ಸೌಂದರ್ಯಲಹರಿ: 32 ನೇ ಶ್ಲೋಕ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಶಿವಃ ಶಕ್ತಿಃ ಕಾಮಃ ಕ್ಷಿತಿರ್ ಅಥ ರವಿಃ ಶೀತ ಕಿರಣ

ಸ್ಮರೋ ಹಂಸಃ ಶಕ್ರಸ್ ತದನು ಚ ಪರಾ ಮಾರ ಹರಯಃ

ಅಮೀ ಹೃಲ್ಲೇಖಾಭಿಸ್ ತಿಸೃಭಿರ್ ಅವಸಾನೇಷು ಘಟಿತಾ

ಭಜಂತೇ ವರ್ಣಾಸ್ ತೇ ತವ ಜನನಿ ನಾಮಾ ವಯವಹತಾಮ್

ಶಿವ, ಶಕ್ತಿ, ಕಾಮ ಅಂದರೆ ಮನ್ಮಥ, ಕ್ಷಿತಿ, ಅಂದರೆ ಭೂಮಿ, ರವಿ, ಶೀತಕಿರಣ, ಚಂದ್ರ, ಸ್ಮರ, ಇದೂ ಸಹಾ ಮನ್ಮಥನೇ, ಹಂಸಃ -ಹಂಸ, ಹಂಸ ಮಂತ್ರವೂ ಹೌದು. ಶಕ್ರ, ಇಂದ್ರ, ಪರಾ -ಬ್ರಹ್ಮ, ಮಾರ, ಇದೂ ಮನ್ಮಥನೇ, ಹರಯಃ, ವಿಷ್ಣು, ಹರಯಃ ಅಂದರೆ ಹರ, ಈಶ್ವರ ಎನ್ನುವ001 ಅರ್ಥ ಆದರೂ ಶ್ರೀ ಲಕ್ಷ್ಮೀಧರ ಪಂಡಿತರು ತಮ್ಮ ಭಾಷ್ಯದಲ್ಲಿ ಹರಿ ಎಂತಲೇ ಹೇಳಿದ್ದಾರೆ. ಅಥವಾ ಮೂಲ ಮಂತ್ರದಲ್ಲಿ ಹರಯಃ ಬದಲಾಗಿ ಹರಿಃ ಅಂತಲೂ ಇದ್ದಿರಲು ಸಾಧ್ಯ.

12 ಬೀಜ ಮಂತ್ರಗಳನ್ನು ಈ 12 ಹೆಸರುಗಳಲ್ಲಿ, 3 ಗುಂಪುಗಳಾಗಿ ವಿಂಗಡಿಸಿ  ರಹಸ್ಯವಾಗಿ ಹೇಳಿದ್ದು,ಹೇ ಜನನಿ, ಈ ಮೂರು ಗುಂಪುಗಳ ಕಡೆಯಲ್ಲಿ ಹ್ರೀಂ ಬೀಜಾಕ್ಷರವನ್ನು ಸೇರಿಸಿದರೆ ಅದು ನಿನ್ನ ಪಂಚದಶೀ ಮಂತ್ರವಾಗುತ್ತದೆ.

ದೇವಿ ಉಪನಿಷದ್ ನ ಒಂದು ಶ್ಲೋಕ ಇದೇ ಪಂಚದಶೀ ಮಂತ್ರವನ್ನು ರಹಸ್ಯವಾಗಿ ಹೀಗೆ ಹೇಳಿದೆ.

ಕಾಮೋ ಯೋನಿಃ ಕಾಮಕಲಾ ವಜ್ರಪಾಣಿರ್ಗುಹಾ ಹಸಾ ।

ಮಾತರಿಶ್ವಾಭ್ರಮಿನ್ದ್ರಃ ಪುನರ್ಗುಹಾ ಸಕಲಾ ಮಾಯಯಾ ಚ

ಪುನಃ ಕೋಶಾ ವಿಶ್ವಮಾತಾ ದಿವಿ ದ್ಯೋಮ್

ಕಾಮ, ಯೋನಿ, ಕಮಲಾ, ವಜ್ರಪಾಣಿಃ, ಗುಹ, ಹ್ರೀಂ, ಹ, ಸ, ಮಾತರಿಶ್ವ, ಅಭ್ರಮ್, ಇಂದ್ರ, ಪುನರ್ಗುಹ, ಸ, ಕ, ಲ, ಕೊನೆಯಲ್ಲಿ ಮಾಯಾಬೀಜ.

ಶ್ರೀ ವಿದ್ಯಾ ಪಂಚದಶೀ ಮಂತ್ರಗಳಲ್ಲಿ 15 ವಿವಿಧ ಬಗೆಯ ಮಂತ್ರಗಳಿದ್ದು, ಅವುಗಳನ್ನು ವಿಷ್ಣು, ಶಿವ, ಬ್ರಹ್ಮ, ಮನು, ಚಂದ್ರ, ಕುಬೇರ, ಲೋಪಾಮುದ್ರ, ಅಗಸ್ತ್ಯ, ನಂದಿಕೇಶ್ವರ, ಸೂರ್ಯ, ಸ್ಕಂದ, ಮನ್ಮಥ, ದೂರ್ವಾಸರ ಎರಡು ಮಂತ್ರಗಳು , ಹಾಗೂ ಯಮ, ಈ ಹೆಸರುಗಳಲ್ಲಿ ೧೫ ವಿವಿಧ ಬಗೆಗಳನ್ನು  ಗುರುತಿಸಲಾಗಿದೆ. ಲಲಿತಾ ಸಹಸ್ರನಾಮದ 238, 239 ನೇ ನಾಮಗಳು ಮನು ವಿದ್ಯಾ, ಚಂದ್ರ ವಿದ್ಯಾ ಎಂದು ಹೇಳಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಪಂಚದಶೀ  ಮಂತ್ರಗಳ ಭೇದಗಳ ಬಗ್ಗೆ ಹಲವು ವಿವಿಧ ಅಬಿಪ್ರಾಯಗಳೂ ಇವೆ.  ಷೋಡಶೀ ಮಂತ್ರದಲ್ಲಿಯೂ ಸಹಾ ವಿವಿಧ ಬಗೆಯ ಮಂತ್ರಗಳನ್ನು ಗುರುತಿಸಲಾಗಿದೆ.

ಮಹರ್ಷಿ ದೂರ್ವಾಸರು 61 ಶ್ಲೋಕಗಳಿರುವ ಶ್ರೀ ಶಕ್ತಿಮಹಿಮ್ನಾ ಸ್ತೋತ್ರವನ್ನು ರಚಿಸಿದ್ದು ಈ ಸ್ತೋತ್ರವು ಸೌಂದರ್ಯ ಲಹರಿಯಂತೆಯೇ, ಕುಂಡಲಿನಿ, ವಿವಿಧ ಬಗೆಯ ಧ್ಯಾನಗಳು, ಶಕ್ತಿಪೂಜೆಯ ವಿವರಗಳು ಮತ್ತು ದೇವಿಯ ರೂಪ ವರ್ಣನೆಯನ್ನು ಒಳಗೊಂಡಿದೆ. ಈ ಸ್ತೋತ್ರವನ್ನು ತ್ರಿಪುರಾಮಹಿಮ್ನಾ ಸ್ತೋತ್ರವೆಂತಲೂ ಕರೆಯಲಾಗಿದೆ. ಮಹರ್ಷಿ ದೂರ್ವಾಸರ ಈ ಸ್ತೋತ್ರವು ಸೌಂದರ್ಯ ಲಹರಿಯಷ್ಟು ಜನಪ್ರಿಯವಾಗಿಲ್ಲಾ ಏಕೆ ಎಂದು ತಿಳಿಯುತ್ತಿಲ್ಲಾ.

ಕ್ರೋಧಭಟ್ಟಾರಿಕ ಎಂಬ ಹೆಸರಿನಿಂದಲೂ ಕರೆಯಲ್ಪಡುವ ಮಹರ್ಷಿ ದೂರ್ವಾಸರು ಕಾಮಾಕ್ಷಿಯನ್ನು ಕಾಂಚೀಪುರದಲ್ಲಿ ಪ್ರತಿಷ್ಠಾಪಿಸಿದರು ಎಂದು ನಂಬಲಾಗಿದೆ. ಹಾಗೆಯೇ ಚಿಂತಾಮಣಿ ಕಲ್ಪಂ ಎಂಬ ಹೆಸರಿನ ಶ್ರೀ ಚಕ್ರ ನವಾವರಣ ಪೂಜೆಯ ಕೈಪಿಡಿಯನ್ನು ಮಹರ್ಷಿ ದೂರ್ವಾಸರೇ ರಚಿಸಿದ್ದು, ಈಗಲೂ ಕಾಮಾಕ್ಷಿಯ ಸನ್ನಿಧಾನದಲ್ಲಿ ಈ ಕೈಪಿಡಿಯಲ್ಲಿ ಹೇಳಿರುವಂತೆಯೇ ನವಾವರಣ ಪೂಜೆಯನ್ನು ಆಚರಿಸಲಾಗುತ್ತಿದೆ. ಮಹರ್ಷಿ ದೂರ್ವಾಸರ ಇನ್ನೊಂದು ರಚನೆ ಲಲಿತಾ ಸ್ತವರತ್ನ ಎಂಬ 214 ಶ್ಲೋಕಗಳ ಮಾಲಾಮಂತ್ರ.

ಮಹರ್ಷಿ ದೂರ್ವಾಸರು ತಮ್ಮ ಶ್ರೀ ಶಕ್ತಿಮಹಿಮ್ನಾ ಸ್ತೋತ್ರದ 17 ನೇಯ ಶ್ಲೋಕದಲ್ಲಿ ಪಂಚದಶೀ ಮಂತ್ರದ ವ್ಯುತ್ಪತ್ತಿಯನ್ನು ಹೀಗೆ ಹೇಳಿದ್ದಾರೆ;

ಬ್ರಹ್ಮಾ ಯೋನಿ-ರಮಾ-ಸುರೇಶ್ವರ-ಸುಹೃಲ್ಲ್ರೇಖಭಿರುಕ್ತ್ತೈಸ್ತಥಾ

ಮಾರ್ತಾಂಡೇನ್ದು-ಮನೋಜ-ಹಂಸ-ವಸುಧಾ-ಮಾಯಾಭಿರುತ್ತಸಿತೈಃ ।

ಸೋಮಾಮ್ಭು-ಕ್ಷಿತಿ-ಶಕ್ತಿಭಿಃ ಪ್ರಕಟಿತೈ-ರ್ಬಾಣಾಂಗವೇದೈಃ ಕ್ರಮಾದ್

ವರ್ಣೈಃ ಶ್ರೀಶಿವದೇಶಿಕೇನ ವಿದಿತಾಂ ವಿದ್ಯಾಂ ತವಾಮ್ಬಾಶ್ರಯೇ

ಬ್ರಹ್ಮಾ, ಯೋನಿಃ ರಮಾ, ಸುರೇಶ್ವರ, ಹೃಲ್ಲೇಖ, ಮಾರ್ತಾಂಡ, ಇಂದು, ಮನೋಜ, ಹಂಸ, ವಸುಧಾ, ಮಾಯಾ, ಸೋಮ, ಅಂಬು, ಕ್ಷಿತಿ, ಶಕ್ತಿ ಇವು ಪಂಚದಶೀ ಮಂತ್ರದ 15 ಬೀಜ ಮಂತ್ರಗಳು.  ಈ ವಿದ್ಯೆಯು ಪ್ರಪಂಚದ ಗುರುವಾದ ಶಿವನಿಗೆ ತಿಳಿದಿದೆ. ಅಂಬಾ, ನಾನು ನಿನಗೆ ಶರಣಾಗಿದ್ದೇನೆ.

ಕ್ರೋಧೀಶಃ ಶ್ರೀಕಂಠಾರೂಢಃ ಕೋಣತ್ರಯಂ ಲಕ್ಷ್ಮೀಃ

ಮಾಂಸಮನುತ್ತರರೂಢಂ ವಾಗ್ಭವ ಕೂಟಂ ಪ್ರಕೀರ್ತಿತಂ

ಶಿವಹಂಸಬ್ರಹ್ಮವಿಯಚ್ಛಕ್ರಾಃ ಪ್ರತ್ಯೇಕಂಕ್ಷರಾರೂಢಾಃ

ದ್ವಿತೀಯಕಂ ಕೂಟಂ ಕತಿಥಂ ತತ್ ಕಾಮರಾಜ ರೂಪಂ

ಶಿವತೋ ವಿಯತೋ ಮುಕ್ತಂ ತೃತೀಯಮಿದಮೇವ ಶಕ್ತಿಕೂಟಾಖ್ಯಮ್

ಹೃಲ್ಲೇಖಾನಾಂ ತ್ರಿತಯಂ ಕೂಟತ್ರಿತಯೇ sಪಿ ಯೋಜ್ಯಮನ್ತೇ ಸ್ಯಾತ್

ಶ್ರೀ ಭಾಸ್ಕರರಾಯರ ವಾರಿವಾಸ್ಯ ರಹಸ್ಯದ ಮೊದಲನೇ ಅಧ್ಯಾಯದ 9, 10, 11 ನೇ ಶ್ಲೋಕಗಳೂ ಸಹಾ ಪಂಚದಶೀ ಮಂತ್ರದ ವ್ಯುತ್ಪತ್ತಿಯನ್ನು ಹೇಳುತ್ತವೆ. ಇಲ್ಲಿ ಮೂರೂ ಕೂಟಗಳನ್ನು ಬೇರೆ ಬೇರೆ ಯಾಗಿ ಹೇಳಿರುವುದು ವಿಶೇಷ.

ಕ್ರೋಧೀಶ, ಅದರೊಂದಿಗೆ ಶ್ರೀಕಂಠ, ಕೋನತ್ರಯ ಅಂದರೆ ತ್ರಿಕೋಣ, ಲಕ್ಷ್ಮೀ, ಮಾಂಸ ಅದರೊಂದಿಗೆ ಅನುತ್ತರ ಸೇರಿದರೆ ಮೊದಲ ಗುಂಪು ವಾಗ್ಭವಕೂಟ

ಶಿವ, ಹಂಸ, ಬ್ರಹ್ಮನ್, ವಿಯತ್, ಶಕ್ರ, ಇವೆಲ್ಲದರ ಜತೆಯಲ್ಲಿ ಅಕ್ಷರ ಸೇರಿ ಕಾಮರಾಜ ಕೂಟ ವೆಂಬ ಎರಡನೇ ಗುಂಪು ಆಗುತ್ತದೆ.

ಮೇಲೆ ಹೇಳಿದ ಗುಂಪಿನಿಂದ ಶಿವ ಮತ್ತು ವಿಯತ್ ಅನ್ನು ತೆಗೆದರೆ ಅದು ಶಕ್ತಿಕೂಟ ಎಂಬ ಮೂರನೇ ಗುಂಪು ಆಗುತ್ತದೆ.  ಇದೆಲ್ಲಾ ಆದಮೇಲೆ ಒಂದೊಂದು ಕೂಟದ ಕೊನೆಯಲ್ಲಿ ಹೃಲ್ಲೇಖವನ್ನು ಸೇರಿಸಬೇಕು.

ಸೌಂದರ್ಯ ಲಹರಿಯ 32 ನೆಯ ಮಂತ್ರ, ಶ್ರೀ ದೇವೀ ಉಪನಿಷದ್ ನ 9 ನೇ ಶ್ಲೋಕ, ಶ್ರೀ ಶಕ್ತಿಮಹಿಮ್ನಾ ಸ್ತೋತ್ರದ 17 ನೆಯ ಶ್ಲೋಕ, ಶ್ರೀ ಭಾಸ್ಕರರಾಯರ ವಾರಿವಾಸ್ಯ ರಹಸ್ಯ ತಮ್ಮದೇ ಆದ ರೀತಿಯಲ್ಲಿ ಸಂಕೇತಗಳ ಮೂಲಕ ಶ್ರೀ ವಿದ್ಯಾ ಪಂಚದಶೀ ಮಂತ್ರದ ವ್ಯುತ್ಪತ್ತಿಯನ್ನು  ಹೇಳಿವೆ ಎಂದು ನಮಗೆ ಈಗ ತಿಳಿದಿದೆ.  ಶ್ರೀ ಲಲಿತಾ ತ್ರಿಶತಿನಾಮ ದಲ್ಲೂ ಶ್ರೀವಿದ್ಯಾ ಪಂಚದಶೀ ಮಂತ್ರವು ಅಡಗಿದೆ. ತ್ರಿಶತಿಯ 300 ನಾಮಗಳನ್ನು 20 ರಿಂದ ಭಾಗಿಸಿದರೆ ಅದು 15 ಭಾಗವಾಗುತ್ತದೆ. ಒಂದೊಂದು ಭಾಗವು ಶ್ರೀ ವಿದ್ಯಾ ಪಂಚದಶಿಯ ಒಂದೊಂದು ಬೀಜಾಕ್ಷರವಾಗಿದೆ.

ಶ್ರೀ ವಿದ್ಯಾ ಪಂಚದಶೀ ಮಂತ್ರದ ಬೀಜಾಕ್ಷರಗಳು ಶಿವ, ಶಕ್ತಿ, ವಿಷ್ಣು, ಲಕ್ಷ್ಮಿ, ಬ್ರಹ್ಮ, ಇಂದ್ರ, ಮನ್ಮಥ, ರವಿ, ಚಂದ್ರ ಮತ್ತು ಪೃಥ್ವಿ ಗೆ ಸಂಬಂಧಿಸಿದ ಬೀಜಮಂತ್ರಗಳಾಗಿದ್ದು, ಈ ಮಂತ್ರವು ಇಡೀ ಬ್ರಹ್ಮಾಂಡವನ್ನೇ  ಒಳಗೊಂಡಿದೆ. ಹಾಗಾಗಿ ಶ್ರೀವಿದ್ಯಾ ಮಂತ್ರ ಉಪಾಸಕರಿಗೆ ಬೇರೆ ಯಾವುದೇ ಮಂತ್ರಗಳ ಅವಶ್ಯಕತೆ ಇಲ್ಲಾ.

ಶಬ್ಧದ ತರಂಗಗಳು,ಭವ್ಯವಾದ ಅನುಭವವನ್ನು ನೀಡುತ್ತವೆ ಎನ್ನುವುದನ್ನು  ಸೌಂದರ್ಯ ಲಹರಿಯ ಈ 32 ನೇ ಮಂತ್ರ ಹೇಳುತ್ತಿದೆ.  ಪ್ರಜ್ಞೆಯ ಒಂದುಗೂಡುವಿಕೆಯಲ್ಲಿ ಶಕ್ತಿಯನ್ನು ಕಾಣಬಹುದಾಗಿದೆ. ಒಂದೊಂದು ದೇವತೆಗೂ ನಿರ್ದಿಷ್ಟ ಬೀಜಾಕ್ಷರಗಳಿವೆ. ಈ ದೇವತೆಗಳು ಬೀಜಾಕ್ಷರಗಳ ಶಬ್ಧದ ಶಕ್ತಿಗಳಾಗಿದ್ದಾರೆ. ಈ ಬೀಜಾಕ್ಷರಗಳನ್ನು ಮಾತೃಕೆಗಳೆಂದು ಕರೆಯಲಾಗಿದೆ. ದೇವಿ, ಶಕ್ತಿ, ಅಂಬಾ, ಲಲಿತಾ, ಹೀಗೆ ಯಾವುದೇ ಹೆಸರಿನಿಂದ ಕರೆದರೂ ಅದು ಕಾಂತಿಯಲ್ಲದೆ ಬೇರೇನೂ ಅಲ್ಲಾ. ಈ ಕಾಂತಿಯು ಶಬ್ಧದಲ್ಲಿಯೂ ಇದೆ. ಮಂತ್ರದಲ್ಲಿನ ಶಕ್ತಿಯು  ಮಂತ್ರಕ್ಕೆ ತೇಜಸ್ಸನ್ನು ನೀಡುತ್ತದೆ. ಯಾವ  ಕಾಂತಿಯುತವಾದ ಶಬ್ಧವು ನಮ್ಮೊಳಗೆ ಬೆಳಕಿನ ಅಂದರೆ  ಪ್ರಕಾಶದ, ಅರಿವಿನ ಅನುಭವವನ್ನ್ನು ಪ್ರಚೋದಿಸುತ್ತದೆಯೋ ಅದನ್ನು ಮಾತೃಕೆ ಎಂದು ಕರೆಯಲಾಗಿದೆ. ಶಬ್ಧದ  ಸೃಷ್ಟಿಯ ಶಕ್ತಿಯೇ ಮಾತೃಕೆ ಆಗಿದೆ.

ಮಾತೃಕೆಯು ಅತೀಂದ್ರಿಯ ಶಬ್ಧವಾಗಿ, ಶುದ್ಧ ಶಕ್ತಿಯಾಗಿದ್ದು, ಪ್ರಕಾಶವೂ ವಿಮರ್ಶವೂ ಆಗಿದೆ. ಇದು ಪ್ರಕಾಶವೂ ವಿಮರ್ಶವೂ ಆಗಿರುವುದರಿಂದ ಅದು ಎಲ್ಲಾ ವಿದ್ಯೆಗಳ, ಅಂದರೆ ಜ್ಞಾನದ ಮೂಲವಾಗಿದೆ, ಹಾಗಾಗಿ ಮಂತ್ರಸಾಧನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾತೃಕವು ಆಂತರಿಕ ಭಾವನೆಯನ್ನು ಹೊಂದುವುದರಿಂದ ಏಕಾಗ್ರತೆಗೆ ಸಹಕಾರಿಯಾಗುತ್ತದೆ.

ಮಂತ್ರ ಎಂದರೆ ದೈವತ್ವವನ್ನು ಕುರಿತು ಮಾಡುವ ಸ್ತೋತ್ರವೋ, ಪ್ರಾರ್ಥನೆಯೋ ಅಲ್ಲ.  ರೂಪವನ್ನೇ ಹೊಂದಿರದ ದೈವತ್ವ ಕ್ಕೆ ರೂಪವನ್ನು ಕಲ್ಪಿಸಿದರೆ ಅದು ಒಂದು ಶಿಲ್ಪವಾಗಬಹುದು, ಒಂದು ಚಿತ್ರಪಟವಾಗಬಹುದು, ಕಳಸದಲ್ಲಿನ ಶುದ್ಧ ಜಲ ಆಗಬಹುದು, ಜ್ಯಾಮಿತಿಯ ರೇಖಾಚಿತ್ರ ಅಂದರೆ ಯಂತ್ರ ಅಥವಾ ಚಕ್ರ ಆಗಬಹುದು ಅಥವಾ ಮಂತ್ರದಿಂದ ಹೊರಡುವ ಶಬ್ಧವೂ ಆಗಬಹುದು. ಹಾಗಾಗಿ ಮಂತ್ರದ ಶಬ್ಧವೇ ದೇವರು

ಈಗ ಶ್ರೀ ವಿದ್ಯಾ ಪಂಚದಶೀ ಮಂತ್ರದ ಬಗ್ಗೆ ಸಾಧ್ಯವಾದಷ್ಟು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ. ಈ ಮಂತ್ರದ ಮೊದಲ 4 ಬೀಜಾಕ್ಷರಗಳು ಶ್ರೀ ತ್ರಿಪುರಸುಂದರಿಯ ಕ್ರಿಯಾಶಕ್ತಿಯನ್ನು ಸೂಚಿಸುವ ಮೂಲಕ  ಎಲ್ಲವನ್ನೂ ಮಾಡುವ ಶಕ್ತಿಯನ್ನು ಅನುಗ್ರಹಿಸುತ್ತದೆ. ಈ ಬೀಜಾಕ್ಷರಗಳು ನಮ್ಮ ಜಾಗೃತಾವಸ್ಥೆಗೆ ಸಂಬಂಧಿಸಿದ್ದು ತಾಮಸ ಗುಣವನ್ನು ಸೂಚಿಸುತ್ತದೆ. ಈ ಜಾಗೃತಾವಸ್ಥೆಯ ಪ್ರಜ್ಞೆಯು  ಬ್ರಹ್ಮಾಂಡದ ಪ್ರಜ್ಞೆಯ ವೈಶ್ವಾನರದ  ಪ್ರತಿರೂಪವಾಗಿದೆ. ವೈಶ್ವಾನರದ ಬಗ್ಗೆ ನಾವು ಈಗಾಗಲೇ 27 ನೆಯ ಮಂತ್ರದ ಬಗ್ಗೆ ಹೇಳುವಾಗ ಹಾಗೂ

ಮಾಂಡೂಕ್ಯ ಉಪನಿಷದ್ ಬಗ್ಗೆ ಹೇಳುವಾಗ ತಿಳಿದುಕೊಂಡಿದ್ದು ಅದರ ಪುನರಾವರ್ತನೆ ಬೇಕಿಲ್ಲಾ. ಈ 4 ಬೀಜಾಕ್ಷರಗಳಿಗೆ ಹ್ರೀಂ ಎಂಬ ಬೀಜಾಕ್ಷರ ಸೇರಿಸಿದರೆ 5 ಅಕ್ಷರದ ವಾಗ್ಭವ ಕೂಟ ಎನಿಸಿಕೊಂಡು ಇದು  ತ್ರಿಪುರಸುಂದರಿಯ ಶರೀರದ  ಕತ್ತಿನಿಂದ ಆರಂಭ ಆಗಿ ಶಿರದ ಮೇಲಿನ ಭಾಗದವರೆಗಿನ ಶಬ್ಧ ರೂಪವಾಗಿದೆ.. ವಾಗ್ಭವಕೂಟೈಕ ಸ್ವರೂಪ ಮುಖ ಪಂಕಜಾ ಎಂಬ ಶ್ರೀ ಲಲಿತಾಸಹಸ್ರನಾಮದ ನಾಮವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕೂಟದ ಉಚ್ಚಾರಣೆಗೆ ತೆಗೆದುಕೊಳ್ಳಬೇಕಾದ ಸಮಯ 11 ಮಾತ್ರೆಗಳು -ಒಂದು ಮಾತ್ರೆ ಅಂದರೆ ಕಣ್ಣು ಮಿಟುಕಿಸುವಷ್ಟು ಸಮಯ. ಈ ವಾಗ್ಭವ ಕೂಟದ ಮಂತ್ರವು ಅಪಾರವಾದ ಕಲಿಯುವ  ಶಕ್ತಿಯನ್ನು, ಅಪಾರ ಬುದ್ಧಿಶಕ್ತಿಯನ್ನೂ ಮತ್ತು ವಾಕ್ ಶಕ್ತಿಯನ್ನೂ ಅನುಗ್ರಹಿಸುತ್ತದೆ.

ಪಂಚದಶೀ ಮಂತ್ರದ ಎರಡನೇ ಗುಂಪಿನ 5 ಬೀಜಾಕ್ಷರಗಳು ಶ್ರೀ ತ್ರಿಪುರಸುಂದರಿಯ ಇಚ್ಛಾಶಕ್ತಿಯನ್ನು ಸೂಚಿಸುವ ಮೂಲಕ ನಮ್ಮ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುವ ಮಾನಸಿಕ  ಶಕ್ತಿಯನ್ನು ಅನುಗ್ರಹಿಸುತ್ತದೆ. ಈ ಬೀಜಾಕ್ಷರಗಳು ನಮ್ಮ ಸ್ವಪ್ನಾವಸ್ಥೆಗೆ ಸಂಬಂಧಿಸಿದ್ದು ರಾಜಸ ಗುಣವನ್ನು ಸೂಚಿಸುತ್ತದೆ. ಈ ಸ್ವಪ್ನಾವಸ್ಥೆಯ ಪ್ರಜ್ಞೆಯು  ಬ್ರಹ್ಮಾಂಡದ ಪ್ರಜ್ಞೆಯ ತೈಜಸದ  ಪ್ರತಿರೂಪವಾಗಿದೆ. ತೈಜಸದ ಬಗ್ಗೆ, ಮಾಂಡೂಕ್ಯ ಉಪನಿಷದ್ ಬಗ್ಗೆ ಹೇಳುವಾಗ ತಿಳಿದುಕೊಂಡಿದ್ದು ಅದರ ಪುನರಾವರ್ತನೆ ಬೇಕಿಲ್ಲಾ. ಈ 5 ಬೀಜಾಕ್ಷರಗಳಿಗೆ ಹ್ರೀಂ ಎಂಬ ಬೀಜಾಕ್ಷರ ಸೇರಿಸಿದರೆ 6 ಅಕ್ಷರದ ಕಾಮರಾಜ ಕೂಟ, ಕಾಮಕಲಾ ಕೂಟ  ಅಥವಾ ಮಧ್ಯ  ಕೂಟ ಎನಿಸಿಕೊಂಡು ಇದು ತ್ರಿಪುರಸುಂದರಿಯ ಶರೀರದ  ಕತ್ತಿನ ಕೆಳಭಾಗದಿಂದ ಕಟಿಯ ಭಾಗದವರೆಗಿನ ಶಬ್ಧರೂಪವಾಗಿದೆ.  ಕಂಠಾಧಃ ಕಟಿ ಪರ್ಯಂತ ಮಧ್ಯಕೂಟ ಸ್ವರೂಪಿಣಿ  ಎಂಬ ಶ್ರೀ ಲಲಿತಾಸಹಸ್ರನಾಮದ ನಾಮವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕೂಟದ ಉಚ್ಚಾರಣೆಗೆ ತೆಗೆದುಕೊಳ್ಳಬೇಕಾದ ಸಮಯ 11.5 ಮಾತ್ರೆಗಳು -ಒಂದು ಮಾತ್ರೆ ಅಂದರೆ ಕಣ್ಣು ಮಿಟುಕಿಸುವಷ್ಟು ಸಮಯ..

ಈ ಮಧ್ಯಕೂಟದ ಮಂತ್ರವು ನಮ್ಮ ಎಲ್ಲಾ ಆಸೆಗಳನ್ನು ಪೂರೈಸಿಕೊಳ್ಳುವ ಶಕ್ತಿಯನ್ನು ಅನುಗ್ರಹಿಸುತ್ತದೆ.

ಪಂಚದಶೀ ಮಂತ್ರದ ಮೂರನೇ ಗುಂಪಿನ 3 ಬೀಜಾಕ್ಷರಗಳು ಶ್ರೀ ತ್ರಿಪುರಸುಂದರಿಯ ಜ್ಞಾನಶಕ್ತಿಯನ್ನು ಸೂಚಿಸುವ ಮೂಲಕ ಎಲ್ಲ ಕಡೆಯಿಂದ ಎಲ್ಲ ರೀತಿಯ ಜ್ಞಾನವನ್ನು  ಪಡೆದುಕೊಳ್ಳುವ  ಶಕ್ತಿಯನ್ನು ನಮಗೆ ಅನುಗ್ರಹಿಸುತ್ತದೆ. ಈ ಬೀಜಾಕ್ಷರಗಳು ನಮ್ಮ ಸುಷುಪ್ತಾವಸ್ಥೆಗೆ ಅಂದರೆ ಸ್ವಪ್ನವಿಲ್ಲದ ಆಳವಾದ ನಿದ್ರೆಗೆ ಸಂಬಂಧಿಸಿದ್ದು ಸಾತ್ವಿಕ ಗುಣವನ್ನು ಸೂಚಿಸುತ್ತದೆ. ಈ ಸುಷುಪ್ತಾವಸ್ಥೆಯ ಪ್ರಜ್ಞೆಯು  ಬ್ರಹ್ಮಾಂಡದ ಪ್ರಜ್ಞೆಯ  ಪ್ರತಿರೂಪವಾಗಿದೆ. ಪ್ರಜ್ಞೆಯ ಬಗ್ಗೆ ಸಹಾ ಮಾಂಡೂಕ್ಯ ಉಪನಿಷದ್ ಬಗ್ಗೆ ಹೇಳುವಾಗ ತಿಳಿದುಕೊಂಡಿದ್ದು ಅದರ ಪುನರಾವರ್ತನೆ ಬೇಕಿಲ್ಲಾ. ಈ ೩ ಬೀಜಾಕ್ಷರಗಳಿಗೆ ಹ್ರೀಂ ಎಂಬ ಬೀಜಾಕ್ಷರ ಸೇರಿಸಿದರೆ ೪ ಅಕ್ಷರದ ಶಕ್ತಿ ಕೂಟ ಎನಿಸಿಕೊಂಡು   ತ್ರಿಪುರಸುಂದರಿಯ ಶರೀರದ ಕಟಿಯ ಕೆಳಗಿನ ಭಾಗದ ಶಬ್ಧರೂಪವಾಗಿದೆ.  ಶಕ್ತಿಕೂಟೈಕತಾಪನ್ನ ಕಟ್ಯಧೋ ಭಾಗಧಾರಿಣೀ  ಎಂಬ ಶ್ರೀ ಲಲಿತಾಸಹಸ್ರನಾಮದ ನಾಮವನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಈ ಕೂಟದ ಉಚ್ಛಾರಣೆಗೆ ತೆಗೆದುಕೊಳ್ಳಬೇಕಾದ ಸಮಯ 8.5  ಮಾತ್ರೆಗಳು. ಈ ಶಕ್ತಿಕೂಟದ ಮಂತ್ರವು ನಮ್ಮ ಜೀವನದಲ್ಲಿನ ಎಲ್ಲಾ  ಗುರಿಗಳನ್ನು  ತಲುಪುವ    ಶಕ್ತಿಯನ್ನು ಅನುಗ್ರಹಿಸುತ್ತದೆ.

ಮೊದಲನೇ ಕೂಟವು, ಅಗ್ನಿಗೂ, ಎರಡನೆಯ ಕೂಟವು ರವಿಗೂ ಮೂರನೆಯ ಕೂಟವು ಸೋಮ ಅಥವಾ ಚಂದ್ರನಿಗೆ ಸಂಬಂಧಿಸಿದೆ.

ಒಂದು ಬಾರಿ ಪಂಚದಶೀ ಮಂತ್ರವನ್ನು ಹೇಳುವುದೂ ಮತ್ತು ಮೂರು ಬಾರಿ ಪೂರ್ಣ ಗಾಯತ್ರಿ ಮಂತ್ರವನ್ನು ಹೇಳುವುದು ಎರಡೂ ಒಂದೇ ಎಂದು ತಂತ್ರ ಶಾಸ್ತ್ರಗಳು ಹೇಳಿವೆ.

ಪಂಚದಶಿಯ ಮೂರೂ ಕೂಟಗಳನ್ನು 31 ಮಾತ್ರೆಗಳ ಸಮಯದಲ್ಲಿ ಹೇಳಬೇಕು. ಕೂಟಗಳಮಧ್ಯೆ ಸಮಯ ನೀಡದೆ ಹೇಳುವುದಾದರೆ 29 ಮಾತ್ರೆಗಳ ಸಮಯದಲ್ಲಿ ಹೇಳಬೇಕು. ಮಾನಸಿಕ ಜಪ ಮಾಡುವಾಗ ಈ ಸಮಯದ ಗಣನೆ ಅವಶ್ಯವಿಲ್ಲಾ. ಒಂದು ಮುಖ್ಯವಾದ ವಿಷಯ ಅಂದರೆ ಹ್ರೀಂ ಬೀಜವು ಮಾಯಾ ಬೀಜ ಎನಿಸಿಕೊಂಡಿದ್ದು ಇದು 12 ಅಕ್ಷರಗಳ ಒಂದು ಸಂಯುಕ್ತಾಕ್ಷರ ಆಗಿದೆ. ಹ, ರ ಈ ಬಿಂದು, ಅರ್ಧಚಂದ್ರ, ನಾದ, ನಾದಾಂತ, ಶಕ್ತಿ, ವ್ಯಾಪಿಕೆ, ಸಮಾನ ಮತ್ತು ಉನ್ಮನೀ.

ನಮ್ಮ ಜಾಗೃತ, ಸ್ವಪ್ನ ಮತ್ತು ಸುಷುಪ್ತಾ ಅವಸ್ಥೆಯು ಹೇಗೆ ಪಂಚದಶೀ ಮಂತ್ರದ ಮೂರು ಕೂಟಗಳಿಗೆ ಸಂಬಂಧ ಹೊಂದಿದೆ ಮತ್ತು ಈ ಮೂರು ಕೂಟಗಳಿಂದ ಹೊರಡುವ ಶಬ್ಧವು ಬ್ರಹ್ಮಾಂಡದ ಮೂರು ಹಂತದ ಪ್ರಜ್ಞೆಗಳಿಗೆ ಅಂದರೆ, ವೈಶ್ವಾನರ, ತೈಜಸ ಮತ್ತು ಪ್ರಜ್ಞಾ ಎಂಬ ಪ್ರಜ್ಞೆಗಳಿಗೆ ಹೇಗೆ  ಸಂಬಂಧ ಹೊಂದಿದೆ ಎಂಬುದು ನಮಗೆ ಈಗ ಅರ್ಥ ಆಗಿದೆ. ಈ ಮೂರು ಹಂತದ ಪ್ರಜ್ಜೆ ಅಲ್ಲದೆ ಇನ್ನೊಂದು ಬಹು ಮುಖ್ಯವಾದ ಪ್ರಜ್ಞೆಯ ಹಂತ ಇದೆ ಅದುವೇ “ಅತ್ಮ” ನಾನು ಎನ್ನುವ ಪ್ರಜ್ಞೆ ಇದು ನಾಲ್ಕನೆಯ ಅಥವಾ ತುರಿಯಾ ಅವಸ್ಥೆ ಅದು ನಾಲ್ಕನೇ ಕೂಟದಿಂದ ಹೊರಡುವ ಶಬ್ಧದೊಂದಿಗೆ ಅರಿವಾಗುವಂಥಾದ್ದು. ಪಂಚದಶಿಯ ಮೂರು ಕೂಟಗಳಿಗೆ ಈ ನಾಲ್ಕನೆಯ ಕೂಟ ಸೇರಿದರೆ ಅದೇ ಷೋಢಶಿ.

ವೈಶ್ವಾನರ, ತೈಜಸ, ಪ್ರಜ್ಞಾ ಮತ್ತು ಆತ್ಮ ವು ನಾನು ಎಂಬುವ ಪ್ರಜ್ಞೆಗಳ ಬಗ್ಗೆ ಮಾಂಡುಕ್ಯ ಉಪನಿಷದ್ ವಿವರಿಸಿದೆ. ಶ್ರೀ ಶಂಕರ ಭಗವತ್ಪಾದರ ಮನೀಷಾ ಪಂಚಕಕ್ಕೆ ವಿವರಣೆ ನೀಡುವಾಗ ನಾನು ಮಾಂಡೂಕ್ಯ ಉಪನಿಷದ್ ನ ಈ ಶ್ಲೋಕಗಳನ್ನು ಪ್ರಸ್ತಾಪಿಸಿದ್ದು, ಆಸಕ್ತರು ಅದನ್ನು ನನ್ನ ಯುಟ್ಯುಬ ಚಾನಲ್ ನ ಮಾನೀಷಾ ಪಂಚಕ ಶೀರ್ಷಿಕೆಯ ವಿಡಿಯೋ ದಲ್ಲಿ ನೋಡಬಹುದು. ಈ ವಿಡಿಯೊ ಸುಮಾರು 2 ಘಂಟೆ 30 ನಿಮಿಷಗಳಿದ್ದು,  ಮಾಂಡುಕ್ಯ ಉಪನಿಷದ್ ನ ವಿವರಣೆ 1 ಘಂಟೆ 36 ನಿಮಿಷದ ನಂತರ ಆರಂಭವಾಗಿದೆ.

ಈಗ ನಾಲ್ಕನೆಯ ಕೂಟ ಯಾವುದು ಎಂದು ನೋಡೋಣ. ಪಂಚದಶಿಯ ಮೂರು ಕೂಟಗಳ ನಂತರ ಶ್ರೀಂ ಸೇರಿಸಿದರೆ ಅದೇ ನಾಲ್ಕನೇ ಕೂಟವಾಗಿ ಇಡೀ ಮಂತ್ರವು ಷೋಢಶೀ ಎಂದು ಕರೆಯಲ್ಪಟ್ಟಿದೆ.  ಈ ಕೂಟವನ್ನು  ಚಂದ್ರಕಲಾ ಎಂದು ಹೇಳಲಾಗಿದೆ. ಈ ಶ್ರೀಂ ಬೀಜದಿಂದಲೇ ಶ್ರೀ ವಿದ್ಯಾ ಎನ್ನುವ ಬ್ರಹ್ಮವಿದ್ಯೆಯನ್ನು ಹೇಳಿರುವುದು. ಷೋಡಶೀ ಮಂತ್ರಗಳಲ್ಲಿ ಹಲವು ವಿಧಗಳು ಇದ್ದು, ಮೂರು ವಿಧಗಳು ಹೆಚ್ಚು ಪ್ರಸ್ತುತವಾಗಿವೆ.

ಇದಲ್ಲದೆ ಮಹಾಷೋಡಶೀ ಎಂಬ ವಿದ್ಯೆಯೂ ಇದ್ದು ರುದ್ರಯಾಮಳದ ಶ್ರೀ ತ್ರೈಲೋಕ್ಯ ಮೋಹನ ಕವಚವು 12 ವಿವಿಧ ಬಗೆಯ ಮಹಾಷೋಡಶೀ ವಿದ್ಯೆಗಳನ್ನು ಹೇಳಿದೆ.

 ಸೌಂದರ್ಯ ಲಹರಿಯ 32 ನೆಯ ಮಂತ್ರದ ವಿವರಣೆಯನ್ನು ಸಂಪನ್ನ ಗೊಳಿಸುವ ಮೊದಲು ಈ ಮಂತ್ರದ ಜಪದಿಂದ ಸಿಗುವ ಫಲಗಳನ್ನು ತಿಳಿದುಕೊಳ್ಳೋಣ.  ಈ ಮಂತ್ರದ ಯಂತ್ರವನ್ನು ಚಿನ್ನದ ತಗಡಿನಲ್ಲಿ ಬರೆದು ದಿವಸಕ್ಕೆ 1000 ಜಪದಂತೆ 45 ದಿನ ಅನಾಹತ ಚಕ್ರದಲ್ಲಿ ಜಪಿಸಿದರೆ ರಸವಿದ್ಯೆ ಮತ್ತು ಅದಕ್ಕೆ ಸಂಬಂಧಿಸಿದ ವಿದ್ಯೆಗಳಲ್ಲಿ ಪರಿಣತಿ ಹೊಂದಬಹುದು. ನೈವೆದ್ಯ ಮೊಸರನ್ನ ಮತ್ತು ಉದ್ದಿನ ವಡೆ.

ಇದೇ ಯಂತ್ರವನ್ನು ಹಿಂದೆ ಹೇಳಿದಂತೆಯೇ ಜಪಿಸಿ ವ್ಯಾಪಾರ ಸ್ಥಳದಲ್ಲಿ ಸ್ಥಾಪಿಸಿಸ್ದರೆ ವ್ಯಾಪಾರ ಅಭಿವೃದ್ಧಿ ಆಗುತ್ತದೆ. ಇಲ್ಲಿ ನೈವೇದ್ಯ ಸಿಹಿ ಪೊಂಗಲ್.

ಗುರುಮಂಡಲ ಸಂಪೂರ್ಣ ಅನುಗ್ರಹ ಪ್ರಾಪ್ತಿರಸ್ತು

ಯೂಟ್ಯೂಬ್ ಲಿಂಕ್:

ಓಂ ಶಾಂತಿಃ ಶಾಂತಿಃ ಶಾಂತಿಃ

7-12-2019                                                                                    ಆತ್ಮಾನಂದನಾಥ

(ಜೆ ಎಸ್ ಡಿ ಪಾಣಿ)                                              https://youtu.be/6nNRaKrnVxg

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: