ಸೌಂದರ್ಯ ಲಹರಿಯ 1 ಯ ಶ್ಲೋಕ ವಿವರಣೆ


ಶ್ರೀ ಗುರುಭ್ಯೋ ನಮಃ ಶ್ರೀ ಪರಮ ಗುರುಭ್ಯೋ ನಮಃ ಶ್ರೀ ಪರಮೇಷ್ಠಿ ಗುರುಭ್ಯೋ ನಮಃ

ಸೃಷ್ಟಿಗೆ ಕಾರಣವಾಗಿರುವ ಅಗೋಚರ ಶಕ್ತಿಯನ್ನು ಅರಿಯುವ ಸಾಮರ್ಥ್ಯವನ್ನು  ಪ್ರಾಣಿ ಪಕ್ಷಿಗಳು ಹೊಂದಿರಲು ಸಾಧ್ಯವಿದ್ದರೂ, ಈ ಅಗೋಚರ ಶಕ್ತಿಯ ಒಳಹೊಕ್ಕು ಅದನ್ನು  ಶೋಧಿಸುವ ಶಕ್ತಿ ಅವಕ್ಕಿಲ್ಲಾ.  ಮಾನವ ಪ್ರಾಣಿ ಮಾತ್ರವೇ ಈ ಶಕ್ತಿಯನ್ನು ದೇವರು ಎಂದು ಕರೆಯುವ ಮೂಲಕ ಅದರ ಸಹಜ ರೂಪ, ಗುಣ ಸ್ವಭಾವ ಇವುಗಳನ್ನು ಅರಿಯಲು ಪ್ರಯತ್ನ ಪಡುತ್ತಲೇ ಇದ್ದಾನೆ.  ದೇವರು ಹೇಗೆ ಇರಬಹುದು? ಅದು ಕಪ್ಪೇ, ಬಿಳುಪೇ, ಅದು ಹೆಣ್ಣೇ, ಗಂಡೇ, ಎಷ್ಟು ಕೈಗಳು ಅಥವಾ ಕಾಲುಗಳನ್ನು ಇದು ಹೊಂದಿದೆ? ಇದು ವಾಸಿಸುವುದಾದರೂ ಎಲ್ಲಿ? ಆಕಾಶದಲ್ಲೋ ಪಾತಾಳದಲ್ಲೋ ? ದೇವರಿಗೆ ಮದುವೆ ಆಗಿದೆಯೇ? ಮಕ್ಕಳು ಎಷ್ಟು ? ಮದುವೆ ಆಗದ ದೇವರುಗಳು ಇದ್ದಾರಾ? ಹೀಗೆ ಹತ್ತು ಹಲವಾರು ಪ್ರಶ್ನೆಗಳನ್ನು ಹಾಕಿಕೊಳ್ಳುತ್ತಲೇ, ಋಷಿಗಳು, ಮುನಿಗಳು, ಸಂತರು, ತಪಸ್ವಿಗಳು, ಸನ್ಯಾಸಿಗಳು, ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನವನ್ನು ಅನಾದಿ ಕಾಲದಿಂದಲೂ ಮಾಡುತ್ತಲೇ ಬಂದಿದ್ದಾರೆ. ಈ ಅಗೋಚರ ಶಕ್ತಿ ಬೇರೆಲ್ಲ್ಲೂ ಇಲ್ಲಾ ನಮ್ಮ ಒಳಗಡೆಯೇ ಇದೆ   ಎಂಬುದನ್ನು ಸಾರಿ ಹೇಳಿ, ಪ್ರಜ್ಞಾನಂ ಬ್ರಹ್ಮ,( ಐತ್ತರೇಯ ಉಪನಿಷತ್)  ಅಹಂ ಬ್ರಹ್ಮಾಸ್ಮಿ,( ಬೃಹದಾರಣ್ಯಕ ಉಪನಿಷತ್)  ತತ್ವಮಸಿ,(ಛಾಂದೋಗ್ಯ ಉಪನಿಷತ್) ಅಯಮಾತ್ಮಾ ಬ್ರಹ್ಮ (ಮಾಂಡೂಕ್ಯ ಉಪನಿಷತ್) ಎಂಬ ಮಹಾವಾಕ್ಯಗಳನ್ನು ಜಗತ್ತಿಗೆ ಪರಿಚಯಿಸಿ, ಅದ್ವೈತ ವೇದಾಂತದ ಪ್ರತಿಪಾದನೆ ಮಾಡಿದ ಭಗವಾನ್ ಶಂಕರರು, ಈ ಮಹಾಚೈತನ್ಯವನ್ನು ಮಾತೆಯ ರೂಪದಲ್ಲಿ ಕಲ್ಪಿಸಿ ಆ ಮಾತೆಯ ಸೌಂದರ್ಯವನ್ನು ತಲೆಗೂದಲಿಂದ ಆರಂಭಿಸಿ ಪಾದ ಅಂಗುಷ್ಠದ ತುದಿಯವರೆಗೂ ಅತ್ಯಂತ ರಮಣೀಯವಾಗಿ ವರ್ಣಿಸಿ ಸೌಂದರ್ಯ ಲಹರೀ ಎಂಬ ಅತಿಶಯ ಕಾವ್ಯವನ್ನು ರಚಿಸಿದ್ದಾದರೂ ಏಕೆ ಎನ್ನುವ ಜಿಜ್ಙಾಸೆಗೆ ಹಲವು ಹತ್ತು ಕಾರಣಗಳನ್ನು ನೀಡಲಾಗಿದೆ.  ಈ ಬಗ್ಗೆ ಕಂಚಿ ಪರಮಾಚಾರ್ಯ ಜಗದ್ಗುರು ಚಂದ್ರಶೇಖರಾನಂದ ಸರಸ್ವತಿ ಯವರು ಸೌಂದರ್ಯ ಲಹರಿಯ ಬಗ್ಗೆ ನೀಡಿರುವ ಉಪನ್ಯಾಸಗಳಲ್ಲಿ ತಿಳಿಸಿದ್ದಾರೆ. ಸೌಂದರ್ಯ ಲಹರಿಯ ರಚನೆ, ಶ್ರೀ ಶಂಕರ ಭಗವತ್ಪಾದರು ಪ್ರಮಾಣೀಕರಿಸಿ, ಪ್ರತಿಪಾದಿಸಿದ ಅದ್ವೈತ ವೇದಾಂತಕ್ಕೆ ಭಿನ್ನವಾಗಿಲ್ಲಾ ಎಂಬುದನ್ನು ಪ್ರತಿಪಾದಿಸಿದ್ದಾರೆ. ಅದ್ವೈತ ವೇದಾಂತವನ್ನೇ ಅರ್ಥೈಸಲಾಗದ ನಮ್ಮಂತಹವರು, ಈ ವಿವರಗಳ ಬಗ್ಗೆ ಹೆಚ್ಚು ಯೋಚಿಸದೆ, ಸೌಂದರ್ಯ ಲಹರಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಶ್ರೀಮಾತೆ ಯಲ್ಲಿ ಶರಣಾಗತಿಯಾಗಲು ಪ್ರಯತ್ನ ಪಡೋಣ.

ಸೌಂದರ್ಯ ಲಹರಿಯು ಶ್ರೀ ವಿದ್ಯಾ ಉಪಾಸನೆಯ ಸಾರ ಎಂದರೆ ತಪ್ಪಲ್ಲಾ. ಸೌಂದರ್ಯ ಲಹರಿಯ 103 ಮಂತ್ರಗಳ ಪೈಕಿ ಮೊದಲ 41 ಮಂತ್ರಗಳನ್ನು ಆನಂದಲಹರಿ ಎಂತಲೂ ನಂತರ ದ 62 ಮಂತ್ರಗಳನ್ನು ಸೌಂದರ್ಯ ಲಹರಿ ಎಂದೂ ಗುರುತಿಸಿದೆ. ಅಹುದು. ಇವು ಕೇವಲ ಶ್ಲೋಕಗಳಲ್ಲ ಇವು ಮಂತ್ರಗಳೇ ಆಗಿವೆ, ಈ ಬಗ್ಗೆ ಯಾವುದೇ ಸಂದೇಹ ಬೇಕಿಲ್ಲಾ. ಮೊದಲ 41 ಮಂತ್ರಗಳು ಮಾತೆಯನ್ನು ಅತ್ಯಂತ ಭಕ್ತಿಯಿಂದ, ಗೌರವದಿಂದ  ಸ್ತುತಿಸಿ, ತಾಯಿಯಲ್ಲಿ ಶರಣಾಗುವ ಬಗ್ಗೆ ಹೇಳಲಾಗಿದೆ. ಅಷ್ಟೇ ಅಲ್ಲದೆ ಈ ದೇಹವೆಂಬ ದೇಗುಲದಲ್ಲಿ ಕುಲಕುಂಡಲಿನಿ ಯಾಗಿ ಬ್ರಹ್ಮಾಂಡದ ಮೂಲ ಪ್ರಕೃತಿ ಶಕ್ತಿಯ  ರೂಪದಲ್ಲಿರುವ ತಾಯಿಯನ್ನು ಎಚ್ಚರಿಸಿ  ಆ ಶಕ್ತಿಯು ಷಟ್ಚಕ್ರಗಳ  ಮೂಲಕ ಸಂಚರಿಸಿ ಸಹಸ್ರಾರದಲ್ಲಿ ನೆಲೆಸಿರುವ ಶಿವನನ್ನು ಕೂಡಿ, ಅಲ್ಲಿ ಸುರಿಯುವ ಅಮೃತದಲ್ಲಿ ಮಿಂದು, ನಂತರ ತನ್ನ ಸ್ವಸ್ಥಾನಕ್ಕೆ ಅಂದರೆ ಮೂಲಾಧಾರಕ್ಕೆ ಸುಷುಮ್ನಾ ನಾಡಿಯ ಮೂಲಕ ಹಿಂತಿರುಗುವಾಗ, ದೇಹ ಮತ್ತು ಮನಸ್ಸುಗಳು  ಪರಮಾನಂದದ ಸಾಗರದಲ್ಲಿ ಹೇಗೆ ತೇಲಿಹೋಗುತ್ತವೆ ಎಂಬುದನ್ನು ಅತ್ಯಂತ ಮನೋಜ್ಞವಾಗಿ, ಭಾವ ತುಂಬಿ ಹೇಳಿವೆ. ತಾಯಿಯು ಸಹಸ್ರಾರದಿಂದ ಹಿಂದಿರುಗುವಾಗ ತಾನು  ಶಿವನನ್ನು ಕೂಡಿಕೊಂಡು ಬರುವುದರಿಂದ ದೇಹದ ಕಣಕಣದಲ್ಲೂ, ನರನಾಡಿಗಳೂ ದೈವತ್ವದಿಂದ ಕೂಡಿರುತ್ತವೆ. ಇದೇ ಆನಂದ, ಇದೇ ಪರಮಾನಂದ, ಇದೇ ಬ್ರಹ್ಮಾನಂದ, ಇದೇ ಆನಂದ ಲಹರಿ.

ಆಧ್ಯಾತ್ಮಿಕ ಸಾಧನೆ ಮಾಡ ಬಯಸುವವರಿಗೆ, ಶ್ರೀವಿದ್ಯಾ ಉಪಾಸಕರಿಗೆ, ಸೌಂದರ್ಯ ಲಹರಿಯೇ  ಸಾಧನೆ ಎಂದರೆ ತಪ್ಪಲ್ಲಾ. ಸಾಧಕರು ಸಂಪೂರ್ಣ ಶರಣಾಗತರಾಗಬೇಕು ಅಷ್ಟೆ.  ಇನ್ನು ಸಾಧಕರು ತಮ್ಮ ಬುದ್ಧಿಮತ್ತೆಯಿಂದ ತರ್ಕಗಳಿಗೆ ಎಡೆಮಾಡಿಕೊಟ್ಟರೆ, ಅದು ಸಾಧನೆಗೆ ಅಡ್ಡಿಯಾಗುತ್ತದೆ ಎಂಬ ಅರಿವು ಸಹಾ ಇರಬೇಕು. ಸೌಂದರ್ಯ ಲಹರಿಯ ಸಾಧನೆ  ಎಂದರೆ ರಾಜ ಯೋಗ, ಭಕ್ತಿಯೋಗ, ಹಠಯೋಗ, ಕರ್ಮಯೋಗ, ಜ್ಞಾನಯೋಗ ಇವೆಲ್ಲವುಗಳನ್ನೂ ಒಟ್ಟಿಗೆ ಸಾಧನೆ ಮಾಡಿದಂತೆ. ಸೌಂದರ್ಯಲಹರಿಯ ಬಗ್ಗೆ ಹೇಳುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇರಲಾರದು. ಹಾಗಾಗಿ ನಾವು ಈ ಲಹರಿಯ ಮಂತ್ರಗಳನ್ನು ನಮಗೆ ತಿಳಿದಷ್ಟು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡೋಣ.

ಈಗ ಮೊದಲನೇ ಮಂತ್ರ:

ಶಿವಃ ಶಕ್ತ್ಯಾಯುಕ್ತೋ ಯದಿ ಭವತಿ ಶಕ್ತಪ್ರಭವಿತುಂ 

ನ ಚೇದೇವಂ ದೇವೋ ನ ಖಲು ಕುಶಲಃ ಸ್ಪಂದಿತುಮಪಿ 

ಅತಸ್ತ್ವಾಮ್ ​- ಅರಾಧ್ಯಾಮ್ ಹರಿಹರ ವಿರಿಂಚ್ಯಾದಿಭಿರಪಿ 

ಪ್ರಣಂತುಮ್ ಸ್ತೋತುಮ್ ವಾ ಕಥಮಕೃತಪುಣ್ಯಃ ಪ್ರಭವತಿ

 ಈ ಮಂತ್ರವು ಶಿವ ಶಕ್ತಿಯರನ್ನು ಕುರಿತು ಮಾಡುವ ಧ್ಯಾನ ಎಂದರೆ ತಪ್ಪಾಗಲಾರದು.

ಸೌಂದರ್ಯ ಲಹರಿಯ ಮಂತ್ರಗಳಿಗೆ ವಾಕ್ಯಾರ್ಥವನ್ನು ನೀಡಿರುವ ಹಲವಾರು ಪ್ರಕಟಣೆಗಳು ಎಲ್ಲಾ ಭಾಷೆಯಲ್ಲೂ ಲಭ್ಯವಿರುವುದರಿಂದ, ನಾನು ವಾಕ್ಯಾರ್ಥವನ್ನು ಕೊಡುವ ಪ್ರಯತ್ನ ಮಾಡದೆ, ನನ್ನ ಅಲ್ಪಮತಿಗೆ ತಿಳಿದಂತೆ, ಹಾಗೂ ಹಲವು ಮೂಲಗಳಿಂದ ಸಂಗ್ರಹಿಸಿರುವಂತೆ, ಈ ಮಂತ್ರಗಳಿಗೆ ನನ್ನ ಶ್ರೀ ವಿದ್ಯಾ ಗುರುಗಳ ಅನುಗ್ರಹದಂತೆ, (ಅವರು ದೈಹಿಕವಾಗಿ ಇಂದು ನಮ್ಮೊಡನೆ ಇಲ್ಲದಿದ್ದರೂ ಪ್ರತಿಕ್ಷಣ ಅವರ ಅನುಗ್ರಹ ನನಗೆ ದೊರೆಯುತ್ತಿರುವುದು ನನ್ನ ಜನ್ಮ ಜನ್ಮಾಂತರದ ಪುಣ್ಯ ಮತ್ತು ಭಾಗ್ಯವೇ ಆಗಿದೆ) ,ಗುರುಮಂಡಲ ರೂಪಿಣಿಯಾದ ಶ್ರೀ ಲಲಿತಾ ಮಹಾತ್ರಿಪುರಸುಂದರಿಯ  ಅನುಜ್ಞೆಯಂತೆ, ಆ ತಾಯಿಯ ಅನುಗ್ರಹದಿಂದ , ಆ ತಾಯಿಯು ನುಡಿಸಿದಂತೆ, ವಿವರಣೆಯನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇನೆ.

ಶಿವ ಎನ್ನುವುದು, ಚಿರಂತನವಾದ, ಶಾಶ್ವತವಾದ, ಅದೇ ಅಂತಿಮವೂ ಆದ, ನಿರಂತರವಾಗಿ ಹರಿಯುತ್ತಿರುವ ಪ್ರಜ್ಞೆ.  ಶಕ್ತಿ ಅಂದರೆ ಅದು  ಅಪಾರವಾದ್ದು ಮತ್ತು  ಅದ್ಭುತ ಸಾಮರ್ಥ್ಯ ಉಳ್ಳಂಥಾದ್ದು.  ಶಿವನು,  ಚೇತನ,ಪ್ರಜ್ಞೆ ಮತ್ತು ಸಂಪೂರ್ಣ ಜಾಗೃತವಾಗಿರುವ ಅರಿವು. ಅದನ್ನು ಜ್ಞಾನ ಎನ್ನಬಹುದು. ಶಕ್ತಿಯು ಜಡವೂ ಅಹುದು ಚೇತನವೂ ಅಹುದು.  ಶಿವ ಎಲ್ಲವನ್ನೂ ತಿಳಿದಿದ್ದಾನೆ ಆದರೆ ಕ್ರಿಯಾಶೀಲನಲ್ಲಾ. ಶಕ್ತಿ ಎಲ್ಲವನ್ನೂ ತಿಳಿದಿದೆ ಮತ್ತು ಕ್ರಿಯಾಶೀಲವೂ ಆಗಿದೆ. ಶಿವ ಅನುಭವಾತೀತವಾದರೆ, ಶಕ್ತಿಯು ಅನುಭವಾತೀತವೂ ಅಹುದು ಮತ್ತು ಅನುಭವಾತ್ಮಕವೂ ಹೌದು. ಶಕ್ತಿಯು ಸೃಷ್ಟಿಯೂ ಸೇರಿದಂತೆ . ಸೃಷ್ಟಿಯಲ್ಲಿ ಆಗುತ್ತಿರುವ ಎಲ್ಲ್ಲಾ ವಿದ್ಯಮಾನಗಳ ಸಾಕ್ಷಿಯಷ್ಟೆ  ಅಲ್ಲದೆ,   ಈ ಎಲ್ಲಾ ಕ್ರಿಯೆಗಳ, ವಿದ್ಯಮಾನಗಳ  ಕರ್ತೃವೂ ಅಹುದು.ಶಿವ ಶಕ್ತಿ ಇವೆರಡೂ ಒಂದೇ, ಇವೆರಡೂ ಬೇರೆ ಬೇರೆ ಅಲ್ಲಾ. ಇವೆರಡೂ ಎಲ್ಲ ಪ್ರಕಟ ಮತ್ತು ಅಪ್ರಕಟ ಅಸ್ಥಿತ್ವಗಳಲ್ಲಿ ಸರ್ವವ್ಯಾಪಿಯಾಗಿ ಇರುವಂತಹವು. ಇವೆರಡರ ಬಣ್ಣ, ಲಿಂಗ, ಅಳತೆ, ಹೆಸರು, ರೂಪ, ಗಮ್ಯ ಎಲ್ಲವೂ ಒಂದೇ ಏಕೆಂದರೆ, ಇವೆರಡಕ್ಕೂ ಬಣ್ಣ, ಲಿಂಗ, ಅಳತೆ, ಹೆಸರು, ರೂಪ, ಗಮ್ಯ ಇವ್ಯಾವೂ ಇಲ್ಲಾ.  ಬೆಂಕಿ ಇಂದ ಬಿಸಿಯನ್ನು, ಬೆಳಕಿನಿಂದ ಸೂರ್ಯನನ್ನು,  ಹಿಮದಿಂದ ತಂಪನ್ನೂ ಹೇಗೆ ಬೇರ್ಪಡಿಸಲು ಅಸಾಧ್ಯವೋ ಹಾಗೆ ಶಿವ ಶಕ್ತಿಯರನ್ನು ಬೇರ್ಪಡಿಸುವುದು ಸಾಧ್ಯವಿಲ್ಲದ್ದು. ಇವೆರಡೂ ಒಂದನ್ನೊಂದು ವ್ಯಾಪಿಸಿಕೊಂಡಿರುವಂತಹವು.

ಒಂದೊಂದು ಶಬ್ಧವೂ, ರೂಪ ಹೊಂದಿರುವ ಒಂದೊಂದು  ಜಡ ಜೀವ ರಾಶಿಗಳನ್ನು ನಮ್ಮ  ಮೆದುಳಿನಲ್ಲಿ ಚಿತ್ರಿಸುತ್ತದೆ.   ಆನೆ  ಎನ್ನುವ ಶಬ್ದ ಕೇಳಿದೊಡನೆ ಬೃಹದಾಕಾರವಾದ,  ಉದ್ದನೆಯ ಸೊಂಡಿಲನ್ನು ಹೊಂದಿದ ದಪ್ಪ ಕಂಬಗಳಂತಹ ನಾಲ್ಕು ಕಾಲುಗಳನ್ನು ಉಳ್ಳ ಒಂದು ಪ್ರಾಣಿಯ ಚಿತ್ರ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ.  ಹಾಗಾದರೆ ” ಪ್ರಜ್ಞೆ ” ಎಂಬುದರ ರೂಪ ಅಥವಾ ಆಕಾರ ಯಾವುದು?  ಈ ಪ್ರಶ್ನೆಗೆ ತಂತ್ರ ಶಾಸ್ತ್ರವು “ ಶಿವಲಿಂಗ” ಎನ್ನುವ ಉತ್ತರ ನೀಡುತ್ತದೆ. ಪದಗಳ ಉತ್ಪತ್ತಿ ಶಾಸ್ತ್ರದ ಪ್ರಕಾರ  ( ಎಟಿಮಾಲಜಿ)” ಲಿಂಗ” ಎಂದರೆ  ಪುರುಷನ ಜನನೇಂದ್ರಿಯ ಅಲ್ಲಾ, ಲಿಂಗ ಎಂದರೆ “ಮೂಲ ಅಥವಾ “ಉಗಮ” ಎನ್ನುವ ಅರ್ಥ ಕೊಡುವಂತಾದ್ದು.  ಪ್ರಜ್ಞೆಗೆ ಲಿಂಗ ಎನ್ನುವ ರೂಪವನ್ನು ಕಲ್ಪಿಸಿರುವುದು ಸರಿಯೇ ಆಗಿದೆ ಏಕೆಂದರೆ, ಪ್ರಜ್ಞೆ ಎನ್ನುವುದು, ನಾವು ನೋಡುವ, ಕೇಳುವ, ಮಾತಾಡುವ, ಅಷ್ಟೇ ಅಲ್ಲದೆ ನಮ್ಮ ಎಲ್ಲ ಭಾವನೆಗಳ ಮೂಲವೂ ಹೌದು. ಹಾಗೆಯೇ ಶಕ್ತಿಯ ರೂಪವನ್ನು “ಯೋನಿ”ಎಂದು ತಂತ್ರ ಶಾಸ್ತ್ರ ಹೇಳುತ್ತದೆ. ಯೋನಿ ಎನ್ನುವುದು ಆಂಗ್ಲ ಭಾಷೆಯ ವೆಜಿನಾ ಎನ್ನುವುದಷ್ಟಕ್ಕ್ಕೇ ಸೀಮಿತವಾಗದೆ,ಗರ್ಭಾಶಯ ಎಂದೂ ಪವಿತ್ರವಾದ ಪಾನೀಯದ ಪಾತ್ರೆ ಎಂದೂ ಅರ್ಥವಿದೆ. ಗರ್ಭಾಶಯವು ಎಲ್ಲ ಸೃಷ್ಟಿಯ ಮೂಲ.

ಪ್ರತಿಯೊಂದು ಜೀವಕ್ಕೂ, ಜೀವಿಗೂ  ಬ್ರಹ್ಮಾಂಡದ ತಂದೆ ತಾಯಿಗಳಿದ್ದು ಆ ತಂದೆ ತಾಯಿಗಳನ್ನು ತಂತ್ರ ಶಾಸ್ತ್ರವು ಶಿವ ಮತ್ತು ಶಕ್ತಿ ಎಂಬ ಪದಗಳಿಂದ ಗುರುತಿಸಿದೆ.  ಇವು ಶಾಶ್ವತವಾದ ತಂದೆ ತಾಯಿಗಳು.  ಶಿವ ಶಕ್ತಿಗಳು ಎಂದೆಂದೂ ಬೇರ್ಪಡಿಸಲಾಗದಂತಹವು ಎಂಬುದನ್ನು ಪ್ರಮಾಣೀಕರಿಸಲು ಹಲವಾರು ಸಾಮ್ಯತೆ ಗಳನ್ನು ವಿದ್ವಾಂಸರು, ಶ್ರೀವಿದ್ಯಾ ಉಪಾಸಕರು ನೀಡಿದ್ದಾರೆ. ಕಾಳಿದಾಸನು ‘ ವಾಗಾರ್ಥ ವಿವ ಸಂಪ್ರೌಕ್ತೌ ವಾಗಾರ್ಥ ಪ್ರತಿಪತ್ತಯೇ ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ,   ಎಂದು ಹೇಳಿದರೆ   ಹಾಲಿನಲ್ಲಿ ಅಡಗಿರುವ ಬೆಣ್ಣೆಯಂತೆ ಎಂದು ಮತ್ತೊಬ್ಬ ಸಾಧಕರು ಹೇಳುತ್ತಾರೆ.  ಶಿವ ಶಕ್ತಿಗಳು ಸಮಷ್ಟಿ ರೂಪವಾಗಿದ್ದು ಬೇರ್ಪಡಿಸಲಾಗದಿದ್ದರೂ, ಎಲ್ಲ ಸೃಷ್ಟಿಯು ಪ್ರಕಟಗೊಳ್ಳುವಂತೆ ಮಾಡಲು ಶಿವ ಶಕ್ತಿಗಳು ಬೇರೆ ಬೇರೆ ಯಂತೆ ತೋರುತ್ತವೆ ಯಷ್ಟೆ.  ಇವೆರಡೂ ಪ್ರಜ್ಞೆ ಮತ್ತು ಶಕ್ತಿಯ ಏಕರೂಪ. ಎರಡೂ ಒಂದೇ ಆಗಿದ್ದರೂ ಶಕ್ತಿ ಇಲ್ಲದೆ ಶಿವಕ್ಕೆ ಸ್ಪಂದನೆ ಇಲ್ಲಾ ಎಂದು ಶಂಕರರು ಹೇಳಿದ್ದಾದರೂ ಏಕೆ?  ಶಕ್ತಿಯು ಶಿವ ಕ್ಕಿಂತ ಬೇರೆ ಅಲ್ಲದಿದ್ದರೂ ಶಕ್ತಿಯು ಜಡವೂ, ನಿಷ್ಕ್ರಿಯವು  ಅಹುದು ಹಾಗೆಯೇ ಚೈತನ್ಯವು ಮತ್ತು ಚಲನಶೀಲತೆಯೂ ಅಹುದು ಆದರೆ ಶಿವ ಯಾವಾಗಲೂ ಜಡ ಮತ್ತು ನಿಷ್ಕ್ರಿಯವಾದ್ದು.

ತಂತ್ರ ಶಾಸ್ತ್ರವು ಶಿವ ಶಕ್ತಿಗಳನ್ನು ಹೀಗೆ ಕಂಡುಕೊಂಡರೆ, ವೇದಾಂತವು ಹೇಗೆ ಕಂಡುಕೊಂಡಿದೆ ಎಂದು ನೋಡೋಣ. ಏಕರೂಪದ, ಸದಾ ಹರಿಯುತ್ತಲೇ ಇರುವ ಅರಿವನ್ನು ’ಬ್ರಹ್ಮನ್” ಎಂದು ಕರೆಯುತ್ತದೆ ವೇದಾಂತ.  ಬೃಹದ್ ಎನ್ನುವ ಶಬ್ಧ ಬ್ರಹ್ಮನ್ ಶಬ್ಧದ ಮೂಲವಾಗಿದ್ದು, ಬೃಹದ್ ಅಂದರೆ “ ಸದಾ ವಿಸ್ತರಿಸುತ್ತಲೇ ಇರುವ ಪ್ರಜ್ಞೆ ಎಂಬ ಅರ್ಥ ಬರುತ್ತದೆ. ವಿಸ್ತರಿಸಲು ಚೈತನ್ಯ ಮತ್ತು ಚಲನಶೀಲತೆ ಬೇಕು. ಅದು ಪ್ರಜ್ಞೆ ಆದಕಾರಣ ಅದು ಶಿವ. ಶಿವ ಶಕ್ತಿಗಳು ಒಂದೇ ಆಗಿರುವುದೇ ’ಬ್ರಹ್ಮನ್”.

 ಭಗವಾನ್ ಶಂಕರರು ಈ ಮಂತ್ರದಲ್ಲಿ ‘ಸ್ಪಂದಿತುಮಪಿ” ಎನ್ನುವ ಪದ ಉಪಯೋಗಿಸಿದ್ದಾರೆ. ಶಕ್ತಿಯ ಸ್ವಭಾವವೇ ಸ್ಪಂದನ ಅಥವಾ ಚಲನಶೀಲತೆ. ಶಕ್ತಿ ತ್ರಿಗುಣಾತ್ಮಕವಾದದ್ದು. ಅಂದರೆ ಶಕ್ತಿಯು ತನ್ನನ್ನು ಮೂರು ವಿಶಿಷ್ಟ ವಿಧಗಳಲ್ಲಿ ಅಭಿವ್ಯಕ್ತಗೊಳ್ಳಿಸುಕೊಳ್ಳುತ್ತದೆ. ಅವು, ಇಚ್ಛಾ, ಜ್ಞಾನ, ಮತ್ತು ಕ್ರಿಯಾ ಗುಣಗಳು. ಇಚ್ಛಿಸುವ ಗುಣ, ವಿಷಯವನ್ನು ತಿಳಿಯಬೇಕು ಎನ್ನುವ ಗುಣ ಮತ್ತು ಕಾರ್ಯ ನಿರ್ವಹಿಸುವ ಗುಣ.  ಈ ಮೂರೂ ಗುಣಗಳು ಸೇರಿದಾಗ ಅದೇ ಸ್ಪಂದನ. ಮಂತ್ರವು ಮುಂದುವರೆದು, ಯಾರು ಅತ್ಯಂತ ಉನ್ನತವಾದ ಅರ್ಹತೆಯನ್ನು ಹೊಂದಿರುವವರೋ ಅಂತಹವರು ಮಾತ್ರವೇ ಆರಾಧಿಸಲು ಸಾಧ್ಯ ಎನ್ನುತ್ತದೆ.  ನಿಜ ಅಂತಹವರು ಮಾತ್ರವೇ ಅತ್ಯದ್ಭುತವಾದ ಶಕ್ತಿಯನ್ನು “ಆ ಶಕ್ತಿಯಲ್ಲಿ ಕಾಣಬಲ್ಲರು”. ಇನ್ನು ಸಾಮಾನ್ಯರು, ಆ ಶಕ್ತಿಯ ಮಾಯಾಜಾಲಕ್ಕೆ ಮನಸೋತು ಸಂತೋಷಪಡುತ್ತಾರೆ, ಹಾಗಾಗಿ ಅಂತಹವರು ಮಾಯೆಯಲ್ಲಿ ಸಿಲುಕಿಹೋಗುತ್ತಾರೆ.  ಭಗವಾನ್ ಶಂಕರರು ಸಾಮಾನ್ಯರಲ್ಲ ಅವರು ಶಕ್ತಿಯ ರೂಪವನ್ನು ಭಕ್ತಿಯಿಂದ  ಗೌರವಿಸಿದರು, ಆರಾಧಿಸಿದರು,

ಭೋಗಿಯು ಶಕ್ತಿಯ ಪ್ರಕಟವಾಗಿರುವ ಈ ಪ್ರಪಂಚವನ್ನು ಮನೋರಂಜನೆಯ ಆಟದ ಮೈದಾನ ಎಂದು ನೋಡಿದರೆ, ಯೋಗಿಯು ಇದೇ ಪ್ರಪಂಚವನ್ನು ಆರಾಧನೆಯ ಆಟದ ಮೈದಾನವಾಗಿ ಭಾವಿಸುತ್ತಾನೆ.  ಯೋಗಿಗೂ ಭೋಗಿಗೂ ಇರುವ ವ್ಯತ್ಯಾಸ ಇಷ್ಟೇ.   ಕೆಲವೇ ಅದೃಷ್ಟವಂತರಿಗೆ ಮಾತ್ರವೇ ಮಾಯೆಗೆ ಒಳಗಾಗದೆ,  ಶಿವ ಶಕ್ತಿ ಸ್ವರೂಪಿಣಿಯಾದ ತಾಯಿಯನ್ನು ಭಕ್ತಿಯಿಂದ ಗೌರವದಿಂದ ಆರಾಧಿಸುವ ಭಾಗ್ಯ ಒದಗಿಬರುತ್ತದೆ ಎಂದು ಹೇಳುತ್ತದೆ ಈ ಮಂತ್ರ. ಇಂತಹ  ಅದೃಷ್ಟ ಒದಗಿಬರಲು ಅನೇಕಾನೇಕ ಜನ್ಮಗಳಲ್ಲಿ ಸತತ ಪ್ರಯತ್ನ ಮಾಡಿದ್ದರೆ ಮಾತ್ರ ಸಾಧ್ಯ. ಶಿವಶಕ್ತಿ ಸ್ವರೂಪಿಣಿಯಾದ ತಾಯಿಯನ್ನು  ಹರಿಹರ ಬ್ರಹ್ಮರೂ ಅಲ್ಲದೆ ವೇದಗಳು ಸಹಾ ಹೊಗಳುತ್ತವೆ ಮತ್ತು ಪೂಜಿಸುತ್ತಾರೆ ಎನ್ನುತ್ತದೆ ಈ ಮಂತ್ರ.  ಬ್ರಹ್ಮನು ಸೃಷ್ಟಿಕ್ರಿಯೆಯಾದ ರಜಸ್ ತತ್ವವನ್ನು, ಸ್ಥಿತಿ ಕ್ರಿಯೆಯಾದ ಸಾತ್ವಿಕೆ  ತತ್ವವನ್ನು ವಿಷ್ಣುವೂ ಸಂಹಾರ ಕ್ರಿಯೆಯಾದ ತಮಸ್ ತತ್ವವನ್ನು ರುದ್ರ ರೂಪದ ಶಿವನೂ ನಿರ್ವಹಿಸುತ್ತಿದ್ದು. ತ್ರಿಗುಣಾತ್ಮಿಕೆಯೇ ಆಗಿರುವ ಆ ತಾಯಿಯನ್ನು ಹರಿಹರ ಬ್ರಹ್ಮರು ಪೂಜಿಸುತ್ತಾರೆ ಎನ್ನುವ ಅರ್ಥ ಬರುತ್ತದೆ.  ಹರಿಹರವಿರಂಚ್ಯಾಧಿಭಿರಪಿ ಎನ್ನುವುದು ಹರಿಹರ ಬ್ರಹ್ಮ ರನ್ನು ಕುರಿತು ಹೇಳಿರುವುದು. ಅದಿಭಿಹ್ ಅಪಿ ಅಂದರೆ ವೇದಗಳೂ ಸಹಾ ಎಂದಾಗುತ್ತದೆ.

ಈ ಮಂತ್ರದಲ್ಲಿ ಬಹಳ ಉನ್ನತವಾದ ಹಾಗೂ ರಹಸ್ಯವಾದ ಶ್ರೀ ವಿದ್ಯಾ ಮಂತ್ರ ಷೋಡಶೀ ಮಂತ್ರವು ಅಡಗಿದೆ ಎನ್ನುವುದು ತಂತ್ರ ಶಾಸ್ತ್ರದ ಅಭಿಪ್ರಾಯವಾಗಿದೆ. ಈ ಮಂತ್ರ ಜಪದಿಂದ ಷೋಡಶೀ ಮಂತ್ರ ಜಪದಷ್ಟೇ ಫಲ ಪ್ರಾಪ್ತಿ ಯಾಗುತ್ತದೆ ಎಂದು ಹೇಳಲಾಗಿದೆ.

ಶಕ್ತಿಯು ಮೊದಲ ಬಾರಿಗೆ ಶಿವನ ಕಣ್ಣು ತೆರೆಸಿದಾಗ “ಅಹಂ” ಎನ್ನುವುದು ಉದಯವಾಯಿತು. ಇದನ್ನೇ ಸದಾಶಿವ ತತ್ವ ಎಂದು ಹೇಳಿದೆ. ಇದು ಸೃಷ್ಟಿ ಮಾಡಬೇಕೆನ್ನುವ ಸಂಕಲ್ಪ ಅಥವಾ ಇಚ್ಛೆಯ ಹುಟ್ಟುವಿಕೆ.  ಶಕ್ತಿಯಿಲ್ಲದೆ ಕಣ್ಣು ಮಿಟುಕಿಸಲೂ ಅಸಾಧ್ಯ, ಹಾಗಿರುವಾಗ  ಜೀವನದಲ್ಲಿ ಅವಶ್ಯವಾದ ಅಸಂಖ್ಯಾತ ಕಾರ್ಯಗಳನ್ನು ನಿರ್ವಹಿಸುವುದಾದರೂ ಹೇಗೆ? ಎಲ್ಲೆಲ್ಲಿ ಸೃಷ್ಟಿಯ ಪ್ರಕ್ರಿಯೆ ಕಾಣುತ್ತದೋ ಅಲ್ಲೆಲ್ಲೆಯೂ ಶಕ್ತಿಯ ಪಾತ್ರ ಇರಲೇ ಬೇಕು.  ಸೃಷ್ಟಿಯ ಪ್ರಕ್ರಿಯೆ ಅಂದರೆ ಜೀವದ ಸೃಷ್ಟಿಯ ಪ್ರಕ್ರಿಯೆ ಎಂಬ ಸೀಮಿತ ಅರ್ಥ ಆಗಬಾರದು; ಅದು ಒಂದು ವಾಣಿಜ್ಯೋದ್ಯಮದ ಸೃಷ್ಟಿ ಆಗಬಹುದು, ಸಂಗೀತದಲ್ಲಿ ಒಂದು ರಾಗದ ಸೃಷ್ಟಿ ಆಗಬಹುದು, ಒಂದು ಸಾಹಿತ್ಯದ ಸೃಷ್ಟಿ ಆಗಬಹುದು, ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದೆಲ್ಲವೂ ಸೃಷ್ಟಿಯೇ, ಅದಕ್ಕೆ ಕಾರಣ ಶಕ್ತಿಯೇ? ಒಂದು ಹೊಸ ಆಲೋಚನೆ ಮನಸ್ಸಿನಲ್ಲಿ ಮೂಡಿದರೆ ಅದೂ ಸೃಷ್ಟಿಯೇ. ಅತಿ ಉತ್ತುಂಗದ ಆಧ್ಯಾತ್ಮಿಕ ಅನುಭವವನ್ನು ಪಡೆಯುವುದೂ ಸೃಷ್ಟಿಯೇ. ಅಲ್ಲಿಯೂ ಶಕ್ತಿ ಬೇಕು. ಸೃಷ್ಟಿ ಆಗಬೇಕಿದ್ದರೆ ಅಲ್ಲಿ ಶಕ್ತಿ ಇರಲೇಬೇಕು, ಶಕ್ತಿಯೊಟ್ಟಿಗೆ ಪ್ರಜ್ಞೆ ಎಂಬ ಶಿವ ಇರಲೇ ಬೇಕು.

ಈ ಮೊದಲ ಮಂತ್ರದಲ್ಲಿಯೇ ಭಗವಾನ್ ಶಂಕರರು ಇಡೀ ಸೌಂದರ್ಯಲಹರಿಯ ಎಲ್ಲಾ ಮುಖ್ಯ ಅಂಶಗಳನ್ನು ಹೇಳಿಬಿಟ್ಟಿದ್ದಾರೆ ಎನಿಸುತ್ತದೆ. ಶಿವ, ಶಕ್ತ್ಯಾ ಎನ್ನುವ ಎರಡು ಪದಗಳು ಶಾಶ್ವತವಾದ ಎರಡು ತತ್ವಗಳನ್ನು ಪ್ರತಿನಿಧಿಸಿವೆ ಎನಿಸುತ್ತದೆ. ಈ ಎರಡು ಪದಗಳು ಎಲ್ಲಾ ವಿದ್ಯೆಗಳ ಮೂಲ. ಇವುಗಳ ಮೂಲಕ ಶಂಕರರು ಉಪಾಸನೆಯ ಮಾರ್ಗ ತೋರುತ್ತಿದ್ದಾರೆ. ಈ ಹಿಂದೆ ಹೇಳಿದಂತೆ ಸೌಂದರ್ಯ ಲಹರಿಯು ಶ್ರೀ ವಿದ್ಯಾ ಉಪಾಸನೆ ಅಲ್ಲದೆ ಬೇರೇನೂ ಅಲ್ಲಾ.  ​  ಶಿವಶಕ್ತಿ ಎನ್ನುವುದು ಅಮೂರ್ತವಾದ ಮತ್ತು  ಸಂಪೂರ್ಣವಾದ ಅನುಭವ ಮಾತ್ರವೇ ಆಗಿದ್ದು ಇದೀಗ ನಿಜವಾಗಿ ರೂಪ ಮತ್ತು ನಾಮಗಳಿಂದ ಗೋಚರಿಸುವ ವಾಸ್ತವವಾಗಿ ಗೋಚರಿಸುತ್ತಿದೆ. ಈ ಮೂಲಕ ಶಂಕರರು  ಮಾನವ ಸ್ತರದಲ್ಲಿ ಪರಸ್ಪರ ವಿರುದ್ಧ ವಾಗಿರುವ ಹೆಣ್ಣು ಮತ್ತು ಗಂಡುಗಳನ್ನು ಶಾಶ್ವತವಾಗಿ ದೈವೀಕ ಪಾತ್ರವನ್ನು ನಿರ್ವಹಿಸುವಂತೆ ಮಾಡುವುದರ ಮೂಲಕ ಒಮ್ಮೆಗೇ ದೈವದ ಎತ್ತರಕ್ಕೆ ಏರಿಸಿದ್ದಾರೆ.

ದಿ: 7-12-2019                                                                                             ಆತ್ಮಾನಂದನಾಥ

( ಜೆ ಎಸ್ ಡಿ ಪಾಣಿ)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: