ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ
ನಗುರೋರಧಿಕಂ ನಗುರೋರಧಿಕಂ ನಗುರೋರಧಿಕಂ
ಮಂತ್ರಗಳ ಉಗಮ
ಶಿವನ ಢಮರುವಿನಿಂದ ಹೊರಟ 14 ನಾದಗಳಿಂದ ಅಕ್ಷರಗಳು ಉದ್ಭವ ಆಗುತ್ತವೆ. ಇದೇ ’ಮಾಹೇಶ್ವರ ಸೂತ್ರ” ಈ 14 ನಾದಗಳಿಂದ ಜಗತ್ತಿನ ಮೊದಲ ಭಾಷೆ ಸಂಸ್ಕೃತವು ಹುಟ್ಟಿದ್ದಷ್ಟೇ ಅಲ್ಲದೆ, ಇವು 14 ತತ್ವಗಳನ್ನೂ ಪ್ರತಿನಿಧಿಸುತ್ತದೆ. 5 ಪಂಚಭೂತಗಳು, 3 ಗುಣಗಳು, 4 ಮಾನಸಿಕ ಅಂಶಗಳು ಶಿವ ಮತ್ತು ಶಕ್ತಿ ಒಟ್ಟು 14.
ಎಲ್ಲಾ ಮಂತ್ರಗಳೂ ಈ 14 ನಾದಗಳಿಂದಲೇ ಬಂದಿದ್ದು, ಶ್ರೀ ವಿದ್ಯಾ ಉಪಾಸನಾ ಮಾರ್ಗದಲ್ಲಿ ಮಾತೃಕಾ ನ್ಯಾಸಕ್ಕೆ ಒತ್ತು ನೀಡಲಾಗಿದೆ.
ಈ 14 ನಾದಗಳು ಚಾಂದ್ರಮಾನದ 14 ತಿಥಿಗಳನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. 15 ನೇ ತಿಥಿ ( ಪೌರ್ಣಮಿ ಅಥವಾ ಅಮಾವಾಸ್ಯೆ) ಶಿವನೇ ಆಗಿದೆ. 15 ನೇ ತಿಥಿಯ ಮತ್ತು 1 ನೇ ತಿಥಿಯ ಸಂಧಿ ಸಮಯವೇ 16 ನೆಯ ಷೋಡಶಿ.
ಶಿವ ತಾಂಡವದ ನಟರಾಜನ ಮೂರ್ತಿಯಲ್ಲಿ ಚಕ್ರದ 28 ಕಡ್ಡಿಗಳನ್ನು ಗುರುತಿಸಬಹುದು. (ನಾವು ಅಂಗಡಿಯಲ್ಲಿ ಕೊಳ್ಳುವ ಮೂರ್ತಿಗೆ 28 ಕಡ್ಡಿಗಳು ಇಲ್ಲದಿರಬಹುದು). ಈ 28 ಕಡ್ದಿಗಳೂ ಮತ್ತು 14 ತಿಥಿಗಳ ಪುನರಾವರ್ತನೆಯಾಗಿ ಆಗುವ 28 ಸಂಖ್ಯೆಯು ಸೃಷ್ಟಿ ಮತ್ತು ಲಯಗಳನ್ನು ಪ್ರತಿನಿಧಿಸುತ್ತದೆ. ಮಾನವನ ಅಸ್ತಿತ್ವಕ್ಕೆ ಕಾರಣವಾಗಿರುವ ಬಹು ಮುಖ್ಯವಾದ ಅಂಶ ಎಂದರೆ 28 ದಿವಸಗಳಿಗೊಮ್ಮೆ ಆಗುವ ಸ್ತ್ರೀಯರ ಮಾಸಿಕ ಋತು ಸ್ರಾವ ಎನ್ನುವುದು ಗಮನಾರ್ಹ.
ಇದನ್ನೇ ಚಿದಂಬರ ರಹಸ್ಯ ಎಂದು ಕರೆಯುವುದು. ನಟರಾಜ, ನಾದಬ್ರಹ್ಮ, ಶಬ್ಧಬ್ರಹ್ಮ ಹಾಗೆಯೇ ಮಂತ್ರಗಳೂ ಶಬ್ಧಬ್ರಹ್ಮ ಮತ್ತು ನಾದಬ್ರಹ್ಮ ಗಳೇ ಆಗಿವೆ.
ಓಂ ಶಾಂತಿಃ ಶಾಂತಿಃ ಶಾಂತಿಃ