ಸೌಂದರ್ಯ ಲಹರಿ : 27 ನೇ ಶ್ಲೋಕ ವಿವರಣೆ Soundarya Lahari Verse#27 explained


ಓಂ ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಜಪೋ ಜಲ್ಪಃ ಶಿಲ್ಪಂ ಸಕಲಮಪಿ ಮುದ್ರಾವಿರಚನಾ

ಗತಿಃ ಪ್ರದಕ್ಷಿಣ್ಯ ಕ್ರಮಣ( ಭ್ರಮಣ)ಮಶನಾಧ್ಯಾಹುತಿವಿಧಿಃ

ಪ್ರಣಾಮಸ್ಸಂವೇಶಸ್ಸುಖಮಖಿಲಮಾತ್ಮಾರ್ಪಣದೃಶಾ

ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್

ಸೌಂದರ್ಯ ಲಹರಿಯ ಎಲ್ಲ್ಲಾ ಮಂತ್ರಗಳಿಗೂ ಒಂದೊಂದು ಯಂತ್ರವಿದ್ದು, ಆ ಯಂತ್ರವನ್ನು ಪದ್ದತಿಯಂತೆ ರಚಿಸಿ ಆಯಾಯ ಮಂತ್ರಗಳನ್ನು ನಿಗದಿಪಡಿಸಿದ ಸಂಖ್ಯೆಯಲ್ಲಿ ನಿಗದಿ ಪಡಿಸಿದ ದಿವಸಗಳು ಜಪಿಸಿದರೆ, ವಿವಿಧ ರೀತಿಯ ಐಹಿಕ ಮತ್ತು ಆಧ್ಯಾತ್ಮಿಕ ಫಲಗಳನ್ನು ಹೇಳಲಾಗಿದೆ. ತಲೆಕೆಳಗಾಗಿ ರಚಿಸಿದ ತ್ರಿಕೋಣ ಮತ್ತು ಅದರ ಮದ್ಯೆ “ಹ್ರೀಂ’ ಬೀಜ ವನ್ನು ಚಿನ್ನ ಅಥವಾ ತಾಮ್ರದ ತಗಡಿನ ಮೇಲೆ ಬರೆದರೆ ಈ 27 ನೆಯ ಮಂತ್ರಕ್ಕೆ ಯಂತ್ರವಾಗುತ್ತದೆ. ಈ ಮಂತ್ರವನ್ನು ಪ್ರತಿದಿನ 1000  ಬಾರಿಯಂತೆ 45 ದಿವಸ ಜಪಿಸಿದರೆ ಅತ್ಮಜ್ಞಾನವನ್ನು ಹೊಂದಬಹುದು ಎಂದು ಹೇಳಲಾಗಿದೆ.

ಈಗ ಈ ಮಂತ್ರದ ಅರ್ಥ ಮತ್ತು ವಿವರಣೆಯ ಬಗ್ಗೆ ನೋಡೋಣ.

ನನ್ನ ಮಾತುಗಳೆಲ್ಲವೂ, ಮಾತುಗಳೇ ಏಕೆ ಹರಟೆಯೂ ನಿನ್ನ ಜಪವಾಗಲಿ, ಜಲ್ಪ ಅಂದರೆ ಗೊಡ್ಡು ಹರಟೆ, ವಟಗುಟ್ಟುವುದು ಎನ್ನುವ ಅರ್ಥವೂ ಇದೆ. ನನ್ನ ಕೈಗಳ ಚಲನೆ ಯೆಲ್ಲವೂ ನಿನ್ನನ್ನು ಆರಾಧಿಸುವ ಮುದ್ರೆಗಳಾಗಲಿ. ನಾನು ನಡೆಯುವು ಹಾದಿಯು ನಿನ್ನ ಪ್ರದಕ್ಷಿಣೆ ಆಗಲಿ. ನಾನು ಕುಡಿಯುವ ಪಾನೀಯಗಳು, ತಿನ್ನುವ ಆಹಾರವೆಲ್ಲವೂ ನಿನಗೆ ಅರ್ಪಿಸುವ ಹವಿಸ್ಸು ಗಳಾಗಲಿ. ನಾನು ಮಲಗುವುದು ನಿನಗೆ ನಾನು ಮಾಡುವ ಶಿರಸಾಷ್ಟಾಂಗ ನಮಸ್ಕಾರವಾಗಲಿ.  ನಾನು ಪಡೆಯುತ್ತಿರುವ ಎಲ್ಲಾ ಸುಖಭೋಗಗಳೆಲ್ಲವೂ ನಾನು ನಿನ್ನಲ್ಲಿ ಶರಣಾಗಿರುವುದರ ಪ್ರತೀಕವಾಗಲಿ.ನಾನು ಮಾಡುವ ಎಲ್ಲಾ ಕ್ರಿಯೆಗಳೂ ನಿನಗೆ ನಾನು ಸಲ್ಲಿಸುವ ಅತ್ಯಂತ ಉತ್ತಮವಾದ ಪೂಜೆಯಾಗಲಿ.

ಭಗವಾನ್ ಶಂಕರರ ಶಿವ ಮಾನಸ ಪೂಜೆಯ ಶ್ಲೋಕ:-

ಆತ್ಮಾ ತ್ವಂ ಗಿರಿಜಾ ಮತಿಃ ಸಹಚರ ಪ್ರಾಣಃ ಶರೀರಂ ಗೃಹಂ

ಪೂಜಾತೇ ವಿಷಯೋಪ ಭೋಗ ರಚನಾ ನಿದ್ರಾಂ ಸಮಾಧಿಸ್ಥಿತಿಃ

ಸಂಚಾರಃ ಪದಯೋ ಪ್ರದಕ್ಷಿಣ ವಿಧಿ ಸ್ತೋತ್ರಾಣಿ ಸರ್ವಾ ಗಿರೋ

ಯದ್ಯತ್ಕರ್ಮ ಕರೋಮಿ ತತ್ತದಖಿಲ ಶಂಭೋ ತವಾರಾಧನಂ

ನೀನೇ ನನ್ನ ಆತ್ಮ, ಗಿರಿಜೆಯು ನನ್ನ ಬುದ್ಧಿ ಶಕ್ತಿ, ನನ್ನ ಪಂಚಪ್ರಾಣಗಳೇ  ನಿನ್ನ ಸಹಚರರು, ಸೇವಕರು, ನನ್ನ ಶರೀರ ನಿನ್ನ ಮನೆ, ನನ್ನ ಎಲ್ಲಾ ವಿಷಯೋಪಭೋಗಗಳೂ, ಅಂದರೆ ನನ್ನ ಪಂಚೇಂದ್ರಿಯ ಗಳ ಮೂಲಕ ನಾನು ಅನುಭವಿಸುವ ಎಲ್ಲ ಸುಖ ಭೋಗಗಳೂ ನಿನ್ನ ಪೂಜೆಯೇ, ನನ್ನ ನಿದ್ರೆಯೇ ಸಮಾಧಿ ಸ್ಥಿತಿ. ನಾನು ನಡೆದಾಡುವುದೆಲ್ಲವೂ ನಿನಗೆ ಮಾಡುವ ಪ್ರದಕ್ಷಿಣೆಯೇ, ನಾನು ಆಡುವ ಮಾತೆಲ್ಲವೂ ನಿನ್ನ ಸ್ತೋತ್ರವೇ, ನಾನು ಮಾಡುವ ಎಲ್ಲಾ ಕೆಲಸ ಕಾರ್ಯಗಳೂ, ಓ ಶಂಭುವೇ, ಅವೆಲ್ಲವೂ   ನಿನ್ನ ಆರಾಧನೆಯೇ ಆಗಿದೆ.

ಗೀತಾಚಾರ್ಯನ 9 ನೇ ಅಧ್ಯಾಯದ 27 ನೇ ಶ್ಲೋಕ:-

ಯತ್ಕರೋಷಿ  ( ಯತ್ ಕರೋಶಿ) ಯದಶ್ನಾಸಿ(ಯದ್ ಅಶ್ನಾಸಿ)   ಯಜ್ಜುಹೋಷಿ ದದಾಸಿ ಯತ್

ಯತ್ತಪಸ್ಯಸಿ  ( ಯತ್ ತಪ ಸ್ಯೈ) ಕೌಂತೇಯ ತತ್ಕುರುಷ್ವ ( ತತ್ ಕುರುಷ್ವ)  ಮದರ್ಪಣಮ್

ಎಲೈ ಅರ್ಜುನ ನೀನು ಮಾಡುವ ಕರ್ಮವನ್ನು, ತಿನ್ನುವುದನ್ನು ಮಾಡುವ ಹೋಮವನ್ನು, ಕೊಡುವ ದಾನವನ್ನು ಹಾಗೂ ಆಚರಿಸುವ ತಪಸ್ಸನ್ನೂ ಹೀಗೆ ಎಲ್ಲವನ್ನೂ ನನಗೆ ಅರ್ಪಣೆ ಮಾಡು.

ಇಂತಹ ಅನೇಕ ವಿವೇಕಯುತ ಉಲ್ಲೇಖಗಳು ನಮ್ಮ ಪುರಾತನ ಸಾಹಿತ್ಯದಲ್ಲಿ, ಗ್ರಂಥಗಳಲ್ಲಿ ಸಾಕಷ್ಟು ಲಭ್ಯವಿದೆ. ಅವೆಲ್ಲವೂ ಇದನ್ನೇ ಹೇಳುತ್ತವೆ. ಅವೆಲ್ಲವನ್ನೂ ನಾವು ಓದುತ್ತೇವೆ ಅಥವಾ ಕೇಳುತ್ತ್ತೇವೆ ಆದರೆ ಆಚರಣೆಗೆ ತರುವಲ್ಲಿ ವಿಫಲರಾಗುತ್ತೇವೆ.  ಇರಲಿ, ಈ ೨೭ ನೇ ಮಂತ್ರವು, ಅಹುದು ಇವೆಲ್ಲವೂ ಮಂತ್ರಗಳೇ ಆಗಿವೆ  ಅದರಲ್ಲಿ ಯಾವುದೇ ಸಂದೇಹ ಬೇಡವೇ ಬೇಡ. ಈ ಮಂತ್ರವು ಸಮಯಾಚಾರ ಪದ್ಧತಿಯ ಮಾನಸಿಕ ಉಪಾಸನೆಯನ್ನು ಅತ್ಯಂತ ನಿಖರವಾಗಿ ಹೇಳಿದೆ.  ಈ ಮಾನಸಿಕ ಉಪಾಸನೆಯ ವಿವರಗಳನ್ನು ಭಾವನೋಪನಿಷದ್ ನ 37 ಸೂತ್ರಗಳು ರಹಸ್ಯ ಸಂಕೇತಗಳೊಂದಿಗೆ ವಿವರಿಸಿದೆ.

ಈಗ ಸೌಂದರ್ಯ ಲಹರಿಯ 27 ನೇ ಮಂತ್ರವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡೋಣ.ನಾವು ಮಾಡುವ ಎಲ್ಲಾ ಕೆಲಸಗಳು, ನಾವು ತಿನ್ನುವ ಕುಡಿಯುವ ಎಲ್ಲವೂ  ದೈವತ್ವಕ್ಕೆ ನಾವು ಸಲ್ಲಿಸುವ ಅತ್ಯುತ್ತಮವಾದ ಆರಾಧನೆ ಎಂದಾದರೆ, ಅದು ಬಹಳ ಸುಲಭವಾಗಿದೆ ಎನಿಸುತ್ತದೆ. ನಾಮ ರೂಪಗಳಿಲ್ಲದ ದೈವತ್ವ ವನ್ನು ನಾವು ಗ್ರಹಿಸಬಹುದಾದ ನಾಮ ರೂಪಗಳಲ್ಲಿ ಉಪಾಸನೆ ಮಾಡಲು, ಆರಾಧಿಸಲು ನಾವು ಏನನ್ನೂ ವಿಶೇಷವಾಗಿ ಮಾಡಲೇ ಬೇಕಾಗಿಲ್ಲಾ. ಅದು ಅಷ್ಟು ಸುಲಭವಾಗಿದೆ ಎನ್ನುವುದಾದರೆ ಈಗ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ.

ನಾವು ಆಡುವ ಮಾತೆಲ್ಲವೂ ದೇವರ ಆರಾಧನೆಯೇ, ನಾವು ಮನಬಂದಂತೆ ಬಡಬಡಿಸುವ ವಟಗುಟ್ಟುವ, ಕೆಲಸಕ್ಕೆ ಬರದ ಹರಟೆ ಹೊಡೆಯುವುದು, ಎಲ್ಲವೂ ದೇವರ ಉಪಾಸನೆಯೇ, ದೇವರ ಆರಾಧನೆಯೇ ಎಂದು ನಮಗೆ ಅರಿವಾಗಿಬಿಟ್ಟರೆ, ನಮ್ಮ ಮಾತು ಹೇಗಿರಬಹುದು? ಕೆಲಸಕ್ಕೆ ಬರದ ಹರಟೆ ಹೊಡೆಯಲು ಸಾಧ್ಯವೇ? ಒಂದು ಕ್ಷಣ ಚಿಂತಿಸೋಣ.

“ಶಿಲ್ಪಂ ಅಪಿ ಮುದ್ರಾ ವಿರಚನಾ”. ಶಿಲ್ಪ ಅಂದರೆ ಕಲ್ಲಿನಿಂದ, ಮಣ್ಣಿನಿಂದ ಅಥವಾ ಮರದಿಂದ  ಶಿಲ್ಪಿಯು ಕೆತ್ತುವ ಶಿಲ್ಪ ಅಲ್ಲಾ, ಆದರೆ ಶಿಲ್ಪ ಎನ್ನುವುದು ಒಬ್ಬ ಶಿಲ್ಪಿಯ ಸೃಷ್ಟಿ ಕ್ರಿಯೆಯಂತೂ ಹೌದು. ಬ್ರಹ್ಮನ ಕೈಗಳಿಂದ  ಬ್ರಹ್ಮಾಂಡ ಹೇಗೆ  ಸೃಷ್ಟಿ ಆಗುತ್ತದೆಯೋ ಹಾಗೆಯೇ ಮುದ್ರೆಗಳು ಸಹಾ ಸೃಷ್ಟಿ ಕ್ರಿಯೆಯ ಶಕ್ತಿಗಳು ಎನ್ನುವುದನ್ನು ಸೂಚಿಸುವುದಕ್ಕಾಗಿಯೇ ಭಗವಾನ್ ಶಂಕರರು ಇಲ್ಲಿ ಹಸ್ತ ಮುದ್ರೆಗಳನ್ನು ಶಿಲ್ಪ ಎಂದು ಕರದಿದ್ದಾರೆ.  ನಾವು ಕೈಗಳಿಂದ ದಿನ ನಿತ್ಯದ ನಮ್ಮ ಜೀವನದಲ್ಲಿ ಮಾಡುವ ಎಲ್ಲಾ ಕೆಲಸಗಳೂ ಮುದ್ರೆಗಳೇ ಆಗಲಿ ಎನ್ನುತ್ತಾರೆ ಶಂಕರರು.

ಈಗ ಈ ಮುದ್ರೆಗಳು ಏನು ಎಂದು ನಮಗೆ ಅರ್ಥವಾದ ಮೇಲೆ, ನಮ್ಮ ಮನಸ್ಸು ಹೇಳಿದ್ದೆಲ್ಲವನ್ನೂ ನಮ್ಮ ಕೈಗಳಿಂದ ಮಾಡುವ ಮೊದಲು ಸಾವಿರ ಬಾರಿ ಯೋಚಿಸ ಬೇಕಾಗಿದೆ ಅಲ್ಲವೇ?

ನಾನು ನಡೆಯುವುದೆಲ್ಲವೂ ನಿನಗೆ ಹಾಕುವ ಪ್ರದಕ್ಷಿಣೆಯಾಗಲಿ ಎಂದಾಗ, ನಾವು  ಅಪವಿತ್ರ ಸ್ಥಳಗಳಿಗೆ ನಡೆದು ಹೋಗುವ ಸಾಧ್ಯತೆ ಇದೆಯೇ?

ನಾವು ಕುಡಿಯುವ ಎಲ್ಲಾ ಪಾನೀಯಗಳು, ತಿನ್ನುವ ಆಹಾರವೆಲ್ಲವೂ ದೈವತ್ವಕ್ಕೆ ಯಜ್ನಕುಂಡದ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು ಎನ್ನುವ ಮನಸ್ಥಿತಿ ನಮ್ಮದಾದರೆ ನಾವು ಕುಡಿಯುವ ಪಾನೀಯ ಮತ್ತು ತಿನ್ನುವ ಆಹಾರದ ಬಗ್ಗೆ ಯೋಚಿಸುತ್ತೇವೆ ಅಲ್ಲವೇ?  ಜಠರಾಗ್ನಿಯು ತಿನ್ನುವ ಆಹಾರ ಮತ್ತು ಪಾನೀಯಗಳನ್ನು ಜೀರ್ಣಿಸುತ್ತದೆ. ಈ ಜಠರಾಗ್ನಿಯ ಬಗ್ಗೆ  ಗೀತಾಚಾರ್ಯರು 15 ನೇ ಅಧ್ಯಾಯದ 14 ನೇ ಶ್ಲೋಕದಲ್ಲಿ ಹೀಗೆ ಹೇಳಿದ್ದಾರೆ;

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಾಃ

ಪ್ರಾಣಾಪಾನ ಸಂಯುಕ್ತಃ ಪಚಾಮ್ಯನ್ನಂ ಚತುರ್ವಿಧಂ

ನಾನು ವೈಶ್ವಾನರನ ರೂಪದಲ್ಲಿ  ಎಲ್ಲ ಜೀವಿಗಳಲ್ಲಿ ಇದ್ದು, ಪ್ರಾಣ  ಅಪಾನ ವಾಯುಗಳ ಜತೆಯೊಂದಿಗೆ ನಾಲ್ಕು ವಿಧದ ಆಹಾರವನ್ನು ಜೀರ್ಣಿಸುತ್ತೇನೆ. ಅಗಿಯುವ ಆಹಾರ, ನುಂಗುವ ಆಹಾರ, ಹೀರುವ ಆಹಾರ ಮತ್ತು ನೆಕ್ಕುವ ಆಹಾರ ಎಂದು ಆಹಾರಗಳನ್ನು ತಿನ್ನುವ ರೀತಿಯಲ್ಲಿ ನಾಲ್ಕು ವಿಧಗಳಾಗಿ ವಿಂಗಡಿಸಲಾಗಿದೆ. ಶಂಕರ ಭಗವತ್ಪಾದರು ಈ ಶ್ಲೋಕಕ್ಕೆ ಬರೆದಿರುವ ಭಾಷ್ಯದಲ್ಲಿ, ಆಹಾರವನ್ನು ತಿನ್ನುವವನು ವೈಶ್ವಾನರ, ತಿನ್ನುವ ಆಹಾರ ಸೋಮ ಎಂದು ಹೇಳಿದ್ದಾರೆ.

 ಗೀತಾಚಾರ್ಯರು ಹೇಳಿರುವ ವೈಶ್ವಾನರ ಎಂಬುದು ನಾವು ಜಾಗೃತಾವಸ್ಥೆಯಲ್ಲಿರುವಾಗ ನಮ್ಮಲ್ಲಿ ಇರುವ ಪ್ರಜ್ಜೆ.

ಐದು ಜ್ನಾನೇಂದಿಯಗಳು, ಐದು ಕರ್ಮೇಂದ್ರಿಯಗಳು, ಐದು ಪ್ರಾಣಗಳು ಮತ್ತು ಅಂತಃಕರಣ ಚತುಷ್ಟಯಗಳಾದ ಮನಸ್ಸು ಬುದ್ಧಿ ಚಿತ್ತ ಅಹಂಕಾರ ಈ ಹತ್ತೊಂಬತ್ತು ಸಹಾ ವೈಶ್ವಾನರದ ಬಾಯಿಗಳೇ.  ಈ ಹತ್ತೊಂಬತ್ತು ಬಾಯಿಗಳಿಂದ ನಾವು ಗ್ರಹಿಸುವುದೆಲ್ಲವೂ ಆಯಾಯ ಬಾಯಿಗೆ ಆಹಾರಗಳೇ. ಕಣ್ಣಿನ ಮೂಲಕ ಪಡೆಯುವ ನೋಡುವಂತಹ ಆಹಾರ, ಕಿವಿಯಿಂದ ಕೇಳುವಂತಹ ಆಹಾರ ಹೀಗೆ ಹತ್ತೊಂಬತ್ತು ಬಾಯಿಗಳಿಂದಲೂ ಸದಾ ಆಹಾರ ಒದಗುತ್ತಲೇ ಇರುತ್ತದೆ. ಇವನ್ನು ಸ್ವೀಕರಿಸಿ ಅದು ಹೇಗಿದೆಯೋ ಹಾಗೆಯೇ ಜೀರ್ಣಿಸಿಕೊಳ್ಳುವುದೂ ಆಗಿಬಿಡುತ್ತದೆ, ಜಾಗೃತಾವಸ್ಥೆ ಯಲ್ಲಿರುವ ವೈಶ್ವಾನರ ಎಂಬ ಪ್ರಜ್ನೆಯ ಹಂತದಲ್ಲಿ.  ಇದನ್ನು ಇನ್ನು ಸ್ವಲ್ಪ ವಿವರಿಸಬೇಕೆಂದರೆ, ಆಹಾರ ಶುದ್ಧೌ ಸತ್ವ ಶುದ್ಧಿಃ ಎನ್ನುತ್ತದೆ ಛಾಂದೋಗ್ಯ ಉಪನಿಷತ್. .ಶುದ್ಧ ವಾದ ಆಹಾರದಿಂದ ಶುದ್ಧವಾದ ಸತ್ವವು ಒದಗುತ್ತದೆ ಎಂದು ಅರ್ಥ. ಹಾಗೆಂದರೆ ಹಾಲು, ಹಣ್ಣು, ಇಂತಹ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸುತ್ತಾ, ಇನ್ನಿತರ ಬಾಯಿಗಳಾದ ಕಣ್ಣಿನಿಂದ ಅಸಹ್ಯವಾದುದನ್ನು ನೋಡುತ್ತಾ, ಕಿವಿಯಿಂದ ಕೆಟ್ಟದ್ದನ್ನು ನೋಡುತ್ತಾ, ಮನಸ್ಸಿನಿಂದ ಕೆಟ್ಟಯೋಚನೆಗಳನ್ನು ಮಾಡುತ್ತಾ ಹೀಗೆ ಎಲ್ಲಾ ಹತ್ತೊಂಬತ್ತು ಬಾಯಿಗಳಿಂದ ಕೆಟ್ಟ ಆಹಾರವನ್ನೇ ಸೇವಿಸುತ್ತಾ ಇದ್ದರೆ ಸತ್ವ ಶುದ್ಧಿ ಹೇಗೆ ಸಾಧ್ಯ? ನಾವು ಸೇವಿಸುವ ಎಲ್ಲಾ ಪಾನೀಯಗಳು, ಆಹಾರ ಎಲ್ಲವೂ ದೈವಕ್ಕೆ ಯಜ್ಜಕುಂಡದ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು ಎಂದಾದರೆ,ನಾವು ನಮ್ಮ ಎಲ್ಲಾ 19 ಬಾಯಿಗಳಿಂದ ಸ್ವೀಕರಿಸುವ ಆಹಾರ ಪಾನೀಯಗಳು ಎಷ್ಟು ಶುದ್ಧ ವಾಗಿರಬೇಕು? ಹವಿಸ್ಸಾಗಿ ಯಜ್ನಕುಂಡದ ಅಗ್ನಿಯಲ್ಲಿ ಅರ್ಪಿಸಲು ಯೋಗ್ಯವಾಗಿರಬೇಕು ಎಂದು ನಾವು ಚಿಂತಿಸುವಂತೆ ಮಾಡಿದೆ ಸೌಂದರ್ಯ ಲಹರಿಯ 27 ನೆಯ ಮಂತ್ರ.

ಇನ್ನು ಮುಂದಿನದು ನಾನು ಮಲಗಿರುವುದು ಅಂದರೆ ನಿದ್ರೆಮಾಡುವುದು ದೈವತ್ವಕ್ಕೆ ಮಾಡುವ ಶಿರಸಾಷ್ಟಾಂಗ ನಮಸ್ಕಾರಗಳು. ಅಂದರೆ ನಾವು ಮಲಗಿರುವಷ್ಟು ಸಮಯವೂ ಶಿರಸಾಷ್ಟಾಂಗ ನಮಸ್ಕಾರವು ಆಗುತ್ತಲೇ ಇರುತ್ತದೆ ಎಂದೇ ಅರ್ಥ. ನಾವು ಮಲಗುವಾಗ ಎಷ್ಟು ಪ್ರಶಾಂತ ಮನಸ್ಥಿತಿಯಲ್ಲಿ ಮಲಗುತ್ತೇವೆಯೋ ಅಂತಹದೇ ಪ್ರಶಾಂತ ಸ್ಥಿತಿಯನ್ನು ನಮ್ಮ ಸ್ವಪ್ನಾವಸ್ಥೆಯಲ್ಲಿಯೂ ಸುಷುಮ್ನಾ ಅವಸ್ಥೆಯಲ್ಲಿ ಅಂದರೆ ಆಳವಾದ ನಿದ್ರೆಯಲ್ಲಿಯೂ ಅನುಭವಿಸುತ್ತೇವೆ. ಆ ಪ್ರಶಾಂತತೆಯು ಶಿರಸಾಷ್ಟಾಂಗ ನಮಸ್ಕಾರವಾಗಲು ಯೋಗ್ಯವಾಗುತ್ತದೆ ಅಥವಾ ಶಿವ ಮಾನಸ ಫೂಜೆಯಲ್ಲಿ ಶಂಕರರು ಹೇಳಿರುವಂತೆ ಅದು ಸಮಾಧಿ ಸ್ಥಿತಿ ಆಗಲು ಸಾಧ್ಯವಾಗುತ್ತದೆ. ಈ ಪ್ರಶಾಂತ ಸ್ಥಿತಿ ಹೇಗೆ ಸಾಧ್ಯ. ಬಹಳ ಸುಲಭ. ದಿನಪೂರ್ತಿ ಆಡುವ ಮಾತುಗಳು ಮಂತ್ರವಾದಮೇಲೆ, ಮಾಡುವ ಕೆಲಸವೆಲ್ಲವೂ ಮುದ್ರೆಗಳೇ ಆದಮೇಲೆ,  19 ಬಾಯಿಗಳಿಂದ ಸ್ವೀಕರಿಸಿದ ಆಹಾರ ಪಾನೀಯಗಳೆಲ್ಲವೂ ಹವಿಸ್ಸೇ ಆದಮೇಲೆ, ದಿನಪೂರ್ತಿ ನಡೆದ ಹಾದಿಯೆಲ್ಲವೂ ಪ್ರದಕ್ಶಿಣೆಯೇ ಆದಮೇಲೆ, ಮಲಗುವಾಗ ಮನಸ್ಸು ಪ್ರಶಾಂತವಾಗಿರದೆ ಬೇರೇನೂ ಆಗಿರಲು ಸಾಧ್ಯವೇ ಇಲ್ಲಾ. ಆಗ ನಿದ್ರೆಯು ಶಿರಸಾಷ್ಟಾಂಗ ನಮಸ್ಕಾರವೇ ಆಗಿರುತ್ತದೆ, ಅದು ಸಮಾಧಿಯೇ ಆಗಿರುತ್ತದೆ.

ಇನ್ನು ಕೊನೆಯದಾಗಿ, ನಾವು ಹೊಂದುವ ಎಲ್ಲಾ ಸುಖಭೋಗಗಳೂ ದೈವತ್ವಕ್ಕೆ ನಾವು ಅರ್ಪಿಸುವ ಪೂಜಾ ದ್ರವ್ಯಗಳು ಮತ್ತು ನಾವು ದೈವತ್ವಕ್ಕೆ ಮಾಡುವ ಸೇವೆ ಅಂದರೆ, ಎಲ್ಲ ದೈಹಿಕ ಮಾನಸಿಕ ಸುಖ ಭೋಗಗಳೂ ದೈವತ್ವಕ್ಕೇ ಅರ್ಪಣೆ ಎಂತಲೇ ಅರ್ಥ. ಆಗ ಆ ಸುಖಬೋಗಗಳು ಸಂತೋಷವನ್ನು ಮಾತ್ರ ಕೊಡದೆ ಆನಂದವನ್ನು ನೀಡುತ್ತವೆ. ಸಂತೋಷ ಕ್ಷಣಿಕ, ಆನಂದ ಶಾಶ್ವತ, ಆನಂದವೇ ಜೀವನ್ಮುಕ್ತಿ. ಮುಕ್ತಿ  ಅಥವಾ ಮೋಕ್ಷ ಎನ್ನುವುದು ದೇಹವನ್ನು ಜೀವಾತ್ಮ ಬಿಟ್ಟಮೇಲೆ ಅಲ್ಲಾ, ಜೀವಾತ್ಮ ದೇಹದಲ್ಲಿ ಇದ್ದಾಗಲೇ ದೊರಕಬೇಕಾದ್ದೇ ಜೀವನ್ಮುಕ್ತಿ. ಎಲ್ಲಾ ಐಹಿಕ ಸುಖಭೋಗಗಳನ್ನೂ ಅನುಭವಿಸುತ್ತಲೇ ಜೀವನ್ಮುಕ್ತಿಯನ್ನು ಪಡೆಯುವುದೇ ಶ್ರೀವಿದ್ಯಾ ಸಾಧನೆಯ ಗುರಿ, ಏಕೆಂದರೆ ಶ್ರೀವಿದ್ಯೆಯು ಬ್ರಹ್ಮವಿದ್ಯೆಯೇ ಆಗಿದೆ.

ನಾನು ಈ 27 ನೇ ಮಂತ್ರವನ್ನು ಅರ್ಥ ಮಾಡಿಕೊಂಡಂತೆ, ಇದು ಒಂದು ಕಡೆ ಸಮಯಾಚಾರ ಪದ್ಧತಿಯ ಶ್ರೀ ವಿದ್ಯಾ ಉಪಾಸನೆಯ ಮಾರ್ಗವನ್ನು ತಿಳಿಸಿದರೆ, ಮತ್ತೊಂದೆಡೆ, ಭಕ್ತಿಯೋಗದ ಶರಣಾಗತಿಯ ಮೂಲಕ ಜೀವನ್ಮುಕ್ತಿ ಯನ್ನು ಭೋದಿಸುತ್ತಿದೆ.

ದೈವತ್ವದಲ್ಲಿ ಶರಣಾಗತಿ ಅಥವಾ ಆತ್ಮಸಮರ್ಪಣೆಯನ್ನು ಮೂರು ಹಂತಗಳಲ್ಲಿ ವಿವರಿಸಲಾಗಿದೆ.

  1. ನಮ್ಮ ಎಲ್ಲಾ ಕ್ರಿಯೆಗಳನ್ನೂ ಬ್ರಹ್ಮಾಂಡದ ಶಕ್ತಿ, ಪ್ರಜ್ಞೆಯಲ್ಲಿ ಸಮರ್ಪಿಸಿಬಿಡುವುದು.
  2. ನಮ್ಮ ಬುದ್ಧಿವಂತಿಕೆ ಮತ್ತು ಮನಸ್ಸನ್ನು ಬ್ರಹ್ಮಾಂಡದ ಶಕ್ತಿ, ಪ್ರಜ್ಞೆಯಲ್ಲಿ ಶರಣಾಗತಿಯಾಗಿಸಿಬಿಡುವುದು. ಇದು ಕಷ್ಟಸಾಧ್ಯ ಏಕೆಂದರೆ ನಾವು ಬುದ್ದಿವಂತಿಕೆಯನ್ನು ಮತ್ತು ಮನಸ್ಸನ್ನು ಶರಣಾಗತಿಗೊಳಿಸಲು ಪ್ರಯತ್ನ ಪಡುವುದನ್ನು ತರ್ಕಬದ್ಧವಾದ, ವಿಶ್ಲೇಷಣಾತ್ಮಕವಾದ ಮನಸ್ಸು ವಿರೋಧಿಸುತ್ತದೆ.
  3. ನಮ್ಮ ಎಲ್ಲಾ ಇಂದ್ರಿಯಗಳ ಪ್ರಜ್ಞೆಯನ್ನು ಬ್ರಹ್ಮಾಂಡದ ಶಕ್ತಿ, ಪ್ರಜ್ಞೆಯಲ್ಲಿ ಶರಣಾಗತಿಗೊಳಿಸಿಬಿಡುವುದು. ಇದು ಇನ್ನೂ ಕಠಿಣ. ಆದರೆ ಅರಿವು ಎಂಬ ಗುರು ನಮ್ಮಲ್ಲಿ ಜಾಗೃತವಾಗಿ, ಈ ಶರಣಾಗತಿ ಸಾಧ್ಯವಾದರೆ, ನಾವು ದೈವತ್ವದೊಂದಿಗೆ, ಬ್ರಹ್ಮಾಂಡದ ಪ್ರಜ್ಞೆಯೊಂದಿಗೆ ಒಂದಾಗಿಬಿಡುತ್ತೇವೆ. ನಮ್ಮ ಎಲ್ಲಾ ಕ್ರಿಯೆಗಳನ್ನೂ ಈ ಬ್ರಹ್ಮಾಂಡದ ಪ್ರಜ್ಞೆಗೆ ಶರಣಾಗಿಸಿಬಿಟ್ಟರೆ, ನಮ್ಮ ಹೆಗಲಿನ ಮೇಲಿನ ಎಲ್ಲಾ ಹೊರೆಗಳೂ ಇಳಿದುಹೋಗುತ್ತವೆ. ನಮ್ಮ ಕ್ರಿಯೆಗಳಿಂದ ದೊರಕುವ ಫಲಗಳಿಂದ ನಾವು ಮುಕ್ತರಾಗಿಬಿಡುತ್ತೇವೆ.

ಈ ಮೂರೂ ಹಂತದ ಶರಣಾಗತಿ ಸುಲಭ ಸಾಧ್ಯವೇನಲ್ಲಾ ಆದರೂ ಅರಿವು ಎಂಬ ಗುರುವನ್ನು ಎಚ್ಚರಿಸಲು ಸಾಧ್ಯವಾದರೆ, ಈ ಶರಣಾಗತಿ ಅತೀ ಸುಲಭವೇ ಆಗುವುದರಲ್ಲಿ ಸಂದೇಹವೇ ಇಲ್ಲಾ.

ಒಂದನ್ನು ನಾನು ಇಲ್ಲಿ ಸ್ಪಷ್ಟೀಕರಿಸಲೇ ಬೇಕು. ನಮ್ಮ ಹೆಗಲಿನ ಮೇಲಿನ ಹೊರೆಯನ್ನು ಇಳಿಸಿ ಬ್ರಹ್ಮಾಂಡದ ಪ್ರಜ್ಞೆಯಲ್ಲಿ ಶರಣಾಗತಿ ಹೊಂದುವುದು ಎಂದರೆ ನಿಷ್ಕ್ರಿಯ ವಾಗುವುದು ಎಂದು ಅರ್ಥೈಸಬಾರದು ಬದಲಾಗಿ ಬ್ರಹ್ಮಾಂಡದ ಪ್ರಜ್ಞೆಯ ಆದೇಶದಂತೆ ಕ್ರಿಯಾಶೀಲವಾಗುವುದು. ಹೀಗೆ ಕ್ರಿಯಾಶೀಲವಾಗುವಾಗ ನಮ್ಮ ವಿಶ್ಢ್ಲೇಷಕ ಮತ್ತು ತರ್ಕಬುದ್ಧಿಯ ಮನಸ್ಸಿನ ಸೂಚನೆಗಳನ್ನು ನಿರಾಕರಿಸುವ ಧೈರ್ಯ ಬೇಕು. ಆ ಧೈರ್ಯ ಬರಬೇಕಾದರೆ, ನಮ್ಮ ಶರಣಾಗತಿಯ ಮೇಲೆ ನಮಗೆ ಸಂಪೂರ್ಣ ನಂಬಿಕೆ ಮತ್ತು ಧೃಢ ವಿಶ್ವಾಸ ಬೇಕು.

ನಮ್ಮೆಲ್ಲರಿಗೂ ಬಹ್ಮಾಂಡದ ಪ್ರಜ್ಞೆಯಲ್ಲಿ ಶರಣಾಗುವ ಶಕ್ತಿಯನ್ನು, ಭಕ್ತಿಯನ್ನು, ಯುಕ್ತಿಯನ್ನೂ, ಗುರುಮಂಡಲರೂಪಿಣೀ, ಶ್ರೀ ವಿದ್ಯಾ ಸ್ವರೂಪಿಣಿ, ಶ್ರೀ ಲಲಿತಾ ಮಹಾತ್ರಿಪುರ ಸುಂದರೀ ನೀಡಲಿ ಎಂದು ಆ ಮಹಾಮಾತೆ, ಪಂಚಕೃತ್ಯ ಪರಾಯಣೆ ಯಲ್ಲಿ ಶ್ರದ್ಧಾ ಭಕ್ತಿ ಪೂರ್ವಕ ವಾಗಿ ಪ್ರಾರ್ಥನೆಗಳನ್ನು ಸಲ್ಲಿಸಿ, ಸೌಂದರ್ಯ ಲಹರಿಯ 27 ನೆಯ ಮಂತ್ರದ ವಿವರಣೆಯನ್ನು ಸಂಪನ್ನ ಗೊಳಿಸೋಣ.

ಓಂ ಶಾಂತಿಃ ಶಾಂತಿಃ ಶಾಂತಿಃ

7-12-2019                                                                                        ಆತ್ಮಾನಂದನಾಥ

(ಜೆ ಎಸ್ ಡಿ ಪಾಣಿ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: