತು ಸ್ನೇಹಿತರ  ಸಹಾಯ ದೊರೆಯುತ್ತದೆ. ಹಲವಾರು ಮೂಲಗಳಿಂದ ಶುಭವಾರ್ತೆಗಳು ಬರುತ್ತವೆ. ಅನಾವಶ್ಯಕ ಪ್ರಯಾಣ ಬೇಡ. ಹಿತಶತೃಗಳನ್ನು ಗುರುತಿಸಿ ಅವರ ಬಗ್ಗೆ ಎಚ್ಚರವಿರಲಿ

ವೃಶ್ಚಿಕ :- ಗ್ರಹಣವು ೨ ನೇ ರಾಶಿಯಲ್ಲಿ ಆಗುತ್ತಿದ್ದು  ಆರ್ಥಿಕ ಪ್ರಗತಿ, ಷೇರು ಮಾರುಕಟ್ಟೆಯಿಂದ ಲಾಭ. ಹೊಸ ಯೋಜನೆಗಳು ಬೇಡ.

ಧನುಸ್ :- ಈ ಹಿಂದೆಯೇ ಹೇಳಿ ಆಗಿದೆ

ಮಕರ:-  ಗ್ರಹಣವು ೧೨ ನೇ ರಾಶಿಯಲ್ಲಿ ಆಗುತ್ತಿದ್ದು,ಬಂಧುಗಳ ಮತ್ತು ಸ್ನೇಹಿತರ ಸಹಕಾರದೊಂದಿಗೆ ಜೀವನದಲ್ಲಿ ಮುನ್ನಡೆ. ನಿಮ್ಮಿಂದಲೂ ಬಂಧುಮಿತ್ರರಿಗೆ ಸಹಕಾರ, ಸಹಾಯ. ಮದುವೆ ಮುಂತಾದ ಶುಭ ಸಮಾರಂಭಗಳಿಗೆ ವೆಚ್ಚ. ಆರೋಗ್ಯದ ಬಗ್ಗೆ ಎಚ್ಚರ ಬೇಕು. 

ಕುಂಭ :-ಗ್ರಹಣವು ೧೧ ನೇ ರಾಶಿಯಲ್ಲಿ ಆಗುತ್ತಿದ್ದು, ಸರ್ಕಾರೀ ಅಧಿಕಾರಿಗಳಿಂದ , ರಾಜಕಾರಣಿಗಳಿಂದ ಸಹಾಯ. ಸರ್ಕಾರಿ ನೌಕರಿಯವರಿಗೆ ಬಡ್ತಿ, ಸ್ನೇಹಿತರಿಂದ ಸಹಾಯ ಪಡೆಯುವ ಬಗ್ಗೆ ಎಚ್ಚರ ಬೇಕು.

ಮೀನ:- ಗ್ರಹಣವು ೧೦ ನೇ ರಾಶಿಯಲ್ಲಿ ಆಗುತ್ತಿದ್ದು, ವ್ಯಾಪಾರ ಉದ್ಯೋಗದಲ್ಲಿ ಪ್ರಗತಿ,  ಸರ್ಕಾರಿ ನೌಕರರು ತಪ್ಪು ಮಾಡಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ,  ತಾಯಿ ತಂದೆಯರ ಆರೋಗ್ಯದ ಬಗ್ಗೆ ಎಚ್ಚರ.

ಮೇಲೆ ಹೇಳಿದ ಫಲಗಳನ್ನು ಅರ್ಥೈಸುವುದು ಹೇಗೆ ಎಂಬ ಬಗ್ಗೆ ಒಂದು ಉದಾಹರಣೆ ಈ ಕೆಳಕಂಡಂತೆ:-

ರಾಶಿಯು ಮಿಥುನ ಆಗಿ, ಜನ್ಮ ಲಗ್ನವು ವೃಶ್ಚಿಕ, ಜನ್ಮ ಕುಂಡಲಿಯಲ್ಲಿ ರವಿ ಕಟಕದಲ್ಲಿ ಮತ್ತು ಗುರು ಕನ್ಯಾದಲ್ಲಿ ಇರುವವರಿಗೆ .

ಮಿಥುನ, ವೃಶ್ಚಿಕ, ಕಟಕ ಮತ್ತು ಕನ್ಯಾ ರಾಶಿಗಳಿಗೆ ಹೇಳಿರುವ ಎಲ್ಲಾ ಫಲಗಳು ಅನ್ವಯಿಸುತ್ತವೆ.

ತಮಿಳು ಮೂಲದ ಜ್ಯೋತಿಷ್ಯ ಗ್ರಂಥದ ಆಧಾರದಂತೆ ಈ ಫಲಗಳು ಸೂರ್ಯ ಗ್ರಹಣ ಎಷ್ಟು ಘಂಟೆ ಮತ್ತು ನಿಮಿಷಗಳು ಉಂಟಾಗುತ್ತದೋ ಅಷ್ಟು ವರ್ಷ ಮತ್ತು ತಿಂಗಳುಗಳಿಗೆ ಅನ್ವಯ ಆಗುತ್ತದೆ.

ಗ್ರಹಣವು ೩ ಘಂಟೆ, ೫ ನಿಮಿಷ ಕಾಲ ಇದ್ದು, ಈ ಎಲ್ಲಾ ಫಲಗಳೂ ೩ ವರ್ಷ ೫ ತಿಂಗಳು ಕಾಲ ನಡೆಯುತ್ತವೆ. ಈ ಫಲಗಳು ಗ್ರಹಣದಿಂದ ಸಂಭವಿಸುವ ಫಲಗಳು ಮಾತ್ರ ಆಗಿದ್ದು,  ಈ ಫಲಗಳೊಂದಿಗೆ ದಶಾ ಭುಕ್ತಿ ಮತ್ತು ಗೋಚಾರ ಫಲಗಳನ್ನು ಸೇರಿಸಿಕೊಳ್ಳಬೇಕು.

ನಮ್ಮ ಸಮಾಜದಲ್ಲಿ ಮನುಷ್ಯರು, ದೇವತೆಗಳು ಮತ್ತು ರಾಕ್ಷಸರು ಇದ್ದೇವೆ. ಈ ವಿಭಾಗ ನಮ್ಮ ನಮ್ಮ ಗುಣ ನಡತೆಗೆ ಸಂಬಂಧಿಸಿದ್ದು. ಮೇಲೆ ಹೇಳಿರುವ ಗ್ರಹಣದ ಫಲಗಳೆಲ್ಲವೂ ಮನುಷ್ಯರಿಗೆ ಮಾತ್ರ ಅನ್ವಯ ಆಗುವಂಥಾದ್ದು. ದೇವತೆಗಳಿಗೆ ಗ್ರಹಣಗಳಿಂದ ಆಗಬೇಕಾದ್ದು ಏನೂ ಇಲ್ಲಾ. ರಾಕ್ಷಸರಿಗೆ ಅವರವರ ಪಾಪ ಕರ್ಮಗಳಿಗೆ ಶಿಕ್ಷೆ ಕೊಡಲೋಸುಗವೇ ಪ್ರಕೃತಿ ಇಂತಹ ಗ್ರಹ ಸಂಬಂಧಗಳನ್ನು ಏರ್ಪಡಿಸುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೆ ನಮ್ಮ ರಾಷ್ಟ್ರದ ಪ್ರಧಾನ ಮಂತ್ರಿಗಳ ಜನ್ಮಕುಂಡಲಿಯನ್ನು ಆಧರಿಸಿ ಗ್ರಹಣ ಫಲವನ್ನು ಹೇಳದಿದ್ದರೆ ಹೇಗೆ ? ಹಾಗೆಯೇ ನಮ್ಮ ರಾಜ್ಯದ ಮುಖ್ಯ ಮಂತ್ರಿಗಳ ಜನ್ಮಕುಂಡಲಿಯನ್ನು ಆಧರಿಸಿ ಗ್ರಹಣ ಫಲವನ್ನು ಹೇಳದಿದ್ದರೆ ಹೇಗೆ?

ಪ್ರಧಾನ ಮಂತ್ರಿಯವರ ಜನ್ಮಲಗ್ನ ಮತ್ತು ರಾಶಿ ವೃಶ್ಚಿಕ..ಲಗ್ನಾಧಿಪತಿ ಲಗ್ನದಲ್ಲೇ ಇದ್ದರೂ ಯಾವುದೇ ದೃಷ್ಟಿ ಇಲ್ಲಾ. ಪ್ರಸ್ತುತ ಗ್ರಹಣ ಕಾಲದಲ್ಲಿ ಲಗ್ನಾಧಿಪತಿ ಮಂಗಳ, ಜನ್ಮ ಕುಂಡಲಿಯಲ್ಲಿದ್ದ ಸ್ಥಾನದಲ್ಲೇ ಇದ್ದಾರೆ.  ಮಂಗಳ, ಧೈರ್ಯ ಸಾಹಸಗಳನ್ನು ಪ್ರತಿನಿಧಿಸುವುದೇ ಅಲ್ಲದೆ, ರಾಷ್ಟ್ರದ ದೃಷ್ಟಿಯಲ್ಲಿ ನೋಡುವುದಾದರೆ ಸೇನಾಧಿಪತಿಯೇ ಮಂಗಳ. ಈ ಗ್ರಹಣವು ನಮ್ಮ ನೆರೆ ರಾಷ್ಟ್ರಗಳೊಂದಿಗೆ  ಸೆಣೆಸಾಟಕ್ಕೆ ಆಹ್ವಾನ ನೀಡಿದಂತೆ ಇದೆ.  ಜನ್ಮ ಕುಂಡಲಿಯಲ್ಲಿ ಗುರು ಮಾತ್ರವೇ ಅತ್ಯಂತ ಬಲಯುತವಾದ ಯೌವನಾವಸ್ಥೆಯಲ್ಲಿದ್ದು , ಮಿಕ್ಕಾವ ಗ್ರಹಗಳೂ ಬಲಯುತವಾಗಿಲ್ಲಾ. ಜನ್ಮ ಗುರುವಿನಿಂದ ೧೧ ನೇ ರಾಶಿಯಲ್ಲಿ,  ಹಾಗೂ ಲಗ್ನ ಮತ್ತು ರಾಶಿಯಿಂದ ೨ ನೆಯ ರಾಶಿಯಲ್ಲಿ ಗ್ರಹಣ ವಾಗುತ್ತಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಮತ್ತು ನೆರೆರಾಷ್ಟ್ರಗಳ ಉಪಟಳಕ್ಕೆ ತಡೆ ಒಡ್ಡಲು ಜಗತ್ತಿನ ಪ್ರಬಲ ಮತ್ತು ಬಲಿಷ್ಠ ರಾಷ್ಟ್ರಗಳು ತಮ್ಮ ಸಹಾಯ ಹಸ್ತವನ್ನು ಚಾಚಲಿವೆ.  ಪ್ರಧಾನ ಮಂತ್ರಿಯವರ ಹತ್ಯೆಗೆ ಸಂಚು ನಡೆಯುತ್ತಿದೆ ಎಂದು ಹೇಳಲಾಗುತ್ತಿದ್ದು, ಕುಂಭಸ್ಥಿತ ಗುರುವಿನಿಂದ ಹಾಗೂ ಡಿ ೨೭ ಕುಂಡಲಿಯಲ್ಲಿ  ಮೀನ ಗುರು , ಉಚ್ಚ ಮಂಗಳ ಮತ್ತು ೩ ನೇ ರಾಶಿ ಸ್ಥಿತ ರಾಹುವಿನಿಂದ ಯಾವುದೇ ರೀತಿಯ ಸಂಚು ಫಲಕಾರಿಯಾಗುವುದಿಲ್ಲಾ. ಚಂದ್ರ ದೆಶೆ ಹಾಗೂ ಸಪ್ತಮಾಧಿಪತಿ ಮತ್ತು ವ್ಯಯಾಧಿಪತಿಯಾದ ಶುಕ್ರ ಗ್ರಹದ ಭುಕ್ತಿ ಮೇ ೨೦೨೧ ರವರೆಗೂ ನಡೆಯಲಿದ್ದು, ಈ ಕಾಲದಲ್ಲಿ ರಾಜಕೀಯ ವಿರೋಧ ಪಕ್ಷಗಳು ತಮ್ಮ ಬಲವನ್ನು ವೃದ್ಧಿಸಿ ಕೊಳ್ಳುತ್ತವೆ, ಹಾಗೂ ತಮ್ಮ ಪಕ್ಷದೊಳಗಿನ  ವಿರೋಧಿ ಗುಂಪುಗಳು ಮತ್ತು ಮಿತ್ರ ಪಕ್ಷಗಳು ತಮ್ಮ ದನಿಯನ್ನು ಎತ್ತುವ ಸಾಧ್ಯತೆಗಳು ಖಂಡಿತಾ ಇದೆ.  ಶುಕ್ರನಿಗೆ ಗುರು ದೃಷ್ಟಿ ಯಿಂದ ಪ್ರಧಾನಿಯ ಪಟ್ಟಕ್ಕೆ ಯಾವುದೇ ಚ್ಯುತಿ ಇಲ್ಲಾ.  ಏನೇ ಇದ್ದರೂ ಈ ಗ್ರಹಣವು ನಮ್ಮ ರಾಷ್ಟ್ರವನ್ನು ಬಹಳ ಮುಂದಕ್ಕೆ ದೂಡಿಬಿಡುವುದಂತೂ ಶತಃಸಿದ್ಧ.

ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಜನ್ಮ ಕುಂಡಲಿಯನ್ನು ಪರಿಶೀಲಿಸಿದರೆ, ಜನ್ಮ ಲಗ್ನ ಧನುಸ್ ರಾಶಿಯಲ್ಲಿಯೇ ಗ್ರಹಣ ಸಂಭವಿಸುತ್ತಿದೆ. ಜನ್ಮಕುಂಡಲಿಯ ಗುರುವಿನ ದೃಷ್ಟಿ ಗೋಚಾರದ ಗುರುವಿನ ಮೇಲಿರುವುದೇ, ಮುಖ್ಯಮಂತ್ರಿ ಪಟ್ಟ ಭದ್ರವಾಗಲು ಕಾರಣವಾಗಿದೆ. ಧನುಸ್ ರಾಶಿಯಲ್ಲಿನ ಗ್ರಹಣ, ಜನ್ಮಕುಂಡಲಿಯಲ್ಲಿ ನೀಚ ಸ್ಥಿತಿಯ ಚಂದ್ರ ದೆಶೆ ಮತ್ತು  ಶನಿ ದೃಷ್ಟಿ ಹೊಂದಿರುವ ಚಂದ್ರ, ಹಿತಶತೃಗಳ  ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ.  ಜನ್ಮ ಕುಂಡಲಿಯಲ್ಲಿ  ಉಚ್ಛಸ್ಥಿತಿಯಲ್ಲಿರುವ  ಶುಕ್ರ ಭುಕ್ತಿ ನಡೆಯುತ್ತಿರುವುದು ಪ್ರಕಾಶಿಸುತ್ತಿರುವ  ಬೆಳ್ಳಿ ಗೆರೆ ಎಂದರೆ ತಪ್ಪಲ್ಲಾ. ನೀಚಗ್ರಹದ ದೆಸೆ ನಡೆಯುವ ಕಾಲದಲ್ಲಿ ಹೊರಗೆ ಕಾಣುವಷ್ಟು ಭದ್ರತೆ, ಅಂತರಂಗದಲ್ಲಿ ಇರಲಾರದು. ಈ ಗ್ರಹಣವು  ಆರೋಗ್ಯದ ಬಗ್ಗೆ ಎಚ್ಚರಿಕೆಯ ಸೂಚನೆಯನ್ನಂತೂ ಕೊಡುತ್ತಿದೆ. ಆದಿತ್ಯಹೃದಯ ಪಠಣ ಅಥವಾ ಶ್ರವಣ ಮತ್ತು ಚಂದ್ರಗ್ರಹ ಶಾಂತಿ ಮುಖ್ಯಮಂತ್ರಿಯ ಪಟ್ಟವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಮತ್ತು ಉತ್ತಮ ಆರೋಗ್ಯ ವನ್ನು ನೀಡುತ್ತ್ತದೆ.

ಕೊನೆಯದಾಗಿ, ಗುರು ಮತ್ತು ರವಿಯ ಸಂಯೋಗ ಅದರಲ್ಲೂ ಗುರುವಿನ ಸ್ವಸ್ಥಾನ ಧನುಸ್ ರಾಶಿಯಲ್ಲಿ ೧೨ ವರ್ಷ ಗಳಿಗೊಮ್ಮೆ ಸಂಭವಿಸಿ ನೀಡುವ ಉತ್ತಮ ಫಲಗಳ ಬಗ್ಗೆ ಹೇಳಲೇ ಬೇಕು. ಇದೇ ರೀತಿ ಗುರುವಿನ ಇನ್ನೊಂದು ಸ್ವಸ್ಥಾನ ಮೀನರಾಶಿಯಲ್ಲಿಯೂ ೧೨ ವರ್ಷಗಳಿಗೊಮ್ಮೆ ರವಿ ಗುರುಗಳ ಸಂಯೋಗವಾದರೂ, ಧನುಸ್ ರಾಶಿಯಲ್ಲಿನ ಸಂಯೋಗವು ವಿಶೇಷ, ಏಕೆಂದರೆ ಧನುಸ್ ಅಗ್ನಿತತ್ವ ರಾಶಿ ಮತ್ತು ಅಗ್ನಿಯೇ ರವಿ. ಹಾಗಾಗಿ ಇಲ್ಲಿ ಆಗುತ್ತಿರುವ  ಗ್ರಹಣ ವಿಶೇಷ.

ಈ ಸಂಯೋಗದಿಂದ ಮಾನಸಿಕ ಉಲ್ಲಾಸ, ಪ್ರಗತಿಯ ಹಾದಿಗೆ ಹೊಸ ಹೊಸ ಮಾರ್ಗಗಳು ತೆರೆದುಕೊಳ್ಳುವಿಕೆ. ಆಧ್ಯಾತ್ಮಿಕ ವಾಗಿಯೂ ನಮ್ಮ ಕಣ್ಣು ತೆರೆಯುವಿಕೆ, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಎಲ್ಲಾ ಪ್ರಗತಿಯ ಹಾದಿಗಳ ವಿಸ್ತರಣೆ. ಉನ್ನತ ವ್ಯಾಸಂಗ ಮಾಡಲು ಅವಕಾಶ, ದೂರ ಪ್ರಯಾಣ, ಹೊಸ ಹೊಸ ಸಂಬಂಧಗಳು, ಸ್ನೇಹಿತರು, ಹೊಸ ಯೋಜನೆಗಳು ಸಾಕಾರ ಗೊಳ್ಳುವುದು. ಏನೇ ಪ್ರಾರಂಭ ಮಾಡಿದರೂ ಅದು ಅಭಿವೃದ್ಧಿಯತ್ತ ನಡೆಯುವುದು.  ಎಲ್ಲವೂ ಸಕಾರಾತ್ಮಕವೇ, ಅಭಿವೃದ್ಧಿಯೇ. ಅಷ್ಟೊಂದು ಒಳ್ಳೆಯ ಸಂಯೋಗ ಇದು.. 

ಧನುರ್ಮಾಸ ಅಂದರೆ ರವಿ ಧನುಸ್ ರಾಶಿಯಲ್ಲಿ ಸಂಚರಿಸುವ ಕಾಲದಲ್ಲಿ  ( ಸಾಮಾನ್ಯವಾಗಿ ಡಿಸೆಂಬರ್ ೧೪ ರಿಂದ ಜನವರಿ ೧೪ ರ ವರೆಗೆ ) ಯಾವುದೇ ಹೊಸ ಯೋಜನೆಗಳನ್ನು ಆರಂಭಿಸುವುದಿಲ್ಲಾ ಮತ್ತು ಶುಭ ಕಾರ್ಯಗಳನ್ನೂ ಮಾಡುವುದಿಲ್ಲಾ. ಈ ನಿಯಮಕ್ಕೆ ೧೨ ವರ್ಷಕ್ಕೊಮ್ಮೆ ಬರುವ ಇಂತಹ ಧನುರ್ಮಾಸ ಅಪವಾದವೇ ಎಂಬ ಬಗ್ಗೆ ವಿದ್ವಾಂಸರು ಚಿಂತಿಸಬೇಕಿದೆ.

ಗುರು ಮತ್ತು ರವಿಯ ಸಂಪೂರ್ಣ ಅನುಗ್ರಹ ನಮ್ಮೆಲ್ಲರ ಮೇಲೆ ಸದಾ ಇರಲಿ, ನಮ್ಮೆಲ್ಲರ, ನಮ್ಮ ರಾಜ್ಯದ ಹಾಗೂ  ರಾಷ್ಟ್ರದ ಪ್ರಗತಿಯಾಗಲಿ  ಎಂದು ನನ್ನ ಗುರುಗಳ ಮತ್ತು ಗುರುಮಂಡಲರೂಪಿಣಿ ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಪಾದಾರವಿಂದಗಳಲ್ಲಿ ಶ್ರದ್ಧಾ ಭಕ್ತಿ ಪೂರ್ವಕವಾಗಿ ಪ್ರಾರ್ಥನೆಯನ್ನು ಸಲ್ಲಿಸುತ್ತಾ ಈ ಲೇಖನವನ್ನು ಸಂಪನ್ನ ಗೊಳಿಸುತ್ತಿದ್ದೇನೆ.   

ಓಂ ಶಾಂತಿಃ ಶಾಂತಿಃ ಶಾಂತಿಃ

ಹಿಂದಿನ ಭಾಗದ ಕೊಂಡಿಗಳು:

ಭಾಗ 1ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ

ಭಾಗ 2ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 2

ಸಕಾರಾತ್ಮಕ ಉಪಯೋಗಡಿಸೆಂಬರ್ 26, ಗ್ರಹಣ- ಸಕಾರಾತ್ಮಕ ಉಪಯೋಗ

3 Comments on “ಡಿಸೆಂಬರ್ 26, ಸೂರ್ಯಗ್ರಹಣ: ಒಂದು ವಿಶ್ಲೇಷಣೆ ಭಾಗ 3

  1. Pingback: ಡಿಸೆಂಬರ್ 26, ಸೂರ್ಯಗ್ರಹಣ-ಒಂದು ವಿಶ್ಲೇಷಣೆ – Atmanandanatha

  2. Pingback: ಡಿಸೆಂಬರ್ 26, ಸೂರ್ಯಗ್ರಹಣ-ಒಂದು ವಿಶ್ಲೇಷಣೆ -ಭಾಗ 2 – Atmanandanatha

  3. Pingback: ಡಿಸೆಂಬರ್ 26, ಗ್ರಹಣ- ಸಕಾರಾತ್ಮಕ ಉಪಯೋಗ – Atmanandanatha

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: