ಗುಹಾನಂದನಾಥ-ಗುರುಪರಂಪರ

SRI PARATPARA GURUBHYO NAMAH

ಶ್ರೀ ಪರಾತ್ಪರ ಗುರು ಶ್ರೀ ಗುಹಾನಂದನಾಥ ಶ್ರೀ ಪಾದುಕಾಭ್ಯಾಂ ಪೂಜಯಾಮಿ ನಮಃ

ಗುರುಪರಂಪರೆಯ ಬಗ್ಗೆ ಬರೆಯುವ ಮೊದಲು ಅತ್ಯಂತ ನಮ್ರತೆ ಮತ್ತು ಭಕ್ತಿಯಿಂದ ಗುರುಮಂಡಲ ಮತ್ತು ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿಯ ಪಾದಪದ್ಮಗಳಲ್ಲಿ ಸಂಪೂರ್ಣ ಶರಣಾಗತಿಯನ್ನು ಕೋರಿ, ನನಗೆ ಬರೆಯಲು ಅಕ್ಷರಗಳ, ಪದಗಳ ಭಿಕ್ಷೆಯನ್ನು ಬೇಡುತ್ತಿದ್ದೇನೆ.

ಅವಧೂತವರೇಣ್ಯ ಶ್ರೀ ಗುಹಾನಂದನಾಥರು ಬದರಿಕಾಶ್ರಮದಲ್ಲಿದ್ದರು ಎಂದು ತಿಳಿದುಬರುತ್ತದೆ. ಇವರ ಜನನದ ಅಥವಾ ವಿದೇಹ ಮುಕ್ತಿಯ ವಿವರಗಳು ಲಭ್ಯವಿಲ್ಲಾ, ಲಭ್ಯವಿರಲೂ ಬೇಕಿಲ್ಲಾ. ತಮಿಲ್ನಾಡಿನ ತಿರುನೆಲ್ವೇಲಿಯ ಬಳಿಯ ಹಳ್ಳಿಯೊಂದರಲ್ಲಿ ಕೃತ್ತಿಕಾ ನಕ್ಷತ್ರದಲ್ಲಿ ಜನಿಸಿದರು ಎಂದು ನಂಬಲಾಗಿದೆ. ಗುರುಪರಂಪರೆಯ ವಿವರಗಳಿಗೆ ನಾನು ಶ್ರೀ ಚಿದಾನಂದನಾಥರ ಶಿಷ್ಯರಾದ ಶ್ರೀ ಪೂರ್ಣಾನಂದ ನಾಥರ ( ಶ್ರೀ ವೆಂಕಟನರಸಯ್ಯ ) ಅವರಿಂದ ದೊರಕಿರುವ ಮಾಹಿತಿಯನ್ನು ಆಧರಿಸಿದ್ದೇನೆ.

ಗುರು ಪರಂಪರೆ ಹೀಗಿದೆ; ಶ್ರೀ ಗುಹಾನಂದನಾಥರ ಗುರುಗಳು ಶ್ರೀ ಆತ್ಮಾನಂದನಾಥರು, ಅವರ ಗುರುಗಳು ಶ್ರೀ ಪ್ರಕಾಶಾನಂದನಾಥರು, ಅವರ ಗುರುಗಳು ಶ್ರೀ ವಿಮಲಾನಂದನಾಥರು, ಅವರ ಗುರುಗಳು ಶ್ರೀ ಶಾಂತಾನಂದನಾಥರು, ಅವರ ಗುರುಗಳು ದಕ್ಷಿಣಾಮ್ನಾಯ ಶ್ರೀ ಶೃಂಗೇರೀ ಶಾರದಾಪೀಠದ 12 ನೇ ಪೀಠಾಧಿಪತಿಗಳಾದ ಮತ್ತು ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಶ್ರೀ ವಿದ್ಯಾರಣ್ಯ ಸ್ವಾಮಿಗಳು. ಶ್ರೀ ಶೃಂಗೇರೀ ಪೀಠದ ಮಾಹಿತಿಯಂತೆ ಶ್ರೀ ವಿದ್ಯಾರಣ್ಯ ಸ್ವಾಮಿಗಳು 12 ನೇ ಪೀಠಾಧಿಪತಿಗಳಾಗಿದ್ದದ್ದು ಕ್ರಿ ಶ 1380 ರಿಂದ 1386 ರ ವರೆಗೆ ಎಂದು ತಿಳಿಯಬರುತ್ತದೆ. ಶ್ರೀ ವಿದ್ಯಾರಣ್ಯ ಸ್ವಾಮಿಗಳಿಂದ ಗುರುಂಪರೆಯನ್ನು ಪರಿಗಣಿಸಿದರೂ ಈ ಪರಂಪರೆಗೆ 650 ವರ್ಷವಾಗಿದೆ.

ಇದಕ್ಕಿಂತಲೂ ಹೆಚ್ಚಿಗೆ ಶ್ರೀ ಗುಹಾನಂದನಾಥರ ಬಗ್ಗೆ ಹೇಳಲು ನನಗೆ ಯೋಗ್ಯತೆ ಇಲ್ಲಾ.

1aeb19e6-e4ac-4812-b542-974c92bbb1d4 (1)

ಶ್ರೀ ಚಿದಾನಂದನಾಥ ಶ್ರೀ ಪರಮೇಷ್ಠಿ ಗುರು ಶ್ರೀ ಪಾದುಕಾಭ್ಯಾಂ ಪೂಜಯಾಮಿ ನಮಃ

ಶ್ರೀ ಚಿದಾನಂದನಾಥರು ( ಜನನ ನಾಮ ಎನ್ ಸುಬ್ರಹ್ಮಣ್ಯ ಆಯ್ಯರ್- ಎನ್ ಅಂದರೆ ನೇಡಿಮಿಂಟಿ- ಅವರ ಕುಟುಂಬದ ಹೆಸರು) ದಿ-14-11-1882 ರಂದು ನರಸಯ್ಯ ಮತ್ತು ಕಾಮಾಕ್ಷಿ ಅಮ್ಮಾಳ್ ದಂಪತಿಗಳಿಗೆ ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಒಂದು ಹಳ್ಳಿಯಲ್ಲಿ ಜನಿಸುತ್ತಾರೆ. ಅದು ವೃಷ ಅಥವಾ ವಿಷು ನಾಮ ಸಂವತ್ಸರ, ಕಾರ್ತೀಕ ಮಾಸ ಷುಕ್ಲ ತೃತೀಯ ಮೂಲಾ ನಕ್ಶ್ಜತ್ರ ನಾಲ್ಕನೇ ಪಾದ ಮಂಗಳವಾರ ವೃಷಭ ಲಗ್ನ. ಇಷ್ಟು ವಿವರ ಸಿಕ್ಕ ಮೇಲೆ ಜನನದ ಸಮಯ ಶೋಧಿಸುವ ಕುತೂಹಲ. ಅದು ಸಂಜೆ ೫- ೨೮ ರಿಂದ ೫-೪೦ ರಲ್ಲಿ ಆಗಿರುವ ಸಾಧ್ಯತೆ. ಇಂತಹ ಮಹಾನ್ ಪುರುಷರ ಜನ್ಮ ಕುಂಡಲಿಗಳು ಜ್ಯೋತಿಷ್ಯವನ್ನು ಅಧ್ಯಯನ ಮಾಡಲು ಸಹಕಾರಿಯಾಗುತ್ತವೆ.

30-1-1911 ರಂದು ಸಾಧಾರಣ ನಾಮ ಸಂವತ್ಸರ ಪುಷ್ಯ ಮಾಸ ಅಮಾವಾಸ್ಯೆ, ಮಹೋದಯ ಪುಣ್ಯಕಾಲ, ಶ್ರವಣ ನಕ್ಷತ್ರ, ಸೂರ್ಯೋದಯಕ್ಕೆ ಸರಿಯಾಗಿ,ಪರಮಹಂಸ ಅತಿವರ್ಣಾಶ್ರಮಿ ಸರ್ವತಂತ್ರ ಸ್ವತಂತ್ರ ಅವಧೂತ ವರೇಣ್ಯ ಶ್ರೀ ಗುರು ಗುಹಾನಂದನಾಥರು ಶ್ರೀ ಸುಬ್ರಹ್ಮಣ್ಯ ಅಯ್ಯರ ಅವರನ್ನು ಅನುಗ್ರಹಿಸಿ ಪಾದುಕಾಂತ ಶ್ರೀ ವಿದ್ಯಾ ದೀಕ್ಷೆ, ಮಹಾವಾಕ್ಯ, ಮಹಾ ಮಹಾ ಪಾದುಕಾ ದೊಂದಿಗೆ ಶ್ರೀ ಚಿದಾನಂದನಾಥ ಎಂಬ ದೀಕ್ಷಾ ಪಟ್ಟವನ್ನು ನೀಡುತ್ತಾರೆ.

ಅಂದು ಸೂರ್ಯನ ಉದಯದ ಜತಯಲ್ಲಿಯೇ ಶ್ರೀ ವಿದ್ಯೆಯ ಮಹಾಬೆಳಗನ್ನು ಎಲ್ಲೆಡೆ ಬೆಳಗುವ ಚಿದಾನಂದನಾಥ ಎಂಬ ರವಿಯು ಸಹಾ ನಭೋಮಂಡಲದಲ್ಲಿ ಉದಿಸಿ, ಭೂಮಂಡಲವನ್ನು ಬೆಳಗಲು ಆರಂಭಿಸಿತು.
ಉಪಾಧ್ಯಾಯ ವೃತ್ತಿಯಲ್ಲಿ ನಿರತರಾಗಿದ್ದ ಚಿದಾನಂದನಾಥರು ಗುಹಾನಂದ ಮಂಡಲಿಯ ಸ್ಥಾಪಕರು. ಇವರ ಶಿಷ್ಯ ಪರಂಪರೆ ವಿಶ್ವದ ಮೂಲೆ ಮೂಲೆಗೂ ಹರಡಿದ್ದರೂ ಅದೊಂದು ಸದ್ದಿಲ್ಲದೆ ಹರಿಯುತ್ತಿರುವ ಗುಪ್ತಗಾಮಿನಿ.

ಇವರ ಲೇಖನಿಯಿಂದ ಶ್ರೀ ವಿದ್ಯಾ ಸಾರಸರ್ವಸ್ವವೂ ಸಂಸ್ಕೃತ ಮತ್ತು ತಮಿಳು ಭಾಷೆಯ ಗ್ರಂಥಗಳಾಗಿ ಹೊರಬಂದಿದ್ದು, ಶ್ರೀ ವಿದ್ಯಾ ಉಪಾಸಕರ ಜ್ಞಾನ ದಾಹವನ್ನು ತಣಿಸುವ ಅಮೃತ ಕಲಶಗಳೇ ಆಗಿವೆ. ಶ್ರೀ ಚಕ್ರ ನವಾವರಣ ಪೂಜೆ ಮತ್ತು ಹೋಮವಿಧಿಯನ್ನು ಶಾಸ್ತ್ರೋಕ್ತ ವಿವರಿಸಿ ರಚಿಸಿರುವ ಶ್ರೀ ವಿದ್ಯಾ ಸಪರ್ಯಾ ಗ್ರಂಥವು ವಿಶ್ವದೆಲ್ಲೆಡೆ ನೆಲೆಸಿರುವ ಶ್ರೀ ವಿದ್ಯಾ ಉಪಾಸಕರು ಉಪಯೋಗಿಸುವ ಗ್ರಂಥವಾಗಿದ್ದು, ಹಲವಾರು ಭಾಷೆ ಗಳಲ್ಲಿ ಪ್ರಕಟವಾಗಿದೆ. ಶ್ರೀ ವಿದ್ಯಾ ಸಪರ್ಯಾದ ಕನ್ನಡ ಲಿಪ್ಯಂತರವು ಪೂರ್ಣಾನಂದನಾಥನ ( ಶ್ರೀ ದುರ್ಗಾ ಪ್ರಸಾದ) ಸಹಕಾರದಿಂದ ಪೂರ್ಣಗೊಂಡಿದ್ದು, ಕರಡು ಪ್ರತಿಯನ್ನು ತಿದ್ದುವ ಕಾರ್ಯ ಪ್ರಗತಿಯಲ್ಲಿದೆ. ಇದು ಕನ್ನಡ ಬಲ್ಲ ಶ್ರೀ ವಿದ್ಯಾ ಉಪಾಸಕರಿಗೆ ನೆರವಾಗಲಿದೆ.

ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಅವರ ಆಶಯದಂತೆ ಆಸ್ಥಾನ ಮಹಾವಿದ್ವಾನ್ ಶ್ರೀಯುತ ಹೆಚ್ ಪಿ ವೆಂಕಟರಾವ್ ಶರ್ಮ ಅವರಿಂದ ಪರಿಶೋಧಿಸಲ್ಪಟ್ಟ ಶ್ರೀ ಚಕ್ರ ನವಾವರಣ ಪೂಜೆಯ ವಿವರಗಳನ್ನೊಳಗೊಂಡ ‘ ಶ್ರೀ ಷೋಡಶೀ ಮಹಾ ಪೂಜಾ ಕಲ್ಪ” ಎಂಬ ೧೯೪೮ ರಲ್ಲಿ ಪ್ರಕಟವಾದ ಕನ್ನಡದ ಗ್ರಂಥ ಮೊದಲ್ಗೊಂಡು ಇದುವೆರೆಗೂ ಅನೇಕ ಗ್ರಂಥಗಳು ಪ್ರಕಟವಾಗಿದ್ದು ಕನ್ನಡ ಭಾಷೆ ಬಲ್ಲ ಶ್ರೀ ವಿದ್ಯಾ ಉಪಾಸಕರಿಗೆ ನೆರವಾಗಿದ್ದು ಆ ಎಲ್ಲ ಗ್ರಂಥಗಳ ಬಗ್ಗೆ ನಾನು ಅತ್ಯಂತ ಭಕ್ತಿ ಗೌರವಗಳನ್ನು ಹೊಂದಿದ್ದೇನೆ. ಆದಾಗ್ಯೂ ನ್ಯಾಸಗಳೂ, ಆಮ್ನಾಯ ಪೂಜಾವಿಧಾನವೂ ಸೇರಿದಂತೆ ಶಾಸ್ತ್ರೋಕ್ತವಾದ ಸಕಲ ವಿವರಗಳನ್ನೂ ಒಂದೇ ಗ್ರಂಥದಲ್ಲಿ ಒದಗಿಸಬೇಕೆಂಬುದು ನನ್ನ ಆಶಯವಾಗಿದ್ದು, ಗುರುಮಂಡಲದ ಅನುಗ್ರಹ ದಿಂದ ಮಾತ್ರವೇ ಇದು ಸಾಧ್ಯವಾಗುವಂತಾದ್ದು.

ಕಂಚಿ ಕಾಮಾಕ್ಷಿ ಅಮ್ಮನವವರ ಸನ್ನಿಧಿಯಲ್ಲಿರುವ ಶ್ರೀ ಚಕ್ರಕ್ಕೆ ಯಾವುದೋ ಕಾರಣಕ್ಕೆ ನವಾವರಣ ಪೂಜೆ ದಶಕಗಳ ಕಾಲ ನಿಂತುಹೋಗಿದ್ದು, ರಕ್ತಾಕ್ಷಿ ನಾಮ ಸಂವತ್ಸರದ ಅಶ್ವಯುಜ ಪೌರ್ಣಮಿಯಂದು ಅಂದರೆ ೧೨-೧೦-೧೯೨೪ ರಂದು ಶ್ರೀ ಚಿದಾನಂದನಾಥರು ನವಾವರಣ ಪೂಜೆಯನ್ನು ಆರಂಭಿಸಿದ್ದು ಕಂಚಿ ಕಾಮಾಕ್ಷಿ ಅಮ್ಮನವರ ಸನ್ನಿಧಾನದ ಒಂದು ಮರೆಯಲಾಗದ ಐತಿಹಾಸಿಕ ಘಟನೆಯಾಗಿ ದಾಖಲಾಗಿದೆ. ಇಂದಿಗೂ ಕಾಮಾಕ್ಷಿ ಅಮ್ಮನವರ ಸೇವೆಯಲ್ಲಿರುವ ಪ್ರಧಾನ ಅರ್ಚಕರೂ ಸೇರಿದಂತೆ ಮಿಕ್ಕೆಲ್ಲರೂ ಸಹಾ ಶ್ರೀ ಚಿದಾನಂದನಾಥರ ಶಿಷ್ಯ ಪರಂಪರೆಗೆ ಸೇರಿದವರೇ ಆಗಿದ್ದಾರೆ.

ನಾನು ಹಿಂದೆ ಹೇಳಿದಂತೆ ಶ್ರೀ ಗುಹಾನಂದನಾಥರ ಗುರು ಪರಂಪರೆ ಶ್ರೀ ಶೃಂಗೇರಿ ಪೀಠದಿಂದ ಆರಂಭವಾಗಿ ಆ ಗುರುಪರಂಪರೆಯಿಂದ ಈಗ ಕಂಚಿ ಕಾಮಾಕ್ಷಿ ಅಮ್ಮನವರು ಪೂಜೆ ಸ್ವೀಕರಿಸುತ್ತಿರುವುದು, ಗುರುಮಂಡಲ ರೂಪಿಣಿ ಶ್ರೀ ಲಲಿತಾ ಮಹಾತ್ರಿಪುರ ಸುಂದರಿ ದೇವಿಯ ಲೀಲೆ ಅಲ್ಲದೆ ಮತ್ತೇನು ಆಗಿರಲು ಸಾಧ್ಯ.

ಶ್ರೀ ಚಿದಾನಂದನಾಥರು ಸುವಾಸಿನಿಯರಿಗೆ ಶ್ರೀ ವಿದ್ಯಾ ದೀಕ್ಷೆ ಮಾತ್ರ ವಷ್ಟೇ ಅಲ್ಲದೆ ಅವರಿಗೆ ದೀಕ್ಷಾಪಟ್ಟವನ್ನು ನೀಡಿ ಸುವಾಸಿನಿಯರಿಗೆ ಶ್ರೀ ಚಕ್ರ ನವಾವರಣ ಪೂಜೆ ಮತ್ತು ಹೋಮ ಮಾಡುವ ಅಧಿಕಾರವನ್ನು ನೀಡಿದ್ದು ಅದು ನಿರಂತರವಾಗಿ ನಮ್ಮ ಪರಂಪರೆಯಲ್ಲಿ ಮುಂದುವರೆಯುತ್ತಿರುವುದು ಸಹಾ ಮತ್ತೊಂದು ಐತಿಹಾಸಿಕ ಘಟನೆಯಾಗಿ

ಶ್ರೀ ಚಿದಾನಂದನಾಥರನ್ನು ಇತಿಹಾಸ ಪುರುಷರು ಎಂದು ಸಂಭೋಧಿಸದೆ ಮತ್ತೇನೆಂದು ಸಂಭೋಧಿಸಲು ಸಾಧ್ಯ.

ತಮ್ಮ ಗುರುಗಳಿಗೆ ಭಕ್ತಿ ಗೌರವಗಳನ್ನು ಸಲ್ಲಿಸುವ ಸಲುವಾಗಿ ಶ್ರೀ ಗುಹಾನಂದ ಸ್ತುತಿ ಯನ್ನು ರಚಿಸಿದ್ದು, ಈ ಸ್ತುತಿಯು ಶ್ರೀ ರಾಘವೇಂದ್ರಾಯ ವಸಿಷ್ಠ ಗೀತಂ ಎಂದು ಆರಂಭವಾಗಿರುವುದು ಒಂದು ವಿಶೇಷ. ಈ ಸ್ತುತಿಯ ಮೊದಲ ಶ್ಲೋಕವು

ಶ್ರೀ ರಾಘವೇಂದ್ರಾಯ ವಸಿಷ್ಠ ಗೀತಂ
ಶ್ರೀ ಪಾಂಡವೇಂದ್ರಾಯ ಮುರಾರಿಗೀತಂ
ಶ್ರೀ ಮ ಚ್ಚೃಕೇಂದ್ರಾಯ ವಿದೇಹ ಗೀತಂ
ನಮಾಮಿ ತದ್ದೇಶಿಕಲಬ್ದ ಬೋಧಂ
ಎಂದಿದೆ..
ಹೇವಿಳಂಬಿ ನಾಮ ಸಂವತ್ಸರ ಶರನ್ನವರಾತ್ರಿ ಷಷ್ಟಿ ಅಂದರೆ ೨೯೯-೧೯೫೭ ರಂದು ತಮ್ಮ ೭೫ ನೆಯ ವಯಸ್ಸಿನಲ್ಲಿ ಲಲಿತಾ ಸಾಯುಜ್ಯವನ್ನು ಹೊಂದಿದರು.

SRI PARAMAGURUBHYO NAMAH

ಶ್ರೀ ಯೋಗಾನಂದನಾಥ ಶ್ರೀ ಪರಮಗುರು ಶ್ರೀ ಪಾದುಕಾಭ್ಯಾಂ ಪೂಜಯಾಮಿ ನಮಃ

ಶ್ರೀ ಯೋಗಾನಂದನಾಥರು ( ಶ್ರೀ ಪಿ ಆರ್ ಸುಬ್ರಹ್ಮಣ್ಯ ಐಯ್ಯರ್) ತಮಿಳ್ನಾಡಿನ ಕುಂಭ ಕೋಣಂ ಬಳಿಯ ಇನ್ಜಿಕೊಲ್ಲೈ ಎಂಬ ಗ್ರಾಮದ ಜಮೀಂದಾರರ ಕುಟುಂಬಕ್ಕೆ ಸೇರಿದವರು. ಇವರ ಬಗ್ಗೆ ನಮ್ಮಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿಲ್ಲವಾದರೂ, ಇವರು ಸಂಸ್ಕೃತ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದ್ದರು ಮತ್ತು ಶ್ರೀ ಕಂಚಿ ಕಾಮಕೋಟೀ ಪೀಠಕ್ಕೆ ಜ್ಯೋತಿಷ್ಯರಾಗಿ ಸೇವೆ ಸಲ್ಲಿಸಿರುವ ಬಗ್ಗೆ ಮಾಹಿತಿ ಸಿಗುತ್ತದೆ.

ಒಮ್ಮೆ ಶ್ರೀ ಚಿದಾನಂದನಾಥರು , ಇನ್ಜಿಕೊಲ್ಲೈ ಗ್ರಾಮಕ್ಕೆ ಬಂದಾಗ ಶ್ರೀ ಸುಬ್ರಹ್ಮಣ್ಯ ಅಯ್ಯರ್ ಅವರ ಪಾಂಡಿತ್ಯದ ಬಗ್ಗೆ ತಿಳಿದುಕೊಂಡ ಅವರು, ಶ್ರೀ ಸುಬ್ರಹ್ಮಣ್ಯ ಅಯ್ಯರ್ ಅವರನ್ನು ಭೇಟಿಮಾಡಲು ಅವರ ಮನೆಗೇ ಬರುತ್ತಾರೆ ಉಭಯ ಕುಶಲೋಪರಿ ಆದ ನಂತರ ಆ ಕ್ಷಣವೇ ಅವರಿಗೆ ಶ್ರೀ ಯೋಗಾನಂದನಾಥ ಎಂಬ ಶ್ರೀ ವಿದ್ಯಾ ದೀಕ್ಷಾ ಪಟ್ಟವನ್ನು ನೀಡಿದರು. ಆಗ ಶ್ರೀ ಸುಬ್ರಹ್ಮಣ್ಯ ಅಯ್ಯರ್ ಅವರ ಮುಂದಿನ ಮನೆಯಲ್ಲಿ ವಾಸವಾಗಿದ್ದ ನನ್ನ ಗುರುಗಳು ಶ್ರೀ ಪರಾನಂದನಾಥರು ತಮ್ಮ ಆ ನೆನಪನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅಲ್ಲಿಯೇ ಇದ್ದ ನನ್ನ ಗುರುಗಳಿಗೆ ಶ್ರೀ ಚಿದಾನಂದನಾಥರು ಪಂಚದಶೀ ಮಂತ್ರದ ಉಪದೇಶವನ್ನು ನೀಡಿ, ಶ್ರೀ ವಿದ್ಯಾ ದೀಕ್ಷಾ ಪಟ್ಟವನ್ನು ಶ್ರೀ ಯೋಗಾನಂದನಾಥರಿಂದ ಪಡೆಯುವಂತೆ ಸೂಚಿಸಿದರಂತೆ.

ಶ್ರೀ ಯೋಗಾನಂದನಾಥರು ಶ್ರೀ ಉಚ್ಚಿಷ್ಟ ಮಹಾ ಗಣಪತಿಯ ಉಪಾಸಕರಾಗಿದ್ದರು ಎಂದು ಸಹಾ ಕೇಳಿದ್ದೇನೆ.

ಶ್ರೀ ಯೋಗಾನಂದ ನಾಥರ ಮನೆ ಹೇಗಿತ್ತು ಮತ್ತು ಅವರ ಧರ್ಮಪತ್ನಿ ಹೇಗಿದ್ದರು ಎಂಬ ಬಗ್ಗೆ ಒಂದು ಯೂಟ್ಯೂಬ್ ವಿಡಿಯೋ ದೊರಕಿದ್ದು ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ.

 

SRI GURUBHYO NAMAHA

ಶ್ರೀ ವಿದ್ಯಾ ಮಾರ್ತಾಂಡ ಶ್ರೀ ಪರಾನಂದನಾಥರು

ಶ್ರೀ ಪರಾನಂದನಾಥ ಸ್ವಗುರು ಶ್ರೀ ಪಾದುಕಾಭ್ಯಾಂ ಪೂಜಯಾಮಿ ನಮಃ

ಅಕ್ಷಯ ನಾಮ ಸಂವತ್ಸರ ಮಾಘ ಮಾಸ ಕೃಷ್ಣ ಪಾಡ್ಯಮಿ ಪುಷ್ಯ ನಕ್ಷತ್ರ ದಂದು ಮಂಗಳವಾರ ಅಂದರೆ ೧೮-೧-೧೯೨೭ ರಂದು ತಮಿಳ್ನಾಡಿನ ತಿರುವಾರೂರಿನಲ್ಲಿ ವೈದಿಕ ಕುಟುಂಬ ದಲ್ಲಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳ ಜನನ. ಅಂದರೆ ೮-೨-೨೦೨೦ ರಂದು ನನ್ನ ಗುರುಗಳ ೯೩ ನೇ ವರ್ಧಂತ್ಯುತ್ಸವ. ಇವರ ತಂದೆ ತಾಯಿಯರು ಪ್ರೀತಿಯಿಂದ ಇವರನ್ನು ಪಟ್ಟು ಶಾಸ್ತ್ರಿ ಎಂದು ಕರೆಯುತ್ತಿದ್ದು ಅದೇ ಅವರಿಗೆ ಕಡೆಯವರೆಗೂ ರೂಢಿನಾಮವಾಗಿ ಉಳಿದುಹೋಯಿತು. ವೇದ ಮತ್ತು ಸಂಸ್ಕೃತದಲ್ಲಿ ವಿದ್ವತ್ತನ್ನು ಹೊಂದಿದ್ದರು. ಈ ಹಿಂದೆ ತಿಳಿಸಿದಂತೆ ಶ್ರೀ ಯೋಗಾನಂದನಾಥರಿಂದ ಶ್ರೀ ಪರಾನಂದನಾಥ ಎಂಬ ಶ್ರೀ ವಿದ್ಯಾ ದೀಕ್ಷಾಪಟ್ಟವನ್ನು ಪಡೆದುಕೊಂಡ ಇವರು ಜಗತ್ತಿನಾದ್ಯಂತ ತಮ್ಮ ಶಿಷ್ಯ ಸಮೂಹವನ್ನು ಹೊಂದಿದ್ದಾರೆ.

ಅರ್ಷವಿದ್ಯಾ ಗುರುಕುಲದ ಸ್ಥಾಪಕರಾದ ಶ್ರೀ ದಯಾನಂದ ಸರಸ್ವತಿಯವರು (ಪೂರ್ವಾಶ್ರಮದ ಶ್ರೀ ನಟರಾಜ) ಮತ್ತು ನನ್ನ ಗುರು ಶ್ರೀ ಪರಾನಂದನಾಥರು ಹತ್ತಿರದ ಬಂಧುಗಳು, ಓರಗೆಯವರು ಮತ್ತು ಶಾಲೆಯಲ್ಲಿ ಸಹಪಾಠಿಗಳು. ಇವರಿಬ್ಬರ ನಡುವಿನ ಬಾಂಧವ್ಯ ಕೊನೆಯವರಿಗೂ ಗಟ್ಟಿಯಾಗಿ ಉಳಿದುಕೊಂಡಿದ್ದುದು ವಿಶೇಷ.

ಶ್ರೀ ಯೋಗಾನಂದನಾಥರು ಶ್ರೀ ಉಚ್ಚಿಷ್ಟ ಗಣಪತಿ ಉಪಾಸಕರಾದರೆ ನನ್ನ ಗುರುಗಳು ಶ್ರೀ ಶರಭೇಶ್ವರನ ಉಪಾಸಕರು.

ಶ್ರೀ ಪರಾನಂದನಾಥರು ಖರ ನಾಮ ಸಂವತ್ಸರ ಫಾಲ್ಗುಣ ಮಾಸ ಶುಕ್ಲ ನವಮಿ ಶುಕ್ರವಾರ ಸೂರ್ಯಾಸ್ತದ ಸಮಯದಲ್ಲಿ ತಮ್ಮ ೮೫ ನೆಯ ವಯಸ್ಸಿನಲ್ಲಿ ಯಾವುದೇ ಅನಾರೋಗ್ಯಕ್ಕೆ ಒಳಗಾಗದೆ ಶ್ರೀ ಲಲಿತಾ ಸಾಯುಜ್ಯವನ್ನು ಹೊಂದಿದರು. ಅಂದು ದಿನಾಂಕ ೨-೩-೨೦೧೨.

ಅವರ ಭೌತಿಕ ದೇಹ ಮಾತ್ರ ನಮ್ಮನ್ನೆಲ್ಲಾ ಆಗಲಿದೆ ಆದರೆ ನಮ್ಮ ಸಾಧನೆಯ ಮಾರ್ಗದಲ್ಲಿ ಪ್ರತಿಕ್ಷಣವೂ ಅವರಿಂದ ಮಾರ್ಗದರ್ಶನ ಲಭಿಸುತ್ತಿದೆ. ಇದು ವಿವರಿಸಲಾಗದ ಸಂಗತಿ ಅದನ್ನು ಅನುಭವಿಸಿಯೇ ತಿಳಿಯಬೇಕಷ್ಟೆ. ಇಂತಹ ಗುರುಗಳ ಮತ್ತು ಗುರುಪರಂಪರೆಯ ಆಸರೆಯಲ್ಲಿ ಬದುಕುತ್ತಿರುವ ನಾನು ಧನ್ಯ ಧನ್ಯ ಧನ್ಯ.

ಶಾಂತಾ ವಿಮಲಾ ಪ್ರಕಾಶಾ ಆತ್ಮಾ ಗುಹಾ ಚಿತ್ ಯೋಗಾಸ್ಯ ಶ್ರೀ ಪರಾನಂದಾದಿ ಸದ್ಗುರೂನ್ ನಮಾಮ್ಯಹಮ್ ಪುನಃ ಪುನಃ 
OM SHANTIH SHANTIH SHANTIH

%d bloggers like this: